Tag: ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್

  • ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಧೋನಿ ಅನುಪಸ್ಥಿತಿ ರಿಷಬ್ ಪಂತ್‍ಗೆ ಉತ್ತಮ ಅವಕಾಶ: ವಿರಾಟ್ ಕೊಹ್ಲಿ

    ಜಮೈಕಾ: ವೆಸ್ಟ್ ಇಂಡೀಸ್ ಟೂರ್ನಿಗೆ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರ ಅನುಪಸ್ಥಿತಿ ಯುವ ಆಟಗಾರ ರಿಷಬ್ ಪಂತ್‍ಗೆ ಉತ್ತಮ ಅವಕಾಶ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೊದಲ ಟಿ-20 ಪಂದ್ಯದ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ರಿಷಬ್ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಸ್ಥಿರ ಪ್ರದರ್ಶನ ನೀಡಬೇಕು. ಧೋನಿ ಅವರ ಅನುಪಸ್ಥಿತಿಯಲ್ಲಿ ಅವರು ಚೆನ್ನಾಗಿ ಆಡಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

    ಎಂ.ಎಸ್ ಧೋನಿ ಅವರು ಅನುಭವ ಯಾವಾಗಲೂ ನಮ್ಮ ತಂಡಕ್ಕೆ ಬೇಕು. ಆದರೆ ಅವರ ಅನುಪಸ್ಥಿತಿ ರಿಷಬ್ ಪಂತ್ ರೀತಿಯ ಯುವ ಆಟಗಾರರಿಗೆ ಒಳ್ಳೆಯ ಅವಕಾಶ. ಇದನ್ನು ಅವರ ಬಳಸಿಕೊಂಡು ಅವರ ಸಾಮರ್ಥ್ಯವನ್ನು ಸಾಬೀತು ಮಾಡಬೇಕು. ನಮಗೆ ಗೊತ್ತು ರಿಷಬ್ ಪಂತ್ ತುಂಬಾ ಒಳ್ಳೆಯ ಆಟಗಾರ. ರಿಷಬ್ ಪಂತ್ ಕೆಳ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ನಾವು ಬಯಸುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಎಂ.ಎಸ್.ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ, ರವೀಂದ್ರ ಜಡೇಜಾ, ಕ್ರುನಾಲ್ ಪಾಂಡ್ಯ, ರಿಷಬ್ ಪಂತ್ ಮುಂತಾದವರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಯಾರು ಫಿನಿಶರ್ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಬಳಸಿಕೊಳ್ಳುತ್ತಾರೆ ನೋಡಬೇಕು ಎಂದು ಕೊಹ್ಲಿ ಹೇಳಿದ್ದಾರೆ.

    ಈ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಧೋನಿ ವಿಶ್ವಕಪ್ ನಂತರ 2 ತಿಂಗಳ ವಿಶ್ರಾಂತಿ ತೆಗೆದುಕೊಂಡಿದ್ದು, ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಇಬ್ಬರು ಕೆಳ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಅನುಪಸ್ಥಿತಿಯಲ್ಲಿ, ಈ ಟೂರ್ನಿಯಲ್ಲಿ ಯಾರು ಚೆನ್ನಾಗಿ ಆಡುತ್ತಾರೆ ನೋಡಬೇಕಿದೆ.

    ಈ ನಿಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಸಿದ್ಧ ಮಾಡಲು ನಾವು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ರಿಷಭ್ ಪಂತ್‍ಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೇವೆ ಎಂದು ಭಾರತೀಯ ಆಯ್ಕೆ ಅಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಸುಳಿವು ನೀಡಿದ್ದರು.

    ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ ಇಂತಿದೆ.

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.