Tag: ಆಹಾರ ಮೇಳೆ

  • ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು: ನಾಡಹಬ್ಬ ದಸರಾಗೆ ಚಾಲನೆ ಸಿಕ್ಕಾಗಿನಿಂದಲೂ ಅರಮನೆ ನಗರಿಯಲ್ಲಿ ದಿನಕ್ಕೊಂದು ಸ್ಪರ್ಧೆಗಳು ಗಮನಸೆಳೆಯುತ್ತಲೇ ಇದ್ದು, ಇಂದು ನಗರದ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆ ಜನರಿಗೆ ಮನರಂಜನೆ ನೀಡಿತ್ತು.

    ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲನೆಯದಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು, ನಂತರ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿತ್ತು. ಲಾಟರಿ ಮೂಲಕ ಪ್ರತಿ ವಿಭಾಗಗಳಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಸ್ಪರ್ಧೆಗೆ ಪಚ್ ಬಾಳೆಯನ್ನು ಬಳಸಲಾಗಿತ್ತು.

    ಶಾಲಾ ಮಕ್ಕಳ ವಿಭಾಗದಲ್ಲಿ 1.10 ನಿಮಿಷದಲ್ಲಿ ನಾಲ್ಕು ಬಾಳೆಹಣ್ಣು ತಿನ್ನುವ ಮೂಲಕ ಪಿರಿಯಾಪಟ್ಟಣದ ಭರತ್ ಮೊದಲನೇ ಸ್ಥಾನ ಪಡೆದುಕೊಂಡರೆ, 1.15 ನಿಮಿಷಗಳ ಮೂಲಕ ಯುಕ್ತ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ, 1.30 ನಿಮಿಷದಲ್ಲಿ 5 ಬಾಳೆಹಣ್ಣು ತಿಂದ ಮಹದೇವಸ್ವಾಮಿ ಪ್ರಥಮ ಸ್ಥಾನ ಗೆದ್ದರೆ, 1.45 ನಿಮಿಷಗಳ ಮೂಲಕ ಆಲಾಮ್ ಎರಡನೇ ಸ್ಥಾನ ಪಡೆದರು. ಅಲ್ಲದೇ ಮಹಿಳೆಯರ ವಿಭಾಗದಲ್ಲಿ ಪ್ರತಿಯೊಬ್ಬರಿಗೂ 4 ಬಾಳೆಹಣ್ಣುಗಳನ್ನು ನೀಡಲಾಗಿತ್ತು. 1.2 ನಿಮಿಷದಲ್ಲಿ ನಾಲ್ಕೂ ಬಾಳೆಹಣ್ಣು ತಿನ್ನುವ ಮೂಲಕ ಅಮೃತ ಪ್ರಥಮ ಸ್ಥಾನ ಪಡೆದರೆ, 1.8 ನಿಮಿಷದಲ್ಲಿ ತಿಂದ ಶೋಭಾ ಎರಡನೇ ಸ್ಥಾನ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು: ನಗರದಲ್ಲಿ ಆಯೋಜಿಸಿದ್ದ ಆಹಾರ ಮೇಳದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.

    ನಾಡಹಬ್ಬ ದಸರಾಗೆ ಚಾಲನೆ ಸಿಕ್ಕ ನಂತರ ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ವಿಶಿಷ್ಟ ಕಾರ್ಯಕ್ರಮಗಳು ನಾಡಿನ ಜನರನ್ನು ಕೈಬೀಸಿ ಕರೆಯುತ್ತಿವೆ. ಬುಧವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಶಿಷ್ಟವಾಗಿ ಮಹಿಳೆಯರಿಗಾಗಿಯೇ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಕರು ಹಮ್ಮಿಕೊಂಡಿದ್ದರು. ಈ ಸ್ಪರ್ಧೆಗೆ ಲಕ್ಕಿ ಡಿಪ್ ಮೂಲಕ 10 ಜನರನ್ನು ಆಯ್ಕೆ ಮಾಡಿ ಇಡ್ಲಿ ತಿನ್ನುವ ಸ್ಪರ್ಧೆಗೆ ಆರಿಸಲಾಗಿತ್ತು.

    ಮಹಿಳೆಯರು ಅಡುಗೆ ಮಾಡಲು ಸೈ, ತಿನ್ನುವುದಕ್ಕೆ ಸೈ ಎನ್ನುವಂತೆ ತಾ ಮುಂದು ನಾ ಮುಂದು ಎಂಬಂತೆ ಗಬಗಬನೆ ಇಡ್ಲಿಯನ್ನು ತಿಂದರು. ಆದರೆ ಪಡುವಾರಹಳ್ಳಿಯ ಲಲಿತ ಪುಟ್ಟೇಗಾಡ ಎಂಬವರು ಎಲ್ಲರಿಗಿಂತ ಮೊದಲು ಇಡ್ಲಿಯನ್ನು ತಿಂದು ಮುಗಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಮಣಿಯರು ಇಡ್ಲಿಯನ್ನು ತಿನ್ನುವ ಸ್ಪರ್ಧೆಯನ್ನು ನೋಡಲು ಜನ ಮುಗಿಬಿದ್ದಿದ್ದರು.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಶಾಸ್ತ್ರೋಕ್ತವಾಗಿ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ್ದರು.

    ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ಇದಲ್ಲದೇ ಬುಧವಾರ ಬೆಳಗ್ಗೆ 11 ಗಂಟೆಗೆ ಅರಮನೆಯಲ್ಲಿ ಅದ್ಧೂರಿಯಾಗಿ ಖಾಸಗಿ ದರ್ಬಾರ್ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv