Tag: ಇಂಜೆಕ್ಷನ್

  • ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಪಾಟ್ನಾ: ಕೆಲಸದ ಮಾಲೀಕನ ಹೆಂಡತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಪಿಪ್ರಾ ಚೌಕ್‍ನ ಉಪಹಾರಗೃಹವೊಂದರಲ್ಲಿ ಕಳೆದ ರಾತ್ರಿ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರೋ 30 ವರ್ಷದ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿದ್ರಿಂದ ಈಗ ಆತ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಡಿಎಸ್‍ಪಿ ಬಿಕೆ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತ ವ್ಯಕ್ತಿ ಮೂಲತಃ ಸಮಷ್ಟಿಪುರದವನು ಎಂದು ವರದಿಯಾಗಿದೆ. ನಾನು ತೇಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರೌನಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಮಾಲೀಕನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಸಾಂದರ್ಭಿಕ ಚಿತ್ರ

    ಫೆಬ್ರವರಿ 6ರಂದು ಚಾಲಕ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಬಳಿಕ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು ಎಂದು ಡಿಎಸ್‍ಪಿ ಹೇಳಿದ್ದಾರೆ.

    ನಂತರ ಫೆಬ್ರವರಿ 16ರಂದು ಮಹಿಳೆ ತೇಗ್ರಾಗೆ ವಾಪಸ್ ಬಂದು ಸ್ಥಳೀಯ ಕೋರ್ಟ್‍ನಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗಿತ್ತು. ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಮಹಿಳೆಯ ಗಂಡನಿಗೆ ಹೇಳಿತ್ತು. ಮಹಿಳೆ ಇದ್ದಕ್ಕಿದ್ದಂತೆ ವಾಪಸ್ ಬಂದಿದ್ದೇಕೆ ಹಾಗೂ ಆಕೆ ಕೋರ್ಟ್‍ನಲ್ಲಿ ನೀಡಿದ ಹೇಳಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.

    ಕಳೆದ ಸಂಜೆ ಮಹಿಳೆಯ ಸಂಬಂಧಿ ಚಾಲಕನಿಗೆ ಕರೆ ಮಾಡಿದ್ದು, ಮಹಿಳೆ ನಿನ್ನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ. ತೇಗ್ರಾ ಪೊಲೀಸ್ ಠಾಣೆಗೆ ಬಂದು ಆಕೆಯನ್ನ ಕರೆದುಕೊಂಡು ಹೋಗು ಅಂತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಠಾಣೆಗೆ ಸುಮಾರು 1 ಕಿ.ಮೀ ದೂರದಲ್ಲೇ 20 ಜನರ ತಂಡ ಚಲಕನನ್ನು ತಡೆದಿದ್ದು, ಉಪಹಾರಗೃಹಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನ ಕಣ್ಣುಗಳಿಗೆ ಸಿರಿಂಜ್‍ನಿಂದ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

    ಬಳಿಕ ಚಾಲಕನನ್ನು ಭಗವಾನ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನಮಾನ್ ಚೌಕ್ ಬಳಿ ಎಸೆದು ಹೋಗಿದ್ದಾರೆ. ದಾರಿಹೋಕರೊಬ್ಬರು ಚಾಲಕನನ್ನ ಬೇಗುಸಾರೈನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಮಂಡ್ಯ: 2 ತಿಂಗಳ ಹಸುಗೂಸು ಸಾವು- ಪೆಂಟಾ ಇಂಜೆಕ್ಷನ್ ನಿಂದ ಮಗು ಮೃತಪಟ್ಟಿದೆಯೆಂದು ಪೋಷಕರ ಆರೋಪ

    ಮಂಡ್ಯ: 2 ತಿಂಗಳ ಹಸುಗೂಸು ಸಾವು- ಪೆಂಟಾ ಇಂಜೆಕ್ಷನ್ ನಿಂದ ಮಗು ಮೃತಪಟ್ಟಿದೆಯೆಂದು ಪೋಷಕರ ಆರೋಪ

    ಮಂಡ್ಯ: ಅಂಗನವಾಡಿಯಲ್ಲಿ ಚುಚ್ಚುಮದ್ದು ಕೊಡಿಸಿದ ನಂತರ ಮಂಡ್ಯದಲ್ಲಿ ಎರಡು ತಿಂಗಳ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಸಂತೋಷ್ ಮತ್ತು ಹೇಮಾ ದಂಪತಿಯ ಎರಡು ತಿಂಗಳ ಮಗು ಮೃತಪಟ್ಟಿದೆ. ಸಂತೋಷ್ ಮತ್ತು ಹೇಮಾ ದಂಪತಿ ಹೇಳುವ ಪ್ರಕಾರ ಕಳೆದ ಗುರುವಾರ ಅಂಗನವಾಡಿಯಲ್ಲಿ ಮಗುವಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಇಂಜೆಕ್ಷನ್ ಕೊಟ್ಟ ನಂತರ ಮಗು ಅಸ್ವಸ್ಥಗೊಂಡಿತ್ತು. ಹೀಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

    ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಕಳೆದ ಗುರುವಾರ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿದ ನಂತರ ಎರಡು ಹಸುಗೂಸುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಮಗು ಮೃತಪಟ್ಟಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಹನುಮಂತ ಪ್ರಸಾದ್, ಮಗುವಿಗೆ ಪೆಂಟಾವೇಲೆಂಟ್ ಚುಚ್ಚುಮದ್ದು ನೀಡಿರಲಿಲ್ಲ. ಮಗು ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿತ್ತು. ಅಂಗನವಾಡಿಯ ಲಸಿಕೆಗೂ ಮಗುವಿನ ಸಾವಿಗೂ ಸಂಬಂಧವಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡಬಾರದು ಎಂದು ಹೇಳುತ್ತಿದ್ದಾರೆ.

  • ಸಾವಿನ ಇಂಜೆಕ್ಷನ್‍ಗೆ ಬಲಿಯಾದ ಮಕ್ಕಳ ಕುಟುಂಬಕ್ಕೆ ಸರ್ಕಾರದಿಂದ 3ಲಕ್ಷ ರೂ. ಘೋಷಣೆ

    ಸಾವಿನ ಇಂಜೆಕ್ಷನ್‍ಗೆ ಬಲಿಯಾದ ಮಕ್ಕಳ ಕುಟುಂಬಕ್ಕೆ ಸರ್ಕಾರದಿಂದ 3ಲಕ್ಷ ರೂ. ಘೋಷಣೆ

    ಮಂಡ್ಯ: ಸರ್ಕಾರದಿಂದ ನೀಡಲ್ಪಡುವ ಲಸಿಕೆ ಹಾಕಿಸಿದ ಬಳಿಕ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಕ್ಕಳ ಕುಟುಂಬಗಳಿಗೆ ಒಟ್ಟು 3 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.

    ಸರ್ಕಾರದಿಂದ 1 ಲಕ್ಷ, ಜೆಡಿಎಸ್ ಪಕ್ಷದಿಂದ 1ಲಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪರಿಂದ ತಲಾ 50ಸಾವಿರ ಹಾಗೂ ಮೂಡ ಅಧ್ಯಕ್ಷ ಮುನಾವರ್ ಖಾನ್‍ರಿಂದ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದು, ಹೀಗಾಗಿ ಒಟ್ಟು 3 ಲಕ್ಷ ರೂ. ಮೃತ ಮಕ್ಕಳ ಕುಟುಂಬಕ್ಕೆ ನೀಡುವುದಾಗಿ ಘೋಷಿಸಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಗ್ರಾಮದ 9 ಮಕ್ಕಳಿಗೆ ಪೆಂಟಾವೇಲೆಂಟ್ ಇಂಜೆಕ್ಷನ್- ಇಬ್ಬರ ಸಾವು, 7 ಮಕ್ಕಳು ಅಸ್ವಸ್ಥ

    ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿದ್ದವು. ಸರ್ಕಾರದಿಂದ ನೀಡುವ ಲಸಿಕೆ ಹಾಕಿಸಿದ ನಂತರ ಮಕ್ಕಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಮಕ್ಕಳ ಸಾವಿನ ತನಿಖೆ ನಡೆಯುವಂತೆ ಮತ್ತು ಪರಿಹಾರ ನೀಡುವಂತೆ ತಡರಾತ್ರಿಯವರೆಗೂ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂಭಾಗ ನಡೆದಿತ್ತು. ಇದೀಗ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣಹೊಂದಿರುವ ಮಕ್ಕಳ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.

    ಪ್ರಕರಣ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಸರ್ಕಾರದಿಂದ ಗ್ರಾಮದ 9 ಮಕ್ಕಳಿಗೆ ಪೆಂಟಾವೇಲೆಂಟ್ ಇಂಜೆಕ್ಷನ್- ಇಬ್ಬರ ಸಾವು, 7 ಮಕ್ಕಳು ಅಸ್ವಸ್ಥ

    ಸರ್ಕಾರದಿಂದ ಗ್ರಾಮದ 9 ಮಕ್ಕಳಿಗೆ ಪೆಂಟಾವೇಲೆಂಟ್ ಇಂಜೆಕ್ಷನ್- ಇಬ್ಬರ ಸಾವು, 7 ಮಕ್ಕಳು ಅಸ್ವಸ್ಥ

    ಮಂಡ್ಯ: ಸರ್ಕಾರ ಕೊಟ್ಟ ಇಂಜೆಕ್ಷನ್ ಗೆ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಪೋಷಕರು ಆಕ್ರೋಶಗೊಂಡು ಆಸ್ಪತ್ರೆ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿರುವ

    ಸರ್ಕಾರದಿಂದ ನೀಡಿದ ಪೆಂಟಾವೇಲೆಂಟ್ ಇಂಜೆಕ್ಷನ್ ಪಡೆದು ಹಸುಗೂಸುಗಳು ಸಾಯುತ್ತಿವೆ. ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ಗುರುವಾರ ಅಂಗನವಾಡಿಯಲ್ಲಿ ಒಂಭತ್ತು ಮಕ್ಕಳಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಆದರೆ ಇಂಜೆಕ್ಷನ್ ಕೊಡಿಸಿದ ನಂತರ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿವೆ. ಪೆಂಟಾವೇಲೆಂಟ್ ಚುಚ್ಚುಮದ್ದನ್ನು 5 ವರ್ಷಕ್ಕಿಂತ ಕೆಳಗಿನ ಹಸೂಗೂಸುಗಳಿಗೆ ಸರ್ಕಾರ ನೀಡುತ್ತದೆ.

    ಇಂಜೆಕ್ಷನ್ ಪಡೆದ ಒಂಭತ್ತು ಮಕ್ಕಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಉಳಿದ ಏಳು ಮಕ್ಕಳು ಅಸ್ವಸ್ಥರಾಗಿದ್ದಾರೆ. ಏಳು ಮಕ್ಕಳಲ್ಲಿ ಮೂರು ಮಕ್ಕಳ ಸ್ಥತಿ ಗಂಭೀರವಾಗಿದ್ದು, ಇದರಿಂದ ತಾಯಂದಿರು ಹಾಗೂ ಇಡೀ ಗ್ರಾಮವೇ ಆತಂಕ ಪಡುತ್ತಿದೆ. ಆದರೆ ಈ ಬಗ್ಗೆ ವೈದ್ಯರಿಗೆ ತಿಳಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.

    ಹೇಮಾವತಿ ಮತ್ತು ರವಿ ದಂಪತಿಯ ಒಂದು ಮಗು ಮತ್ತು ಪ್ರಿಯಾಂಕ ಮತ್ತು ರವಿ ದಂಪತಿಯ ಮಗು ಸಾವನ್ನಪ್ಪಿವೆ. ಮೊದಲನೇ ಡೋಸ್ ಪಡೆದ ಮಕ್ಕಳು ಮೃತಪಟ್ಟಿವೆ. ಸತ್ತಿರುವ ಎರಡು ಮಕ್ಕಳು ಗಂಡು ಮಕ್ಕಳಾಗಿದ್ದು, ವೈದ್ಯರ ಬಳಿ ಸಮಸ್ಯೆ ಹೇಳಿದಾಗಲೇ ಚಿಕಿತ್ಸೆ ನೀಡಿದ್ದರೆ ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು ಎಂದು ಪೋಷಕರು ಆಸ್ಪತ್ರೆಯ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

  • ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ವೈದ್ಯರ ಎಡವಟ್ಟಿನಿಂದಾಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

    ಕೊಪ್ಪಳ: ವೈದ್ಯರ ಎಡವಟ್ಟಿನಿಂದಾಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಗಾಯಿತ್ರಿ(11) ಎಂದು ಗುರುತಿಸಲಾಗಿದೆ. ವೈದ್ಯ ಡಾ. ಸಂತೋಷ್ ಕುಮಾರ್ ಎಂಬವರು ಈ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.

    ಬಾಲಕಿ ಗಾಯಿತ್ರಿ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಡಾ. ಸಂತೋಷ್ ಚುಚ್ಚು ಮದ್ದು ಕೊಟ್ಟಿದ್ದಾರೆ. ಆ ಬಳಿಕ ಬಾಲಕಿಯ ತೊಡೆಯ ಭಾಗದಲ್ಲಿ ಹಸಿರುಬಣ್ಣಕ್ಕೆ ತಿರುಗಿ ಊತವುಂಟಾಗಿದೆ. ಹೀಗಾಗಿ ಮೆಡಿಸಿನ್ ರಿಯಾಕ್ಷನ್ ನಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

    ಇದೀಗ ಪೋಷಕರು ವೈದ್ಯನ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ ಅಂತ ಆರೋಪ ಮಾಡುತ್ತಿದ್ದಾರೆ. ಮಗಳನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

    ಈ ಘಟನೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ಮೆಡಿಕಲ್ ವಿದ್ಯಾರ್ಥಿ ದೆಹಲಿಯಲ್ಲಿ ನಿಗೂಢ ಸಾವು

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಮಿಳುನಾಡಿನ ಮೆಡಿಕಲ್ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    ಸ್ನಾತಕೋತ್ತರ ವಿದ್ಯಾರ್ಥಿಯಾದ ಎಸ್. ಶರತ್ ಪ್ರಭು (24) ಬುಧವಾರ ತನ್ನ ಫ್ಲ್ಯಾಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುರು ತೇಗ್ ಬಹದ್ದೂರ್ ಮೆಡಿಕಲ್ ಆಸ್ಪತ್ರೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರತ್ ಬುಧವಾರ ಬೆಳಗ್ಗೆ ಪ್ರಜ್ಞೆಯಿಲ್ಲದೇ ವಾಶ್‍ರೂಮಿನಲ್ಲಿ ಬಿದ್ದಿದ್ದರು.

    ಶರತ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದಾರಿ ಮಧ್ಯದಲ್ಲೇ ಶರತ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾಗ ಶರತ್ ಪ್ರಜ್ಞೆ ತಪ್ಪಿಬಿದ್ದ ಸ್ಥಳದಲ್ಲಿ ಇಂಜೆಕ್ಷನ್ ಪತ್ತೆಯಾಗಿದೆ.

    ಶರತ್ ಸಾವಿನ ಹಿಂದಿನ ದಿನ ನಮ್ಮ ಜೊತೆ ಚೆನ್ನಾಗಿ ಮಾತನಾಡಿದ್ದನು. ಆಗ ಅವನು ಚೆನ್ನಾಗಿಯೇ ಇದ್ದ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಶರತ್ ಪೋಷಕರು ಹೇಳಿದ್ದಾರೆ.

    ಶರತ್ ಸಾವಿನಿಂದ ದೆಹಲಿಯಲ್ಲಿ ಓದುತ್ತಿರುವ ತಮಿಳು ನಾಡು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿ ಸಂಘಗಳು ಹಾಗೂ ರಾಜಕೀಯ ಪಕ್ಷಗಳು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ತಮಿಳು ನಾಡು ಸರ್ಕಾರಕ್ಕೆ ತಿಳಿಸಿದೆ.

    ಈ ಹಿಂದೆ ಎಂದರೆ ಕಳೆದ ವರ್ಷ ತಮಿಳು ನಾಡಿನ ವಿದ್ಯಾರ್ಥಿಯಾದ ಸರವಣನ್ ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಸರವಣನ್ ಕೂಡ ದೆಹಲಿಯಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಸರವಣನ್ ಸಾವನ್ನಪ್ಪಿದ್ದ ಜಾಗದಲ್ಲೂ ಕೂಡ ಇಂಜೆಕ್ಷನ್ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಂದ ನಂತರ ಲೆತಲ್ ಇಂಜೆಕ್ಷನ್‍ನಿಂದ ಸರವಣನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.

    ಈ ಘಟನೆಯಲ್ಲಿ ಸಾವನ್ನಪ್ಪಿದ ಸರವಣನ್ ಹಾಗೂ ಶರತ್ ಬಾಬು ಇಬ್ಬರೂ ತಮಿಳು ನಾಡಿನ ತಿರುಪೂರುದವರಾಗಿದ್ದು, ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿದೆ.

  • ರೋಗಿಗೆ ಶರ್ಟ್ ಮೇಲೆಯೇ ಇಂಜೆಕ್ಷನ್ ಕೊಡ್ತಾರೆ ಈ ಡಾಕ್ಟರ್- ವಿಡಿಯೋ ವೈರಲ್

    ರೋಗಿಗೆ ಶರ್ಟ್ ಮೇಲೆಯೇ ಇಂಜೆಕ್ಷನ್ ಕೊಡ್ತಾರೆ ಈ ಡಾಕ್ಟರ್- ವಿಡಿಯೋ ವೈರಲ್

    ಮೈಸೂರು: ರೋಗಿಗಳ ಕೈಗೆ ಇಂಜೆಕ್ಷನ್ ನೀಡಬೇಕಾದರೆ ವೈದ್ಯರು ಬಟ್ಟೆಯನ್ನು ಎಳೆದು ಕೊಡುತ್ತಾರೆ. ಆದ್ರೆ ಈ ವೈದ್ಯರು ಮಾತ್ರ ತುಂಬಾ ಡಿಫೆರೆಂಟ್. ರೋಗಿಯ ಧರಿಸಿದ್ದ ಉಡುಪಿನ ಮೇಲಿಂದಲೇ ಇಂಜೆಕ್ಷನ್ ಚುಚ್ಚುತ್ತಾರೆ. ಪ್ಯಾಂಟ್, ಪಂಚೆ, ಶರ್ಟ್, ಟೀ ಶರ್ಟ್ ಏನೇ ಹಾಕಿದ್ರೂ ಅದ್ರ ಮೇಲೆನೇ ಇಂಜೆಕ್ಷನ್ ಚುಚ್ತಾರೆ, ಇದು ವಿಚಿತ್ರ ಅನ್ನಿಸಿದ್ರೂ ಸತ್ಯ.

    ಈ ಡಾಕ್ಟರ್ ಬೇರೆ ಯಾರೂ ಅಲ್ಲ, ಅರಣ್ಯ ಸಚಿವ ರಮಾನಾಥ್ ರೈರ ಖಾಸ ಅಣ್ಣ ಡಾ.ಸತೀಶ್ ಬೆಳ್ಳಪಾಡಿ. ಮೈಸೂರಿನಲ್ಲಿ ಡಾ.ಸತೀಶ್ ಬೆಳ್ಳಪಾಡಿ ‘ಮಂಜುನಾಥ್ ಕ್ಲಿನಿಕ್’ ನಡೆಸುತ್ತಿದ್ದಾರೆ. ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಕಾಮನ್‍ಮ್ಯಾನ್ ಡಾಕ್ಟ್ರು ಅಂತಾನೇ ಫೇಮಸ್ ಆಗಿದ್ದಾರೆ.

    ಡಾ. ಸತೀಶ್ ರೋಗಿಗಳಿಗೆ ನೀಡುವ ಇಂಜೆಕ್ಷನ್ ಸ್ಟೈಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    https://youtu.be/iBQI8TlnN4I

  • ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಚುಚ್ಚುಮದ್ದು ಸೋಂಕಿನಿಂದ ಬಿಎಸ್ಸಿ ಪದವೀಧರೆ ಸಾವು – ಕ್ಲಿನಿಕ್ ಮುಚ್ಚಿ ಡಾಕ್ಟರ್ ಪರಾರಿ

    ಮೈಸೂರು: ನಗರದಲ್ಲಿ ವೈದ್ಯನೊಬ್ಬನ ಚುಚ್ಚುಮದ್ದು ಸೋಂಕಿನಿಂದ ಬಿ.ಎಸ್‍ಸಿ ಪದವೀಧರೆಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಹೆಚ್‍ಡಿ ಕೋಟೆ ತಾಲೂಕಿನ ಕಾಳಿಹುಂಡಿ ಬಳಿ ನಡೆದಿದೆ.

    ಮೃತ ದುರ್ದೈವಿ ವಿದ್ಯಾರ್ಥಿನಿಯನ್ನು 21 ವರ್ಷದ ಅಂಕುಶ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅಂಕುಶಳಿಗೆ ವಾರದ ಹಿಂದೆ ಜ್ವರ ಬಂದಿತ್ತು. ಹೀಗಾಗಿ ಈಕೆ ತಾಲೂಕಿನಲ್ಲಿರೋ ಕ್ಲಿನಿಕ್‍ವೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಂತೆಯೇ ಅಲ್ಲಿನ ವೈದ್ಯ ರಾಜು ಎಂಬಾತ ಅಂಕುಶಳಿಗೆ ಇಂಜೆಕ್ಷನ್ ನೀಡಿ ಚಿಕಿತ್ಸೆ ಕೊಟ್ಟಿದ್ದನು. ಮರುದಿನವೇ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ಊತ ಆರಂಭವಾಗಿ ನೋವು ಕಾಣಿಸಿಕೊಂಡಿತ್ತು. ಅಲ್ಲದೇ ಆ ಜಾಗ ಗಂಟಾಗಿ ಕೀವು ತುಂಬಲು ಪ್ರಾರಂಭವಾಗಿತ್ತು.

    ಈ ಹಿನ್ನೆಲೆಯಲ್ಲಿ 2 ದಿನಗಳ ನಂತರ ರಾಜು ಬಳಿ ತೆರಳಿದಾಗ ವೈದ್ಯ ತಾನೇ ಮೈಸೂರಿನ ಖಾಸಗಿ ವೈದ್ಯರ ಬಳಿ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಿದ್ದನು. ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ವೈದ್ಯ ಎಸ್ಕೇಪ್: ಇತ್ತ ಯುವತಿಯ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯ ರಾಜು ಕ್ಲಿನಿಕ್ ಬೋರ್ಡ್ ತೆಗೆದು ತಲೆಮರೆಸಿಕೊಂಡಿದ್ದಾನೆ. ಅಲ್ಲದೇ ಈ ಕುರಿತು ಅಂಕುಶ ಕುಟುಂಬಸ್ಥರು ಕೂಡ ಯಾವುದೇ ದೂರು ನೀಡದೆ ಅಂತ್ಯಕ್ರಿಯೆ ನಡೆಸಿದ್ದಾರೆ.

    ಆದ್ರೆ ಸ್ಥಳೀಯರು ಮಾತ್ರ ಡಾ ರಾಜು ಅಸಲಿ ವೈದ್ಯನೇ ಅಲ್ಲ ಅಂತ ಆರೋಪಿಸಿದ್ದು, ನಕಲಿ ವೈದ್ಯನ ಯಡವಟ್ಟಿನಿಂದ ಯುವತಿ ಬಲಿಯಾಗಿದ್ದಾಳೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.

  • ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

    ವಿಜಯಪುರ: ವೈದ್ಯನ ಎಡವಟ್ಟಿಗೆ ಯುವಕನ ಜೀವಕ್ಕೆ ಕುತ್ತು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯನ ಹತ್ತಿರ ಚಿಕಿತ್ಸೆ ಪಡೆದಿದ್ದರು. ಆದ್ರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶನ ಹಿಂಭಾಗದಲ್ಲಿ ಶೇಕಡ 90 ರಷ್ಟು ಭಾಗ ಹುಳು ಹತ್ತಿದೆ.

    ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯದ ಸಂಭವವಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

    ನನ್ನ ಕಾಲುಗಳೆರಡೂ ನೋವಾಗ್ತಿತ್ತು. ಆಸ್ಪತ್ರೆಗೆ ಬಂದಾಗ ವೈದ್ಯರು ಇರ್ಲಿಲ್ಲ. ನಂತರ 12 ಗಂಟೆಗೆ ವೈದ್ಯರು ಬಂದು ಇಂಜೆಕ್ಷನ್ ಕೊಟ್ರು ಎಂದು ಸತೀಶ್ ಹೇಳಿದ್ದಾರೆ.

    ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಸದ್ಯಕ್ಕೆ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ.

  • ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ಒಂದೇ ಗಂಟೆಯಲ್ಲಿ 5 ಇಂಜೆಕ್ಷನ್, 2 ಗ್ಲುಕೋಸ್ – ಓವರ್ ಡೋಸ್‍ಗೆ ಯುವಕ ಬಲಿ?

    ದಾವಣಗೆರೆ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಓವರ್ ಡೋಸ್ ಔಷಧಿ ನೀಡಿ ಸಾವನ್ನಪ್ಪುವಂತೆ ಮಾಡಿದ್ದಾರೆ ಎಂದು ಅರೋಪಿಸಿ ಕ್ಲಿನಿಕ್ ಮುಂಭಾಗ ರೋಗಿಯ ಸಂಬಂಧಿಕರು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

    ನಗರದ ಕೆ ಬಿ ಬಡಾವಣೆಯಲ್ಲಿರುವ ಜಾಧವ್ ಕ್ಲಿನಿಕ್ ಗೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮದ ಮಾರುತಿ (18) ಯನ್ನು ದಾಖಲು ಮಾಡಿದ್ರು. ರಾತ್ರಿ 8 ಗಂಟೆಯಿಂದ 9 ಗಂಟೆಯ ಒಳಗೆ ಐದು ಇಂಜೆಕ್ಷನ್, 2 ಗ್ಲೂಕೋಸ್ ನೀಡಿದ್ರು. ನಂತರ ಹಾಗೇ ಡಿಸ್ಚಾರ್ಜ್ ಮಾಡಿ ಕಳಿಸಿದ್ದಾರೆ.

    ಆದ್ರೆ ಡಿಸ್ಚಾರ್ಜ್ ಮಾಡಿ 2 ಕಿಲೋಮೀಟರ್ ಸಾಗುತ್ತಿದ್ದಂತೆಯೇ ಯುವಕನ ಬಾಯಲ್ಲಿ ನೊರೆ ಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮಾರುತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ.

    ಇದರಿಂದ ಅಕ್ರೋಶಗೊಂಡ ಯುವಕನ ಸಂಬಂಧಿಕರು ಜಾಧವ್ ಕ್ಲಿನಿಕ್ ಬಳಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.