Tag: ಇಂಜಮಾಮ್-ಉಲ್-ಹಕ್

  • ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ಪ್ರದರ್ಶನ – ಮೊದಲನೇಯ ದೊಡ್ಡ ವಿಕೆಟ್‌ ಪತನ

    ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ಪ್ರದರ್ಶನ – ಮೊದಲನೇಯ ದೊಡ್ಡ ವಿಕೆಟ್‌ ಪತನ

    ಇಸ್ಲಾಮಾಬಾದ್‌: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಮೊದಲನೇಯ ದೊಡ್ಡ ವಿಕೆಟ್‌ ಪತನವಾಗಿದೆ. ಪಾಕಿಸ್ತಾನ ಕ್ರಿಕೆಟ್‌ನ (Pakistan Cricket) ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ನಾಯಕ ಇಂಜಮಾಮ್‌ ಉಲ್ ಹಕ್ (Inzamam-ul-Haq) ರಾಜೀನಾಮೆ ನೀಡಿದ್ದಾರೆ.

    ಆಯ್ಕೆ ಮಂಡಳಿ ಸರಿಯಾದ ಆಟಗಾರರನ್ನು ಆಯ್ಕೆ ಮಾಡಲಿಲ್ಲ ಎಂಬ ಟೀಕೆಯ ಬೆನ್ನಲ್ಲೇ ವಿಶ್ವಕಪ್‌ ಟೂರ್ನಿ ನಡೆಯುತ್ತಿರುವ ಮಧ್ಯದಲ್ಲೇ ಇಂಜಮಾಮ್‌ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥ ಝಕಾ ಅಶ್ರಫ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.

    ವಿಶ್ವಕಪ್‌ಗಾಗಿ ಪಾಕಿಸ್ತಾನದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ವೈಯಕ್ತಿಕ ಹಿತಾಸಕ್ತಿ ಸಂಘರ್ಷದ ಆರೋಪ ಬಂದಿತ್ತು. ಈ ಆರೋಪಗಳಿಗೆ ಬೇಸತ್ತು ಇಂಜಮಾಮ್‌ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಈ ಆರೋಪಗಳ ತನಿಖೆಗಾಗಿ ಐದು ಸದಸ್ಯರ ಸತ್ಯ ಶೋಧನಾ ಸಮಿತಿಯನ್ನು ಪಿಸಿಬಿ ರಚಿಸಿದೆ.

    2016 ರಿಂದ 19ರವರೆಗಿನ ಒಂದು ಅವಧಿಯಲ್ಲಿ ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿದ್ದ ಇವರು ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ವಿಶ್ವಕಪ್‌ ಟೂರ್ನಿಯ ವೇಳೆ ಆಗಸ್ಟ್‌ನಲ್ಲಿ ಮತ್ತೆ ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಇದನ್ನೂ ಓದಿ: ಪಾಕ್‌ ವಿರುದ್ಧ ಗೆದ್ದ ಅಫ್ಘಾನ್‌ ಕ್ರಿಕೆಟಿಗರಿಗೆ ಬಹುಮಾನ; ರತನ್‌ ಟಾಟಾ ಸ್ಪಷ್ಟನೆ ಏನು?

     

    ಏನಿದು ಆರೋಪ?
    ಸ್ಥಳೀಯ ಮಾಧ್ಯಮಗಳ ಪ್ರಕಾರ ಇಂಜಮಾಮ್‌ ಅವರು Yazo International Limited ಕಂಪನಿಯಲ್ಲಿ ಪಾಲುದಾರರಾಗಿದ್ದಾರೆ. ಪಾಕ್‌ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ರಿಜ್ವಾನ್ ಈ ಕಂಪನಿಯನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಕಂಪನಿಯ ವೈಯಕ್ತಿಕ ಹಿತಾಸಕ್ತಿಗಾಗಿ ಇಂಜಮಾಮ್‌ ಈ ಆಟಗಾರರನ್ನು ಆಯ್ಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.

    ಪಾಕಿಸ್ತಾನ ಒಟ್ಟು 6 ಪಂದ್ಯವಾಡಿದ್ದು ಸತತ 4 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ನೆದರ್‌ಲ್ಯಾಂರ್ಡ್ಸ್‌ ವಿರುದ್ಧ 84 ರನ್‌, ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತ್ತು. ನಂತರ ಅನುಕ್ರಮವಾಗಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾದ ವಿರುದ್ಧ ಸೋಲನ್ನು ಅನುಭವಿಸಿತ್ತು. ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧ ಸೋತಿದ್ದಕ್ಕೆ ಪಾಕಿಸ್ತಾನದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

    ಬಾಬರ್‌ ಅಜಂ ವಿರುದ್ಧವೂ ಟೀಕೆ ಬಂದಿದ್ದು ಈ ವಿಶ್ವಕಪ್‌ ಟೂರ್ನಿ ಮುಕ್ತಾಯವಾದ ಬಳಿಕ ಅವರನ್ನು ನಾಯಕ ಪಟ್ಟದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಟೀಂ ಇಂಡಿಯಾ ಅಭಿಮಾನಿಗಳನ್ನ ಕೆಣಕಿದ ಇಂಜಮಾಮ್

    ಮತ್ತೆ ಟೀಂ ಇಂಡಿಯಾ ಅಭಿಮಾನಿಗಳನ್ನ ಕೆಣಕಿದ ಇಂಜಮಾಮ್

    ನವದೆಹಲಿ: ಭಾರತೀಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವೈಯಕ್ತಿಕ ಆಟವಾಡುತ್ತಾರೆ. ಆದರೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ಆಡುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಮುಖ್ಯ ಸೆಲೆಕ್ಟರ್ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

    ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಮೀಜ್ ರಾಜಾ ಅವರೊಂದಿಗೆ ಇಂಜಮಾಮ್ ತಮ್ಮ ಕಾಲದ ಕ್ರಿಕೆಟ್ ತಂಡಗಳ ಬಗ್ಗೆ ಮಾತನಾಡಿದ್ದಾರೆ. ”ಪಾಕ್ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ದಾಖಲೆಗಳ ಹಿಂದೆ ಬೀಳದೇ ಯಾವಾಗಲೂ ತಮ್ಮ ನಾಯಕನ ಬೆಂಬಲಕ್ಕೆ ನಿಲ್ಲುತ್ತಿದ್ದರು. ವಿಶೇಷವಾಗಿ ಇಮ್ರಾನ್ ಖಾನ್ ನೇತೃತ್ವದ ತಂಡದಲ್ಲಿ ಇಂತಹ ವಾತಾವರಣ ಇತ್ತು” ಎಂದು ಇಂಜಮಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

    ಪಾಕಿಸ್ತಾನದ ಪ್ರಸ್ತುತ ಆಟಗಾರರು ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ ಕೆಲವೊಮ್ಮೆ ವೈಫಲ್ಯದ ಬಗ್ಗೆ ತುಂಬಾ ಭಯಪಡುತ್ತಾರೆ ಎಂದು ರಮೀಜ್ ರಾಜಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಮಾಮ್, ಆಟಗಾರರು ಸರಣಿ ಆಧಾರದ ಮೇಲೆ ಯೋಚಿಸುತ್ತಿದ್ದರೆ ಒಂದು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ಸ್ಥಾನ ಸಿಗುತ್ತದೆ. ಒಂದು ವೇಳೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರೆ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ. ಆದರೆ ಅವರಿಗೆ ವೈಕ್ತಿಕ ಆಟವಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ”ನಮ್ಮ ಸಮಯದಲ್ಲಿ ಭಾರತವು ನಮಗಿಂತ ಬಲಿಷ್ಠ ಬ್ಯಾಟಿಂಗ್ ತಂಡವನ್ನು ಹೊಂದಿತ್ತು. ಹೀಗಾಗಿ ಅವರಿಗಿಂತ ನಮ್ಮ ದಾಖಲೆ ಉತ್ತಮವಾಗಿಲ್ಲ. ಆದರೆ ನಮ್ಮಲ್ಲಿ ಪ್ರತಿಯೊಬ್ಬರು 30ರಿಂದ 40 ರನ್ ಗಳಿಸಿ, ತಂಡಕ್ಕೆ ಕೊಡುಗೆ ನೀಡುತ್ತಿದ್ದೆವು. ಒಂದು ವೇಳೆ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಶತಕ ಬಾರಿಸಿದರೆ ಅದು ತಂಡಕ್ಕಾಗಿ ನೀಡಿದ ಕೊಡುಗೆ ಆಗುತ್ತಿರಲಿಲ್ಲ. ಬದಲಾಗಿ ವೈಯಕ್ತಿಕ ದಾಖಲೆಗಾಗಿ ಹಾಗೆ ಮಾಡುತ್ತಿದ್ದರು” ಎಂದು ಇಂಜಮಾಮ್ ಹೇಳಿದ್ದಾರೆ.

    ”ಈಗ ನಮ್ಮ ಆಟಗಾರರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿಸಲು ಕೇವಲ ಒಂದು ಅಥವಾ ಎರಡು ಇನ್ನಿಂಗ್ಸ್ ಮಾತ್ರ ಇದೆ ಎಂದು ಅವರು ಭಾವಿಸುತ್ತಾರೆ. ಆದ್ದರಿಂದ ತಂಡಕ್ಕೆ ಏನು ಬೇಕು ಎಂದು ಅವರು ತಿಳಿಯಲು ಸಾಧ್ಯವಾಗುತ್ತಿಲ್ಲ. ತಂಡದ ನಾಯಕ ಮತ್ತು ತರಬೇತುದಾರ ಒಂದೇ ರೀತಿಯ ಆಲೋಚನೆ ಹೊಂದಿದ್ದರೆ ಬ್ಯಾಟ್ಸ್‌ಮನ್‍ಗಳು ತಂಡದ ಅಗತ್ಯಕ್ಕೆ ಅನುಗುಣವಾಗಿ ಆಡುತ್ತಾರೆ” ಎಂದು ಇಂಜಮಾಮ್, ರಮೀಜ್ ರಾಜಾ ಅವರಿಗೆ ತಿಳಿಸಿದ್ದಾರೆ.

  • ವಿರಾಟ್ 70 ಶತಕ ಸಿಡಿಸಿದ್ದನ್ನ ಮರೆತಿದ್ದೀರಾ?- ನೆಟ್ಟಿಗರಿಗೆ ಇಂಜಮಾಮ್ ಕ್ಲಾಸ್

    ವಿರಾಟ್ 70 ಶತಕ ಸಿಡಿಸಿದ್ದನ್ನ ಮರೆತಿದ್ದೀರಾ?- ನೆಟ್ಟಿಗರಿಗೆ ಇಂಜಮಾಮ್ ಕ್ಲಾಸ್

    – ಕೊಹ್ಲಿ ಕಳಪೆ ಫಾರ್ಮ್ ಸಮರ್ಥಿಸಿಕೊಂಡ ಇಂಜಮಾಮ್

    ಇಸ್ಲಾಮಾಬಾದ್: ನ್ಯೂಜಿಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಇದೇ ಸಮಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ 44 ರನ್ ಬಾರಿಸಿದ್ದರು. ಹೀಗಾಗಿ ಕೆಲ ನೆಟ್ಟಿಗರು ಹಾಗೂ ಹಿರಿಯ ಆಟಗಾರರು ವಿರಾಟ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವಾಗಿ ಮಾತನಾಡಿದ ವಿಡಿಯೋವನ್ನು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ತಂತ್ರದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಇಂಜಮಾಮ್ ಹೇಳಿದ್ದಾರೆ. ಇದನ್ನೂ ಓದಿ: ಕಿವೀಸ್ ವಿರುದ್ಧ ವೈಟ್‍ವಾಶ್ ಆದ್ರೂ ಟೆಸ್ಟ್ ಸಾಮ್ರಾಜ್ಯದಲ್ಲಿ ಭಾರತವೇ ರಾಜ

    ‘ಕ್ರಿಕೆಟ್ ಅಭಿಮಾನಿಗಳು ಯಾಕೆ ವಿರಾಟ್ ಅವರ ತಂತ್ರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗಿದೆ. ಅವರು ಇದೇ ತಂತ್ರದಲ್ಲಿ 70 ಶತಕಗಳನ್ನು ಗಳಿಸಿದ್ದಾರೆ ಎಂಬುದನ್ನು ನೀವು ಮರೆತಿದ್ದೀರಾ? ಕೊಹ್ಲಿ ಬಗ್ಗೆ ಏನೆಲ್ಲ ಮಾತನಾಡುತ್ತಿರುವಿರಿ. ಕಳಪೆ ಫಾರ್ಮ್ ಪ್ರತಿಯೊಬ್ಬ ಆಟಗಾರನ ವೃತ್ತಿಜೀವನದಲ್ಲೂ ಬರುತ್ತದೆ. ಆಗ ಆ ಆಟಗಾರ ತನ್ನೊಂದಿಗೆ ಹೋರಾಡುತ್ತಾನೆ. ವಿರಾಟ್ ಮೊದಲಿಗಿಂತ ಹೆಚ್ಚು ರನ್ ಗಳಿಸುತ್ತಿದ್ದಾರೆ ಎಂಬ ವಿಚಾರವನ್ನು ನಾನು ಖಾತರಿಪಡಿಸುತ್ತೇನೆ. ಮೊಹಮ್ಮದ್ ಯೂಸುಫ್ ಅವರ ವಿಷಯದಲ್ಲೂ ಇದೇ ಆಯಿತು. ಅವರು ನನ್ನ ಬಳಿಗೆ ಬಂದಾಗ, ನಾನು ಏನನ್ನೂ ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಬಳಿಕ ಯೂಸುಫ್ ಅವರದ್ದೇ ತಂತ್ರದಿಂದ ಕ್ರಿಕೆಟ್‍ನಲ್ಲಿ ಮಿಂಚಿದರು ಎಂದು ಇಂಜಮಾಮ್ ನೆನೆದರು. ಇದನ್ನೂ ಓದಿ: ನಡವಳಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನ ಚಳಿ ಬಿಡಿಸಿದ ವಿರಾಟ್

    ಇತರ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ರು?:
    ‘ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನ್ಯೂಜಿಲೆಂಡ್‍ನಲ್ಲಿ ಫ್ಲಾಪ್ ಆಯಿತು ಎಂದು ನಾನು ಭಾವಿಸುತ್ತೇನೆ. ಆದರೆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಿದ್ದರು? ಸತ್ಯವೆಂದರೆ ಸೋಲು ಎಲ್ಲಾ ಆಟಗಾರರ ಹೊಣೆಯಾಗಿದೆ ಎಂದು ಹೇಳಿದರು.

    ವಿರಾಟ್ ಅವರಿಗೆ ನನ್ನದೊಂದು ಸಲಹೆ ಇದೆ, ಚಿಂತಿಸಬೇಡಿ. ಈ ಹಂತವು ಶೀಘ್ರದಲ್ಲೇ ಹಾದುಹೋಗುತ್ತದೆ. ನಿಮ್ಮ ತಂತ್ರವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಇಂಜಮಾಮ್ ಸಲಹೆ ನೀಡಿದರು.

    ಕೊಹ್ಲಿ ಅವರು ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿ ಹೊರ ಹೊಮ್ಮಲಿದ್ದಾರೆ. ಅವರು ಮಾನಸಿಕವಾಗಿ ತುಂಬಾ ಬಲಶಾಲಿ. ಸಯೀದ್ ಅನ್ವರ್ ಮತ್ತು ಸೌರವ್ ಗಂಗೂಲಿ ಆಫ್ ಸೈಡ್‍ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಕೆಲವೊಮ್ಮೆ ಬಲಗೈ ಬ್ಯಾಟ್ಸ್‍ಮನ್‍ಗಳಿಗೆ ಅವರ ಬಲವಾದ ಭಾಗವು ದೌರ್ಬಲ್ಯವಾಗುತ್ತದೆ. ಆದ್ದರಿಂದ ಹೆಚ್ಚು ಚಿಂತಿಸಬೇಡಿ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.

  • ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

    ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

    – ತೆಂಡೂಲ್ಕರ್ ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ

    ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ಅಪಾಯಕಾರಿ ಬೌಲರ್ ಕೂಡ ಹೌದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

    ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಪೂರ್ಣ ಸಂಚಿಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ಅವರನ್ನು ಹೊಗಳಿದ್ದಾರೆ. ಜೊತೆಗೆ ಸಚಿನ್ ಅವರು ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ ಎಂದು ದೂರಿದ್ದಾರೆ.

    ನಾನು ವಿಶ್ವದ ಎಲ್ಲಾ ಲೆಗ್ ಸ್ಪಿನ್ನರ್‌ಗಳನ್ನು ಎದುರಿಸಿದ್ದೇನೆ. ಯಾರೇ ಗೂಗ್ಲಿ ಎಸೆದರೂ ನನಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸಚಿನ್ ಅವರ ಗೂಗ್ಲಿ ಎಸೆತಗಳನ್ನು ಎದುರಿಸುವಲ್ಲಿ ಪರದಾಡುತ್ತಿದ್ದೆ. ಇದೇ ಕಾರಣಕ್ಕೆ ಸಚಿನ್ ಅನೇಕ ಬಾರಿ ನನ್ನ ವಿಕೆಟ್ ಕಿತ್ತು, ಪೆವಿಲಿಯನ್‍ಗೆ ಅಟ್ಟಿದ್ದರು ಎಂದು ಇಂಜಮಾಮ್ ಹೇಳಿದ್ದಾರೆ.

    ಅತ್ಯಂತ ಶ್ರೇಷ್ಠ ಪದವಿ ಇದ್ದರೆ, ಅದನ್ನು ಸಚಿನ್ ಅವರಿಗೆ ನೀಡಲು ಬಯಸುತ್ತೇನೆ. 16ನೇ ವಯಸ್ಸಿನಲ್ಲಿ ಅವರು ಇಮ್ರಾನ್ ಖಾನ್, ವಾಕರ್ ಯೂನಿಸ್ ಮತ್ತು ವಾಸಿಮ್ ಅಕ್ರಮ್ ಅವರಂತಹ ಬೌಲರ್‍ಗಳನ್ನು ಎದುರಿಸಿದ್ದರು. ಸಚಿನ್ ಚೊಚ್ಚಲ ಸರಣಿಯ ಪಂದ್ಯವೊಂದರಲ್ಲಿ ಪೇಶಾವರದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಮುಷ್ತಾಕ್ ಅಹ್ಮದ್ ಅವರ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ನಂತರ ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದ್ದರು. ಪಂದ್ಯದ ವೇಳೆ ಖಾದಿರ್ ಅವರು, ಸಚಿನ್ ಅವರನ್ನು ಕೆಣಕಿದ್ದರು. ಆಗ ಪ್ರತ್ಯುತ್ತರವಾಗಿ ಸಚಿನ್ ಕದೀರ್ ಅವರು ಎಸೆದ ಓವರಿನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ್ದರು ಎಂದು ಇಂಜಮಾಮ್ ನೆನೆದಿದ್ದಾರೆ.

    ಸಚಿನ್ ಯುಗವನ್ನು ಬದಲಾಯಿಸಿದ್ರು:
    ‘ಯಾವುದೇ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು 8 ಸಾವಿರಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗದ ಅವಧಿಯಲ್ಲಿ ಸಚಿನ್ ಆಡಿದ್ದರು. ಈ ವೇಳೆ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು 10 ಸಾವಿರ ರನ್ ಗಳಿಸಿದ್ದರು. ಆದರೆ ಸಚಿನ್ ಅವರಿಂದ ಸ್ಫೂರ್ತಿ ಪಡೆದು 35 ಸಾವಿರ ರನ್ ಗಳಿಸಿದ್ದಾರೆ. ಅವರ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ಈಗ ನೋಡಬೇಕಿದೆ. ಜಗತ್ತಿನಲ್ಲಿ ಸಚಿನ್ ಅವಗಿರುವಷ್ಟು ಯಾವ ಕ್ರಿಕಟ್ ಆಟಗಾರರಿಗೂ ಅಭಿಮಾನಿಗಳಿಲ್ಲ. ಸಚಿನ್ ಬೌಲರ್ ಆಗಿರಲಿಲ್ಲ. ಆದರೆ ಅವರು ಮಧ್ಯಮ ವೇಗಿ ಹಾಗೂ ಲೆಗ್ ಸ್ಪಿನ್ನರ್ ಆಗಿ ಮಿಂಚಿದ್ದಾರೆ’ ಎಂದು ಹೇಳಿದರು.

    ಕೊನೆಗೆ ಇಂಜಮಾಮ್ ಸಚಿನ್‍ಗೆ ಒಂದು ಸಂದೇಶ ನೀಡಿದರು. ‘ಈ ಮಹಾನ್ ಆಟಗಾರನಿಂದ ನನಗೆ ದೂರು ಇದೆ. ತಾವು ಹೊಂದಿದ್ದ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ಅವರು ತಮ್ಮ ಅನುಭವವನ್ನು ಬೇರೆಯವರೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ಹಂಚಿಕೊಳ್ಳದೆ ಕ್ರಿಕೆಟ್‍ನಿಂದ ದೂರವಿರುವುದು ಸರಿಯಲ್ಲ. ಸಚಿನ್ ಇದರ ಬಗ್ಗೆ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕೇಳಿಕೊಂಡಿದರು.