Tag: ಆ್ಯಸಿಡ್ ದಾಳಿ

  • ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು

    ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು

    ಬೆಂಗಳೂರು: ಇತ್ತೀಚೆಗೆ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ರಕ್ತದ ಅವಶ್ಯಕತೆ ಇದ್ದು, ಸಂತ್ರಸ್ತೆಗೆ ರಕ್ತ ದಾನ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಏಪ್ರಿಲ್ 28ರಂದು ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಸರ್ಜರಿಗೆ ಒಳಗಾಗಿದ್ದು, ರಕ್ತದ ಅವಶ್ಯಕತೆ ಇತ್ತು. ಹೀಗಾಗಿ ನಗರದ ಕಾಮಾಕ್ಷಿಪಾಳ್ಯದ ಇನ್ಸ್ಪೆಕ್ಟರ್ ಪ್ರಶಾಂತ್ ಸೇರಿದಂತೆ ಐವರು ಸಿಬ್ಬಂದಿ ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.3.47ಕ್ಕೆ ಏರಿಕೆ – ಬೆಂಗ್ಳೂರಲ್ಲಿ 791 ಕೇಸ್

    ಪೊಲೀಸರು 5 ಯುನಿಟ್ ರಕ್ತದಾನ ಮಾಡಿದ್ದು, ಸಂತ್ರಸ್ತ ಯುವತಿ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮೊದಲ ದಿನ ಸಿಇಟಿ ಪರೀಕ್ಷೆ ಸುಗಮ: ಅಶ್ವಥ್ ನಾರಾಯಣ

    Live Tv

  • ಆ್ಯಸಿಡ್ ಹಾಕಿ ನಾಪತ್ತೆಯಾಗಿದ್ದ ನಾಗೇಶ್ ವಿದ್ಯಾರ್ಥಿಯಿಂದ ಅರೆಸ್ಟ್!

    ಆ್ಯಸಿಡ್ ಹಾಕಿ ನಾಪತ್ತೆಯಾಗಿದ್ದ ನಾಗೇಶ್ ವಿದ್ಯಾರ್ಥಿಯಿಂದ ಅರೆಸ್ಟ್!

    ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗೇಶ್ ಕೊನೆಗೂ ಈಗ ಪತ್ತೆಯಾಗಿದ್ದಾನೆ. ಈತನನ್ನು ಪತ್ತೆ ಮಾಡಲು ಪೊಲೀಸರು ನಾನಾ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಫಲ ಎಂಬಂತೆ ತಮಿಳುನಾಡಿನಲ್ಲಿ ನಾಗೇಶ್ ಪತ್ತೆಯಾಗಿದ್ದಾನೆ. ನಾಗೇಶ್ ಪತ್ತೆಯಾಗಿದ್ದು ವಿದ್ಯಾರ್ಥಿಯಿಂದ ಎನ್ನುವುದು ವಿಶೇಷ.

    ಆ್ಯಸಿಡ್ ಎಸೆದ ಬಳಿಕ ಆತನನ್ನು ಹುಡುಕುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಸಾಕಷ್ಟು ಕಡೆ ಹುಡುಕಾಡಿದರೂ ಒಂದು ಸುಳಿವು ಬಿಟ್ಟುಕೊಡದೇ ಆತ ಪರಾರಿಯಾಗಿದ್ದ. ಪರಾರಿಯಾಗಿದ್ದರೂ ವಿದ್ಯಾರ್ಥಿ ನೀಡಿದ ಖಚಿತ ಸುಳಿವಿನಿಂದ ನಾಗೇಶ್ ಈಗ ಅರೆಸ್ಟ್ ಆಗಿದ್ದಾನೆ.  ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

    ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎಎಸ್‍ಐ ಶಿವಣ್ಣ ಹಾಗೂ ಪಿಸಿ ರವಿಕುಮಾರ್ ತಮಿಳುನಾಡಿನ ತಿರುವಣ್ಣಾಮಲೈ ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ಎಲ್ಲಕಡೆ ನಾಗೇಶ್ ಸುಳಿವಿಗಾಗಿ ಫೋಟೋವನ್ನು ಅಂಟಿಸಿದ್ದರು. ಈ ಫೋಟೋ ನೋಡಿದ ಒಬ್ಬ ವಿದ್ಯಾರ್ಥಿ ಇವನನ್ನು ನಾನು ಹತ್ತಿರದ ಆಶ್ರಮದಲ್ಲಿ ಧ್ಯಾನ ಮಾಡುವುದನ್ನು ನೋಡಿದ್ದೇನೆ ಎಂದು ಪೊಲೀಸರಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದಾನೆ.

    ಇದಾದ ಬಳಿಕ ವಿದ್ಯಾರ್ಥಿ ರಮಣಶ್ರೀ ಆಶ್ರಮದಲ್ಲಿರುವ ನಾಗೇಶ್ ಫೋಟೋವನ್ನು ಅವನಿಗೆ ಗೊತ್ತಾಗದಂತೆ ಕ್ಲಿಕ್ಕಿಸಿ ಕಳಿಸಿದ್ದ. ಫೋಟೋ ನೋಡಿದ ತಕ್ಷಣ ಈತನೇ ಆರೋಪಿ ಎಂದು ಪೊಲೀಸರಿಗೆ ತಿಳಿದಿದ್ದು, ಕೂಡಲೇ ನಾಗೇಶ್ ಇರುವ ರಮಣಶ್ರೀ ಆಶ್ರಮಕ್ಕೆ ಎಎಸ್‍ಐ ಶಿವಣ್ಣ ಹಾಗೂ ಪಿಸಿ ರವಿಕುಮಾರ್ ಬಂದಿದ್ದಾರೆ.

    ಈ ವೇಳೆ ಪೊಲೀಸರು ನಾಗೇಶ್ ಪಕ್ಕ ಶಾಂತವಾಗಿ ಭಕ್ತರ ರೀತಿ ಕುಳಿತುಕೊಂಡು ಅವನ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಸಮಯ ಬಿಟ್ಟು ಪೊಲೀಸರು ತಮಿಳಿನಲ್ಲಿ ನಿಮ್ಮ ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಅವನು ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಅದಕ್ಕೆ ಪೊಲೀಸರೇ ನಾಗೇಶ್ ಎಂದು ಎಂದು ಕರೆದಿದ್ದು, ಅವನು ತಿರುಗಿ ನೋಡಿದ್ದಾನೆ. ಆಗ ನಾಗೇಶ್ ಪೊಲೀಸರನ್ನು ಯಾರು ನೀವು ಎಂದು ಕೇಳಿದ್ದು, ಆತ ‘ನಾನೇ ನಾಗೇಶ್’ ಎಂದು ಒಪ್ಪಿಕೊಂಡಿದ್ದ. ಇದನ್ನೂ ಓದಿ:  ಪ್ರಾಣ ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗು ರಕ್ಷಿಸಿದ – ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ 

    ಈತ ನಾಗೇಶ್ ಎನ್ನುವುದು ಖಚಿತವಾಗುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

  • ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

    ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

    ಬೆಂಗಳೂರು: ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ ಎಂದು ಆ್ಯಸಿಡ್ ನಾಗೇಶ್ ಉಡಾಫೆ ಮಾತುಗಳನ್ನು ಆಡಿದ್ದಾನೆ.

    ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಕಳೆದ 11 ದಿನಗಳಿಂದ ಆಶ್ರಮವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶ್‍ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆ್ಯಸಿಡ್ ನಾಗೇಶ್ ನಾನೇನು ತಪ್ಪು ಮಾಡಿದೆ ಸರ್.. ಆ್ಯಸಿಡ್ ತಾನೇ ಹಾಕಿದ್ದೇನೆ ಸಣ್ಣ ತಪ್ಪು ಮಾಡಿದ್ದೇನೆ ಅಷ್ಟೇ. ಆಯ್ತು ನನ್ನನ್ನು ಬಿಡಿ. ಠಾಣೆಗೆ ಬರುತ್ತೇನೆ ಎಂದು ಪೊಲೀಸರ ಜೊತೆಗೆ ಬೆಂಗಳೂರಿಗೆ ಬಂದಿದ್ದಾನೆ. ಇದನ್ನೂ ಓದಿ: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

    ಇದೇ ವೇಳೆ ಆ್ಯಸಿಡ್ ಹಾಕುವುದಕ್ಕೂ ಮುನ್ನ ಹೆದರಿಸುವುದಕ್ಕೆ ಮಾತ್ರ ಆ್ಯಸಿಡ್ ಹಾಕುತ್ತೇನೆ ಅಂದಿದ್ದೆ. ಆದರೆ ಅವಳು ಇದೇ ವಿಚಾರವನ್ನು ದೊಡ್ಡದು ಮಾಡಿ ಅವರ ದೊಡ್ಡಪ್ಪನ ಮೂಲಕ ನಮ್ಮ ಅಣ್ಣನಿಗೆ ಹೇಳಿಸಿದ್ದಳು. ನಮ್ಮ ಅಣ್ಣ ನನಗೆ ಬೈದಿದ್ದ, ಇದರಿಂದ ಕೋಪಗೊಂಡ ಆ್ಯಸಿಡ್ ಹಾಕಿಯೇ ಬಿಡೋಣ ಅಂತಾ ತೀರ್ಮಾನ ಮಾಡಿದೆ ಎಂದು ಪೊಲೀಸರ ಮುಂದೆ ಆ್ಯಸಿಡ್ ನಾಗನ ಸ್ಟೋಟಕ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯುತ್ತಿದ್ದೇನೆ. ಮದುವೆಯಾಗೋಣ ಅಂತಾ ಕೇಳಿದೆ. ನನ್ನನ್ನು ಅಣ್ಣ ಅಂದುಬಿಟ್ಟಳು. ಜೊತೆಗೆ ನನಗೆ ಮದುವೆ ಸೆಟ್ಟಾಗಿದೆ ಅಂದಳು. ಇದರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ. ಆದರೆ ಹಾಕಬೇಕು ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಆ್ಯಸಿಡ್ ಹಾಕುವುದಕ್ಕೆ ಪ್ರಚೋದನೆ ಮಾಡಿದರೋ ಆಗ ಹಾಕಿದೆ ಎಂದು ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದಾನೆ.

  • ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

    ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

    ಬೆಂಗಳೂರು: ಆ್ಯಸಿಡ್ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಯುವತಿ ತಮ್ಮ ಕುಟುಂಬಸ್ಥರ ಮುಂದೆ ಕಣ್ಣೀರು ಹಾಕಿದ್ದಾಳೆ. ನನ್ನ ಕಣ್ಣು ಮುಂದೆನೇ ಅವನಿಗೆ ಶಿಕ್ಷೆ ಆಗಬೇಕು ಎಂದು ಹೇಳಿರುವುದಾಗಿ ಪೋಷಕರು ತಿಳಿಸಿದ್ದಾರೆ.

    ನಾಗೇಶ್‍ನನ್ನು ಅರೆಸ್ಟ್ ಮಾಡಿದ್ದಾರೆ. ಶಿಕ್ಷೆ ಕೊಡುತ್ತಾರೆ ಎಂದು ಪೋಷಕರು ಯುವತಿಗೆ ತಿಳಿಸಿದ್ದರು. ನೀನು ಹುಷಾರಾಗಮ್ಮ ಅವನನ್ನು ಅರೆಸ್ಟ್ ಮಾಡಿದ್ದಾರೆ. ಶಿಕ್ಷೆ ಕೊಡುತ್ತಾರೆ ಅಂತ ದೊಡ್ಡಮ್ಮ ಸುಶೀಲಮ್ಮ ಯುವತಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಈಗ ಅರೆಸ್ಟ್ ಆಗಿದ್ದಾನೆ ಅಂತಾ ನಾವು ಹೇಳಲ್ಲ. ಈ ಮುನ್ನವೇ ನನ್ನ ಮಗಳಿಗೆ ಮೊದಲ ದಿನವೇ ಅರೆಸ್ಟ್ ಆಗಿದ್ದಾನೆ ಅಂತಾ ಹೇಳಿದ್ದೇವೆ. ಈಗ ಅರೆಸ್ಟ್ ಆದ ಅಂತಾ ಹೇಳಿದರೆ ಅವಳು ನೊಂದುಕೊಳ್ಳುತ್ತಾಳೆ ಅಂತಾ ಸುಶೀಲಮ್ಮ ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಕರೆತರುವಾಗ ಎಸ್ಕೇಪ್ ಆಗಲು ಯತ್ನ- ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು

    ಸದ್ಯ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ಐಸಿಯುನಲ್ಲಿದ್ದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆಕೆಯನ್ನು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆಯಲ್ಲಿಯೇ ಇದ್ದುಕೊಂಡು ಆಕೆಯ ದೊಡ್ಡಮ್ಮ ಸುಶೀಲಮ್ಮ ನೋಡಿಕೊಳ್ಳುತ್ತಿದ್ದಾರೆ.

  • ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಧನ್ಯವಾದ ತಿಳಿಸಿದ್ದಾರೆ.

    ಈ ಸಂಬಂಧ ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಯುವತಿಯ ಮೇಲೆ ಆ್ಯಸಿಡ್ ಎರಚುವಿಕೆಯಂತಹ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿದ್ದ ಕಿರಾತಕ ನಾಗೇಶ್ ಎಂಬ ಆರೋಪಿಯನ್ನು ನಮ್ಮ ಪೊಲೀಸರು, ಅತ್ಯಂತ ಶ್ರಮ ಹಾಗೂ ದಕ್ಷತೆಯಿಂದ ನೆರೆಯ ತಮಿಳುನಾಡು ರಾಜ್ಯದಲ್ಲಿ ಅಡಗಿದ್ದವನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಕರೆತರುವಾಗ ಎಸ್ಕೇಪ್ ಆಗಲು ಯತ್ನ- ಆ್ಯಸಿಡ್ ನಾಗನ ಕಾಲಿಗೆ ಗುಂಡೇಟು

    ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವುದರ ಮೂಲಕ ನಮ್ಮ ಪೊಲೀಸರು, ದೇಶದಲ್ಲಿಯೇ ಅತ್ಯಂತ ದಕ್ಷತೆಯ ಹಾಗೂ ವೃತ್ತಿಪರ ಪಡೆಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತನೆ. ಇತ್ತ ಹೀನ ಕೃತ್ಯ ನಡೆಸಿದವನನ್ನು ಬಂಧಿಸುವ ಕಾರ್ಯದಲ್ಲಿ ತಮಿಳುನಾಡು ಪೊಲೀಸರು ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ. ಅವರಿಗೂ ನನ್ನ ಅಭಿನಂದನೆಗಳು ಎಂದರು.  ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಆರೋಪಿಗೆ ಉಗ್ರ ಶಿಕ್ಷೆಯಾಗುವಂತೆ, ಆತನನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಲ್ಲಾ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತ ಮಹಿಳೆಗೆ ಹಾಗೂ ಕುಟುಂಬ ವರ್ಗಕ್ಕೆ ಸ್ವಲ್ಪವಾದರೂ ನೆಮ್ಮದಿ ದೊರಕಿದಂತಾಗುವುದು ಎಂದು ಭರವಸೆ ನೀಡಿದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

  • ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ನಿವೇಶನ, ಮನೆ ನೀಡಲು ಆದೇಶ: ಸಿಎಂ

    ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ನಿವೇಶನ, ಮನೆ ನೀಡಲು ಆದೇಶ: ಸಿಎಂ

    ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಎಲ್ಲ ಹೆಣ್ಣುಮಕ್ಕಳಿಗೆ ಮನೆ, ನಿವೇಶನ ಹಾಗೂ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ 5 ಲಕ್ಷ ರೂ. ವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

    ಕಂದಾಯ ಇಲಾಖೆಯ ಸಾಮಾಜಿಕ ಭದತ್ರೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಹಲೋ ಕಂದಾಯ ಸಚಿವರೇ – 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.  ಇದನ್ನೂ ಓದಿ; ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

    acid attack protest

    ಆ್ಯಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವುಂಡಿರುತ್ತಾರೆ. ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3,000 ದಿಂದ 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಜೊತೆಗೆ ಈಗ ಅವರಿಗೆ ಬದುಕು ಸಾಗಿಸಲು ಮನೆ ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಅಧಿಕಾರ ವಿಕೇಂದ್ರೀಕರಣ: ರಾಜ್ಯ ಆಳುವುದು ಅಂದರೆ ಜನರ ಸಮಸ್ಯೆಗಳನ್ನು ಅರಿತು ಹೃದಯದಿಂದ ಪರಿಹಾರ ಕೊಡುವುದು. ಅನುಷ್ಠಾನ ಮಾಡುವುದು ಆಡಳಿತ. ಈ ಚಿಂತನೆಯಿಂದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಜನರ ಅಲೆದಾಟ ತಪ್ಪುತ್ತದೆ. 50 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ವ್ಯವಸ್ಥೆ ಸರಿ ಇಲ್ಲದ್ದರಿಂದ ಇದನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    acid-attack

    ಸಾಮಾಜಿಕ ಭದ್ರತಾ ಯೋಜನೆಗಳಡಿಯ ಪಿಂಚಣಿಗಳು ನೇರವಾಗಿ ಮನೆ ಬಾಗಿಲಿಗೆ ಮುಟ್ಟಬೇಕು. ಸಮಾಜದಲ್ಲಿ ಆಶ್ರಯ, ಸಹಾಯವಿಲ್ಲದವರಿಗೆ ಪಿಂಚಣಿ ನೀಡಬೇಕು. ಅದಕ್ಕಾಗಿ ವ್ಯವಸ್ಥೆ ಸರಿಪಡಿಸಲು ಕಂದಾಯ ಇಲಾಖೆಯನ್ನು ಚುರುಕುಗೊಳಿಸಲಾಗಿದೆ. ವ್ಯವಸ್ಥೆಯನ್ನು ಸರಿಪಡಿಸಿ ಈ ಕೆಲಸವನ್ನು ಮಾಡಲಾಗುತ್ತಿದೆ. ಇದು ಜನಪರವಾದ ಆಡಳಿತ. ಮನೆ ಬಾಗಿಲಿಗೇ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸಭೆಯಲ್ಲಿ ಅಧಿಕಾರ ಹೆಪ್ಪುಗಟ್ಟಬಾರದು. ಅಧಿಕಾರ ನೇರವಾಗಿ ಜೇನುತುಪ್ಪದಂತೆ ಹರಿಯುವಂತಿರಬೇಕು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ನೇರವಾಗಿ ಜನರಿಗೆ ತಲುಪುವಂಥದ್ದು ಎಂದು ಶ್ಲಾಘಿಸಿದ್ದಾರೆ.

    ACID ATTACK 2s
    ಸಾಂದರ್ಭಿಕ ಚಿತ್ರ

    ಜನರೊಂದಿಗೆ ಸಂಪರ್ಕವಿದ್ದರೆ ಜನಪರ ಆಡಳಿತ: ಆಡಳಿತ ಮತ್ತು ರಾಜಕಾರಣ ಜನಪರವಾಗಿರಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಧಿಕಾರಕ್ಕೆ ಬಂದಾಗ ತಮ್ಮ ಸ್ವಂತ ಅಧಿಕಾರದ ಬಗ್ಗೆ ಚಿಂತೆ ಮಾಡುವವರು ದೇಶವನ್ನು ಹಾನಿ ಮಾಡಿದ್ದಾರೆ. ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಿ ನೊಂದವರಿಗೆ ಸಹಾಯ ಮಾಡಿದವರನ್ನು ಜನ ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆ. ಸಮಸ್ಯೆಗಳೊಂದಿಗೆ ಬದುಕುವುದಕ್ಕೂ, ಚರ್ಚೆ ಮಾಡುವುದಕ್ಕೂ ಅಂತರವಿದೆ. ಆಡಳಿತ ಜನರ ಬಳಿಗೆ ಸಮಸ್ಯೆಯ ಬಳಿಗೆ ಹೋದಾಗ ನೈಜ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಧಿಕಾರ ಸ್ವೀಕರಿಸಿದ ದಿನ ನನ್ನ ಮೊದಲನೇ ನಿರ್ಣಯ ರೈತರ ಮಕ್ಕಳಿಗೆ ವಿದ್ಯಾ ನಿಧಿ ಯೋಜನೆ ಘೋಷಣೆ ಮಾಡಿದ್ದು. ಹೆಣ್ಣುಮಕ್ಕಳಿಗೂ ಇದನ್ನು ವಿಸ್ತರಿಸಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ, ವಿಧವಾ ವೇತನವನ್ನು ಹೆಚ್ಚಳ ಮಾಡಲಾಗಿದೆ. ಇನ್ನೊಬ್ಬರನ್ನು ಬೇಡದಂತೆ ಜೀವನ ನಡೆಸಲು ಈ ಬದಲಾವಣೆ ತರಲಾಗಿದೆ ಎಂದಿದ್ದಾರೆ.

  • ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಚಾಲಾಕಿ ನಾಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ನಾಗ ಎಲ್ಲಿ ತಲೆಮರೆಸಿಕೊಂಡಿದ್ದ? ಪೊಲೀಸರಿಗೆ ಆತನ ಸುಳಿವು ಸಿಕ್ಕಿದ್ದು ಹೇಗೆ? ನಾಗನನ್ನು ಹಿಡಿಯಲು ಪೊಲೀಸರು ಹಾಕಿದ್ದ ಪ್ಲ್ಯಾನ್ ನಿಜಕ್ಕೂ ರೋಚಕವಾಗಿದೆ.

    ಏಪ್ರಿಲ್ 28 ರಂದು ಯುವತಿಯ ಮೇಲೆ ಆಸಿಡ್ ಎರಚಿ ನಾಗೇಶ್ ಪರಾರಿಯಾಗಿದ್ದ. ದಾಳಿ ವೇಳೆ ನಾಗನ ಬಲಗೈ ಮೇಲೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ಆ ಗಾಯಗಳನ್ನೇ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ನಾಗೇಶ್ ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳಲು ಒಪ್ಪದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದ. ನಂತರ ತಮಿಳುನಾಡು ಗಡಿಭಾಗದ ಕ್ಲಿನಿಕ್‌ನಲ್ಲಿ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಂಡು ಪ್ರಯಾಣ ಮುಂದುವರಿಸಿದ್ದ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಸ್ವಾಮೀಜಿ ವೇಷಧರಿಸಿದ್ದ ನಾಗ
    ನಾನೊಬ್ಬ ಭಕ್ತನೆಂದು ಹೇಳಿಕೊಂಡು ತಮಿಳುನಾಡಿನ ತಿರುವಣ್ಣಮಲ್ಲೈ ಆಶ್ರಮದಲ್ಲಿ ನಾಗ ಆಶ್ರಯ ಪಡೆದುಕೊಂಡಿದ್ದ. ಕಾವಿ ತೊಟ್ಟು ರಮಣಾ ಆಶ್ರಮದಲ್ಲಿ ನಾಗೇಶ ಅವಿತಿದ್ದ. ಭಿತ್ತಿ ಪತ್ರಗಳನ್ನು ಹೊರಡಿಸಿ ಆರೋಪಿಯ ಸುಳಿವು ಪತ್ತೆಗೆ ಪೊಲೀಸರು ಮುಂದಾಗಿದ್ದರು. ನೆರೆ ರಾಜ್ಯದ ಪೊಲೀಸರು ಕಾಮಾಕ್ಷಿಪಾಳ್ಯ ಪೊಲೀಸರ ನೆರವಿಗೆ ಬಂದಿದ್ದರು. ಶುಕ್ರವಾರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆತನ ಚಹರೆ ಹಾಗೂ ಕೈ ಮೇಲಾಗಿದ್ದ ಗಾಯಗಳನ್ನು ಕಂಡು ಪೊಲೀಸರು ಶಂಕೆಗೊಂಡಿದ್ದಾರೆ. ಹತ್ತಿರ ಹೋಗುತ್ತಿದ್ದಂತೆ ಭೀತಿಯಿಂದ ಪರಾರಿಯಾಗಲು ನಾಗೇಶ ಯತ್ನಿಸಿದ್ದ. ಕೂಡಲೇ ನಾಗನನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ 

    ನಾಗನನ್ನು ಹಿಡಿಯಲು ಖಾವಿ ತೊಟ್ಟಿದ್ದ ಪೊಲೀಸರು
    ಆ್ಯಸಿಡ್ ನಾಗ ಅಪ್ಪಟ ದೈವಭಕ್ತನಾಗಿದ್ದ. ವಾರದಲ್ಲಿ ಸೋಮವಾರ, ಶುಕ್ರವಾರ ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿದ್ದ. ಈ ಬಗ್ಗೆ ನಾಗೇಶ್ ಪೋಷಕರ ವಿಚಾರಣೆ ವೇಳೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ದರು. ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ತಿಳಿದ ನಾಗೇಶ್, ಮಠದಲ್ಲಿ ಸ್ವಾಮಿ ವೇಷದಲ್ಲಿ ವಾಸವಾಗಿದ್ದ. ಪೊಲೀಸರು ಕೂಡ ಭಕ್ತರ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ನಾಗನನ್ನು ಹಿಡಿಯಲು ಸ್ವತಃ ಪೊಲೀಸರು ಸಹ ಖಾವಿ ಧರಿಸಿ ಹೊಂಚುಹಾಕಿದ್ದರು.

    ಪೊಲೀಸರು ತನ್ನನ್ನು ಹುಡುಕುತ್ತಿರುವ ಮಾಹಿತಿ ತಿಳಿದು ನಾಗ ಖಾವಿ ಧರಿಸಿ ದೇವಸ್ಥಾನದಲ್ಲಿ ಕುಳಿತಿದ್ದ. ಯಾರಿಗೂ ಅನುಮಾನ ಬರಬಾರದು ಎಂದು ಖಾವಿ ಧರಿಸಿದ್ದ. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿತ್ತು. ಖಾವಿಧಾರಿ ನಾಗೇಶ್‌ನನ್ನು ನೋಡಿ ಅನುಮಾನಗೊಂಡ ಪೊಲೀಸರಿಗೆ ನಂತರ ಗುರುತು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ನಾಗನನ್ನು ಬಂಧಿಸಿದ್ದಾರೆ. ನಂತರ ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರಿಗೆ ಕರೆತರಲಿದ್ದಾರೆ.

  • ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಬೆಂಗಳೂರು: ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಈತ 16 ದಿನಗಳ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

    ಯಾರಿಗೂ ಸಿಗಬಾರದೆಂದು ನಾಗೇಶ್ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

    ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ಕೋಟಿ ಹೃದಯಗಳ ಪ್ರಾರ್ಥನೆ ಕೊನೆಗೂ ಜಯಿಸಿದೆ. ಗುಣಮುಖವಾಗಿ ಮೊದಲಿನಂತಾಗಲಿ ಅನ್ನೋ ಕೋಟ್ಯಂತರ ಮನಸ್ಸುಗಳ ಆಸೆ ಈಡೇರಿದೆ.

    ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ ಯುವತಿ ಆ್ಯಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಯುವತಿಯನ್ನ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಗೆ ಬರೋಬ್ಬರಿ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಡುವೆ, ಪ್ರತೀ ಕ್ಷಣವೂ ಏನೋ ಅನ್ನೋ ಆತಂಕ ಇದೀಗ ಇಲ್ಲ. ಬರ್ನಿಂಗ್ ಸ್ಪೆಷಲ್ ವಾರ್ಡ್ ನಲ್ಲಿ ಯುವತಿ ಆರೈಕೆಯಲ್ಲಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

    ಯುವತಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಸೇವಿಸೋಕೆ ಶುರು ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಪುಡಿ ಮಾಡಿ, ಸರಿ ಜೊತೆ ಬೆರೆಸಿ ಕೊಡೋಕೆ ಸಹ ಡಾಕ್ಟರ್ ಹೇಳಿದ್ದಾರೆ. ಮುಖದ ಮುಂಭಾಗ ಮಾತ್ರ ಆಸಿಡ್‍ನಿಂದ ಸುಟ್ಟಿಲ್ಲ, ಮುಖದ ಎಡ ಮತ್ತು ಬಲಭಾಗ ಸುಟ್ಟಿದೆ ಅಂತಿದ್ದಾರೆ. ಇದಲ್ಲದೆ ಕಿವಿಯೊಂದು ತುಂಬಾನೆ ಹಾನಿಯಾಗಿದೆ. ಇನ್ನೂ 10% ನಷ್ಟು ಸ್ಕಿಮ್ ಟ್ರ್ಯಾನ್ಸ್ ಪ್ಲಾಂಟೇಷನ್ ಸರ್ಜರಿ ನಡೆಸಬೇಕಿದೆ. ಸದ್ಯ ಯುವತಿ ಮಾತನಾಡಿಸುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    ಯುವತಿ ಗುಣಮುಖಳಾಗಲಿ ಅನ್ನೋದು ನಮ್ಮೆಲ್ಲರ ಆಶಯವಾಗಿತ್ತು. ಕನ್ನಡಿಗರ ಪ್ರಾರ್ಥನೆ ಕೊನೆಗೂ ಕೈ ಗೂಡಿದೆ. ಕುಟುಂಬ ತುಸು ನೆಮ್ಮದಿಯಾಗಿದೆ.

  • 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದು ಐದು ದಿನ ಆಯ್ತು. ಆದರೆ ಪಾಗಲ್ ಪ್ರೇಮಿ, ಆ್ಯಸಿಡ್ ನಾಗ ಅಲಿಯಾಸ್ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಇತ್ತ ನಾಗೇಶ್ ದಾಳಿಗೂ ಮೊದಲೇ ಪ್ರೀಪ್ಲಾನ್ ಮಾಡಿಕೊಂಡಿದ್ದ ಅನ್ನೋ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ನಡೆದ ಆ್ಯಸಿಡ್ ಅಟ್ಯಾಕ್‍ನ ಕಿರಾತಕ ನಾಗೇಶ್ ಸುಳಿವು ಸಿಕ್ಕಿಲ್ಲ. ಬೆಂಗಳೂರು ಪೊಲೀಸರು, ನಾಗೇಶನಿಗಾಗಿ 10 ತಂಡ ರಚಿಸಿಕೊಂಡು, ಹಗಲು- ರಾತ್ರಿಯನ್ನದೇ ಕಣ್ಣಿಗೆ ಎಣ್ಣೆಬಿಟ್ಕೊಂಡು ಹುಡುಕಾಡ್ತಿದ್ದಾರೆ. ಆದರೆ ಖತರ್ನಾಕ್ ನಾಗೇಶ್ ಮಾತ್ರ ಸಿಗ್ತಾನೇ ಇಲ್ಲ. ತನಿಖೆ ವೇಳೆ, ಆರೋಪಿಯ ಪ್ರೀಪ್ಲಾನ್ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

    ಆರೋಪಿ ನಾಗೇಶ್ ಯುವತಿ ಮೇಲೆ 10 ದಿನ ಮೊದಲೇ ಪ್ಲಾನ್ ಮಾಡಿ ಕೃತ್ಯವೆಸಗಿರೋದು ತಿಳಿದು ಬಂದಿದೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಬೇಕು ಅನ್ನೋದನ್ನ ಮೊದಲೇ ಪ್ಲಾನ್ ಮಾಡಿಕೊಂಡಿದ್ದ. ಏಪ್ರಿಲ್ 28ರಂದು ದಾಳಿಗೂ ಮೊದಲೇ ಗಾರ್ಮೆಂಟ್ಸ್ ಖಾಲಿ ಮಾಡಲು, ಅಲ್ಲಿದ್ದ ಸ್ಟಾಕ್‍ಗಳನ್ನೆಲ್ಲಾ 1 ದಿನ ಮೊದಲು 1 ಲಕ್ಷ ರೂ.ಗೆ ಕ್ಲಿಯರೆನ್ಸ್ ಮಾಡಿದ್ದ. ಹಣಕ್ಕಾಗಿ ಎಟಿಎಂ ಬಳಸಿದ್ರೆ ಸಿಕ್ಕಿ ಬೀಳ್ತೀನಿ ಅಂತ, ದಾಳಿ ದಿನ 1 ಲಕ್ಷ ಕ್ಯಾಶ್ ಇರುವಂತೆ ನೋಡಿಕೊಂಡಿದ್ದ. ಯುವತಿ ಮೇಲೆ ದಾಳಿ ನಡೆಸಿದ ಬಳಿಕ ನನ್ನ ಸಿಬಿಜೆಡ್ ಬೈಕ್‍ನಲ್ಲಿ ಮೆಜೆಸ್ಟಿಕ್‍ಗೆ ಬಂದು, ಎಸ್ಕೇಪ್ ಆಗಿದ್ದಾನೆ. ಇದೀಗ ಆರೋಪಿ ಬೈಕ್, ಕೋರ್ಟ್ ಬಳಿ ಪತ್ತೆ ಆಗಿದೆ. ಮೊಬೈಲ್ ಅನ್ನ ಹೊಸಕೋಟೆ ಟೋಲ್ ಬಳಿ ಬಿಸಾಕಿದ್ದು, ಮೊಬೈಲ್ ಸಿಕ್ಕವರು ಸ್ವಿಚ್ಛ್ ಆನ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಆ್ಯಸಿಡ್ ಎರಚಿದ ಕಿರಾತಕನಿಗೆ ಲುಕ್‍ಔಟ್ ನೊಟೀಸ್ ಜಾರಿ

    ಒಂದ್ಕಡೆ ನೀಚ ಕೃತ್ಯವೆಸಗಿರುವ ಆರೋಪಿ ನಾಗೇಶ್ ಆಂಜನೇಯನ ಪರಮ ಭಕ್ತನಂತೆ. ಪ್ರತಿದಿನ ತಿಲಕವಿಲ್ಲದೆ ಮನೆಯಿಂದ ಹೊರಗೆ ಬರ್ತಿರಲಿಲ್ಲವಂತೆ. ಆಗಾಗ ತಮಿಳುನಾಡಿನ ದೇವಸ್ಥಾನಗಳಿಗೂ ಹೋಗ್ತಿದ್ದನಂತೆ. ಹೀಗಾಗಿ ಪೊಲೀಸರು ತಿರುಪತಿ ಸೇರಿದಂತೆ ಹೊರರಾಜ್ಯಗಳ ದೊಡ್ಡ ದೇವಸ್ಥಾನಗಳು, ಮಠಗಳು, ಧಾರ್ಮಿಕ ಕೇಂದ್ರಗಳಲ್ಲಿ ಹುಡುಕಾಟ ನಡೆದುತ್ತಿದ್ದಾರೆ. ತಿರುಪತಿಯ 3000 ಫೇಸ್ ರೆಕಗ್ನೈಸೇಷನ್ ಕ್ಯಾಮೆರಾಗಳನ್ನ ಪೊಲೀಸ್ರು ಜಾಲಾಡಿದ್ದಾರೆ. ಎಲ್ಲೂ ಕೂಡ ಆರೋಪಿಯ ಮುಖ ಕಂಡುಬಂದಿಲ್ಲ.

    ಒಟ್ಟಾರೆ ಪ್ರೀತಿ ನಿರಾಕರಿಸಿದ್ರೂ ಅನ್ನೋ ಒಂದೇ ಒಂದು ಕಾರಣಕ್ಕೆ ಆರೋಪಿ ಆ್ಯಸಿಡ್ ದಾಳಿ ನಡೆಸಿದ್ದು, ಕ್ಷಮಿಸಲಾರದ ತಪ್ಪು. ಈತನ ವಿರುದ್ಧ ಕಠಿಣಾತಿ ಕಠಿಣ ಶಿಕ್ಷೆ ಆಗಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇತ್ತ ಅಮಾಯಕ ಯುವತಿ, ಸುಟ್ಟುಗಾಯಗಳಿಂದ ನರಳುತ್ತ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಆದಷ್ಟು ಬೇಗ, ಪಾಗಲ್ ಪ್ರೇಮಿ ನಾಗೇಶ್‍ನನ್ನು ಬಂಧಿಸಿ, ಯುವತಿ ಕುಟುಂಬಕ್ಕೆ ನ್ಯಾಯಕೊಡಿಸಬೇಕಿದೆ.