Tag: ಆಸ್ತಿ ವಿವರ

  • ತೆಲಂಗಾಣದ ಶ್ರೀಮಂತ ಅಭ್ಯರ್ಥಿ – ಓವೈಸಿ ವಿರುದ್ಧ ಅಖಾಡಕ್ಕಿಳಿದಿರೋ ಮಾಧವಿ ಲತಾ ಆಸ್ತಿ ಎಷ್ಟಿದೆ ಗೊತ್ತಾ?

    ತೆಲಂಗಾಣದ ಶ್ರೀಮಂತ ಅಭ್ಯರ್ಥಿ – ಓವೈಸಿ ವಿರುದ್ಧ ಅಖಾಡಕ್ಕಿಳಿದಿರೋ ಮಾಧವಿ ಲತಾ ಆಸ್ತಿ ಎಷ್ಟಿದೆ ಗೊತ್ತಾ?

    ಹೈದರಾಬಾದ್‌: ಅಸಾದುದ್ದೀನ್‌ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಮಹಿಳಾ ಅಭ್ಯರ್ಥಿ ಮಾಧವಿ ಲತಾ (Madhavi Latha) ತಮ್ಮ ಕುಟುಂಬದ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಮಾಧವಿ ಲತಾ ಅವರ ಕುಟುಂಬ ಬರೋಬ್ಬರಿ 221.38 ಕೋಟಿ ರೂ. ಆಸ್ತಿ (Assets) ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.

    ಮಾಧವಿ ಲತಾ ಕುಟುಂಬ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿದೆ. ಮಾಧವಿ ಲತಾ ಮತ್ತು ಕೊಂಪೆಲ್ಲಾ ವಿಶ್ವನಾಥ್ (Kompella Viswanath) ದಂಪತಿ 165.46 ಕೋಟಿ ರೂ. ಚರಾಸ್ತಿ, 55.91 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 49 ವರ್ಷ ವಯಸ್ಸಿನ ಮಾಧವಿ ಲತಾ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಮಾಧವಿ ಲತಾ ವೈಯಕ್ತಿಕವಾಗಿ ವಿವಿಧ ಕಂಪನಿಗಳಲ್ಲಿ 25.20 ಕೋಟಿ ರೂ. ಹೂಡಿಕೆ ಸೇರಿದಂತೆ ಒಟ್ಟು 31.31 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಜೊತೆಗೆ ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂ. ಹೂಡಿಕೆ ಮಾಡಿದ್ದು, 3.78 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನ ಹೊಂದಿದ್ದಾರೆ. ಪತಿ ವಿಶ್ವನಾಥ್‌ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳು ಒಳಗೊಂಡಂತೆ, 88.31 ಕೋಟಿ ರೂ.ನಷ್ಟು ಚರಾಸ್ತಿ ಹೊಂದಿದ್ದಾರೆ. ಅವರ ಮೂರು ಮಕ್ಕಳ ಹೆಸರಲ್ಲಿ 45 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಚರಾಸ್ತಿ ಇದೆ ಎಂಬುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

    ಅಭ್ಯರ್ಥಿಯಾಗಿರುವ ಮಾಧವಿ 6.32 ಕೋಟಿ ರೂ.ಗಳಷ್ಟು ಸ್ಥಿರಾಸ್ತಿ ಹೊಂದಿದ್ದರೆ, ಪತಿ 49.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ತಿಗಳಲ್ಲಿ ಕೃಷಿಯೇತರ ಭೂಮಿ ಮತ್ತು ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ. ಇನ್ನೂ ಮಾಧವಿ ಲತಾ 90 ಲಕ್ಷ ರೂ.ಗಳ ಸಾಲ ಹೊಂದಿದ್ದರೆ, ಪತಿ 26.13 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.

    ಕ್ರಿಮಿನಲ್‌ ಪ್ರಕರಣವೂ ಇದೆ:
    ಮಾಧವಿ ಲತಾ ಅವರು ಒಂದು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಳೆದ ವಾರವಷ್ಟೇ ಹೈದರಾಬಾದ್‌ನ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾ ಪ್ರಚಾರದ ವೇಳೆ ಮಸೀದಿಗೆ ಬಾಣ ಬಿಡುವಂತೆ ಸನ್ನೆ ಮಾಡಿದ್ದರು. ಇದನ್ನೂ ಓದಿ: ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಮಾಧವಿ ಲತಾ ಯಾರು?: ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.

    ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್‌ ಸ್ಕೂಲಿಂಗ್‌ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.

    ವೃತ್ತಿಪರ ಭರತನಾಟ್ಯಂ ಡಾನ್ಸರ್‌ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್‌-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

  • ಪವನ್ ಕಲ್ಯಾಣ್ ಆಸ್ತಿ ಇಷ್ಟೇನಾ?: ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ

    ಪವನ್ ಕಲ್ಯಾಣ್ ಆಸ್ತಿ ಇಷ್ಟೇನಾ?: ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ

    ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ (Election) ಸ್ಪರ್ಧಿಸಿದ್ದಾರೆ. ಈಗಾಗಲೇ ಅವರು ಕಾಕಿನಾಡು ಜಿಲ್ಲೆಯ ಪೀಟಾಪುರಮ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈ ಬೆನ್ನಲ್ಲೇ ನಾಮಿನೇಷನ್ ಸಲ್ಲಿಸಿ, ಆಸ್ತಿಯನ್ನು (Property Details) ಘೋಷಣೆ ಮಾಡಿದ್ದಾರೆ.

    ಚರಾಸ್ತಿ, ಸ್ಥಿರಾಸ್ತಿಗಳನ್ನು ಸೇರಿಸಿ ತಮ್ಮ ಬಳಿ ಒಟ್ಟಾರೆ ಎಷ್ಟು ಆಸ್ತಿ ಇದೆ ಎನ್ನುವುದನ್ನು ಅವರು ಅಫಿಡೆವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನೂರಾರು ಕೋಟಿ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಪವನ್ ಕಲ್ಯಾಣ್ ಬಳಿ ಇರೋ ಆಸ್ತಿ ಇಷ್ಟೇನಾ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡಿದ್ದಾರೆ.

    ಚುನಾವಣೆ ಆಯೋಗಕ್ಕೆ ಪವನ್ ಕಲ್ಯಾಣ್ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ, 136 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದಾರೆ. 18 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ ಹಾಗೂ 52.85 ಕೋಟಿ ರೂಪಾಯಿ ಬೆಲೆಯ ಕೃಷಿಯೇತರ ಜಮೀನನನ್ನು ಅವರು ಹೊಂದಿದ್ದಾರೆ. 2019ರಲ್ಲಿ ಅವರು 52.85 ಕೋಟಿ ರೂಪಾಯಿ ಆಸ್ತಿ ತೋರಿಸಿದ್ದರು.

     

    ಪವನ್ ಕಲ್ಯಾಣ್ ಈ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಇವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಲಿಲ್ಲ. ಆದರೆ, ಈಗ 8 ಪ್ರಕರಣಗಳು ಇವರ ಮೇಲಿವೆ.

  • ಮೊದಲ ಹಂತದ ಮತದಾನ: 716 ಕೋಟಿ ಆಸ್ತಿ ಒಡೆಯ – ʻಕೈʼನಾಯಕ ನಂ.1 ಶ್ರೀಮಂತ ಅಭ್ಯರ್ಥಿ!

    ಮೊದಲ ಹಂತದ ಮತದಾನ: 716 ಕೋಟಿ ಆಸ್ತಿ ಒಡೆಯ – ʻಕೈʼನಾಯಕ ನಂ.1 ಶ್ರೀಮಂತ ಅಭ್ಯರ್ಥಿ!

    – ಬಡ ಅಭ್ಯರ್ಥಿ ಬಳಿಯಿದೆ ಕೇವಲ 320 ರೂ.

    ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ (Lok Sabha Elections 2024) ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ (Voting) ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, ಎಲ್ಲೆಡೆ ಜನ ಉತ್ಸಾಹದಿಂದಲೇ ಮತದಾನ ಮಾಡ್ತಿದ್ದಾರೆ.

    ಈ ಮೊದಲ ಹಂತ ಚುನಾವಣೆಯಲ್ಲಿ ಒಂದೆಡೆ ಶ್ರೀಮಂತರಿದ್ದರೆ, ಮತ್ತೊಂದೆಡೆ ಬಡ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms)  1,625 ಅರ್ಥಿಗಳ ಪೈಕಿ 1,618 ಅಭ್ಯರ್ಥಿಗಳ ಆಸ್ತಿ ವಿವರ ಬಿಡುಗಡೆಯಾಗಿದೆ. ಅವರಲ್ಲಿ 10 ಮಂದಿ ತಮ್ಮ ಆಸ್ತಿಯನ್ನು ಶೂನ್ಯ ಎಂದು ಘೋಷಿಸಿದ್ದಾರೆ. 450 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು 1 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ತೋರಿಸಿವೆ.

    ಮಧ್ಯಪ್ರದೇಶದ ಚಿಂದ್ವಾರದ ಹಾಲಿ ಸಂಸದ ಕಾಂಗ್ರೆಸ್‌ನ ನಕುಲ್ ನಾಥ್ (Nakul Nath) ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ನಕುಲ್‌ ನಾಥ್‌ ಸರಿಸುಮಾರು 716 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ಪುತ್ರನೂ ಆಗಿರುವ ನಕುಲ್‌ ನಾಥ್‌ 2019ರ ಲೋಕಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು.

    ಕೋಟ್ಯಧಿಪತಿಗಳು ಯಾರು?
    ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ನಕುಲ್‌ ನಾಥ್‌ ಅತ್ಯಂತ ಶ್ರೀಮಂತ (716 ಕೋಟಿ ರೂ.) ಅಭ್ಯರ್ಥಿಯಾಗಿದ್ದಾರೆ. ಅಲ್ಲದೇ ತಮಿಳುನಾಡಿನ ಈರೋಡ್‌ನಿಂದ ಸ್ಪರ್ಧಿಸಿರುವ ಎಐಎಡಿಎಂಕೆಯ ಅಶೋಕ್ ಕುಮಾರ್ 662 ಕೋಟಿ ರೂ., ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿಯ ದೇವನಾಥನ್ ಯಾದವ್ 304 ಕೋಟಿ ರೂ., ಉತ್ತರಾಖಂಡದ ತೆಹ್ರಿ ಗರ್ವಾಲ್‌ನಿಂದ ಕಣಕ್ಕಿಳಿದಿರುವ ಬಿಜೆಪಿಯ ಮಾಲಾ ರಾಜ್ಯ ಲಕ್ಷ್ಮಿ ಶಾ 206 ಕೋಟಿ ರೂ., ಉತ್ತರ ಪ್ರದೇಶದ ಸಹರಾನ್‌ಪುರದಿಂದ ಸ್ಪರ್ಧಿಸಿರುವ 159 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಕಾಂಗ್ರೆಸ್‌ನ ಹಾಲಿ ಸಂಸದ ಕಾರ್ತಿ ಚಿದಂಬರಂ 96 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.

    ಬಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿದ್ದಾರೆ.
    ತಮಿಳುನಾಡಿನ ತೂತುಕುಡಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಪೊನ್‌ರಾಜ್ ಕೇವಲ 320 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ರಾಮ್‌ಟೆಕ್ ಕ್ಷೇತ್ರ ಮತ್ತು ತಮಿಳುನಾಡಿನ ಚೆನ್ನೈ ಉತ್ತರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಕಾರ್ತಿಕ್ ಗೆಂದ್ಲಾಜಿ ಡೋಕೆ ಮತ್ತು ಸೂರ್ಯಮುತ್ತು ತಲಾ 500 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

  • ಯುಪಿ ಸಂಸದರು, ಐಎಎಸ್ ಅಧಿಕಾರಿಗಳಿಗೆ ಆಸ್ತಿ ವಿವರ ಬಹಿರಂಗಪಡಿಸುವಂತೆ ಯೋಗಿ ಆದೇಶ

    ಯುಪಿ ಸಂಸದರು, ಐಎಎಸ್ ಅಧಿಕಾರಿಗಳಿಗೆ ಆಸ್ತಿ ವಿವರ ಬಹಿರಂಗಪಡಿಸುವಂತೆ ಯೋಗಿ ಆದೇಶ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಂಪುಟದ ಸಚಿವರು ಹಾಗೂ ಅವರ ಕುಟುಂಬದವರ ಎಲ್ಲಾ ಆಸ್ತಿಯ ವಿವರಗಳನ್ನು 3 ತಿಂಗಳುಗಳ ಒಳಗಾಗಿ ಬಹಿರಂಗ ಪಡಿಸುವಂತೆ ಆದೇಶ ನೀಡಿದ್ದಾರೆ.

    ಯುಪಿ ಸಿಎಂ ತಮ್ಮ ಸಂಪುಟದ ಸದಸ್ಯರೊಂದಿಗೆ, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೂ ತಮ್ಮ ಆಸ್ತಿಯ ವಿವರಗಳನ್ನು ಆನ್‌ಲೈನ್‌ನಲ್ಲಿ ಬಹಿರಂಗ ಪಡಿಸುವಂತೆ ತಿಳಿಸಿದ್ದಾರೆ. ಇದರೊಂದಿಗೆ ಸರ್ಕಾರಿ ಕೆಲಸಗಳಲ್ಲಿ ಸಂಸದರ ಸಂಬಧಿಕರು ಮಧ್ಯ ಪ್ರವೇಶಿಸಬಾರದು ಎಂದು ಆದಿತ್ಯನಾಥ್ ಸೂಚಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    yogi adithyanath

    ಸಂಪುಟ ಸಭೆಯ ಬಳಿಕ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ, ಐಎಎಸ್, ಐಪಿಎಸ್ ಹಾಗೂ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿಯನ್ನು ಘೋಷಿಸಬೇಕು. ಅದನ್ನು ಜನರು ನೋಡುವಂತೆ, ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

    ಪ್ರಜಾಪ್ರಭುತ್ವದ ಒಳಿತಿಗಾಗಿ, ಸಾರ್ವಜನಿಕ ಪ್ರತಿನಿಧಿಗಳ ನಡವಳಿಕೆ ಬಹಳ ಮುಖ್ಯವಾದುದು. ಹೀಗಾಗಿ ಎಲ್ಲಾ ಮಂತ್ರಿಗಳು ತಮ್ಮ ಹಾಗೂ ಕುಟುಂಬದ ಸದಸ್ಯರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಯನ್ನು ಮುಂದಿನ 3 ತಿಂಗಳ ಒಳಗಾಗಿ ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದರು.

  • ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಆರ್‌.ಆರ್‌.ನಗರ ಉಪಚುನಾವಣೆ – ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ

    ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೋಟ್ಯಧೀಶೆ ಮತ್ತು ಸಾಲಗಾರ್ತಿ ಆಗಿದ್ದಾರೆ.

    ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಕುಸುಮಾ ಸಲ್ಲಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಕುಸುಮಾ ಅಫಿಡವಿಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

    1,100 ಗ್ರಾಂ ಚಿನ್ನಾಭರಣ ಹೊಂದಿರುವ ಕುಸುಮಾ 1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. ನಗದು ರೂಪದಲ್ಲಿ 1,41,050 ರೂ. ಹೊಂದಿರುವ ಅವರು ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ ಸುಮಾರು 6 ಲಕ್ಷ ಹಣ ಹೊಂದಿದ್ದಾರೆ. 1,13,02,197.38 ರೂ. ಮೌಲ್ಯದ ಚರಾಸ್ತಿ ಹೊಂದಿರುವ ಇರುವ ನನ್ನ ಬಳಿ ಯಾವುದೇ ಕೃಷಿ ಭೂಮಿ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುನಿರತ್ನಗೆ ಬಿಗ್‌ ರಿಲೀಫ್‌ ನೀಡಿದ ಸುಪ್ರೀಂ ತೀರ್ಪಿನಲ್ಲಿ ಏನಿದೆ?

    ಸುಮಾರು 2,45,000 ರೂ. ಗಳನ್ನು ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿರುವ ಕುಸುಮಾ ಬಳಿ ಯಾವುದೇ ಸ್ವಂತ ವಾಹನ ಹೊಂದಿಲ್ಲ. ಅನಿಲ್ ಗೌಡ ಎಚ್ ಅವರಿಂದ 2,05,000 ರೂ.ಮತ್ತು ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ನಿಂದ 56, 58, 316 ರೂ. ಸಾಲ ಪಡೆದಿದ್ದಾರೆ. 45,00,000 ರೂ. ಮೌಲ್ಯದ 1,100 ಗ್ರಾಂ ಚಿನ್ನ, ಬೆಳ್ಳಿ ಆಭರಣಗಳು ತನ್ನ ಬಳಿ ಇದೆ ಎಂದು ಉಲ್ಲೇಖಿಸಿದ್ದಾರೆ.

    ಬಿಬಿಎಂಪಿ ವಾರ್ಡ್ 40 ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37, 10,000 ರೂ. ಆಗಿದೆ ಎಂದು ವಿವರಿಸಿದ್ದಾರೆ.

  • ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಬೆಂಗಳೂರು: ಆಸ್ತಿ ವಿವರ ಸಲ್ಲಿಸಲು ಐಪಿಎಸ್ ಅಧಿಕಾರಿಗಳು ಜನಪ್ರತಿನಿಧಿಗಳಂತೆ ಮೊಂಡಾಟ ಮಾಡುತ್ತಿದ್ದಾರೆ. ಇದುವರೆಗೂ ರಾಜ್ಯದ ಬರೋಬ್ಬರಿ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    2018ರ ಆಸ್ತಿ ವಿವರ ಈ ವರ್ಷ ಜನವರಿ ಅಂತ್ಯದೊಳಗೆ ಸಲ್ಲಿಸಬೇಕಾಗಿತ್ತು. ಆದರೆ ಇದುವರೆಗೂ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    ಐಪಿಎಸ್ ಅಧಿಕಾರಿಗಳ ಮೊಂಡಾಟಕ್ಕೆ ಬೇಸತ್ತು ರಾಜ್ಯ ಒಳಡಾಳಿತ ಇಲಾಖೆಗಳ ಕಾರ್ಯದರ್ಶಿ ರಜನೀಶ್ ಗೋಯಲ್ ಡಿಜಿ ಐಜಿಪಿಗೆ ಪತ್ರ ಬರೆದಿದ್ದಾರೆ. ಪ್ರತಿ ವರ್ಷ ಐಪಿಎಸ್ ಅಧಿಕಾರಿಗಳು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸಬೇಕು ಎನ್ನುವ ನಿಯಮವಿದೆ.

    ಆಸ್ತಿ ವಿವರ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಮಾಡಿದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದಾರೆ. ಚಿರಾಸ್ತಿ ಹಾಗೂ ಸ್ಥಿರಾಸ್ತಿ ವಿವರ ಸಲ್ಲಿಕೆ ಮಾಡಲು ಐಪಿಎಸ್ ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಡಿಜಿಪಿಗೆ ಪತ್ರ ಬರೆದು ತ್ವರಿತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

  • ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಲಕ್ನೋ: ಉತ್ತರಪ್ರದೇಶ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್, ಆಡಳಿತದ ಮೇಲೆ ಪಟ್ಟು ಸಾಧಿಸಲು ಮುಂದಾಗಿದ್ದಾರೆ. ಆಸ್ತಿ ವಿವರ ಬಹಿರಂಗಪಡಿಸುವಂತೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆಸ್ತಿ ವಿವರ ಘೋಷಿಸಿಕೊಳ್ಳಲು 15 ದಿನಗಳ ಕಾಲಾವಕಾಶವನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದಾರೆ. ಜೊತೆಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದು ಸಚಿವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

    ಭಾನುವಾರದಂದು ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ 19ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರು. 44 ವರ್ಷದ ಆದಿತ್ಯನಾಥ್, ಅಖಿಲೇಶ್ ಯಾದವ್ ನಂತರ ಉತ್ತರಪ್ರದೇಶದ ಎರಡನೇ ಅತ್ಯಂತ ಕಿರಿಯ ಸಿಎಂ ಆಗಿದ್ದಾರೆ.