Tag: ಆ್ಯಸಿಡ್ ದಾಳಿ

  • ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಬೆಂಗಳೂರಿನಲ್ಲಿ ಯುವತಿ ಮೇಲೆ ಪಾಗಲ್ ಪ್ರೇಮಿಯಿಂದ ಆ್ಯಸಿಡ್ ಅಟ್ಯಾಕ್!

    ಬೆಂಗಳೂರು: ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಬಳಿ ನಡೆದಿದೆ.

    23 ವರ್ಷದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಆ್ಯಸಿಡ್ ದಾಳಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ತನ್ನನ್ನು ಪ್ರೀತಿಸುವಂತೆ ನಾಗೇಶ್ ಯುವತಿಯ ಬಿನ್ನು ಬಿದ್ದಿದ್ದ. ಆದರೆ ಈತನ ಪ್ರೀತಿಗೆ ಯುವತಿ ಸೊಪ್ಪು ಹಾಕಲಿಲ್ಲ. ಇದರಿಂದ ಸಿಟ್ಟಿಗೆದ್ದ ನಾಗೇಶ್, ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ.

    ಇಂದು ಬೆಳಗ್ಗೆ ಎಂಟೂವರೆ ಸುಮಾರಿಗೆ ಕೆಲಸಕ್ಕೆಂದು ಯುವತಿಯನ್ನು ಆಕೆಯ ತಂದೆ ಬೈಕ್‍ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ನಾಗೇಶ್ ಸೇಡು ತೀರಿಸಿಕೊಂಡಿದ್ದಾನೆ. ಘಟನೆಯಿಂದ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಘಟನೆ ಬಳಿಕ ನಾಗೇಶ್ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

    ಪ್ರೇಮಾಂಕುರವಾಗಿದ್ದು ಹೇಗೆ..?
    ಯುವತಿ ಮೊದಲು ನಾಗೇಶ್ ಗಾರ್ಮೆಂಟ್ಸ್ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದಳು. ಆ ಸಂದರ್ಭದಲ್ಲಿ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಅಂತೆಯೇ ಕಳೆದ 7 ವರ್ಷದಿಂದ ಇಬ್ಬರೂ ಪ್ರೀತಿಸುತ್ತಾ ಇದ್ದರು. ಇದ್ದಕ್ಕಿದ್ದಂತೆ ಇಬ್ಬರ ನಡುವೆ ಬಿರುಕು ಉಂಟಾಗಿ ಲವ್ ಬ್ರೇಕ್ ಅಪ್ ಆಗಿತ್ತು. ನಿನ್ನೆ ಸಂಜೆ ಯುವತಿಯ ಆಫೀಸ್ ಬಳಿ ಹೋಗಿ ನಾಗೇಶ್‌ ಕ್ಯಾತೆ ತೆಗೆದಿದ್ದ. ನೀನು ನನ್ನನ್ನೇ ಮದುವೆಯಾಗಬೇಕು, ಇಲ್ಲ ಅಂದ್ರೆ ನಿನ್ನ ಜೀವಂತವಾಗಿ ಇರೋದಕ್ಕೆ ಬಿಡೋದಿಲ್ಲ  ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಲಭಿಸಿದೆ.

    ಮುಂದಿನ ತಿಂಗಳು 8 ರಂದು ಯುವತಿ ಅಕ್ಕನ ಮದುವೆ ನಿಶ್ಚಯ ಆಗಿತ್ತು. ಅದೇ ಸಂದರ್ಭದಲ್ಲಿ ಪ್ರಿಯತಮೆಯ ಮದುವೆ ಕೂಡ ಮಾತುಕತೆ ನಡೆದಿತ್ತು. ಒಟ್ಟಿನಲ್ಲಿ ಇದೀಗ ಯುವತಿ ಬೇರೊಬ್ಬರ ಮದುವೆ ಆಗುವ ಭಯಕ್ಕೆ ಇದೀಗ ನಾಗೇಶ್ ಯುವತಿ ಮೇಲೆ ಅಟ್ಯಾಕ್ ಮಾಡಿದ್ದಾನೆ.

  • ಮೂವರು ಸೋದರಿಯರ ಮೇಲೆ ಆ್ಯಸಿಡ್ ಎರಚಿದ್ದವನಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು

    ಮೂವರು ಸೋದರಿಯರ ಮೇಲೆ ಆ್ಯಸಿಡ್ ಎರಚಿದ್ದವನಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು

    – ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ

    ಲಕ್ನೋ: ಮನೆಯಲ್ಲಿ ಮಲಗಿದ್ದ ಮೂವರು ಅಪ್ರಾಪ್ತ ಸೋದರಿಯರ ಎರಚಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗಾಯಾಳು ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಟೋಬರ್ 12ರ ರಾತ್ರಿ ಸೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದರು.

    ಮಂಗಳವಾರ ರಾತ್ರಿ ಆರೋಪಿ ಆಶೀಷ್ ಇರೋ ಸ್ಥಳದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆರೋಪಿ ಆಶೀಷ್ ಬೈಕ್ ಮೂಲಕ ಕರನೈಲಗಂಡ್ ಹುಜುರಪುರ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಮಲಗಿದ್ದ ಮೂವರು ದಲಿತ ಸೋದರಿಯರ ಮೇಲೆ ಆ್ಯಸಿಡ್ ದಾಳಿ– ಉತ್ತರಪ್ರದೇಶದಲ್ಲಿ ಮತ್ತೊಂದು ಭಯಾನಕ ಕೃತ್ಯ

    ಆರೋಪಿಯನ್ನ ಹಿಂಬಾಲಿಸಿದ ಪೊಲೀಸರು ಆತನನ್ನ ತಡೆದು, ಶರಣಾಗುವಂತೆ ಹೇಳಿದ್ದಾರೆ. ಆದ್ರೆ ಆಶೀಷ್ ಪೊಲೀಸರಿಗೆ ಶರಣಾಗದೇ ಗುಂಡು ಹಾರಿಸಿದ್ದಾರೆ. ಇತ್ತ ಪೊಲೀಸರು ಸಹ ಆರೋಪಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿಉತ್ತರ ಪ್ರದೇಶದಲ್ಲಿ ರೇಪ್ ಆ್ಯಂಡ್ ಮರ್ಡರ್-ಬಾಲಕಿಯ ಕಣ್ಣು ಕಿತ್ತಿ, ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಬರ್ಬರ ಕೊಲೆ

    ಗೋಂಡಾದ ಎಸ್‍ಪಿ ಶೈಲೇಶ್ ಕುಮಾರ್ ಪಾಂಡೆ, ಮೂವರು ಸೋದರಿಯ ಮೇಲೆ ಕೆಮಿಕಲ್ ದಾಳಿ ನಡೆದಿದೆ. ಅಪ್ರಾಪ್ತೆಯರ ಮೇಲೆ ಮೇಲೆ ಹಾಕಲಾದ ಕೆಮಿಕಲ್ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಮಿಕಲ್ ದಾಳಿಗೊಳಗಾದ ಮೂವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಓರ್ವ ಬಾಲಕಿಯ ದೇಹದ ಶೇ.5 ರಿಂದ 7 ರಷ್ಟು ಸುಟ್ಟಿದೆ. ಈ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿಯರಿಗೆ ಪರಿಚಯಸ್ಥನೇ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಹತ್ರಾಸ್‌ ಕೇಸ್‌ –  ಸಂಚಲನ ಸೃಷ್ಟಿ‌ಸಿದ್ದ ವೆಬ್‌ಸೈಟ್‌ ದಿಢೀರ್‌ ಬಂದ್

    ನಮಗೆ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ. ದಾಳಿ ಹೇಗೆ ಮತ್ತು ಯಾರಿಂದ ನಡೆಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ನಮಗೆ ಯಾರ ಜೊತೆ ವೈರತ್ವ ಇಲ್ಲ. ಘಟನೆ ನಡೆದರೂ ಇಷ್ಟು ಸಮಯವಾದ್ರೂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂದು ಬಾಲಕಿಯ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: ಹತ್ರಾಸ್‍ನಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ

  • ಮಹಿಳೆಯ ಮೇಲೆ ವ್ಯಕ್ತಿಯಿಂದ ಆ್ಯಸಿಡ್ ದಾಳಿ- ಆಸ್ಪತ್ರೆಗೆ ದಾಖಲು

    ಮಹಿಳೆಯ ಮೇಲೆ ವ್ಯಕ್ತಿಯಿಂದ ಆ್ಯಸಿಡ್ ದಾಳಿ- ಆಸ್ಪತ್ರೆಗೆ ದಾಖಲು

    ಕೋಲಾರ: ಹಣದ ಲೇವಾದೇವಿ ವಿಚಾರದಲ್ಲಿ ಗಲಾಟೆ ಹಿನ್ನೆಲೆ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಆ್ಯಸಿಡ್ ಎರಚಲು ಯತ್ನಿಸಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಮಹಿಳೆ ಆ್ಯಸಿಡ್ ದಾಳಿಯಿಂದ ಪಾರಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ.

    ಹೌದು. ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮಾರಿಕುಪ್ಪಂನ ಎ.ಜಿ ಬ್ಲಾಕ್‍ನಲ್ಲಿಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಸುಧಾ ಆ್ಯಸಿಡ್ ದಾಳಿಯಿಂದ ತಪ್ಪಿಸಿಕೊಂಡ ಮಹಿಳೆ. ಈಕೆ ಬಡಾವಣೆಯ ಜನರಿಗೆ ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿ ಸಾಲ ನೀಡಿದ್ದು, ಹಣ ಕೇಳಿದ ಹಿನ್ನೆಲೆ ಪರಿಚಯಸ್ಥರೇ ಆ್ಯಸಿಡ್ ದಾಳಿ ಮಾಡಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ.

    ಸದ್ಯ ಆ್ಯಸಿಡ್ ದಾಳಿಯಿಂದ ಮಹಿಳೆಗೆ ಯಾವುದೇ ಅನಾಹುತವಾಗಿಲ್ಲ. ಆದರೂ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಸುರಕ್ಷಿತವಾಗಿದ್ದಾಳೆ. ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಅಪರಿಚಿತ ವ್ಯಕ್ತಿ ಆ್ಯಸಿಡ್ ದಾಳಿಯಿಂದ ಕೆಜಿಎಫ್ ನಗರದ ಜನರಲ್ಲಿ ಆತಂಕ ಮೂಡಿದೆ. ಮಾತ್ರವಲ್ಲದೆ ಎರಡು ದಿನಗಳ ಹಿಂದೆಯೂ ಮನೆಯಲ್ಲಿದ್ದ ಮಹಿಳೆ ಮೇಲೆ ಯಾವುದೋ ಕೆಮಿಕಲ್ ದಾಳಿ ನಡೆದಿದ್ದು, ಅಂದು ಕೂಡ ದಾಳಿಯಿಂದ ಬಚಾವ್ ಆಗಿದ್ದಾಳೆ. ಆದರೆ ಇಂದು ಮಧ್ಯಾಹ್ನ ಮನೆ ಬಳಿ ಇದ್ದ ವೇಳೆ ಆ್ಯಸಿಡ್ ಅಥವಾ ಡಿಜಿಟಲ್ ವಾಟರ್ ತಂದು ದಾಳಿ ಮಾಡಿದ್ದಾನೆ ಎಂದು ಮಹಿಳೆಯ ಆರೋಪಿಸಿದ್ದಾಳೆ.

    ಈ ಸಂಬಂಧ ಕೆಜಿಎಫ್‍ನ ಮಾರಿಕುಪ್ಪಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

  • ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ದೂರು ವಾಪಸ್ ಪಡೆಯಲು ರೇಪ್ ಸಂತ್ರಸ್ತೆ ನಕಾರ – ಆ್ಯಸಿಡ್ ಎರಚಿದ ಕಾಮುಕನ ಕುಟುಂಬ

    ಲಕ್ನೋ: ಉತ್ತರಪ್ರದೇಶದಲ್ಲಿ ದೂರು ವಾಪಸ್ ಪಡೆಯದಿದ್ದಕ್ಕೆ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಹಾಪುರ್ ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರಿಯ ಕುಟುಂಬಸ್ಥರು ಆ್ಯಸಿಡ್ ಎರಚಿ, ಆಕೆಯ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಎರಚಿದ ಆ್ಯಸಿಡ್ ಬಾಲಕಿಯ ಕಾಲಿನ ಮೇಲೆ ಬಿದ್ದಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    2019ರ ಸೆಪ್ಟೆಂಬರ್ 2ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಆ ಬಳಿಕ ಬಾಲಕಿಯ ಕುಟುಂಬಸ್ಥರು ಕಾಮುಕನ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಆರೋಪಿ ಕುಟುಂಬಸ್ಥರು ಕೊಟ್ಟಿರುವ ದೂರನ್ನು ವಾಪಸ್ ಪಡೆಯುವಂತೆ ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಕಾಡುತ್ತಿದ್ದರು.

    ಇದೇ ವಿಚಾರಕ್ಕೆ ಭಾನುವಾರ ಕೂಡ ಸಂತ್ರಸ್ತೆ, ಆಕೆಯ ಪೋಷಕರು ಹಾಗೂ ಆರೋಪಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಕುಟುಂಬಸ್ಥರು ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ.

  • ಹಾವೇರಿ ಯುವತಿ ಮೇಲೆ ಆ್ಯಸಿಡ್ ಹಾಕಿ ಪರಾರಿ – ಆರೋಪಿ ಬಂಧನಕ್ಕೆ ಆಗ್ರಹ

    ಹಾವೇರಿ ಯುವತಿ ಮೇಲೆ ಆ್ಯಸಿಡ್ ಹಾಕಿ ಪರಾರಿ – ಆರೋಪಿ ಬಂಧನಕ್ಕೆ ಆಗ್ರಹ

    ಹಾವೇರಿ: ನಗರದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಕ್ರೂರಿಯ ಬಂಧನಕ್ಕೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಇಂದು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯಲ್ಲಿ ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ ಮಾತನಾಡಿ, ಮಂಗಳವಾರ ನಗರದಲ್ಲಿ ಯುವತಿಯೋರ್ವಳ ಮೇಲೆ ಆ್ಯಸಿಡ್ ದಾಳಿ ನಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಯುವತಿಯ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಆ್ಯಸಿಡ್ ದಾಳಿ ಮಾಡಿರುವ ಕ್ರೂರಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಕ್ರೂರಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಬೇಕು. ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಜೊತೆಗೆ ಆಕೆಗೆ ಸರ್ಕಾರ ನೆರವನ್ನು ನೀಡಬೇಕೆಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಉಡಚಪ್ಪ ಮಾಳಗಿ, ಅಕ್ಷತಾ ಕೆ.ಸಿ, ಅಶೋಕ್ ಮರೆಣ್ಣನವರ, ಸಂಜಯಗಾಂಧಿ ಸಂಜೀವಣ್ಣನವರ ಮತ್ತಿತರರು ಭಾಗಿಯಾಗಿದ್ದರು. ಆ್ಯಸಿಡ್ ದಾಳಿ ಭಯನಾಕವಾಗಿದ್ದು, ಅದರ ಯಾತನೆ ಸಹಿಸುವುದು ಕಷ್ಟ, ಸುಪ್ರೀಂ ಕೋರ್ಟ್ ಆ್ಯಸಿಡ್ ಮಾರಾಟಕ್ಕೆ ನಿರ್ಬಂಧ ಹೇರಿದ್ದರೂ ಅನಿಯಂತ್ರಿತವಾಗಿ ಮಾರಾಟವಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮ ಜರುಗಿಸಬೇಕು. ಆ್ಯಸಿಡ್ ದಾಳಿಯನ್ನು ಗೃಹ ಸಚಿವರು ಗಂಭಿರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

    ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲದಲಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಭಾಗಿಯಾಗಿದ್ದರು.

    ಏನಿದು ಪ್ರಕರಣ?
    ಹಾವೇರಿ ನಗರದ ರಾಣೆಬೆನ್ನೂರು ರಸ್ತೆಯಲ್ಲಿ ಮಂಗಳವಾರ ಯುವತಿಯೋರ್ವಳ ಮುಖಕ್ಕೆ ದುಷ್ಕರ್ಮಿಯೊಬ್ಬ ಆ್ಯಡ್ ಎರಚಿ ಪರಾರಿಯಾಗಿದ್ದಾನೆ. ಗಾರ್ಮೆಂಟ್ ಒಂದರಲ್ಲಿ ಸಂತ್ರಸ್ತ ಯುವತಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಹೋಗುತ್ತಿದ್ದ ವೇಳೆ ದುಷ್ಕರ್ಮಿ ಕೃತ್ಯವೆಸೆಗಿದ್ದಾನೆ.

    ಯುವತಿ ಮೇಲೆ ಆ್ಯಸಿಡ್ ಎರಚಿದ ಪರಿಣಾಮ ಆಕೆಯ ಬಲಗೆನ್ನೆಗೆ ಮೇಲೆ ಸುಟ್ಟ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯ ಶಾಸಕ ನೆಹರು ಓಲೇಕಾರ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ಹಾವೇರಿ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ವಿಧವೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪಾಪಿ ಬಾವ

    ವಿಧವೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪಾಪಿ ಬಾವ

    ಮಂಗಳೂರು: ನಾದಿನಿಯ ಮುಖಕ್ಕೆ ಬಾವನೇ ಆ್ಯಸಿಡ್ ಎರಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ನಡೆದಿದೆ.

    ಆ್ಯಸಿಡ್ ಎರಿಚಿದ ಆರೋಪಿಯನ್ನು ಕೊಂಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ(55) ಎಂದು ಗುರುತಿಸಲಾಗಿದೆ. ಎಲ್‍ಐಸಿ ಏಜೆಂಟ್ ಜಯಾನಂದ ತನ್ನ ತಮ್ಮನ ಪತ್ನಿ ಸ್ವಪ್ನಾ(35) ಮೇಲೆ ಆ್ಯಸಿಡ್ ಎರಚಿದ್ದಾನೆ. ಸ್ವಪ್ನಾ ಅವರ ಪತಿ ರವಿ ಮೃತಪಟ್ಟಿದ್ದು, ತಮ್ಮ ಮೂವರು ಹೆಣ್ಣು ಮಕ್ಕಳ ಜೊತೆ ಸ್ವಪ್ನಾ ವಾಸವಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿತ್ತು. ಅದು ಭೂ ವಿವಾದಕ್ಕೆ ತಿರುಗಿ ಇವರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

    ಈ ವಿಚಾರಕ್ಕೆ ಸ್ವಪ್ನಾ ಮೇಲೆ ಜಯಾನಂದ ಕೋಪಗೊಂಡಿದ್ದನು. ಸ್ವಪ್ನಾ ಅವರ ಮೇಲಿನ ಕೋಪಕ್ಕೆ ಅವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎಸೆದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಜೊತೆಗಿದ್ದ ಸ್ವಪ್ನಾ ಅವರ ಮಗಳಿಗೂ ಆ್ಯಸಿಡ್ ಸಿಡಿದಿದ್ದು, ತಾಯಿ ಹಾಗೂ ಮಗು ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

    ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಂಧನ

    ಹಾವೇರಿ: ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಗುಪ್ತಾಂಗಕ್ಕೆ ಮತ್ತು ಕಾಲಿಗೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿಯಿರುವ ಸಿದ್ದನಗುಡ್ಡದಲ್ಲಿ ನಡೆದಿದೆ.

    ಮಂಜುನಾಥ್ ಕಳಸದ(42) ಕೃತ್ಯವೆಸಗಿದ ಆರೋಪಿ. ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿರುವ ಮಂಜುನಾಥ್ ಮಂಗಳವಾರ ಮಾತನಾಡುವುದಿದೆ ಬಾ ಎಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯ ಗುಪ್ತಾಂಗ ಮತ್ತು ಕಾಲಿಗೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಜುನಾಥ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಮಂಗಳವಾರ ಮಂಜುನಾಥ್ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬೇರೆಯವರೊಂದಿಗೆ ಫೋನಿನಲ್ಲಿ ಮಾತನಾಡುತ್ತಿಯಾ, ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಜಗಳವಾಡಿದ್ದಾನೆ.

    ಜಗಳವಾಡಿದ ಬಳಿಕ ಮಂಜುನಾಥ್ ಬಾಟಲಿನಲ್ಲಿ ತಂದಿದ್ದ ಆ್ಯಸಿಡ್ ಅನ್ನು ಮಹಿಳೆಯ ಗುಪ್ತಾಂಗ ಹಾಗೂ ಕಾಲಿನ ಮೇಲೆ ಎರಚಿದ್ದಾನೆ. ಈ ಘಟನೆಯಿಂದ ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಆರೋಪಿ ಮಂಜುನಾಥ್‍ನನ್ನು ಬಂಕಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

    ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

    ಲಕ್ನೋ: ಅತ್ಯಾಚಾರಿಗಳ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕೆ ಸಂತ್ರಸ್ತೆಯ ಮೇಲೆ ನಾಲ್ವರು ಆರೋಪಿಗಳು ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾರೆ.

    ಉತ್ತರ ಪ್ರದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಮುಜಾಫರ್‌ನಗರದಲ್ಲಿ ತನ್ನನ್ನು ಅತ್ಯಾಚಾರಗೈದ ನಾಲ್ವರು ಕಾಮುಕರ ಮೇಲೆ ಕೊಟ್ಟಿದ್ದ ದೂರನ್ನು ವಾಪಾಸ್ ಪಡೆಯಲು ಸಂತ್ರಸ್ತೆ ಒಪ್ಪದಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. 30 ವರ್ಷದ ಮಹಿಳೆ ಮೇಲೆ ನಾಲ್ವರು ದುರುಳರು ಆ್ಯಸಿಡ್ ದಾಳಿ ನಡೆಸಿದ್ದಾರೆ. ಪರಿಣಾಮ ಶೇ. 30ರಷ್ಟು ಸಂತ್ರಸ್ತೆ ದೇಹದ ಭಾಗ ಸುಟ್ಟಿದ್ದು, ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕಾಮುಕರ ಅಟ್ಟಹಾಸ- ಶಿಕ್ಷಕಿ ಮೇಲೆ ಗ್ಯಾಂಗ್ ರೇಪ್, ಲೈಂಗಿಕ ಕಿರುಕುಳಕ್ಕೆ ಯುವತಿ ಬಲಿ

    ಬುಧವಾರ ಸಂತ್ರಸ್ತೆ ಮೇಲೆ ಅತ್ಯಾಚಾರಗೈದು ನಾಲ್ವರು ಕಾಮುಕರು ಅಟ್ಟಹಾಸ ಮೆರೆದಿದ್ದರು. ಈ ಸಂಬಂಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ತಮ್ಮ ವಿರುದ್ಧ ನೀಡಿರುವ ದೂರನ್ನು ವಾಪಾಸ್ ತೆಗೆದುಕೊಂಡು ನಿನ್ನ ಪಾಡಿಗೆ ಸುಮ್ಮನಾಗು ಎಂದು ಆರೋಪಿಗಳು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಆದರೆ ಇದ್ಯಾವುದಕ್ಕೂ ಸಂತ್ರಸ್ತೆ ಬಗ್ಗದೆ ದೂರನ್ನು ಹಿಂಪಡೆಯಲು ನಿರಾಕರಿಸಿದಾಗ, ಆರೋಪಿಗಳು ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದುರುಳರ ಕ್ರೌರ್ಯಕ್ಕೆ ಮತ್ತೊಂದು ಬಲಿ – ಬದುಕಲಿಲ್ಲ ಬೆಂಕಿಯಲ್ಲಿ ಬೆಂದ ಉನ್ನಾವ್ ಸಂತ್ರಸ್ತೆ

    ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ಸಾಕಷ್ಟು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅತ್ಯಾಚಾರವೆಸೆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದರು. ಆದ್ದರಿಂದ ಸಂತ್ರಸ್ತೆ ನೇರವಾಗಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸಂತ್ರಸ್ತೆ ಮನೆಗೆ ನುಗ್ಗಿ ನಾಲ್ವರು ಆರೋಪಿಗಳು ಆ್ಯಸಿಡ್ ದಾಳಿ ನಡೆಸಿದ್ದಾರೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆಮಾಡಿ ಕೈಗೆ ಕೋಳ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

  • ಸೋದರಿಯನ್ನು ಕಾರಿನಿಂದ ತಳ್ಳಿ ಆ್ಯಸಿಡ್ ಎರಚಿದ ಸೋದರರು

    ಸೋದರಿಯನ್ನು ಕಾರಿನಿಂದ ತಳ್ಳಿ ಆ್ಯಸಿಡ್ ಎರಚಿದ ಸೋದರರು

    ಲಕ್ನೋ: ಇಬ್ಬರು ದುಷ್ಕರ್ಮಿಗಳು ತಮ್ಮ ಸಹೋದರಿಯನ್ನು ಕಾರಿನಿಂದ ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ಸಂತ್ರಸ್ತೆಯು 22 ವರ್ಷದವಳಾಗಿದ್ದು, ಬುಲಂದರ್ ಶಹರ್ ಜಿಲ್ಲೆಯ ಗುಲೋತಿ ಗ್ರಾಮದ ನಿವಾಸಿಯಾಗಿದ್ದಾರೆ. ಗುರುವಾರ ಘಟನೆ ನಡೆದಿದ್ದು, ಯುವತಿಯು ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.

    ಇಬ್ಬರು ಸಹೋದರರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ಕೋಟ್ ಗ್ರಾಮದ ಹೊರ ವಲಯದಲ್ಲಿ ಕಾರಿನಿಂದ ನನ್ನನ್ನು ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಮಾಡಲು ಯತ್ನಿಸಿದ್ದರು ಅಂತ ಯುವತಿ ದೂರು ನೀಡಿದ್ದಾಳೆ ಎಂದು ದಾದ್ರಿ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಮಲಿಕ್ ತಿಳಿಸಿದ್ದಾರೆ.

    ದುಷ್ಕರ್ಮಿಗಳು ಆ್ಯಸಿಡ್ ದಾಳಿ ಮಾಡಿ ಪರಾರಿಯಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ದಾಳಿಯಿಂದಾಗಿ ಯುವತಿಯ ದೇಹದ ಮೇಲೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.

    ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 326 (ಆ್ಯಸಿಡ್ ದಾಳಿ) ಹಾಗೂ 307 (ಕೊಲೆಗೆ ಯತ್ನ) ಅಡಿ ಪ್ರಕರಣ ದಾಖಲಾಗಿದೆ. ಆ್ಯಸಿಡ್ ದಾಳಿಗೆ ನಿಖರ ಕಾರಣ ವರದಿಯಾಗಿಲ್ಲ.

  • ಗ್ಯಾಂಗ್‍ ರೇಪ್‍ಗೆ ಸಹಕರಿಸದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ಸುರಿದ ಕಾಮುಕರು

    ಗ್ಯಾಂಗ್‍ ರೇಪ್‍ಗೆ ಸಹಕರಿಸದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ಸುರಿದ ಕಾಮುಕರು

    ಪಟ್ನಾ: 16 ವರ್ಷದ ಬಾಲಕಿ ಮೇಲೆ 4 ಮಂದಿ ಕಾಮುಕರು ಗ್ಯಾಂಗ್ ರೇಪ್ ಮಾಡಲು ಯತ್ನಿಸಿ, ಆ್ಯಸಿಡ್ ಸುರಿದ ಅಮಾನವೀಯ ಘಟನೆ ಬಿಹಾರದ ಭಗಲ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಅಪ್ರಾಪ್ತೆ ಮನೆಗೆ ನುಗ್ಗಿದ್ದ 4 ಮಂದಿ ಯುವಕರು ಬಾಲಕಿಯ ತಾಯಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಬಳಿಕ ತಾಯಿಯ ಎದುರೇ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಬಾಲಕಿ ಅವರಿಗೆ ಸಹಕರಿಸದ್ದಕ್ಕೆ ಸಿಟ್ಟಿಗೆದ್ದ ಕಾಮುಕರು ಆಕೆಯ ಮೇಲೆ ಆ್ಯಸಿಡ್ ಸುರಿದು ದುಷ್ಟತನವನ್ನು ಮೆರೆದಿದ್ದಾರೆ.

    ಆ್ಯಸಿಡ್ ದಾಳಿಗೆ ತುತ್ತಾದ ಬಾಲಕಿ ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಬಾಲಕಿಯ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಸದ್ಯ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭಗಲ್‍ಪುರ ಎಸ್‍ಪಿ ಆಶೀಷ್ ಭಾರ್ತಿ ತಿಳಿಸಿದ್ದಾರೆ.