Tag: ಇಂಜಿನಿಯರಿಂಗ್ ವಿದ್ಯಾರ್ಥಿ

  • ಮನೆಗೆಲಸ ಮಾಡಿ ಪ್ರವೀಣ್‌ನನ್ನ ಎಂಜಿನಿಯರಿಂಗ್ ಓದಿಸ್ತಿದ್ದ ತಾಯಿ

    ಮನೆಗೆಲಸ ಮಾಡಿ ಪ್ರವೀಣ್‌ನನ್ನ ಎಂಜಿನಿಯರಿಂಗ್ ಓದಿಸ್ತಿದ್ದ ತಾಯಿ

    – ಇನ್ನೇನು ಕಷ್ಟಗಳೆಲ್ಲಾ ಕಳೆಯಿತು ಅನ್ನುವಾಗಲೇ ಜವರಾಯ ಹೊತ್ತೊಯ್ದ
    – ಮಗನ ಸಾವಿನ ಸುದ್ದಿ ಕೇಳಿ ಗೋಳಾಡಿದ ತಾಯಿ

    ಹಾಸನ\ಬಳ್ಳಾರಿ: ಹಾಸನದ (Hassan) ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ (Ganesh Procession) ವೇಳೆ ಟ್ರಕ್ ಹರಿದು ಬಳ್ಳಾರಿಯ ಪ್ರವೀಣ್ ಮೃತಪಟ್ಟಿದ್ದು, ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಬಳ್ಳಾರಿಯ (Ballary) ನಾಗಲಕೆರೆ ಏರಿಯಾದ ಪ್ರವೀಣ್ ಮೃತ ದುರ್ದೈವಿ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಾಸನಕ್ಕೆ ಬಂದಿದ್ದ ಪ್ರವೀಣ್, ಶುಕ್ರವಾರ ಗಣೇಶ ವಿಸರ್ಜನೆ ವೇಳೆ ನಡೆದ ಘನಘೋರ ದುರಂತದಲ್ಲಿ ಉಸಿರುಚೆಲ್ಲಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪ್ರವೀಣ್ ತಾಯಿ ಸುಶೀಲಾ ಆರೈಕೆಯಲ್ಲೇ ಬೆಳೆದಿದ್ದ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ದುರಂತ – ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ ದುರ್ಮರಣ

    ಕಿತ್ತು ತಿನ್ನುವ ಬಡತನವಿದ್ದರೂ ಮನೆಗೆಲಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಮಗನನ್ನು ತಾಯಿ ಇಂಜಿನಿಯರಿಂಗ್ ಓದಿಸುತ್ತಿದ್ದರು. ಬಳ್ಳಾರಿಯಲ್ಲಿ ಡಿಪ್ಲೊಮಾ ಮುಗಿಸಿ, ಹಾಸನದಲ್ಲಿ ಇಂಜಿನಿಯರಿಂಗ್ ಮಾಡಲು ತೆರಳಿದ್ದ ಪ್ರವೀಣ್, ಎಲೆಕ್ಟ್ರಾನಿಕ್ ವಿಭಾಗದ ಕೊನೆಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡ್ತಿದ್ದ. ಮಗ ಇನ್ನೇನು ಕೆಲಸಕ್ಕೆ ಸೇರಿ ತನ್ನ ಕಷ್ಟಗಳೆಲ್ಲ ಕಳೆಯುತ್ತದೆ ಅಂದುಕೊಂಡಿದ್ದ ತಾಯಿಗೆ ಪ್ರವೀಣ್ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಇದೀಗ ಪ್ರವೀಣ್ ಮೃತದೇಹ ಬಳ್ಳಾರಿಯ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಮೃತದೇಹ ನೋಡಿ ತಾಯಿ ನನಗ್ಯಾರು ದಿಕ್ಕೆಂದು ಎದೆ ಬಡಿದುಕೊಂಡು ಗೋಳಾಡಿದ್ದಾರೆ. ತಾಯಿಯ ಸ್ಥಿತಿ ಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

  • ಎಜುಕೇಶನ್ ಸಿಸ್ಟಮ್ ಸರಿಯಿಲ್ಲ- ಸೆಲ್ಫಿ ವೀಡಿಯೋ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಎಜುಕೇಶನ್ ಸಿಸ್ಟಮ್ ಸರಿಯಿಲ್ಲ- ಸೆಲ್ಫಿ ವೀಡಿಯೋ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಹಾಸನ: ಈಗಿನ ಎಜುಕೇಶನ್ ಸಿಸ್ಟಮ್ ನಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಂ ಇದ್ದರೂ ಇಲ್ಲದಂತಾಗಿದೆ ಎಂದು ಸಿಎಂ ಮತ್ತು ವಿಶ್ವವಿದ್ಯಾಲಯಗಳ ವಿಸಿಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಿನ್ನೆ ನಡೆದಿದೆ.

    ಹೇಮಂತ್ ಗೌಡ(20) ಮೃತ ದುರ್ದೈವಿ. ಈತ ಅರಸೀಕೆರೆ ಮೂಲದವನಾಗಿದ್ದಾನೆ. ಹಾಸನ ನಗರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಈತ, ನಿನ್ನೆ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಹೇಮಂತ್ ಗೌಡ ಸಾಯುವ ಮುನ್ನ ಸುಮಾರು 13 ನಿಮಿಷ 21 ಸೆಕೆಂಡ್ ಸೆಲ್ಫಿ ವೀಡಿಯೋ ಮಾಡಿದ್ದಾನೆ. ಅದರಲ್ಲಿ ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಎಜುಕೇಶನ್ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ನ್ಯೂಸ್ ಚಾನಲ್, ಟ್ವಿಟ್ಟರ್, ಫೇಸ್‍ಬುಕ್, ವ್ಯಾಟ್ಸಪ್ ಎಲ್ಲದರಲ್ಲೂ ಈ ವೀಡಿಯೋ ಅಪ್ ಲೋಡ್ ಮಾಡಿ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಸ್ನೇಹಿತ ಬಿಎಂಟಿಸಿ ಬಸ್ ಡ್ರೈವರ್​​​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್

    ನನ್ನ ಸುಟ್ಟರೆ ಬೂದಿಯಾಗುತ್ತೆ, ಮಣ್ಣು ಮಾಡಿದರೆ ಕೊಳೆಯುತ್ತದೆ. ಆದ್ದರಿಂದ, ನನ್ನ ಅಂಗಾಂಗಳನ್ನು ದಾನ ಮಾಡಿ. ಜಗದ್ಗುರು ಶ್ರೀ ನಿರ್ಮಲಾನಂಧನಾಥ ಸ್ವಾಮೀಜಿ ಆಶೀರ್ವಾದ ಪಡೆಯುವುದು ನನ್ನ ಜೀವನದ ಆಸೆಯಾಗಿತ್ತು. ಸಿಎಂ, ಎಜುಕೇಶನ್ ಮಿನಿಸ್ಟರ್, ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು. ಅಪ್ಪ-ಅಮ್ಮ ನಾನು ಬೋಡಿರ್ಂಗ್‍ನಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯನ್ನ ಮಿಸ್ ಮಾಡ್ಕಂಡೆ. ಈಗಲೂ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ತನ್ನ ಗೆಳತಿಗೆ ಥ್ಯಾಂಕ್ಸ್ ಹೇಳಿರುವ ಆತ, ತನ್ನ ಅಂತ್ಯಕ್ರಿಯೆಯಲ್ಲಿ ಮಾಲ್ಗೊಳ್ಳವಂತೆ ಗೆಳತಿಗೆ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 5 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ – ಇಬ್ಬರ ಬಂಧನ

  • ನನ್ನ ಸಾವಿಗೆ ನಾನೇ ಕಾರಣ- ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ನನ್ನ ಸಾವಿಗೆ ನಾನೇ ಕಾರಣ- ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಗಣೇಶ್ (22) ಎಂದು ಗುರುತಿಸಲಾಗಿದೆ. ಕೆಳದಿ ಗ್ರಾಮದ ನಿವಾಸಿ ಸುಬ್ರಹ್ಮಣ್ಯ ಅವರಿಗೆ ಐವರು ಹೆಣ್ಣು ಮಕ್ಕಳಿದ್ದು, ಕೊನೆಯ ಪುತ್ರ ಗಣೇಶ್ ಉಡುಪಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಲಾಕ್‍ಡೌನ್ ನಿಂದ ಕಾಲೇಜು ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮಕ್ಕೆ ಮರಳಿದ್ದ.

    ನನ್ನ ಸಾವಿಗೆ ನಾನೇ ಕಾರಣ ಎಂದು ಗಣೇಶ್ ಡೆತ್ ನೋಟ್ ಬರೆದಿಟ್ಟು ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಟ್ಟಡದಿಂದ ಹಾರಿ ಮಂಗ್ಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಕಟ್ಟಡದಿಂದ ಹಾರಿ ಮಂಗ್ಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ನಡೆದಿದೆ.

    ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಳಚ್ಚಿಲ್‍ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗುರುಪ್ರಸಾದ್ ಇಂದು ಮಧ್ಯಾಹ್ನದ ಸ್ಥಳೀಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

    ಆತ್ಮಹತ್ಯೆ ಮಾಡಿಕೊಂಡ ಗುರುಪ್ರಸಾದ್ ಹಲವು ದಿನಗಳಿಂದ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವೇಳೆ ಸ್ಥಳೀಯರು ಗುರುಪ್ರಸಾದ್ ನ್ನು ಆಸ್ಪತ್ರೆ ಸೇರಿಸಿ ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಆದರು ಚಿಕಿತ್ಸೆ ಫಲಕಾರಿಯಾಗದೆ ಗುರುಪ್ರಸಾದ್ ಸಾವನ್ನಪ್ಪಿದ್ದಾನೆ.

    ಸದ್ಯ ಮೃತಪಟ್ಟಿರುವ ಗುರುಪ್ರಸಾದ್ ಪೋಷಕರು ತಮ್ಮ ಮಗ ಯಾವುದೇ ಒತ್ತಡದಲ್ಲಿ ಇರಲಿಲ್ಲ ಎಂದು ತಿಳಿಸಿದ್ದು, ಆದರೆ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುವುದು ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.