Tag: ಆಲೂಗಡ್ಡೆ

  • ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ವಾರ ಕಿಚನ್ ಡಿಪಾರ್ಟ್ ನಲ್ಲಿರುವ ಶುಭಾ ಹಾಗೂ ನಿಧಿ ಸುಬ್ಬಯ್ಯ ಅಡುಗೆ ಮಾಡುವ ವೇಳೆ ಸಣ್ಣ ಮಕ್ಕಳಂತೆ ಕಿತ್ತಾಡಿದ್ದಾರೆ.

    ಬೆಳಗ್ಗೆ ಇಬ್ಬರು ಸ್ಟವ್ ಮುಂದೆ ನಿಂತು ಅಡುಗೆ ಮಾಡುವಾಗ ನಿಧಿ ಸುಬ್ಬಯ್ಯ ಶುಭಾ ನನಗೆ ಮಾತ್ರ ಯಾಕೆ ನಾಲ್ಕು ಪೀಸ್ ಆಲೂಗಡ್ಡೆ ಕೊಟ್ಟಿದ್ಯಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶುಭಾ ವಾಟ್ ನಾನ್ ಸೆನ್ಸ್ ಸಮವಾಗಿ ಕೊಟ್ಟಿದ್ದೇನೆ ಎಂದಿದ್ದಾರೆ. ಇದಕ್ಕೆ ನಿಧಿ ಇದು ಸರಿಯಾಗಿರುವುದಿಲ್ಲ. ಪಕ್ಕದ ಸ್ಟವ್‍ನಲ್ಲಿ ಬೇಯಿಸುತ್ತಿರುವ ಆಲೂಗಡ್ಡೆಯಲ್ಲಿ ಸ್ವಲ್ಪ ತೆಗೆದು ಕೊಡು ಎಂದು ಕೇಳುತ್ತಾರೆ.

    ಆಗ ಶುಭಾ, ಗೂಬೆ ತರ ಆಡಬೇಡ ನೋಡಲ್ಲಿ ಅಷ್ಟು ತರಕಾರಿ ನೀಡಿದ್ದೇನೆ ಎನ್ನುತ್ತಾ ನಿಧಿ ಕೈನಲ್ಲಿದ್ದ ಪ್ಲೇಟ್‍ನಿಂದ ತಮ್ಮ ಕುಕ್ಕರ್‍ಗೆ ತರಕಾರಿಯನ್ನು ಸುರಿದುಕೊಳ್ಳುತ್ತಾರೆ. ನಂತರ ಈ ಕುಕ್ಕರ್ ಪಲಾವ್ ಆ ಕುಕ್ಕರ್ ಪಲಾವ್ ಅಂತ ಸಪರೇಟ್ ಆಗಿ ನಾವೇನು ಮಾಡುತ್ತಿಲ್ಲ ಮಾಡುತ್ತಿರುವುದು ಒಂದೇ ಪಲಾವ್ ಸಮನಾಗಿರಬೇಕು ಎಂದು ಬುದ್ದಿ ಹೇಳಿ, ಗುದ್ದು ಬಿಡುತ್ತೇನೆ ನಿನಗೆ ಎಂದು ಶುಭಾ ನಿಧಿಗೆ ಬಯ್ಯುತ್ತಾರೆ. ಇದಕ್ಕೆ ನಿಧಿ ನಿನಗೆ ಗುದ್ದಿ ಬಿಡುತ್ತೇನೆ ಅಂದಾಗ ಶುಭಾ ಇರಿಟೆಶನ್ ಫೆಲೋ ಅಂದಾಗ ಅದಕ್ಕೆ ನಿಧಿ ಸ್ಟುಪಿಡ್ ಎನ್ನುತ್ತಾರೆ.

    ಬಳಿಕ ಶುಭಾ ನಿಧಿ ಬೇಯಿಸುತ್ತಿದ್ದ ಕುಕ್ಕರ್‍ನಲ್ಲಿ ಅಷ್ಟು ಕ್ಯಾರೆಟ್ ಇದೆ ಕೊಡು ಎಂದು ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ನಿಧಿ ಅಲ್ಲೆ ಇದ್ದ ಅರವಿಂದ್ ಬಳಿ ಅವಳು ಬೇಯಿಸುತ್ತಿರುವ ಕುಕ್ಕರ್‍ನಲ್ಲಿ ಜಾಸ್ತಿ ಆಲೂಗಡ್ಡೆ ಇಲ್ಲಾವಾ ನೋಡು ಎಂದು ವಾದ ಒಪ್ಪಿಸುತ್ತಾರೆ. ಇದಕ್ಕೆ ಶುಭಾ ನಿಧಿಗೆ ಇರಿಟೇಟಿಂಗ್ ಫೀಮೇಲ್ ಎಂದರೆ ನಿಧಿ ಇರಿಟೇಟಿಂಗ್ ಮೇಲ್ ಎನ್ನುತ್ತಾರೆ.

    ಆಗ ಅರವಿಂದ್ ಇಬ್ಬರು ಜುಟ್ಟು ಎಳೆದುಕೊಂಡು ಹೊಡೆದುಕೊಳ್ಳಿ ಎಂದು ಅಣುಕಿಸುತ್ತಾರೆ. ಹೀಗೆ ಇಬ್ಬರು ಜಗಳ ಮುಂದುವರೆಸಿ ನಂತರ ನಿಧಿ ಹಾಗೂ ಶುಬಾ ಪೂಂಜಾ ಕ್ಯಾರೆಟ್ ಹಾಗೂ ಆಲೂಗಡ್ಡೆಯನ್ನು ಹಂಚಿಕೊಳ್ಳುವುದರ ಮೂಲಕ ಕೊನೆಗೆ ರಾಜಿಯಾಗುತ್ತಾರೆ.

  • ಹೊಲದಲ್ಲಿ ಬೆಳೆದಿದ್ದ 60 ಮೂಟೆ ಆಲೂಗಡ್ಡೆ ಕಳ್ಳತನ!

    ಹೊಲದಲ್ಲಿ ಬೆಳೆದಿದ್ದ 60 ಮೂಟೆ ಆಲೂಗಡ್ಡೆ ಕಳ್ಳತನ!

    ಕೋಲಾರ: ರೈತ ಕಷ್ಟಪಟ್ಟು ಹೊಲದಲ್ಲಿ ಬೆಳೆದಿದ್ದ ಆಲೂಗಡ್ಡೆಯನ್ನೇ ಕಳ್ಳತನ ಮಾಡಿರುವ ಅಚ್ಚರಿಯ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಉಕ್ಕುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೃಷ್ಣಪ್ಪ ಹಾಗೂ ವೆಂಕಟೇಶಪ್ಪ ಎಂಬವರ ಹೊಲದಲ್ಲಿ ಖದೀಮರು ಆಲೂಗಡ್ಡೆಯನ್ನೂ ಬಿಡದೆ ಕಳವು ಮಾಡಿದ್ದಾರೆ.

    ಸುಮಾರು 60 ಮೂಟೆಯಷ್ಟು ಆಲೂಗಡ್ಡೆ ಕಳ್ಳತನ ಮಾಡಲಾಗಿದೆ. ಆಲೂಗಡ್ಡೆಗೆ ಉತ್ತಮ ಬೆಲೆ ಇರುವ ಹಿನ್ನೆಲೆ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಇದು ಎರಡನೇ ಪ್ರಕರಣವಾಗಿದೆ.

    ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    – ಬಿತ್ತನೆ ಬೀಜಕ್ಕೂ ಭಾರೀ ಬೇಡಿಕೆ
    – 15 ವರ್ಷಗಳಲ್ಲಿ ಬೆಲೆ ದುಬಾರಿ

    ಕೋಲಾರ : ಜಿಲ್ಲೆಯ ಪಾಲಿಗೆ ಆಲೂಗೆಡ್ಡೆ ವಿಶಿಷ್ಟ ಬೆಳೆಯಾಗಿದೆ. ಈ ಅಪರೂಪದ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಬೆಲೆ ಗಗನಕ್ಕೇರಿದ್ದು ಪೊಟಾಟೋ ಬೆಳೆ ಬೆಳೆದ ರೈತರು ಪುಲ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ಬಿತ್ತನೆ ಬೀಜಕ್ಕೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈಗ ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರಿಗೆ ಬಿಸಿ ತುಪ್ಪ ಬಾಯಿಗೆ ಬಿದ್ದಂತಾಗಿದೆ.

    ಕೋಲಾರ ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಅಪರೂಪ ಎನ್ನುವಂತೆ ಅಲೂಗಡ್ಡೆ ಬೆಲೆ ಗಗನಕ್ಕೇರಿದೆ. ಐವತ್ತು ಕೆಜಿ ಬಿತ್ತನೆ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 5000 ದಿಂದ 6000 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಹದಿನೈದು ವರ್ಷಗಳಲ್ಲೇ ಅತಿ ಹೆಚ್ಚಿನ ಐತಿಹಾಸಿಕ ಬೆಲೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಲೂಗಡ್ಡೆಗೆ ಇಂಥಾದೊಂದು ಬೇಡಿಕೆ ಸೃಷ್ಟಿಯಾಗೋದಕ್ಕೆ ಕಾರಣ ಕೊರೊನಾ.

    ರೈತರು ಕೊರೊನಾ ಕಾಲದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆದಿಲ್ಲ, ಕಾರಣ ಪಂಜಾಬ್‍ನ ಜಲಂಧರ್‍ನಿಂದ ಬಿತ್ತನೆ ಆಲೂಗಡ್ಡೆ ತರಿಸೋದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲದೆ ವ್ಯಾಪಾರಸ್ಥರು ಕೂಡಾ ಸುಮ್ಮನಾಗಿದ್ದರು. ಐದಾರು ತಿಂಗಳ ಕಾಲ ಎಲ್ಲೂ ಕೂಡಾ ಆಲೂಗಡ್ಡೆ ಬಿತ್ತನೆಯಾಗಿಲ್ಲ. ಆದ್ದರಿಂದ ಈಗ ದೇಶದ ವಿವಿಧೆಡೆ ಆಲೂಗಡ್ಡೆ ಬಿತ್ತನೆ ಮಾಡಲು ಶುರುಮಾಡಿದ್ದರಿಂದ ಬಿತ್ತನೆ ಆಲೂಗಡ್ಡೆಗೆ ಸಹಜವಾಗಿಯೇ ಬೇಡಿಕೆ ಶುರುವಾಗಿದೆ. ಅದರ ಜೊತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು 50 ಕೆಜಿ ಮೂಟೆ ಆಲೂಗಡ್ಡೆ 3000 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇದೆ ಮೊದಲು ಆಲೂಗಡ್ಡೆಗೆ ದಾಖಲೆ ಬೆಲೆ ಬಂದಿರುವುದು ಎನ್ನುತ್ತಾರೆ ರೈತ ಮುಖಂಡರು.

    ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಯಾರೊಬ್ಬರೂ ಅನುಮತಿ ಪಡೆದಿಲ್ಲ, ಎಲ್ಲರೂ ಜಲಂಧರ್ ಆಲೂಗಡ್ಡೆ ಎಂಬ ಹೆಸರಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಾರೆ. ಮೊದಲು ಎರಡೂವರೆ ಸಾವಿರದಿಂದ ಮೂರು ಸಾವಿರಕ್ಕೆ ಒಂದು ಮೂಟೆ ಬಿತ್ತನೆ ಆಲೂಗಡ್ಡೆ ಸಿಗುತ್ತಿತ್ತು, ಆದರೆ ಕೊರೊನಾ ಎಫೆಕ್ಟ್‍ನಿಂದ ಈಗ ಏಕಾಏಕಿ ಜಲಂಧರ್ ಆಲೂಗಡ್ಡೆಗೆ ಐದಾರು ಸಾವಿರ ರೂಪಾಯಿ ಬೆಲೆ ಏರಿಕೆಯಾಗಿ, ಕೆಲವು ರೈತರು ಹಾಗೂ ಕೆಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ವ್ಯಾಪಾರಸ್ಥರೇ ಉದ್ದೇಶಪೂರ್ವಕವಾಗಿ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    1 ಮೂಟೆ ಬಿತ್ತನೆ ಆಲೂಗಡ್ಡೆಗೆ 3925 ರೂ ಬೆಲೆ ನಿಗದಿ ಮಾಡಿ, ಯಾರೂ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೆ ಆದಲ್ಲಿ ರಶೀದಿ ಸಮೇತ ದೂರು ನೀಡುವಂತೆ ಮಾರುಕಟ್ಟೆಯಲ್ಲಿ ಬ್ಯಾನರ್ ಹಾಕಿದ್ದಾರೆ. ಆದರೆ ಈವರೆಗೂ ಯಾರೂ ದೂರು ನೀಡಲು ಮುಂದೆ ಬಂದಿಲ್ಲ. ಕಾರಣ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆಗೆ ಇರುವ ಡಿಮ್ಯಾಂಡ್ ರೀತಿಯಲ್ಲೇ ರೈತರು ಬೆಳೆದ ಆಲೂಗಡ್ಡೆ ಬೆಲೆ ಕೂಡಾ ಸರ್ವಕಾಲಿಕ ಏರಿಕೆ ಕಂಡಿದೆ. ಹಾಗಾಗಿ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಲೂಗಡ್ಡೆ ಹಾಗೂ ಬಿತ್ತನೆ ಆಲೂಗಡ್ಡೆ ಎರಡಕ್ಕೂ ಮಾರುಟಕ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸದ್ಯ ಬಿತ್ತನೆ ಆಲೂಗಡ್ಡೆ ಮಾರುವ ವ್ಯಾಪಾರಸ್ಥರು, ಬೆಳೆದ ರೈತರಿಗೂ ಬಂಪರ್ ಆಗಿದ್ದು ಇದು ಹೀಗೆ ಮುಂದುವರೆದರೆ ಜಿಲ್ಲೆಯ ರೈತರಷ್ಟೆ ಅಲ್ಲ ವ್ಯಾಪಾರಸ್ಥರಿಗೂ ಲಾಟರಿ ಹೊಡೆದಂತಾಗಿದೆ.

  • ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

    ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

    – ಬಲ ಭುಜಕ್ಕೆ ಗಂಭೀರ ಗಾಯ

    ಅಹಮದಾಬಾದ್: ರಾತ್ರಿ ಊಟಕ್ಕೆ ಮಾಡಿದ್ದ ಆಲೂಗಡ್ಡೆ ಕರಿ ತಿನ್ನಲ್ಲ ಎಂದ ಪತಿಗೆ ಪತ್ನಿ ಹಿಗ್ಗಾಮುಗ್ಗ ಥಳಿಸಿದ ಪ್ರಸಂಗವೊಂದು ಅಹಮದಾಬಾದಿನ ವಸ್ನಾ ಪ್ರದೇಶದಲ್ಲಿ ನಡೆದಿದೆ.

    40 ವರ್ಷದ ಹರ್ಷದ್ ಗೊಹೆಲ್ ತನ್ನ ಪತ್ನಿ ತಾರಾ ಗೊಹೆಲ್ ನಿಂದ ಹಲ್ಲೆಗೊಳಗಾಗಿದ್ದಾನೆ. ಹರ್ಷದ್ ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾನೆ. ಇದೀಗ ಪತ್ನಿಯ ರೌದ್ರವತಾರಕ್ಕೆ ಗಾಯಗೊಂಡಿರುವ ಪತಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ನಡೆದಿದ್ದೇನು?:
    ಶುಕ್ರವಾರ ರಾತ್ರಿ ಹರ್ಷದ್ ತನ್ನ ಪತ್ನಿಯ ಬಳಿ ಊಟಕ್ಕೆ ಏನು ಮಾಡಿದ್ದಿ ಎಂದು ಕೇಳಿದ್ದಾನೆ. ಈ ವೇಳೆ ಪತ್ನಿ ಆಲೂಗಡ್ಡೆ ಕರಿ ಹಾಗೂ ಚಪಾತಿ ಮಾಡಿರುವುದಾಗಿ ತಿಳಿಸಿದ್ದಾಳೆ.

    ಹರ್ಷದ್ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ಸೇವಿಸಬೇಡಿ ಎಂದು ವೈದ್ಯರು ಸಲಹೆ ನೀಡಿದ್ದರು. ಇತ್ತ ಪತ್ನಿ ಆಲೂಗಡ್ಡೆ ಪಲ್ಯ ಅಂದಾಗ ಹರ್ಷದ್ ವೈದ್ಯರ ಮಾತನ್ನು ಹೇಳುತ್ತಾ ನನಗೆ ಬೇಡ ಎಂದಿದ್ದಾನೆ. ಅಲ್ಲದೆ ಆರೋಗ್ಯಕ್ಕೆ ಒಳ್ಳೆಯದಲ್ಲ, ನಾನು ತಿನ್ನಲ್ಲ ಎಂದು ಗೊತ್ತಿದ್ದರೂ ಯಾಕೆ ಆಲೂಗಡ್ಡೆ ಪಲ್ಯ ಮಾಡಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಇಷ್ಟಕ್ಕೆ ಸಿಟ್ಟಿಗೆದ್ದ ಪತ್ನಿ ತಾರಾ, ಪತಿಯನ್ನು ನಿಂದಿಸಲು ಆರಂಭಿಸಿದ್ದಾಳೆ ಎಂದು ಹರ್ಷದ್ ಎಫ್‍ಐಆರ್ ನಲ್ಲಿ ದಾಖಲಿಸಿದ್ದಾನೆ.

    ತನ್ನನ್ನು ನಿಂದಿಸುತ್ತಿದ್ದ ಪತ್ನಿಯನ್ನು ಹರ್ಷದ್ ತಡೆದಿದ್ದಾನೆ. ಇದರಿಂದ ಮತ್ತೆ ರೊಚ್ಚಿಗೆದ್ದ ತಾರಾ, ನೇರವಾಗಿ ಬಾತ್‍ರೂಮಿಗೆ ತೆರಳಿ ವಾಷಿಂಗ್ ಬ್ಯಾಟ್ ಹಿಡಿದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾಳೆ. ಪತ್ನಿ ಥಳಿಸುತಿದ್ದಂತೆಯೇ ಹರ್ಷದ್ ಚೀರಾಡುತ್ತಾ ಸಹಾಯಕ್ಕಾಗಿ ಕುಟುಂಬಸ್ಥರನ್ನು ಕರೆದಿದ್ದಾನೆ. ಕೂಡಲೇ ಎಲ್ಲರೂ ಸ್ಥಳಕ್ಕೆ ದೌಡಾಯಿಸಿ ತಾರಾಳನ್ನು ತಡೆದಿದ್ದಾರೆ.

    ಘಟನೆಯಿಂದ ಹರ್ಷದ್ ಬಲ ಭುಜಕ್ಕೆ ಎಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನೆ ಸಂಬಂಧ ತಾರಾ ವಿರುದ್ಧ ಪತಿ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ನಿಗದಿತಕ್ಕಿಂತ ಹೆಚ್ಚಿನ ದರಕ್ಕೆ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಮಾಡ್ಬೇಡಿ: ಪ್ರೀತಂಗೌಡ

    ನಿಗದಿತಕ್ಕಿಂತ ಹೆಚ್ಚಿನ ದರಕ್ಕೆ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಮಾಡ್ಬೇಡಿ: ಪ್ರೀತಂಗೌಡ

    ಹಾಸನ: ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಮಾಡದಂತೆ ಶಾಸಕ ಪ್ರೀತಂಗೌಡ ಸೂಚನೆ ನೀಡಿದ್ದಾರೆ.

    ಸರ್ಕಾರಿ ಕಚೇರಿ, ಬ್ಯಾಂಕ್ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸ್ಯಾನಿಟೈಸರ್ ಬಳಸುವಾಗ ನೇರವಾಗಿ ಸ್ಯಾನಿಟೈಸರ್ ಬಾಟಲ್ ಮುಟ್ಟದಂತೆ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಸ್ಟ್ಯಾಂಡ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗೆಡ್ಡೆ ಬಿತ್ತನೆ ಬೀಜದ ವ್ಯಾಪಾರ ಇಂದಿನಿಂದ ಆರಂಭವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಹಾಸನ ಎಪಿಎಂಸಿ ಮಾರುಕಟ್ಟೆಯೊಳಗೆ ಪ್ರವೇಶ ಮಾಡುವ ವಾಹನಗಳಿಗರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದ್ದು ಎಲ್ಲರೂ ಅದನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆಯೊಳಗೆ ಜನಜಂಗುಳಿ ನಿಯಂತ್ರಿಸಲು ಆಲೂಗೆಡ್ಡೆ ಬಿತ್ತನೆ ಬೀಜ ತುಂಬಿಕೊಂಡು ಬರುವ ಲಾರಿಗಳಿಗೆ ಸಂಜೆ 7ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಾತ್ರ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ನಂತರ ಬೆಳಗ್ಗೆ ರೈತರು ಮಾರುಕಟ್ಟೆಗೆ ಬಂದು ಬಿತ್ತನೆ ಬೀಜ ಖರೀದಿಸಬಹುದು ಎಂದರು.

    ರೈತರು ಬಿತ್ತನೆ ಬೀಜ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಮತ್ತು ಆಟೋ ಬಳಸಬಹದು. ಪ್ರತಿ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ 2150 ರಿಂದ 2250 ರೂಪಾಯಿ ದರ ನಿಗದಿ ಮಾಡಲಾಗಿದ್ದು ಇದಕ್ಕಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರುವಂತಿಲ್ಲ ಎಂದು ಶಾಸಕ ಪ್ರೀತಂಗೌಡ ಖಡಕ್ಕಾಗಿ ನುಡಿದಿದ್ದಾರೆ.

  • ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಲೂಗಡ್ಡೆ ಅಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸುವ ಚಿಪ್ಸ್, ರುಚಿಕರ ತಿಂಡಿ. ಒಂದೆಡೆ ಆಲೂಗಡ್ಡೆಯಿಂದ ತಯಾರಾದ ರುಚಿಕರ ತಿಂಡಿಗೆ ಮನಸೋಲುವವರು ಇದ್ದರೆ, ಇನ್ನೊಂದೆಡೆ ಹೆಚ್ಚು ಆಲೂಗಡ್ಡೆ ತಿಂದರೆ ಕೈ ಕಾಲುಗಳು ಹಿಡಿದುಕೊಳ್ಳುತ್ತೆ, ಗ್ಯಾಸ್ಟಿಕ್ ಸಮಸ್ಯೆ ಆಗುತ್ತೆ, ಇದರ ಸಹವಾಸವೇ ಬೇಡಪ್ಪಾ ಎಂದು ಮೂಗು ಮುರಿಯುವವರೂ ಇರುತ್ತಾರೆ. ಆದರೆ ಆಲೂಗಡ್ಡೆಯನ್ನು ನಿತ್ಯವು ನಿಯಮಿತ ಸೇವಿಸಿದರೆ ಸಿಗುವ ಆರೋಗ್ಯಕರ ಲಾಭದ ಬಗ್ಗೆ ಬಹುತೇಕ ಮಂದಿಗೆ ಅರಿವಿರಲ್ಲ.

    ಆಲೂಗಡ್ಡೆಯಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಒಳ್ಳೆದು. ಆಲೂಗಡ್ಡೆ ಸೇವನೆಯಿಂದ, ಅದರ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭವೇನು? ಯಾವ ಸಮಸ್ಯೆಗೆ ಇದು ಮದ್ದು? ಎನ್ನುವುದರ ಮಾಹಿತಿ ಇಲ್ಲಿದೆ.

    ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ?
    ಅಧ್ಯಯನ ಹಾಗೂ ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆದು. ಇದನ್ನು ನಿತ್ಯವು ಮಿತವಾಗಿ ಸೇವಿಸಿದರೆ ಆರೋಗ್ಯದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಹೀಗೆ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

    ಅಲ್ಲದೆ ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಬೇಕು, ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಆಲೂಗಡ್ಡೆಯ ಆರೋಗ್ಯಕರ ಲಾಭವೇನು?

    1. ಹೃದಯದ ಆರೋಗ್ಯಕ್ಕೆ ಒಳ್ಳೆದು
    ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಇದು ಕಟ್ಟಿಕೊಂಡಿರುವ ಹೃದಯ ರಕ್ತ ನಾಳಗಳನ್ನು ತೆರವುಗೊಳಿಸಿ ಹೃದಯಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರಾಗಿ ಆರೋಗ್ಯ ವೃದ್ಧಿಯಾಗುತ್ತದೆ.

    2. ಎದೆಯುರಿ ನಿವಾರಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಡೆದು, ಜಠರದಲ್ಲಿ ಕಾಣಿಸುವ ಉರಿಯೂತವನ್ನು ಗುಣ ಪಡಿಸುತ್ತದೆ. ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಒಳ್ಳೆದು. ಇದರಿಂದ ಎದೆಯುರಿ ಸಮಸ್ಯೆ ನಿವಾರಣೆಯಾಗುತ್ತೆ.

    3. ತೂಕ ಇಳಿಸಲು ಸಹಕಾರಿ
    ಹಸಿ ಆಲೂಗಡ್ಡೆ ಜ್ಯೂಸ್‍ನಲ್ಲಿ ವಿಟಮಿನ್ ‘ಸಿ’ ಅಂಶ ಇರುತ್ತದೆ, ಇದು ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಇದರಿಂದ ತೂಕ ಕಡಿಮೆ ಆಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಊಟದ ನಂತರ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಆಲೂಗಡ್ಡೆ ಜ್ಯೂಸ್ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುವುದರಿಂದ ದೇಹದ ತೂಕ ಇಳಿಯುತ್ತದೆ.

    4. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತೆ
    ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಅಂಶ ಬಹಳಷ್ಟಿದೆ. ಇದು ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

    5. ಗಾಯಗಳು ಬೇಗ ಮಾಗುತ್ತವೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಜಿಂಕ್ ಮತ್ತು ವಿಟಮಿನ್ ‘ಸಿ’ ಅಂಶವಿದ್ದು, ಇದು ಗಾಯ ವಾಸಿಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಅಲ್ಲದೇ ಗಾಯವಾದ ಭಾಗದಲ್ಲಿ ಊದಿಕೊಂಡ ಮಾಂಸ ಖಂಡಗಳನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ. ಇದರಿಂದ ಗಾಯಗಳು ಬೇಗನೇ ಮಾಗುತ್ತದೆ.

    6. ಮೂತ್ರ ಪಿಂಡಗಳ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಪೊಟ್ಯಾಷಿಯಂ ಅಂಶವನ್ನು ಅಡಗಿದ್ದು, ಇದು ಕಿಡ್ನಿಗಳ ಕಾರ್ಯ ಚಟುವಟಿಕೆಯನ್ನು ಬಲಪಡಿಸುತ್ತದೆ. ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ಆಗಿದ್ದು, ಇದು ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸುತ್ತದೆ.

    7. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಆಂಟಿ – ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ‘ ಸಿ ‘ ಅಂಶವಿದೆ. ಇದು ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗೆ ಸಹಾಯಕವಾಗಿದೆ. ಈ ಅಂಶ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತದೆ. ಅಲ್ಲದೇ ದೀರ್ಘ ಕಾಲದ ಕಾಯಿಲೆಗಳನ್ನು ನಿಧಾನವಾಗಿ ಗುಣ ಪಡಿಸುತ್ತದೆ.

    8. ಲಿವರ್ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್ ಪಿತ್ತಕೋಶದ ಸೋಂಕುಗಳನ್ನು ಗುಣಪಡಿಸಿ ಲಿವರ್‍ನ ಶುದ್ಧೀಕರಿಸುತ್ತೆ. ಆಲೂಗಡ್ಡೆ ಜ್ಯೂಸ್ ದೇಹದ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್‍ನ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಆದ್ದರಿಂದ ಇದು ನಿರ್ವಿಷಕಾರಿ ಏಜೆಂಟ್ ಎನ್ನಿಸಿಕೊಂಡಿದೆ.

  • ಅನಾಥವಾಯ್ತು ರಾಜ್ಯದ ಏಕೈಕ ಏರೋಪೋನಿಕ್ಸ್ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರ

    ಅನಾಥವಾಯ್ತು ರಾಜ್ಯದ ಏಕೈಕ ಏರೋಪೋನಿಕ್ಸ್ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರ

    – 5.5 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿದ್ದ ಕೇಂದ್ರ

    ಚಿಕ್ಕಬಳ್ಳಾಪುರ: ಭಾರತ ಕೃಷಿ ಪ್ರಧಾನ ರಾಷ್ಟ್ರ. ಜನರ ಬಹುಮುಖ್ಯ ಕಸುಬು ವ್ಯವಸಾಯ ಆಗಿರುವುದರಿಂದ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳನ್ನ ರೂಪಿಸುತ್ತಿರುತ್ತವೆ. ಅದರಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ರೈತರ ಅನುಕೂಲಕ್ಕಾಗಿ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ 3.5 ಕೋಟಿ ವೆಚ್ಚದಲ್ಲಿ 2015 ಜನವರಿ 9 ರಂದು ಅತ್ಯಾಧುನಿಕ ಮಾದರಿಯ ರಾಜ್ಯದ ಮೊಟ್ಟಮೊದಲ ಏರೋಪೋನಿಕ್ಸ್ ತಂತ್ರಜ್ಞಾನದ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರವನ್ನ ಆರಂಭ ಮಾಡಿತ್ತು.

    2 ವರ್ಷ ನಿಗದಿತ ಅವಧಿಕೊಟ್ಟು ಆರಂಭ ಮಾಡಿತ್ತಾದರೂ, ಅವಧಿ ಮೀರಿ 3 ವರ್ಷವಾದರೂ ಇದುವರೆಗೂ ಗುರಿ ಸಾಧಿಸಲೇ ಇಲ್ಲ. ರಾಜ್ಯದಲ್ಲಿ ಹಾಸನ ಬಿಟ್ಟರೆ, ಅತಿ ಹೆಚ್ಚು ಆಲೂಗಡ್ಡೆ ಉತ್ಪಾದನೆ ಮಾಡೋದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಉತ್ತಮ ಗುಣಮಟ್ಟದ ಆಲೂಗಡ್ಡೆ ಬಿತ್ತನೆ ಬೀಜಗಳನ್ನ ದೂರದ ಪಂಜಾಬ್ ನಿಂದ ತರಿಸಿಕೊಳ್ಳಬೇಕಾಗಿದ್ದರಿಂದ ಆರ್ಥಿಕವಾಗಿ ಸರ್ಕಾರ ಹಾಗೂ ರೈತರಿಗೆ ಹೊರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ, 2015ರಲ್ಲಿ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಹೊರವಲಯದ ನಂದಿ ಕ್ರಾಸ್ ನ ಪಿಆರ್ ಎಸ್ ತೋಟಗಾರಿಕಾ ಕೇಂದ್ರದಲ್ಲಿ ಏರೋಪೋನಿಕ್ಸ್ ತಂತ್ರಜ್ಞಾನದ ಈ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರವನ್ನ ಉದ್ಘಾಟಿಸಿತು.

    ಏರೋಪೋನಿಕ್ಸ್ ಕೇಂದ್ರಕ್ಕೆ 3.5 ಕೋಟಿ ಸೇರಿದಂತೆ ಸಂಸ್ಕರಣಾ ಕಟ್ಟಡಕ್ಕೆ 2 ಕೋಟಿ ಖರ್ಚು ಮಾಡಿ ಬರೋಬ್ಬರಿ 5.5 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಕೇಂದ್ರ ಇದುವರೆಗೂ ಸಮಪರ್ಕವಾಗಿ ಕಾರ್ಯ ನಿರ್ವಹಣೆ ಮಾಡದ ಹಿನ್ನೆಲೆ ಹಾಗೂ ಸೂಕ್ತ ನಿರ್ವಹಣೆ ಕೊರತೆಯ ಕಾರಣ ಇಂದು ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ದೂರದ ಜಲಂಧರ್ ನಿಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನ ಖರೀದಿ ಮಾಡುಕೊಳ್ಳುತ್ತಿದ್ದ ರೈತರು ಇನ್ನೇನು ನಮ್ಮಲ್ಲೇ ಬಿತ್ತನೆ ಬೀಜ ಸಿಗುತ್ತೆ ಅಂತ ಆಸೆಗಣ್ಣಿನಿಂದ ಕಾದ ರೈತರ ಆಸೆಗಳಿಗೆ ತಣ್ಣೀರೆರಚಿದಂತಾಗಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಅಂತ ರೈತರು ಅಸಮಾಧಾನ ಹೊರಹಾಕ್ತಿದ್ದಾರೆ.

    ಏನಿದು ಏರೋಪೋನಿಕ್ಸ್ ತಂತ್ರಜ್ಞಾನ?
    ಏರೋಪೋನಿಕ್ಸ್ ತಂತ್ರಜ್ಞಾನದ ಮೂಲಕ ಬೇರುಗಳಿಗೆ ಮಣ್ಣು ತಾಗಿಸದೇ ಗಾಳಿ ಮತ್ತು ಮಂಜಿನ ವಾತಾವರಣದಲ್ಲಿ 19 ಅಂಶಗಳುಳ್ಳ ಆಹಾರ ಪದಾರ್ಥವನ್ನ ದ್ರವ್ಯ ರೂಪದಲ್ಲಿ ನೀಡಿ ಬಿತ್ತನೆ ಆಲೂಗಡ್ಡೆಯನ್ನ ಬೆಳೆಸುವುದು ಈ ಕೇಂದ್ರದ ಉದ್ದೇಶವಾಗಿತ್ತು. ಆದರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರಿಗೆ ಉತ್ತಮ ಬಿತ್ತನೆ ಬೀಜ ನೀಡಲು ಸಾಧ್ಯವಾಗದೇ, ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ವಿಚಾರವಾಗಿ ಖಾಸಗಿಯವರಿಗೆ ಟೆಂಡರ್ ನೀಡಿದ್ದು, ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಿ ರೈತರಿಗೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ನೀಡಲಿದ್ದೇವೆ ಅಂತ ತೋಟಗಾರಿಕಾ ಇಲಖಾ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದ್ದಾರೆ.

  • ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಲಕ್ನೋ: ಉತ್ತರ ಪ್ರದೇಶದ ಬುಲಂದರ್‌ಶಹರ್‌ನ ರೈತರು ಆಲೂಗೆಡ್ಡೆ ಕೃಷಿಯಲ್ಲಿ ಮದ್ಯವನ್ನು ಬಳಸಿ ಸುದ್ದಿಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯಲು ನೀರು, ಗೊಬ್ಬರ ಬಳಸುತ್ತಾರೆ. ಆದರೆ ಬುಲಂದರ್‌ಶಹರ್‌ನ ರೈತರು ಮಾತ್ರ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರೈತರು ತಮ್ಮ ಬೆಳೆಗಳು ಹಾನಿಯಾಗಬಾರದೆಂದು ಮದ್ಯವನ್ನು ಔಷಧಿ ರೀತಿ ಬಳಸುತ್ತಿದ್ದಾರೆ.

    ಇದನ್ನು ನೋಡಿದ ಕೃಷಿ ತಜ್ಞರು, ಮದ್ಯವನ್ನು ಬೆಳೆಗಳಿಗೆ ಹಾಕುವ ಬದಲು ಸರಿಯಾದ ಔಷಧಿಗಳನ್ನು ಬಳಸಬೇಕು. ಇದರಿಂದ ಬೆಳೆಗೂ ಒಳ್ಳೆಯದು ಮತ್ತು ಅದನ್ನು ಸೇವಿಸುವವರಿಗೂ ಒಳ್ಳೆಯದು ಎಂದು ಹೇಳಿ ಈ ಹೊಸ ವಿಧಾನವನ್ನು ತಿರಸ್ಕರಿಸಿದ್ದಾರೆ. ಹೀಗೆ ಮದ್ಯವನ್ನು ಬಳಸುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಣವನ್ನು ಹಾಳುಮಾಡುವ ವಿಧಾನ. ಇದರಿಂದ ಏನೂ ಉಪಯೋಗವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಕೃಷಿ ತಜ್ಞರು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರೂ, ನಾವು ಮಾತ್ರ ಮದ್ಯವನ್ನೇ ಬಳಸಿ ಆಲೂಗಡ್ಡೆ ಬೆಳೆಸುತ್ತೇವೆ ಅದರಿಂದ ನಮಗೆ ಹೆಚ್ಚು ಇಳುವರಿ ಸಿಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ.

    ಅದರಲ್ಲೂ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆಗೆ ಮದ್ಯವನ್ನು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾವು ಒಮ್ಮೆ ಈ ವಿಧಾನ ಅನುಸರಿಸೋಣ ಎಂದು ಜನರು ಚರ್ಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಲೂಗಡ್ಡೆ ಉಪಯೋಗಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

    ಆಲೂಗಡ್ಡೆ ಉಪಯೋಗಿಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ

    ಸೌಂದರ್ಯದ ಹೊಳಪನ್ನು ಹೆಚ್ಚಿಸಲು ಆಲೂಗಡ್ಡೆ ರಾಮಭಾಣ ಎಂದು ಹೇಳುತ್ತಾರೆ. ಸ್ಕಿನ್ ಮೇಲಿರುವ ಕಲೆ ಹಾಗೂ ಡಾರ್ಕ್ ಸರ್ಕಲ್ ತೆಗೆಯಲು ಮಾತ್ರ ಆಲೂಗಡ್ಡೆ ಉಪಯೋಗಿಸಬಹುದು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಸ್ಕಿನ್ ಹೊಳಪನ್ನು ಹೆಚ್ಚಿಸಲು ಆಲೂ ವಿವಿಧ ರೀತಿಯಲ್ಲಿ ಉಪಯೋಗಿಸಬಹುದು.

    1. ಆಲೂ ಹಾಗೂ ಮೊಸರಿನ ಫೇಸ್‍ಪ್ಯಾಕ್: ಒಂದು ದೊಡ್ಡ ಚಮಚದಲ್ಲಿ ಅಲೂಗಡ್ಡೆಯ ಪೇಸ್ಟ್ ತೆಗೆದುಕೊಳ್ಳಬೇಕು. ನಂತರ ಅದರಲ್ಲಿ ಒಂದು ದೊಡ್ಡ ಚಮಚದಲ್ಲಿ ಮೊಸರು ತೆಗೆದುಕೊಂಡು ಅದನ್ನು ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ಇದನ್ನು ಪೇಸ್ಟ್ ಮಾಡಿ ಅರ್ಧ ಗಂಟೆ ಇಡಬೇಕು. ಬಳಿಕ ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಈ ಪೇಸ್ಟ್ ಹಚ್ಚಿಕೊಳ್ಳುವುದರಿಂದ ನಿಮ್ಮ ಸ್ಕಿನ್ ರಿಫ್ರೇಶ್ ಮಾಡಿ, ಸ್ಕಿನ್ ಟೈಟ್ ಆಗಿ ಇರಿಸಲು ಸಹಾಯ ಮಾಡುತ್ತದೆ.

    2. ಆಲೂ ಹಾಗೂ ಅರಿಶಿಣ ಫೇಸ್‍ಪ್ಯಾಕ್: ಆಲೂ ಹಾಗೂ ಹಳದಿಯ ಫೇಸ್‍ಪ್ಯಾಕ್ ನಿಮ್ಮ ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆಲೂವನ್ನು ಚಿಕ್ಕದಾಗಿ ಕಟ್ ಮಾಡಿ ಅದಕ್ಕೆ ಒಂದು ಚಿಟಿಕೆ ಹಳದಿ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಡಬೇಕು. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಒಂದು ಬಾರಿ ಈ ರೀತಿಯ ಫೇಸ್‍ಪ್ಯಾಕ್ ಹಾಕಬಹುದು.

    3. ಆಲೂ ಹಾಗೂ ಮೊಟ್ಟೆಯ ಫೇಸ್‍ಪ್ಯಾಕ್: ಆಲೂ ಹಾಗೂ ಮೊಟ್ಟೆಯ ಫೇಸ್‍ಪ್ಯಾಕ್ ತಯಾರಿಸಲು ಅರ್ಧ ಆಲೂವನ್ನು ಚಿಕ್ಕದಾಗಿ ಕಟ್ ಮಾಡಿ ಅದರ ರಸವನ್ನು ತೆಗೆಯಬೇಕು. ನಂತರ ಮೊಟ್ಟೆಯ ಬಿಳಿ ಭಾಗವನ್ನು ಅದರಲ್ಲಿ ಮಿಕ್ಸ್ ಮಾಡಿ. ತಯಾರಾದ ಮಿಶ್ರಣವನ್ನು ನಿಮ್ಮ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮಗೆ ಬೇಗ ವ್ಯತ್ಯಾಸ ತಿಳಿಯುತ್ತದೆ. ಆಲೂ ಹಾಗೂ ಮೊಟ್ಟೆಯ ಫೇಸ್‍ಪ್ಯಾಕ್ ಹಾಕಿಕೊಳ್ಳುವುದರಿಂದ ನಿಮ್ಮ ತ್ವಚೆ ಹೊಳೆಯುತ್ತದೆ. ಅಲ್ಲದೇ ನಿಮ್ಮ ಮುಖದ ಪೋರ್ಸ್ ಅನ್ನು ಟೈಟ್ ಮಾಡಲು ಸಹಾಯ ಮಾಡುತ್ತದೆ.

    4. ಆಲೂ ಹಾಗೂ ನಿಂಬೆಯ ಫೇಸ್‍ಪ್ಯಾಕ್: ಆಲೂಗಡ್ಡೆಯ ಪೇಸ್ಟ್ ಮಾಡಿಕೊಳ್ಳಿ. ನಂತರ ಅದರಲ್ಲಿ ಒಂದು ಚಮಚ ನಿಂಬೆಯ ರಸವನ್ನು ಸೇರಿಸಿ ಮಿಕ್ಸ್ ಮಾಡಿದ ನಂತರ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದು ನ್ಯಾಚೂರಲ್ ಫೇಶಿಯಲ್ ಬ್ಲೀಚ್‍ನ ಕೆಲಸ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಡಾರ್ಕ್ ಸ್ಕೀನ್ ಕಾಂಪ್ಲೇಶನ್‍ನನ್ನು ದೂರ ಮಾಡಲು ಸಹಾಯ ಮಾಡುತ್ತದೆ.

    5. ಆಲೂ, ನಿಂಬೆ ಹಾಗೂ ಮುಲ್ತಾನಿ ಮಿಟ್ಟಿಯ ಫೇಸ್‍ಪ್ಯಾಕ್: ಒಂದು ದೊಡ್ಡ ಚಮಚದಲ್ಲಿ ಆಲೂವಿನ ರಸದಲ್ಲಿ ಎರಡು ಚಮಚ ನಿಂಬೆಯ ರಸ ಹಾಗೂ ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ಮಿಕ್ಸ್ ಮಡಿ ಪ್ಯಾಕ್ ತಯಾರಿಸಿ. ನಂತರ ಆ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಾಕಿ 10 ರಿಂದ 15 ನಿಮಿಷ ಬಿಡಿ. ಬಳಿಕ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಕಲೆಗಳು ಹೋಗಿ ನಿಮ್ಮ ಸ್ಕಿನ್ ಹೊಳೆಯುವಂತೆ ಮಾಡುತ್ತದೆ.

    ವಿಶೇಷ ಸೂಚನೆ: ಆಲೂ ಗಡ್ಡೆಯನ್ನು ಯಾವುದೇ ಕಾರಣಕ್ಕೂ ಬೇಯಿಸಬೇಡಿ. ಅಲ್ಲದೇ ಪೇಸ್ಟ್ ಮಾಡುವಾಗ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಲೇ ಬೇಕು. ಫೇಸ್‍ಪ್ಯಾಕ್ ಹಾಕಿ ತೊಳೆಯುವಾಗ ತಣ್ಣೀರಿನಲ್ಲೇ ಮುಖವನ್ನು ತೊಳೆಯಬೇಕು. ಅಲ್ಲದೇ ಮನೆಯಲ್ಲೇ ಸಿದ್ಧಪಡಿಸಿದ ಅರಿಶಿಣ ಬಳಸಿದರೆ ಉತ್ತಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬಿಗ್ ಬಾಸ್ ಬೆಡಗಿ

    ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬಿಗ್ ಬಾಸ್ ಬೆಡಗಿ

    ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಂದ ಆಟೋಗ್ರಾಫ್ ಪಡೆದುಕೊಳ್ಳುವುದು ಸಾಮನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಆಟೋಗ್ರಾಫ್ ಮರೀಚಿಕೆಯಾಗಿದ್ದು, ಸ್ಟಾರ್ ಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಟ್ರೆಂಡ್ ಆಗಿದೆ. ಕೆಲ ಅಭಿಮಾನಿಗಳು ಬುಕ್, ಕೈ ಅಥವಾ ತಮ್ಮ ನೆಚ್ಚಿನ ವಸ್ತುಗಳ ಮೇಲೆ ಸಹಿ ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಆಲೂಗಡ್ಡೆ ಮೇಲೆ ನೆಚ್ಚಿನ ನಟಿಯ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.

    ರಿಯಾಲಿಟಿ ಶೋ `ಬಿಗ್ ಬಾಸ್’ ಐದನೇ ಆವೃತ್ತಿಯ ಸ್ಪರ್ಧಿ ಶೃತಿ ಪ್ರಕಾಶ್ ಅವರು ಅಭಿಮಾನಿಯೊಬ್ಬರಿಗೆ ಆಲೂಗಡ್ಡೆ ಮೇಲೆ ತಮ್ಮ ಆಟೋಗ್ರಾಫ್ ಕೊಟ್ಟಿದ್ದಾರೆ.

    ಇತ್ತೀಚೆಗೆ ಶೃತಿ ಪ್ರಕಾಶ್ ಸಿನಿಮಾ ಶೂಟಿಂಗ್ ಅಂತ ಲಂಡನ್ ಹೋಗಿದ್ದರು. ಅಲ್ಲಿ ಸುಂದರವಾದ ಬುರ್ಟನ್ ಸ್ಥಳದಲ್ಲಿ ‘ಲಂಡನ್ ನಲ್ಲಿ ಲಂಬೋದರ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕಿಂಗ್ಸ್ ಬ್ರೈಡ್ ಇನ್ ಹೋಟೆಲ್ ಮಾಲೀಕ ಶೃತಿ ಪ್ರಕಾಶ್ ಕೈಗೆ ಆಲೂಗಡ್ಡೆ ನೀಡಿ ಆಟೋಗ್ರಾಫ್ ಕೇಳಿದ್ದಾರೆ. ಬಳಿಕ ಶೃತಿ ಅಭಿಮಾನಿಯ ಇಚ್ಛೆಯಂತೆಯೇ ಆಲೂಗಡ್ಡೆ ಮೇಲೆಯೇ ತಮ್ಮ ಆಟೋಗ್ರಾಫ್ ಹಾಕಿಕೊಟ್ಟಿದ್ದಾರೆ.

    ಆಲೂಗಡ್ಡೆ ಯಾಕೆ?:
    ಹೋಟೆಲ್ ಮಾಲೀಕರು ಒಂದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು, ಗಣ್ಯ ವ್ಯಕ್ತಿಗಳ ಬಳಿ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಈಗ ನಟಿ ಶೃತಿ ಅವರ ಬಳಿಯೂ ಆಲೂಗಡ್ಡೆ ಮೇಲೆಯೇ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.

    ಈ ಎಲ್ಲ ಸುಂದರ ಕ್ಷಣಗಳನ್ನು ಮೊಬೈಲ್ ಸೆರೆಹಿಡಿದಿರುವ ಶೃತಿ ಪ್ರಕಾಶ್ ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ವಿಡಿಯೋ ಹಾಕಿ, ಬಹಳ ಚೆನ್ನಾಗಿ ಅನ್ನಿಸಿತು ಎಂದು ಸಂತಸದಿಂದ ಬರೆದುಕೊಂಡಿದ್ದಾರೆ.

    `ಲಂಡನ್ ನಲ್ಲಿ ಲಂಬೋದರ’ ಚಿತ್ರದಲ್ಲಿ ನವ ನಾಯಕ ಸಂತೋಷ್ ಜೊತೆ ಶೃತಿ ಹೀರೋಯಿನ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ಚಿತ್ರ ರಾಜ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಮೊದಲು ರಾಜ್ ಸೂರ್ಯ ಚಮಕ್ ಹಾಗೂ ಇನ್ನು ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈ ಮಾಸ್ಟರ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

    https://www.instagram.com/p/BlF1R_3AKC9/?hl=en&taken-by=shrutiprakash