Tag: ಇಂಗ್ಲೆಂಟ್

  • T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    ಲಂಡನ್‌: RCB ತಂಡದ ಸ್ಟಾರ್‌ ಆಟಗಾರ ಹಾಗೂ ಇಂಗ್ಲೆಂಡ್‌ (England) ತಂಡದ ಆಲ್‌ರೌಂಡರ್‌ ಆಗಿರುವ ವಿಲ್ ಜ್ಯಾಕ್ಸ್ (Will Jacks) ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 5 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

    2023ರ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ (IPL 2023) ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯಬೇಕಿದ್ದ ವೀಲ್‌ ಜ್ಯಾಕ್ಸ್‌ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದರು. ಬಳಿಕ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಸರ್ರೆ (Surrey) ತಂಡ ಪ್ರತಿನಿಧಿಸಿರುವ ಜ್ಯಾಕ್ಸ್‌ ಎದುರಾಳಿ ಮಿಡ್ಲ್‌ಎಸೆಕ್ಸ್‌ (Middlesex) ತಂಡದ ವಿರುದ್ಧ ಒಂದೇ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಚಚ್ಚಿದರು.

    ಮಿಡ್ಲ್‌ಎಸೆಕ್ಸ್‌ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಲೂಕ್ ಹೋಲ್‌ಮನ್ ಬೌಲಿಂಗ್‌ಗೆ ಜ್ಯಾಕ್ಸ್ ಸತತ 5 ಸಿಕ್ಸರ್ ಸಿಡಿಸಿದರು. 6ನೇ ಎಸೆತವನ್ನ ಹೈ ಫುಲ್‌ ಟಾಸ್ ಹಾಕಿದ್ದರಿಂದ ಆ ಎಸೆತವನ್ನು ಎದುರಿಸುವಲ್ಲಿ ಜ್ಯಾಕ್ಸ್‌ ವಿಫಲರಾಗಿ, 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚುವ ಅವಕಾಶದಿಂದ ವಂಚಿತರಾದರು. ಈ ಪಂದ್ಯದಲ್ಲಿ ಒಟ್ಟು 45 ಎಸೆತಗಳನ್ನ ಎದುರಿಸಿದ ಜ್ಯಾಕ್ಸ್‌ ಸ್ಫೋಟಕ 96 ರನ್‌ ಚಚ್ಚಿದರು. ಈಗಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ವೆಸ್ಟ್‌ ಇಂಡೀಸ್ ತಂಡದ ಮಾಜಿ ನಾಯಕ ಕೀರನ್ ಪೊಲ್ಲಾರ್ಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 2023ರ ಐಪಿಎಲ್‌ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ಆಟಗಾರ ರಿಂಕು ಸಿಂಗ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿ ಮಿಂಚಿದ್ದರು.

    16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟಗಾರರ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 3.2 ಕೋಟಿ ರೂ.ಗೆ ವಿಲ್‌ ಜ್ಯಾಕ್ಸ್‌ನನ್ನ ಖರೀದಿಸಿತ್ತು. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನವೇ ವಿಲ್‌ ಜ್ಯಾಕ್ಸ್‌ ಸ್ನಾಯು ಸೆಳೆತ ಸಮಸ್ಯೆಗೆ ಒಳಗಾಗಿದ್ದರಿಂದ ಐಪಿಎಲ್ ಟೂರ್ನಿಯಿಂದಲೇ ಹೊರಗುಳಿದರು.

    ಚೇಸಿಂಗ್‌ ದಾಖಲೆ ಬರೆದ ಮಿಡ್ಲ್‌ಎಸೆಕ್ಸ್‌:
    ಟಿ20 ಬ್ಲಾಸ್ಟ್‌ ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸರ್ರೆ ತಂಡ 20 ಓವರ್‌ಗಳಲ್ಲಿ 252 ರನ್‌ ಪೇರಿಸಿತ್ತು. ಈ ಗುರಿ ಬೆನ್ನತ್ತಿದ ಮಿಡ್ಲ್‌ಎಸೆಕ್ಸ್‌ ತಂಡ 19.2 ಓವರ್‌ಗಳಲ್ಲೇ 254 ರನ್‌ ಪೇರಿಸಿ ಗೆಲುವು ದಾಖಲಿಸಿತು. ಸಿಕ್ಸರ್‌, ಬೌಂಡರಿಗಳ ಆಟದಲ್ಲಿ 236 ಎಸೆತಗಳಲ್ಲಿ ಬರೋಬ್ಬರಿ 506 ರನ್‌ ಗಳು ದಾಖಲಾಯಿತು. ಅಲ್ಲದೇ ಟಿ20 ಕ್ರಿಕೆಟ್‌ ನಲ್ಲಿ ಚೇಸಿಂಗ್‌ನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ದಾಖಲೆಯನ್ನೂ ಮಿಡ್ಲ್‌ಎಸೆಕ್ಸ್‌ ತಂಡ ಬರೆಯಿತು.

  • ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

    ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

    ಕ್ಯಾನ್ಬೆರಾ: ಸಿಕ್ಸರ್ ವೀರ ಖ್ಯಾತಿಯ ಗ್ಲೇನ್ ಮ್ಯಾಕ್ಸ್‌ವೆಲ್‌ (Glenn Maxwell) ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ (Afghanistan) ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿದೆ.

    5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಆತಿಥೇಯ ತಂಡ 7 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ಇದರೊಂದಿಗೆ ಹಾಲಿ ಚಾಂಪಿಯನ್‌ಗಳು ತಮ್ಮ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆದರೆ 5 ಅಂಕಗಳಿಸಿರುವ ಇಂಗ್ಲೆಂಡ್‌ಗೆ ಇನ್ನೂ ಒಂದು ಪಂದ್ಯದ ಅವಕಾಶವಿದೆ. ಶ್ರೀಲಂಕಾ (SriLanka) ವಿರುದ್ಧ ಇಂಗ್ಲೆಂಡ್ (England) ಸೋತರಷ್ಟೇ ಕಾಂಗರೂಗಳು ಸುಗಮವಾಗಿ ಸೇಮಿಸ್‌ಗೆ ಎಂಟ್ರಿಕೊಡಲಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಇಂಗ್ಲೆಂಡ್ ಸೆಮಿಫೈನಲ್‌ಗೆ ತಲುಪಲಿದ್ದು, ಆಸ್ಟ್ರೇಲಿಯಾ (Australia) ಮನೆಗೆ ತೆರಳಲಿದೆ.

    ಸಿಕ್ಸರ್ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 28 ಬೌಂಡರಿಗಳು ಹಾಗೂ 14 ಸಿಕ್ಸರ್‌ಗಳು ದಾಖಲಾಯಿತು. ಆಸ್ಟ್ರೇಲಿಯಾ (Australia )ತಂಡದ ಪರ 15 ಬೌಂಡರಿ, 6 ಸಿಕ್ಸರ್ ದಾಖಲಾದರೆ ಅಫ್ಘಾನಿಸ್ತಾನದ ಪರ 11 ಬೌಂಡರಿ, 8 ಸಿಕ್ಸರ್‌ಗಳು ದಾಖಲಾಯಿತು.

    ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತದ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಮೊದಲ ವಿಕೆಟ್ ಪತನದ ಹೊರತಾಗಿಯೂ ಅಫ್ಘಾನಿಸ್ತಾನ ಉತ್ತಮ ಶುಭಾರಂಭ ನೀಡಿತ್ತು. ಆರಂಭಿಕ ಉಸ್ಮಾನ್ ಘನಿ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ಮತ್ತೊಬ್ಬ ಆರಂಭಿಕನಾದ ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗುರ್ಬಾದ್ 17 ಎಸೆತಗಳಲ್ಲಿ 30 ರನ್ ಕಲೆಹಾಕಿದರೆ, 33 ಎಸೆತಗಳನ್ನು ಎದುರಿಸಿದ ಘನಿ 26 ರನ್‌ಗಳಿಸಿ ಔಟಾದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದ ಗುಲ್ಬದಿನ್ ನಾಯಬ್ 23 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಗಳಿಸಿ ತಂಡಕ್ಕೆ ನೆರವಾದರು.

    ರಶೀದ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ: ಆಸ್ಟ್ರೇಲಿಯಾ ವಿರುದ್ಧ ಕೊನೆಯವರೆಗೂ ಹೋರಾಡಿದ ರಶೀದ್ ಖಾನ್ (Rashid Khan) ಅಫ್ಘಾನಿಸ್ತಾನದ ಪರವಾಗಿ 23 ಎಸೆತಗಳಲ್ಲಿ ಸ್ಫೋಟಕ 48 ರನ್ ಸಿಡಿಸಿ ಮಿಂಚಿದರು. 3 ಬೌಂಡರಿ 4 ಸಿಕ್ಸರ್ ಸಿಡಿಸುವ ಮೂಲಕ 48 ರನ್ ಗಳಿಸಿದ್ದರು. ಕೊನೆಯ ಓವರ್‌ಗೆ 20 ರನ್ ಬೇಕಿದ್ದಾಗ ರಶೀದ್ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. 2ನೇ ಎಸೆತ ಎದುರಿಸುವಲ್ಲಿ ವಿಫಲರಾದರು. 3ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ, ನಾಲ್ಕನೇ ಎಸೆತದಲ್ಲಿ 2 ರನ್ ಕದ್ದರು. ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟಿದರು. ರಶೀದ್‌ಖಾನ್ ಹೋರಾಟದ ಹೊರತಾಗಿಯೂ ಆಫ್ಘನ್ ತಂಡ ಸೋಲನ್ನು ಅನುಭವಿಸಿತು.

    ನಾಯಕ ಮೊಹಮ್ಮದ್ ನಬಿ ಕೇವಲ 1 ರನ್ ಹಾಗೂ ದರ್ವಿಶ್ ರಸೂಲಿ 15 ರನ್‌ಗಳಿಸಿ ಔಟಾದರು.

    ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್ ಹಾಗೂ ಆಡಮ್ ಝಂಪಾ ತಲಾ 2 ವಿಕೆಟ್ ಪಡೆದರು, ಕೇನ್ ರಿಚರ್ಡ್ಸನ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು. ಸ್ಫೋಟಕ ಬ್ಯಾಟ್ಸ್ಮನ್ ಕೆಮರೋನ್ ಗ್ರೀನ್ 3 ರನ್‌ಗಳಿಸಿದರೆ, ಡೇವಿಡ್ ವಾರ್ನರ್ 18 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಬಂದ ಮಿಚ್ಚೆಲ್ ಮಾರ್ಶ್ 30 ಎಸೆತಗಳಲ್ಲಿ 40 ರನ್ (3 ಬೌಂಡರಿ, 2 ಸಿಕ್ಸರ್) ಸಿಡಿಸಿ ನಿರ್ಗಮಿಸಿದರು.

    ಆಸ್ಟ್ರೇಲಿಯಾ 10 ಓವರ್ ಕಳೆಯುವುದರೊಳಗೆ 4 ವಿಕೆಟ್ ಕಳೆದುಕೊಡು ಆಘಾತ ಎದುರಿಸಿತ್ತು. ಈ ವೇಳೆ ಸಿಕ್ಸರ್ ವೀರ ಗ್ಲೇನ್ ಗ್ಲೇನ್ ಮ್ಯಾಕ್ಸ್‌ವೆಲ್‌ ಅಮೋಘ ಅರ್ಧ ಶತಕ ಸಿಡಿಸಿದ್ರು. ಇದಕ್ಕೆ ಮಾರ್ಕಸ್ ಸ್ಟೋನಿಸ್ ಸಹ ಸಾಥ್ ನೀಡಿದರು. ಸ್ಟೋನಿಸ್ 21 ಎಸೆತಗಳಲ್ಲಿ 25 ರನ್ ಸಿಡಿಸಿದ್ರೆ, ಮ್ಯಾಕ್ಸ್ವೆಲ್ 32 ಎಸೆತಗಳಲ್ಲಿ 54 ರನ್ (6 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಇವರಿಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿತು.

    ನಾಯಕ ಮ್ಯಾಥಿವ್ ವೇಡ್ 6 ರನ್, ಕೇನ್ ರಿಚ್ಚರ್ಡ್ಸನ್ ಹಾಗೂ ಆಡಮ್ ಝಂಪಾ ತಲಾ 1 ರನ್‌ಗಳಿಸಿದರು.

    ಅಫ್ಘಾನಿಸ್ತಾನ ಪರ ನವೀನ್-ಉಲ್-ಹಕ್ 3 ವಿಕೆಟ್ ಪಡೆದರೆ, ಫಜಲ್ಹಕ್ ಫಾರೂಕಿ 2 ವಿಕೆಟ್, ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಸೆಮಿಫೈನಲ್‍ನಲ್ಲಿ ಮಿಥಾಲಿ ರಾಜ್ ಕೈಬಿಟ್ಟದಕ್ಕೆ ವಿಷಾದವಿಲ್ಲ: ಹರ್ಮನ್ ಪ್ರೀತ್ ಕೌರ್

    ಸೆಮಿಫೈನಲ್‍ನಲ್ಲಿ ಮಿಥಾಲಿ ರಾಜ್ ಕೈಬಿಟ್ಟದಕ್ಕೆ ವಿಷಾದವಿಲ್ಲ: ಹರ್ಮನ್ ಪ್ರೀತ್ ಕೌರ್

    ಆಂಟಿಗುವಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19.3 ಓವರ್ ಗಳಲ್ಲಿ 112 ರನ್ ಗಳಿಸಿತ್ತು. ಆದರೆ ಭಾರತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 17.2 ಓವರ್ ಗಳಲ್ಲೇ ಗುರಿ ತಲುಪಿ 8 ವಿಕೆಟ್ ಗಳ ಜಯ ಪಡೆಯಿತು. ಪಂದ್ಯದಲ್ಲಿ ಭಾರತದ ಸೃತಿ ಮಂದಣ್ಣ 33 ರನ್, ಜೆಮಿಯಾ 26 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗಳಿಸಿದ್ದರು.

    ಟೂರ್ನಿಯ ಪ್ರಮುಖ ಪಂದ್ಯದಲ್ಲಿ ತಂಡ ಅನುಭವಿ ಆಟಗಾರ್ತಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಮಿಥಾಲಿರಾಜ್‍ರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿದಕ್ಕೆ ಯಾವುದೇ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.

    ತಂಡದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕೆಲವು ಬಾರಿ ಅದರಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಬಾರಿ ಸೋಲುತ್ತೇವೆ. ಈ ಪಂದ್ಯ ನಮ್ಮ ಯುವ ಪಡೆಗೆ ಒಂದು ಪಾಠವಾಗಿದ್ದು, ಟೂರ್ನಿಯಲ್ಲಿ ತಂಡ ತೋರಿದ ಪ್ರದರ್ಶನಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದರು.

    ಮಿಥಾಲಿ ರಾಜ್ ಭಾರತದ ಪರ ಟಿ20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಪುರುಷ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿ ವಿಶೇಷ ಸಾಧನೆ ನಿರ್ಮಿಸಿದ್ದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ 85 ಪಂದ್ಯಗಳ 80 ಇನ್ನಿಂಗ್ಸ್ ಗಳಿಂದ 2,283 ರನ್ ಗಳಿಸಿದ್ದಾರೆ.

    ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿದೆ. ಆಸೀಸ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv