Tag: ಇಂದು ಮಲ್ಹೋತ್ರಾ

  • ಅಯ್ಯಪ್ಪನ ಬಾಗಿಲು ಮಹಿಳೆಯರಿಗೆ ಮುಕ್ತ: ಸುಪ್ರೀಂ ಕೋರ್ಟ್

    ಅಯ್ಯಪ್ಪನ ಬಾಗಿಲು ಮಹಿಳೆಯರಿಗೆ ಮುಕ್ತ: ಸುಪ್ರೀಂ ಕೋರ್ಟ್

    ನವದೆಹಲಿ: ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನವನ್ನು ಎಲ್ಲ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ನ ಪಂಚಪೀಠ ನಾಲ್ಕು ಒಂದರಲ್ಲಿ ಇಂದು ಮಹತ್ವದ ತೀರ್ಪನ್ನು ನೀಡಿದೆ. ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳಬೇಕಿದೆ. ಮಹಿಳೆಯರು ಅಬಲೆಯರಲ್ಲ. ನಮ್ಮ ದೇಶದಲ್ಲಿ ಮಹಿಳೆಯರು ದೇವರು ಅಂತಾ ಪೂಜಿಸಲಾಗುತ್ತಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಹೇಳಿದ್ದಾರೆ. ನ್ಯಾ. ಇಂದು ಮಲ್ಹೋತ್ರಾ ಮಾತ್ರ ಭಿನ್ನ ತೀರ್ಪನ್ನು ನೀಡಿದ್ದಾರೆ.

    `ಸುಪ್ರೀಂ’ ಹೇಳಿದ್ದೇನು?
    ಶಬರಿಮಲೆ, ಮಹಿಳೆಯರ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿದ್ದು, ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ- ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ.

    ನಂಬಿಕೆ ಸ್ವಾತಂತ್ರ್ಯ ಹತ್ತಿಕ್ಕಲು ದೈಹಿಕ ಕಾರಣಗಳನ್ನು ಒಪ್ಪಿಕೊಳ್ಳಲಾಗದು. ಮಹಿಳೆ ಅಬಲೆ ಎನ್ನುವುದಾದರೆ ವೃತಗಳನ್ನು ಮಾಡುತ್ತಲೇ ಇರಲಿಲ್ಲ. ಋತುಮತಿಯಾಗುವುದಕ್ಕೂ ಮಹಿಳೆಯ ಪ್ರಾಥನೆಯ ಹಕ್ಕಿಗೂ ಯಾವುದೇ ಸಂಬಂಧವಿಲ್ಲ ಅಷ್ಟೇ ಅಲ್ಲದೇ ಮಹಿಳೆಯರು ಪುರುಷರಿಗಿಂತ ಕೀಳಲ್ಲ. ಸಾಂವಿಧಾನಿಕ ನೈತಿಕತೆಯೇ ಅತ್ಯುನ್ನತ. ಅದರ ಹೊರತು ಬೇರೇನೂ ಇಲ್ಲ. ಶಬರಿಮಲೆಗೆ ಮಹಿಳೆಯರನ್ನು ನಿರ್ಬಂಧಿಸುವಂತಿಲ್ಲ. ಹೀಗಾಗಿ ಶಬರಿಮಲೆಗೆ ಆಬಾಲ-ವೃದ್ಧರಾಗಿ ಎಲ್ಲರಿಗೂ ಪ್ರವೇಶಕ್ಕೆ ಅನುಮತಿ ನೀಡಬೇಕು.

    ಈ ಹಿಂದಿನ ವಿಚಾರಣೆ ವೇಳೆ  ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಮಹಿಳೆಯರ ದೇಗುಲ ಪ್ರವೇಶದ ವಿಚಾರಕ್ಕೆ ಸಂಬಂಧಪಟ್ಟಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತನ್ನ ಅಭಿಪ್ರಾಯ ತಿಳಿಸಿತ್ತು. ಕೇರಳ ಸರ್ಕಾರ ನಾಲ್ಕನೇ ಬಾರಿ ತನ್ನ ನಿರ್ಧಾರವನ್ನು ಬದಲಾಯಿಸಿದೆಯಲ್ಲಾ ಎಂಬ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನೆಗೆ ಉತ್ತರಿಸಿದ ಕೇರಳ ಸರ್ಕಾರದ ಪರ ವಕೀಲರು, ಅಧಿಕಾರ ಬದಲಾದಾಗ ಸರ್ಕಾರದ ನಿರ್ಧಾರಗಳೂ ಬದಲಾಗುತ್ತವೆ ಎಂದು ಹೇಳಿದ್ದರು.

    ಶಬರಿಮಲೆ ದೇಗುಲದಲ್ಲಿ ದೇವರ ಆರಾಧನೆಗೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ. ಹೀಗಿದ್ದಾಗ ಯಾವ ಆಧಾರದಲ್ಲಿ ಪ್ರವೇಶ ನಿಷೇಧಿಸುತ್ತೀರಿ. ರಾಜ್ಯ ಸರ್ಕಾರದ ಈ ನಡೆ ಸಂವಿಧಾನ ವಿರೋಧಿ. ಜನ ಸಾಮಾನ್ಯರಿಗೆ ದೇಗುಲ ತೆರೆದಾಗ ಅಲ್ಲಿಗೆ ಎಲ್ಲರೂ ಹೋಗುವಂತಾಗಬೇಕು. ಇಲ್ಲಿನ ಆಡಳಿತ ವರ್ಗ ಮಹಿಳೆಯರಿಗೆ ನಿಷೇಧ ಹೇರುತ್ತಿರುವುದು ಯಾಕೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ರೋಹಿಂಟನ್ ಫಾಲಿ ನಾರಿಮನ್, ನ್ಯಾ. ಎ.ಎಂ ಖಾನ್ವಿಲ್ಕರ್, ನ್ಯಾ. ಡಿವೈ ಚಂದ್ರಚೂಡ್ ಹಾಗೂ ನ್ಯಾ. ಇಂದು ಮಲ್ಹೋತ್ರಾ ಒಳಗೊಂಡ ಸಾಂವಿಧಾನಿಕ ಪೀಠ ಪ್ರಶ್ನಿಸಿತ್ತು.

    ಪ್ರಾರ್ಥನೆ ಸಲ್ಲಿಸುವಾಗ ಪುರುಷರಿಗುವಷ್ಟೇ ಸಮಾನತೆ ಮಹಿಳೆಯರಿಗೂ ಇರುತ್ತದೆ. ಈ ಅವಕಾಶ ತಡೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾ. ಡಿ.ವೈ.ಚಂದ್ರಚೂಡ್ ಹೇಳಿದ್ದರು.

    ಸಾರ್ವಜನಿಕ ಸ್ವತ್ತು:
    ಮಹಿಳೆಯರ ಋತುಸ್ರಾವದ ಕಾಲಘಟ್ಟ ಎಂದು 10ರಿಂದ 50 ವರ್ಷದವರೆಗಿನ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ಆಮಿಕಸ್ ಕ್ಯೂರಿ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್, ಹೆಣ್ಣು ಮಕ್ಕಳಿಗೆ 10 ವರ್ಷಕ್ಕೂ ಮೊದಲೇ ಋತುಸ್ರಾವ ಆರಂಭವಾಗಬಹುದು. 50 ವರ್ಷದ ನಂತರವೂ ಇದು ಮುಂದುವರಿಯಬಹುದು. ದೇವಸ್ಥಾನ ಎನ್ನುವುದು ಯಾವತ್ತೂ ಖಾಸಗಿ ಸ್ವತ್ತಲ್ಲ. ಅದು ಸಾರ್ವಜನಿಕ ಆಸ್ತಿ. ಸಾರ್ವಜನಿಕ ಆಸ್ತಿಗೆ ಯಾರಿಗೆ ಯಾವಾಗ ಬೇಕಾದರೂ ಪ್ರವೇಶ ಮಾಡಬಹುದು ಎಂದು ಹೇಳಿತ್ತು.

    ನಮಗೆ ಪೂಜೆ ಮಾಡಲು ಅವಕಾಶ ಬೇಡ, ನಮಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿ ಎಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ ಹ್ಯಾಪಿ ಟು ಬ್ಲೀಡ್ ಸಂಘಟನೆ ಕೋರ್ಟ್ ಮುಂದೆ ವಾದ ಮಂಡಿಸಿತ್ತು.

    ಶಬರಿಮಲೆ ದೇಗುಲದಲ್ಲಿ ಮಹಿಳೆಯರಿಗೂ ಪ್ರಾರ್ಥನೆಗೆ ಅವಕಾಶ ನೀಡಬೇಕೆನ್ನುವುದು ಸರ್ಕಾರದ ಅಭಿಪ್ರಾಯ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ಅಫಿಡವಿಟ್ ನಾವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದೇವೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದ್ದರು.

    ಏನಿದು ಪ್ರಕರಣ?:
    ಕೇರಳದ ಶಬರಿಮಲೆ ದೇವಾಲಯದಲ್ಲಿ 800 ವರ್ಷಗಳಿಂದ ನಡೆದು ಬಂದಿರುವ ಮಹಿಳೆಯರ ಪ್ರವೇಶ ನಿಷೇಧ ಆಚರಣೆಯನ್ನು ವಿರೋಧಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರ, ದೇವಾಲಯ ಆಡಳಿತ ಮಂಡಳಿ, ಪತ್ತನಂತಿಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.

    ಅರ್ಜಿದಾರರ ಪರ ಸಲಹೆಗಾರ ಪ್ರಕಾಶ್ ಗುಪ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮಹಿಳೆಯರ ದೇವಾಲಯದ ಪ್ರವೇಶದ ಬಗ್ಗೆ ತಾರತಮ್ಯ ತೋರುವುದು ಹಿಂದೂ ಧರ್ಮದ ಭಾಗವಲ್ಲ. ಯಾವುದೇ ಮಹಿಳೆಯ ನೋಟದಿಂದ ಯಾರ ಬ್ರಹ್ಮಚರ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಅದ್ದರಿಂದ ಅಂತಹ ಆಚರಣೆಗಳಿಗೆ ಅರ್ಥವಿಲ್ಲ ಎಂಬ ವಾದ ಮಂಡಿಸಿದ್ದರು.

    ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕು. 15ನೇ ವಿಧಿ ಧರ್ಮ, ಜಾತಿ, ಲಿಂಗ ಅಥವಾ ಸ್ಥಳದ ಆಧಾರ ಮೇಲೆ ಅಸಮಾನತೆ ತೋರುವಂತಿಲ್ಲ. 17ನೇ ವಿಧಿ ಅಸ್ಪೃಶ್ಯತೆಯನ್ನು ಆಚರಣೆ ಮಾಡುವುದನ್ನು ನಿಷೇಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv