Tag: ಆ ಕರಾಳ ರಾತ್ರಿ

  • ಕ್ಷಣ ಕ್ಷಣಕ್ಕೂ ಕಾಡುವ ಕರಾಳ ರಾತ್ರಿ!

    ಕ್ಷಣ ಕ್ಷಣಕ್ಕೂ ಕಾಡುವ ಕರಾಳ ರಾತ್ರಿ!

    ರೇಟಿಂಗ್: 4/5
    ದಯಾಳ್ ಪದ್ಮನಾಭನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಚತುರ ಸಿನಿಮಾ ತಂತ್ರಜ್ಞ. ಔಟ್ ಅಂಡ್ ಔಟ್ ಕಮರ್ಷಿಯಲ್ ಫಾರ್ಮುಲಾಗಳನ್ನು ಒಳಗೊಂಡ ಸಿನಿಮಾಗಳ ಬರಹಗಾರರಾಗಿ, ಸಂಭಾಷಣೆಕಾರರಾಗಿ ಚಿತ್ರರಂಗಕ್ಕೆ ಬಂದು ನಂತರ ನಿರ್ದೇಶನದಲ್ಲೂ ಹೆಸರು ಮಾಡಿದವರು. ವ್ಯಾಪಾರಿ ದೃಷ್ಟಿಯ ಸಿನಿಮಾಗಳನ್ನು ಮಾಡುತ್ತಿದ್ದ ದಯಾಳ್ ಇದ್ದಕ್ಕಿದ್ದಂತೆ ಹಗ್ಗದ ಕೊನೆ ಸಿನಿಮಾ ಮಾಡಿ, ಸೂಕ್ಷ್ಮ ಕಥಾಹಂದರವನ್ನು ಮುಟ್ಟಿ ಗೆದ್ದಾಗಲೇ ದಯಾಳ್ ಕ್ರಿಯಾಶೀಲ ಸಿನಿಮಾಗಳನ್ನು ಮಾಡಬಲ್ಲರು ಅನ್ನೋದು ಸಾಬೀತಾಗಿತ್ತು. ಈಗ ದಯಾಳ್ ಅವರ `ಆ ಕರಾಳ ರಾತ್ರಿ’ ಸಿನಿಮಾ ತೆರೆಗೆ ಬಂದಿದೆ. ಈ ಬಾರಿ ದಯಾಳ್ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ. ಕಲಾತ್ಮಕ ಚೌಕಟ್ಟಿನ ಕಥೆಯೊಂದನ್ನು ಕಮರ್ಷಿಯಲ್ ಸಿನಿಮಾವನ್ನಾಗಿಸುವ ಕೆಲಸ ನೆರೆಯ ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ನಡೆಯುತ್ತಿದೆ. ಆದರೆ ನಾವು ಕನ್ನಡದವರೂ ಏನು ಕಮ್ಮಿಯಿಲ್ಲ. ಕೇವಲ ಅವಾರ್ಡ್ ದೃಷ್ಟಿಯಲ್ಲಿಟ್ಟುಕೊಂಡು ಸದಭಿರುಚಿಯ ಸಿನಿಮಾಗಳನ್ನು ಮಾಡಿದರೆ ಏನು ಪ್ರಯೋಜನ? ಅದು ಜನ ನೋಡುವ ಸಿನಿಮಾಗಳಾಗಿಯೂ ಮಾರ್ಪಡಬೇಕು ಎನ್ನುವ ಕೊರಗನ್ನು ದಯಾಳ್ ನೀಗಿಸಿದ್ದಾರೆ.

     

    ಒಂದು ಗ್ರಾಮ, ಆ ಗ್ರಾಮದಿಂದ ಮೂರು ಕಿಲೋಮೀಟರು ದೂರದಲ್ಲೊಂದು ಮನೆ, ಆ ಮನೆಯಲ್ಲಿ ಗಂಡ, ಹೆಂಡತಿ ಮತ್ತು ಅವರ ಮುದ್ದಾದ ಮಗಳ ವಾಸ. ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಎಂಟ್ರಿ ಕೊಡುತ್ತಾನೆ. ಆತ ಉಳಿದುಕೊಳ್ಳಲು ಈ ಮನೆಯಲ್ಲಿ ಜಾಗ ಸಿಗುತ್ತದೆ. ಹಾಗೆ ಸ್ಥಳಾವಕಾಶ ಪಡೆದವನ ಬಳಿ ಹೇರಳವಾದ ಸಂಪತ್ತೂ ಇರುತ್ತದೆ. ಒಬ್ಬಂಟಿಗನಲ್ಲಿರುವ ಐಶ್ವರ್ಯವನ್ನು ಕಂಡು ಕುಟುಂಬದ ಮೂವರು ಸದಸ್ಯರ ಕಣ್ಣು ಆಸೆಯಲ್ಲಿ ತೇಲಿಹೋದರೆ, ಮನಸ್ಸು ದುಷ್ಟತನದ ಹೊಂದಲ್ಲಿ ಮುಳುಗುತ್ತದೆ. ಆನಂತರ ಏನೇನು ನಡೆಯುತ್ತದೆ ಅನ್ನೋದು `ಆ ಕರಾಳ ರಾತ್ರಿ’ಯ ಅಂತಿಮ ಸೀಕ್ರೇಟು.

    ನಾಯಕ ನಟಿ ಅನುಪಮಾ ಗೌಡ ತೀರಾ ಸೊಗಸಾಗಿ ನಟಿಸಿದ್ದಾರೆ. ರಂಗಾಯಣ ರಘು, ವೀಣಾ ಸುಂದರ್ ಮತ್ತು ನವೀನ್ ಕೃಷ್ಣ ಪಾತ್ರಗಳಲ್ಲಿ ಮುಳುಗಿಹೋಗಿದ್ದಾರೆ. ಬರೀ ಹದಿಮೂರು ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ತೆರೆದಿಟ್ಟಿದ್ದಾರೆ ದಯಾಳ್. ಹೀಗೆ ಬಂದು ಹಾಗೆ ಹೋದರೂ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವರಸನ್ ಗಮನ ಸೆಳೆಯುತ್ತಾರೆ. ಪಿಕೆಎಚ್ ದಾಸ್ ಅವರ ಕ್ಯಾಮೆರಾ ಕೆಲಸ ನೋಡುಗರನ್ನು ಸೆಳೆಯುತ್ತದೆ. ಹಿನ್ನೆಲೆ ಸಂಗೀತ ಸಿನಿಮಾಗೆ ಪೂರಕವಾಗಿದೆ. ಒಟ್ಟಾರೆ ಈ ವರ್ಷದ ಕೆಲವೇ ಅತ್ಯುತ್ತಮ ಸಿನಿಮಾಗಳಲ್ಲಿ ಆ ಕರಾಳ ರಾತ್ರಿಯೂ ಸೇರಿಹೋಗಿದೆ.

  • ದಯಾಳ್ ಸೃಷ್ಟಿಸಿದ ‘ಆ ಕರಾಳ ರಾತ್ರಿ’ಯಲ್ಲಿ ದೆವ್ವಗಳಿರುತ್ತಾ…?

    ದಯಾಳ್ ಸೃಷ್ಟಿಸಿದ ‘ಆ ಕರಾಳ ರಾತ್ರಿ’ಯಲ್ಲಿ ದೆವ್ವಗಳಿರುತ್ತಾ…?

    ಬೆಂಗಳೂರು: ಆ ಕರಾಳ ರಾತ್ರಿ… ಎಂಬ ಹೆಸರು ಕೇಳಿದಾಕ್ಷಣವೇ ಮನಸಲ್ಲಿ ಹಾರರ್ ಕಲ್ಪನೆಗಳು ಹಾದು ಹೋಗೋದು ಸಹಜ. ಈಗಲೂ ಒಂದಷ್ಟು ಮಂದಿ ಪ್ರೇಕ್ಷಕರು ಇದನ್ನೊಂದು ಹಾರರ್ ಚಿತ್ರ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಈ ಬಗ್ಗೆ ದಯಾಳ್ ಪದ್ಮನಾಭನ್ ಅವರೇ ಕೆಲ ವಿಚಾರಗಳನ್ನು ತೆರೆದಿಟ್ಟಿದ್ದಾರೆ!

    ಜೆಕೆ ಮತ್ತು ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಮೇಲು ನೋಟಕ್ಕೆ ಹಾರರ್ ಸಿನಿಮಾ ಎಂಬ ಫೀಲ್ ಹುಟ್ಟಿಸಿದರೂ ಇದರಲ್ಲಿ ದೆವ್ವದ ಸುಳಿವಿರೋದಿಲ್ಲವಂತೆ. ಎಂಭತ್ತರ ದಶಕದಲ್ಲಿ ನಡೆಯೋ ಕಥಾನಕವನ್ನು ಹೊಂದಿರುವ ಕರಾಳ ರಾತ್ರಿ ಮೈ ನವಿರೇಳಿಸುವಂಥಾ ಕ್ರೈಂ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆಯಂತೆ. ಇದನ್ನೂ ಓದಿ: ‘ಆ ಕರಾಳ ರಾತ್ರಿ’ಯಲ್ಲಿ ಒಂದಾದ ಜೆಕೆ-ಅನುಪಮಾ ಗೌಡ!

    ಈ ಚಿತ್ರ ಸಾಹಿತಿ ಮೋಹನ್ ಹಬ್ಬು ರಚಿಸಿರುವ ಕರಾಳ ರಾತ್ರಿ ಎಂಬ ನಾಟಕವನ್ನಾಧರಿಸಿದ ಚಿತ್ರ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಈ ಹಿಂದೆ ಅರಿವು ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಣ ಮಾಡಿದ್ದ ಅವಿನಾಶ್ ಶೆಟ್ಟಿಯವರೇ ನಿರ್ಮಿಸಿದ್ದಾರೆ. ಇನ್ನುಳಿದಂತೆ ಹಗ್ಗದ ಕೊನೆ ಚಿತ್ರದಲ್ಲಿ ನಟಿಸಿದ್ದ ನವೀನ್ ಕೃಷ್ಣ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ದಯಾಳ್ ಅವರಿಗೆ ಜೊತೆಯಾಗಿದ್ದಾರೆ. ಜೊತೆಗೆ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ.

    ಎಂಭತ್ತರ ದಶಕದಲ್ಲಿ ನಡೆಯೋ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಜೆಕೆ, ಅನುಪಮಾ ಗೌಡ ಸೇರಿದಂತೆ ಎಲ್ಲರೂ ರೆಟ್ರೋ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿರೋದು ಪ್ರಮುಖ ಆಕರ್ಷಣೆ. ರಂಗಾಯಣ ರಘು ಮತ್ತು ವೀಣಾ ಸುಂದರ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಕ್ಷಣಗಣನೆ ಆರಂಭವಾಗಿದೆ.