Tag: ಆ್ಯಪಲ್

  • ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    – 10 ವರ್ಷಕ್ಕೆ 1,000 ಕೋಟಿ ರೂ. ವೆಚ್ಚ

    ನವದೆಹಲಿ: ಐಫೋನ್ ತಯಾರಕ ಆ್ಯಪಲ್ (Apple) ಕಂಪನಿ ಬೆಂಗಳೂರಿನ ಡೌನ್‌ಟೌನ್‌ನಲ್ಲಿರುವ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಸುಮಾರು 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಕಾಲ ಲೀಸ್‌ಗೆ (Lease) ಪಡೆದಿದ್ದು, ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ (Rent) ಪಾವತಿಸಲಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.

    ಬೆಂಗಳೂರಿನ ವಸಂತ ನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬೆಸಿ ಜೆನಿತ್ ಕಟ್ಟಡದ 5ರಿಂದ 13ನೇ ಮಹಡಿಯಲ್ಲಿ ಆಪಲ್‌ನ ಹೊಸ ಕಚೇರಿಯಿದೆ. ಈ ಎಲ್ಲ ಮಹಡಿಗಳಿಗೆ ಕಂಪನಿಯು ಪಾರ್ಕಿಂಗ್, ನಿರ್ವಹಣಾ ಶುಲ್ಕಾ ಸೇರಿದಂತೆ ಮಾಸಿಕ 6.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಚದರ ಅಡಿಗೆ 235 ರೂ. ಬಾಡಿಗೆ ಬೀಳಲಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ರಿಯಲ್ ಎಸ್ಟೇಟ್ ಸಂಸ್ಥೆ ಎಂಬಸಿ ಗ್ರೂಪ್‌ನಿಂದ (Embassy Group) ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಬಹು ಮಹಡಿ ಕಟ್ಟಡವನ್ನು ಆ್ಯಪಲ್ ಕಂಪನಿ 10 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದೆ. ಆ್ಯಪಲ್ ಕಂಪನಿ 31.57 ಕೋಟಿ ರೂ. ಭದ್ರತಾ ಠೇವಣಿ ಇಟ್ಟಿದೆ. ವಾರ್ಷಿಕ ಬಾಡಿಗೆ 4.5%ರಷ್ಟು ಹೆಚ್ಚಳವಾಗಲಿದೆ. ಈ ವರ್ಷದ ಏಪ್ರಿಲ್ 3ರಿಂದ ಲೀಸ್ ಪ್ರಾರಂಭವಾಗಿದ್ದು, ಜುಲೈನಲ್ಲಿ ನೋಂದಾಯಿಸಲಾಗಿದೆ. ಆಪಲ್ 1.5 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಎಸ್‌ಸಿ ಒಳಮೀಸಲಾತಿ ಜಾರಿಗೆ ವಿಶೇಷ ಸಭೆ; 101 ಜಾತಿಗಳಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ

    2024-25ರ ಆರ್ಥಿಕ ವರ್ಷದಲ್ಲಿ ಆ್ಯಪಲ್ ಕಂಪನಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್‌ ಕಟ್‌?

  • ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಮುಂಬೈ: ಆ್ಯಪಲ್ (Apple) ಉತ್ಪನ್ನಗಳು ಎಷ್ಟು ಜನಪ್ರಿವೆಂದರೆ ಭಾರತ (India) ಮಾತ್ರವಲ್ಲದೇ ವಿಶ್ವದ ಬಹತೇಕ ದೇಶಗಳಲ್ಲಿ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಬೆಲೆ ಹೆಚ್ಚಿದ್ದರೂ ಆ್ಯಪಲ್ ತನ್ನದೇ ಒಂದು ಸ್ಟ್ಯಾಂಡರ್ಡ್ ಅನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ (Apple Store) ಮುಂಬೈನಲ್ಲಿ (Mumbai) ಉದ್ಘಾಟನೆಯಾಗಿದೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ ಏಪ್ರಿಲ್ 18ರಂದು ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲು ಪ್ರಾರಂಭಿಸಿದೆ. ಸ್ಟೋರ್‌ಗೆ ಆಗಮಿಸುವ ಗ್ರಾಹಕರು ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಸ್ಟೋರ್‌ಗೆ ಫ್ಯಾಕ್ಟರಿಯಿಂದ ನೇರವಾಗಿ ಉತ್ಪನ್ನಗಳು ಆಗಮಿಸುವುದರಿಂದ ಮಾರುಕಟ್ಟೆಯ ಬೆಲೆಗಿಂತ ಅಗ್ಗದಲ್ಲಿ ಉತ್ಪನ್ನಗಳು ಗ್ರಾಹಕರ ಕೈಗೆಟುಕಲಿದೆ.

    ಆ್ಯಪಲ್ ಸ್ಟೋರ್‌ನ ವಿಶೇಷತೆಗಳೇನು?
    ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಮ್ಯಾಕ್‌ಬುಕ್, ಐಫೋನ್ (iPhone), ಐಪ್ಯಾಡ್, ವಾಚ್‌ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್‌ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ಮುಂಬೈ ಆ್ಯಪಲ್ ಸ್ಟೋರ್‌ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ. ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ. ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ (Delhi) ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ (Tim Cook) ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.

    ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ. ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್

  • ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

    ಇಂದಿನಿಂದ ಪ್ರಧಾನಿ ಮೋದಿ ನಾಲ್ಕು ದಿನ ಅಮೆರಿಕ ಪ್ರವಾಸ

    ವಾಷಿಂಗ್ಟನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ನಾಲ್ಕುದಿನಗಳ ಕಾಲ ಅಮೆರಿಕ ಪ್ರವಾಸ ಮಾಡಲಿದ್ದು, ಸೆಪ್ಟೆಂಬರ್ 24ರಂದು ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

    ಇಂದು ಮಧ್ಯಾಹ್ನ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಲಿದ್ದು, ಕೊರೊನಾ ಬಳಿಕ ಪ್ರಧಾನಿ ಮೋದಿ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಇಂದು ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡಲಿರುವ ಮೋದಿ ನಾಳೆ ಅಮೆರಿಕಾದ ಉನ್ನತ ಸಂಸ್ಥೆಗಳ ಸಿಇಓಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಪ್ರಮುಖವಾಗಿ ಆ್ಯಪಲ್ ಸಂಸ್ಥೆ ಮುಖ್ಯಸ್ಥರಾದ ಟಿಮ್ ಕುಕ್ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ಸೆಪ್ಟೆಂಬರ್ 24ರಂದು ಶ್ವೇತಭವನದಲ್ಲಿ ಜೋ ಬೈಡನ್, ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದು, ಇದರಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಜೊತೆ ಕ್ವಾಡ್ ಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್, ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ ಮತ್ತು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಭಾಗಿಯಾಗಲಿದ್ದಾರೆ.

    ದ್ವಿಪಕ್ಷೀಯ ಸಭೆ:
    ನರೇಂದ್ರ ಮೋದಿ ಮತ್ತು ಜೋ ಬೈಡನ್ ದ್ವಿಪಕ್ಷೀಯ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಕುರಿತು ಚರ್ಚೆನಡೆಸಲಿದ್ದಾರೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತಾ ಸಹಯೋಗ ಮತ್ತು ಶುದ್ಧ ಇಂಧನ ಪಾಲುದಾರಿಕೆಯನ್ನು ಹೆಚ್ಚಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸುವ ನಿರೀಕ್ಷೆ ಇದೆ. ಆ ಬಳಿಕ ಮೋದಿಯವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೂ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: 5 ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆ, 8 ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಶಿಫಾರಸು

    ಸೆಪ್ಟೆಂಬರ್ 24ರಂದು ಸಂಜೆ ವಾಷಿಂಗ್ಟನ್ ಡಿಸಿಯಿಂದ ನರೇಂದ್ರ ಮೋದಿ ನ್ಯೂಯಾರ್ಕ್ ಪ್ರಯಾಣ ಮಾಡಲಿದ್ದು, ಸೆಪ್ಟೆಂಬರ್ 25ರಂದು ನ್ಯೂಯಾರ್ಕ್‍ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸೆಪ್ಟೆಂಬರ್ 26ಕ್ಕೆ ನ್ಯೂಯಾರ್ಕ್‍ನಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ.

  • ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    – ಸಂಬಳದಲ್ಲಿ ವ್ಯತ್ಯಯವಾಗಿರುವುದನ್ನು ಒಪ್ಪಿದ ಕಂಪನಿ

    ನವದೆಹಲಿ: ಕೋಲಾರದ ನರಸಾಪುರದ ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಲೀ ವಿನ್ಸೆಂಟ್ ತಲೆದಂಡವಾಗಿದೆ. ಅಷ್ಟೇ ಅಲ್ಲದೇ ಉದ್ಯೋಗಿಗಳಿಗೆ ಸಂಬಳ ನೀಡುವುದರಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಕಂಪನಿ ಒಪ್ಪಿಕೊಂಡಿದೆ.

    ಕೋಲಾರದ ನರಸಾಪುರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಉದ್ಯೋಗಿಗಳು ಸಂಬಳ ನೀಡದ್ದಕ್ಕೆ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ನರಸಾಪುರದ ಘಟಕದಲ್ಲಿ ದುರದೃಷ್ಟಕರ ಘಟನೆ ನಡೆದ ಬಳಿಕ ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲ ನೌಕರರಿಗೆ ಸಂಬಳ ನೀಡದಿರುವುದು ಕಂಡುಬಂದಿದೆ. ಈ ಕುರಿತು ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೆ ನಮ್ಮೆಲ್ಲ ಉದ್ಯೋಗಿಗಳ ಕ್ಷಮೆಯಾಚಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮಿಂದ ತಪ್ಪಾಗಿರುವುದನ್ನು ಅರಿತಿದ್ದೇವೆ. ಕಾರ್ಮಿಕ ಏಜೆನ್ಸಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಕೆಲ ಪ್ರಕ್ರಿಯೆಗಳನ್ನು ಬಲಪಡಿಸಬೇಕಿದೆ ಹಾಗೂ ನವೀಕರಿಸಬೇಕಿದೆ. ಶಿಸ್ತು ಕ್ರಮ ಸೇರಿದಂತೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಇದರ ಭಾಗವಾಗಿ ಕಂಪನಿಯ ಭಾರತದ ಉಪಾಧ್ಯಕ್ಷರನ್ನು ಹುದ್ದೆಯಿಂದ ತೆಗೆಯಲಾಗಿದೆ. ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡಗಳನ್ನು ಪುನರ್‍ರಚಿಸುತ್ತೇವೆ ಎಂದು ಶನಿವಾರ ವಿಸ್ಟ್ರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಉಪಾಧ್ಯಕ್ಷ ಹುದ್ದೆಯಲ್ಲಿದ್ದ ವಿನ್ಸೆಂಟ್ ಲೀಯವರನ್ನು ತೆಗೆದು ಹಾಕಲಾಗಿದ್ದು, ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‍ನ ಭಾರತದ ಎಂಡಿಯಾಗಿ ಸುಧಿತೋ ಗುಪ್ತಾ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ನೀಡಿ, ಈ ಕುರಿತು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಕಾರ್ಮಿಕರಿಗಾಗಿ ನೌಕರರ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

    ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಲು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ತೆರೆಯುತ್ತೇವೆ. ನಮ್ಮ ವ್ಯವಹಾರ ಹಾಗೂ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಕರ್ನಾಟಕದ ಕಾರ್ಮಿಕ ಇಲಾಖೆ ಕಂಪನಿಯ ಅವ್ಯವಸ್ಥೆ ಕುರಿತು ಎಚ್ಚರಿಸಿದ ಬಳಿಕ ವಿಸ್ಟ್ರನ್ ಹೇಳಿಕೆ ಬಿಡುಗಡೆ ಮಾಡಿದೆ. ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳ ಹಾಗೂ ಹಾಜರಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಅಲ್ಲದೆ ಉದ್ಯೋಗಿಗಳ ಕುರಿತು ಯಾವುದೇ ವಿವರಣೆ ಇರಲಿಲ್ಲ. ಅಲ್ಲದೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಒತ್ತಡ ಹೇರಲಾಗಿತ್ತು. ಉದ್ಯೋಗಿಗಳ ಎಷ್ಟು ಗಂಟೆ ಕೆಲಸ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಸಂಗ್ರಹಿಸುವ ವ್ಯವಸ್ಥೆ ಸರಿಯಿಲ್ಲ. ಸರಿಯಾದ ಸಮಯಕ್ಕೆ ಸಂಬಳ ಪಾವತಿ ಆಗುತ್ತಿರಲಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

    ವಿಸ್ಟ್ರಾನ್ 2,850 ಕೋಟಿ ರೂ.ಗಳನ್ನು ಕೋಲಾರದ ಪ್ಲಾಂಟ್‍ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಇದರ ಒಟ್ಟು ಮೊತ್ತವನ್ನು 18,000 ಕೋಟಿ ರೂ.ಗೆ ಕ್ಕೆ ಹೆಚ್ಚಿಸಲು ಬದ್ಧವಾಗಿತ್ತು. ಇದು ಪ್ರಸ್ತುತ 10 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಂಡಿದೆ. ಸ್ಮಾರ್ಟ್‍ಫೋನ್‍ನಿಂದ ಐಒಟಿ ವಸ್ತುಗಳವರೆಗೆ ಹಾಗೂ ಬಯೋಟೆಕ್ ಡಿವೈಸ್‍ಗಳನ್ನು ಉತ್ಪಾದಿಸುವುದಾಗಿ ಸಂಸ್ಥೆ ಹೂಡಿಕೆ ಮಾಡಿದೆ.

    ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಆಪಲ್ ಕಂಪನಿ ತನಿಖೆ ನಡೆಸಲು ತನ್ನ ಭಾರತದ ಅಧಿಕಾರಿಗಳನ್ನು ಘಟಕಕ್ಕೆ ಕಳುಹಿಸಿಕೊಟ್ಟಿತ್ತು.

  • ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಚಾನೆಲ್ ನಿರೂಪಕಿಯೊಬ್ಬರು ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದು ಟ್ರೋಲ್ ಆಗುತ್ತಿದ್ದಾರೆ.

    ಪಾಕಿಸ್ತಾನದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನೇರ ಪ್ರಸಾರದಲ್ಲಿ ಸಾಫ್ಟ್ ವೇರ್ ದಿಗ್ಗಜ ಆ್ಯಪಲ್ ಕಂಪನಿಯ ವಾರ್ಷಿಕ ಬಜೆಟ್ ಪಾಕಿಸ್ತಾನದ ಬಜೆಟ್‍ಗಿಂತಲೂ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಪತ್ರಕರ್ತ ನೈಲಾ ಇನಾಯತ್ ಹೇಳಿದ್ದರು.

    ಈ ವೇಳೆ ನಿರೂಪಕಿ,” ಹೌದು. ಸೇಬಿನ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಹಲವು ರೀತಿಯ ವೈವಿಧ್ಯಗಳಿವೆ, ನಾನು ಈ ಬಗ್ಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ತಕ್ಷಣ ಅತಿಥಿ ನೈಲಾ ಇನಾಯತ್ ನಾನು ಸಾಫ್ಟ್ ವೇರ್ ಕಂಪನಿ ಆ್ಯಪಲ್ ಬಗ್ಗೆ ಹೇಳುತ್ತಿದ್ದೇನೆ ವಿನಃ ಸೇಬಿನ ಹಣ್ಣಿನ ಬಗ್ಗೆ ಅಲ್ಲ ಎಂದು ಕಾಲೆಳೆದಿದ್ದಾರೆ.

    ಜುಲೈ 4ರಂದು ಪಾಕಿಸ್ತಾನದ ಪತ್ರಕರ್ತ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಆ್ಯಪಲ್ ಬಗ್ಗೆ ಆಂಕರ್ ಕನ್‍ಫ್ಯೂಸ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ವಿಧವಿಧವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು ಇದು ನ್ಯೂಸ್ ಚಾನೆಲ್ ಅಥವಾ ಕಾಮಿಡಿ ಚಾನೆಲಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ತುಂಬಾ ಕೆಟ್ಟ ನಿರೂಪಣೆ. ಈ ಕಾರ್ಯಕ್ರಮ ಮುಗಿದ ಮೇಲೆ ಧಾನ್ಯಗಳ ಬಗ್ಗೆಯೂ ಮಾತನಾಡಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

  • ಆ್ಯಪಲ್ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಸಾಬಿಹ್ ಖಾನ್ ನೇಮಕ

    ಆ್ಯಪಲ್ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಸಾಬಿಹ್ ಖಾನ್ ನೇಮಕ

    ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಯಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರುದಂತೆ ಜಗತ್ತಿನ ದೊಡ್ಡ ದೊಡ್ಡ ಎಂಎನ್‍ಸಿಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ. ಈಗ ಪ್ರತಿಷ್ಠಿತ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಸಾಬೀಹ್ ಖಾನ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಸ್ಮಾರ್ಟ್‍ಫೋನ್, ಪರ್ಸನ್ ಕಂಪ್ಯೂಟರ್ ಕ್ಷೇತ್ರದ ದೈತ್ಯ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿ ಸಾಬೀಹ್ ಖಾನ್ ಅವರು ನೇಮಕವಾಗಿರುವುದು ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿದೆ.

    ಮೂಲತಃ ಉತ್ತರ ಪ್ರದೇಶದ ರಾಂಪುರದವರಾದ ಸಾಬಿಹ್ ಖಾನ್ 1995ರಿಂದ ಆ್ಯಪಲ್ ಕಂಪನಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳಿಂದ ಕಂಪನಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ಈಗ ಆಪರೇಷನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸಾಬಿಹ್ ಖಾನ್ ನೇಮಕವಾಗಿರುವುದಕ್ಕೆ ಆ್ಯಪಲ್ ಸಿಇಓ ಟಿಮ್ ಕುಕ್ ಬೇಷ್ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಸಾಬಿಹ್ ಖಾನ್ ಪರಿಶ್ರಮ ಅಸಾಮಾನ್ಯ ಎಂದು ಕುಕ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ.

    ರಾಂಪುರದವರಾದ ಸಾಬಿಹ್ ಖಾನ್ ತಂದೆ ಸಯೀದ್ ಖಾನ್ ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಸಾಬಿಹ್ ಕೂಡಾ ಬಾಲ್ಯವನ್ನು ಸಿಂಗಾಪುರದಲ್ಲಿಯೇ ಕಳೆದಿದ್ದು, ಅರ್ಥಶಾಸ್ತ್ರ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಆ್ಯಪಲ್ ಪ್ರಾಡಕ್ಟ್ ಗಳ ಯೋಜನೆ, ಉತ್ಪಾದನೆ, ಪೂರೈಕೆ, ಲಾಜಿಸ್ಟಿಕ್ ಇತರೆ ಕೆಲಸಗಳ ಬಗ್ಗೆ ಮೇಲುಸ್ತುವಾರಿಯನ್ನು ಸಾಬಿಹ್ ಖಾನ್ ನೋಡಿಕೊಳ್ಳುತ್ತಾರೆ.

    ವಿಶ್ವಾದ್ಯಂತ ಆ್ಯಪಲ್ ಕಂಪನಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಭಾರತೀಯರು ಸಾಧನೆ ಮಾಡಿದ್ದಾರೆ. ಈ ಸಾಲಿನಲ್ಲಿ ಸತ್ಯ ನಾದೆಲ್ಲಾ, ಸುಂದರ್ ಪಿಚೈ, ಥಾಮಸ್ ಕುರಿಯನ್ ಬಳಿಕ ಈಗ ಸಾಹಿಬ್ ಖಾನ್ ಕೂಡ ಸೇರಿಕೊಂಡಿದ್ದಾರೆ.

    2014ರಲ್ಲಿ ಸ್ಟೀವ್ ಬಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ ಕಂಪನಿಯ ಸಿಇಓ ಸ್ಥಾನಕ್ಕೆ ಮಣಿಪಾಲದಲ್ಲಿ ಓದಿದ್ದ ಸತ್ಯಾ ನಾದೆಲ್ಲಾ ಆಯ್ಕೆಯಾಗಿದ್ದರು. ಅವರ ಬಳಿಕ 2015ರಲ್ಲಿ ಸುಂದರ್ ಪಿಚೈ ಟೆಕ್‍ನ ದೈತ್ಯ ಗೂಗಲ್ ಕಂಪನಿಯ ಸಿಇಓ ಆಗಿ ನೇಮಕವಾದರು. ಅವರ ನಂತರ ಕೇರಳ ಮೂಲದ ಥಾಮಸ್ ಕುರಿಯನ್‍ರನ್ನು ಗೂಗಲ್ ಕ್ಲೌಡ್‍ನ ಮುಖ್ಯಸ್ಥರಾಗಿ ನೇಮಕವಾದರು.

  • ಓಎಸ್ ಅಪ್‍ಡೇಟ್ ವೇಳೆ ಸ್ಟೋಟಗೊಂಡ ಆ್ಯಪಲ್ ಎಕ್ಸ್ ಐಫೋನ್

    ಓಎಸ್ ಅಪ್‍ಡೇಟ್ ವೇಳೆ ಸ್ಟೋಟಗೊಂಡ ಆ್ಯಪಲ್ ಎಕ್ಸ್ ಐಫೋನ್

    ವಾಷಿಂಗ್ಟನ್: ಐಓಎಸ್ ಅಪ್‍ಡೇಟ್ ವೇಳೆ ಆ್ಯಪಲ್ ಕಂಪೆನಿಯ ಐಫೋನ್-ಎಕ್ಸ್ ಮಾದರಿಯ ಸ್ಮಾರ್ಟ್ ಫೋನ್ ಏಕಾಏಕಿ ಸ್ಫೋಟಗೊಂಡ ಘಟನೆ ಅಮೆರಿಕದ ಫೆಡರಲ್ ಪ್ರದೇಶದಲ್ಲಿ ನಡೆದಿದೆ.

    ಹೌದು, ವಿಶ್ವದಲ್ಲೇ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಹೆಸರುಗಳಿಸಿರುವ ಆ್ಯಪಲ್ 2017 ರಲ್ಲಿ ಬಿಡುಗಡೆ ಮಾಡಿದ್ದ ಐಫೋನ್-ಎಕ್ಸ್ ಆವೃತ್ತಿಯನ್ನು ಐಓಎಸ್ 12 ಗೆ ಅಪ್‍ಡೇಟ್ ಮಾಡುವ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಐಫೋನ್ ಎಕ್ಸ್ ಮೊಬೈಲ್ ಸಂಪೂರ್ಣ ಹಾಳಾಗಿ ಹೋಗಿದೆ.

    https://twitter.com/rocky_mohamad/status/1062554244241190913

    ಐಫೋನ್ ಸ್ಪೋಟಗೊಂಡಿರುವ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮೊಬೈಲ್ ಮಾಲೀಕ ರಾಕಿ ಮೊಹಮ್ಮದ್ ಅಲಿ, ಓಎಸ್ ಅಪ್‍ಡೇಟ್ ಮಾಡುವಾಗ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ನನಗೆ ಇಲ್ಲಿ ಏನಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲವೆಂದು ಆ್ಯಪಲ್ ಕಂಪನಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

    ಐಫೋನ್ ಎಕ್ಸ್ ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ಆ್ಯಪಲ್, ಫೋನ್ ಸ್ಫೋಟಗೊಳ್ಳಲು ಸಾಧ್ಯವೇ ಇಲ್ಲ. ನಮಗೆ ಇದು ಅನಿರೀಕ್ಷಿತ ಘಟನೆಯಾಗಿದೆ. ಕೂಡಲೇ ನಿಮ್ಮ ವಿವರಗಳನ್ನು ನಮ್ಮ ಬಳಿ ಹಂಚಿಕೊಳ್ಳಿ. ಈ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುತ್ತೇವೆಂದು ಹೇಳಿದೆ.

    ಸ್ಥಳೀಯ ಮಾಧ್ಯಮಗಳ ಮಾಹಿತಿಯಂತೆ, ಮೂಲತಃ ರಾಕಿ ಸಿರಿಯಾ ಮೂಲದವರಾಗಿದ್ದಾರೆ. ಇವರು ತಮ್ಮ 10 ತಿಂಗಳ ಐಫೋನನ್ನು ಐಓಎಸ್ 12 ಗೆ ಅಪ್‍ಡೇಟ್ ಮಾಡಲು ಮುಂದಾಗಿದ್ದರು. ಈ ವೇಳೆ ಮೊಬೈಲಿನ ತಾಪಮಾನ ಹೆಚ್ಚಾಗಿ, ಏಕಾಏಕಿ ಸ್ಫೊಟಗೊಂಡಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೊಲೀಸರ ಗುಂಡಿಗೆ ಆ್ಯಪಲ್ ಸೇಲ್ಸ್ ಮ್ಯಾನೇಜರ್ ಬಲಿ: ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

    ಪೊಲೀಸರ ಗುಂಡಿಗೆ ಆ್ಯಪಲ್ ಸೇಲ್ಸ್ ಮ್ಯಾನೇಜರ್ ಬಲಿ: ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

    ಲಕ್ನೋ: ಆ್ಯಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಗೋಮತಿ ನಗರ್ ಪ್ರದೇಶದಲ್ಲಿ ನಡೆದಿದೆ.

    ವಿವೇಕ್ ತಿವಾರಿ ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಕಂಪನಿಯ ಸೇಲ್ಸ್ ಮ್ಯಾನೇಜರ್. ಶುಕ್ರವಾರ ಪೊಲೀಸರು ಕೊಲೆ ಪ್ರಕರಣ ಸಂಬಂಧ ತಿವಾರಿಯನ್ನು ಬಂಧಿಸಲು ಮುಂದಾದಾಗ, ಏಕಾಏಕಿ ಪೊಲೀಸರ ಮೇಲೆಯೇ ತನ್ನ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ ಪ್ರಶಾಂತ್ ಚೌಧರಿ ಎಂಬ ಪೊಲೀಸ್ ಅಧಿಕಾರಿಯು ತಿವಾರಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಗುಂಡು ಕಾರಿನ ಮುಂಭಾಗದ ಗ್ಲಾಸನ್ನು ಸೀಳಿ ತಿವಾರಿಗೆ ತಗುಲಿದೆ.

    ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿವೇಕ್ ತಿವಾರಿಯನ್ನು ಗೋಮತಿ ನಗರದದ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗಿದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗೋಮತಿ ಪೊಲೀಸ್ ಠಾಣೆ ಅಧಿಕಾರಿಗಳು, ಪೊಲೀಸರ ದಾಳಿಗೆ ಮೃತಪಟ್ಟ ತಿವಾರಿಯ ವಿರುದ್ಧ ಆತನ ಸಂಬಂಧಿಕರು ಕೊಲೆ ಪ್ರಕರಣದ ದೂರನ್ನು ದಾಖಲಿಸಿದ್ದರು. ಹೀಗಾಗಿ ವಿವೇಕ್ ತಿವಾರಿಯನ್ನು ಬಂಧಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

    ಘಟನೆ ಬಗ್ಗೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ವಿಷ್ಣು ಶುಕ್ಲ, ಪ್ರಕರಣವನ್ನು ಸಿಬಿಐ ವಹಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪೊಲೀಸರು ಗುಂಡು ಹಾರಿಸಲು ತಿವಾರಿ ಏನು ಉಗ್ರಗಾಮಿಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ನಮ್ಮೆಲ್ಲರ ಮುಖಂಡರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಘಟನೆ ಸಂಬಂಧ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾರಾದರೂ ತಪ್ಪು ಎಂದು ತಿಳಿದುಬಂದರೆ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತೇನೆ. ಅಮಾಯಕ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಘಟನೆ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಕೊಲೆ ಆರೋಪದ ಮೇಲೆ ವಿವೇಕ್ ತಿವಾರಿಯನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಅಲ್ಲದೇ ತಿವಾರಿಯು ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಸಹ ತಿಳಿದುಬಂದಿದೆ ಎಂದು ಹೇಳಿದ್ದಾರೆ.

    ಮರಣೋತ್ತರ ವರದಿಯ ಪ್ರಕಾರ ಮೃತ ವಿವೇಕ್ ದೇಹದ ಹಲವು ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ನವದೆಹಲಿ: ಆಪಲ್ ಕಂಪೆನಿಯು ಮೊದಲ ಬಾರಿಗೆ ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಈಗ ಇರುವ ಡ್ಯುಯಲ್ ಸಿಮ್ ನಂತೆ ಈ ಫೋನ್ ನಲ್ಲಿ ಎರಡು ಟ್ರೇಯಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ.

    ಹೊಸ ಐಫೋನ್ ಎಕ್ಸ್ಎಸ್, ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಫೋನುಗಳಿಗೆ ಇ ಸಿಮ್ ಹಾಕಿ ಕರೆ ಮಾಡಬಹುದು. ಸಿಮ್ ಕಾರ್ಡ್ ಗಳನ್ನು ನಾವು ನೋಡಬಹುದು. ಆದರೆ ಇ-ಸಿಮ್ ಕಾರ್ಡ್ ಗಳನ್ನು ನೋಡಲು ಸಾಧ್ಯವಿಲ್ಲ. ಐಫೋನ್ ನ್ಯಾನೋ ಸಿಮ್ ಸ್ಲಾಟ್‍ನೊಂದಿಗೆ ಲಭ್ಯವಾದರೆ, ಇನ್ನೊಂದು ಡಿಜಿಟಲ್ ಮಾದರಿಯ ಸಿಮ್ ಆಗಿರುತ್ತದೆ.

    ಈ ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಆಪಲ್ ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ಫಿಲಿಪ್ ಷಿಲ್ಲರ್, ಬಹಳಷ್ಟು ಜನ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂವಹನಕ್ಕಾಗಿ ಆ ದೇಶದಲ್ಲಿರುವ ಸಿಮ್ ಕಾರ್ಡ್ ಬಳಸಲು ತಾನು ಬಳಸುತ್ತಿರುವ ಸಿಮ್ ತೆಗೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಇ ಸಿಮ್ ವಿಶೇಷತೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

    ಏನಿದು ಇ-ಸಿಮ್?
    ಇ-ಸಿಮ್ ಎಂದರೆ ಎಂಬೆಡೆಡ್ ಸಬ್‍ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಇದು ಮ್ಯಾನುವಲ್ ಸಿಮ್ ರೀತಿಯಂತೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಿಮ್‍ಗಳ ಅವಶ್ಯಕತೆ ಇರುವುದಿಲ್ಲ. ಫೋನುಗಳಲ್ಲಿ ಒಂದು ಸಾಮಾನ್ಯ ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ಇದರ ಜೊತೆ ಇ-ಸಿಮ್ ಮುಖಾಂತರ ಇನ್ನೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಇ-ಸಿಮ್‍ಗಳನ್ನು ಮುಂದಿನ ಪೀಳಿಗೆಯ ಪರಿಣಾಮಕಾರಿ ಸಂವಹನ ತಂತ್ರಜ್ಞಾನವೆಂದೇ ಪರಿಗಣಿಸಲಾಗಿದೆ.

    ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ?
    ಇ-ಸಿಮ್ ತಂತ್ರಜ್ಞಾನಕ್ಕೆ ಭಾರತದ ಕಂಪೆನಿಗಳು ಕೈಜೋಡಿಸಿದ್ದು, ಈಗಾಗಲೇ ಜಿಯೋ ಹಾಗೂ ಏರ್‌ಟೆಲ್‌ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಭಾರತದಲ್ಲಿನ ಇ-ಸಿಮ್ ಫೋನ್‍ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೊಬೈಲ್ ಖರೀದಿಸಿದ ನಂತರ ಗ್ರಾಹಕರು ತಮ್ಮ ಮ್ಯಾನುವಲ್ ಸಿಮ್‍ನೊಂದಿಗೆ ಇನ್ನೊಂದು ಸಿಮ್‍ನ ಅವಶ್ಯಕತೆಯಿದ್ದರೆ ಇ-ಸಿಮ್ ಮುಖಾಂತರ ಮತ್ತೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೂಗಲ್ ಪಿಕ್ಸೆಲ್ 2 ಮೊದಲ ಬಾರಿಗೆ ಇ-ಸಿಮ್ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಪ್ರಸ್ತುತ ಇ-ಸಿಮ್ ವಿಶೇಷತೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?

    ಹೇಗೆ ಸಹಕಾರಿ?
    ಮೆಸೇಂಜಿಗ್ ಅಪ್ಲಿಕೇಶನ್ ಗಳಿಗೆ ಫೋನ್ ನಂಬರ್ ಬೇಕೇಬೇಕು. ಆದರೆ ಒಂದು ಬಾರಿ ಅಪ್ಲಿಕೇಶನ್ ಇನ್ ಸ್ಟಾಲ್ ಆದ ನಂತರ ಸಿಮ್ ತೆಗೆಯಬಹುದು. ಆದರೆ ಈ ಅಪ್ಲಿಕೇಶನ್ ಕೆಲಸ ಮಾಡಲು ಇಂಟರ್ ನೆಟ್ ಸಂಪರ್ಕ ಬೇಕಾಗುತ್ತದೆ. ಉದಾಹರಣೆಗೆ ಭಾರತದ ವ್ಯಕ್ತಿಯೊಬ್ಬರು ಅಮೆರಿಕಕ್ಕೆ ಹೋದರೆ ಮೊಬೈಲ್ ಡೇಟಾ ಮೂಲಕವೇ ಇಂಟರ್ ನೆಟ್/ ಮೆಸೇಜಿಂಗ್ ಆಪಿಕ್ಲೇಶನ್ ಮೂಲಕ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ಕಂಪೆನಿಗಳು ಅಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಡೇಟಾ ಬೇಕಾದರೆ ಅಮೆರಿಕದ ಟೆಲಿಕಾಂ ಕಂಪೆನಿಯ ಸಿಮ್ ಬಳಕೆ ಮಾಡಬೇಕಾಗುತ್ತದೆ. ಸಿಮ್ ತೆಗೆಯುವುದು, ಸಿಮ್ ಹಾಕುವ ಕೆಲಸ ತ್ರಾಸದಾಯಕ. ಈ ಸಮಸ್ಯೆಯನ್ನು ದೂರ ಮಾಡಲು ಇ ಸಿಮ್ ಸಹಕಾರಿಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?

    ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?

    ಕ್ಯಾಲಿಫೋರ್ನಿಯಾ: ಆ್ಯಪಲ್ ಪಾರ್ಕ್ ನ ಸ್ಟೀವ್ ಜಾಬ್ಸ್ ಸಭಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅತಿ ವಿನೂತನ ಹಾಗೂ ಬಹು ನಿರೀಕ್ಷಿತ ಡ್ಯುಯಲ್ ಸಿಮ್ ಅವತರಣೆಯ ಸ್ಮಾರ್ಟ್ ಫೋನ್ ಗಳನ್ನು ಆ್ಯಪಲ್ ಬಿಡುಗಡೆಗೊಳಿಸಿದೆ.

    ಜಗತ್ತಿನ ಅತಿ ಬೇಡಿಕೆಯ ಹಾಗೂ ಪ್ರತಿಷ್ಟಿತ ಸ್ಮಾರ್ಟ್ ಫೋನ್‍ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಆ್ಯಪಲ್ ತನ್ನ ನೂತನ ಡ್ಯುಯಲ್ ಸಿಮ್ ವಿಭಾಗದಲ್ಲಿ ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಸ್ಮಾರ್ಟ್‍ಫೋನ್‍ಗಳನ್ನು ಬುಧವಾರ ಅನಾವರಣಗೊಳಿಸಿದೆ.

    ನೂತನವಾಗಿ ಡ್ಯುಯಲ್ ಸಿಮ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಹಾಗೂ ಸ್ಮಾರ್ಟ್ ಫೋನ್‍ಗಳಲ್ಲಿ ಅತ್ಯಾಧುನಿಕ ಸುಧಾರಿತ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಸದ್ಯ ಡ್ಯುಯಲ್ ಸಿಮ್ ಚೀನಾ ಹಾಗೂ ಇತರೆ ದೇಶಗಳಲ್ಲಿ ಲಭ್ಯವಿರಲಿದ್ದು, ಸೆಪ್ಟೆಂಬರ್ 28 ರಿಂದ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದೆ.

    ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಫೋನಿನ ಗುಣ ವೈಶಿಷ್ಟ್ಯಗಳೇನು?
    ಬೆಲೆ ಎಷ್ಟು?
    4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ 1,09,900 ರೂಪಾಯಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ 1,24,900 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ 1,44,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಸ್ಪೇಸ್ ಗ್ರೇ, ಸಿಲ್ವರ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    157.5 x 77.4 x 7.7 ಮಿ.ಮೀ., 208 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್ ಬೈ), 6.5 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1242×2688 ಪಿಕ್ಸೆಲ್, 19.5:9 ಅನುಪಾತ 458ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 7 ಎಂಪಿ, ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12+12 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.

    ಐಫೋನ್ ಎಕ್ಸ್ಎಸ್ ಫೋನಿನ ಗುಣ ವೈಶಿಷ್ಟ್ಯಗಳೇನು?
    ಬೆಲೆ ಎಷ್ಟು?
    4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ 99,900 ರೂಪಾಯಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ 1,14,900 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ 1,34,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಸ್ಪೇಸ್ ಗ್ರೇ, ಸಿಲ್ವರ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    143.6 x 70.9 x 7.7 ಮಿ.ಮೀ., 177 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಮತ್ತು ಇ-ಸಿಮ್), 5.8 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1125×2436 ಪಿಕ್ಸೆಲ್, 19.5:9 ಅನುಪಾತ 458ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 7 ಎಂಪಿ ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12+12 ಎಂಪಿ ಡ್ಯುಯಲ್ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.

    ಐಫೋನ್ ಎಕ್ಸ್ಆರ್ ಫೋನಿನ ಗುಣ ವೈಶಿಷ್ಟ್ಯಗಳೇನು?
    ಬೆಲೆ ಎಷ್ಟು?
    3 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ ಅಂದಾಜು 76,900 ರೂಪಾಯಿ, 3 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ ಅಂದಾಜು 81,900 ರೂಪಾಯಿ ಹಾಗೂ 3 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ ಅಂದಾಜು 91,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಬ್ಲಾಕ್, ರೆಡ್, ಎಲ್ಲೊ, ಬ್ಲೂ ಹಾಗೂ ಕೋರಲ್ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    150.9 x 75.7 x 8.3 ಮಿ.ಮೀ., 194 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಮತ್ತು ಇ-ಸಿಮ್), 6.1 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(828×1792 ಪಿಕ್ಸೆಲ್, 19.5:9 ಅನುಪಾತ 326ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 3 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 3 ಜಿಬಿ ರ‍್ಯಾಮ್/256 ಜಿಬಿ ಆಂತರಿಕ ಮೆಮೊರಿ ಹಾಗೂ 3 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 12 ಎಂಪಿ, ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.

    https://youtu.be/9m_K2Yg7wGQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv