Tag: ಆಸ್ತಿ

  • ಕಲ್ಕಿ ಭಗವಾನ್ ಆಶ್ರಮದ ಮೇಲೆ ಮುಂದುವರಿದ ಐಟಿ ದಾಳಿ- ಅಪಾರ ಪ್ರಮಾಣದ ಆಸ್ತಿ ಪತ್ತೆ

    ಕಲ್ಕಿ ಭಗವಾನ್ ಆಶ್ರಮದ ಮೇಲೆ ಮುಂದುವರಿದ ಐಟಿ ದಾಳಿ- ಅಪಾರ ಪ್ರಮಾಣದ ಆಸ್ತಿ ಪತ್ತೆ

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ಕಲ್ಕಿ ಆಶ್ರಮ, ಶಿಕ್ಷಣ ಸಂಸ್ಥೆ ಮೇಲೆ ಸತತ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ. ಇಂದು ಬೆಂಗಳೂರಿನ ದೊಮ್ಮಲೂರು ಬಳಿಯಿರುವ ಒನ್ ನೆಸ್ ಕಚೇರಿ ಮೇಲೆ ಐಟಿ ರೇಡ್ ನಡೆದಿದ್ದು, ಶೋಧ ಕಾರ್ಯ ಇನ್ನೂ ಮುಂದುವರಿದಿದೆ.

    ಇದುವರೆಗೆ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿರುವ ಕಲ್ಕಿಯ 40ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆದಿದೆ. ಒನ್‍ನೆಸ್, ವೆಲ್‍ನೆಸ್ ಸಮೂಹದ ಎಲ್ಲ ಕಂಪನಿಗಳನ್ನು ಜಾಲಾಡಲಾಗುತ್ತಿದೆ. ಇದುವರೆಗೆ ಅಘೋಷಿತ ಆಸ್ತಿ ಪತ್ರಗಳು, ವಜ್ರವೈಢೂರ್ಯ, ಅಪಾರ ಪ್ರಮಾಣದ ನೋಟಿನ ಕಂತೆಗಳು ಸೇರಿ ಬರೋಬ್ಬರಿ 112 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಆಂಧ್ರದ ವರದಯ್ಯಪಾಳ್ಯಂನ ಆಶ್ರಮದಿಂದ ಕದ್ದು ಮುಚ್ಚಿ ಸಾಗಿಸುತ್ತಿದ್ದ 45 ಕೋಟಿ ರೂ. ನಗದನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ತೆರಿಗೆ ವಂಚನೆ ಹಾಗೂ ಅಕ್ರಮ ಆಸ್ತಿ ಸಂಪಾದನೆ ಹಾಗೂ ವಿದೇಶಿ ಭಕ್ತರ ಹೆಸರಿನ ಮೇಲೆ ಭಾರೀ ಮೊತ್ತದಲ್ಲಿ ನಗದನ್ನು ವಿದೇಶಕ್ಕೆ ರವಾನೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.

    ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ರ್ಯಕ್ಷನಾಗಿ,” ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.

    ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

  • ಆಸ್ತಿ ವಿಚಾರಕ್ಕೆ ತಾಲೂಕು ಕಚೇರಿಯಲ್ಲೇ ಬಡಿದಾಡಿಕೊಂಡ ಅಣ್ಣ, ತಮ್ಮ

    ಆಸ್ತಿ ವಿಚಾರಕ್ಕೆ ತಾಲೂಕು ಕಚೇರಿಯಲ್ಲೇ ಬಡಿದಾಡಿಕೊಂಡ ಅಣ್ಣ, ತಮ್ಮ

    ಕೋಲಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳಿಬ್ಬರು ಕೋಲಾರ ತಾಲೂಕು ಕಚೇರಿ ಬಳಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

    ಆಸ್ತಿಯನ್ನು ಲಪಟಾಯಿಸಿದ ತಮ್ಮನನ್ನ ಅಣ್ಣ ಕೇಳಿದ ಹಿನ್ನೆಲೆಯಲ್ಲಿ ತಮ್ಮ ಮನಬಂದಂತೆ ಅಣ್ಣನನ್ನ ಥಳಿಸಿದ್ದಾನೆ. ಇದರಿಂದ ಅಣ್ಣನಿಗೆ ಮುಖದಲ್ಲಿ ಸಣ್ಣ ಪುಟ್ಟ ಗಾಯಗಳಾಗಿ ಬಾಯಲ್ಲಿ ರಕ್ತ ಸುರಿದಿದೆ. ಈಗ ಗಾಯಾಳು ಅಣ್ಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇಬ್ಬರು ದಾಯಾದಿಗಳು ಕೋಲಾರ ತಾಲೂಕಿನ ಅರಳಕುಂಟೆ ಗ್ರಾಮದವರಾಗಿದ್ದು, ತಮ್ಮ ತಿಮ್ಮರಾಯ ಪಿತ್ರಾರ್ಜಿತ ಆಸ್ತಿಯನ್ನು ತಂಗಿ ಶಶಿಕಲಾಗೆ ಮೋಸ ಮಾಡಿ ಲಪಾಟಯಿಸಿದ್ದಾನೆ ಎಂಬುದು ರಾಮಕೃಷ್ಣ ಆರೋಪ. ಇಂದು ಕೋಲಾರ ತಾಲೂಕು ಕಚೇರಿ ಬಳಿ ಎದುರು ಬದರಾಗಿರುವ ಅಣ್ಣ ತಮ್ಮಂದಿರು ಜಮೀನು ವಿವಾದದ ಹಿನ್ನೆಲೆಯಲ್ಲಿ ಇಟ್ಟಿಗೆ ಕಲ್ಲುಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.

    ಈ ವೇಳೆ ಅಣ್ಣನ ರಾಮಕೃಷ್ಣನನ್ನು ಹೊಡೆದ ತಿಮ್ಮರಾಯ ಕ್ಯಾಮೆರಾ ಕಾಣಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರೆ ಅಣ್ಣ ಮಾತ್ರ ಅಂಗಿ ಹರಿದುಕೊಂಡು ಮನಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ಬೈದು ರಂಪಾಟ ಮಾಡಿದ್ದಾನೆ.

  • ಒಂದೇ ವರ್ಷದಲ್ಲಿ ಜೆಡಿಎಸ್ ಆಸ್ತಿ ಶೇ.102ರಷ್ಟು ಹೆಚ್ಚಳ

    ಒಂದೇ ವರ್ಷದಲ್ಲಿ ಜೆಡಿಎಸ್ ಆಸ್ತಿ ಶೇ.102ರಷ್ಟು ಹೆಚ್ಚಳ

    ನವದೆಹಲಿ: ಚುನಾವಣಾ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್(ಎಡಿಆರ್) 2017-18ನೇ ಸಾಲಿನಲ್ಲಿ ಪ್ರಾದೇಶಿಕ ಪಕ್ಷಗಳು ಹೊಂದಿದ ಒಟ್ಟು ಆಸ್ತಿ ಕುರಿತ ವರದಿಯನ್ನು ಬಿಡುಗಡೆ ಮಾಡಿದ್ದು, ವರದಿ ಪ್ರಕಾರ ಒಂದೇ ವರ್ಷದಲ್ಲಿ ಜಾತ್ಯಾತೀತ ಜನತಾದಳ(ಜೆಡಿಎಸ್) ಪಕ್ಷದ ಆಸ್ತಿಯೂ ಶೇ.102.9ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

    ದೇಶ ಎಲ್ಲ ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯನ್ನು ಆಧಾರಿಸಿ ವರದಿ ತಯಾರಿಸಿದೆ. ಈ ವರದಿಯಲ್ಲಿ ಪ್ರಾದೇಶಿಕ ಪಕ್ಷಗಳು ಹೊಂದಿರುವ ಆಸ್ತಿ ಹಾಗೂ ಪ್ರಸಕ್ತ ಸಾಲಿನಲ್ಲಿ ಎಷ್ಟು ಬೆಳವಣಿಗೆಯಾಗಿದೆ ಎಂಬುದರ ಕುರಿತು ಉಲ್ಲೇಖಿಸಲಾಗಿದೆ.

    2016-17ನೇ ಆರ್ಥಿಕ ವರ್ಷದಲ್ಲಿ 7.61 ಕೋಟಿ ರೂ. ಇದ್ದ ಜೆಡಿಎಸ್ ಆಸ್ತಿ 2017-18ನೇ ಸಾಲಿನಲ್ಲಿ 15.44 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. 2016-17 ರಲ್ಲಿ ಜೆಡಿಎಸ್ 7.004 ಕೋಟಿ ರೂ. ಸಾಲ ಹೊಂದಿದ್ದರೆ 2017-18ರಲ್ಲಿ 7.008 ಕೋಟಿ ರೂ. ಸಾಲ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಜೆಡಿಎಸ್ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್) ಶೇ.100ಕ್ಕಿಂತಲೂ ಹೆಚ್ಚು ಆಸ್ತಿಯನ್ನು ವೃದ್ಧಿಸಿಕೊಂಡಿವೆ. ಆದರೆ ಶಿರೋಮಣಿ ಅಕಾಲಿ ದಳದ ಆದಾಯವು 2016-17 ಮತ್ತು 2017-18ರ ಆರ್ಥಿಕ ಸಾಲಿನಲ್ಲಿ ಕಾಯ್ದಿಟ್ಟ ನಿಧಿ ಶೇ.339.62ರಷ್ಟು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

    ವರದಿ ಪ್ರಕಾರ ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, ಇದರ 2016-17ನೇ ಸಾಲಿನಲ್ಲಿ ಕಾಯ್ದಿಟ್ಟ ನಿಧಿ 468.05 ಕೋಟಿ ರೂ. ಇದ್ದರೆ ಒಂದು ವರ್ಷದ ನಂತರ ಇದು 482.23 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.

    ನಿತೀಶ್ ಕುಮಾರ್ ಅವರ ಜನತಾದಳ(ಸಂಯುಕ್ತ) ಪಕ್ಷದ ಆಸ್ತಿಯಲ್ಲಿ ಭಾರೀ ಏರಿಕೆ ಕಂಡಿದ್ದು, ಒಂದೇ ವರ್ಷದಲ್ಲಿ ಶೇ.298ರಷ್ಟು ಹೆಚ್ಚಳವಾಗಿದೆ. ಆದರೆ, ಆಸ್ತಿಯ ಮೌಲ್ಯದ ವಿಚಾರದಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವು ಅತ್ಯಂತ ಶ್ರೀಮಂತ ಪಕ್ಷವಾಗಿದೆ.

    ಇತರ ಪಕ್ಷಗಳ ಆಸ್ತಿಯಲ್ಲಿ ತೀವ್ರ ಇಳಿಕೆಯಾಗಿದ್ದು, ಬಿಹಾರದ ಜನಶಕ್ತಿ ಪಕ್ಷ ಶೇ.34.8, ಜಾರ್ಖಂಡ್ ಮುಕ್ತಿ ಮೋರ್ಚಾ ಶೇ.15, ಹರಿಯಾಣದ ಇಂಡಿಯನ್ ನ್ಯಾಷನಲ್ ಲೋಕದಳ ಶೇ.5.9 ರಷ್ಟು ಕಡಿಮೆಯಾಗಿದೆ.

    ಅದರಂತೆ ಪಕ್ಷಗಳ ಹೊಣೆಗಾರಿಕೆ(ಸಾಲ) ಸಹ ಹೆಚ್ಚಾಗಿದ್ದು, ತಮಿಳುನಾಡಿನ ಡಿಎಂಕೆ ಹೊಣೆಗಾರಿಕೆಯನ್ನು ಘೋಷಿಸಿದ್ದು, 2016-17ರಲ್ಲಿ ಹೊಂದಿತ್ತು. 2017-18ರಲ್ಲಿ 7.877 ಕೋಟಿ ರೂ. ಸಾಲ ಘೋಷಿಸಿದೆ. ತೆಲಗು ದೇಶಂ ಪಕ್ಷ ಅತಿ ಹೆಚ್ಚು ಸಾಲ ಹೊಂದಿದ್ದು, 22.56 ಕೋಟಿ ರೂ. ಸಾಲ ಹೊಂದಿದೆ.

  • 14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    -ಕ್ರೂರಿಯ ಸಂಚಿಗೆ ಬಲಿಯಾದ ಅಮಾಯಕರು
    -ಒಬ್ಬೊಬ್ಬರನ್ನು ಹಂತ ಹಂತವಾಗಿ ಕೊಂದಿದ್ದಳು

    ತಿರುವನಂತಪುರಂ: ಕೇರಳ ಪೊಲೀಸರು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಆಸ್ತಿಯನ್ನು ಅನುಭವಿಸುವ ಪ್ಲಾನ್ ಮಾಡಿದ್ದ ಹಂತಕಿ ಜೂಲಿಯ ಕನಸಿಗೆ ಪೊಲೀಸರು ತಣ್ಣೀರು ಹಾಕಿದ್ದಾರೆ. ಸುದೀರ್ಘ ತನಿಖೆಯ ಬಳಿಕ ಪ್ರಕರಣಕ್ಕೆ ಪೊಲೀಸರು ಇತಿಶ್ರೀ ಹಾಡಿ, ಕೊಲೆಯ ಸುತ್ತ ಹುಟ್ಟಿಕೊಂಡಿದ್ದ ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿದ್ದಾರೆ.

    ಹಂತಕಿ ಜೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆ ಆಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಜು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಇಬ್ಬರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು ಸೆರೆಮನೆ ಸೇರಿಕೊಂಡಿದ್ದಾರೆ.

    ಕೇರಳದ ಕೊಜ್ಹಿಕೊಡೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಹಂತಕಿ ಜೂಲಿಯನ್ನು ಬಂಧಿಸಿದ್ದಾರೆ. ಅಲ್ಲದೇ ಕೊಲೆ ಮಾಡಲು ಸಹಕಾರ ನೀಡಿದ್ದ ಜೂಲಿ 2ನೇ ಪತಿ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಹಂತ ಹಂತವಾಗಿ ಕೊಲೆ: 2002 ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜೂಲಿ ಕೊಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001 ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಎರಡರ ಕಂದಮ್ಮ ಬಲಿ: 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಅಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಟಾಮ್ ಥಾಮಸ್ ಕಿರಿಯ ಪುತ್ರನ ಮಗ ಯುಎಸ್ ಎನ್‍ಆರ್ ಐ ಆಗಿರುವ ಮೆಜೊ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

    ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿದೆ.

    ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

    ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

  • ಪಾಕ್‍ಗೆ ಮತ್ತೆ ಮುಖಭಂಗ – ನಿಜಾಮರ ಕೋಟಿಗಟ್ಟಲೆ ಆಸ್ತಿ ಭಾರತಕ್ಕೆ ಸೇರಿದ್ದು ಎಂದ ಬ್ರಿಟಿಷ್ ಕೋರ್ಟ್

    ಪಾಕ್‍ಗೆ ಮತ್ತೆ ಮುಖಭಂಗ – ನಿಜಾಮರ ಕೋಟಿಗಟ್ಟಲೆ ಆಸ್ತಿ ಭಾರತಕ್ಕೆ ಸೇರಿದ್ದು ಎಂದ ಬ್ರಿಟಿಷ್ ಕೋರ್ಟ್

    ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಸುಮಾರು 35 ದಶಲಕ್ಷ ಡಾಲರ್(ಅಂದಾಜು 249.04 ಕೋಟಿ ರೂ.) ಮೌಲ್ಯದ ಹೈದರಾಬಾದ್ ನಿಜಾಮನ ಆಸ್ತಿ ಭಾರತಕ್ಕೆ ಸೇರಿದ್ದು, ಇದರಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ಬ್ರಿಟಿಷ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

    ಹೈದರಾಬಾದ್ ನಿಜಾಮರ ಸಂಪತ್ತಿನ ಮೇಲೆ ಹಕ್ಕು ಸಾಧಿಸುವ ಕುರಿತ ಕಾನೂನು ಸಮರದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. 1947ರಲ್ಲಿ ಹೈದರಾಬಾದ್ ನಿಜಾಮ ಸಂಸ್ಥಾನವು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಾಗುವುದಕ್ಕೂ ಮುನ್ನ ಈ ಹಣವನ್ನು ಲಂಡನ್ ಹಾಗೂ ಕರಾಚಿಗೆ ವರ್ಗಾಯಿಸಲಾಗಿತ್ತು. ಆಗಿನಿಂದಲೂ ಈ ಆಸ್ತಿ ಪ್ರಕರಣ ವಿವಾದವಾಗಿಯೇ ಉಳಿದಿತ್ತು.

    ದಶಕಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಹೈಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ನಿಜಾಮರ ಆಸ್ತಿಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ, ಪಾಲು ಸಹ ಇಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ನಿಜಾಮನ ಸಂಪತ್ತಿನಲ್ಲಿ ಪಾಕಿಸ್ತಾನವು ಹಕ್ಕು ಕೇಳಿತ್ತು. ಆದರೆ ಯುಕೆ ನ್ಯಾಯಾಲಯ ಇದನ್ನು ಒಪ್ಪಿರಲಿಲ್ಲ.

    1947ರಲ್ಲಿ ವಿಭಜನೆಯಾದ ನಂತರ ಹೈದರಾಬಾದ್ ನಿಜಾಮರ ಆಸ್ತಿಯನ್ನು ಲಂಡನ್ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗಿತ್ತು. ಇದನ್ನರಿತ ಪಾಕಿಸ್ತಾನ ಹೈದರಾಬಾದ್ ನಿಜಾಮನ ಆಸ್ತಿಯ ಮೇಲೆ ನಮಗೆ ಹಕ್ಕಿದೆ ಎಂದು ಕಾನೂನು ಹೋರಾಟ ನಡೆಸಿತ್ತು. ಪಾಕಿಸ್ತಾನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಪ್ರಾರಂಭಿಸಿದ ನಂತರ ಇದು ಇಂಗ್ಲೆಂಡ್ ಹೈಕೋರ್ಟಿಗೆ ತಲುಪಿತ್ತು.

    ಲಂಡನ್‍ನ ನ್ಯಾಟ್‍ವೆಸ್ಟ್ ಬ್ಯಾಂಕ್ ಪಿಎಲ್‍ಸಿಯಲ್ಲಿ ಠೇವಣಿ ಇಟ್ಟಿರುವ ಸಂಪತ್ತಿನ ಬಗ್ಗೆ ಪಾಕಿಸ್ತಾನ ವಿವಾದ ಸೃಷ್ಟಿಸಿತ್ತು. ಆಗ ನಿಜಾಮ ವಂಶಸ್ತರಾದ ಹೈದರಾಬಾದ್‍ನ 8ನೇ ನಿಜಾಮ ಮುಕರಮ್ ಜಾ ಹಾಗೂ ಆತನ ಕಿರಿಯ ಸಹೋದರ ಮುಫಾಖಾಮ್ ಜಾ ಭಾರತಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ನಂತರ ಪ್ರಕರಣದ ವಿರುದ್ಧ ಹೋರಾಡಲು ಭಾರತಕ್ಕೆ ಬಲ ಸಿಕ್ಕಿತ್ತು.

    1948ರಲ್ಲಿ ಅಂದಿನ ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ವಶದಿಂದ ಸುಮಾರು 10,07,940 ಪೌಂಡ್ ಹಾಗೂ 9 ಶಿಲ್ಲಿಂಗ್‍ಗಳನ್ನು ಅಂದು ಹೊಸದಾಗಿ ಸ್ಥಾಪಿಸಲಾಗಿದ್ದ ಬ್ರಿಟನ್ ನೇಮಕ ಮಾಡಿದ್ದ ಹೈಕಮಿಷನರ್‍ಗೆ ವರ್ಗಾಯಿಸಲಾಗಿತ್ತು. ಅಂದಿನಿಂದ ಈ ಮೊತ್ತವು ಲಕ್ಷಾಂತರ ಪೌಂಡ್‍ಗಳಾಗಿ ಬೆಳೆದಿದೆ.

    ಬ್ಯಾಂಕಿಗೆ ಹಣ ಹೋಗಿದ್ದು ಹೇಗೆ?
    ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ನೇತೃತ್ವದ ಭಾರತ ಸರ್ಕಾರವು 1948ರ ಸೆಪ್ಟೆಂಬರ್‍ನಲ್ಲಿ ರಜಾಕರ್ ಗಳಿಂದ ಕಿರುಕುಳಕ್ಕೊಳಗಾದ ಜನರಿಗೆ ಸ್ಪಂದಿಸಲು ‘ಆಪರೇಷನ್ ಪೊಲೊ’ ಆಯೋಜಿಸಿದ್ದರು. ಈ ವೇಳೆ ನಿಜಾಮನ ಹಣಕಾಸು ಮಂತ್ರಿ ನವಾಬ್ ಮೊಯಿನ್ ನವಾಜ್ ಜಂಗ್ ಲಂಡನ್‍ನಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿದ್ದ ಹಬೀಬ್ ಇಬ್ರಾಹಿಂ ರಹಿಮತ್‍ವುಲ್ಲಾ ಖಾತೆಗೆ ಒಂದು ಬಿಲಿಯನ್ ಪೌಂಡ್ ವರ್ಗಾಯಿಸಿದ್ದ. ಈ ಹಣವನ್ನು ಆಗ ಬ್ಯಾಂಕ್ ಜಪ್ತಿ ಮಾಡಿತ್ತು.

    ಈ ಹಣದ ವಾರಸುದಾರಿಕೆ ಕುರಿತು ಭಾರತ, ಪಾಕಿಸ್ತಾನ ಮತ್ತು ನಿಜಾಮ ವಂಶಸ್ಥರ ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಪ್ರಕರಣದ ವಿಚಾರಣೆ ವೇಳೆ ನಿಜಾಮ ಸಂಸ್ಥಾನ 3.5 ದಶಲಕ್ಷ ಪೌಂಡ್ ಹಣವನ್ನು 1948ರ ಸೆಪ್ಟೆಂಬರ್‍ನಲ್ಲಿ ಪೊಲೀಸ್ ಕಾರ್ಯಾಚರಣೆಗೂ ಮುನ್ನ ಲಂಡನ್ ಹಾಗೂ ಕರಾಚಿಗೆ ವರ್ಗಾಯಿಸಿತ್ತು. ನಿಜಾಮರ ಖಜಾನೆಯಿಂದ 1 ದಶಲಕ್ಷ ಪೌಂಡ್ ಹಣ ರಹಿಮತ್‍ವುಲ್ಲಾ ಬ್ಯಾಂಕ್ ಖಾತೆಗೆ ಹಾಗೂ ಉಳಿದ 2.5 ದಶಲಕ್ಷ ಪೌಂಡ್ ಹಣವನ್ನು ಸೇನಾ ಡೀಲರ್‍ಗಳಿಗೆ ವರ್ಗಾವಣೆಯಾಗಿತ್ತು. ನಿಜಾಮ ಸಂಸ್ಥಾನದ ವಿತ್ತಾಧಿಕಾರಿ ಹಾಗೂ ಲಂಡನ್‍ನಲ್ಲಿ ಏಜೆಂಟ್ ಜನರಲ್ ಆಗಿದ್ದ ನವಾಬ್ ಮೊಯಿನ್ ನವಾಜ್ ಜಂಗ್, ನಿಜಾಮರ ಅನುಮತಿ ಪಡೆಯದೇ ಅಕ್ರಮವಾಗಿ ಈ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿದ್ದ.

  • ಐಎಂಎ ಆಸ್ತಿ ಸಂಪೂರ್ಣ ಮುಟ್ಟುಗೋಲು- ಆರ್.ಅಶೋಕ್

    ಐಎಂಎ ಆಸ್ತಿ ಸಂಪೂರ್ಣ ಮುಟ್ಟುಗೋಲು- ಆರ್.ಅಶೋಕ್

    ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಗೆ ಸೇರಿದ ಸಂಪೂರ್ಣ ಆಸ್ತಿಯನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಐಎಂಎಗೆ ಸೇರಿದ ಬಿಬಿಎಂಪಿ ವ್ಯಾಪ್ತಿಯ ಚರಾಸ್ತಿ, ಸ್ಥಿರಾಸ್ತಿ, ಸೇರಿದಂತೆ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 21.73 ಕೋಟಿ ರೂ.ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 17 ಆಸ್ತಿಗಳನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ವಿವರಿಸಿದರು.

    ಒಟ್ಟು 2.85 ಕೋಟಿ ರೂ. ನಗದು, 8.86 ಕೋಟಿ ರೂ. ಡಿಡಿ ಜಪ್ತಿ ಮಾಡಲಾಗಿದೆ. 59 ಲಕ್ಷ ರೂ.ನ 5 ವಾಹನಗಳು, 91.57 ಲಕ್ಷ ರೂ.ನ ಚಿನ್ನ ಮತ್ತು ಬೆಳ್ಳಿ ಆಭರಣಗಳು, 303 ಕೆ.ಜಿ.ಯ 5,880 ನಕಲಿ ಚಿನ್ನದ ಬಿಸ್ಕೆಟ್‍ಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 23 ಬ್ಯಾಂಕ್ ಅಕೌಂಟ್‍ನಲ್ಲಿನ 58 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಯಲ್ಲೊ ಎಕ್ಸ್‍ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಅದರ 5 ಅಂಗ ಸಂಸ್ಥೆಗಳ ಅಕ್ರಮದ ವಿರುದ್ಧ ಸಿಐಡಿ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಜನರಿಂದ 2 ರಿಂದ 2.5 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಕಾರ್ ಖರೀದಿ ಮಾಡಿ ಹೂಡಿಕೆದಾರರಿಗೆ ಮಾಸಿಕ 27 ಸಾವಿರ ರೂ. ಬಾಡಿಗೆ ನೀಡುವ ಕೆಲಸವನ್ನು ಈ ಕಂಪನಿ ಮಾಡುತ್ತಿತ್ತು. ಆದರೆ, ಈ ಕಂಪನಿ ಅಕ್ರಮವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂ. ಅಕ್ರಮ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

    2018ರಲ್ಲಿ ಪ್ರಾರಂಭವಾದ ಈ ಕಂಪನಿ ಕೇರಳ ಮೂಲದ್ದಾಗಿದೆ. ಈಗಾಗಲೇ 2 ಸಾವಿರ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು, ಕೇವಲ 63 ಜನರಿಗೆ ಮಾತ್ರ ಕಾರ್ ನೀಡಲಾಗಿದೆ. ಈಗಾಗಲೇ 40-60 ಕೋಟಿ ರೂ. ಹಣ ಸಂಗ್ರಹ ಮಾಡಿದೆ. ಇದು ಅಕ್ರಮವಾಗಿದ್ದು, ಸಂಸ್ಥೆಯ ನಿರ್ದೇಶಕರಾದ ರಮೀತ್ ಮಲ್ಹೋತ್ರ, ಜೋಜೊ ಥಾಮಸ್, ಮಾಡಿ ನಾಯರ್ ಸೇರಿದಂತೆ ಸಂಸ್ಥೆಯ ಪಾಲುದಾರರಾದ ಲಕ್ಷ್ಮಿ ಸುರೇಖ, ಆಯುಷಾ ಸಿದ್ದಿಕಿ ಹಾಗೂ ಇತರರನ್ನು ಬಂಧಿಸುವಂತೆ ಆದೇಶಿಸಲಾಗಿದೆ ಎಂದರು.

    ಕಂಪನಿಯಿಂದ ಸಾವಿರಾರು ಜನ ಮೋಸ ಹೋಗುವ ಸಾಧ್ಯತೆ ಇತ್ತು. ಇದೊಂದು ಬೋಗಸ್, ಬ್ಲೇಡ್ ಕಂಪನಿ. ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚೆನ್ನಣ್ಣವರ್, ಡಿಸಿ, ಎಸಿಗಳು ಸಂಪೂರ್ಣ ತನಿಖೆ ಮಾಡಿ ಇದೊಂದು ಅಕ್ರಮ ಕಂಪನಿ ಎಂದು ವರದಿ ನೀಡಿದ್ದಾರೆ. ಹೀಗಾಗಿ ಈ ಕಂಪನಿ ವಿರುದ್ಧ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆರ್‍ಬಿಐ ಸಹ ಇದೊಂದು ಬೋಗಸ್ ಕಂಪನಿ ಎಂದು ಪತ್ರ ಬರೆದಿದೆ. ಹೀಗಾಗಿ ಸಂಪೂರ್ಣ ತನಿಖೆ ಮಾಡಲು ಸಿಐಡಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಇಂತಹ ಆರ್ಥಿಕ ಅಪರಾಧ ತಡೆಯಲು ಬೋಗಸ್ ಕಂಪನಿಗಳ ಬಗ್ಗೆ ಮೂರು ತಿಂಗಳ ಒಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಅಕ್ರಮದಲ್ಲಿ ಯಾರೇ ಇದ್ದರು ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಆದೇಶ ನೀಡಲಾಗಿದೆ. ಯಾರು ಈ ಅಕ್ರಮದಲ್ಲಿ ಇದ್ದಾರೆ ಎನ್ನುವುದು ತನಿಖೆ ನಂತರ ತಿಳಿಯಲಿದೆ. ಐಎಂಎ ತರಹ ಎರಡನೇ ದೊಡ್ಡ ಎಕ್ಸ್ ಪ್ರೆಸ್ ಜಾಲ ಇದು. ಮುಗ್ದರನ್ನು ಯಾಮಾರಿಸೋದು ಇದರ ಕೆಲಸ. ಜನರು ಸಹ ಇಂತಹ ಕಂಪನಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಚಿವರು ಸಲಹೆ ನೀಡಿದರು.

  • 78 ಕೋಟಿ ಹೂಡಿಕೆ – ಐಶ್ವರ್ಯ ಕಂಪನಿಯ ಆಸ್ತಿ ದಾಖಲೆ ಜಪ್ತಿ – ಏನಿದು ಗಿಫ್ಟ್ ಡೀಡ್?

    78 ಕೋಟಿ ಹೂಡಿಕೆ – ಐಶ್ವರ್ಯ ಕಂಪನಿಯ ಆಸ್ತಿ ದಾಖಲೆ ಜಪ್ತಿ – ಏನಿದು ಗಿಫ್ಟ್ ಡೀಡ್?

    ಬೆಂಗಳೂರು: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಡಿಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಂದು ಶಾಕ್ ನೀಡಿದೆ. ಪುತ್ರಿ ಐಶ್ವರ್ಯ ಹೆಸರಿನಲ್ಲಿದ್ದ ಆಸ್ತಿಯ ದಾಖಲೆಯನ್ನು ಜಪ್ತಿ ಮಾಡಿದೆ.

    ಸೋಲ್ ಆಂಡ್ ಸೇಲ್ಸ್ ಸೋಲಾರ್ ಕಂಪನಿಯಲ್ಲಿ 78 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಐಶ್ವರ್ಯ ವ್ಯವಹಾರ ಆರಂಭಿಸಿದ್ದರು. ಡಿಕೆಶಿ ಸ್ನೇಹಿತರ ಮೂಲಕ ಹಣವನ್ನು ಉಡುಗೊರೆಯಾಗಿ ಸ್ವೀಕರಿಸಿ ಐಶ್ವರ್ಯ ಈ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    40 ಕೋಟಿ ರೂ. ಹಣವನ್ನು ಶಿವಕುಮಾರ್ ಸ್ನೇಹಿತರು ಗಿಫ್ಟ್ ಡೀಡ್ ಮಾಡಿದ್ದಾರೆ. ಗಿಫ್ಟ್ ಡೀಡ್ ಮಾಡಿದ ಹಣ ಬೇನಾಮಿಯಾಗಿದ್ದು ಇದು ಶಿವಕುಮಾರ್ ಅವರದ್ದೇ. ಬೇನಾಮಿ ಹಣದ ಮೂಲಕ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.

    ದಾಖಲೆಗಳನ್ನು ವಶಕ್ಕೆ ಪಡೆದು ಇಡಿ ವಿಚಾರಣೆ ಮುಂದುವರಿಸಿದ್ದು ತನಿಖೆಯ ವೇಳೆ ಇದು ಅಕ್ರಮ ಎನ್ನುವುದು ಸಾಬೀತಾದರೆ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.

    ಮಂಗಳವಾರ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಡಿ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಐಶ್ವರ್ಯ ಹೆಸರಿನಲ್ಲಿ ಭಾರೀ ಪ್ರಮಾಣದ ವ್ಯವಹಾರ ನಡೆದಿರುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.

    ಐಶ್ವರ್ಯ ಖಾತೆಯಿಂದ 108 ಕೋಟಿ ರೂ. ವರ್ಗಾವಣೆ ಆಗಿದೆ. ಪುತ್ರಿಗೆ 24-25 ವರ್ಷವಾಗಿದ್ದರಿಂದ ಇದು ನಂಬಲೂ ಸಾಧ್ಯವಿಲ್ಲ. ಆದರೂ ಈ ಸತ್ಯವನ್ನು ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಆರ್ಥಿಕ ವ್ಯವಹಾರ ಹೇಗೆ ಸಾಧ್ಯ? ಇದು ಕೇವಲ ಬರೀ 41 ಲಕ್ಷ ರೂ.ಗೆ ಸಂಬಂಧಿಸಿದಲ್ಲ ಸಾಕಷ್ಟು ಆಳವಾಗಿ ತನಿಖೆ ನಡೆಸಬೇಕಿದೆ. ಬೇರೆ ಬೇರೆ ಖಾತೆಯಿಂದ ಸಾಕಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿದೆ. 800 ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆಯ ಕರಾಳತೆಯನ್ನು ತೋರಿಸುತ್ತದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ನಟರಾಜ್ ವಾದಿಸಿದರು.

    143 ಕೋಟಿ ರೂ. ದಾಖಲೆ ಇಲ್ಲದ ನಗದು ಹಣ ಪತ್ತೆಯಾಗಿದೆ. ಇದು ಕಾನೂನು ಬಾಹಿರ ಹಣವಾಗಿದ್ದು ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದಾಗ 317 ಬ್ಯಾಂಕ್ ಖಾತೆಗಳಲ್ಲಿ ಅವ್ಯವಹಾರ ನಡೆದಿರುವುದು ತಿಳಿಯುತ್ತದೆ ಎಂದಾಗ ಈ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ನಟರಾಜ್ ಅವರು, ಈಗ ಎಲ್ಲ ದಾಖಲೆಗಳು, ವಿವರಗಳನ್ನು ಬಹಿರಂಗಪಡಿಸಲು ಇದು ಟ್ರಯಲ್ ಕೋರ್ಟ್ ಅಲ್ಲ ಎಂದು ಉತ್ತರಿಸಿದರು.

    ಈ ಪ್ರಕರಣಕ್ಕೆ ಸಾಕಷ್ಟು ಮಹತ್ವ ಇದ್ದು, ಗಿಫ್ಟ್ ಡಿಡ್ ಮೂಲಕ ಪಡೆದು ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ. ಒಂದು ಕಡೆಯಿಂದ ಪಡೆದು ಮತ್ತೊಂದು ಕಡೆ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ನಟರಾಜ್ ಮನವಿ ಮಾಡಿಕೊಂಡಿದ್ದರು.

    ಸೋಲ್ ಆಂಡ್ ಸೇಲ್ಸ್ ಸೋಲಾರ್ ಕಂಪನಿಯಲ್ಲಿ 78 ಕೋಟಿ ರೂ. ಹೂಡಿಕೆ ಮಾಡಿರುವ ಐಶ್ವರ್ಯ ಗ್ಲೋಬಲ್ ಕಾಲೇಜಿನಲ್ಲಿ ಟ್ರಸ್ಟಿಯಾಗಿದ್ದಾರೆ. ಸೆ.12 ರಂದು ಇಡಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು.


    ಏನಿದು ಗಿಫ್ಟ್ ಡೀಡ್?
    ಸ್ವಯಂ ಪ್ರೇರಿತವಾಗಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ತನ್ನಲ್ಲಿದ್ದ ಆಸ್ತಿ ಅಥವಾ ಹಣವನ್ನು ಯಾವುದೇ ಆಸ್ತಿ, ಹಣ ಪಡೆಯದೇ ಉಚಿತವಾಗಿ ದಾನ ನೀಡುವುದಕ್ಕೆ ಗಿಫ್ಟ್ ಡೀಡ್ ಎಂದು ಕರೆಯಲಾಗುತ್ತದೆ. ಒಮ್ಮೆ ಆಸ್ತಿ ಮೇಲೆ ಗಿಫ್ಟ್ ಡೀಡ್ ಸರಿಯಾಗಿ ಬರೆದು ನೋಂದಣಿ ಮಾಡಿಕೊಂಡರೆ ಆಗ ಆಸ್ತಿಯ ಮೇಲಿನ ಮೂಲ ಮಾಲೀಕನ ಎಲ್ಲಾ ಹಕ್ಕುಗಳು ದಾನ ಪಡೆದುಕೊಂಡವರಿಗೆ ವರ್ಗಾವಣೆಯಾಗುತ್ತದೆ. ಒಮ್ಮೆ ನೋಂದಣಿಯಾದ ಬಳಿಕ ಮೂಲ ಮಾಲೀಕ ಅಥವಾ ಆತನ ಸಂಬಂಧಿಕರು ಆ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಲು ಅವಕಾಶವಿಲ್ಲ.

  • ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ

    ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿಶಾಲಕ್ಷಿ ದೇವಿ ಅವರಿಂದ ಆಸ್ತಿಯನ್ನು ಬೇನಾಮಿಯಾಗಿ ಪಡೆದುಕೊಂಡಿದ್ದಾರೆ ಎನ್ನಲಾದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

    ಬಂಧನದಲ್ಲಿರುವ ಡಿಕೆಶಿಯನ್ನು ಬುಧವಾರ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಶಿವಕುಮಾರ್ ಅವರು 44 ಕೋಟಿ ಅಕ್ರಮ ವಹಿವಾಟು ನಡೆಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿರುವ ಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ವಾದ ಸಂದರ್ಭದಲ್ಲಿ ಬೇರೆ ವಿಚಾರದ ಜೊತೆ ಈ ಅಂಶ ಬಲವಾಗಿ ಪ್ರತಿಪಾದನೆಯಾದ ಕಾರಣ ಕೋರ್ಟ್ ಡಿಕೆಶಿಯನ್ನು 9 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತು.

    ಡಿಕೆಶಿ ಮತ್ತು ಆಪ್ತರ ನಿವಾಸದ ಮೇಲಿನ ಐಟಿ ದಾಳಿಯ ವೇಳೆ ಈ ಮಹತ್ವದ ದಾಖಲೆಗಳು ಲಭ್ಯವಾಗಿದ್ದು ಅದರಲ್ಲಿ 5 ಕೋಟಿ ಬೇನಾಮಿ ವಹಿವಾಟಿನ ವಿಚಾರ ಪತ್ತೆಯಾಗಿತ್ತು. ದೆಹಲಿ ಫ್ಲ್ಯಾಟ್ ನಲ್ಲಿ ಪತ್ತೆಯಾದ 8.59 ಕೋಟಿ ರೂಪಾಯಿಯ ಮೂಲವನ್ನು ಪತ್ತೆ ಮಾಡುವ ಜೊತೆ ಇಡಿ ಈಗ 44 ಕೋಟಿ ರೂ. ಅಕ್ರಮ ವ್ಯವಹಾರಗಳ ಕುರಿತು ಡಿಕೆ ಶಿವಕುಮಾರ್ ಅವರಲ್ಲಿ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ವಿಶಾಲಾಕ್ಷಿದೇವಿ ಯಾರು?
    ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರ ಪುತ್ರಿ ಯಾಗಿರುವ ವಿಶಾಲಾಕ್ಷಿದೇವಿ ಶ್ರೀಕಂಠದತ್ತ ಒಡೆಯರ್ ಸಹೋದರಿ ಆಗಿದ್ದಾರೆ. ಬೆಂಗಳೂರು ಅರಮನೆ ಆಸ್ತಿಯ ಒಡೆತನ ಹೊಂದಿದ್ದ ವಿಶಾಲಾಕ್ಷಿ ದೇವಿ ಡಿಕೆ ಶಿವಕುಮಾರ್ ಜೊತೆ ಬೇನಾಮಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಐಟಿ ಮಾಡಿತ್ತು. 2018 ಆಕ್ಟೋಬರ್ ನಲ್ಲಿ ವಿಶಾಲಾಕ್ಷಿ ದೇವಿ ನಿಧನ ಹೊಂದಿದ್ದರು.

    ಲಿಂಕ್ ಹೇಗೆ?
    ಬೆಂಗಳೂರು ಅರಮನೆ ಆಸ್ತಿಯಲ್ಲಿ ವಿಶಾಲಾಕ್ಷಿ ದೇವಿ ಪಾಲನ್ನು ಹೊಂದಿದ್ದರು. ಈ ಆಸ್ತಿಯನ್ನು ಶಿವಕುಮಾರ್ ಬೇನಾಮಿ ರೂಪದಲ್ಲಿ ಖರೀದಿಸಿದ್ದಾರೆ ಎಂದು ಈ ಹಿಂದೆಯೇ ಆದಾಯ ತೆರಿಗೆ ಇಲಾಖೆ ಹೈಕೋರ್ಟಿಗೆ ಮಾಹಿತಿ ನೀಡಿತ್ತು. ಡಿಕೆ ಶಿವಕುಮಾರ್ ಅವರು ತಮ್ಮ ಸೋದರ ಸಂಬಂಧಿ ಶಶಿಕುಮಾರ್ ಮೂಲಕ ಈ ವ್ಯವಹಾರ ನಡೆಸಿದ್ದು, ವಿಶಾಲಕ್ಷಿ ದೇವಿ ಅವರಿಗೆ 1 ಕೋಟಿ ರೂ. ಹಣವನ್ನು ಚೆಕ್ ಮೂಲಕ ನೀಡಿದ್ದರೆ 4 ಕೋಟಿ ರೂ. ಹಣವನ್ನು ಚಂದ್ರಶೇಖರ್ ಸುಖಪುರಿ ಎಂಬವರ ಮೂಲಕ ನಗದು ರೂಪದಲ್ಲಿ ನೀಡಲಾಗಿದೆ. ಈ ವ್ಯವಹಾರದಲ್ಲಿ ವಿಶಾಲಾಕ್ಷಿ ದೇವಿ ಸಹ ಭಾಗಿಯಾಗಿದ್ದಾರೆ ಎಂದು ಐಟಿ ಆರೋಪಿಸಿತ್ತು.

    ಪತ್ತೆಯಾಗಿದ್ದು ಹೇಗೆ?
    ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಡಿಕೆಶಿಯ ಸೋದರ ಸಂಬಂಧಿ ಶಶಿಕುಮಾರ್ ನಿವಾಸದ ಮೇಲೂ ದಾಳಿ ನಡೆದಿತ್ತು ಇಲ್ಲಿ ಸಿಕ್ಕಿದ ದಾಖಲೆ ಆಧಾರಿಸಿ ವಿಶಾಲಕ್ಷಿ ದೇವಿ ನಿವಾಸದ ಮೇಲೂ ದಾಳಿ ನಡೆಸಿ ಅವರ ಆಸ್ತಿ ಮುಟ್ಟುಗೋಲು ಹಾಕಿತ್ತು. ದಾಳಿಯ ಬಳಿಕ ವಿಶಾಲಕ್ಷಿ ದೇವಿ ನನಗೂ ಬೇನಾಮಿ ವ್ಯವಹಾರಕ್ಕೂ ಸಂಬಂಧ ಇಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಐಟಿ ಚಂದ್ರಶೇಖರ್ ಮತ್ತು ಶಶಿಕುಮಾರ್ ಈ ಹಣದ ಮೂಲವನ್ನು ಸಾಬೀತು ಪಡಿಸಿಲ್ಲ. ಉದ್ಯಮಿ ಸಚಿನ್ ನಾರಾಯಣ ಅವರು ಈ ಹಣ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮೂಲವನ್ನು ತೋರಿಸುವಲ್ಲಿ ವಿಫಲರಾಗಿದ್ದು, ಡಿಕೆ ಶಿವಕುಮಾರ್ ಅವರೇ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿತ್ತು.

    ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು ಹೇಗೆ?
    ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.

    ಡಿಕೆಶಿ ಆಸ್ತಿ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
    ಚರಾಸ್ತಿ
    2013- 60.34 ಕೋಟಿ
    2019- 101.31 ಕೋಟಿ
    5 ವರ್ಷದ ಮ್ಯಾಜಿಕ್- 94.97 ಕೋಟಿ ರೂ. ಜಾಸ್ತಿ

    ಕೃಷಿ ಜಮೀನು
    2013-1.14 ಕೋಟಿ
    2019- 9.04 ಕೋಟಿ
    5 ವರ್ಷದ ಮ್ಯಾಜಿಕ್- 7.90 ಕೋಟಿ ಜಾಸ್ತಿ

    ವಸತಿ ಕಟ್ಟಡಗಳು
    2013-14.02 ಕೋಟಿ
    2019-103.29 ಕೋಟಿ
    5 ವರ್ಷದ ಮ್ಯಾಜಿಕ್- 89 ಕೋಟಿ ಜಾಸ್ತಿ

    ಡಿಕೆಶಿ ಆಸ್ತಿ
    ಕೃಷಿಯೇತರ ಜಮೀನು
    2013-149.65 ಕೋಟಿ
    2019-511.25 ಕೋಟಿ
    5 ವರ್ಷದ ಮ್ಯಾಜಿಕ್- 361 ಕೋಟಿ

    ವಾಣಿಜ್ಯ ಕಟ್ಟಡಗಳು
    2013-26.24 ಕೋಟಿ
    2019-37.27 ಕೋಟಿ
    5 ವರ್ಷದ ಮ್ಯಾಜಿಕ್- 11 ಕೋಟಿ ಜಾಸ್ತಿ

    2013- 251.39
    2019- 762.16
    5 ವರ್ಷದ ಮ್ಯಾಜಿಕ್- 510.77

  • ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಕೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆ ಹಿಡುಕ ಎಂದು ಗೌರಿಬಿದನೂರು ಶಾಸಕ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಶಿವಶಂಕರರೆಡ್ಡಿ, ಅನರ್ಹ ಶಾಸಕ ಸುಧಾಕರ್ ವಿರುದ್ಧ ಹರಿಹಾಯ್ದರು. ರಾಜಕೀಯ ಕ್ಷೇತ್ರದಲ್ಲಿ ಯಾರನ್ನೇ ಕೇಳಿ ಸುಧಾಕರ್ ಬಗ್ಗೆ ಬ್ರೋಕರ್ ಎಂದು ಕರೆಯುತ್ತಾರೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ. ಈಗಲೂ ಅದೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದ ಸುಧಾಕರ್ ಹಣ ಲೂಟಿ ಹೊಡೆಯುತ್ತಿದ್ದಾರೆ. ಪೇರೇಸಂದ್ರ ಸ್ವಗ್ರಾಮದಲ್ಲಿ ಸುಧಾಕರ್ ಕಟ್ಟಿರುವ ಶಾಲೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಮಾಡಿರುವ ಬೇನಾಮಿ ಆಸ್ತಿಯೇ ಇದಕ್ಕೆ ಸಾಕ್ಷಿ. ಬೆಂಗಳೂರಿನ ಸದಾಶಿವನಗರದಲ್ಲಿ ಸ್ವತಃ ಸಿದ್ದರಾಮಯ್ಯನವರಿಗೆ ಮನೆ ಕಟ್ಟಲು ಆಗಲಿಲ್ಲ. ಆದರೆ ಸುಧಾಕರ್ 50 ಕೋಟಿ ರೂ.ಯಲ್ಲಿ ಮನೆ ಕಟ್ಟಿದ್ದಾರೆ. ಸುಧಾಕರ್ ಏನು ಬೇಸಾಯ ಮಾಡಿದ್ರಾ, ಇಲ್ಲ ಅವರಪ್ಪ ಉಳುಮೆ ಮಾಡ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.

    ಕ್ಷೇತ್ರದಲ್ಲಿನ ಜಲ್ಲಿ ಕ್ರಷರ್ ಮಾಲೀಕರಿಂದ ತಲಾ ಒಂದು ಕ್ರಷರ್ ಗೆ ಪ್ರತಿ ತಿಂಗಳು 2 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ತಿಂಗಳಿಗೆ 2 ಕೋಟಿ ಅಷ್ಟು ಹಣ ವಸೂಲಿ ಮಾಡುತ್ತಿದ್ದು, ಭೂಪರಿವರ್ತನೆಗೆ ಎಕರೆಗೆ 8 ಲಕ್ಷ ರೂ. ವರೆಗೂ ಹಣ ಪಡೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಅಲ್ಲದೆ ಈಗಿನ ರಾಜಕಾರಣದಲ್ಲಿ ಪಕ್ಷಗಳನ್ನು ಬದಲಾಯಿಸೋದು ಸಾಮಾನ್ಯ. ಆದರೆ ಪಕ್ಷಗಳಿಗೆ ನಿಷ್ಠೆಯಿಂದ ಇರಬೇಕಾಗುತ್ತೆ. ಪಕ್ಷ ಸಂಕಷ್ಟದಲ್ಲಿ ಇದ್ದಾಗ ಪಕ್ಷಕ್ಕೆ ಕೈ ಕೊಟ್ಟು ದ್ರೋಹ ಬಗೆದ ಸುಧಾಕರ್ ಗೆ ಉಪಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಂಗ್ ನೀಡಿದರು.