Tag: ಆಸ್ತಿ

  • ಗಂಡ-ಹೆಂಡತಿ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಗಂಡ-ಹೆಂಡತಿ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    – ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿ

    ಯಾದಗಿರಿ: ಗಂಡ-ಹೆಂಡತಿ ನಡುವೆ ನಡೆದ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗಾಜಕೂಟ ಗ್ರಾಮದಲ್ಲಿ ನಡೆದಿದೆ.

    ನರಸಮ್ಮ (40) ಕೊಲೆಯಾದ ಹೆಂಡತಿಯಾಗಿದ್ದು, ಈಕೆಯನ್ನು ಗಂಡ ಭೀಮಣ್ಣ (45) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ನರಸಮ್ಮ ಭೀಮಣ್ಣನ ಎರಡನೆಯ ಹೆಂಡತಿ. ಮೊದಲ ಹೆಂಡತಿ ಮೃತಪಟ್ಟ ಹಿನ್ನೆಲೆಯಲ್ಲಿ ಭೀಮಣ್ಣ, ನರಸಮ್ಮಳನ್ನು ಎರಡನೇಯ ಮದುವೆಯಾಗಿದ್ದ. ಮೊದಲ ಹೆಂಡತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮಕ್ಕಳಿಗೆ ಆಸ್ತಿ ನೀಡುವ ವಿಚಾರವಾಗಿ ಭೀಮಣ್ಣ ಮತ್ತು ನರಸಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ತಡ ರಾತ್ರಿ ಜಗಳ ತಾರಕಕ್ಕೇರಿ ನರಸಮ್ಮಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿ ಪರಾರಿಯಾಗುತ್ತಿದ್ದ ಭೀಮಣ್ಣನನ್ನು ಗ್ರಾಮಸ್ಥರು ಹಿಡಿದು ರಾತ್ರಿಯಿಡಿ ಮರಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೀಮಣ್ಣನನ್ನು ಮರದಿಂದ ಬಿಡಿಸಿ ಠಾಣೆಗೆ ಕರೆದುಕೊಂಡ ಹೋಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಅದಕ್ಕೆ ಬೋರ್ಡ್ ಹಾಕಿದ್ದೇವೆ: ಪ್ರಮೋದಾದೇವಿ

    ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಅದಕ್ಕೆ ಬೋರ್ಡ್ ಹಾಕಿದ್ದೇವೆ: ಪ್ರಮೋದಾದೇವಿ

    ಮೈಸೂರು: ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ನಾವು ಯಾರಿಗೂ ತೊಂದರೆ ಕೊಡಲ್ಲ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

    ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ಹೀಗಾಗಿ ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನಮ್ಮ ಉದ್ದೇಶ ಅಲ್ಲ. ಅಲ್ಲದೆ ಯಾರ ಓಡಾಟವನ್ನೂ ನಿರ್ಬಂಧಿಸಿಲ್ಲ. ಅಗತ್ಯಬಿದ್ದರೆ ಮುಂದೆಯೂ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.

    ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ಬಿ ಖರಾಬ್(ಹಸು ಮೇಯುವ ಸ್ಥಳ) ಅಂತ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ, ಹರ್ಷಗುಪ್ತ ಜಿಲ್ಲಾಧಿಕಾರಿಯಾಗಿದ್ದ ವೇಳೆ ಬಿ ಖರಾಬ್ ಎಂದು ಶುರುವಾಯಿತು. ಬಳಿಕ ವಸ್ತ್ರದ್ ಬಂದ ವೇಳೆ ಅದು ಅರಮನೆ ವಂಶಸ್ಥರಿಗೆ ಸೇರಿದ್ದು ಎಂದು ತೀರ್ಪು ಕೊಟ್ಟಿದ್ದರು. ಬಳಿಕ ಡಿಸಿಯಾಗಿ ಶಿಖಾ ಬಂದ ವೇಳೆ ಸರ್ಕಾರಿ ಭೂಮಿ ಎಂದು ತೀರ್ಪು ಕೊಟ್ಟರು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಜೂನ್ 19 ರಂದು ಹೈಕೋರ್ಟ್ ಅರಮನೆ ವಂಶಸ್ಥರಿಗೆ ಸೇರಿದ ಭೂಮಿ ಎಂದು ತೀರ್ಪು ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರದ ಅರ್ಜಿಯನ್ನು ಕಳೆದ ಡಿಸೆಂಬರ್ 19 ರಂದು ವಜಾ ಮಾಡಿದೆ ಎಂದು ವಿವರಿಸಿದರು.

    ಮೈಸೂರು, ಬೆಂಗಳೂರು ಅರಮನೆಗಳ ವ್ಯಾಜ್ಯ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಈಗಿನ ಸರ್ಕಾರ ತಟಸ್ಥವಾಗಿದೆ. ನಮ್ಮ ಆಸ್ತಿಗಳ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಕೆಲವು ಸರ್ಕಾರಗಳು ಜಾಸ್ತಿ ತೊಂದರೆ ಕೊಟ್ಟಿವೆ. ಕೆಲ ಸರ್ಕಾರಗಳು ಕಡಿಮೆ ತೊಂದರೆ ಕೊಟ್ಟಿವೆ. ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ನಾನು ದೂಷಿಸುವುದಿಲ್ಲ. ಬೆಂಗಳೂರು ಮತ್ತು ಮೈಸೂರು ಅರಮನೆ ಮಾಲೀಕತ್ವದ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಮುಂಬೈ ಪಾಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್‍ನಲ್ಲಿ ವ್ಯಾಜ್ಯ ಹೂಡಿದೆ. ಈ ಪ್ರಕರಣದಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಬೇಕಿದೆ. ಆ ತೀರ್ಪು ಆಧರಿಸಿ ನಮ್ಮ ವ್ಯಾಜ್ಯಗಳು ಇತ್ಯರ್ಥ ಆಗಬೇಕಿದೆ. ನಾವು ದೆಹಲಿಯಲ್ಲಿ ಇದ್ದರೆ ವ್ಯಾಜ್ಯಗಳು ಬೇಗ ಬರೆಹರಿಯುತ್ತಿದ್ದವು. ಮೈಸೂರಿನಲ್ಲೇ ಇರುವುದರಿಂದ ವಿಳಂಬ ಆಗುತ್ತಿರಬಹುದು ಎಂದರು.

    ರಾಜಕೀಯ ನನಗೆ ಸೂಟ್ ಆಗುತ್ತೆ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ. ಈ ಹಿಂದೆಯೂ ಹಲವಾರು ಬಾರಿ ಸ್ಪಷ್ಟನೆ ಕೊಟ್ಟಿದ್ದೇನೆ. ಪದೇ ಪದೇ ಅದನ್ನೇ ಹೇಳೋದಿಕ್ಕೆ ಇಷ್ಟ ಇಲ್ಲ. ಆಡಳಿತ ನಡೆಸುವುದಕ್ಕೆ ನನಗೆ ಕಷ್ಟ ಆಗಲ್ಲ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗಲ್ಲ. ಹೀಗಾಗಿ ನಾನು ರಾಜಕೀಯಕ್ಕೆ ಹೋಗಲ್ಲ ಎಂದು ಹೇಳಿದರು.

  • ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಹೆಸರಿಗೆ ವಿಲ್ ಬರೆದ ರೈತ

    ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಹೆಸರಿಗೆ ವಿಲ್ ಬರೆದ ರೈತ

    – ನಾಯಿ ತಮ್ಮ ಬಗ್ಗೆ ಕಾಳಜಿ ವಹಿಸಿದ್ದೆ ಕ್ರಮ
    – ಮಕ್ಕಳ ವರ್ತನೆಯಿಂದ ಬೇಸತ್ತು ನಾಯಿ ಹೆಸರಿಗೆ ಆಸ್ತಿ

    ಭೋಪಾಲ್: ಹಿರಿಯ ರೈತರೊಬ್ಬರು ತಮ್ಮ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ ವಿಲ್ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾದ ರೈತ ನಾರಾಯಣ ವರ್ಮ(50) ತಮ್ಮ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ ವಿಲ್ ಬರೆದಿದ್ದಾರೆ. ಮಕ್ಕಳ ದುರ್ವರ್ತನೆಯಿಂದ ಬೇಸತ್ತು ಹಿರಿಯ ರೈತ ಈ ನಿರ್ಧಾರ ಕೈಗೊಂಡಿದ್ದಾರೆ. ನಾಯಿಯು ನನಗೆ ಮಗನಿದ್ದಂತೆ. ಹೀಗಾಗಿ ನನ್ನ ಅರ್ಧ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

    ನಾರಾಯಣ ವರ್ಮ ಅವರು ಅರ್ಧ ಆಸ್ತಿಯನ್ನು ತಮ್ಮ ಎರಡನೇ ಪತ್ನಿ ಚಂಪಾ ಹೆಸರಿಗೆ ಬರೆದಿದ್ದು, 50 ವರ್ಷದ ರೈತನ ಬಳಿ ಒಟ್ಟು 18 ಎಕರೆ ಭೂಮಿ ಇದೆ.

    ಹೆಂಡತಿ, ನಾಯಿ ನನ್ನನ್ನು ನೋಡ್ಕೋಳ್ತಾರೆ
    ಮಕ್ಕಳ ದುರ್ವರ್ತನೆಯಿಂದ ನಾರಾಯಣ ಅವರು ಬೇಸತ್ತಿದ್ದು, ಹೀಗಾಗಿ ತಮ್ಮ ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಜಾಕಿ ಹೆಸರಿಗೆ ಬರೆದಿದ್ದಾರೆ. ಪತ್ನಿ ಹಾಗೂ ನಾಯಿ ನನ್ನ ಬಗ್ಗೆ ಕಾಳಜಿ ವಹಿಸಿದ್ದಾರೆ. ಹೀಗಾಗಿ ನಾನು ಅವರಿಗೆ ಹತ್ತಿರವಾಗಿದ್ದೇನೆ. ನಾನು ಸತ್ತ ಮೇಲೆ ನನ್ನ ಎರಡನೇ ಪತ್ನಿ ಚಂಪಾ ಹಾಗೂ ಪ್ರೀತಿಯ ಸಾಕು ನಾಯಿ ಜಾಕಿ ನನ್ನ ಎಲ್ಲ ಆಸ್ತಿಯನ್ನು ಸಮನಾಗಿ ಪಡೆಯಬೇಕೆಂದು ಬಯಸುತ್ತೇನೆ. ನಾಯಿಯನ್ನು ನೋಡಿಕೊಳ್ಳುವ ವ್ಯಕ್ತಿ ನಾನು ಅದಕ್ಕಾಗಿ ಮೀಸಲಿಟ್ಟ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತಾನೆ ಎಂದು ವಿಲ್ ಬರೆದಿದ್ದಾರೆ.

    ರೈತ ನಾರಾಯಣ ವರ್ಮಾ ಅವರ ಮೊದಲ ಪತ್ನಿಯನ್ನು ಧನ್ವಂತರಿ ವರ್ಮಾ ಎಂದು ಗುರುತಿಸಲಾಗಿದೆ. ಇವರಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಅಲ್ಲದೆ ಎರಡನೇ ಪತ್ನಿ ಚಂಪಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯಾರಿಗೂ ಆಸ್ತಿ ಬರೆಯದೆ ನಾಯಿ ಹಾಗೂ ತಮ್ಮ ಎರಡನೇ ಪತ್ನಿಗೆ ಮಾತ್ರ ಆಸ್ತಿ ಬರೆದಿದ್ದಾರೆ.

  • 10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    – ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಕ್ರಮ

    ಮುಂಬೈ: ಲಾಕ್‍ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ.ಆಸ್ತಿಯನ್ನು ಅಡವಿಟ್ಟಿದ್ದಾರೆ.

    ಮುಂಬೈನ ವಿವಿಧ ಪ್ರದೇಶಗಳಲ್ಲಿರುವ 8 ಆಸ್ತಿಗಳನ್ನು ಸೋನು ಸೂದ್ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ. ಅವಶ್ಯವಿದ್ದಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸಾಲ ಪಡೆಯಲು ಜುಹು ಪ್ರದೇಶದಲ್ಲಿನ ಆಸ್ತಿಗಳನ್ನು ಅಡವಿಟ್ಟಿದ್ದು, 2 ಅಂಗಡಿ ಹಾಗೂ 6 ಫ್ಲ್ಯಾಟ್‍ಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನವೆಂಬರ್ 24ರಂದು ರಿಜಿಸ್ಟರ್ ಆಗಿದೆ. ಈ ದಾಖಲೆಯನ್ನಾಧರಿಸಿ ವರದಿ ಮಾಡಲಾಗಿದ್ದು, ಇಸ್ಕಾನ್ ದೇವಸ್ಥಾನದ ಬಳಿ ಎ.ಬಿ.ನಾಯರ್ ರಸ್ತೆಯಲ್ಲಿರುವ ಕಟ್ಟಡವನ್ನು ಸಹ ಅಡಮಾನ ಇಡಲಾಗಿದೆ. ಸಾಲ ಪಡೆಯಲು 5 ಲಕ್ಷ ರೂ.ಗಳ ನೋಂದಣಿ ಮೊತ್ತವನ್ನು ಸಹ ಪಾವತಿಸಲಾಗಿದೆ.

    ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿ ಮಾಲೀಕತ್ವದಲ್ಲೇ ಇರುತ್ತವೆ. ಪ್ರತಿ ತಿಂಗಳು ಬಾಡಿಗೆಯನ್ನು ಸಹ ಪಡೆಯಬಹುದು. ಆದರೆ 10 ಕೋಟಿ ರೂ.ಗಳ ಸಾಲಕ್ಕೆ ಬಡ್ಡಿ ಹಾಗೂ ಅಸಲನ್ನು ಪಾವತಿಸಬೇಕಾಗುತ್ತದೆ.

    ತಮ್ಮ ಸಹಾಯದ ಗುಣಗಳ ಮೂಲಕವೇ ಲಾಕ್‍ಡೌನ್ ಸಮಯದಲ್ಲಿ ಹೀರೋ ಆಗಿದ್ದ ಸೋನು ಸೂದ್, ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನೂರಾರು ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಸಹಾಯ ಮಾಡಿದ್ದಾರೆ. ಅಲ್ಲದೆ ಮಕ್ಕಳ ಓದಿಗೆ, ಹಲವರಿಗೆ ಸರ್ಜರಿ ಸೇರಿದಂತೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

    ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ)ದ ಭಾಗವಾಗಿ ಪ್ರತಿಷ್ಠಿತ ಎಸ್‍ಡಿಜಿ ಸ್ಪೆಷಲ್ ಮಾನವೀಯ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ವಿಶ್ವಸಂಸ್ಥೆ ಮಟ್ಟದಲ್ಲಿ ಸಹ ಸೋನು ಸೂದ್ ಗುರುತಿಸಿಕೊಂಡಿದ್ದು, ಇದೀಗ ಸಹಾಯ ಮಾಡಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಆಸ್ತಿಗಳನ್ನೇ ಅಡವಿಟ್ಟು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಮುಂದಾಗಿದ್ದಾರೆ.

  • ಹಾಸನದಲ್ಲಿ ಡ್ರೋನ್ ಸರ್ವೇ- ಹದಿನೈದು ದಿನದ ಕೆಲಸ ಆರು ಗಂಟೆಯಲ್ಲಿ ಮುಕ್ತಾಯ

    ಹಾಸನದಲ್ಲಿ ಡ್ರೋನ್ ಸರ್ವೇ- ಹದಿನೈದು ದಿನದ ಕೆಲಸ ಆರು ಗಂಟೆಯಲ್ಲಿ ಮುಕ್ತಾಯ

    – ಅರ್ಧ ಗಂಟೆಯಲ್ಲಿ 2 ಸಾವಿರ ಎಕರೆ ಸರ್ವೇ

    ಹಾಸನ: ಹತ್ತು ಮನೆಗಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದ್ದು, ಇದರಿಂದ ಸಮಯ ಉಳಿತಾಯವಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಅತ್ಯಾಧುನಿಕ ಡ್ರೋನ್ ಮೂಲಕ ದಿನಕ್ಕೆ 5 ರಿಂದ ಎಂಟು ಹಳ್ಳಿ ಸರ್ವೇ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋನ್ ಮೂಲಕ ಕೇವಲ ಐದು ಗಂಟೆಯಲ್ಲಿ ಮಾಡಿ ಮುಗಿಸಬಹುದಾಗಿದೆ. ಅರ್ಧ ಗಂಟೆಯಲ್ಲಿ ಸುಮಾರು 2 ಸಾವಿರ ಎಕರೆ ಸರ್ವೇ ಮಾಡಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಅಲ್ಲದೆ ಸಾರ್ವಜನಿಕರಿಗೂ ಒಂದೇ ಕಾರ್ಡ್ ನಲ್ಲಿ ತಮ್ಮ ಆಸ್ತಿಯ ಎಲ್ಲ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

    ಹವಾಮಾನ ವ್ಯತ್ಯಾಸ ಇದ್ದಾಗ ಡ್ರೋನ್ ಹಾರಿಸಿ ಸರ್ವೇ ಮಾಡಲು ಸಾಧ್ಯ ಆಗಲ್ಲ. ಡ್ರೋನ್ ಸರ್ವೇ ನಂತರ ಪಂಚಾಯಿತಿಯಲ್ಲಿರುವ ದಾಖಲೆ, ಆನ್‍ಗ್ರೌಂಡ್ ದಾಖಲೆ ಎಲ್ಲವನ್ನೂ ಪರಿಶೀಲನೆ ನಡೆಸಿ ನಂತರ ಆಸ್ತಿ ಕಾರ್ಡ್ ನೀಡಲಾಗುವುದು. ಹಾಸನದಲ್ಲಿ ಇನ್ನೂ ಐದಾರು ತಿಂಗಳು ಡ್ರೋನ್ ಸರ್ವೆ ಕಾರ್ಯ ನಡೆಯಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

    ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಆರ್‍ಡಿಪಿಆರ್ ಇಲಾಖೆ, ಕಂದಾಯ ಇಲಾಖೆ, ಸರ್ವೇ ಆಫ್ ಇಂಡಿಯಾ ಮೂರು ಇಲಾಖೆಯ ಸಹಭಾಗಿತ್ವದೊಂದಿಗೆ ಹಾಸನದಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಡ್ರೋನ್ ಮೂಲಕ ಜನವಸತಿ ಪ್ರದೇಶದ ಫೋಟೊಗ್ರಫಿಕ್ ಇಮೇಜ್ ತೆಗೆದುಕೊಂಡು ನಕ್ಷೆ ತಯಾರಿಸಲಾಗುತ್ತೆ. ನಂತರ ಪ್ರಾಪರ್ಟಿ ಕಾರ್ಡ್ ಜನರೇಟ್ ಮಾಡುತ್ತಾರೆ. ಇದನ್ನು ಜನರಿಗೆ ನೀಡುತ್ತಾರೆ ಎಂದು ತಿಳಿಸಿದರು.

    ಆಸ್ತಿ ಕಾರ್ಡನ್ನು ಪರಿಶೀಲನೆ ಮಾಡಿ, ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುತ್ತೆ. ಇದರಿಂದಾಗಿ ಸಾರ್ವಜನಿಕರಿಗೆ ಅವರ ಒಡೆತನದ ನಕ್ಷೆ ಮತ್ತು ದಾಖಲಾತಿ ಒಂದೇ ಕಾರ್ಡ್‍ನಲ್ಲಿ ಸಿಗಲಿದೆ.ವಿಭಾಗ ಮಾಡಿಕೊಳ್ಳುವಾಗ, ಬ್ಯಾಂಕ್‍ಗಳಲ್ಲಿ ಲೋನ್ ಪಡೆಯುವಾಗ ಒಂದೇ ಕಾರ್ಡ್‍ನಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಮನವಿ ಮಾಡಿದ್ದಾರೆ.

  • ಕೆಐಎಡಿಬಿ ಕಾರ್ಯದರ್ಶಿಯ ಆಸ್ತಿ ನೋಡಿ ದಂಗಾದ ಎಸಿಬಿ ಅಧಿಕಾರಿಗಳು

    ಕೆಐಎಡಿಬಿ ಕಾರ್ಯದರ್ಶಿಯ ಆಸ್ತಿ ನೋಡಿ ದಂಗಾದ ಎಸಿಬಿ ಅಧಿಕಾರಿಗಳು

    ಹುಬ್ಬಳ್ಳಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕಾರ್ಯದರ್ಶಿ ಹರೀಶ್ ಹಳಪೇಟ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಧಾರವಾಡದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಕಾರ್ಯದರ್ಶಿಯ ಅಪಾರ ಪ್ರಮಾಣದ ಆಸ್ತಿಯನ್ನ ಪತ್ತೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ಕೆಐಎಡಿಬಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಹಳಪೇಟ ಮನೆಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಪತ್ತೆಯಾದ  ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.

    ಹರೀಶ ಹಳೆಪೇಟ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ತುಮಕೂರಿನಲ್ಲಿ ಆಸ್ತಿಗಳಿಕೆ ಮಾಡಿರುವುದು ಬಯಲಿಗೆ ಬಂದಿದೆ. ಅಲ್ಲದೇ ಹರೀಶ ಹೆಸರಿನಲ್ಲಿದ್ದ  ಅಪಾರ ಪ್ರಮಾಣದ ಬೆಳ್ಳಿ, ಬಂಗಾರ, ವಾಹನಗಳ ದಾಖಲೆಗಳು ಸಹ ದಾಳಿ ವೇಳೆ ಪತ್ತೆಯಾಗಿವೆ.

    ಹರೀಶ್ ಹಳಪೇಟ ಅವರ ಸ್ಥಿರಾಸ್ತಿ ಅಂದಾಜು ಮೌಲ್ಯ ಒಟ್ಟು 1,32,22,550 ರೂ. ಹಾಗೂ 30 ಲಕ್ಷ ರೂ. ಚರಾಸ್ತಿ ಹೊಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಲಂ 13(1)(ಬಿ) ಸಹಕಲಂ 13(2) ಲಂಚ ಪ್ರತಿಬಂಧಕ ಕಾಯಿದೆ – 1998 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

  • ಪ್ರಧಾನಿ ಮೋದಿ ಆಸ್ತಿ ಏರಿಕೆ, ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆ

    ಪ್ರಧಾನಿ ಮೋದಿ ಆಸ್ತಿ ಏರಿಕೆ, ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆ

    ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ ಮೌಲ್ಯದಲ್ಲಿ ಹೆಚ್ಚಳವಾದರೆ ಗೃಹ ಸಚಿವ ಅಮಿತ್‌ ಶಾ ಆಸ್ತಿ ಮೌಲ್ಯ ಇಳಿಕೆಯಾಗಿದೆ.

    ಕಳೆದ ವರ್ಷ 32.3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ ಈ ವರ್ಷ ಮೌಲ್ಯ 28.6 ಕೋಟಿ ರೂ.ಗೆ ಇಳಿಕೆಯಾಗಿದೆ.

    ಅಮಿತ್‌ ಶಾ ಗುಜರಾತಿನಲ್ಲಿ 10 ಕಡೆ ಆಸ್ತಿಯನ್ನು ಹೊಂದಿದ್ದಾರೆ. ತಾಯಿಯಿಂದ ಬಂದಿರುವ ಆಸ್ತಿ ಮತ್ತು ಅವರು ಸಂಪಾದಿಸಿದ ಈ ಆಸ್ತಿ ಮೌಲ್ಯ 13.56 ಕೋಟಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ಅಮಿತ್‌ ಶಾ ಬಳಿ 15,814 ರೂ. ನಗದು ಇದ್ದು, 1.04 ಕೋಟಿ ರೂ. ಹಣ ಬ್ಯಾಂಕ್‌ ಖಾತೆಯಲ್ಲಿದೆ. 13.47 ಲಕ್ಷ ವಿಮೆ ಮತ್ತು ಪಿಂಚಣಿ ಪಾಲಿಸಿ ಹೊಂದಿದ್ದು, 2.79 ಲಕ್ಷ ರೂ. ನಿಶ್ಚಿತ ಠೇವಣಿ, 44.47 ಲಕ್ಷ ರೂ. ಮೌಲ್ಯದ ಜುವೆಲ್ಲರಿಯನ್ನು ಹೊಂದಿದ್ದಾರೆ.

    ಕಳೆದ ವರ್ಷ ಅಮಿತ್‌ ಶಾ ಪತ್ನಿ ಸೋನಲ್‌ ಅವರ ಆಸ್ತಿ ಮೌಲ್ಯ 9 ಕೋಟಿ ರೂ. ಇತ್ತು. ಈ ವರ್ಷ ಇದು 8.53 ಕೋಟಿ ರೂ.ಗೆ ಇಳಿಕೆಯಾಗಿದೆ.

    ಷೇರು ಮಾರುಕಟ್ಟೆಯಲ್ಲಿ ಅಮಿತ್‌ ಶಾ ಹೂಡಿದ ಕಂಪನಿಗಳ ಷೇರುಗಳ ಮೌಲ್ಯ ಕುಸಿದ ಕಾರಣ ಅಮಿತ್‌ ಶಾ ಆಸ್ತಿ ಇಳಿಕೆಯಾಗಿದೆ.

  • ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ಆಸ್ತಿ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳ – ಮೋದಿ ಬಳಿ ಈಗ ಎಷ್ಟು ಆಸ್ತಿ ಇದೆ?

    ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯದಲ್ಲಿ 36 ಲಕ್ಷ ರೂ. ಹೆಚ್ಚಳವಾಗಿದೆ.

    ನರೇಂದ್ರ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರತಿ ವರ್ಷದಂತೆ ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2020ರ ಜೂನ್‌ 30ರ ವರೆಗಿನ ಮಾಹಿತಿಯನ್ನು ನೀಡಲಾಗಿದೆ.

    ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ಸಾಲವನ್ನು ತೆಗೆದುಕೊಂಡಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

    ಆಸ್ತಿ ಎಷ್ಟಿದೆ?
    ನಗದು : 2020ರ ಜೂನ್‌ 30ರ ವೇಳೆಗೆ ಪ್ರಧಾನಿ ಮೋದಿಯವರ ಬಳಿ 31,450 ರೂ. ಇತ್ತು.

    ಬ್ಯಾಂಕ್‌ ಖಾತೆಗಳ ಮಾಹಿತಿ: ಎಸ್‌ಬಿಐ ಗಾಂಧಿನಗರ ಬ್ರಾಂಚ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ 3,38,173 ರೂ. ಹಣ ಇದೆ. ಕಳೆದ ವರ್ಷ ಇದು 4,143 ರೂ. ಇತ್ತು. ಈ ಬ್ಯಾಂಕಿನಲ್ಲಿ ಎಫ್‌ಡಿಆರ್‌ ಮತ್ತು ಎಂಒಡಿ ಬ್ಯಾಲೆನ್ಸ್‌ 1,60,28,039 ರೂ. ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 1,27,81,574 ರೂ. ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಅವರು ಇದನ್ನು ಘೋಷಿಸಿದ್ದರು.

    ಬಾಂಡ್‌ ಹೂಡಿಕೆ:  ಪ್ರಧಾನಮಂತ್ರಿಯವರು ಎಲ್ ಅಂಡ್ ಟಿ ಇನ್‍ಫ್ರಾಸ್ಟ್ರಕ್ಚರ್ ನಲ್ಲಿ ರೂ. 20,000 ಹೂಡಿಕೆ ಮಾಡಿದ್ದಾರೆ. 2012ರಲ್ಲಿ ಈ ಹೂಡಿಕೆ ಮಾಡಲಾಗಿತ್ತು.

    ಎನ್‌ಎಸ್‌ಎಸ್‌, ವಿಮೆ: ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ 5,18,235 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ 1,59,281 ರೂ. ಮೌಲ್ಯದ ಎಲ್‍ಐಸಿ ಪ್ರೀಮಿಯಂ ಕಟ್ಟಿದ್ದಾರೆ.

    ಚಿನ್ನ: ಮೋದಿಯವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಈ ಉಂಗುರಗಳು 45 ಗ್ರಾಂ ತೂಕವನ್ನು ಹೊಂದಿದ್ದು ಇವುಗಳ ಮೌಲ್ಯ 1,51,875 ರೂ. ಆಗಿದೆ.

    ಭೂಮಿ: ಗಾಂಧಿನಗರಲ್ಲಿ ಮೋದಿ ಅವರು 2002ರ ಅಕ್ಟೋಬರ್‌ 25 ರಂದು ನಾಲ್ಕನೇ ಒಂದರಷ್ಟು ಷೇರು (1,30,488 ರೂ.) ನೀಡಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಈ ಭೂಮಿಯ ಮೇಲೆ 2,47,208 ರೂ.ಗಳ ಹೂಡಿಕೆಯನ್ನು ಮಾಡಲಾಗಿದೆ. ಸದ್ಯ ಈ ಜಾಗದ ಮಾರುಕಟ್ಟೆ ಬೆಲೆ 1,10,00,000 ರೂ. ಎಂದು ಅಂದಾಜಿಸಲಾಗಿದೆ.

  • ಅವರಿಂದಾಗಿ ನೀವು ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ – ತಂದೆಯನ್ನು ಹೊರಹಾಕಿದ ಪುತ್ರರಿಗೆ ಸುಪ್ರೀಂ ಚಾಟಿ

    ಅವರಿಂದಾಗಿ ನೀವು ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ – ತಂದೆಯನ್ನು ಹೊರಹಾಕಿದ ಪುತ್ರರಿಗೆ ಸುಪ್ರೀಂ ಚಾಟಿ

    ನವದೆಹಲಿ:ಜನ್ಮ ಕೊಟ್ಟ ತಂದೆಯನ್ನೇ ಮನೆಯಿಂದ ಹೊರ ಹಾಕಿದ್ದಕ್ಕೆ ಇಬ್ಬರು ಪುತ್ರರಿಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿ ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿದೆ.

    ವಯೋ ವೃದ್ಧನಾಗಿರುವ ನನಗೆ ನಿರ್ವಹಣೆಯ ವೆಚ್ಚವನ್ನೂ ನೀಡದೇ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ದುಡಿಯುತ್ತಿರುವ ಇಬ್ಬರು ಪುತ್ರರು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ನೀವು ತಂದೆಯವರಿಗೆ ಸಹಾಯ ಮಾಡುವುದಿಲ್ಲ ಯಾಕೆ? ಇವರು ನಿಮ್ಮ ತಂದೆ. ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ? ನೀವು ಈ ಹಂತಕ್ಕೆ ಬರಲು ನಿಮ್ಮ ತಂದೆ ಕಾರಣ ಎಂಬುದನ್ನು ಮರೆಯಬೇಡಿ ಎಂದು ಹೇಳಿ ಇಬ್ಬರು ಸಹೋದರರ ನಿರ್ಲಕ್ಷ್ಯದ ನಡೆಯನ್ನು ಕಟು ಪದಗಳಲ್ಲಿ ಟೀಕಿಸಿತು.

    ಅವರ ಶ್ರಮದಿಂದ ಈಗ ನೀವು ಉನ್ನತ ಶಿಕ್ಷಣ ಕಲಿತು ಉದ್ಯೋಗ ಪಡೆದುಕೊಂಡಿದ್ದೀರಿ. ನಿಮಗೆ ಆಸ್ತಿ ಬಂದಿರುವುದೇ ನಿಮ್ಮ ತಂದೆಯಿಂದ. ಹೀಗಿರುವಾಗ ಈ ಸಮಯದಲ್ಲೂ ಮನೆಯಿಂದ ಹೊರಹಾಕಿದ್ದು ಎಷ್ಟು ಸರಿ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.

    ವಯೋವೃದ್ದ ತಂದೆಯನ್ನು ಮನೆ ಬಿಟ್ಟು ಹೊರಹೋಗುವಂತೆ ಒತ್ತಾಯಿಸುವುದು ಮತ್ತು ಹಣಕಾಸಿನ ನೆರವು ನೀಡಲು ನಿರಾಕರಿಸುವುದು ಕ್ಷಮಾರ್ಹವಲ್ಲ. ತಂದೆಯ ಪೂರ್ವಜರಿಂದ ಬಂದಿರುವ ಆಸ್ತಿಯನ್ನು ನೀವು ಪಡೆದುಕೊಂಡಿದ್ದೀರಿ. ಆದರೆ ಬಾಡಿಗೆಯ ಸ್ವಲ್ಪ ಭಾಗವನ್ನೂ ತಂದೆಗೆ ಯಾಕೆ ನೀಡುವುದಿಲ್ಲ? ಪೂರ್ವಜರ ಆಸ್ತಿಯ ಮೇಲಿರುವ ತಂದೆಯ ಹಕ್ಕನ್ನು ಕಸಿಯಲಾಗದು ಎಂದು ಕೋರ್ಟ್‌ ಈ ವೇಳೆ ಅಭಿಪ್ರಾಯಪಟ್ಟಿತು.

    ನನ್ನನ್ನು ಇಬ್ಬರು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ವಯೋ ವೃದ್ಧ ತಂದೆ ಟ್ರಿಬ್ಯುನಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಇಬ್ಬರು ಪುತ್ರರಿಗೆ ತಂದೆಯ ನಿರ್ವಹಣಾ ವೆಚ್ಚವಾಗಿ ಪ್ರತಿ ತಿಂಗಳು 7 ಸಾವಿರ ರೂ. ಪಾವತಿಸುವಂತೆ ಆದೇಶಿಸಿತ್ತು. ತಂದೆ-ತಾಯಿ ನಿರ್ವಹಣೆ, ಕಲ್ಯಾಣಕ್ಕೆ ಸಬಂಧಿಸಿದಂತೆ 2007ರ ಹಿರಿಯ ನಾಗರಿಕರ ಕಾಯ್ದೆಯ ಅಡಿ ಈ ಆದೇಶವನ್ನು ಪುತ್ರರು ಪ್ರಶ್ನಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

    ಹೈಕೋರ್ಟ್‌ ತಡೆ ನೀಡಿದ್ದನ್ನು ಪ್ರಶ್ನಿಸಿ ವೃದ್ಧ ತಂದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಈ ಕಾಲದಲ್ಲಿ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಪಾವತಿಸುವಂತೆ ಆದೇಶ ನೀಡಬೇಕೆಂದು ತಂದೆಯ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಇಬ್ಬರೂ ಮಕ್ಕಳಿಗೆ ನೋಟಿಸ್ ಜಾರಿ ಮಾಡಿದೆ.

  • ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಚೆನ್ನೈ: ಅಕ್ರಮ ಆಸ್ತಿಗಳಿಕೆ ಕೇಸ್‍ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.

    ಶಶಿಕಲಾಗೆ ಸಂಬಂಧಿಸಿದ 2000 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಳವರಸಿ, ಸುಧಾಕರನ್‍ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಸಿರುತ್ತಾವೂರ್, ಕೊಡನಾಡಿನಲ್ಲಿರುವ 300 ಕೋಟಿ ಮೌಲ್ಯದ ಆಸ್ತಿಯೂ ಇದ್ರಲ್ಲಿ ಸೇರಿದೆ. ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜಯಲಲಿತಾ ಆಪ್ತೆ ಶಶಿಕಲಾ ಅವರಿಗೆ ಸೇರಿದ್ದ 2 ಸಾವಿರ ಕೋಟಿ ರೂ. ಮೌಲ್ಯಸ ಆಸ್ತಿ ಮಾಡಿಕೊಂಡಿರುವುದಾಗಿ ತಿಳಿಸಿದೆ.

    ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ, ಪತಿ ನಟರಾಜನ್ ಹಾಗೂ ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಶಶಿಕಲಾ ಬಿಡುಗಡೆ ದಿನಾಂಕ ಫಿಕ್ಸ್

    ಮುಂದಿನ ವರ್ಷದ ಜನವರಿಯಲ್ಲಿ ಶಶಿಕಲಾ ಜೈಲಿಂದ ರಿಲೀಸ್ ಆಗಲಿದ್ದಾರೆ. ಶಶಿಕಲಾ ಬಿಡುಗಡೆಯ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‍ಟಿಐ ಅರ್ಜಿಗೆ ಜೈಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಶಶಿಕಲಾ ಪಾವತಿ ಮಾಡಿದರೆ ಅವರ ಬಿಡುಗಡೆಗೆ ಅವಕಾಶವಿದೆ. ಇಲ್ಲವಾದರೆ ಮತ್ತೆ ಒಂದು ವರ್ಷ ಶಶಿಕಲಾ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪೆರೋಲ್ ದಿನಗಳನ್ನು ಲೆಕ್ಕಾಚಾರ ಮಾಡಿದರೂ ಅವರ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಈ ಹಿಂದೆ ಲಭಿಸಿತ್ತು.