Tag: ಆಹಾರ ಕಿಟ್

  • ಉಚಿತ ದಿನಸಿಗಾಗಿ ಕ್ಯೂ- ಸಾಮಾಜಿಕ ಅಂತರಕ್ಕೆ ಹಾಕಿದ್ದ ಬಾಕ್ಸ್ ನಲ್ಲಿ ಇಬ್ಬರು

    ಉಚಿತ ದಿನಸಿಗಾಗಿ ಕ್ಯೂ- ಸಾಮಾಜಿಕ ಅಂತರಕ್ಕೆ ಹಾಕಿದ್ದ ಬಾಕ್ಸ್ ನಲ್ಲಿ ಇಬ್ಬರು

    -ನಾ ಮುಂದು ತಾ ಮುಂದು ಅಂತ ಮುಗಿಬಿದ್ದ ಜನ

    ಬೆಂಗಳೂರು: ಉಚಿತ ಆಹಾರ ಕಿಟ್ ಪಡೆಯಲು ಜನರು ಮುಗಿಬಿದ್ದಿರುವ ಘಟನೆ ಬೆಂಗಳೂರಿನ ಓಕುಳಿಪುರಂನಲ್ಲಿ ನಡೆದಿದೆ.

    ಓಕುಳಿಪುರಂನಲ್ಲಿ ಜೆಡಿಎಸ್ ಮುಖಂಡ ಹಿರಿಗೌಡರು ಸ್ಥಳೀಯ ನಿವಾಸಿಗಳಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದರು. ಅಕ್ಕಿ, ಬೇಳೆ ಸಿಗುವ ವಿಚಾರ ತಿಳಿದು ಜನರು ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳುವುದನ್ನು ಮರೆತು ಮುಗಿಬಿದ್ದಿದ್ದರು. ದಿನಸಿ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಹಾಕಲಾಗಿತ್ತು. ಆದ್ರೆ ಈ ಒಂದು ಬಾಕ್ಸ್ ನಲ್ಲಿ ಇಬ್ಬಿಬ್ರು ನಿಂತಿರುವ ದೃಶ್ಯಗಳು ಕಂಡು ಬಂದವು.

    ಸ್ಥಳದಲ್ಲಿ ನೂರಾರು ಜನರು ಸೇರಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರನ್ನು ಕಳುಹಿಸುವಲ್ಲಿ ಸುಸ್ತಾದರು.

  • ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ

    ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿವರಿಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆ ಮನೆಗೂ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿ.ಕೆ.ಎಸ್.ಕೆಂಪರಾಜು ಬಡವರಿಗೆ ಕಿಟ್‍ಗಳನ್ನ ವಿತರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿ ಲಾಕ್‍ಡೌನ್ ಜಾರಿಗೆ ತಂದಿದೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಬಡ ಜನರು ಹಾಗೂ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತಿದ್ದಾರೆ.

    ಕೆಂಪರಾಜು ನೇತೃತ್ವದಲ್ಲಿ ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆಮನೆಗೂ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವಿನೊಂದಿಗೆ ತಮ್ಮ ಮನೆಯಲ್ಲಿ ದಿನಸಿ ಪದಾರ್ಥಗಳನ್ನ ಪ್ಯಾಕ್ ಮಾಡಿದ್ದಾರೆ. ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಡವರ ಮನೆಗಳಿಗೆ ನೇರವಾಗಿ ದಿನಸಿ ಕಿಟ್‍ಗಳನ್ನು ತಲುಪಿಸುತಿದ್ದಾರೆ.

    ನೀವು ಮನೆಯಿಂದ ಹೊರಗೆಬರದೆ ಈ ಕೊರೊನಾ ವೈರಸ್ ತಡೆಯಲು ಸಹಕರಿಸಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಇವರ ಕಾರ್ಯಕ್ಕೆ ಜನರು ಸಹ ಅಭಿನಂದನೆ ಸಲ್ಲಿಸಿದ್ದಾರೆ.

  • ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

    ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

    ಚಿಕ್ಕಮಗಳೂರು: ದೇಶದಲ್ಲಿ ಲಾಕ್‍ಡೌನ್ ಆದಾಗಿನಿಂದ ನಗರದ ಇಂದಿರಾಗಾಂಧಿ ಬಡಾವಣೆಯ ಹಕ್ಕಿಪಿಕ್ಕಿ ಕಾಲೋನಿಯ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ನಮಗೆ ಆಹಾರ ಸಾಮಾಗ್ರಿಗಳ ಕಿಟ್ ಕೂಡ ಸಿಕ್ಕಿಲ್ಲ, ಆಹಾರ ಧಾನ್ಯಗಳೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ಹಕ್ಕಿಪಿಕ್ಕಿ ಜನಾಂಗಕ್ಕೆ ಸಮರ್ಪಕವಾದ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ತಹಶೀಲ್ದಾರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ನಗರ ಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳದಲ್ಲಿ 28 ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದವರು ವಾಸವಿರುವುದು ಕಂಡುಬಂದಿದ್ದು, 25 ಕುಟುಂಬಗಳಿಗೆ ಪಡಿತರ ಚೀಡಿ ಇದ್ದು ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯಂತೆ ಕಲ್ದೊಡ್ಡಿ ಸೊಸೈಟಿಯಲ್ಲಿ ಪಡಿತರ ವಿತರಿಸಲಾಗಿದೆ.

    ಕಾರ್ಡ್ ಹೊಂದಿರುವವರ ಪೈಕಿ 4 ಕುಟುಂಬಗಳಲ್ಲಿ ಕೆಲ ಸದಸ್ಯರ ಹೆಸರು ಸೇರ್ಪಡೆಯಾಗಿಲ್ಲ. 2 ಕುಟುಂಬ ಕಾರ್ಡ್ ಪಡೆಯದ ಹಿನ್ನೆಲೆ ರದ್ದಾಗಿದ್ದು, 1 ಕುಟುಂಬಕ್ಕೆ ಪಡಿತರ ಚೀಟಿ ಸಿಕ್ಕಿಲ್ಲ. ಕಡುಬಡತನ ಕುಟುಂಬಗಳಿಗೆ ಸ್ವಯಂ ಸೇವಾ ಸಂಘ-ಸಂಸ್ಥೆಗಳ ನೆರವಿನೊಂದಿಗೆ ತಾಲೂಕು ಆಡಳಿತದ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ಸದ್ಯಕ್ಕೆ ಇಲ್ಲಿನ ಕುಟುಂಬಗಳಿಗೆ ಆಹಾರದ ಕೊರತೆ ಇಲ್ಲ. ಮುಂದಿನ ದಿನಗಳಲ್ಲೂ ಯಾವುದೇ ರೀತಿಯ ಆಹಾರ ಪದಾರ್ಥಗಳ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

  • ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    – ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ

    ನೆಲಮಂಗಲ: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆ, ಹಲವೆಡೆ ಹಲವಾರು ರೀತಿ ಸಂಘ ಸಂಸ್ಥೆಗಳು ನೆರವನ್ನು ನೀಡುತ್ತಿದೆ. ಇದೇ ಹಾದಿಯಲ್ಲಿ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಗಳು ಆಹಾರ ಕಿಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿ ಒಂದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹಳೆ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದ ಎಸ್.ಎಮ್ ಟ್ರೇಡರ್ಸ್ ಹಾಗೂ ಕುಮುದ್ವತಿ ವಿಷನ್ ಪ್ರೈ.ಲಿ ಸಹಕಾರ ಹೆಚ್ಚಿನದಾಗಿ ನೀಡಿದೆ. ಸಕ್ಕರೆ, ಸಾಂಬರ್ ಪದಾರ್ಥ, ದಿನಬಳಕೆ ವಸ್ತುಗಳ ವಿತರಣೆ ಮಾಡಿದ್ದು, ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ, ಭಟ್ಟರಹಳ್ಳಿ, ವನ್ನಸಂದ್ರ, ಗಾಂಧಿ ಗ್ರಾಮ, ದೊಡ್ಡಕರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ವಿತರಣೆ ಮಾಡಿದ ಹಳೆ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮಾತನಾಡಿದ ಹಳೆಯ ವಿಧ್ಯಾರ್ಥಿ ಮುನಿರಾಜು, ನಾವು ನಮ್ಮ ಗ್ರಾಮ ನಮ್ಮ ಜನರ ಕ್ಷೇಮ ಎಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆ ಬಾಗಿಲಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಹಾಗೂ ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಹೊಸ ಪ್ರಯತ್ನ ಯಶಸ್ವಿಯಾಗಿದೆ. ಜೀವನದಲ್ಲಿ ಮನುಷ್ಯ-ಮನುಷ್ಯನ ಸ್ನೇಹ ಮುಖ್ಯವಾದ ಜೀವನ ಅವಶ್ಯಕತೆ ಎಂದು ಈ ಕಾರ್ಯಕ್ಕೆ ನಮ್ಮ ತಂಡ ಸಿದ್ಧವಾಗಿದೆ ಎಂದರು. ಈ ವೇಳೆ ಚಿಕ್ಕಹನುಮೇಗೌಡ, ಹನುಮಂತರಾಜು, ಮಹೇಶ್, ಹನುಮಯ್ಯ, ನಾಗರಾಜು, ರುದ್ರೇಶ್, ಮತ್ತಿತರ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

  • ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    – ಶಾಸಕರಿಂದ 4,300 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಗಡಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ರೈತರು ಕೂಡ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿಯನ್ನು ಕಾಡಂಚಿನ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಸವನಗುಡಿ ಗ್ರಾಮದ ಬೆಳ್ಳುಳ್ಳಿ ಮಾದೇಶ ತಮ್ಮ ಐದು ಎಕರೆ ಜಮೀನಿನಲ್ಲಿ, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಕರಿಬೇವಿನಸೊಪ್ಪು ಬೆಳೆದಿದ್ದರು. ಆದರೆ ಈ ತರಕಾರಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ತರಕಾರಿ ಹೊಲದಲ್ಲೇ ಹಾಳಾಗುವ ಬದಲು ಸಂಕಷ್ಟದಲ್ಲಿರುವ ಕುಟುಂಬಗಳಿಗಾದರೂ ಅನುಕೂಲವಾಗಿಲಿ ಎಂದು ಉಚಿತವಾಗಿ ವಿತರಣೆ ಮಾಡಿದ್ದಾರೆ.

    ಮಾದೇಶ್ ತಾವು ಬೆಳೆದ ತರಕಾರಿಯ ಜೊತೆ ಬೇರೆ ರೈತರಿಂದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿಯನ್ನು ಖರೀದಿಸಿದ್ದು, ಅವುಗಳನ್ನು ಪ್ಯಾಕ್ ಮಾಡಿದ್ದಾರೆ. ನಂತರ ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾವಿನಮೂಲೆ, ಯರಗಬಾಳು, ನಲ್ಲಿಕತ್ರಿ, ಉದ್ದಟ್ಟಿ, ಜೀರಿಗೆಗದ್ದೆ, ಮಾವತ್ತೂರು ಮೊದಲಾದ ಗ್ರಾಮಗಳಿಗೆ ಹೋಗಿ, ಮನೆಮನೆಗೆ ಉಚಿತವಾಗಿ ವಿತರಿಸಿದ್ದಾರೆ.

    ಜೊತೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಹನೂರು ಠಾಣೆಯ ಪೊಲೀಸ್ ಕುಟುಂಬಗಳಿಗೂ ತರಕಾರಿ ವಿತರಿಸಿದ್ದು, ಜನರ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

    ಆಹಾರ ಕಿಟ್ ವಿತರಣೆ:
    ಶಾಸಕ ನರೇಂದ್ರ ಗಿರಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಿಸಿದ್ದಾರೆ.

    ಮೀಣ್ಯಂ, ಜಲ್ಲಿಪಾಳ್ಯ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮದ ಗಿರಿಜನ ಕುಟುಂಬಕ್ಕೆ ಅಕ್ಕಿ, ಬೆಳೆ, ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಿದ್ದಾರೆ. ಸುಮಾರು 4,300ಕ್ಕೂ ಹೆಚ್ಚು ಗಿರಿಜನ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದು, ಶಾಸಕರ ಕಾರ್ಯಕ್ಕೆ ಗಿರಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    – ಪಬ್ಲಿಕ್ ಹೀರೋ ವಿಶು ಶೆಟ್ಟಿ ತಂಡದ ಸಹಾಯ

    ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್ ಸಿಬ್ಬಂದಿ ಹಾಗೂ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ 105 ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.

    ಸರಕಾರಿ ಆಸ್ಪತ್ರೆಯ ಕೆಲಸವಾದರೂ ಇವರು ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವುದರಿಂದ ಇವರ ವೇತನ ಬಹಳ ಕಡಿಮೆ. ಕೆಲವು ಸಿಬ್ಬಂದಿಯ ಜೀವನ ನಿರ್ವಹಣೆ ಕೊರೊನಾ ಸಮಸ್ಯೆಯಿಂದ ಇನ್ನಷ್ಟು ಬಿಗಡಾಯಿಸಿದೆ. ಈ ಬಗ್ಗೆ ಸಮಾಜ ಸೇವಕ, ಪಬ್ಲಿಕ್ ಹೀರೋ ವಿಶು ಶೆಟ್ಟಿಯವರಿಗೆ ಮಾಹಿತಿ ಸಿಕ್ಕಿದೆ.

    ವಿಶು ಶೆಟ್ಟಿಯವರಿಗೆ ತಿಳಿದ ಕೂಡಲೇ ತಮ್ಮ ಮಿತ್ರರಾದ ಡೊನಾಲ್ಡ್ ಸಾಲ್ದಾನರ ಗಮನಕ್ಕೆ ತಂದಿದ್ದಾರೆ. ತುರ್ತಾಗಿ ಸ್ಪಂದಿಸಿದ ಡೊನಾಲ್ಡ್ ಸಾಲ್ದಾನರವರು ನಾಗರಿಕ ಆರೋಗ್ಯ ವೇದಿಕೆ ಮತ್ತು ಎಸ್‍ವಿಪಿ ಫೌಂಡೇಶನ್ ಮುಖಾಂತರ 55 ಆಹಾರದ ಕಿಟ್ ನೀಡಿದ್ದಾರೆ. ಉಳಿದ 50 ಆಹಾರದ ಕಿಟ್ ವಿಶು ಶೆಟ್ಟಿಯವರು ನೀಡಿ ಸಹಕರಿಸಿದರು.

    ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅಮೂಲ್ಯದ್ದಾಗಿದೆ. ಅವರು ಅಸಹಾಯಕ ಪರಿಸ್ಥಿತಿಯಲ್ಲಿ ಇರುವುದಕ್ಕೆ ವಿಶು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಶ್ರಮಿಸುವ ವ್ಯಕ್ತಿಗೆ ಅಸಹಾಯಕತೆ ಬರಬಾರದು. ಸರ್ಕಾರ ಅವರ ಆರ್ಥಿಕ ಮತ್ತು ಮನೆಯ ಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಬೇಕು ಎಂದು ವಿಶು ಶೆಟ್ಟಿ ಪಬ್ಲಿಕ್ ಟಿವಿ ಮೂಲಕ ಒತ್ತಾಯಿಸಿದ್ದಾರೆ.

  • ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

    ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡಲು ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಗೆ ಅವಕಾಶ ಕೊಟ್ಟವರು ಯಾರು? ಸಚಿವರು ಮಾಡಬೇಕಾದ ಕಾರ್ಯವನ್ನು ಅವರ ಪುತ್ರ ಮಾಡಿದ್ಯಾಕೆ ಅನ್ನೋ ಅನುಮಾನ ಹುಟ್ಟುಹಾಕಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ತಂದೆಯ ಬದಲಾಗಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಸ್ಪರ್ಧೆ ಮಾಡುವ ಉದ್ದೇಶದಿಂದ ಈಗಿನಿಂದಲೇ ಚುನಾವಣಾ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

    ಒಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ತಂದೆಯ ಹೆಸರಿನಲ್ಲಿ ಮಗ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

  • ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಲಾಕ್‍ಡೌನ್ ಸಂದರ್ಭದಲ್ಲಿ ಅನೇಕರು ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಡುವೆ ಕ್ಷೇತ್ರದ ಜನತೆಗೆ ಸಹಾಯ ಹಸ್ತ ಚಾಚುವ ಕೆಲಸಕ್ಕೆ ಮುಂದಾಗಿದ್ದಾರೆ.

    ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬಡವರು, ನಿರ್ಗತಿಕರಿಗೆ ಆಹಾರ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಆಹಾರದ ಕಿಟ್ ವಿತರಿಸಿದ್ದಾರೆ. ಸುಮಾರು ಎಂಟು ಸಾವಿರ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಧಾನ್ಯ ವಿತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಬಡವರಿಗೆ ಅಕ್ಕಿ ವಿತರಿಸುತ್ತಿದೆ. ಆದರೆ ಉಳಿದ ಪದಾರ್ಥಗಳಿಗೆ ಜನರು ಪರದಾಡುವಂತಾಗಿದೆ. ಇದನ್ನು ಮನಗಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಕ್ಕಿ, ಬೇಳೆ, ಅವರೆಕಾಳು, ಹುರುಳಿ ಕಾಳು, ಹಲಸಂದೆ, ಅಡುಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಉಪ್ಪು ಸೇರಿದಂತೆ ಅತ್ಯಗತ್ಯ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿ ಬಡವರಿಗೆ ಹಂಚುತ್ತಿದ್ದಾರೆ.

    ಒಂದೂವರೆ ಸಾವಿರಕ್ಕೂ ಹೆಚ್ಚು ಬುಡಕಟ್ಟು ಸೋಲಿಗರು ಸೇರಿದಂತೆ ಎಂಟು ಸಾವಿರ ಬಡ ಕೂಲಿಕಾರ್ಮಿಕ ಕುಟುಂಬಗಳಿಗೆ ಅವರು ಆಹಾರ ಧಾನ್ಯ ವಿತರಿಸಿದ್ದಾರೆ. ನನಗೆ ಪ್ರಚಾರ ಬೇಡ, ಕ್ಷೇತ್ರದ ಜನರ ಹಿತ ಕಾಯವುದು ನನ್ನ ಧರ್ಮ. ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

  • ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ  ಪಾಲನೆಯಾಗದ ಸಾಮಾಜಿಕ ಅಂತರ

    ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ ಪಾಲನೆಯಾಗದ ಸಾಮಾಜಿಕ ಅಂತರ

    ರಾಯಚೂರು: ಕೊರೊನಾ ಮಹಾಮಾರಿ ತಲ್ಲಣ ಉಂಟು ಮಾಡಿದ್ದು ಎಷ್ಟೇ ಕಠೀಣ ನಿರ್ಧಾರ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಜನ ಮಾತ್ರ ಆಹಾರ ಕಿಟ್‍ಗಾಗಿ ಮುಗಿಬಿದ್ದಿದ್ದಾರೆ.

    ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆಹಾರ ಕಿಟ್‍ಗಾಗಿ ಜನ ನೂಕುನುಗ್ಗಲು ಮಾಡಿ ಕಿತ್ತಾಡಿಕೊಂಡಿದ್ದಾರೆ. ಇದರಿಂದಾಗಿ ಆಹಾರ ಕಿಟ್ ವಿತರಣೆಯನ್ನೇ ನಿಲ್ಲಿಸಲಾಯಿತು.

    ಕೆಲ ದಾನಿಗಳು ನಗರದ ಎಪಿಎಂಸಿಯಲ್ಲಿ ಹಮಾಲರು ಸೇರಿ 1,500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದರು. ಆದರೆ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಹಮಾಲರು ಹಾಗೂ ಅವರ ಕುಟುಂಬ ಆಹಾರ ಕಿಟ್‍ಗಾಗಿ ನೂಕುನುಗ್ಗಲು ಮಾಡಿದರು. ಕಿಟ್ ಪಡೆಯಲು ಮಹಿಳೆಯರು ಹಾಗೂ ಪುರುಷರು ಗುಂಪು ಸೇರಿ ಸಾಮಾಜಿಕ ಅಂತರವನ್ನೇ ಮರೆತರು. ಎಪಿಎಂಸಿ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಆಹಾರ ಕಿಟ್ ಗಾಗಿ ಕಿತ್ತಾಡಿದರು. ಇದರಿಂದಾಗಿ ಕೆಲಕಾಲ ಆಹಾರ ವಿತರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು.

  • ಇನ್ಫೋಸಿಸ್ ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ಪ್ರಚಾರ

    ಇನ್ಫೋಸಿಸ್ ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ಪ್ರಚಾರ

    ರಾಯಚೂರು: ಕೊರೊನಾ ವೈರಸ್ ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ ಕೆಲವು ಸಂಘಸಂಸ್ಥೆಗಳು ಆಹಾರ ಕಿಟ್ ಹಂಚಿಕೆ ಮಾಡುತ್ತಿವೆ. ಆದರೆ ರಾಯಚೂರು ಸೇರಿದಂತೆ ಹಲವೆಡೆ ಕೆಲ ಬಿಜೆಪಿ ಮುಖಂಡರು ಕಿಟ್ ಹಂಚಿಕೆಯಲ್ಲೂ ಪ್ರಚಾರ ರಾಜಕಾರಣ ಮಾಡುತ್ತಿದ್ದಾರೆ.

    ಇನ್ಫೋಸಿಸ್ ನೀಡಿದ ಕಿಟ್ ವಿತರಣೆಯಲ್ಲಿ ಬಿಜೆಪಿ ಮುಖಂಡರ ರಾಜಕಾರಣ ನಡೆಸಿದ್ದಾರೆ. ಅಕ್ಷಯ ಪಾತ್ರೆ ಯೋಜನೆಯಡಿ ಇನ್ಫೋಸಿಸ್ ನಿಂದ ನೀಡಲಾಗಿದ್ದ ಕಿಟ್ ಗಳ ಮೇಲೆ ತಮ್ಮ ಫೋಟೋ ತಮ್ಮ ಸಂಸ್ಥೆ ಹೆಸರು ಹಾಕಿಕೊಂಡು ರಾಜಕಾರಣಿಗಳು ಕಿಟ್ ವಿತರಿಸುತ್ತಿದ್ದಾರೆ. ಇದನ್ನು ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ರಾಯಚೂರಿನ ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿಯಿಂದ ಪ್ರಚಾರ ನಡೆದಿದೆ. ಬಿಜೆಪಿ ಮುಖಂಡರ ಕೀಳು ಮಟ್ಟದ ಪ್ರಚಾರ ರಾಜಕೀಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.