Tag: ಆಸ್ಟ್ರಾಜೆನೆಕಾ

  • ಅಡ್ಡಪರಿಣಾಮವಿಲ್ಲ, ಶೇ.90ರಷ್ಟು ಪರಿಣಾಮಕಾರಿ – ಆಸ್ಟ್ರಾಜೆನೆಕಾ ಲಸಿಕೆ ಸಕ್ಸಸ್

    ಅಡ್ಡಪರಿಣಾಮವಿಲ್ಲ, ಶೇ.90ರಷ್ಟು ಪರಿಣಾಮಕಾರಿ – ಆಸ್ಟ್ರಾಜೆನೆಕಾ ಲಸಿಕೆ ಸಕ್ಸಸ್

    ಲಂಡನ್: ಕೊರೊನಾ ಲಸಿಕೆಗಾಗಿ ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ಕಂಪನಿಗಳು ಜಂಟಿಯಾಗಿ ಸಂಶೋಧಿಸುತ್ತಿರುವ ಕೊರೊನಾ ಲಸಿಕೆ ಯಶಸ್ವಿಯಾಗಿದೆ.

    ಈಗ ಸಕ್ಸಸ್ ಆಗಿರುವ ಆಸ್ಟ್ರಾಜೆನೆಕಾ ಲಸಿಕೆಯೂ ಯಾವುದೇ ಅಡ್ಡಪರಿಣಾಮವಿಲ್ಲದೇ ಕೆಲಸ ಮಾಡಲಿದೆ. ಜೊತೆಗೆ ಇದು ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಹೇಳಿಕೆ ನೀಡಿದೆ. ಈ ಲಸಿಕೆ ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಲಸಿಕೆ ಉತ್ಪಾದನೆಗೆ ಕಂಪನಿಯು ಅನುಮತಿ ಪಡೆಯುವ ನಿರೀಕ್ಷೆ ಇದೆ.

    ಲಸಿಕೆ ಹೇಗಿದೆ?
    ಆಸ್ಟ್ರಾಜೆನೆಕಾ ಮತ್ತು ಆಕ್ಸಫರ್ಡ್ ಕಂಪನಿಗಳು ಜಂಟಿಯಾಗಿ ಆವಿಷ್ಕಾರ ಮಾಡಿರುವ ಈ ಲಸಿಕೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ. 1 ಡೋಸ್‍ನಲ್ಲೇ ಆಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. 1 ತಿಂಗಳ ಬಳಿಕ 2 ಫುಲ್ ಡೋಸ್ ಕೊಟ್ಟಾಗ ಶೇ.62ರಷ್ಟು ಪರಿಣಾಮಕಾರಿಯಾಗಿ ಈ ಲಸಿಕೆ ಕೆಲಸ ಮಾಡಲಿದೆ ಎಂದು ಆಸ್ಟ್ರಾಜೆನೆಕಾ ಕಂಪನಿ ತಿಳಿಸಿದೆ.

    2 ಫುಲ್ ಡೋಸ್‍ಗಳ ಪರಿಣಾಮಗಳನ್ನು ಒಟ್ಟಿಗೆ ವಿಶ್ಲೇಷಿಸಿದರೆ ಆಸ್ಟ್ರಾಜೆನೆಕಾ ಲಸಿಕೆ ಶೇಕಡಾ 70ರಷ್ಟು ಪರಿಣಾಮಕಾರಿಯಾಗಿದ್ದು, ಕೊರೋನಾ ಸೋಂಕು ತಡೆಯುವಿಕೆಯಲ್ಲಿ ಪರಿಣಾಮ ಬೀರಲಿದೆ. ಈ ಲಸಿಕೆಯ ಪ್ರಯೋಗಕ್ಕೆ ಒಳಗಾದವರು ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ, ಗಂಭೀರ ಕಾಯಿಲೆಗಳು ಕಾಣಿಸಿಕೊಂಡಿಲ್ಲ. ಜೊತೆಗೆ 2-8 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶದಲ್ಲಿ ಲಸಿಕೆ ಸಂಗ್ರಹ ಮತ್ತು ಸಾಗಾಟ ಮಾಡಬಹುದು. ಲಸಿಕೆ ಉತ್ಪಾದನೆ ಆದ ಬಳಿಕ 6 ತಿಂಗಳಲ್ಲಿ ನೀಡಬಹುದು. 2021ರಲ್ಲಿ 300 ಕೋಟಿಯಷ್ಟು ಲಸಿಕೆ ಉತ್ಪಾದನೆ ಗುರಿ ಹೊಂದಿದ್ದೇವೆ ಎಂದು ಆಸ್ಟ್ರಾಜೆನೆಕಾ ಮಾಹಿತಿ ನೀಡಿದೆ.

    ಫೆಬ್ರವರಿ ವೇಳೆಗೆ ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಎರಡು ಲಸಿಕೆಗಳು ಲಭ್ಯವಿರುತ್ತವೆ ಎಂದು ಹೇಳಲಾಗಿದ್ದು, ಫೆಬ್ರವರಿ ಆರಂಭದಲ್ಲೇ ಆಸ್ಟ್ರಾಜೆನೆಕಾ ಮತ್ತು ಭಾರತ್ ಬಯೋಟೆಕ್‍ನ ಲಸಿಕೆಗಳು ಲಭ್ಯವಾಗುವ ಸಾಧ್ಯತೆ ಇದೆ.

    ಎಲ್ಲರಿಗಿಂತ ಮೊದಲು ಹೇಗೆ?
    ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ತೀವ್ರತೆರನಾದ ಶ್ವಾಸಕೋಶದ ಸಮಸ್ಯೆ ತರಬಲ್ಲ ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡೋಮ್) ಹಾಗೂ ಎಂಇಆರ್‍ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡೋಮ್) ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಲ್ಲ ಕೊರೊನಾ ವೈರಸ್ ಬಂದಿದೆ. ಹೀಗಾಗಿ ಕೂಡಲೇ ತಂಡ ಕೋವಿಡ್‍ಗೆ ಲಸಿಕೆ ಕಂಡು ಹಿಡಿಯಲು ಮುಂದಾಗಿತ್ತು. ಬೇರೆಯವರು ಲಸಿಕೆ ಕಂಡು ಹಿಡಿಯುವ ಪ್ರಯೋಗ ನಡೆಸುವುದಕ್ಕೆ ಮುನ್ನವೇ ಇವರು ವೈರಸ್ ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವ ಕಾರಣ ವಿಶ್ವದಲ್ಲಿ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.