Tag: ಆಶಾ ಕಾರ್ಯಕರ್ತೆಯರು

  • 500 ರೂಪಾಯಿಗೆ ಕೈ ಮಿಲಾಯಿಸಿದ ಆಶಾ ಕಾರ್ಯಕರ್ತೆಯರು

    500 ರೂಪಾಯಿಗೆ ಕೈ ಮಿಲಾಯಿಸಿದ ಆಶಾ ಕಾರ್ಯಕರ್ತೆಯರು

    ಪಾಟ್ನಾ: 500 ರೂಪಾಯಿ ವಿಚಾರವಾಗಿ ಇಬ್ಬರು ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದುಕೊಂಡಿರುವ ಘಟನೆ ಬಿಹಾರದ ಜಮುಯಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಲಕ್ಷ್ಮಿಪುರ ಬ್ಲಾಕ್‍ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಮಗುವೊಂದು ಜನಸಿದೆ. ಈ ವೇಳೆ ಆಶಾ ಕಾರ್ಯಕರ್ತೆ ರಿಂತು ಕುಮಾರಿ ಮಗುವಿಗೆ ಚುಚ್ಚು ಮದ್ದು ನೀಡಲು ಮತ್ತೋರ್ವ ಆಶಾ ಕಾರ್ಯಕರ್ತೆ ರಂಜನಾ ಕುಮಾರಿ ಅವರನ್ನ ಸಂಪರ್ಕಿಸಿದ್ದಾಳೆ. ಈ ವೇಳೆ ಲಸಿಕೆ ನೀಡಲು ನರ್ಸ್ 500 ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಆಶಾ ಕಾರ್ಯಕರ್ತೆ ರಂಜನಾ ತಿಳಿಸಿದ್ದಾಳೆ. ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಣ ರಾಜಕೀಯ ಬಲು ಜೋರು – ಕತ್ತಿ ಸಭೆಗೆ ಪ್ರತಿಯಾಗಿ ಜಾರಕಿಹೊಳಿ ಮೀಟಿಂಗ್

    ಇಬ್ಬರು ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡುತ್ತಿದ್ದಂತೆ ಆಸ್ಪತ್ರೆಯಲ್ಲಿರುವ ಒಬ್ಬರು ಅದರ ವೀಡಿಯೋ ಸೆರೆ ಹಿಡಿದಿದ್ದಾರೆ. ಘಟನೆಯ ವೀಡಿಯೋ ವೈದ್ಯಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಂಪುಟ ಸರ್ಜರಿಗೆ ಡೆಡ್‍ಲೈನ್ – ಮಾರ್ಚಲ್ಲ ಈಗ್ಲೇ ವಿಸ್ತರಿಸಿ ಅಂತ ಬಿಗಿಪಟ್ಟು

  • ಹೈಡ್ರಾಮಾ ಮಾಡುತ್ತಿದ್ದ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿದ ಆಶಾ ಕಾರ್ಯಕರ್ತೆಯರು

    ಹೈಡ್ರಾಮಾ ಮಾಡುತ್ತಿದ್ದ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿದ ಆಶಾ ಕಾರ್ಯಕರ್ತೆಯರು

    ಬೀದರ್: ಅಜ್ಜಿ ಲಸಿಕೆ ಪಡೆಯದೆ ಹೈಡ್ರಾಮಾ ಮಾಡುತ್ತಿದ್ದಾಗ ಅವರ ಕೈಗಳನ್ನು ಹಿಡಿದು ಆರೋಗ್ಯ ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಪರ್ತಾಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಸಿಕೆ ಪಡೆಯಲು ಅಜ್ಜಿ ಒಲ್ಲೆ ಎಂದರೂ ಬಿಡದ ಆರೋಗ್ಯ ಸಿಬ್ಬಂದಿ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

    ಅಜ್ಜಿ ಲಸಿಕೆ ಪಡೆಯುತ್ತಿಲ್ಲಾ ಎಂಬ ಮಾಹಿತಿ ಪಡೆದ ಆಶಾ ಕಾರ್ಯಕರ್ತೆರು ಹಾಗೂ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲು ಅಜ್ಜಿ ಮನೆಗೆ ಭೇಟಿ ನೀಡಿದರು. ಈ ವೇಳೆ ಎಷ್ಟೇ ಮನವೊಲಿಸಿದರೂ, ಅಜ್ಜಿ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಒತ್ತಾಯವಾಗಿ ಲಸಿಕೆ ನೀಡಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

     

    ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾಗೆ ಸಂಜೀವಿನಿಯಾದ ಲಸಿಕೆ ಪಡೆಯಲು ಬೀದರ್ ಜಿಲ್ಲೆಯ ಗ್ರಾಮೀಣ ಭಾಗದ ಜನರು ಇನ್ನೂ ಹಿಂದೇಟು ಹಾಕುತ್ತಿರುವುದು ಆರೋಗ್ಯ ಸಿಬ್ಬಂದಿಯನ್ನು ಹೈರಾಣಾಗುವಂತೆ ಮಾಡಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

  • ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ: ಕೋವಿಡ್ 19 ನಿರ್ವಹಣೆಗೆ ಮೆಚ್ಚುಗೆ

    ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ: ಕೋವಿಡ್ 19 ನಿರ್ವಹಣೆಗೆ ಮೆಚ್ಚುಗೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆಶಾ ಕಾರ್ಯಕರ್ತೆಯರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್ 19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

    ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಗಮನಿಸಿ, ಕೋವಿಡ್ 19 ಎರಡನೇ ಅಲೆಯ ಪರಿಹಾರ ಪ್ಯಾಕೇಜ್ ನಡಿ 3 ಸಾವಿರ ರೂ. ಸಹಾಯಧನ ಘೋಷಿಸಿರುವುದಾಗಿ ತಿಳಿಸಿದರು.

    ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಅವರ ಆರೋಗ್ಯದ ಸ್ಥಿತಿ ಗತಿ, ಕಾರ್ಯ ನಿರ್ವಹಣೆ, ಅವರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ವಿವರ, ಸಾರ್ವಜನಿಕರು, ಮೇಲಾಧಿಕಾರಿಗಳ ಸಹಕಾರ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.

    ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.

    ಲಸಿಕೆ ಹಾಕಿಸಲು ತಮ್ಮ ಗ್ರಾಮದ ಜನರ ಮನವೊಲಿಸಿ, ಮೇಲಾಧಿಕಾರಿಗಳ ಸಹಾಯದಿಂದ ವಾಹನ ವ್ಯವಸ್ಥೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಲಸಿಕೆ ಹಾಕಿಸಿದ್ದನ್ನು ಸ್ಮರಿಸಿಕೊಂಡರು.

    ಕೋವಿಡ್ ಪೀಡಿತರಾಗಿದ್ದ ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ. ಕೋವಿಡ್ ಕೇರ್ ಸೆಂಟರಿನಿಂದಲೇ ಸಂವಾದದಲ್ಲಿ ಪಾಲ್ಗೊಂಡರು. ಕಳೆದ 15 ದಿನಗಳ ವರೆಗೆ ತಮ್ಮ ಗ್ರಾಮ ಕೋವಿಡ್ ಮುಕ್ತವಾಗಿತ್ತು. ಇದೀಗ ಏಳು ಪ್ರಕರಣಗಳು ಕಂಡು ಬಂದಿವೆ. ಇಬ್ಬರು ಹೋಂ ಐಸೊಲೇಷನ್ ನಲ್ಲಿದ್ದು, ಉಳಿದವರು ಕೋವಿಡ್ ಕೇರ್ ಸೆಂಟರಿನಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು.

    ಜನರು ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ತಮ್ಮ ಪತಿಗೇ ಮೊದಲಿಗೆ ಲಸಿಕೆ ಕೊಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ ಅನುಭವವನ್ನು ರಾಮನಗರದ ಶಿವಲಿಂಗಮ್ಮ ಹಂಚಿಕೊಂಡರು. ವಿಜಯಪುರ ಜಿಲ್ಲೆಯ ದೀಪಾ ಬಜ್ಜನವರ ಅವರು ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಲು ಜನರು ಹಿಂದೇಟು ಹಾಕಿದ ಅನುಭವವನ್ನು ವಿವರಿಸಿದರು.

    ಸಬ್ಬಮಂಗಲದ ರತ್ನಮ್ಮ ಅವರು, ಮನೆ ಮನೆಗೆ ಭೇಟಿ ನೀಡಿ, ಅರಿವು ಮೂಡಿಸುವುದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್, ತಮ್ಮ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ 120 ಜನರಲ್ಲಿ 115 ಜನರಿಗೆ ಲಸಿಕೆ ಹಾಕಿಸಿರುವುದಾಗಿ ತಿಳಿಸಿದರು ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಬಡಜನರ ಚಿಕಿತ್ಸೆಗೆ ದಾನಿಗಳಿಂದ ನೆರವು ದೊರಕಿಸುವ ಪ್ರಯತ್ನ ಮಾಡಿರುವುದನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

    ಸಂವಾದದ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಸುರಕ್ಷಿತ ಎಂಬುದನ್ನು ಮನವರಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಜೊತೆಗೆ, ಐ ಎಲ್ ಐ, ಸಾರಿ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು.

    ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಪ್ರೇಮಾ ಪ್ರಕಾಶ್ ಕಬ್ಬೂರು, ದಕ್ಷಿಣ ಕನ್ನಡ ಜಿಲ್ಲೆ ಸುಲ್ಕೇರಿಯ ಹೇಮಲತಾ, ರಾಮನಗರ ಜಿಲ್ಲೆಯ ದೊಡ್ಡಗಂಗವಾಡಿಯ ಶಿವಲಿಂಗಮ್ಮ, ವಿಜಯಪುರ ಜಿಲ್ಲೆ ಕಂಬಾಗಿಯ ದೀಪಾ ಬಜ್ಜನವರ್, ಬೆಂಗಳೂರು ನಗರ ಜಿಲ್ಲೆ ಸಬ್ಬಮಂಗಲದ ರತ್ನಮ್ಮ, ಬಳ್ಳಾರಿ ಜಿಲ್ಲೆ ದಬ್ಬೂರಿನ ಪರಿಮಳಾ, ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ., ಕೊಪ್ಪಳ ಜಿಲ್ಲೆ ನವಲಿಯ ಲಕ್ಷ್ಮವ್ವ ನಾಯಕ್, ರಾಯಚೂರು ಜಿಲ್ಲೆ ಗಣಮೂರಿನ ಇಂದಿರಾ, ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಮುಖ್ಯಮಂತ್ರಿಯವರೊಂದಿಗೆ ಸಂವಾದ ನಡೆಸಿದರು.

    ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.

  • ಕೊಟ್ಟ ಮಾತು ತಪ್ಪಿದ ಸರ್ಕಾರ- ನಾಳೆ ಬೆಂಗ್ಳೂರಲ್ಲಿ ಆಶಾಕಾರ್ಯಕರ್ತೆಯರ ಬೃಹತ್ ಧರಣಿ

    ಕೊಟ್ಟ ಮಾತು ತಪ್ಪಿದ ಸರ್ಕಾರ- ನಾಳೆ ಬೆಂಗ್ಳೂರಲ್ಲಿ ಆಶಾಕಾರ್ಯಕರ್ತೆಯರ ಬೃಹತ್ ಧರಣಿ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಆಶಾ ಕಾರ್ಯಕರ್ತೆಯರು ನಾಳೆ ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸಲಿದ್ದಾರೆ.

    ಮಾಸಿಕ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಶಾ ಕಾರ್ಯಕರ್ತೆಯರು ಧರಣಿ ಮಾಡಲಿದ್ದಾರೆ. ದುಡಿಯುವ ವರ್ಗದ ನೋವು ತಿಳಿಸಲು ಆಶಾ ಕಾರ್ಯಕರ್ತೆಯರು ಬೀದಿಗಿಳಿಯಲಿದ್ದು, ರಾಜ್ಯ ಮಟ್ಟದ ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆಯಲಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದ್ದಾರೆ.

    ಸಾಂಧರ್ಬಿಕ ಚಿತ್ರ

    ಕೊರೊನಾ ಸಂಕಷ್ಟದ ನಡುವೆಯೂ ಆಶಾ ಕಾರ್ಯಕರ್ತೆಯರು ಮುಂಚೂನಿಯಲ್ಲಿದ್ದು ಶ್ರಮಿಸಿದ್ದು, ಸರ್ಕಾರ ಕೆಲಸಕ್ಕೆ ಸರಿಯಾದ ವೇತನ ನೀಡುತ್ತಿಲ್ಲ. ಈ ಹಿಂದೆ ಹಲವು ಬಾರೀ ಮುಷ್ಕರ ನಡೆಸಿದರೂ ಸರ್ಕಾರ ಭರಸೆಯನ್ನು ಬಿಟ್ಟು ಬೇಡಿಕೆ ಈಡೇರಿಸಿಲ್ಲ. ಅನಿವಾರ್ಯವಾಗಿ ಈಗ ಪ್ರತಿಘಟನೆ ನಡೆಸುತ್ತಿದ್ದು, ಮಾಸಿಕ 12 ಸಾವಿರ ವೇತನ ನಿಗದಿಗೆ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದರು.

    ಸಾಂಧರ್ಬಿಕ ಚಿತ್ರ
  • ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ವೇತನ ಹೆಚ್ಚಳಕ್ಕೆ ಆಗ್ರಹ – ಮಳೆಯಲ್ಲೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

    ಧಾರವಾಡ: ಜಿಲ್ಲೆಯಲ್ಲಿ ಇವತ್ತು ಆಶಾ ಕಾರ್ಯಕರ್ತೆರು ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಗೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಇವತ್ತು ವಿವಿಧ ಗ್ರಾಮಗಳಲ್ಲಿ ಇರುವ ಪ್ರಾಥಮಿಕ ಆರೋಗ್ಯಗಳ ಮುಂದೆ ಪ್ರತಿಭಟನೆ ಮಾಡಿದರು.

    ಜಿಲ್ಲೆಯ ಮುಗದ, ಉಪ್ಪಿನಬೇಟಗೇರಿ, ಅಮ್ಮಿನಬಾವಿ ಸೇರಿದಂತೆ ಹಲವು ಕಡೆಗಳಲ್ಲಿ ಇವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮೊದಲೇ ಸರ್ಕಾರಕ್ಕೆ 12 ಸಾವಿರ ವೇತನಕ್ಕೆ ಇವರು ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದನೆ ಮಾಡಿಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಇಂದು ಮಳೆ ಬರುತ್ತಿದ್ದು, ಈ ಮಳೆಯಲ್ಲಿಯೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದು ಕಂಡು ಬಂತು.

  • ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಸರ್ಕಾರದಲ್ಲಿ ಗೊಂದಲಗಳಿಲ್ಲ, 18ರ ಯುವಕರಂತೆ ಸಿಎಂ ಕೆಲ್ಸ ಮಾಡ್ತಿದಾರೆ: ಸಚಿವ ಸೋಮಶೇಖರ್

    ಚಿಕ್ಕೋಡಿ: ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಸಹಕಾರಿ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ನಿರ್ಧಾರ ಕೈಗೊಳ್ಳಲು ಆಯಾ ಜಿಲ್ಲಾಡಿಳತಕ್ಕೆ ಬಿಡಲಾಗಿದೆ. ಬೆಂಗಳೂರಿನಲ್ಲಿ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಲಾಕ್‍ಡೌನ್ ಮಾಡಲಾಗಿದೆ ಎಂದರು.

    ಬೆಂಗಳೂರು ಲಾಕ್‍ಡೌನ್ ಮಾಡುವದರ ಬಗ್ಗೆ ಸಿಎಂ ನಿರ್ಣಯ ತೆಗೆದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರು ಕೋವಿಡ್-19 ಸಂದರ್ಭದಲ್ಲಿ 18ರ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿದ್ದೆಯಿಲ್ಲದೆ ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ವೈಖರಿ ಬಗ್ಗೆ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು. ಅಲ್ಲದೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಇದಕ್ಕೂ ಮೊದಲು ಜೊಲ್ಲೆ ಉದ್ಯೋಗ ಸಮೂಗ ಸಂಸ್ಥೆಯ ಬಿರೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ 1485 ಆಶಾ ಕಾರ್ಯಕರ್ತರಿಗೆ ಒಬ್ಬರಿಗೆ 3 ಸಾವಿರ ರೂ.ಗಳಂತೆ 44.40 ಲಕ್ಷ ರೂ.ಗಳ ಚೆಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಇದ್ದರು.

  • ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ: ಶ್ರೀರಾಮುಲು

    ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ: ಶ್ರೀರಾಮುಲು

    ಮಂಗಳೂರು: ಜೀವ ಲೆಕ್ಕಿಸದೆ ರಭಸದಿಂದ ಹರಿಯುವ ನದಿ ದಾಟಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಯನ್ನ ಆರೋಗ್ಯ ಸಚಿವ ಶ್ರೀರಾಮುಲು ಗೌರವಿಸಿದ್ದಾರೆ.

    ಶ್ರೀರಾಮುಲು ಟ್ವೀಟ್ ಮಾಡುವ ಮೂಲಕ ನಕ್ಸಲ್ ಪೀಡಿತ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕೊರೊನದಂತಹ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಹೇಳಿದ್ದಾರೆ.

    ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಕೊರಗ ಕಾಲೋನಿಯಲ್ಲಿ ವಾಸಿಸುವ ಸುಮಾರು 40ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಕೆಲವರಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಆ ಭಾಗದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲುಸೇತುವೆಯ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ.

    ಅಲ್ಲದೆ ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಆಶಾ ಕಾರ್ಯಕರ್ತೆಯರ ಸೇವೆಗೆ ಸಚಿವ ಶ್ರೀರಾಮುಲು ಗೌರವ ಸಲ್ಲಿಸಿದ್ದಾರೆ.

  • ಜೀವ ಲೆಕ್ಕಿಸದೆ ರಭಸದಿಂದ ಹರಿಯುವ ನದಿ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಆಶಾ ಕಾರ್ಯಕರ್ತೆಯರು

    ಜೀವ ಲೆಕ್ಕಿಸದೆ ರಭಸದಿಂದ ಹರಿಯುವ ನದಿ ದಾಟಿ ಸೇವೆ ಸಲ್ಲಿಸ್ತಿದ್ದಾರೆ ಆಶಾ ಕಾರ್ಯಕರ್ತೆಯರು

    ಮಂಗಳೂರು: ಕೊರೊನಾ ಮಹಾಸಂಕಷ್ಟದ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಪ್ರತಿನಿತ್ಯ ನೂರಾರು ಅಡೆತಡೆಗಳನ್ನು ಎದುರಿಸಿ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಕುಗ್ರಾಮಗಳಿಗೆ ಭೇಟಿ ನೀಡಿ ಕೆಲಸ ಮಾಡುತ್ತಿದ್ದಾರೆ.

    ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಗ್ರಾಮ ಸುಲ್ಕೇರಿಯ ಕೊರಗ ಕಾಲೋನಿಗೆ ಆಶಾ ಕಾರ್ಯಕರ್ತೆಯರು ತೆರಳುವುದೇ ಮಹಾ ಸವಾಲು. ರಭಸದಿಂದ ಹರಿಯುವ ನದಿ ಒಂದೆಡೆಯಾದರೆ ಕೊರೊನಾ ಭೀತಿ ಇನ್ನೊಂದೆಡೆ. ಇಷ್ಟಾದರೂ ಜೀವ ಕೈಯಲ್ಲಿ ಹಿಡಿದು ಕಾಲು ಸೇತುವೆಯಲ್ಲಿ ನದಿ ದಾಟಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.

    ಕೊರಗ ಕಾಲೋನಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕೆಲ ಕುಟುಂಬಗಳಿಗೆ ಡೆಂಗ್ಯೂ ಸೇರಿದಂತೆ ಜ್ವರದ ಲಕ್ಷಣಗಳೂ ಕಾಣಿಸಿಕೊಂಡಿದೆ. ಮಳೆಯ ನಡುವೆ ರಭಸದಿಂದ ಹರಿಯುವ ನದಿಯನ್ನು ದಾಟಿ ಚಿಕಿತ್ಸೆಗೆ ಹೋಗೋದು ಅಸಾಧ್ಯವಾಗಿರುವುದರಿಂದ ಆಶಾ ಕಾರ್ಯಕರ್ತೆಯರು ಪ್ರತಿದಿನ ಆ ಭಾಗಗಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತಯರ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    – 69ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಇಂದು ಒಬ್ಬ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಆಂತಕ್ಕೀಡು ಮಾಡಿದೆ.

     

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರಿನಲ್ಲಿ ವೈದ್ಯ ಸೇರಿ ಐವರಿಗೆ ಸೋಂಕು ಧೃಡಪಟ್ಟಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರೋಗಿ ನಂ.9546 ಪ್ರಾಥಮಿಕ ಸಂಪರ್ಕದಿಂದ ಈ ಐವರಿಗೆ ಸೋಂಕು ತಗುಲಿದೆ.

    ಹಾನಗಲ್ ಪಟ್ಟಣದ ಮೂವರು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ತಗುಲಿದ್ದು, ಆಶಾ ಕಾರ್ಯಕರ್ತೆಯರಿಗೆ ನಿಗದಿತ ತಪಾಸಣೆ ನಡೆಸಿದ್ದರಿಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಸವಣೂರು ಪಟ್ಟಣದ ಕಂಟೈನ್ಮೆಂಟ್ ಝೋನ್‍ನ 23 ವರ್ಷದ ಗರ್ಭೀಣಿ ಮಹಿಳೆ ರೋಗಿ ನಂ.8699 ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ರಾಣೆಬೆನ್ನೂರು ನಗರದ ರೋಗಿ ನಂ.9411ರ ಪ್ರಾಥಮಿಕ ಸಂಪರ್ಕದಿಂದ ಐದು ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

    ಒಟ್ಟು 12 ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಇಂದು 12 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿದೆ.

  • ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    ಕೊರೊನಾ ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನ್ ಪ್ರಾಶ್ ವಿತರಣೆ

    – ಮೈಸೂರು, ಕೊಳ್ಳೆಗಾಲ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹ

    ಚಾಮರಾಜನಗರ: ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಬೆನ್ನಲ್ಲೆ ಆಯುಷ್ಯ ಇಲಾಖೆಯಿಂದ ಮತ್ತೊಂದು ಕೊಡುಗೆ ನೀಡಲಾಗುತ್ತಿದೆ. ಇತ್ತ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಚ್ಯವನ್ ಪ್ರಾಶ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಯ ಇಲಾಖೆಯಿಂದ ಚ್ಯವನ್ ಪ್ರಾಶ್ ಖರೀದಿಸಿ ಈಗಾಗಲೇ ಎಲ್ಲಾ ಜಿಲ್ಲೆಗಳಿಗು ಸರಬರಾಜು ಮಾಡಲಾಗಿದ್ದು, ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೆ ವಿತರಣೆ ಆಗಲಿದೆ. ಗಡಿ ಜಿಲ್ಲೆ ಚಾಮರಾಜನಗರಕ್ಕೂ ಚ್ಯವನ್ ಪ್ರಾಶ್ ಸರಬರಾಜು ಮಾಡಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ರಾಚಯ್ಯ ತಿಳಿಸಿದ್ದಾರೆ.

    ಇತ್ತ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಮೈಸೂರು ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಚಾಮರಾಜನಗರ ಕೂಡ ಗ್ರೀನ್ ಝೋನ್‍ನಲ್ಲಿದೆ, ಇದೀಗ ಮೈಸೂರು ಕೂಡ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಬಹುತೇಕ ವ್ಯವಹಾರ, ವ್ಯಾಪಾರ, ವಹಿವಾಟು ಮೈಸೂರನ್ನು ಅವಲಂಬಿಸಿದೆ. ಇದರಿಂದ ಮೈಸೂರು ಹಾಗೂ ಕೊಳ್ಳೆಗಾಲ ನಡುವಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

    ಸಂಚಾರದ ಕುರಿತು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜೊತೆ ಚರ್ಚೆ ನಡೆಸಿ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಮಾತನಾಡ್ತೀನಿ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಹಾಗೂ ಮೈಸೂರು ಸಂಚಾರ ಆರಂಭವಾಗಲೇ ಬೇಕು, ಯಾಕಂದ್ರೆ ಬಹುತೇಕ ಜನರು ಮೈಸೂರಿನಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿಕೊಂಡು ಕೊಳ್ಳೆಗಾಲಕ್ಕೆ ಬಂದು ಮಾರಾಟ ಮಾಡ್ತಾರೆ. ಇದರಿಂದ ಕೂಡಲೇ ಇತ್ತ ಸಚಿವರು ಗಮನಹರಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು ಆಗ್ರಹಿಸಿದ್ದಾರೆ.