Tag: ಆಲಿಕಲ್ಲು ಮಳೆ

  • ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    – ಧರೆಗುರುಳಿದ ಬೃಹತ್ ಮರಗಳು
    – ಒಂದೇ ಮಳೆಗೆ ಕೆರೆಯಂತಾದ ಸಿಲಿಕಾನ್ ಸಿಟಿ

    ಬೆಂಗಳೂರು: ಮಂಗಳವಾರ ಸಂಜೆ ಬೆಂಗಳೂರಲ್ಲಿ(Bengaluru) ವರುಣರಾಯ ಆರ್ಭಟಿಸಿದ್ದು, ನಗರದ ಬಾಣಸವಾಡಿ, ಕಲ್ಯಾಣನಗರ ಪ್ರದೇಶದಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ಮಳೆಗೆ ಟೆರೆಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿವೆ.

    ವರುಣನ ಅಬ್ಬರಕ್ಕೆ ಯಲಚೇನಹಳ್ಳಿ ಬಳಿ ಮೂರು ಮರಗಳು ಧರಾಶಾಹಿಯಾಗಿದ್ದು, ಮರ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ. ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡಿದರು. ಮಲ್ಲೇಶ್ವರಂನ(Malleshwaram) ಪಿಯುಸಿ ಬೋರ್ಡ್ ಬಳಿ ಮರವೊಂದು ರಸ್ತೆಗುರುಳಿದ್ದು, ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೇ ಕಾವೇರಿ ಜಂಕ್ಷನ್(Cauvery Junction) ಬಳಿ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲಿ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರವಿರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಬೆಂಗಳೂರಿಗೆ ಯಲ್ಲೋ ಅಲರ್ಟ್ – ಮುಂದಿನ 3 ಗಂಟೆ ಭಾರೀ ಮಳೆ

    ಇನ್ನು ಒಂದೇ ಮಳೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣಯು(Majestic Busstand) ಕೆರೆಯಂತಾಗಿದೆ. ಮಳೆ ನೀರು ಬಸ್ ನಿಲ್ದಾಣದ ಒಳಗೆ ನುಗ್ಗಿ, ಪ್ರಯಾಣಿಕರು ಪರದಾಡುವಂತಾಯಿತು. ಮಳೆಯ ಅವಾಂತರಕ್ಕೆ ನಾಗವಾರ ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಜಲಾವೃತವಾಗಿದೆ. ಜಲಾವೃತವಾಗಿದ್ದ ರಸ್ತೆಯಿಂದ ಬಸ್‌ನ ಒಳಗೆ ನೀರು ನುಗ್ಗಿದ್ದು, ಪ್ರಯಾಣಿಕರು ಮಳೆ ನೀರಿನಲ್ಲೇ ಕುಳಿತಿರುವಂತ ಪರಿಸ್ಥಿತಿ ಎದುರಾಗಿತ್ತು. ಇದನ್ನೂ ಓದಿ: ಪಾಕ್ ಮತ್ತೆ ದಾಳಿ ಮಾಡಿದ್ರೆ ಭಾರತ ನುಗ್ಗಿ ಹೊಡೆಯುತ್ತೆ: ಮೋದಿ

    ಭಾರೀ ಮಳೆಗೆ ಕೆ ಆರ್ ಮಾರ್ಕೆಟ್(K R Market) ರಸ್ತೆ ಕೆರೆಯಂತಾಗಿದ್ದು, ಕಿಲೋಮೀಟರ್‌ಗಟ್ಟಲೇ ನಿಂತಿರೋ ನೀರಿನಲ್ಲಿ ವಾಹನ ಸವಾರರ ಪರದಾಡಿದರು. ಒಂದು ತಾಸಿನ ಮಳೆಗೆ ಬ್ರ‍್ಯಾಂಡ್ ಬೆಂಗಳೂರು ಅಸಲಿಯತ್ತು ಅನಾವರಣಗೊಂಡಿದೆ. ಕುಮಾರಸ್ವಾಮಿ ಲೇಔಟ್ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಆಟೋದ ಮುಂದಿನ ಚಕ್ರ ಗುಂಡಿಗೆ ಬಿದ್ದು ಆಟೋ ಚಾಲಕ ಒದ್ದಾಡಿದ್ದಾರೆ. ಇದನ್ನೂ ಓದಿ: ತೆಲುಗಿಗೆ ‘ಕಾಂತಾರ’ ಲೀಲಾ- ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಔಟ್

    ಇನ್ನು ಸಾಯಿ ಲೇಔಟ್‌ನ ಜನರಿಗೆ ಮತ್ತೆ ಜಲಸಂಕಷ್ಟ ಎದುರಾಗಿದೆ. ಸಣ್ಣ ಮಳೆಗೂ ಈ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಜನ ಹೈರಣಾಗಿದ್ದಾರೆ.

  • ಕೊಪ್ಪಳ | ಅಕಾಲಿಕ ಆಲಿಕಲ್ಲು ಮಳೆಗೆ 12,726 ಹೆಕ್ಟರ್ ಬೆಳೆ ನಾಶವಾಗಿದೆ – ಶಿವರಾಜ್ ತಂಗಡಗಿ

    ಕೊಪ್ಪಳ | ಅಕಾಲಿಕ ಆಲಿಕಲ್ಲು ಮಳೆಗೆ 12,726 ಹೆಕ್ಟರ್ ಬೆಳೆ ನಾಶವಾಗಿದೆ – ಶಿವರಾಜ್ ತಂಗಡಗಿ

    ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ 12,726 ಹೆಕ್ಟರ್ ಬೆಳೆ ನಾಶವಾಗಿದ್ದು, ಅತಿ ಹೆಚ್ಚು ನಷ್ಟವಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬಹಳ ಕಡೆ ನಷ್ಟವಾಗಿದ್ದು, 12,726 ಹೆಕ್ಟರ್ ಬೆಳೆ ನಾಶ ಆಗಿದೆ. ಎನ್‌ಡಿಆರ್‌ಎಫ್ ಮೂಲಕ ಹಣ ನೀಡಿದರೆ ರೈತರಿಗೆ ನಷ್ಟವಾಗುತ್ತದೆ. ಈ ಬಗ್ಗೆ ಸಿಎಂ ಹಾಗೂ ಮಿನಿಸ್ಟರ್ ಗಮನಕ್ಕೆ ತರಲಾಗಿದೆ. ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇವೆ. ಬೆಳೆ ಹಾನಿ ಬಗ್ಗೆ ಪರೀಶಿಲನೆ ನಡೆಸಿ, ವರದಿ ನೀಡಲು ಹೇಳಿದ್ದೇನೆ. ರೈತರ ಹಾನಿಗೆ ವಿಶೇಷ ಪ್ಯಾಕೇಜ್ ಕೇಳಲಾಗಿದೆ. ವರದಿ ಬರುವವರೆಗೂ ಕಾಯೋಣ, ಕ್ಯಾಬಿನೆಟ್ ಮುಗಿದ ಬಳಿಕ ಸಿಎಂ ಜೊತೆ ಮಾತನಾಡಲು ಯೋಜನೆ ಮಾಡಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    ಜಾತಿಗಣತಿ ಬಹಿರಂಗ (Caste Census) ವಿಚಾರವಾಗಿ ಮಾತನಾಡಿ, ಜಾತಿಗಣತಿಗೆ ವಿರೋಧವಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಸದನದಲ್ಲಿ ಯಾರು ವಿರೋಧ ಮಾಡಿಲ್ಲ, ವರದಿಯನ್ನು ನಾನೇ ಓಪನ್ ಮಾಡಿರುವುದು. ಇದು ಜಾತಿಜನಗಣತಿ ಅಲ್ಲ, ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ. 1.66 ಲಕ್ಷ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಎಲ್ಲ ಸಮುದಾಯದ ಅಧಿಕಾರಿಗಳು ಈ ಸರ್ವೇಯಲ್ಲಿ ಭಾಗವಹಿಸಿದ್ದಾರೆ. 2011ರಲ್ಲಿ ಜನಗಣತಿ ಆದಾಗ 6.11 ಕೋಟಿ ಇತ್ತು. ಬಿಜೆಪಿಯವರು 95% ಗಣತಿಗೆ ಒಪ್ಪಿಕೊಳ್ಳುವವರು, ಈ ಗಣತಿಗೆ ಯಾಕೆ ಒಪ್ಪಿಕೊಳ್ಳುತ್ತಿಲ್ಲ. ಇವತ್ತು ಸಂಜೆಯವರೆಗೂ ಎಲ್ಲ ಮಂತ್ರಿಗಳಿಗೂ ವರದಿಯ ಪ್ರತಿಯನ್ನು ಕಳಿಸುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಮಾಹಿತಿ, ಏ.17ರ ನಂತರ ಮಾಧ್ಯಮಕ್ಕೆ ಕೊಡುತ್ತೇವೆ. ಸದ್ಯ ಮಾಧ್ಯಮದಲ್ಲಿ ಬರುತ್ತಿರುವ ಅಂಕಿಸಂಖ್ಯೆ ತಪ್ಪಾಗಿದೆ ಎಂದರು.

    ಬೋವಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ಜಾತಿಗಣತಿ ಮುಗಿಯಲಿ, ನಾನು ಆಮೇಲೆ ಮಾತನಾಡುತ್ತೇನೆ. ಇದರಲ್ಲಿ ಯರ‍್ಯಾರು ಬಿಜೆಪಿಯವರು ಇದ್ದಾರೆ, ಎಲ್ಲ ಮಾಹಿತಿ ಒದಗಿಸುತ್ತೇನೆ. ನಾನು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಗೆದುಕೊಳ್ತೀನಿ ಎಂದು ತಿಳಿಸಿದರು.ಇದನ್ನೂ ಓದಿ: ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು

  • ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಬೆಂಗಳೂರು: ನಗರದಲ್ಲಿ ಕಾರ್ಮೋಡ ಕವಿದು ಇಂದು ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ.

    ಮಧ್ಯಾಹ್ನವೇ ಇಡೀ ಬೆಂಗಳೂರು (Bengaluru Rain) ಕತ್ತಲಿನಿಂದ ಆವೃತವಾಗಿತ್ತು. ಆಲಿಕಲ್ಲು ಮಳೆ, ಗಾಳಿಗೆ ಸಿಲುಕಿ ಸವಾರರ ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ಮಂಡಿಯುದ್ದದವರೆಗೆ ನೀರು ನಿಂತು ಹರಿಯಿತು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

    ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಕಬ್ಬಿಣದ ಕಾಂಪೌಂಡ್ ನೆಲಕ್ಕುರುಳಿದೆ. ಕಟ್ಟಡ ನಿರ್ಮಾಣ ಜಾಗದಲ್ಲಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿತ್ತು. ಗಾಳಿ ಬೀಸಿದ ವೇಗಕ್ಕೆ ಕಬ್ಬಿಣ ತಗಡಗಳು ಬಿದ್ದಿವೆ. ಅದೇ ಜಾಗದಲ್ಲಿ ಕರೆಂಟ್ ಲೈನ್ ಮೇಲೆ ಬೃಹತ್ ಮರದ ಕೊಂಬೆ ಕೂಡ ಉರುಳಿ ಬಿದ್ದಿದೆ.

    ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳ ಮಾರ್ಗದ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಬಾಲಬೃಹಿ ಗೆಸ್ಟ್‌ಹೌಸ್ ಬಳಿ ರಸ್ತೆ ಕೆರೆಯಂತಾಗಿದೆ. ಬಸವನಗುಡಿಯ ಬುಲ್ ಟೆಂಪಲ್ ರೋಡ್‌ನಲ್ಲಿ ಮಳೆಗೆ ಮರ ಧರೆಗುರುಳಿದೆ. ಬೆಂಗಳೂರು ಹೈಸ್ಕೂಲ್ ಬಸ್ ಸ್ಟಾಂಪ್‌ನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ವಾಹನ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ

    ಯಶವಂತಪುರ ಬಿಎಂಟಿಸಿ ಒಳಗೆ ಮಳೆ ನೀರು ನುಗ್ಗಿ ಹರಿಯುತ್ತಿದೆ. ಬಿಎಂಟಿಸಿ ಬಸ್‌ಸ್ಟ್ಯಾಂಡ್ ಮಳೆ ನೀರಿನಿಂದ ಆವೃತವಾಗಿದೆ. ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕುಟುಂಬ ಮುಳುಗಿ ನೆರವಿಗೆ ಕೂಗಿಕೊಂಡ ಘಟನೆ ನಡೆಯಿತು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.

  • ಬೀದರ್‌ನಲ್ಲಿ 9 ವರ್ಷದ ಬಳಿಕ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ಮಳೆಗೆ ಬೆರಗಾದ ಜನ

    ಬೀದರ್‌ನಲ್ಲಿ 9 ವರ್ಷದ ಬಳಿಕ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ಮಳೆಗೆ ಬೆರಗಾದ ಜನ

    ಬೀದರ್/ಕಲಬುರಗಿ: ಮೇಲ್ಮೈ ಸುಳಿಗಾಳಿ ಕಾರಣ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ರಾಜ್ಯದ ಹಲವೆಡೆ ಬೇಸಿಗೆಯಲ್ಲಿ ಅಕಾಲಿಕ ಧಾರಾಕಾರ ಮಳೆಯ ಅಬ್ಬರ ಜೋರಾಗಿದೆ.

    ಬಿಸಿಲ ನಾಡು ಕಲಬುರಗಿ (Rain In Kalaburagi) ಯಲ್ಲಿ ಸಹ ನಿನ್ನೆ ರಾತ್ರಿ ಆಲಿಕಲ್ಲು ಮಳೆಯಾಗಿದೆ. ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಗೆ ಜನ ಬೆರಗಾಗಿದ್ದಾರೆ. ರಸ್ತೆಗಳಲ್ಲಿ ಹಿಮಪಾತದಂತೆ ಬಿದ್ದಿದೆ ಆಲಿಕಲ್ಲು. ಗಡಿ ಜಿಲ್ಲೆ ಬೀದರ್‍ನಲ್ಲಿ ಸಹ ಅಕಾಲಿಕ ಆಲಿಕಲ್ಲು ಮಳೆಯಾಗಿದ್ದು ಜನರು ಹೈರಾಣಾಗಿದ್ದಾರೆ.

    ಬೀದರ್ (Bidar), ಭಾಲ್ಕಿ, ಹುಮ್ನಾಬಾದ್, ಔರಾದ್, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾಲ್ಕಿ ತಾಲೂಕಿನ ನಾಗರಾಳ, ನಿಟ್ಟೂರು, ಕೂಡ್ಲಿಗೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಧಾರಾಕಾರ ಆಲಿಕಲ್ಲು ಮಳೆಯಾಗಿದೆ. ಭಾಲ್ಕಿಯ ನಾಗರಾಳ ಗ್ರಾಮದ 8 ರಿಂದ 10 ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅವಾಂತರಗಳು ಸೃಷ್ಟಿಯಾಗಿದೆ.

    ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬೃಹತ್ ಮರ ಧರೆಗೆ ಉರುಳಿದ್ದು ಮರದ ಕೆಳಗೆ ನಿಂತ್ತಿದ್ದ ಕಾರು ಮತ್ತು ಆಟೋ ಸಂಪೂರ್ಣವಾಗಿ ಜಖಂ ಆಗಿವೆ. ಇದನ್ನೂ ಓದಿ: 19 ಹೊಸ ಜಿಲ್ಲೆಗಳ ರಚನೆ – 50ಕ್ಕೇರಿದ ರಾಜಸ್ಥಾನ ಜಿಲ್ಲೆಗಳು

  • ಆಲಿಕಲ್ಲು ಸಹಿತ ಮಳೆಗೆ ನೆಲಕಚ್ಚಿದ ಬೆಳೆಗಳು ಅನ್ನದಾತನಿಗೆ ನಷ್ಟವೋ ನಷ್ಟ

    ಆಲಿಕಲ್ಲು ಸಹಿತ ಮಳೆಗೆ ನೆಲಕಚ್ಚಿದ ಬೆಳೆಗಳು ಅನ್ನದಾತನಿಗೆ ನಷ್ಟವೋ ನಷ್ಟ

    ಚಿಕ್ಕಬಳ್ಳಾಪುರ: ಗುರುವಾರ ರಾತ್ರಿ ಚಿಕ್ಕಬಳ್ಳಾಪುರದಲ್ಲಿ (Chikballapur) ಸುರಿದ ಬಿರುಗಾಳಿ ಸಹಿತ ಆಲಿಕಲ್ಲು (Hailstorm) ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರೇಣುಮಾಕಲಹಳ್ಳಿ ಗ್ರಾಮದ ರೈತ (farmer) ರಾಮಮೂರ್ತಿ ಹಾಗೂ ನಾರಾಯಣ ಮೂರ್ತಿ ಎಂಬುವವರು ಬೆಳೆದಿದ್ದ ದ್ರಾಕ್ಷಿ ಫಸಲು ಆಲಿಕಲ್ಲು ಮಳೆಗೆ ಸಿಲುಕಿ ಹಾಳಾಗಿದೆ.

    ಬೊಮ್ಮನಹಳ್ಳಿ ಗ್ರಾಮದ ಬೆರಾರೆಡ್ಡಿ ಎಂಬುವವರಿಗೆ ಸೇರಿದ ಜೋಳದ ಬೆಳೆ ಸಹ ಸಂಪೂರ್ಣ ನೆಲಕ್ಕುರುಳಿದೆ. ಇಷ್ಟೇ ಅಲ್ಲದೇ ರೈತರು ಬೆಳೆದಿದ್ದ ಹೂವಿನ ತೋಟ, ತರಕಾರಿ ಸೇರಿದಂತೆ ದಾಳಿಂಬೆ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿದೆ. ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ರಾಜ್ಯದಲ್ಲಿ ಹವಾಮಾನ ವೈಪರಿತ್ಯದಿಂದ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಮಾ. 18ರ ವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ( Meteorological Department) ಮಾಹಿತಿ ನೀಡಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

  • ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    ಕಲಬುರಗಿ: ರಾಜ್ಯದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಕಲಬುರಗಿಯ (Kalaburagi) ಗಡಿ ಗ್ರಾಮಗಳಲ್ಲಿ ಗುರುವಾರ ಆಲಿಕಲ್ಲು ಮಳೆಯಾಗಿದೆ. ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ (Hail rain) ಗ್ರಾಮಗಳ ರಸ್ತೆಗಳಲ್ಲಿ ಹಿಮಾಲಯದ (Himalaya) ವಾತಾವರಣ ನಿರ್ಮಾಣವಾಗಿತ್ತು.

    ಚಿಂಚೋಳಿ ತಾಲೂಕಿನ ಗಡಿಗ್ರಾಮಗಳಾದ ಶಿವರಾಂಪುರ, ತೆಲಂಗಾಣದ (Telangana) ಮರಪಲ್ಲಿ, ಕೋಹಿರ್, ಬಂಟಾರಂ, ಪಟ್ಟಲ್ಲುರ್ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಬಿದ್ದಿದೆ. ಬಿರು ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಕಂಡು ಗ್ರಾಮಸ್ಥರು ದಂಗಾಗಿದ್ದಾರೆ. ಇದನ್ನೂ ಓದಿ: Special- ಪುನೀತ್ ಹುಟ್ಟುಹಬ್ಬ: ದಿನಪೂರ್ತಿ ಕಾರ್ಯಕ್ರಮ

    ಸಮುದ್ರದ ಮೇಲೆ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. ಇದನ್ನೂ ಓದಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

  • ಕೊಡಗಿನ ಗಡಿ ಭಾಗದಲ್ಲಿ ಆಲಿಕಲ್ಲು ಮಳೆ

    ಕೊಡಗಿನ ಗಡಿ ಭಾಗದಲ್ಲಿ ಆಲಿಕಲ್ಲು ಮಳೆ

    ಮಡಿಕೇರಿ: ಕೊಡಗು ಹಾಸನ ಗಡಿ ಭಾಗದ ಗ್ರಾಮೀಣ ಭಾಗದಲ್ಲಿ ಇಂದು ಆಲಿಕಲ್ಲು ಸಹಿತ ಧಾರಕಾರ ಮಳೆಯಾಗಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಸುತ್ತಮುತ್ತ ಮಳೆಯಾಗಿದ್ದು, ಸಮೀಪದ ಅಂಕನಹಳ್ಳಿಯಲ್ಲಿ ರಾಶಿ ರಾಶಿ ಆಲಿಕಲ್ಲು ಮಳೆ ಸುರಿದಿದೆ. ಇದನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

    ಅಂಕನ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಸುರಿದ ಆಲಿಕಲ್ಲು ಮಳೆಗೆ ಗ್ರಾಮದಲ್ಲಿ ರೈತರು ಬೆಳೆದ ಕಾಫಿ, ಹಸಿ ಮೆಣಸು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದೆ. ಇದರಿಂದ ಈ ಭಾಗದ ರೈತರು ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ.

    ಕೋಡ್ಲಿಪೇಟೆ ಸುತ್ತಮುತ್ತ ಆಲಿಕಲ್ಲು ಸಹಿತ ಆರಂಭವಾದ ಮಳೆ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು. ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಮಳೆರಾಯನ ದರ್ಶನದಿಂದ ಮೈ ಮನಸ್ಸು ತಂಪಾದಂತಾಯಿತು.

  • ಕಾರ್ಕಳದಲ್ಲಿ ಆಲಿಕಲ್ಲು ಮಳೆ, ಗುಡುಗು ಸಿಡಿಲಿಗೆ ಜನ ಹೈರಾಣ

    ಕಾರ್ಕಳದಲ್ಲಿ ಆಲಿಕಲ್ಲು ಮಳೆ, ಗುಡುಗು ಸಿಡಿಲಿಗೆ ಜನ ಹೈರಾಣ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಕಾರ್ಕಳ ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಬಿರು ಬಿಸಿಲಿನ ನಡುವೆ ಮಳೆರಾಯ ತಂಪೆರೆದಿದ್ದಾನೆ.

    ಕಾರ್ಕಳ ತಾಲೂಕಿನ ಜೋಡು ರಸ್ತೆ, ಅಜೆಕಾರು ಮುನಿಯಾಲು ಹೆಬ್ರಿ ಬಜೆಗೋಳಿ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಮೂರನೇ ಬಾರಿ ಮಳೆಯಾಗುತ್ತಿದೆ. ಉಡುಪಿ ನಗರದಾದ್ಯಂತ ತುಂತುರು ಮಳೆಯಾಗಿದ್ದು, ಇಡೀ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ.

    ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ವಿಪರೀತ ಆಗಿತ್ತು. ಬಿಸಿಲಿನ ಶಾಖಕ್ಕೆ ಮೋಡ ಕರಗಿ ಮಳೆಯಾಗಿದೆ. ಕಾಪುವಿನ ಶಿರ್ವದಲ್ಲಿ ಗಾಳಿ ಮಳೆಯಾಗಿದೆ. ಕುಂದಾಪುರ, ಬೈಂದೂರಲ್ಲಿ ಕೆಲವೆಡೆ ಗುಡುಗು ಸಹಿತ ಮಳೆ ಬಿದ್ದಿದೆ.

    ಕಾಪು ತಾಲೂಕಿನ ಶಿರ್ವದಲ್ಲಿ ಗಾಳಿ ಮಳೆಯಾಗಿದೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆಗಿರುವುದರಿಂದ ನಾವು ಮಳೆಗಾಲಕ್ಕೆ ಹಸುವಿಗೆ ಈಗಲೇ ಬೈ ಹುಲ್ಲು ತಂದು ಮನೆಯಲ್ಲಿ ರಾಶಿ ಹಾಕಿದ್ದೆವು. ಹಟ್ಟಿಯಲ್ಲಿ ಅದನ್ನು ಜೋಡಿಸುವ ಮೊದಲೇ ಗಾಳಿ ಮಳೆ ಬಂದು ಬೈಹುಲ್ಲು ಒದ್ದೆಯಾಯಿತು. ಪೇಟೆಯಲ್ಲಿ ಕುಳಿತವರಿಗೆ ಮಳೆ ಖುಷಿಯಾಗಿರಬಹುದು. ಆದರೆ ನಮ್ಮಂತಹ ರೈತರಿಗೆ ಗಾಯದ ಮೇಲೆ ಬರೆ ಎಳೆದ ಹಾಗೆ ಆಗಿದೆ ಎಂದು ಶಿರ್ವ ಸಂದೀಪ್ ಭಟ್ರಾ ಹೇಳಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    – ಕೋಲಾರದಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ

    ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರ ತಾಲೂಕಿನ ಗಂಗರೆಕಾಲುವೆ, ಗೊಳ್ಳು, ಕತ್ರಿಗುಪ್ಪೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಆಲಿಕಲ್ಲು ಸಹಿತ ಮಳೆಯಾಗಿದೆ.

    ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಇಂದು ಮಳೆ ಆಗಿದೆ. ಇನ್ನೂ ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ದ್ರಾಕ್ಷಿ ಹಾಗೂ ತರಕಾರಿ, ಹೂ-ಹಣ್ಣಿನ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ.

    ಹಳ್ಳಿಗಳಲ್ಲಿ ಆಲಿಕಲ್ಲು ಮಳೆ ಆಗಿದೆ ಎಂದು ತಿಳಿದ ನಗರದ ಜನತೆ ನಗರದಲ್ಲಿ ಮಳೆನಾ ಇಲ್ವಲ್ವಾ. ಇಷ್ಟೊಂದು ಆಲಿಕಲ್ಲು ಮಳೆನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆಯಾಗಿದೆ.

    ಇತ್ತ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆರಾಯನ ಸಿಂಚನವಾಗಿದೆ. ಕೋಲಾರ ಹೊರಹೊಲಯದಲ್ಲಿ ಭರ್ಜರಿ ಮಳೆ ಆಗಿದೆ. 20 ನಿಮಿಷದಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.

    ದಿಢೀರನೆ ಆರಂಭವಾದ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಸದ್ಯ ಜನರಿಗೆ ಮಳೆಯಿಂದ ಮತ್ತಷ್ಟು ಕೊರೊನಾ ವೈರಸ್‍ನ ಆತಂಕ ಹೆಚ್ಚಾಗಿದೆ.

  • ಹವಾಮಾನ ವೈಪರೀತ್ಯ – ದೆಹಲಿಯಲ್ಲಿ ಆಲಿಕಲ್ಲು ಮಳೆ

    ಹವಾಮಾನ ವೈಪರೀತ್ಯ – ದೆಹಲಿಯಲ್ಲಿ ಆಲಿಕಲ್ಲು ಮಳೆ

    ನವದೆಹಲಿ: ಹವಾಮಾನ ವೈಪರೀತ್ಯ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕಾಲಿಕ ಮಳೆಯಾಗಿದೆ. ಇಂದು ಬೆಳಗ್ಗೆಯಿಂದ ದೆಹಲಿ-ಎನ್‍ಸಿಆರ್ ಭಾಗದ ಅಲ್ಲಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

    ದೆಹಲಿಯ ಹೊರ ಭಾಗದ ನೊಯ್ಡಾ, ಗ್ರೇಟರ್ ನೊಯ್ಡಾ ಗಾಜೀಯಬಾದ್ ಸೇರಿ ಹಲವೆಡೆ ಇಂದು ಬೆಳಗ್ಗೆಯಿಂದಲೇ ವರ್ಷಾಧಾರೆಯಾಗಿತ್ತು. ಮಧ್ಯಾಹ್ನ ಬಳಿಕ ದೆಹಲಿಯ ಗ್ರೀನ್ ಗ್ರೀನ್ ಪಾರ್ಕ್, ಸಬ್ದರ್ ಜಂಗ್, ಚಾಣಕ್ಯಪುರಿ, ಸಂಸತ್ ಮಾರ್ಗ್ ಸೇರಿ ಬಹುತೇಕ ಪ್ರದೇಶದಲ್ಲಿ ಮಳೆಯಾಗಿದೆ.

    https://twitter.com/gautamkapoor54/status/1238769330357063680

    ಚಂಡಮಾರುತ ವ್ಯವಸ್ಥೆಯು ಉತ್ತರ ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಮೇಲಿದೆ, ಜಮ್ಮು, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡನಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದ್ದು ಹವಾಮಾನ ವೈಪರೀತ್ಯಗಳಿಂದ ದೆಹಲಿಯಲ್ಲಿ ಅಕಾಲಿಕ ಮಳೆಯಾಗುತ್ತಿದೆ.

    ದೆಹಲಿಯಲ್ಲಿ ಸುರಿದ ಏಕಾಏಕಿ ಮಳೆಯಿಂದ ರಸ್ತೆಯ ಮೇಲೆ ಮತ್ತು ಪ್ಲೈಓವರ್ ಕೆಳಗೆ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

    ಆಲಿಕಲ್ಲು ಮಳೆ:
    ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ರಸ್ತೆಯ ಮೇಲೆ ನೀರು ನುಗ್ಗಿ ಸಂಚಾರ ಅಸ್ವಸ್ಥಗೊಂಡಿತು. ದಕ್ಷಿಣ ದೆಹಲಿ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗಿದ್ದರಿಂದ ಜನರು ಸಂಕಷ್ಟ ಎದುರಿಸಿದರು. ಇದಕ್ಕೂ ಮುನ್ನ ಶುಕ್ರವಾರ ಸಂಜೆ ಹಾಗೂ ರಾತ್ರಿಯಲ್ಲಿ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರುತ್ತಿತ್ತು. ಈ ಬೆನ್ನಲ್ಲೇ ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಚಾಲಕರು ಹಾಗೂ ಸವಾರರು ಪರದಾಡುವಂತಾಯಿತು.

    ಭಾರೀ ಮಳೆಯ ಹಿನ್ನೆಲೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವೀಟ್ ಮೂಲಕ ಸಂಚಾರ ಅಸ್ಥವ್ಯಸ್ಥವಿರುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ದೆಹಲಿಯಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಸದ್ಯದ ದೆಹಲಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಶುಕ್ರವಾರ ಗರಿಷ್ಠ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.