Tag: ಆಸೀಫ್

  • ಅನಧಿಕೃತ ಟೋಲ್ ರದ್ದಾಗದೆ ವಾಪಸ್ ಹೋಗಲ್ಲ- ಧರಣಿ ಕೂತ ʼಆಪತ್ಪಾಂಧವ ಆಸೀಫ್ʼ

    ಅನಧಿಕೃತ ಟೋಲ್ ರದ್ದಾಗದೆ ವಾಪಸ್ ಹೋಗಲ್ಲ- ಧರಣಿ ಕೂತ ʼಆಪತ್ಪಾಂಧವ ಆಸೀಫ್ʼ

    ಮಂಗಳೂರು: ಸುರತ್ಕಲ್‍ನ ಎನ್‍ಐಟಿಕೆ ಟೋಲ್ ಗೇಟ್ ವಿರುದ್ಧ ಸಮಾಜ ಸೇವಕ ಆಸೀಫ್ ಆಪತ್ಬಾಂಧವ ಅವರು ಟೋಲ್ ಸಮೀಪ ಅಹೋರಾತ್ರಿ ಧರಣಿ ಕೂತಿದ್ದು ವಿವಿಧ ಸಮಾಜಸೇವಾ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ.

    ಧರಣಿ ಸತ್ಯಾಗ್ರಹದ ವೇಳೆ ಮಾತಾಡಿದ ಆಸೀಫ್ ಅವರು, ಕೆಲವೇ ಕಿ.ಮೀ ಅಂತರದಲ್ಲಿ ಎನ್‍ಐಟಿಕೆ ಮತ್ತು ಹೆಜಮಾಡಿ ಟೋಲ್ ಗೇಟ್‍ಗಳನ್ನು ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿದ್ದು ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗುತ್ತಿದೆ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಹಲವು ಸಮಯಗಳಿಂದ ಎನ್‍ಐಟಿಕೆ ಟೋಲ್ ಗೇಟ್ ರದ್ದಾಗುತ್ತದೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಇಲ್ಲಿನ ಟೋಲ್ ಮಾತ್ರ ಮುಚ್ಚಿಲ್ಲ. ನಾನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿದಂತೆಯೇ ಇಲ್ಲಿನ ಟೋಲ್ ವಿರುದ್ಧ ಅಹೋರಾತ್ರಿ ಹೋರಾಟಕ್ಕೆ ಇಳಿದಿದ್ದೇನೆ. ಟೋಲ್ ರದ್ದಾಗದ ಹೊರತು ಇಲ್ಲಿಂದ ವಾಪಾಸ್ ಹೋಗುವುದಿಲ್ಲ. ಟೋಲ್ ಕಾರ್ಮಿಕರ ಗೂಂಡಾಗಿರಿ ಮಿತಿಮೀರಿದ್ದು ಕೂಡಲೇ ಇಲ್ಲಿನ ಟೋಲ್ ಗೇಟ್ ರದ್ದುಪಡಿಸಿ ಜನರನ್ನು ನೆಮ್ಮದಿಯಿಂದ ಉಸಿರಾಡಲು ಬಿಡಿ” ಎಂದು ಅಗ್ರಹಿಸಿದರು. ಇದನ್ನೂ ಓದಿ: ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್

    ಆಂಬುಲೆನ್ಸ್, ಮೂಲಭೂತ ಸೌಕರ್ಯವಿಲ್ಲ:
    ಹೆಜಮಾಡಿ ಟೋಲ್ ಗೇಟ್‍ನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಮುಕ್ಕ ಟೋಲ್ ಗೇಟ್ ತಾತ್ಕಾಲಿಕ ಎಂದು ಪ್ರಾರಂಭದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಹೆಜಮಾಡಿಯಲ್ಲಿ ಟೋಲ್ ನಿರ್ಮಾಣವಾದ ಬಳಿಕವೂ ಇದನ್ನು ಮುಂದುವರಿಸಿದ್ದಾರೆ. ಇಲ್ಲಿ ಟೋಲ್ ಗೇಟ್ ಎಂದು ಹೇಳಿಕೊಳ್ಳಲು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ, ಶೌಚಾಲಯ ಸಹಿತ ಯಾವೊಂದು ವ್ಯವಸ್ಥೆಯೂ ಇಲ್ಲ. ಇದರಿಂದ ಅದೆಷ್ಟೋ ಬಾರಿ ಅಪಘಾತ ನಡೆದಾಗ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡಬೇಕಾಗುತ್ತದೆ. ಇದರಿಂದ ಗಾಯಾಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಪ್ರಾಣ ತೆತ್ತ ಎಷ್ಟೋ ಉದಾಹರಣೆಗಳಿವೆ. ಇಂತಹ ಅನಧಿಕೃತ ಟೋಲ್ ಗೇಟ್ ಕಾರ್ಮಿಕರು ಹಲವಾರು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ವಾಹನ ಸವಾರರು ಭಯಗ್ರಸ್ಥರಾಗಿಯೇ ಸಂಚಾರ ನಡೆಸಬೇಕಾಗಿದೆ ಎಂದು ಸಮಾಜ ಸೇವಕ ಆಸೀಫ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಜಬ್ ವಿವಾದ ವ್ಯವಸ್ಥಿತ ಷಡ್ಯಂತ್ರ: ಬಿಜೆಪಿ ಆರೋಪ

    ಧರಣಿಯಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಹರೀಶ್ ಪುತ್ರನ್ ಮಾತನಾಡಿ, ಎನ್‍ಐಟಿಕೆಯಲ್ಲಿ ಟೋಲ್ ಗೇಟ್ ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆ. ಇಲ್ಲಿ ಹಿಂದೆ ಟೋಲ್ ವಿರೋಧಿ ಹೋರಾಟ ಸಮಿತಿ ನಡೆಸಿದ್ಧ ಅವಿರತ ಹೋರಾಟದಿಂದಾಗಿ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೆ ನಂತರದ ದಿನಗಳಲ್ಲಿ ಹೋರಾಟ ಸಮಿತಿಯು ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಟೋಲ್ ರದ್ದು ಮಾಡುವಂತೆ ಮನವಿ ಮಾಡುತ್ತಲೇ ಬಂದಿದ್ದರೂ ಕಿವಿಗೊಡದೆ ಟೋಲ್ ಗೇಟ್ ಗೂಂಡಾಗಿರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಟೋಲ್ ವಿರುದ್ಧ ಈಗಾಗಲೇ ಹೇಳಿರುವಂತೆ ಸಮಾಜ ಸೇವಕ ಆಸೀಫ್ ಅವರು ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ಜನರು ತಮ್ಮ ಧ್ವನಿಗೂಡಿಸಿದಲ್ಲಿ ಫಲಿತಾಂಶ ಸಿಗಲಿದೆ ಎಂದರು.

    ಎಸ್ ಡಿಪಿಐ ಮೂಲ್ಕಿ ಮೂಡಬಿದ್ರೆ ವಲಯ ಅಧ್ಯಕ್ಷ ಅಶ್ರಫ್ ಕೋಟೆಬಾಗಿಲು, ರಿಲಯನ್ಸ್ ಬೊಳ್ಳೂರು ಸಂಘಟನೆ ಮುಖಂಡ ಹಾರಿಸ್ ಇಂದಿರಾನಗರ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಮನ್ಸೂರ್ ಅಹ್ಮದ್, ಸಮಾಜ ಸೇವಕ ನಿಜಾಮ್ ಪಡುಬಿದ್ರೆ, ಜೆ. ಶ್ರೀಯಾನ್, ಪ್ರಶಾಂತ್ ಕಾಂಚನ್ ಕೊಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

  • ಬ್ರಾಹ್ಮಣ ವೃದ್ಧರೊಬ್ಬರ ಅಂತ್ಯ ಸಂಸ್ಕಾರ ಮಾಡಿ ಮಾದರಿಯಾದ ಆಸೀಫ್

    ಬ್ರಾಹ್ಮಣ ವೃದ್ಧರೊಬ್ಬರ ಅಂತ್ಯ ಸಂಸ್ಕಾರ ಮಾಡಿ ಮಾದರಿಯಾದ ಆಸೀಫ್

    ಮಂಗಳೂರು: ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸುವ ಮೂಲಕ ಮುಸ್ಲಿಂ ಸಮುದಾಯದ ವ್ಯಕ್ತಿ ಇತರರಿಗೆ ಮಾದರಿಯಾಗಿದ್ದಾರೆ.

    ಮೂಲ್ಕಿಯ ಕಾರ್ನಾಡುವಿನಲ್ಲಿ ಕಾರ್ಯಾಚರಣೆ ನಡೆಸುವ ಮೈಮೂನಾ ಫೌಂಡೇಶನ್‍ನ ನಿರ್ದೇಶಕ ಆಪದ್ಬಾಂಧವ ಆಸೀಫ್, ಈ ಮಾದರಿ ಕೆಲಸ ಮಾಡಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ರಹ್ಮಸ್ತಾನ ಬಳಿಯ ನಿವಾಸಿ ವೇಣುಗೋಪಾಲ ರಾವ್(62) ಕಳೆದ ನಾಲ್ಕು ವರ್ಷಗಳ ಹಿಂದೆ ಮಾನಸಿಕವಾಗಿ ಪಡುಬಿದ್ರೆ ದೇವಸ್ಥಾನದ ಬಳಿಯಲ್ಲಿ ನಿರ್ಗತಿಕರಾಗಿದ್ದರು.

    ಸ್ಥಳೀಯರು ಮೂಲ್ಕಿಯ ಕಾರ್ನಾಡುವಿನ ಆಪಾದ್ಬಾಂದವ ಆಸೀಫ್ ರವರಿಗೆ ತಿಳಿಸಿದ್ದು, ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನದ ನಂತರ ಸ್ವಲ್ಪ ಮಟ್ಟಿಗೆ ಗುಣಮುಖರಾಗಿದ್ದು, ಬಳಿಕ ಮನೆಗೆ ಕರೆದುಕೊಂಡು ಹೋಗುವಂತೆ ವೇಣುಗೋಪಾಲರಾವ್ ಸಂಬಂಧಿಕರನ್ನು ವಿನಂತಿಸಿದಾಗ ಸಂಬಂಧಿಕರಿಂದ ಸೂಕ್ತ ಸ್ಪಂದನೆ ದೊರಕದೆ ಆಪದ್ಬಾಂಧವ ಆಸೀಫ್ ಅವರು ಮುಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಅನಾಥಾಶ್ರಮದಲ್ಲಿ ಸಾಕಿ ಸಲಹುತ್ತಿದ್ದರು. ಇದೀಗ ವೇಣುಗೋಪಾಲ ರಾವ್ ಆರೋಗ್ಯ ಹದಗೆಟ್ಟು ಮಾನಸಿಕ ನೋವಿನಿಂದ ಬಳಲಿ ನಿಧನರಾಗಿದ್ದು, ಕೂಡಲೇ ಆಪದ್ಬಾಂಧವ ಆಸೀಫ್ ಅವರು ಹಿಂದೂ ಸಂಪ್ರದಾಯದಂತೆ ಮುಲ್ಕಿ ರುದ್ರಭೂಮಿಯಲ್ಲಿ ತಾವೇ ಅಂತ್ಯಸಂಸ್ಕಾರ ಮಾಡಿ ಮಾದರಿಯಾಗಿದ್ದಾರೆ.