Tag: ಇಂಟೆಲ್

  • ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    – ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಜೊತೆ ಮಾತುಕತೆ
    – ನೀರು ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

    ಬೆಂಗಳೂರು: ಎಲ್ಲ ಮಾತುಕತೆಗಳು ಫಲಪ್ರದವಾದರೆ ಇಂಟೆಲ್‌ ಕಂಪನಿಯ ಚಿಪ್‌ ತಯಾರಕ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ.

    ಸೆಮಿಕಂಡಕ್ಟರ್‌ ಉತ್ಪಾದನೆ ಸಂಬಂಧ ಕೇಂದ್ರ ಸರ್ಕಾರ 10 ಶತಕೋಟಿ ಡಾಲರ್‌ ಮೌಲ್ಯದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಗೆ  ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಆಯ್ಕೆಯಾಗಿದೆ. ಆರಂಭದಲ್ಲಿ ಗುಜರಾತ್‌ನ ಧೋಲೇರಾದಲ್ಲಿ 3 ಶತಕೋಟಿ ಡಾಲರ್‌(23 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಈ ಕಂಪನಿ ಮುಂದಾಗಿತ್ತು. ಆದರೆ ಈಗ ರಾಜ್ಯದ ಮೈಸೂರಿನಲ್ಲಿ ಘಟಕ ತೆರೆಯಲು ಕಂಪನಿ ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.

    ನೀರಿನ ಲಭ್ಯತೆ ಇರುವ ಕಾಣ ಮೈಸೂರಿನಲ್ಲಿ ಘಟಕ ತೆರೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಿದರೆ ದೀರ್ಘಾವಧಿಯಲ್ಲಿ ರಾಜ್ಯಕ್ಕೆ ಲಾಭವಾಗುವುದರಿಂದ ಕರ್ನಾಟಕವೂ ಉತ್ಸಾಹ ತೋರಿಸಿದೆ.

    ನೆಕ್ಷ್ಟ್‌ಆರ್ಬಿಟ್‌ ಮತ್ತು ಸೆಮಿಕಂಡಕ್ಟರ್‌ ಟೆಕ್ನಾಲಜಿ ಕಂಪನಿ ಟವರ್‌ ಸೆಮಿಕಂಡಕ್ಟರ್‌ ಕಂಪನಿ ಐಎಸ್‌ಎಂಸಿ ಡಿಜಿಟಲ್‌ ಸ್ಥಾಪಿಸಿತ್ತು. ಈ ಐಎಸ್‌ಎಂಸಿಯನ್ನು 5.4 ಶತಕೋಟಿ ಡಾಲರ್‌ ನೀಡಿ ಇಂಟೆಲ್‌ ಕಂಪನಿ ಇತ್ತೀಚೆಗೆ ಖರೀದಿಸಿದೆ.

    ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಅಲ್ಲದೇ  ವೇದಾಂತ-ಫಾಕ್ಸ್‌ಕಾನ್‌ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್‌ ಆಯ್ಕೆಯಾಗಿವೆ. ಚಿಪ್‌ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಸೆಮಿಕಂಡಕ್ಟರ್‌ ಸಲಹಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

    ಐಎಸ್‌ಎಂಸಿಯ ಹೂಡಿಕೆ ಪ್ರಸ್ತಾವನೆಯನ್ನು ಬೊಮ್ಮಾಯಿ ನೇತೃತ್ವದ ಕರ್ನಾಟಕದ ಉನ್ನತ ಮಟ್ಟದ ಸಮಿತಿ ಇನ್ನೂ ಅನುಮೋದನೆ ನೀಡಿಲ್ಲ. 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಪ್ರಸ್ತಾವನೆಗಳನ್ನು ಈ ಸಮಿತಿ ಅನುಮೋದಿಸುತ್ತದೆ.

    ಏಪ್ರಿಲ್‌ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ Semicon ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿಪ್‌ ಕ್ಷೇತ್ರದ ದಿಗ್ಗಜ ಕಂಪನಿಗಳು ಭಾಗಿಯಾಗಲಿದೆ.  ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.

  • ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ

    ವಾಷಿಂಗ್ಟನ್: ಕೆಲವು ದಿನಗಳ ಹಿಂದೆಯಷ್ಟೆ ಗೂಗಲ್ ತನ್ನ ಉದ್ಯೋಗಿಗಳ ಲಸಿಕೆಯನ್ನು ಕಡ್ಡಾಯಗೊಳಿಸಿತ್ತು. ನಿಗದಿತ ಸಮಯದ ಒಳಗಾಗಿ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ತನ್ನ ಉದ್ಯೋಗಿಗಳಿಗೆ ವೇತನ ನೀಡದೇ ವೈಯಕ್ತಿಕ ರಜೆ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಕಡ್ಡಾಯಗೊಳಿಸಿದೆ.

    ಇತ್ತೀಚೆಗೆ ದೊಡ್ಡ ಟೆಕ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮಾಡುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವ ಉದ್ಯೋಗಿಗಳ ಮೇಲೆ ಕಂಪನಿಗಳು ದಯೆ ತೋರುವಂತೆ ಕಾಣಿಸುತ್ತಿಲ್ಲ. ಇಂಟೆಲ್ ಕಂಪನಿಯೂ ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ವೇತನ ನೀಡದ ರಜೆಯನ್ನು ವಿಧಿಸುವುದಾಗಿ ಎಚ್ಚರಿಸಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ಇಂಟೆಲ್ ಕಂಪನಿ ಜನವರಿ 4ರ ಒಳಗಾಗಿ ತನ್ನ ಉದ್ಯೋಗಿಗಳ ಲಸಿಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ಸೂಚಿಸಿದೆ. ಲಸಿಕೆಯ ವಿವರ ಸಲ್ಲಿಸದೇ ಹೋದಲ್ಲಿ ಉದ್ಯೋಗಿಗಳಿಗೆ ವೇತನ ನೀಡದೇ ರಜೆ ವಿಧಿಸಲಾಗುವುದು ಎಂದು ಹೇಳಿದೆ.

    ಲಸಿಕೆ ಪಡೆಯದ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಪ್ರತೀ ವಾರ ಪರೀಕ್ಷೆಗೆ ಒಳಗಾಗಿ ವರದಿ ಸಲ್ಲಿಸಬೇಕು. 2022ರ ಮಾರ್ಚ್ 15ರ ವರೆಗೆ ಈ ವಿನಾಯಿತಿಯನ್ನು ಪಡೆಯಬಹುದು ಎಂದು ಇಂಟೆಲ್ ಹೆಚ್‌ಆರ್ ಕ್ರಿಸ್ಟಿ ಪಂಬಿಯಾಂಚಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

    ಈ ವಿನಾಯಿತಿಯನ್ನೂ ಉದ್ಯೋಗಿಗಳು ಸದುಪಯೋಗಪಡಿಸಿಕೊಳ್ಳದೇ ಹೋದಲ್ಲಿ ಏಪ್ರಿಲ್ 4 ರಿಂದ ಮೂರು ತಿಂಗಳ ವೇತನ ರಹಿತ ರಜೆಯನ್ನು ವಿಧಿಸುತ್ತದೆ ಎಂದು ಉದ್ಯೋಗಿಗಳಿಗೆ ನೀಡಲಾದ ಮೆಮೋದಲ್ಲಿ ಉಲ್ಲೇಖಿಸಿದೆ. ಕಂಪನಿ ರಜೆಯಲ್ಲಿರುವ ಉದ್ಯೋಗಿಗಳಿಗೆ ಆರೋಗ್ಯ ಪ್ರಯೋಜನಗಳನ್ನೂ ವಿತರಿಸುತ್ತದೆ ಎಂದು ಹೇಳಿದೆ.

  • ವಿಶೇಷ ಬ್ಯಾಟ್ ಬಳಸಲಿದ್ದಾರೆ ರೋಹಿತ್: ಏನಿದು  ಚಿಪ್ ಬ್ಯಾಟ್? ವಿಶೇಷತೆ ಏನು? ವಿಡಿಯೋ ನೋಡಿ

    ವಿಶೇಷ ಬ್ಯಾಟ್ ಬಳಸಲಿದ್ದಾರೆ ರೋಹಿತ್: ಏನಿದು ಚಿಪ್ ಬ್ಯಾಟ್? ವಿಶೇಷತೆ ಏನು? ವಿಡಿಯೋ ನೋಡಿ

    ಲಂಡನ್: ಇಲ್ಲಿಯವರೆಗೆ ಬೌಲಿಂಗ್ ಸ್ಪೀಡ್ ಎಷ್ಟಿದೆ ಎನ್ನುವ ಮಾಹಿತಿ ಸಿಗುತಿತ್ತು. ಆದರೆ ಇನ್ನು ಮುಂದೆ ಬ್ಯಾಟ್ಸ್ ಮನ್ ಎಷ್ಟು ವೇಗದಲ್ಲಿ ಬ್ಯಾಟ್ ಬೀಸಿದ್ದಾನೆ. ಎಷ್ಟು ಡಿಗ್ರಿಯಲ್ಲಿ ಬ್ಯಾಟ್ ಹಿಡಿದಿದ್ದಾನೆ ಎನ್ನುವ ಎಲ್ಲ ಮಾಹಿತಿಗಳು ಸಿಗಲಿದೆ.

    ಹೌದು. ಹಲವಾರು ದೇಶಗಳಲ್ಲಿ ಕ್ರಿಕೆಟ್ ಜಪ್ರಿಯವಾಗುತ್ತಿದೆ. ಈಗ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಮುಂದಾಗುತ್ತಿದ್ದು, ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆನ್ಸರ್ ಹೊಂದಿರುವ ಬ್ಯಾಟ್ ಗಳನ್ನು ಬಳಸಲು ಅನುಮತಿ ನೀಡಿದೆ.

    ಕ್ರಿಕೆಟ್ ಇತಿಹಾಸಲ್ಲಿ ಮೊದಲ ಬಾರಿಗೆ ಈ ರೀತಿಯ ಚಿಪ್ ಬ್ಯಾಟ್ ನಲ್ಲಿ ಅಳವಡಿಸಲಾಗುತ್ತಿದೆ. ಟೆಕ್ ಕಂಪೆನಿ ಇಂಟೆಲ್ ಈ ಚಿಪ್ ಅನ್ನು ತಯಾರಿಸಿದೆ.

    ಎಲ್ಲಿರಲಿದೆ ಚಿಪ್?
    ಇಂಟೆಲ್ ಕ್ಯೂರಿ ಟೆಕ್ನಾಲಜಿಯ ‘ಬ್ಯಾಟ್ ಸೆನ್ಸ್’ ಚಿಪ್ ಬ್ಯಾಟಿನ ಮೇಲ್ಬಾಗದಲ್ಲಿ ಇರಲಿದೆ. ಅಂದರೆ ಹ್ಯಾಂಡಲ್ ತುದಿಯಲ್ಲಿ ಇರುವ ವೃತ್ತಾಕಾರದ ಜಾಗದಲ್ಲಿ ಈ ಚಿಪ್ ಅಳವಡಿಸಲಾಗುತ್ತದೆ.

    ಚಿಪ್ ಅಳವಡಿಸುವುದು ಹೇಗೆ?
    ಬ್ಯಾಟಿನ ಹ್ಯಾಂಡಲ್ ಕವರ್ ಮೊದಲು ಹಾಕಿ, ಬಳಿಕ ಅದನ್ನು ಕೆಳಗೆ ಸರಿಸಬೇಕಾಗುತ್ತದೆ. ಇದಾದ ಬಳಿಕ ಚಿಪ್ ಫಿಕ್ಸ್ ಆಗಿರುವ ಸಣ್ಣ ಹ್ಯಾಂಡಲ್ ಕವರ್ ಅನ್ನು ಹಾಕಬೇಕು. ನಂತರ ಕೆಳಗಡೆ ಸರಿಸಲಾಗಿರುವ ಹ್ಯಾಂಡಲ್ ಕವರ್ ಮೇಲಕ್ಕೆ ಸರಿಸಿದಾಗ ಸೆನ್ಸರ್ ಚಿಪ್ ಫಿಕ್ಸ್ ಆಗಿ ಗಟ್ಟಿಯಾಗಿ ಮೇಲ್ಬಾಗದಲ್ಲಿ ಕುಳಿತುಕೊಳ್ಳುತ್ತದೆ.

    ಲಾಭ ಏನು?
    ಬ್ಯಾಟಿನ ಆಂಗಲ್ ಹೇಗೆ ಬದಲಾಗುತ್ತದೆ? ಬ್ಯಾಟ್ ಸ್ಪೀಡ್ ಎಷ್ಟಿರಲಿದೆ? ಹೀಗೆ ಬ್ಯಾಟ್ ಪ್ರತಿಯೊಂದು ಚಲನೆ ಕೂಡ ಚಿಪ್ ನಲ್ಲಿ ದಾಖಲಾಗಿರುತ್ತದೆ. ಇದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಕಂಪ್ಯೂಟರ್ ಹಾಕಿ ಬ್ಯಾಟ್ಸ್ ಮನ್ ತನ್ನ ತಪ್ಪನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಬ್ಯಾಟ್ಸ್ ಮನ್ ಸಂಪೂರ್ಣ ಗ್ರೌಂಡ್ ರಿಪೋರ್ಟ್ ದಾಖಲಾಗುವುದರಿಂದ ವಿಶೇಷವಾಗಿ ಕೋಚ್ ಗಳಿಗೂ ನೆರವಾಗಲಿದೆ.

    ಯಾರ ಬ್ಯಾಟಲ್ಲಿ ಚಿಪ್ ಇರಲಿದೆ?
    ಸದ್ಯಕ್ಕೆ ಐಸಿಸಿ ಒಂದು ತಂಡದ ಮೂವರು ಆಟಗಾರರಿಗೆ ಚಿಪ್ ಬ್ಯಾಟಿನೊಂದಿಗೆ ಆಡಲು ಅನುಮತಿ ನೀಡಿದೆ. ಭಾರತದ ಪರ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಆರ್ ಅಶ್ವಿನ್ ಚಿಪ್ ಇರುವ ಬ್ಯಾಟ್ ನಲ್ಲಿ ಆಡಲಿದ್ದಾರೆ.

    ವಿಆರ್ ಟೆಕ್ನಾಲಜಿ ಬಳಕೆ
    ಬ್ಯಾಟ್ ಸೆನ್ಸರ್ ಅಲ್ಲದೇ ಪ್ರೆಕ್ಷಕರಿಗೆ ಮುದ ನೀಡಲು ವರ್ಚುಯಲ್ ರಿಯಾಲಿಟಿ(ವಿಆರ್) ಈ ಬಾರಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಪಂದ್ಯಕ್ಕೂ ಪಿಚ್ ಸಂಪೂರ್ಣ ಮಾಹಿತಿ ಪಡೆಯಲು, ಎಚ್‍ಡಿ ಮತ್ತುಇನ್‍ಫ್ರಾರೆಡ್ ಕ್ಯಾಮೆರಾ ಹೊಂದಿರುವ 8 ಡ್ರೋನ್ ಗಳು ಪಿಚ್ ಮೇಲೆ ಹಾರಾಟ ನಡೆಸಲಿದೆ.