Tag: ಆಸ್ತಿ

  • ಮನೆ ಮುಂದೆ ಪತ್ನಿ ಎದುರೇ ಪತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಸೆರೆ

    ಮನೆ ಮುಂದೆ ಪತ್ನಿ ಎದುರೇ ಪತಿಯ ಬರ್ಬರ ಹತ್ಯೆ – ಸಿಸಿಟಿವಿಯಲ್ಲಿ ಸೆರೆ

    ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಆತನ ಸಂಬಂಧಿಗಳು ಹಾಡಹಗಲೇ ಕೊಲೆ ಮಾಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮೇ 15 ರಂದು ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (39) ಕೊಲೆಯಾಗಿದ್ದ ವ್ಯಕ್ತಿ. ಸಂಬಂಧಿಕರಾದ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಹತ್ಯೆ ಮಾಡಿದ್ದಾರೆ. ಕೊಲೆಯ ದೃಶ್ಯಗಳು ಉಮೇಶ್ ಮನೆ ಎದುರಿನ ಸಿಸಿಟಿವಿಯಲ್ಲಿ ಸೆರೆಯಾಗಿರೋದು ಬೆಳಕಿಗೆ ಬಂದಿದೆ.

    ಅಂಗವಿಕಲನಾಗಿದ್ದ ಉಮೇಶ್ ತಮ್ಮ ತ್ರಿಚಕ್ರ ಬೈಕ್ ಮೇಲೆ ಹೊರಟಿದ್ದಾಗ ಆರೋಪಿಗಳು ತಡೆದಿದ್ದಾರೆ. ನಂತರ ಬೈಕ್ ಮೇಲಿಂದ ಕೆಡವಿ ಹಲ್ಲೆ ಮಾಡಿ, ಕಲ್ಲಿನಿಂದ ಹೊಡೆದು ಕೊಲೆಗೈದಿದ್ದಾರೆ. ಈ ಸಮಯದಲ್ಲಿ ಹತ್ತಿರದಲ್ಲಿದ್ದ ಉಮೇಶ್ ಪತ್ನಿ ಸುಮಾ ಚೀರಾಡಿ ಜನರನ್ನು ಕರೆಯಲು ಪ್ರಯತ್ನಿಸಿದ್ದಾರೆ. ಆಗ ಕೊಲೆಗಾರರ ಪೈಕಿ ಓರ್ವ ಸುಮಾರನ್ನು ಸಹ ಅಟ್ಟಿಸಿಕೊಂಡು ಓಡಿ ಬಂದಿದ್ದಾನೆ. ಆಗ ಸುಮಾ ಮನೆಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಬಚಾವ್ ಆಗಿದ್ದಾರೆ.

    ಮೃತ ಉಮೇಶ್ ಮೇಲೆ ಈ ಹಿಂದೆಯೂ ಕೂಡ ಹಲ್ಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ತನ್ನ ಮನೆ ಹಾಗೂ ಮನೆ ಸುತ್ತ ಸಿಸಿಟಿವಿ ಅಳವಡಿಸಿದ್ದರು. ಇದೀಗ ಸಿಸಿಟಿವಿಯ ಮೂಲಕ ಅವರ ಕೊಲೆ ರಹಸ್ಯ ಬಯಲಾಗಿದೆ. ಈ ಸಂಬಂಧ ಮೃತನ ಪತ್ನಿ ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    ಪೊಲೀಸರ ತಪ್ಪಿನಿಂದ ಅಂಗವಿಕಲನ ಬರ್ಬರ ಕೊಲೆ?

    – ಕಲ್ಲು, ರಾಡ್‍ನಿಂದ ಹೊಡೆದು ಕೊಂದ ಸಂಬಂಧಿಕರು

    ಧಾರವಾಡ: ಪೊಲೀಸರು ಮಾಡಿದ ಒಂದು ತಪ್ಪಿನಿಂದ ಧಾರವಾಡದಲ್ಲಿ ಓರ್ವ ಅಂಗವಿಕಲ ಇಂದು ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಹೌದು. ಧಾರವಾಡದ ಪತ್ರೇಶ್ವರ ನಗರದಲ್ಲಿ ಈ ಕೊಲೆ ನಡೆದಿದ್ದು, ಉಮೇಶ್ ಬಾಳಗಿ (37) ಕೊಲೆಯಾದ ಅಂಗವಿಕಲ. ಕಳೆದ ಹಲವು ವರ್ಷಗಳಿಂದ ಉಮೇಶ್ ಬಾಳಗಿ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿವಾದ ನಡೆದಿತ್ತು. ಈ ಮೊದಲು ಉಮೇಶ್‍ನ ಮೇಲೆ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಮೊದಲೇ ಕಾಲಿಲ್ಲದೇ ಉಮೇಶ್ ತನ್ನಿಷ್ಟಕ್ಕೆ ತಾನು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ರಕ್ತ ಸಂಬಂಧಿಗಳು ಆಸ್ತಿ ಬರೆದು ಕೊಡಲು ಪಿಡಿಸುತ್ತಲೇ ಇದ್ದರು. ಈ ಹಿಂದೆ ಉಮೇಶ್ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಪೊಲೀಸ್ ಆಯುಕ್ತ ಕಚೇರಿಗೆ ಕೂಡ ದೂರು ಹೋಗಿತ್ತು. ನಂತರ ಉಪನಗರ ಪೊಲೀಸರು ಉಮೇಶ್ ಅವರ ದೂರನ್ನ ಸ್ವೀಕರಿಸಿ ಪ್ರಕರಣ ದಾಖಲಿಸಿದ್ದರು.

    ಆದರೆ ಆರೋಪಿಗಳನ್ನ ಬಂಧಿಸುವ ಬದಲು, ಅವರಿಂದಲೂ ಉಮೇಶ್ ವಿರುದ್ಧ ಪ್ರತಿ ದೂರನ್ನ ಪಡೆದಿದ್ದರು. ಆಗಲೇ ಆರೋಪಿಗಳನ್ನ ಬಂಧಿಸಿದ್ದರೆ ಈಗ ಉಮೇಶ್ ಅವರ ಕೊಲೆ ನಡೆಯುತ್ತಿರಲಿಲ್ಲ. ಇವತ್ತು ಉಮೇಶ್ ಮನೆ ಬಳಿ ರಸ್ತೆಯಲ್ಲಿ ಬರುವಾಗಲೇ ಅವರ ಮೇಲೆ ಕಲ್ಲು ಹಾಗೂ ಕಬ್ಬಿಣದ ರಾಡ್‍ನಿಂದ ಸಂಬಂಧಿಕರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಉಪನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಪೊಲೀಸರ ಒಂದು ಸಣ್ಣ ತಪ್ಪಿನಿಂದ ಅಮಾಯಕ ಅಂಗವಿಕಲನ ಕೊಲೆ ನಡೆದು ಹೋಯಿತು ಎಂಬ ಆರೋಪ ಕೇಳಿ ಬಂದಿದೆ. ಇತ್ತ ಉಮೇಶ್ ಅವರನ್ನು ಕಳೆದುಕೊಂಡ ಪತ್ನಿ ಹಾಗೂ ಮಗಳು ಮೃತದೇಹದ ಮುಂದೆ ಕಣ್ಣೀರಿಡುತ್ತಾ ನಿಂತಿದ್ದರು.

  • ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    ತನ್ನ ಕುಟುಂಬದ 6 ಮಂದಿಯನ್ನ ಕೊಂದು ಪೊಲೀಸರಿಗೆ ಶರಣಾದ

    – ಪೋಷಕರು, ಸೋದರ, ಪತ್ನಿ, ಮಕ್ಕಳಿಬ್ಬರ ಬರ್ಬರ ಹತ್ಯೆ

    ಲಕ್ನೋ: ವ್ಯಕ್ತಿಯೊಬ್ಬ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಲಕ್ನೋದ ಹೊರವಲಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಆರೋಪಿ ಅಜಯ್ ಸಿಂಗ್ (26) ಕೊಲೆ ಮಾಡಿದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

    ಆರೋಪಿ ಸಿಂಗ್ ತನ್ನ ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಸಿಂಗ್ ಕೋಪಗೊಂಡು ಆಯುಧದಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ, ತನ್ನ ಮಕ್ಕಳು ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

    ಕೊಲೆ ಮಾಡಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ವೇಳೆ ನನ್ನ ತಾಯಿ, ತಂದೆ, ಹಿರಿಯ ಸಹೋದರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

    ಮೃತರನ್ನು ತಂದೆ ಅಮರ್ (60), ತಾಯಿ ರಾಮ್‍ಸಖಿ (55), ಸಹೋದರ ಅರುಣ್ (40), ಪತ್ನಿ ರಾಮ್‍ದುಲಾರಿ (35), ಸೌರಭ್ (7) ಮತ್ತು ಸಾರಿಕಾ (2) ಎಂದು ಗುರುತಿಸಲಾಗಿದೆ.

    ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದರು.

  • ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಚೇಗು ಗ್ರಾಮದ ನಿವಾಸಿ ಮಂಜಯ್ಯ (58) ಮೃತ ದುರ್ದೈವಿ. ಲಕ್ಷ್ಮಣ ಕೊಲೆಗೈದ ಆರೋಪಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತೋಟದ ವಿಚಾರವಾಗಿ ಮಂಜಯ್ಯ ಹಾಗೂ ಲಕ್ಷ್ಮಣ ಸಹೋದರರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆದಿತ್ತು. ಈ ವಿಚಾರವಾಗಿ ಸೋಮವಾರವೂ ಸಹೋದರರು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ಲಕ್ಷ್ಮಣ ನಾಡ ಬಂದೂಕಿನಿಂದ ಅಣ್ಣನ ಮೇಲೆ ಪೈರಿಂಗ್ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೂಜೆ ಮಾಡ್ತಿದ್ದಾಗಲೇ ಚಿಕ್ಕಮ್ಮನ ಕತ್ತು ಸೀಳಿದ

    ಪೂಜೆ ಮಾಡ್ತಿದ್ದಾಗಲೇ ಚಿಕ್ಕಮ್ಮನ ಕತ್ತು ಸೀಳಿದ

    – ಗಂಟೆ ಶಬ್ದ ಕೇಳ್ತಿದ್ದಂತೆ ಮನೆಗೆ ನುಗ್ಗಿದ

    ಬೆಂಗಳೂರು: ಆಸ್ತಿಗಾಗಿ ಸ್ವಂತ ಚಿಕ್ಕಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ನಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ನಾರಾಯಣಮ್ಮ ಮೃತ ಮಹಿಳೆ. ಮೃತ ಮಹಿಳೆಯ ಪತಿ ತಾತಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ನಾರಾಯಣಮ್ಮ ಎರಡನೇ ಪತ್ನಿಯಾಗಿದ್ದಳು. ತಾತಪ್ಪ ಎರಡನೇ ಮದುವೆಯಾದ ನಂತರ ಮೊದಲ ಪತ್ನಿ ಮತ್ತು ಮಕ್ಕಳನ್ನು ದೂರ ಇಟ್ಟಿದ್ದು, ಆಸ್ತಿಯನ್ನು ಭಾಗ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮಹೇಶ್ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ತಾತಪ್ಪನ ಬಳಿ ನಲ್ಲಯ್ಯನ ದೊಡ್ಡಿಯಲ್ಲಿ 5-6 ಎಕರೆಯಷ್ಟು ಜಮೀನಿತ್ತು. ತಾತಪ್ಪನ ಮೊದಲನೇ ಪತ್ನಿಯ ಹೆಸರಲ್ಲಿ 2 ಎಕರೆ, ಎರಡನೇ ಪತ್ನಿಯ ಹೆಸರಲ್ಲಿ 2 ಎಕರೆ ಜಮೀನನ್ನು ಬರೆದಿದ್ದನು. ಇದಕ್ಕೆ ಮೊದಲನೇ ಪತ್ನಿಯ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೊರೆ ಹೋಗಿದ್ದರು. ಕಳೆದ ಹತ್ತು ವರ್ಷಗಳ ಹಿಂದೆಯೇ ಇವರು ಕೇಸ್ ದಾಖಲಿಸಿದ್ದರು.

    ಇತ್ತೀಚೆಗೆ ಮೃತ ನಾರಾಯಣಮ್ಮನಿಗೆ ಒಂದೂವರೆ ಎಕರೆ ಆಸ್ತಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಕೋಪಗೊಂಡ ಮಹೇಶ್ ಮತ್ತೆ ಕ್ಯಾತೆ ತೆಗೆದು ಪದೇ ಪದೇ ನಾರಾಯಣಮ್ಮನ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದನು. ಆಗ ನಾರಾಯಣಮ್ಮ ಕೂಡ ಆತನಿಗೆ ಬೈದು ಕಳುಹಿಸಿದ್ದಳು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

    ಅದರಂತೆಯೇ ಆರೋಪಿ ಮಹೇಶ್ ಇಂದು ಮುಂಜಾನೆ ನಾರಾಯಣಮ್ಮನ ಮನೆ ಬಳಿ ಬಂದಿದ್ದಾನೆ. ನಂತರ ಅಕ್ಕಪಕ್ಕ ಯಾರೂ ಇಲ್ಲದನ್ನು ಗಮನಿಸಿ ಆಕೆ ಪೂಜೆ ಮಾಡೋ ಸಮಯದಲ್ಲಿ ಕೊಲೆ ಮಾಡಲು ಪ್ಲಾನ್ ಮಾಡಿ ಕಾದು ಕುಳಿತಿದ್ದನು. ನಂತರ ಗಂಟೆ ಶಬ್ದ ಕೇಳುತ್ತಿದ್ದಂತೆ ಮನೆ ಒಳಗಡೆ ನುಗ್ಗಿದ್ದು, ಮಚ್ಚಿನಿಂದ ಆಕೆಯ ಕುತ್ತಿಗೆಯನ್ನ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಕೊಲೆ – ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್

    ನಿವೃತ್ತ ಸಬ್ ಇನ್‍ಸ್ಪೆಕ್ಟರ್ ಕೊಲೆ – ಮೃತದೇಹದೊಂದಿಗೆ ಸೆಲ್ಫಿ ಕ್ಲಿಕ್

    – ಚಿಕ್ಕಪ್ಪನಿಗೆ ರಾಡ್‍ನಿಂದ ಹೊಡೆದು ಭೀಕರ ಕೊಲೆ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೇ ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಘಟನೆ ಆದಿಲಾಬಾದ್ ಜಿಲ್ಲೆಯ ಉಟ್ನೂರ್ ಮಂಡಲದ ಗಂಗನಪೇಟ ಗ್ರಾಮದಲ್ಲಿ ನಡೆದಿದೆ.

    ಟಿ.ಶಿವರಾಜ್ (62) ಮೃತ ನಿವೃತ್ತ ಸಹಾಯಕ ಸಬ್‍ಇನ್‍ಸ್ಪೆಕ್ಟರ್. ಈ ಘಟನೆ ಶುಕ್ರವಾರ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆದ ನಂತರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಾದ ಟಿ.ವಿವೇಕ್, ಆತನ ಸಹೋದರ ಟಿ.ಮನೋಜ್ ಮತ್ತು ಅವರ ತಾಯಿ ವನಜಾ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ಏನಿದು ಪ್ರಕರಣ?
    ಮೃತ ಟಿ.ಶಿವರಾಜ್ ಮತ್ತು ಅವರ ಸಹೋದರ ಟಿ.ಜಯರಾಜ್ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಶುಕ್ರವಾರ ಜಯರಾಜ್ ಪುತ್ರರಾದ ವಿವೇಕ್ ಮತ್ತು ಮನೋಜ್ ಇಬ್ಬರು ಶಿವರಾಜ್ ವಾಸಿಸುತ್ತಿದ್ದ ಮನೆಗೆ ಹೋಗಿ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕೋಪಗೊಂಡ ವಿವೇಕ್ ಅಲ್ಲೆ ಇದ್ದ ರಾಡ್ ತೆಗೆದುಕೊಂಡು ಶಿವರಾಜ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಶಿವರಾಜ್ ನಿಂತಲ್ಲೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇತ್ತ ಶಿವರಾಜ್ ಮೃತಹೇಹದೊಂದಿಗೆ ವಿವೇಕ್ ಸೆಲ್ಫಿ ತೆಗೆದುಕೊಂಡು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಶಿವರಾಜ್ ಅವರು 2017ರಲ್ಲಿ ನಿವೃತ್ತರಾಗಿದ್ದು, ಸ್ಥಳೀಯ ಗಂಗನಪೇಟ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪೂರ್ವಜರ ಆಸ್ತಿಯನ್ನು ಶಿವರಾಜ್ ಮತ್ತು ಜಯರಾಜ್ ನಡುವೆ ಸಮಾನವಾಗಿ ಹಂಚಿಕೆ ಮಾಡಿಲ್ಲ ಎಂದು ಆಗಾಗ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆದರೆ ಶುಕ್ರವಾರ ಜಗಳ ವಿಕೋಪಕ್ಕೆ ಹೋಗಿ ವಿವೇಕ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿ ವಿವೇಕ್, ಸಹೋದರ ಮತ್ತು ತಾಯಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಮಾತೆ ಮಾಣಿಕೇಶ್ವರಿ ಲಿಂಗೈಕ್ಯ- ಮಠದ ಆಸ್ತಿಯ ಮೇಲೆ ಟ್ರಸ್ಟಿ ಕಣ್ಣು?

    ಕಲಬುರಗಿ: ಸೇಡಂ ತಾಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗೈಕರಾಗುತ್ತಿದ್ದಂತೆ ಕೋಟಿ ಕೋಟಿಯ ಆಸ್ತಿಯ ಮೇಲೆ ಹಲವರು ಕಣ್ಣು ಬಿದ್ದಿದೆ. ಹೀಗಾಗಿ ಇದೀಗ ಮಠದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಮಠದ ಭಕ್ತರು ಸಮರ ಸಾರಲು ಮುಂದಾಗಿದ್ದಾರೆ.

    ಅಮ್ಮನವರು ಜೀವಿತಾವಧಿಯಲ್ಲಿ ಸಾಮಾಜಿಕ ಕಾರ್ಯಕ್ಕೆ ಅಂತ “ರೂಪ ರಹಿತಾ ಅಂಹಿಸಾ ಯೋಗೇಶ್ವರ ವೀರ ಧರ್ಮಜಾ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಯಾನಾಗುಂದಿ” ಹುಟ್ಟಿಹಾಕಿದ್ದು, ಆ ಟ್ರಸ್ಟ್ ಅಡಿ ಯಾನಾಗುಂದಿಯಲ್ಲಿ 254 ಎಕರೆ ಜಮೀನು ಸೇರಿದಂತೆ, ಕಲಬುರಗಿ, ಬೀದರ್, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರ-ತೆಲಂಗಾಣದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದೆ. ಈ ಆಸ್ತಿಯ ಮೇಲೆ ಇದೀಗ ಇಲ್ಲಿನ ಆಡಳಿತ ಮಂಡಳಿ ಸದಸ್ಯರು ಕಣ್ಣಿಟ್ಟಿದ್ದಾರೆ.

    ಆಡಳಿತ ಮಂಡಳಿಯ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ತನ್ನ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿದ್ದು, ಮಾತೆ ಮಾಣಿಕೇಶ್ವರಿಯ ಪುತ್ರ ಅಂತ ದಾಖಲಾತಿ ಸಿದ್ಧಪಡಿಸಿದ್ದಾರೆ. ಈ ಮೂಲಕ ಮಠದ ಆಸ್ತಿ ಕಬಳಿಸಲು ಹೊಂಚು ಹಾಕಿದ್ದಾರೆ ಅಂತ ಮಾತೆ ಮಾಣಿಕೇಶ್ವರಿ ಅವರ ಪರಮ ಭಕ್ತ ಹಾಗೂ ಹಿಂದಿನಿಂದ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಶಿವಕುಮಾರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಹಿಂದೆ ಸಹ ಆಡಳಿತ ಮಂಡಳಿ ಸದಸ್ಯರು ಅಮ್ಮನವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಶಿವಕುಮಾರ್ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಟ್ರಸ್ಟ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ನಂತರ ಅಮ್ಮನವರನ್ನು ಭಕ್ತರ ದರ್ಶನಕ್ಕೆ ಟ್ರಸ್ಟ್ ಸದಸ್ಯರು ಮುಂದಾಗಿದ್ದರು. ಇದೀಗ ಮತ್ತೆ ಟ್ರಸ್ಟಿ ವಿರುದ್ಧ ಆಸ್ತಿ ಕಬಳಿಕೆಯ ಆರೋಪವನ್ನು ಕೇಳಿ ಬಂದಿರುವುದು ಅಪಾರ ಭಕ್ತರಲ್ಲಿ ಚಿಂತೆಗೀಡಾಗಿದೆ.

    ಮಠದ ಪೀಠಾಧಿಪತಿ ಮತ್ತು ಮುಂದಿನ ಆಡಳಿತ ವ್ಯವಸ್ಥೆ ಬಗ್ಗೆ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಅವರನ್ನು ಕೇಳಿದ್ರೆ, ಇಲ್ಲಿ ನಾವೆಲ್ಲ ಸೇವಕಾರಾಗಿ ಬಂದಿದ್ದೇವೆ. ಸದ್ಯ ಯಾರೂ ಪೀಠದಲ್ಲಿ ಮುಂದುವರಿಯಲ್ಲ. ಆದರೆ ಟ್ರಸ್ಟ್ ಅಡಿಯಲ್ಲಿಯೇ ಎಲ್ಲ ನಡೆಸುವುದಾಗಿ ಹೇಳುತ್ತಿದ್ದಾರೆ. ಇಡೀ ವಿಶ್ವಕ್ಕೆ ದೀಪ ಬೆಳೆಗಿಸಿದ ಮಾತೆ ಮಾಣಿಕೇಶ್ವರಿ ಅಮ್ಮನವರ ಮಠದಲ್ಲಿ ಇದೀಗ ಆಸ್ತಿಯ ಕಲಹ ಆರಂಭವಾಗಿದೆ. ಈ ಮೂಲಕ ಯಾನಾಗುಂದಿ ಟ್ರಸ್ಟ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಮತ್ತೆ ದೃಢಪಟ್ಟಿದೆ.

  • ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಆಸ್ತಿ ಆಸೆಗೆ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದ

    ಚಿತ್ರದುರ್ಗ: ಆಸ್ತಿ ಆಸೆಗಾಗಿ ಏಳು ವರ್ಷದ ಅಣ್ಣನ ಮಗನನ್ನು ನೀರಿನಲ್ಲಿ ಮುಳಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಹಳ್ಳಕೆ ಎಸೆದಿರುವ ಘಟನೆ ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

    ರಂಗಸ್ವಾಮಿಯವರ ಪುತ್ರ ಏಳು ವರ್ಷದ ಗೋವಿಂದ್ ತನ್ನ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿ. ರಂಗಸ್ವಾಮಿ ಸಹೋದರ ಚಿರಂಜೀವಿ ಬಾಲಕನಿಗೆ ಪಾರಿವಾಳದ ಆಸೆ ತೋರಿಸಿ ಕರೆದೊಯ್ದು, ನೀರಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ಮೃತ ದೇಹವನ್ನು ಕಟ್ಟಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಎಸೆದಿದ್ದಾನೆ.

    ಚಿರಂಜೀವಿ ಹಾಗೂ ರಂಗಸ್ವಾಮಿಯ ತಂದೆ ಕೋಪದಲ್ಲಿ ನಿಮಗೆ ಆಸ್ತಿ ಕೊಡುವುದಿಲ್ಲ, ನನ್ನ ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದಿದ್ದರು. ಹೀಗಾಗಿ ಆಸ್ತಿ ಕೈ ತಪ್ಪುತ್ತದೆ ಎಂಬ ಆತಂಕದಿಂದ ಅಣ್ಣನ ಮಗ ಗೋವಿಂದನನ್ನು ಈತ ಕೊಲೆ ಮಾಡಿದ್ದಾನೆ ಎಂದು ಗೋವಿಂದ್ ತಂದೆ ರಂಗಸ್ವಾಮಿ ಆರೋಪಿಸಿದ್ದಾರೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನಾಯಕನಹಟ್ಟಿ ಠಾಣೆ ಪೊಲೀಸರು, ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

  • ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ನಿತ್ಯಾನಂದನ ಆಸ್ತಿ ವಿವರ ಸಲ್ಲಿಕೆಗೆ ಕೋರ್ಟ್ ಸೂಚನೆ

    ರಾಮನಗರ: ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಶೀಲಂ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದಾಗಿದ್ದು, ಆಸ್ತಿ ವಿವರ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ.

    ವಿವಾದಿತ ಸ್ವಾಮೀಜಿ ಬಿಡದಿಯ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ನಿತ್ಯಾನಂದ ಹಾಗೂ ಆತನ ಹಿಂಬಾಲಕ ಗೋಪಾಲ ಶೀಲಂ ರೆಡ್ಡಿ ಅವರ ಇಡೀ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಸಿಒಡಿ ಅಧಿಕಾರಿಗಳಿಗೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

    ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ವಿರುದ್ಧ ಈಗಾಗಲೇ ಎಂಡ್ ಡೇಟೆಡ್ ವಾರೆಂಟ್ ಜಾರಿಯಾಗಿದೆ. ಅನೇಕ ಬಾರಿ ವಿಚಾರಣೆಗೆ ಸಹ ಗೈರಾಗಿದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಗೋಪಾಲ ಶೀಲಂ ರೆಡ್ಡಿಯ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಲು ನ್ಯಾಯಾಲಯ ಮುಂದಾಗಿದೆ. ಹೀಗಾಗಿ ಈ ಇಬ್ಬರು ಆರೋಪಿಗಳ ಆಸ್ತಿ ವಿವರ ಸಲ್ಲಿಸುವಂತೆ ತನಿಖಾಕಾರಿಗಳಿಗೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಪ್ರಭು ಅವರು ಸೂಚಿಸಿದ್ದಾರೆ.

    ಪ್ರಕರಣದ 2ನೇ ಆರೋಪಿಯಾದ ಗೋಪಾಲ ಶೀಲಂ ರೆಡ್ಡಿ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದರಿಂದ ಈತನಿಗಾಗಿಯು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿತ್ಯಾನಂದನ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಲಾಗಿದೆ.

  • ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

    ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಮನೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

    ಲಗ್ಗೆರೆ ನಿವಾಸಿ ವೆಂಕಟೇಶ್ ಗೌಡ ತನ್ನ ತಾಯಿ ಮುನಿಯಮ್ಮರನ್ನು(60) ಕೂಡಿಹಾಕಿದ್ದನು. ಮುನಿಯಮ್ಮರಿಗೆ ಲೋಹಿತ್, ವೆಂಕಟೇಶ್ ಗೌಡ ಅನ್ನೋ ಇಬ್ಬರು ಗಂಡು ಮಕ್ಕಳಿದ್ದಾರೆ. ದೊಡ್ಡ ಮಗನಿಗೆ ಲಗ್ಗೆರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಎರಡನೇ ಮಗನಿಗೆ ಹೆಸರುಗಟ್ಟದ ಮನೆಯನ್ನು ವಿಭಾಗ ಮಾಡಿ ಕೊಡಲಾಗಿತ್ತು. ಆದರೆ ಎರಡನೇ ಮಗ ವೆಂಕಟೇಶ್ ಲಗ್ಗೆರೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಕಣ್ಣು ಹಾಕಿದ್ದನು. ಆ ಕಟ್ಟಡದಲ್ಲಿ 60 ಸಾವಿರ ರೂ. ಬಾಡಿಗೆ ಬರ್ತಿದ್ದು, ಅದು ನನಗೆ ಬೇಕು ಅಂತ ವೆಂಕಟೇಶ್ ತಾಯಿ ಜೊತೆ ಜಗಳ ಶುರುಮಾಡಿದ್ದನು. ಇದಕ್ಕೆ ತಾಯಿ ನಿರಾಕರಿಸಿದ ಹಿನ್ನೆಲೆ ಅವರನ್ನು ವೆಂಕಟೇಶ್ ಮನೆಯಲ್ಲೇ ಕೂಡಿ ಹಾಕಿದನು. ಹಾಗೆಯೇ ಆಸ್ತಿ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದನು.

    ವಿಚಾರಣೆ ವೇಳೆ ಮುನಿಯಮ್ಮ ಎಲ್ಲಿ ಹೋದರು ಗೊತ್ತಿಲ್ಲ ಎಂದು ಕೋರ್ಟಿಗೆ ಮಾಹಿತಿ ನೀಡಿದ್ದನು. ಅದರಿಂದ ಅನುಮಾನಗೊಂಡ ಮುನಿಯಮ್ಮರ ಹೆಣ್ಣು ಮಕ್ಕಳು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೆಂಕಟೇಶ್ ಮನೆ ಪರಿಶೀಲನೆ ಮಾಡಿದ ವೇಳೆ ಮನೆಯ ರೂಮ್‍ವೊಂದರಲ್ಲಿ ತಾಯಿಯನ್ನು ಗೃಹಬಂಧನದಲ್ಲಿಟ್ಟಿರೋದು ಬೆಳಕಿಗೆ ಬಂದಿದೆ.

    ಸುಮಾರು 6 ತಿಂಗಳಿಂದ ತಾಯಿಯನ್ನು ಇದೇ ರೀತಿ ಕೂಡಿ ಹಾಕಿದ್ದು, ಸರಿಯಾಗಿ ಆಹಾರ ಕೂಡ ನೀಡದೆ ಮಗ ಚಿತ್ರಹಿಂಸೆ ಕೊಟ್ಟಿದ್ದಾನೆ. ಸದ್ಯ ವೃದ್ಧೆ ಮುನಿಯಮ್ಮರನ್ನು ಅವರ ಹೆಣ್ಣು ಮಕ್ಕಳು ಕರೆದುಕೊಂಡು ಹೋಗಿದ್ದು, ಮಗ ವೆಂಕಟೇಶ್, ಆತನ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.