Tag: ಆಸ್ಕರ್ ಫರ್ನಾಂಡಿಸ್

  • ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಉಡುಪಿ: ರಾಜ್ಯಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ತಮ್ಮ ಆಪ್ತ ಸಹಾಯಕನಿಗೆ ಲಕ್ಷಗಟ್ಟಲೆ ಸಂಬಳ ಬಾಕಿಯಿಟ್ಟಿದ್ದಾರಂತೆ. ವರ್ಷಗಟ್ಟಲೆ ಕಾದರೂ ಸಂಬಳ ಕೊಟ್ಟಿಲ್ವಂತೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ರೂ ಆಸ್ಕರ್ ಪರ್ಸ್ ಬಿಚ್ಚಿಲ್ವಂತೆ.

    ಆಸ್ಕರ್ ಆಪ್ತ ಸಹಾಯಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಲಿದ್ದಾರೆ. ಆಸ್ಕರ್ ಅವರ ಮಣಿಪಾಲ ವರ್ಕ್ ಶಾಪ್ ನಲ್ಲಿ ನಂತರ ಮನೆಯಲ್ಲಿ 1972ರಿಂದ 1987ರವರಗೆ ಉಡುಪಿಯ ಅಂಬಲ್ಪಾಡಿಯ ಗೋಪಾಲ ಪೂಜಾರಿ ಕೆಲಸಕ್ಕಿದ್ದರು. ಮೊದಲು ಸೂಪರ್ ವೈಸರ್ ಆಗಿದ್ದ ಗೋಪಾಲ್ ಪೂಜಾರಿ ನಂತರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಂಬಳ ನೀಡಿಲ್ಲ. ಆ ಮೇಲೆ ಸಂಬಳ ಕೊಡುವುದಾಗಿ ಹೇಳುತ್ತಾ ದಿನ ದೂಡಿದರು.

    ಈವರೆಗೆ ನನಗೆ 6 ಲಕ್ಷ 10 ಸಾವಿರ ರೂಪಾಯಿ ಸಂಬಳದ ಹಣ ಕೊಡೋದು ಬಾಕಿಯಿದೆ ಅಂತ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. 1995ರಲ್ಲಿ ಸೋನಿಯಾಗಾಂಧಿಗೆ ದೂರು ನೀಡಿದ್ದೆ. ಸೋನಿಯಾಗಾಂಧಿ ಆಸ್ಕರ್ ಅವರನ್ನು ಕರೆದು ಸಂಬಳ ಕೊಡಿ ಎಂದು ತಾಕೀತು ಮಾಡಿದ್ದರು. ಆದ್ರೂ ಅವರು ಹಣ ಕೊಡಲಿಲ್ಲ. ಮಗಳ ಮದುವೆ ಸಂದರ್ಭದಲ್ಲಾದ್ರೂ ಕೊಡಬಹುದು ಎಂದು ಕಾದು ಈಗ ಮೋಸ ಹೋಗಿದ್ದೇನೆ ಎಂದು ಅವರು ಹೇಳಿದರು.

    ಕಾರ್ಮಿಕ ಇಲಾಖೆ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಗೋಪಾಲ್ ಪೂಜಾರಿ ದೂರಿದ್ದಾರೆ. ಏಪ್ರಿಲ್ 1 ರವರೆಗೆ ಗಡುವು ನೀಡಿರುವ ಅವರು, ಏಪ್ರಿಲ್ 2ರಂದು ಉಪವಾಸ ಕೂರುವುದಾಗಿ ಹೇಳಿದ್ದಾರೆ. ಗೋಪಾಲ್ ಪೂಜಾರಿ ಪತ್ನಿ ಚಂಚಲ ಅನಾರೋಗ್ಯದಿಂದ ಬಳಲುತ್ತಿದ್ದು ಸಂಬಂಧಿಕರಿಂದ ಸಹಾಯ ಯಾಚಿಸುವಂತಾಗಿದೆ ಎಂದು ಹೇಳಿದರು.

    15 ದಿನದ ಹಿಂದೆ ಆಸ್ಕರ್ ಗೆ ಪತ್ರ ಬರೆದಿದ್ದೆ. ಅದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಕೊಟ್ಟ ಹಿಂಬರವನ್ನೂ ಲಗತ್ತಿಸಿದ್ದೆ. ಇದಕ್ಕೂ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ನಿಗಮ ಮಂಡಳಿಗೆ ನೇಮಕ ಮಾಡುತ್ತೇನೆ ಎಂದು ಒಂದು ಬಾರಿ ಆಸ್ಕರ್ ಭರವಸೆ ಕೊಟ್ಟಿದ್ದರು ಎಂಬುದನ್ನು ಗೋಪಾಲ್ ಪೂಜಾರಿ ನೆನಪಿಸಿಕೊಂಡರು.

  • ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಲಿವೇಷ ಕುಣಿತ

    ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಲಿವೇಷ ಕುಣಿತ

    ಉಡುಪಿ: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಗಣೇಶ ಚತುರ್ಥಿಯ ಸಂದರ್ಭ ಹುಲಿವೇಷದ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದ್ದಾರೆ.

    ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಗಣೇಶ ಚತುರ್ಥಿಯ ಪ್ರಯುಕ್ತ ಹುಲಿವೇಷದೊಂದಿಗೆ ಉಡುಪಿ ಪ್ರವಾಸಿ ಮಂದಿರದಲ್ಲಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಶುಭಾಶಯ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಹುಲಿವೇಷ ತಂಡದವರು ಆಸ್ಕರ್ ಅವರಿಗೆ ತಮ್ಮ ಪ್ರದರ್ಶನ ನೀಡುತ್ತಿದ್ದಾಗ ಸ್ವಲ್ಪ ಹೊತ್ತು ವೀಕ್ಷಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹುಲಿವೇಷದ ಜೊತೆಯಲ್ಲಿ ಮೊದಲು ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು. ನಂತರ ಆಸ್ಕರ್ ಫರ್ನಾಂಡಿಸ್ ಕೂಡಾ ಹುಲಿ ವೇಷಕ್ಕೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕಿದರು.

    ಸ್ವತಃ ಹಲವಾರು ಪ್ರತಿಭೆಗಳನ್ನು ಹೊಂದಿರುವ ಆಸ್ಕರ್ ಫರ್ನಾಂಡಿಸ್ ಉತ್ತಮ ಯೋಗಪಟುವಾಗಿದ್ದು, ಓರ್ವ ಈಜುಗಾರರು ಕೂಡ ಹೌದು. ಅಲ್ಲದೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ತುಳು ಪದ್ಯವೊಂದನ್ನು ಹಾಡುವುದರ ಮೂಲಕ ಸದಸ್ಯರ ಗಮನ ಸೆಳೆದಿದ್ದರು. ಇದೀಗ ಹುಲಿವೇಷ ಕುಣಿದು ಮತ್ತೆ ಗಮನ ಸೆಳೆದಿದ್ದಾರೆ.

    ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂಎ ಗಫೂರ್, ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ನಾಗೇಶ್ ಉದ್ಯಾವರ, ವೀರ ಮಾರುತಿ ತಂಡದ ಅನಿಲ್ ಪಾಲನ್, ಪ್ರಸಾದ್ ಪಾಲನ್ ಹಾಗೂ ಇತರರು ಇದ್ದರು.