Tag: ಇಂಗ್ಲೀಷ್ ಮಾಧ್ಯಮ ಶಿಕ್ಷಣ

  • ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರಿನಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬಿದ್ದಿದ್ದಾರೆ.

    ಸಿದ್ದರಾಮಯ್ಯರ ತವರೂರಾದ ಸಿದ್ದರಾಮನಹುಂಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ. ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಗಿದೆ. ಮೊದಲನೇ ವರ್ಷವೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಆಸಕ್ತಿ ಪೋಷಕರಿಂದ ವ್ಯಕ್ತವಾಗಿದೆ.

    ಸಿದ್ದರಾಮನಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾದ ಎಲ್‍ಕೆಜಿಯ ಇಂಗ್ಲೀಷ್ ಮಾಧ್ಯಮ ತರಗತಿಗೆ 30 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಎಲ್‍ಕೆಜಿ ಕನ್ನಡ ಮಾಧ್ಯಮಕ್ಕೆ ಒಂದೇ ಒಂದು ದಾಖಲಾತಿಯೂ ಆಗಿಲ್ಲ. ಹೀಗಾಗಿ ಒಂದನೇ ತರಗತಿಯ ಕನ್ನಡ ತರಗತಿಗಳು ಖಾಲಿ ಖಾಲಿಯಾಗಿವೆ.

    ಮೈಸೂರು ಜಿಲ್ಲೆಯ 29 ಶಾಲೆಗಳಲ್ಲೂ ಇದೆ ಸ್ಥಿತಿ ಇದೆ. ಜಿಲ್ಲೆಯ 46 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದೆ. ಇದರಲ್ಲಿ 29 ಕನ್ನಡ ಮಾಧ್ಯಮ ಶಾಲೆಗಳಿಗೆ ಪೋµಕರು ಮಕ್ಕಳನ್ನು ಕಳಿಸಿಲ್ಲ.

    30 ಸಾವಿರ ರೂ. ನೀಡಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮವಿರುವ ಖಾಸಗಿ ಶಾಲೆಗಳಿಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸರ್ಕಾರವೇ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದು ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

    ಇಂಗ್ಲೀಷ್ ಭಾಷೆಯ ಜ್ಞಾನ, ಸಂವಹನ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳನ್ನು ಖಾಸಗಿ ಸೇರಿಸಲು ಹೋದರೆ ನಮಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಏಕೆಂದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿಣಮಿಸಿದೆ ಎಂದು ಪೋಷಕರು ಹೇಳಿದ್ದಾರೆ.

    ಮಾಜಿ ಸಿಎಂ ಹೇಳಿದ್ದೇನು?:
    ಸಿದ್ದರಾಮಯ್ಯನವರ ವಿರೋಧದ ನಡುವೆಯೂ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಿ ಸವಾಲು ಹಾಕಿದರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸುವುದಕ್ಕೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು. ಈ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೆ ತಂದರೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಹಾಗೂ ತಡೆಹಿಡಿಯುತ್ತೇನೆ ಎಂದು ಹೇಳಿದ್ದರು.

    ಎಂ.ಮಹೇಶ್ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದಾಗ ಅವರಿಗೆ ಕರೆ ಮಾಡಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿದ್ದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡ ಅಂತ ಸೂಚಿಸಿದ್ದೆ ಎಂದು ತಿಳಿಸಿದ್ದರು.