Tag: ಇಂಗ್ಲಿಷ್ ಮಾಧ್ಯಮ

  • ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಹೈದರಾಬಾದ್: 2022-23ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಪರಿಚಯಿಸಲು ಹಾಗೂ ಖಾಸಗಿ ಶಾಲೆಗಳು, ಜೂನಿಯರ್ ಮತ್ತು ಪದವಿ ಕಾಲೇಜುಗಳ ಶುಲ್ಕ ನಿಯಂತ್ರಿಸಲು ತೆಲಂಗಾಣ ಸರ್ಕಾರ ಸಂಪುಟ ನಿರ್ಧರಿಸಿದೆ.

    ಸೋಮವಾರ ಕರೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶಿಕ್ಷಣ ಸಚಿವೆ ಸುಬಿತಾ ಇಂದ್ರ ರೆಡ್ಡಿ ನೇತೃತ್ವದಲ್ಲಿ ಸಚಿವರ ಉಪಸಮಿತಿಯನ್ನು ಸಂಪುಟ ರಚಿಸಿದ್ದು, ಈ ವಿಷಯಗಳ ಕುರಿತು ಅಧ್ಯಯನ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

    ಸಭೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಲು 7,289 ಕೋಟಿ ವೆಚ್ಚದ `ಮನ ವೂರು ಮನ ಬಡಿ’ (ನಮ್ಮ ಊರು-ನಮ್ಮ ಶಾಲೆ) ಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

    ಬೋಧನಾ ಮಾಧ್ಯಮ ಇಂಗ್ಲಿಷ್‌ನಲ್ಲಿದ್ದರೆ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಸಿದ್ಧರಿದ್ದಾರೆ ಎಂದು ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಯುಪಿಯಲ್ಲಿ ಬಿಜೆಪಿ ಗೆದ್ರೆ, ಯೋಗಿ ಮತ್ತೊಮ್ಮೆ ಸಿಎಂ ಆದ್ರೆ ಸೃಷ್ಟಿಯಾಗಲಿದೆ ಹೊಸ ನಾಲ್ಕು ದಾಖಲೆಗಳು!

    ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ತರಬೇತಿ ನೀಡಲು, ಶಾಲೆಗಳ ಪರಿಸರವನ್ನು ಮಕ್ಕಳಿಗೆ ಆಕರ್ಷಕವಾಗಿಸಲು, ಆವರಣವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಲು, ಮಧ್ಯಾಹ್ನದ ಊಟವನ್ನು ಸುಧಾರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ.

  • ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

    ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

    1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

  • ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಕಾರವಾರ: ತಮ್ಮ ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಬೇಕು. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಬೇಕು ಎನ್ನುವ ಆಸೆ ಬಹುತೇಕ ಪೋಷಕರಲ್ಲಿಯೂ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದನ್ನು ಅರಿತ ಸರ್ಕಾರವು ಬಡವರು ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ 26 ಕಡೆಗಳಲ್ಲಿ ಈ ವರ್ಷ ಮೊದಲ ಬಾರಿಗೆ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿಯೂ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾಗಿದೆ. ಜಿಲ್ಲೆಯ ಶಿರಸಿಯ ಶಾಸಕರ ಮಾದರಿ ಶಾಲೆಯಲ್ಲಿ ಎರಡು ವಾರದ ಹಿಂದೆ ಬಡ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ನೀಡಲಾಗಿತ್ತು. ಸರ್ಕಾರದ ಮಾರ್ಗದರ್ಶನದಂತೆ 30 ಜನರನ್ನು ಮಾತ್ರ ಅಗತ್ಯ ದಾಖಲೆಯೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಂತೆಯೇ ಹಲವು ಪೊಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿದ್ದಾರೆ. ಶಾಲೆ ಉತ್ತಮವಾಗಿದ್ದರಿಂದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು ಸಹ ಇಲ್ಲಿ ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ 30 ಮಕ್ಕಳ ಸಂಖ್ಯೆ ಏಕಾಏಕಿ 69ಕ್ಕೆ ಏರಿಕೆಯಾಗಿದೆ.

    ಸರ್ಕಾರದ ಮಾರ್ಗದರ್ಶಿಯಂತೆ 30 ಜನರಿಗೆ ಮಾತ್ರ ಅವಕಾಶವಿದ್ದು 39 ಮಕ್ಕಳು ಹೆಚ್ಚುವರಿಯಾಗಿ ಸೇರಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿ (ಎಸ್‍ಡಿಎಂಸಿ) ಹಾಗೂ ಮುಖ್ಯ ಶಿಕ್ಷಕರು ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಉಳಿದ ಮಕ್ಕಳನ್ನು ಎರಡು ವಾರಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಶಾಲೆಯಿಂದ ಹೊರಹಾಕಿದ್ದಾರೆ. ಇದನ್ನು ಪ್ರಶ್ನಿಸಿ ಪೂಷಕರು ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬಳಿ ಹೋದರೂ ಯಾವುದೇ ಪರಿಹಾರ ನೀಡದೇ ಕನ್ನಡ ಮಾಧ್ಯಮಕ್ಕೆ ಸೇರಿಸಿ ಎಂದು ನುಣಿಚಿಕೊಂಡಿದ್ದಾರೆ.

    ಶಾಸಕರು, ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಕೆ:
    ನಿಯಮದಂತೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಈಗ ಮಕ್ಕಳನ್ನು ಹೊರಹಾಕಲಾಗಿದೆ. ತಮಗೆ ಬೇಕಾದ ಮಕ್ಕಳಿಗೆ ಅವಕಾಶ ಕೊಡಲಾಗಿದೆ. ಸಂಖ್ಯೆ ಹೆಚ್ಚು ಆಗಿದ್ದಾಗ ಕೊನೆ ಪಕ್ಷ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬಹುದಿತ್ತು. ಆದರೆ ಅದನ್ನೂ ಕೂಡ ಮಾಡಲಿಲ್ಲ ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದ್ದಾರೆ.

    ಈವರೆಗೂ ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಮಕ್ಕಳು ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆಂಬ ಆಸೆ ಇತ್ತು. ಹೀಗಾಗಿ ಈ ಶಾಲೆಗೆ ಸೇರಿಸಿದ್ದೇವು ಎಂದು ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

  • ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗಲ್ಲ: ಸಿದ್ದರಾಮಯ್ಯ

    ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗಲ್ಲ: ಸಿದ್ದರಾಮಯ್ಯ

    – ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ವಿರೋಧ
    – ಮೈತ್ರಿ ಸರ್ಕಾರದ ವಿರುದ್ಧವೇ ಮಾಜಿ ಸಿಎಂ ಗುಡುಗು
    – ಪೊಲೀಸರ ಬಗ್ಗೆ ಜೋಕ್ ಮಾಡಿದ ಸಿದ್ದರಾಮಯ್ಯ

    ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ. ನಾನು ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ನೃಪತುಂಗ ಕಲಾ-ವಾಣಿಜ್ಯ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಿಕೊಂಡಿದ್ದೇವೆ. ಅದರಲ್ಲಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಯ ವಿಚಾರವಿಲ್ಲ. ಆದ್ದರಿಂದ ಸಿಎಂ ಕುಮಾರಸ್ವಾಮಿ ಅವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ಮೈತ್ರಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆರ್ಥಿಕವಾಗಿ ಹಿಂದುಳಿದವರೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿಯಲಿ ಎಂದು ಆಸೆ ಪಡುತ್ತಾರೆ. ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಯಲು ಯಾರ ವಿರೋಧವೂ ಇಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಕೆಲವರಿಗೆ ಗೊಂದಲವಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದೇ ಹೊರತು, ಅದು ಎಂದಿಗೂ ಹೃದಯದ ಭಾಷೆ ಆಗಲಾರದು ಎಂದು ಕಳವಳ ವ್ಯಕ್ತಪಡಿಸಿದರು.

    ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದ್ದರಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೇ ಹೋದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಿಕ್ಕರೆ ಜಾತಿ ವ್ಯವಸ್ಥೆ ಕ್ರಮೇಣವಾಗಿ ಕಡಿಮೆಯಾಗುಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.

    ನನ್ನನ್ನು ಲಿಂಗಾಯತ ವಿರೋಧಿ ಎನ್ನುತ್ತಾರೆ. ಬಸವಣ್ಣ ಹೇಳಿರುವುದನ್ನು ನಾನು ಹೇಳಿದ್ದೇನೆ. ವಿರಕ್ತ ಪರಂಪರೆಯವರು ಬಂದು ಲಿಂಗಾಯತ ಧರ್ಮ ಮಾಡಿ ಎಂದು ಕೇಳಿಕೊಂಡಿದ್ದರು. ಗುರು ಪರಂಪರೆಯವರು ವೀರಶೈವ ಲಿಂಗಾಯತ ಎಂದು ಮಾಡಿ ಎಂದಿದ್ದರು. ಈ ಕುರಿತು ಕ್ಯಾಬಿನೆಟ್‍ನಲ್ಲಿ ಚರ್ಚಿಸಿ, ತಿದ್ದುಪಡಿ ಮಾಡಿ ಕಳುಹಿಸಿದ್ದೇವೆ. ಆದರೆ ನನಗೆ ಯಾಕೆ ಲಿಂಗಾಯತ ವಿರೋಧಿ ಅಂತ ಪಟ್ಟ ಕಟ್ಟಿದ್ದಾರೆ ಎಂದು ಪ್ರಶ್ನಿಸಿದರು.

    ಪೊಲೀಸರು ಹೊರಗಡೆ ಒಂದು ರೀತಿಯಲ್ಲಿ ಮಾತನಾಡುತ್ತಾರೆ. ಠಾಣೆಗೆ ಹೋದರೆ ಒಂದು ರೀತಿಯಲ್ಲಿ ಮಾತನಾಡುತ್ತಾರೆ. ಅವರನ್ನು ನಂಬುವುದಕ್ಕೆ ಆಗುವುದಿಲ್ಲ. ಒಳ್ಳೆಯ ಭಾಷೆ ಮಾತನಾಡುವ ಪೊಲೀಸರ ಸಂಖ್ಯೆ ಕಡಿಮೆ. ಒಳ್ಳೆಯ ಭಾಷೆಯಲ್ಲಿ ಮಾತನಾಡಿದರೆ ಕೆಲಸ ಆಗಲ್ಲ ಅಂತ ಕೆಟ್ಟ ಭಾಷೆಯಲ್ಲಿ ಮಾತನಾಡಬೇಕು ಎಂದು ಟ್ರೈನಪ್ ಆಗಿಬಿಟ್ಟಿದ್ದಾರೋ ಏನೋ? ಹಿಂದೆ ಪೊಲೀಸರು ಹೊಡೆಯುತ್ತಿದ್ದರು. ಈಗ ಅದು ಕಡಿಮೆಯಾಗಿದೆ, ಪೊಲೀಸರು ಬದಲಾಗಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಹಾಸ್ಯ ಚಟಾಕಿ ಹಾರಿಸಿದರು.

  • ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    – ಸಿದ್ದರಾಮಯ್ಯ ಮೊಮ್ಮಕ್ಕಳು ಓದುತ್ತಿರೋದು ಇಂಗ್ಲಿಷ್ ಶಾಲೆಗಳಲ್ಲೇ

    ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಬೇಡ. ಕನ್ನಡವೇ ಮಾಧ್ಯಮ ಆಗಿರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾದ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭಾಮ, ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ `ಕನ್ನಡ ಮೇಷ್ಟ್ರು’ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮದ ಅಸಲಿಯತ್ತು ಇಲ್ಲಿದೆ.

    ಹೌದು. ಸಿದ್ದರಾಮಯ್ಯನವರ ಮೊಮ್ಮಕ್ಕಳು ಇಂಗ್ಲೀಷ್ ಶಾಲೆಗಳಲ್ಲೇ ಓದುತ್ತಿದ್ದಾರೆ. ಹಿರಿಯ ಮಗ ರಾಕೇಶ್ ಪುತ್ರ ಧವನ್ ಪುತ್ರ ಕೆನೆಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಈ ಶಾಲೆಯಲ್ಲಿ ವರ್ಷಕ್ಕೆ ಡೊನೇಶನ್ 5ರಿಂದ 6 ಲಕ್ಷ ರೂಪಾಯಿ ಇರುತ್ತದೆ. ಇನ್ನು ಸಿದ್ದರಾಮಯ್ಯರ ಎರಡನೇ ಮೊಮ್ಮಗಳು ತನ್ಮಯಾ ಕೂಡ ಇಂಗ್ಲೀಷ್ ಮೀಡಿಯಾಂನಲ್ಲೇ ಓದುತ್ತಿದ್ದು, ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ತನ್ಮಯಾ ವಿದ್ಯಾರ್ಥಿಯಾಗಿದ್ದಾರೆ.

    ಒಟ್ಟಿನಲ್ಲಿ ಸಿದ್ದರಾಮಯ್ಯನವರ ಮೊಮ್ಮಕ್ಕಳೆಲ್ಲಾ ಇಂಗ್ಲೀಷ್ ಮೀಡಿಯಂನಲ್ಲಿ ಓದಬಹುದು. ಬಡವರ ಮಕ್ಕಳಿಗೆ ಇಂಗ್ಲೀಷ್ ಮೀಡಿಯಂ ಬೇಡ್ವಾ..? ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಾಂನಲ್ಲಿ ಬಡವರ ಮಕ್ಕಳು ಓದಬಾರದಾ..? ನಿಮ್ಮ ಮೊಮ್ಮಕಳಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ ಎಂಬಂತಹ ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಮುಂದಿನ ವರ್ಷದಿಂದ 1 ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯಬೇಕು ಅನ್ನೋ ನಿಲುವಿಗೆ ಸಿದ್ದರಾಮಯ್ಯನವರು ಕಳೆದ ಒಂದು ವಾರದಿಂದ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿ, ಕರ್ನಾಟಕದಲ್ಲಿ ಕನ್ನಡವೇ ಅಂತಿಮ ಭಾಷೆಯಾಗಬೇಕು. ಭಾಷೆಯ ವಿಚಾರದಲ್ಲಿ ಸರ್ಕಾರಕ್ಕೆ ಆದ್ಯತೆ ಬೇಕು. ಹೀಗಾಗಿ ಈ ಶಾಲೆಗಳನ್ನು ತೆರೆಯದಂತೆ ನಾನು ಕುಮಾರಸ್ವಾಮಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು. ಸದನದಲ್ಲಿಯೂ ಕನ್ನಡ ವಿಚಾರವಾಗಿ ಎಲ್ಲರ ಕಾಲೆಳೆಯುವ ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಯಾಕೆ ಕಳುಹಿಸುತ್ತಾರೆ ಎಂಬ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv