Tag: ಆಸ್ಪತ್ರಗೆ ಬೀಗ

  • ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಸರ್ಕಾರಿ ಆಸ್ಪತ್ರೆಗೆ ಬೀಗ- ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಯಾದಗಿರಿ: ಭಾನುವಾರ ಎಂಬ ಕಾರಣಕ್ಕೆ ವೈದ್ಯರು, ಸಿಬ್ಬಂದಿ ಸರ್ಕಾರಿ ಆಸ್ಪತ್ರೆ ಬಂದ್ ಮಾಡಿದ್ದು, ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯೊಬ್ಬರು ನರಳಾಡಿ ಕೊನೆಗೆ ಟಂಟಂ ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಭಾನುವಾರವೆಂದು ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಬಲಶೆಟ್ಟಿಹಾಳ ಗ್ರಾಮದ ನಿಂಗಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಅವರನ್ನು ಶ್ರೀನಿವಾಸಪುರ ಸರ್ಕಾರಿ ಪ್ರಥಾಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ಬೀಗ ಹಾಕಿದ್ದ ಕಾರಣಕ್ಕೆ ವೈದ್ಯರು ಸಿಗದೆ ನಿಂಗಮ್ಮ ಹೆರಿಗೆ ನೋವಿನಿಂದ ನರಲಾಡಬೇಕಾಯಿತು.

    ಬೇರೆ ದಾರಿ ಕಾಣದೆ ಮಹಿಳೆಯ ಕುಟುಂಬಸ್ಥರು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ, ಟಂಟಂ ವಾಹನದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ಟಂಟಂ ವಾಹನದಲ್ಲಿ ಹೆರಿಗೆಯಾಗಿದ್ದು, ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದಾರೆ.

    ಸರ್ಕಾರಿ ಆಸ್ಪತ್ರೆಯ ಬಾಗಿಲು ಮುಚ್ಚಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಭಾನುವಾರವೆಂದು ತಮ್ಮ ಪಾಡಿಗೆ ವೈದ್ಯರು, ಸಿಬ್ಬಂದಿ ಹೋಗಿಬಿಟ್ಟರೆ ರೋಗಿಗಳ ಗತಿಯೇನು? ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.