Tag: ಆಸ್ತಿ

  • ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ – ಒಟ್ಟು ಆಸ್ತಿ ಎಷ್ಟು?

    ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ – ಒಟ್ಟು ಆಸ್ತಿ ಎಷ್ಟು?

    – ಕರ್ನಾಟಕದ 8 ಸಚಿವರ ಆಸ್ತಿ 100 ಕೋಟಿಗಿಂತಲೂ ಹೆಚ್ಚು

    ನವದೆಹಲಿ: ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ದೇಶದ ಎರಡನೇ ಶ್ರೀಮಂತ ಸಚಿವ (Rich Minister) ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

    ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಎಡಿಆರ್ ಗುರುವಾರ ವರದಿ ಬಿಡುಗಡೆ ಮಾಡಿದೆ. 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ. ಇದನ್ನೂ ಓದಿ: ಯಾದಗಿರಿ | ಹವಾಮಾನ ಬದಲಾವಣೆ – ಮಕ್ಕಳಲ್ಲಿ ಹೆಚ್ಚಿದ ವೈರಲ್ ಫೀವರ್

    643 ಸಚಿವರ ಪೈಕಿ 302 ಮಂದಿ (47%) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. 174 ಸಚಿವರ ವಿರುದ್ಧ (27%) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (40%) ಮಂದಿ ವಿರುದ್ಧ ಪ್ರಕರಣಗಳಿವೆ. ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

    ಕುಬೇರ ಸಚಿವರು:
    ಹೆಸರು – ಪಕ್ಷ – ಕ್ಷೇತ್ರ – ಆಸ್ತಿ (ಕೋಟಿಗಳಲ್ಲಿ)
    ಚಂದ್ರಶೇಖರ ಪೆಮ್ಮಸಾನಿ (ಕೇಂದ್ರ ಸಚಿವ) – ಟಿಡಿಪಿ – (ಗುಂಟೂರು ಸಂಸದ) – 5,705 ಕೋಟಿ
    ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ – ಕನಕಪುರ – 1,413 ಕೋಟಿ
    ಚಂದ್ರಬಾಬು ನಾಯ್ಡು ನಾರಾ – ಟಿಡಿಪಿ – ಕುಪ್ಪಂ – 971 ಕೋಟಿ
    ನಾರಾಯಣ ಪೊಂಗೂರು – ಟಿಪಿಡಿ – ನೆಲ್ಲೂರು – 824 ಕೋಟಿ
    ಸುರೇಶ್ ಬಿ.ಎಸ್ – ಕಾಂಗ್ರೆಸ್ – ಹೆಬ್ಬಾಳ – 648 ಕೋಟಿ

  • ಸುಪ್ರೀಂ ಕೋರ್ಟ್‌ನ 33 ಜಡ್ಜ್‌ ಪೈಕಿ 21 ಮಂದಿಯ ಆಸ್ತಿ ಬಹಿರಂಗ

    ಸುಪ್ರೀಂ ಕೋರ್ಟ್‌ನ 33 ಜಡ್ಜ್‌ ಪೈಕಿ 21 ಮಂದಿಯ ಆಸ್ತಿ ಬಹಿರಂಗ

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರಿಂ ಕೋರ್ಟ್‌ (Supreme Court) ಮೊದಲ ಬಾರಿಗೆ ತನ್ನ ಒಟ್ಟು 33 ನ್ಯಾಯಾಧೀಶರ ಪೈಕಿ 21 ಜನರ ಆಸ್ತಿಯನ್ನು (Assets) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ (CJI Sanjiv Khanna) ಅವರು ಸೇವೆಯಿಂದ ನಿವೃತ್ತಿಯಾಗಲು ಒಂದು ವಾರ ಬಾಕಿ ಇರುವಾಗ ನ್ಯಾಯಾಧೀಶರ ಆಸ್ತಿಗಳ ವಿವರ ಪ್ರಕಟವಾಗಿದೆ. ನ್ಯಾ.ಖನ್ನಾ ಮೇ 13 ರಂದು ನಿವೃತ್ತರಾಗಲಿದ್ದಾರೆ.

    ಆಸ್ತಿ ಮಾಹಿತಿಯ ಜೊತೆಗೆ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನೇಮಕಾತಿಗಳ ಸಂಪೂರ್ಣ ಪ್ರಕ್ರಿಯೆಯನ್ನು ಹೈಕೋರ್ಟ್ ಕೊಲಿಜಿಯಂಗೆ ನಿಯೋಜಿಸಲಾದ ಪಾತ್ರ, ರಾಜ್ಯ ಸರ್ಕಾರಗಳು, ಭಾರತ ಸರ್ಕಾರದಿಂದ ಪಡೆದ ಪಾತ್ರ ಮತ್ತು ಇನ್‌ಪುಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಪರಿಗಣನೆಯ ಪತ್ರವನ್ನು ಪ್ರಕಟಿಸಿಲಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಮುಖಭಂಗ

    ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹಿಳಾ ನ್ಯಾಯಾಧೀಶರ ಪೈಕಿ ನ್ಯಾ.ಬೇಲಾ ಎಂ. ತ್ರಿವೇದಿ ತಮ್ಮ ಆಸ್ತಿಯನ್ನು ಪ್ರಕಟಿಸಿದ್ದಾರೆ ಆದರೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಆಸ್ತಿ ಇನ್ನೂ ಅಪ್‌ಲೋಡ್‌ ಆಗಿಲ್ಲ. ಬಾರ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಬಡ್ತಿ ಪಡೆದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಕೆ.ವಿ. ವಿಶ್ವನಾಥನ್ ಅವರ ಆಸ್ತಿಯನ್ನು ಪ್ರಕಟಿಸಲಾಗಿದೆ.

     

    ನ್ಯಾಯಮೂರ್ತಿ ನಾಗರತ್ನ ಅವರಲ್ಲದೆ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ದೀಪಂಕರ್ ದತ್ತ, ಅಹ್ಸಾನುದ್ದೀನ್ ಅಮಾನುಲ್ಲಾ, ಮನೋಜ್ ಮಿಶ್ರಾ, ಅರವಿಂದ್ ಕುಮಾರ್, ಪಿ.ಕೆ. ಮಿಶ್ರಾ, ಎಸ್.ಸಿ. ಶರ್ಮಾ, ಪಿ.ಬಿ. ವರಾಲೆ, ಎನ್. ಕೋಟೀಶ್ವರ್ ಸಿಂಗ್, ಆರ್. ಮಹಾದೇವನ್, ಜೋಯ್ಮಲ್ಯ ಬಾಗ್ಚಿ ಅವರ ಆಸ್ತಿಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿಲ್ಲ.

    ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ದೆಹಲಿ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಬಳಿಕ ನ್ಯಾಯಧೀಶರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಡ್ಜ್‌ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ

    ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸ್ಥಿರ ಠೇವಣಿ ಮತ್ತು ಬ್ಯಾಂಕ್ ಖಾತೆಗಳಲ್ಲಿ 55.75 ಲಕ್ಷ ರೂ. ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) 1.06 ಕೋಟಿ ರೂ. ಇದ್ದರೆ, ಮೇ 14 ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಬ್ಯಾಂಕ್ ಖಾತೆಗಳಲ್ಲಿ 19.63 ಲಕ್ಷ ರೂ. ಮತ್ತು ಪಿಪಿಎಫ್ ಖಾತೆಯಲ್ಲಿ 6.59 ಲಕ್ಷ ರೂ. ಇದೆ.

  • ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

    ಕಾರವಾರ: ನಿವೃತ್ತ ಡಿಜಿಪಿ ಓಂ ಪ್ರಕಾಶ್ (Om Prakash) ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಾಡಿದ ಆಸ್ತಿಯೂ ಕಾರಣವಾಯ್ತ ಎಂಬ ಅನುಮಾನ ಇದೀಗ ದಟ್ಟವಾಗಿದೆ.

    ಓಂ ಪ್ರಕಾಶ್ ಅವರು 1996ರಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಇವರ ಸಹೋದರಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಪರಿಸರಕ್ಕೆ ಮನಸೋತಿದ್ದ ಅವರು 2011-12ರ ನಡುವೆ ಸಾಮಜೋಯಿಡಾದಲ್ಲಿ 2 ಎಕ್ರೆ 17 ಗುಂಟೆ ಜಮೀನು ಖರೀದಿಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಜೊತೆಗೆ ಜೋಯಿಡಾ (Joida) ತಾಲೂಕಿನ ಗಣೇಶ ಗುಡಿಯ ಬಾಡಗುಂದ (Badagunda) ಗ್ರಾಮದಲ್ಲಿ 17 ಎಕ್ರೆ ಜಮೀನು ಖರೀದಿ ಮಾಡಿದ್ದು, ಈ 2 ಜಮೀನನ್ನು ಮಗ ಕಾರ್ತೀಕೇಶ್ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದ 17 ಎಕ್ರೆಯಲ್ಲಿ 10 ಎಕ್ರೆ ಬೇರೆಯವರ ಹೆಸರಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಸಾಮಜೋಯಿಡಾದಲ್ಲಿ ಗಂಧ, ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಬೆಳೆದಿದ್ದು, ಇಲ್ಲಿಯೇ ಗೆಸ್ಟ್ ಹೌಸ್ ನಿರ್ಮಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿದ್ದ 5 ಎಕ್ರೆ ಜಮೀನನ್ನು ರಿವರ್ ರಾಫ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ 10 ಎಕ್ರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ಸಿದ್ಧರಾಗಿದ್ದರು. ಈ ವಿಚಾರಕ್ಕೆ ಪತ್ನಿ ಹಾಗೂ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಇದನ್ನೂ ಓದಿ: ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?

    ಮನೆಯಲ್ಲಿ ಕಿತ್ತಾಟ ಜಾಸ್ತಿಯಾದಾಗ ಜೋಯಿಡಾದ ಗೆಸ್ಟ್ ಹೌಸ್‌ಗೆ ಬಂದು ಇಲ್ಲಿನ ಗೆಳೆಯರು ಜೊತೆ ಸಮಯ ಕಳೆಯುತ್ತಿದ್ದರು. ಓಂ ಪ್ರಕಾಶ್ ಅವರು ಬಹುತೇಕ ಎಲ್ಲೇ ಹೋದರೂ ಪತ್ನಿಯನ್ನು ಬಿಟ್ಟು ಬರುತಿದ್ದರು. ಅಷ್ಟೇ ಅಲ್ಲದೇ ಅವರು ಮಾನಸಿಕವಾಗಿ ನೊಂದಿದ್ದರು ಬಗ್ಗೆ ಅವರ ಸಹವರ್ತಿಗಳು ಹೇಳಿದ್ದಾರೆ.

  • ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಬೆಂಗಳೂರು: ಕೇತಗಾನಹಳ್ಳಿ ಭೂಒತ್ತುವರಿ ಪ್ರಕರಣದಿಂದ ಕೆರಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾರ್ ಡಿಕ್ಲೇರ್ ಮಾಡಿದ್ದಾರೆ. ಸಿಎಂ-ಡಿಸಿಎಂ ನನ್ನ ಮೇಲೆ ದ್ವೇಷ ಸಾಧಿಸ್ತಿದ್ದಾರೆ. ಆದ್ರೆ ನನ್ನತ್ರ ಟನ್‌ಗಟ್ಟಲೇ ದಾಖಲೆಗಳಿವೆ.. ಹುಷಾರ್, ನನ್ನನ್ನು ಕೆಣಕಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

    ಮಾಜಿ ಪ್ರಧಾನಿ ಮಗ ನಾನು.. 4 ಎಕರೆ ಭೂಮಿ ಒತ್ತುವರಿ ಮಾಡಿಕೊಳ್ಬೇಕಾ? ಅಂತ ಪ್ರಶ್ನಿಸಿದ್ರು. ಅತಿಕ್ರಮಣದ ದಾಖಲೆ ಇದ್ರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ್ರು. ಮುಡಾ ಕೇಸಲ್ಲಿ ಲೋಕಾಯುಕ್ತ ತನಿಖೆಯ ಪಾರದರ್ಶಕತೆ ಬಗ್ಗೆ ಮತ್ತೆ ದನಿ ಎತ್ತಿದ್ರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ಏಪ್ರಿಲ್ ಫೂಲ್ ಮಾಡ್ತಿದೆ ಎಂದು ಲೇವಡಿ ಮಾಡಿದ್ರು. ಕಸದ ಹೆಸ್ರಲ್ಲಿ ಲೂಟಿ ಎಂಬ ಆರೋಪಕ್ಕೂ ಕೌಂಟರ್ ನೀಡಿದ್ರು.

    ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ. ಅದೆಷ್ಟು ದಾಖಲೆ ಇದೆಯೋ ರಿಲೀಸ್ ಮಾಡ್ಲಿ ಅಂತ ಕೌಂಟರ್‌ ಕೊಟ್ಟಿದ್ದಾರೆ.

    ನಾನು ಕುಮಾರಸ್ವಾಮಿಗೆ ಹೆದರುವ ಮಗ ಅಲ್ಲ. ಟನ್ ಗಟ್ಟಲೇ ಅಲ್ಲ ಭೂಮಿಯನ್ನೇ ತರಲಿ, ನನ್ನ, ನನ್ನ ಹೆಂಡ್ತಿ ಮಕ್ಕಳ ಆಸ್ತಿ ಬಹಿರಂಗ ಮಾಡಲಿ. ನಾನು ಕುಮಾರಸ್ವಾಮಿಗೆ ಹೇಳುತ್ತೇನೆ, ನನ್ನದು ಎಷ್ಟು ವ್ಯವಹಾರ ಇದೆ ಅದರ ದಾಖಲೆ ಬಿಡುಗಡೆ ಮಾಡಲಿ, ನನಗೂ ಗೊತ್ತಿದೆ ನನ್ನ ಆಸ್ತಿ, ಮಕ್ಕಳ ಮತ್ತು ಕುಟುಂಬದ ಆಸ್ತಿ ಎಷ್ಟಿದೆ, ಅದನ್ನೆಲ್ಲಾ ತೆಗೆಸಿದ್ದಾರೆ. ಅದನ್ನು ಬಹಿರಂಗ ಮಾಡಲಿ, ಇವರಿಗೆಲ್ಲಾ ಹೆದರುವಂತಹ ಮಗ ಅಲ್ಲ ನಾನು ಅಂತ ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ನೀರಾವರಿ ಯೋಜನೆಗಳ ಕುರಿತು ಮಾತನಾಡಿ, ಮೇಕೆದಾಟು, ಅಪ್ಪರ್ ಭದ್ರಾ, ಮಹದಾಯಿ ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದ್ದೇವೆ. ಅವರಿಗೆ ಎಲ್ಲವೂ ಅರ್ಥವಾಗಿದೆ. ಆದ್ಯತೆ ಇದೆ ಅನ್ನೋದು ಅವರಿಗೆ ಗೊತ್ತಾಗಿದೆ. ಎಲ್ಲರನ್ನ ಕರೆಸಿ ಮಾತನಾಡುತ್ತೇವೆ ಅಂದಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಯಾಬಿನೆಟ್ ಗೆ ಕಳಿಸಿದ್ದೇವೆ ಅಂದಿದ್ದಾರೆ. ನೋಡೋಣ ಏನು ಮಾಡ್ತಾರೆ. ಎತ್ತಿನಹೊಳೆ ಯೋಜನೆಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದರು.

  • ಆಸ್ತಿ ಬರೆಸಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಮಕ್ಕಳು!

    ಆಸ್ತಿ ಬರೆಸಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಮಕ್ಕಳು!

    – ಬಿಮ್ಸ್‌ ಒಂದರಲ್ಲೇ 150 ಪ್ರಕರಣ ವರದಿ
    – ಮಕ್ಕಳ ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ

    ಕಲಬುರಗಿ: ಇಂದಿನ ಯಾಂತ್ರೀಕೃತ ಹಾಗೂ ತಂತ್ರಜ್ಞಾನ ಜೀವನದಲ್ಲಿ ಭಾವನೆಗಳು ಹಾಗೂ ಸಂಬಂಧಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಜನ್ಮ ನೀಡಿದ ತಂದೆ-ತಾಯಂದಿರನ್ನೇ ಅನಾಥರನ್ನಾಗಿ ಮಾಡುತ್ತಿರುವ ಪರಿಪಾಠ ಹೆಚ್ಚಾಗಿದೆ. ಇಂಥ ಅಮಾನವೀಯ ಕೃತ್ಯಗಳಿಗೆ ಬ್ರೇಕ್‌ ಹಾಕಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ.

    ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು (Elderly Parents) ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ (Hospital) ಬಿಟ್ಟು ಹೋಗುತ್ತಿರುವ ಉದಾಹರಣೆಗಳು ಹೆಚ್ಚಾಗಿದೆ. ಅದೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಬಿಟ್ಟು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ.

    ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಒಂದರಲ್ಲೇ, 150 ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂಥ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಬೀದರ್‌ನಲ್ಲಿ ಏಕಾಏಕಿ ಕಾಗೆಗಳ ಸರಣಿ ಸಾವು – ಹಕ್ಕಿ ಜ್ವರದ ಆತಂಕ?

    ಈ ವಿಷಯವನ್ನು ಅರಿತ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೇ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸಚಿವರು ಆದೇಶ ನೀಡಿದ್ದಾರೆ.

    ಈ ಸಂಬಂಧ ಸಚಿವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಲವು ವಿಷಯಗಳನ್ನು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ವಿಕಾಸ ಸೌಧದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರ ಸದಸ್ಯರ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

    ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಈ ಕುರಿತ ಪ್ರಕರಣಗಳು ಕಂಡು ಬಂದ ಕೂಡಲೇ ವೈದ್ಯಕೀಯ ಶಿಕ್ಷಣ ನಿರ್ದೇಶಕರು (ಡಿಎಂಇ) ಕೂಡಲೇ ಸಹಾಯಕ ಆಯುಕ್ತರಿಗೆ (ಕಂದಾಯ ಉಪವಿಭಾಗ) ದೂರುಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

    ತಮ್ಮ ಮಕ್ಕಳ ಪರವಾಗಿ ಮಾಡಿದ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಪರಿತ್ಯಕ್ತ ಪೋಷಕರಿಗೆ ಸಚಿವರು ಕರೆ ನೀಡಿದ್ದಾರೆ.

    ತಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಆಗದೇ, ತೊರೆದಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ನಮ್ಮನ್ನು ಇಲ್ಲಿ ಬಿಟ್ಟಿದ್ದಾರೆ. ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಮಕ್ಕಳು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಸೇರಿಸಿ ಹೊರಟುಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶಯ ಉಚಿತವಾಗಿ ಸಿಗುತ್ತದೆ ಎಂಬ ಉದ್ದೇಶದಿಂದ ನಮ್ಮನ್ನು ಇಲ್ಲಿ ಬಿಟ್ಟುಹೋಗಿದ್ದಾರೆ ಎಂದು ಪರಿತ್ಯಕ್ತ ಪೋಷಕರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇಂಥ ಪರಿತ್ಯಕ್ತ ಹಿರಿಯ ನಾಗರಿಕರನ್ನು ಬಿಐಎಂಎಸ್ ಅಧಿಕಾರಿಗಳು ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕರ ನಿವೃತ್ತಿ ಗೃಹಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಆಸ್ಪತ್ರೆಗಳಲ್ಲಿಯೇ ಇದ್ದಾರೆ.

    ಹಿರಿಯ ನಾಗರಿಕರ ಕಾಯ್ದೆಯಡಿ ಕಾನೂನು ಕ್ರಮ
    ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದೂರುಗಳನ್ನು ಸಲ್ಲಿಸಬೇಕು ಎಂದು ಡಾ. ಪಾಟೀಲ್ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    “ಈ ಕಾನೂನಿನ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲವನ್ನು ಒದಗಿಸಬೇಕು ಎಂಬ ನಿಯಮವಿದೆ. ಅವರು ಹಾಗೆ ಮಾಡಲು ವಿಫಲವಾದರೆ, ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ” ಎಂದು ಡಾ. ಪಾಟೀಲ್ ಹೇಳಿದ್ದಾರೆ.

    ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಕಾಯ್ದೆಯಲ್ಲಿ ಅನುಮತಿ ಇದೆ ಎಂದು ತಿಳಿಸಲಾಗಿದೆ.

     

  • Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

    ಮುಂಬೈ: 2024ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಇಡೀ ತಂಡದ ಕಳಪೆ ಪ್ರದರ್ಶನದಿಂದ ಸೋಲಿನೊಂದಿಗೆ ಆವೃತ್ತಿಗೆ ವಿದಾಯ ಹೇಳಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೊಷಣೆಯೊಂದೇ ಬಾಕಿಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾರ್ದಿಕ್‌ ಪಾಂಡ್ಯ ಅವರು ಪತ್ನಿಗೆ ವಿಚ್ಛೇದನ (Divorce) ನೀಡಿದ್ದೇ ಆದಲ್ಲಿ ಅವರ 70% ಆಸ್ತಿ ಪತ್ನಿ ನತಾಶಾಗೆ ಸೇರಲಿದೆ ಎಂದು ವರದಿಯಾಗಿದೆ.

    ಪಾಂಡ್ಯ ಮತ್ತು ನತಾಶಾ ದೀರ್ಘಕಾಲದಿಂದ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರೂ ಕೊನೆಯದ್ದಾಗಿ ಫೆ.14ರಂದು ಇನ್‌ಸ್ಟಾದಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದರು. ಇದಾದ ನಂತರ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಕಳೆದ ಮಾರ್ಚ್‌ 4 ರಂದು ನತಾಶಾ ಅವರ ಹುಟ್ಟುಹಬ್ಬದ ದಿನವೂ ಪಾಂಡ್ಯ ಒಂದು ಸ್ಟೇಟಸ್‌ ಸಹ ಹಂಚಿಕೊಂಡಿರಲಿಲ್ಲ. ಜೊತೆಗೆ ಪಾಂಡ್ಯ ಅವರ ನಾಯಕತ್ವದಲ್ಲಿ ನಡೆದ ಯಾವುದೇ ಪಂದ್ಯ ನೋಡುವುದಕ್ಕೂ ನತಾಶಾ (Natasa Stankovic) ಸ್ಟೇಡಿಯಂಗಳಿಗೆ ಬರಲಿಲ್ಲ. ಸರ್ಬಿಯಾದ ಮಾಡೆಲ್‌ ಸಹ ಆಗಿದ್ದ ಸ್ಟಾಂಕೋವಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ʻಪಾಂಡ್ಯʼ ಉಮನಾಮ ತೆಗೆದುಹಾಕಿ ನತಾಶಾ ಸ್ಟಾಂಕೋವಿಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರ ವಿಚ್ಛೇದನ ಖಚಿತವಾಗಿದೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    70% ಆಸ್ತಿ ನತಾಶಾ ಪಾಲು:
    ವದಂತಿಗಳ ಪ್ರಕಾರ ಪಾಂಡ್ಯ ಅವರು ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶ ಕಾರಣದಿಂದ 70% ಆಸ್ತಿಯನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ ಪಾಂಡ್ಯ ಒಟ್ಟಾರೆ 165 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ 30 ಕೋಟಿ ರೂ.ಗೆ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರೊಂದಿಗೆ ಅವರು ವಡೋದರಾದಲ್ಲಿ ದುಬಾರಿ ಬೆಲೆಯ ವಿಲ್ಲಾ ಹೊಂದಿದ್ದಾರೆ. ವಿಚ್ಛೇದನ ಪಡೆದರೆ ಅವರು 70% ಆಸ್ತಿಯನ್ನು (70% Property) ಪತ್ನಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ಬಗ್ಗೆ ಹಾರ್ದಿಕ್ ಅಥವಾ ಅವರ ಪತ್ನಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ:
    ಹಾರ್ದಿಕ್‌ ಪಾಂಡ್ಯ ಅವರ ವಿಚ್ಛೇದಿತ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಕ್ಸ್‌ ಜಾಲತಾಣದಲ್ಲಿ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೆಲವರು ಹಾರ್ದಿಕ್‌ ಪಾಂಡ್ಯ ಪರ ಬ್ಯಾಟ್‌ ಬೀಸಿದ್ದು, ಪುರುಷರಿಗಾಗಿ ನಮ್ಮ ಸಮಾಜದ ನಿಯಮಗಳು ಯಾವಾಗಲೂ ಕಠಿಣವಾಗಿರುತ್ತವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ʻಹಾರ್ದಿಕ್‌ ಬ್ರೋ ನೀವು ಈಗಲೇ ಎಲ್ಲಾ ಆಸ್ತಿಯನ್ನು ನಿಮ್ಮ ತಾಯಿ ಹೆಸರಿಗೆ ವರ್ಗಾವಣೆ ಮಾಡಿಬಿಡಿʼ ಎಂಬ ಸಲಹೆಯನ್ನೂ ನೀಡಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರು 2020ರ ಜನವರಿ 20 ರಂದು ತಮ್ಮ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್‌ ಮಾಡಿದ್ದರು. ಮೊದಲ ಮಗುವಿನ ನಂತರ ಪ್ರೇಮಿಗಳ ದಿನದಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ತೆಲುಗಿನ ಖ್ಯಾತ ನಟ ಬಾಲಯ್ಯ (Balayya) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ.  ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲುವನ್ನು ಅರಸಿ ಹೊರಟಿದ್ದಾರೆ.

    ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ (Property) ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.

     

    ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.

  • 200 ಕೋಟಿ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಉದ್ಯಮಿ ದಂಪತಿ

    200 ಕೋಟಿ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಉದ್ಯಮಿ ದಂಪತಿ

    ಗಾಂಧಿನಗರ: ಗುಜರಾತ್‌ನ (Gujarat) ಶ್ರೀಮಂತ ಉದ್ಯಮಿಯೊಬ್ಬರು (Businessman) ತಮ್ಮ 200 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ದಾನ ಮಾಡುವ ಮೂಲಕ ಪತ್ನಿಯೊಂದಿಗೆ ಸನ್ಯಾಸತ್ವದ (Monkhood) ದಾರಿ ಹಿಡಿದಿದ್ದಾರೆ.

    ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಉದ್ಯಮಿ ಭವೇಶ್ ಭಾಯ್ ಭಂಡಾರಿ (Bhavesh Bhandari) ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದಾರೆ. ಸನ್ಯಾಸತ್ವ ಸ್ವೀಕಾರ ಹಿನ್ನೆಲೆ ಫೆಬ್ರವರಿಯಲ್ಲಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದು, ಈ ತಿಂಗಳ ಕೊನೆಯಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಭವೇಶ್ ದಂಪತಿಯ ಮಕ್ಕಳು ಸಹ 2 ವರ್ಷಗಳ ಹಿಂದೆ ದೀಕ್ಷೆ ಪಡೆದಿದ್ದರು. ಮಕ್ಕಳಿಂದ ಸ್ಫೂರ್ತಿ ಪಡೆದ ದಂಪತಿ ಕೂಡ ಇದೀಗ ಆಸ್ತಿ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್‌ ಅವಕಾಶ

    ಏಪ್ರಿಲ್ 22ರಂದು ಭವೇಶ್ ದಂಪತಿ ಸನ್ಯಾಸತ್ವ ತೆಗೆದುಕೊಳ್ಳಲಿದ್ದು, ಬಳಿಕ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ. ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಐಷಾರಾಮಿ ಜೀವನವನ್ನು ತ್ಯಜಿಸಬೇಕು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಬರಿಗಾಲಿನಲ್ಲಿ ಇಡೀ ಭಾರತದಾದ್ಯಂತ ತಿರುಗಾಡಬೇಕಾಗುತ್ತದೆ. ಇದನ್ನೂ ಓದಿ: ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

    ಹುಟ್ಟಿನಿಂದಲೇ ಶ್ರೀಮಂತ ಮನೆತನದಲ್ಲಿ ಬೆಳೆದ ಭವೇಶ್ ಭಂಡಾರಿ ಅವರ ಸನ್ಯಾಸತ್ವದ ನಿರ್ಧಾರ ಎಲ್ಲರ ಗಮನಸೆಳೆದಿದ್ದು, ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಭವೇಶ್ ದಂಪತಿ ಇತರೆ 35 ಮಂದಿಯೊಂದಿಗೆ ಸುಮಾರು 4 ಕಿ.ಮೀ ಮೆರವಣಿಗೆ ತೆರಳಿ ಬಳಿಕ ತಮ್ಮಲ್ಲಿದ್ದ ಮೊಬೈಲ್ ಸೇರಿದಂತೆ ಸಮಸ್ತ ಆಸ್ತಿಯನ್ನು ದಾನ ಮಾಡಿದ್ದಾರೆ. ಇದನ್ನೂ ಓದಿ: ರಾಗಾ ಹೆಲಿಕಾಪ್ಟರ್‌ ತಪಾಸಣೆ ನಡೆಸಿದ ಫ್ಲೈಯಿಂಗ್‌ ಸ್ಕ್ವಾಡ್‌ – ಮುಂದೇನಾಯ್ತು?

  • ಲೋಕಸಭೆ ಚುನಾವಣೆ: 142 ಕೋಟಿ ರೂ. ಆಸ್ತಿ ಘೋಷಿಸಿದ ನಟಿ ಹೇಮಾ ಮಾಲಿನಿ

    ಲೋಕಸಭೆ ಚುನಾವಣೆ: 142 ಕೋಟಿ ರೂ. ಆಸ್ತಿ ಘೋಷಿಸಿದ ನಟಿ ಹೇಮಾ ಮಾಲಿನಿ

    ಬಾಲಿವುಡ್ ನಟಿ ಹೇಮಾ ಮಾಲಿನಿ (Hema Malini) 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ 2ನೇ ಬಾರಿ ಲೋಕಸಭೆ ಚುನಾವಣೆಗೆ (Loksabha Elections 2024) ನಿಲ್ಲುವ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಚುನಾವಣಾಧಿಕಾರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಒಟ್ಟು 142 ಕೋಟಿ ರೂಪಾಯಿಯನ್ನು ಘೋಷಿಸಿದ್ದಾರೆ.

    ಹೇಮಾ ಮಾಲಿನಿ ಪತಿ ನಟ ಧರ್ಮೇಂದ್ರ ಅವರ ಆಸ್ತಿ ಒಟ್ಟು 26,52,32,266 ರೂ ಆಸ್ತಿ ಹೊಂದಿದ್ದಾರೆ. ಹೇಮಾ ಮಾಲಿನಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ.  ಹೇಮಾ ಮಾಲಿನಿ ಕೈಯಲ್ಲಿ 13,52,865 ರೂಪಾಯಿ ನಗದು ಇದೆ. ಬ್ಯಾಂಕ್ ಖಾತೆಯಲ್ಲಿ 99,93,177 ರೂಪಾಯಿಯನ್ನು ಇಟ್ಟಿದ್ದಾರೆ.

    1999ರಲ್ಲಿ ವಿನೋದ್ ಖನ್ನಾ ಪರವಾಗಿ ಹೇಮಾ ಮಾಲಿನಿ ಪ್ರಚಾರ ಮಾಡಿದ್ದರು. 2004ರಲ್ಲಿ ಅಫಿಷಿಯಲ್ ಆಗಿ ಬಿಜೆಪಿಗೆ ಸೇರ್ಪಡೆಯಾದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಹೇಮಾ ಮಾಲಿನಿ ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ 2ನೇ ಬಾರಿಯು ಮಥುರಾದಿಂದಲೇ ನಟಿ ಲೋಕಸಭಾ ಎಲೆಕ್ಷನ್‌ಗೆ ನಿಂತಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ಮಥುರಾ ಅಭ್ಯರ್ಥಿಯಾಗಿ ಹೇಮಾ ಮಾಲಿನಿ ಹೆಸರನ್ನು ಘೋಷಿಸಿದೆ.

     

    ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿ ಸಜ್ಜಾಗಿದ್ದು, ಈ ಬಾರಿ ಹೇಮಾ ಮಾಲಿನಿ ಕೂಡ ಸಾಥ್ ನೀಡುತ್ತಿದ್ದಾರೆ. ಜೊತೆಗೆ ನಾನಾ ಭಾಗಗಳಲ್ಲಿ ಸಿನಿಮಾ ನಟ ನಟಿಯರಿಗೆ ನಾನಾ ಪಕ್ಷಗಳು ಟಿಕೆಟ್ ಘೋಷಣೆ ಮಾಡಿವೆ.

  • 62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

    62.82 ಕೋಟಿ ಒಡೆಯ ಹೆಚ್‌ಡಿಕೆ- ಪತಿಗಿಂತ ಅನಿತಾ ಕುಮಾರಸ್ವಾಮಿಯೇ ಶ್ರೀಮಂತೆ!

    – ಪತ್ನಿ, ಅತ್ತಿಗೆಯಿಂದ ಹೆಚ್‌ಡಿಕೆ ಪಡೆದಿದ್ದಾರೆ ಸಾಲ

    ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಅಂತೆಯೇ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಹೆಚ್‌ಡಿಕೆ ತಮ್ಮ ಆಸ್ತಿ ವಿವರವನ್ನು ಕೂಡ ಘೋಷಿಸಿಕೊಂಡಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕುಟುಂಬದ ಒಟ್ಟು ಆಸ್ತಿ 217.21 ಕೋಟಿಯಾಗಿದ್ದು, ಇವರಿಗಿಂತ ಇವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಶ್ರೀಮಂತೆಯಾಗಿದ್ದಾರೆ. ಅತ್ತಿಗೆ ಭವಾನಿ, ಪತ್ನಿ ಹಾಗೂ ಪುತ್ರನಿಂದಲೂ ಹೆಚ್‌ಡಿಕೆ ಸಾಲವನ್ನು ಪಡೆದಿದ್ದಾರೆ. ಅತ್ತಿಗೆ ಭವಾನಿ ರೇವಣ್ಣರಿಂದ 3.26 ಲಕ್ಷ ರೂ ಸಾಲ ಪಡೆದರೆ, ಪತ್ನಿ ಅನಿತಾರಿಂದ 8.5 ಕೋಟಿ ಸಾಲವನ್ನು ಕುಮಾರಸ್ವಾಮಿ ಮಾಡಿದ್ದಾರೆ.

    ಕುಮಾರಸ್ವಾಮಿ ಆಸ್ತಿ 62.82 ಕೋಟಿ ಆಗಿದ್ದು, ಚರಾಸ್ತಿ- 10.71 ಕೋಟಿಯಾದರೆ ಸ್ಥಿರಾಸ್ತಿ 43.94 ಕೋಟಿ. ವಿವಿಧ ಕಡೆ 19.12ಕೋಟಿ ಸಾಲವನ್ನು ಹೆಚ್‌ಡಿಕೆ ಮಾಡಿದ್ದಾರೆ. ಇನ್ನು 47 ಲಕ್ಷ ಮೌಲ್ಯದ 750 ಗ್ರಾಂ. ಚಿನ್ನಾಭರಣ ಇದೆ. 9.62 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 2.60 ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ ಹೆಚ್‌ಡಿಕೆ ಬಳಿಯಿದೆ. ಇದನ್ನೂ ಓದಿ: ಕೋಟಿ ಕೋಟಿ ಆಸ್ತಿ ಒಡತಿ ಶೋಭಾ ಕರಂದ್ಲಾಜೆ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್‌ – ಆಸ್ತಿ ಎಷ್ಟಿದೆ ಗೊತ್ತಾ?

    ಪತ್ನಿ ಅನಿತಾ ಕುಮಾರಸ್ವಾಮಿ (Anita Kumaraswamy) ಆಸ್ತಿ-154.39 ಕೋಟಿ. ಚರಾಸ್ತಿ 90.32 ಕೋಟಿಯಾದ್ರೆ ಸ್ಥಿರಾಸ್ತಿ 64.07 ಕೋಟಿ ಮೌಲ್ಯದ್ದಾಗಿದೆ. ಇವರು 63.05 ಕೋಟಿ ಸಾಲ ಮಾಡಿದ್ದಾರೆ. ಅನಿತಾ ಅವರ ಬಳಿ 2.41ಕೋಟಿ ಮೌಲ್ಯದ 3.8ಕೆಜಿ ಚಿನ್ನಾಭರಣ, 13 ಲಕ್ಷ ಮೌಲ್ಯದ 17 ಕೆಜಿ ಬೆಳ್ಳಿ ಹಾಗೂ 33 ಲಕ್ಷ ಮೌಲ್ಯದ 50 ಕ್ಯಾರೆಟ್ ಡೈಮಂಡ್ ಇದೆ.

    ಎದುರಿಸುತ್ತಿರೋ ಪ್ರಕರಣ: ಲೋಕಾಯುಕ್ತ, ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ಮಾಜಿ ಮುಖ್ಯಮಂತ್ರಿಗಳು ಎದುರಿಸುತ್ತಿದ್ದಾರೆ. ಲೋಕಾಯುಕ್ತದಲ್ಲಿ 3 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.