ಪಾಟ್ನಾ: ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ 8 ವರ್ಷದ ಮಗನ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ದ ಮನಕಲಕುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ನಳಂದಾದ ಸೀತಾ ಬಿಘಾ ಪ್ರದೇಶದ ನಿವಾಸಿಯಾಗಿದ್ದ ಸಾಗರ್ ಕುಮಾರ್(8) ಮೃತ ದುರ್ದೈವಿ.

ಮಂಗಳವಾರ ಬೆಳಿಗ್ಗೆ ಸೈಕ್ಲಿಂಗ್ ಮುಗಿಸಿ ಬಾಲಕ ಮನೆಗೆ ಬಂದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆಗ ತಕ್ಷಣ ಪೋಷಕರು ಆತನನ್ನು ಸಮೀಪದ ಖಾಸಗಿ ಕ್ಲಿನಿಕ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಗನನ್ನು ತಂದೆ ತಾಯಿ ಸದರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವ ಮೊದಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು.
ಮೃತದೇಹ ತೆಗೆದುಕೊಂಡು ಹೋಗಲು ಅಂಬುಲೆನ್ಸ್ ನೀಡಿ ಎಂದು ಪೋಷಕರು ಆಸ್ಪತ್ರೆ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆಯ ಯಾವ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಕ್ಯಾರೆ ಅಂದಿಲ್ಲ. ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಬೇಸತ್ತು ಬೇರೆ ದಾರಿ ಕಾಣದೆ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

ಮೃತದೇಹಗಳನ್ನು ಸಾಗಿಸುವ ಸಲುವಾಗಿ ಸದರ್ ಆಸ್ಪತ್ರೆಗೆ ವಾಹನಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಮರಣಹೊಂದಿದ ಯಾವುದೇ ರೋಗಿಯ ಮೃತದೇಹವನ್ನು ಸಾಗಿಸಲು ಕುಟುಂಬದವರೊಂದಿಗೆ ಮಾತನಾಡಿ, ವಾಹನವನ್ನು ನೀಡುವುದು ನಿಯೋಜಿತ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಸಾಗರ್‍ನ ತಂದೆ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಹಾಯಕ್ಕಾಗಿ ಆಸ್ಪತ್ರೆಯ ಆವರಣದಲ್ಲಿ ಗೋಳಾಡಿದರೂ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಆತನ ಸಹಾಯಕ್ಕೆ ಬಾರದೆ ಅಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ನಳಂದಾ ಜಿಲ್ಲಾಧಿಕಾರಿ (ಡಿಎಂ) ಯೋಗೇಂದ್ರ ಸಿಂಗ್ ಅವರನ್ನು ಪ್ರಶ್ನಿಸಿದಾಗ, ಇದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದರು. ಅಲ್ಲದೆ ಆಸ್ಪತ್ರೆಯ ಅಧಿಕಾರಿಗೆ ಕೇಳಿದರೆ, ಬಾಲಕನ ಕುಟುಂಬಕ್ಕೆ ವಾಹನದ ಭರವಸೆ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ಅಂಬುಲೆನ್ಸ್ ಲಭ್ಯವಿಲ್ಲದ ಕಾರಣ ಕುಟುಂಬವನ್ನು ಕಾಯುವಂತೆ ಹೇಳಿದ್ದೆವು. ಆಗ ತಂದೆ ಮೃತ ದೇಹವನ್ನು ಹೊತ್ತುಕೊಂಡು ಹೊರಟುಹೋದರು ಎಂದು ತಿಳಿಸಿದ್ದಾರೆ.

ಮಗುವನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಸಾವನ್ನಪ್ಪಿದೆ. ಈ ಬಗ್ಗೆ ತಿಳಿದ ಬಳಿಕ ಬಾಲಕನ ಪೋಷಕರು ಆತುರದಿಂದ ಮಗನ ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ರಾಮ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಮೆದುಳಿನ ಉರಿಯೂತ ಕಾಯಿಲೆಗೆ (ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್‍ಗೆ – ಎಇಎಸ್) ಬಿಹಾರ ತತ್ತರಿಸಿ ಹೋಗಿದೆ. ಈವರೆಗೂ ಈ ಕಾಯಿಲೆಗೆ 167 ಮಕ್ಕಳು ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೂ ಎಇಎಸ್‍ಗೆ ತುತ್ತಾದ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಬೇಕು ಎಂದು ಸೂಚಿಸಲಾಗಿದೆ.