Tag: ಆಲಿಬಾಬ

  • ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ನವದೆಹಲಿ: ಆಲಿಬಾಬಾ ಒಡೆತನದ ಮಾಲೀಕ ಜಾಕ್ ಮಾ ರನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಹಿಂದಿಕ್ಕಿ, ಏಷ್ಯಾದ ಅಗ್ರಗಣ್ಯ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

    ಭಾರತದ ಇ-ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನಕ್ಕೆ ಕಾರಣವಾಗಿದ್ದು, ಮುಕೇಶ್ ಅಂಬಾನಿಯವರು ಏಷ್ಯಾದ ಬೃಹತ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‍ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಅವರ ಆಸ್ತಿ 44.3 ಶತಕೋಟಿ ಡಾಲರ್(3,03,445 ಕೋಟಿ ರೂ.) ಆಗಿದೆ. ಈ ಮೊದಲು ಏಷ್ಯಾದ ನಂ. 1 ಶ್ರೀಮಂತರಾಗಿದ್ದ ಆಲಿಬಾಬಾ ಸಂಸ್ಥೆಯ ಮಾಲೀಕ ಜಾಕ್ ಮಾ ಅವರ ಸಂಪತ್ತು 44 ಶತಕೋಟಿ ಡಾಲರ್‍ನಷ್ಟಿತ್ತು ಎಂದು ಬ್ಲೂಮ್‍ಬರ್ಗ ಸಂಸ್ಥೆ ವರದಿ ಮಾಡಿದೆ.

    ಬ್ಲೂಮ್‍ಬರ್ಗ್ ವರದಿ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.1.7ರಷ್ಟು ಬೆಳವಣಿಗೆ ದಾಖಲಿಸಿ ರೂಪಾಯಿ 1,199.8 ರಷ್ಟನ್ನು ಷೇರುದಾರರು ಹೆಚ್ಚಿಗೆ ಗಳಿಸಿದ್ದಾರೆ. ಈ ವರ್ಷ ರಿಲಯನ್ಸ್ ನ ಪೆಟ್ರೊಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಅಂಬಾನಿ ಸಂಪತ್ತಿಗೆ ಈ ವರ್ಷ 400 ಕೋಟಿ ಡಾಲರ್(27,400 ಕೋಟಿ ರೂ.) ಜಮೆಯಾಗಿದೆ. ರಿಲಯನ್ಸ್ ಜಿಯೋ ಆದಾಯದಿಂದ ಹೂಡಿಕೆದಾರರು ಸಂತೋಷಗೊಂಡಿದ್ದಾರೆ.

    ಜಿಯೋಗೆ 21.5 ಕೋಟಿ ಟೆಲಿಕಾಂ ಚಂದಾದಾರರಿದ್ದು, ವ್ಯಾಪ್ತಿ ವಿಸ್ತರಣೆಗೆ ಪೂರಕವಾಗಿ ನಾನಾ ಹೊಸ ಯೋಜನೆಗಳನ್ನು ತಿಂಗಳ ಆರಂಭದಲ್ಲಿಯಷ್ಟೇ ಕಂಪನಿ ಘೋಷಿಸಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಬಿಸಿನೆಸ್ ಅನ್ನು ಬಳಸಿಕೊಂಡು, ಆನ್‍ಲೈನ್‍ನಿಂದ ಆಫ್‍ಲೈನ್ ವರೆಗಿನ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶ ಸೃಷ್ಟಿಸಲಿದ್ದೇವೆ,” ಎಂದು ಅಂಬಾನಿ ಅವರು ಇತ್ತೀಚೆಗೆ ನಡೆದ 41ನೇ ವಾರ್ಷಿಕ ಸಭೆಯಲ್ಲಿ ಹೇಳಿದ್ದರು.

    ದೇಶದ 1,100 ನಗರಗಳಲ್ಲಿ ಮೊದಲ ಹಂತದಲ್ಲಿ ಫೈಬರ್ ಆಧಾರಿತ ಬ್ರ್ಯಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಜಿಯೊ ಮುಂದಾಗಿದೆ. ಇದು ಟೆಲಿಕಾಂ ವಲಯದಲ್ಲಿ ಇನ್ನೊಂದು ಸಂಚಲನಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.