Tag: ಆಲಮಟ್ಟಿ ಜಲಾಶಯ

  • ಮಹಾರಾಷ್ಟ್ರದಲ್ಲಿ ಮಳೆ- ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

    ಮಹಾರಾಷ್ಟ್ರದಲ್ಲಿ ಮಳೆ- ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭ

    ವಿಜಯಪುರ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದೆ.

    ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿರುವ ಕಾರಣ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಪರಿಣಾಮ ನೀರಿನ ಒಳಹರಿವು ಜೂನ್ ಮೊದಲ ವಾರದಲ್ಲೇ ಆರಂಭಗೊಂಡಿದೆ.  ಈಗಾಗಲೇ 12,761 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದರ ಜೊತೆಗೆ ಹಿಪ್ಪರಗಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಒಳಹರಿವು ಮತ್ತಷ್ಟು ಹೆಚ್ಚಾಗಿದೆ.

    ಮಹಾರಾಷ್ಟ್ರದ ನೀರು ಕರ್ನಾಟಕಕ್ಕೆ ಬಂದು ಸೇರುವ ರಾಜಾಪೂರ ಬ್ಯಾರೇಜ್ ಬಳಿ ಸಹ ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ. ಕಳೆದ ವರ್ಷ ಜಲಾಶಯಕ್ಕೆ ಜುಲೈ 3 ರಿಂದ ಒಳಹರಿವು ಆರಂಭಗೊಂಡಿತ್ತು. ಡಿಸೆಂಬರಿನಿಂದ ಒಳಹರಿವು ಸಂಪೂರ್ಣ ನಿಲ್ಲಿಸಲಾಗಿತ್ತು. ಆ ವರ್ಷದ ಜಲಾಶಯದ ಇತಿಹಾಸದಲ್ಲಿಯೇ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು.

    519.60 ಮೀಟರ್ ಎತ್ತರದ ಜಲಾಶಯದಲ್ಲಿ ಇಂದು 509.55 ಮೀಟರ್ ನೀರು ಸಂಗ್ರಹವಿದೆ. ಸದ್ಯ 27.788 ಟಿಎಂಸಿ ನೀರು ಶೇಖರಣೆಯಾಗಿದೆ. ನಿತ್ಯ 14,050 ಮೀಟರ್ ನೀರು ಒಳಹರಿವಿನ ರೂಪದಲ್ಲಿ ಬರುತ್ತಿದ್ದು, 9,780 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಬಿಡಲಾಗುತ್ತಿದೆ. ಜಲಾಶಯದ ಗೇಟ್ ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 9,150 ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಹರಿದು ಬಿಡಲಾಗುತ್ತಿದೆ.

    ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಇನ್ನೂ ಮಹಾರಾಷ್ಟ್ರ, ಮುಂಬೈನ ಕರಾವಳಿ ಪ್ರದೇಶದಲ್ಲಿ ‘ನಿಸರ್ಗ’ ಚಂಡಮಾರುತದ ಪರಿಣಾಮದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ಆರಂಭವಾಗಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ನಿದ್ದೆಗೆ ಜಾರಿದ ನೈಟ್‍ಶಿಫ್ಟ್ ಅಧಿಕಾರಿಗಳು – ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಹೆಚ್ಚುವರಿ ನೀರು

    ನಿದ್ದೆಗೆ ಜಾರಿದ ನೈಟ್‍ಶಿಫ್ಟ್ ಅಧಿಕಾರಿಗಳು – ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಹೆಚ್ಚುವರಿ ನೀರು

    ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ವಿದ್ಯುತ್ ಉತ್ಪಾದನಾ ಘಟಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಪೂರ್ಣ ಸ್ಥಗಿತಗೊಂಡಿದೆ.

    ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲೇ ನೀರು ನುಗ್ಗಿದ್ದು, ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ 6 ಘಟಕಗಳು ಜಲಾವೃತಗೊಂಡಿವೆ. ಇದರಿಂದ ನಿತ್ಯ ಉತ್ಪಾದನೆ ಆಗುತ್ತಿದ್ದ ಆರು ವಿದ್ಯುತ್ ಉತ್ಪಾದನಾ ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ. ವಿದ್ಯುತ್ ಉತ್ಪಾದನೆ ವೇಳೆ ಹೊರಬರುವ ಹೆಚ್ಚುವರಿ ನೀರನ್ನು ರಾತ್ರಿಯಿಡಿ ಹೊರ ಹಾಕಬೇಕಿದ್ದ ಸಿಬ್ಬಂದಿ ನಿದ್ರೆಗೆ ಜಾರಿದ ಪರಿಣಾಮ ಈ ಅನಾಹುತ ಸಂಭವಿಸಿದೆ. ಹೆಚ್ಚುವರಿ ನೀರು ಹೊರ ಹಾಕುತ್ತಿದ್ದ 120 ಹೆಚ್‍ಪಿ ಸಾಮಥ್ರ್ಯದ ಮೂರು ಬೃಹತ್ ವಾಟರ್ ಲಿಫ್ಟಿಂಗ್ ಮೋಟಾರಗಳು ಸಹ ಸುಟ್ಟು ಭಸ್ಮವಾಗಿವೆ.

    ವಾಟರ್ ಲಿಫ್ಟಿಂಗ್ ಮೋಟಾರು ಸುಟ್ಟು ಭಸ್ಮವಾದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಉತ್ಪಾದನೆ ನಿಂತಿದೆ. ಒಟ್ಟು 6 ಘಟಕಗಳಿಂದ ನಿತ್ಯ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಅಧಿಕಾರಿಗಳ ಬೇಜವಾಬ್ದಾರಿ ಇಷ್ಟೆಲ್ಲ ನಷ್ಟ ಹಾಗೂ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಸದ್ಯ ಈ ಬಗ್ಗೆ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ಜನಿಕರು ಒತ್ತಾಯಿಸಿದ್ದಾರೆ.

  • ಆಲಮಟ್ಟಿ ಹಿನ್ನೀರಿನ ಕಥೆಯನ್ನು ಕಣ್ಣೀರಿಡುತ್ತಾ ಹಾಡಿದ ರೈತ

    ಆಲಮಟ್ಟಿ ಹಿನ್ನೀರಿನ ಕಥೆಯನ್ನು ಕಣ್ಣೀರಿಡುತ್ತಾ ಹಾಡಿದ ರೈತ

    ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನ ಕಥೆಯನ್ನು ರೈತರೊಬ್ಬರು ಕಣ್ಣೀರಿಡುತ್ತಾ ಹಾಡಿ, ಅಲ್ಲಿನ ರೈತರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ವಿವರಿಸಿದ್ದಾರೆ.

    ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯ ನಿರ್ಮಾಣವಾದ ಮೇಲೆ ಅದರ ಹಿನ್ನೀರಿನ ರೈತ ಕಣ್ಣೀರಿನ ಕಥೆಯನ್ನು ಹಾಡಿನಲ್ಲಿ ತಿಳಿಸಲಾಗಿದೆ. ಜಿಲ್ಲೆಯ ಕೆಂಚನೂರ ಗ್ರಾಮದ ರೈತ ಅಳುತ್ತಲೇ ಈ ಕಥೆಯನ್ನು ಹಾಡಿದ್ದಾರೆ. ಜಿಲ್ಲೆ ಎದುರಿಸುತ್ತಿರುವ ಅಪಾರ ಪ್ರಮಾಣದ ಪ್ರವಾಹ ಹಿನ್ನೆಲೆಯಲ್ಲಿ ರೈತ ಹಾಡಿನ ಮೂಲಕ ಅಳುತ್ತಲೇ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ಜಲಾವೃತಗೊಂಡಿರುವ ತಮ್ಮ ಜಮೀನಿನ ಮುಂದೆ ನಿಂತು ರೈತ ಈ ಹಾಡನಲ್ಲಿ ಕಷ್ಟ ಪಟ್ಟು ಬೆಳೆಸಿದ ಬೆಳೆ ಹಾನಿಯಾಗಿರುವ ಬಗ್ಗೆ, ಕಷ್ಟದಲ್ಲೇ ಬದುಕುತ್ತಿರುವ ಆಲಮಟ್ಟಿ ಹಿನ್ನೀರಿನ ಜನರ ಬದುಕಿನ ಬಗ್ಗೆ ಅಳುತ್ತಲೇ ವಿವರಿಸಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಗಮನಿಸಿದರೆ ಎಷ್ಟರ ಮಟ್ಟಿಗೆ ಈ ಭಾಗದ ರೈತರು ಕುಗ್ಗಿ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

  • ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ವಿಜಯಪುರ: ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗಡಿ ಭಾಗದಲ್ಲಿ ಬರುವ ನಾರಾಯಣಪೂರ ಸಮೀಪದ ಛಾಯಾ ಭಗವತಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.

    ಜಲಾವೃತಗೊಂಡ ಕಾರಣ ಛಾಯಾ ಭಗವತಿಗೆ ದೇವಸ್ಥಾನದಲ್ಲಿ ಪೂಜೆ ಸ್ಥಗಿತಗೊಂಡಿದೆ. ಅಲ್ಲದೆ ಪೊಲೀಸರು ಪ್ರವಾಸಿಗರನ್ನು ಮೆಟ್ಟಿಲು ಬಳಿ ತೆರಳದಂತೆ ಕಣ್ಗಾವಲು ಇಟ್ಟಿದ್ದಾರೆ.

    ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಅಡಿ ಇದ್ದು, ಇಂದಿನ ಮಟ್ಟ 517.10 ಅಡಿಯಾಗಿದೆ. ಒಟ್ಟು 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 87.737 ಟಿಎಂಸಿ ನೀರಿನ ಸಂಗ್ರಹವಿದೆ. ಆಲಮಟ್ಟಿ ಜಲಾಶಯದ ಒಳಹರಿವು 3,67,318 ಕ್ಯೂಸೆಕ್ ಇದ್ದರೆ, 3,90,929 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ.

    ಇತ್ತ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯ ಅಲಮೇಲ ತಾಲೂಕಿನ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಬೆಳಗ್ಗೆ ತಾರಾಪುರಕ್ಕೆ ತೆರಳುವ ರಸ್ತೆ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ.

    ಗ್ರಾಮದ ಸಂಪರ್ಕ ಸೇತುವೆ ಮೇಲೆ 4 ಅಡಿ ಅಷ್ಟು ನೀರು ನಿಂತಿದ್ದು, ಗ್ರಾಮಸ್ಥರು ವಾಹನಗಳು ಗ್ರಾಮದ ಹೊರಗಡೆ ನಿಲ್ಲಿಸಿದ್ದಾರೆ. ವಾಹನಗಳು ಗ್ರಾಮದ ಒಳಗೆ ಹೋಗಲು ಸಾಧ್ಯವಾಗದ ಕಾರಣ ಜನರು ನಡೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದಾರೆ. ತಾರಾಪುರಕ್ಕೆ ತೆರಳುವ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ನೀರು ಆವರಿಸುತ್ತಿದೆ.

  • ಆಲಮಟ್ಟಿ ಜಲಾಶಯ ಭರ್ತಿ – ಭಾರೀ ಪ್ರಮಾಣದ ನೀರು ಹೊರಕ್ಕೆ

    ಆಲಮಟ್ಟಿ ಜಲಾಶಯ ಭರ್ತಿ – ಭಾರೀ ಪ್ರಮಾಣದ ನೀರು ಹೊರಕ್ಕೆ

    ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

    ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, 6 ಕ್ರಸ್ಟ್ ಗೇಟ್‍ಗಳ ಮೂಲಕ 32 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಸುಮಾರು ಒಂದು ಮೀಟರ್ ಎತ್ತರ ಕ್ರಸ್ಟ್ ಗೇಟ್ ತೆರೆದು ನೀರು ಬಿಡುಗಡೆ ಮಾಡಲಾಗುತ್ತಿದೆ.

    ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ ಸುಮಾರು 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನಾರಾಯಣಪುರದ ಬಸವ ಸಾಗರಕ್ಕೆ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಳ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.60 ಮೀ. ಆಗಿದ್ದು, ಇಂದು 519.34 ಮೀ. ನಷ್ಟು ಭರ್ತಿಯಾಗಿದೆ. ಇದು 123.081 ಟಿಎಂಸಿಯಷ್ಟು ಗರಿಷ್ಠ ಸಾಮಥ್ರ್ಯ ಹೊಂದಿದ್ದು, ಇಂದು 118.713 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಪ್ರಸ್ತುತ 72,000 ಕ್ಯೂಸೆಕ್ ಒಳಹರಿವು ಇದ್ದು, 72,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.

    ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದ್ದು, ಮಹಾನಗರಿ ಮುಂಬೈ ಮುಳುಗಡೆಯಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ. ರೈಲು, ವಿಮಾನ ನಿಲ್ದಾಣಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಶುಕ್ರವಾರ ರಾತ್ರಿಯಿಂದ ಬದಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ತಮ್ಮನ್ನು ಹೇಗಾದರೂ ಮಾಡಿ ಕಾಪಾಡಿ, ಹಲವು ಗಂಟೆಗಳಿಂದ ರೈಲಿನಲ್ಲಿಯೇ ಬಂಧಿಯಾಗಿದ್ದೇವೆ ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಎನ್‍ಡಿಆರ್‍ಎಫ್, ವಾಯುಪಡೆ ಮತ್ತು ನೌಕಾಪಡೆಗಳ ಯೋಧರು ಕಾರ್ಯಾಚರಣೆ ನಡೆಸಿದ್ದರು. ಹೆಲಿಕಾಪ್ಟರ್ ಮತ್ತು ಬೋಟ್‍ಗಳ ನೆರವಿನಿಂದ 9 ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ರೈಲಿನಲ್ಲಿದ್ದ ಎಲ್ಲ 1050 ಪ್ರಯಣಿಕರನ್ನು ರಕ್ಷಿಸಿದ್ದಾರೆ.

    ಮುಂಬೈ ಏರ್‍ಪೋರ್ಟ್‍ನಲ್ಲೂ 11 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಕೆಲವು ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಎನ್‍ಡಿಆರ್‍ಎಫ್ ಪಡೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿದೆ. ಇತ್ತ ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದ್ದು, ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಸಿಕಾರ್ ನಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಬೈಕ್ ಸವಾರನೊಬ್ಬ ಕೊಚ್ಚಿ ಹೋಗಿದ್ದಾನೆ. ಮೂವರು ಬಾಲಕಿಯರನ್ನು ರಕ್ಷಿಸಲಾಗಿದೆ. ಒಡಿಶಾ, ಮಧ್ಯಪ್ರದೇಶ, ಛತ್ತೀಸ್‍ಗಢ, ವಿದರ್ಭಾ, ಗುಜರಾತ್‍ನಲ್ಲೂ ಇನ್ನೂ ಮೂರು ದಿನ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳ: ಜಿಲ್ಲಾಡಳಿತ ಹೈ ಅಲರ್ಟ್

    ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳ: ಜಿಲ್ಲಾಡಳಿತ ಹೈ ಅಲರ್ಟ್

    ಯಾದಗಿರಿ: ಆಲಮಟ್ಟಿ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಳವಾದ ಹಿನ್ನೆಲೆ, ಕೃಷ್ಣ ನದಿಪಾತ್ರದ ನಿವಾಸಿಗಳಿಗೆ ಯಾದಗಿರಿ ಜಿಲ್ಲಾಡಳಿತ ಹೈ ಹಲರ್ಟ್ ಘೋಷಣೆ ಮಾಡಿದೆ.

    ಆಲಮಟ್ಟಿ ಜಲಾಶಯದ ಸದ್ಯದ ಒಳ ಹರಿವು 1,10,000 ಕ್ಯೂಸೆಕ್ ಇದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ನಾರಾಯಣಪುರ ಅಣೆಕಟ್ಟುಗೆ ಇಂದು ಸಂಜೆಯ ವೇಳೆಗೆ 50,000 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಲಿದೆ. ನಾಳೆ ಯಾವುದೇ ಸಮಯದಲ್ಲಿ ನಾರಾಯಣಪುರ ಅಣೆಕಟ್ಟಿನಿಂದ, ಕೃಷ್ಣ ನದಿಗೆ ಭಾರೀ ಪ್ರಮಾಣದ ನೀರು ಹರಿಸುವ ಸಾಧ್ಯತೆಯಿದೆ ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

    ಅಪಾರ ಪ್ರಮಾಣದ ನೀರು ನದಿಗೆ ಬಿಡುತ್ತಿರುವ ಹಿನ್ನೆಲೆ ಪ್ರವಾಹದ ಭೀತಿ ಉಂಟಾಗಿದೆ. ಈ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿ ಸುತ್ತೋಲೆ ಸಹ ಹೊರಡಿಸಿದೆ. ಆದ್ದರಿಂದ ಕೃಷ್ಣ ನದಿ ಪಾತ್ರದ ಜನರಿಗೆ ಮತ್ತು ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.

    ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಈ ಹಿನ್ನೆಲೆ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಆಲಮಟ್ಟಿ ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಸಂಜೆ ವೇಳೆಗೆ ನಾರಾಯಣಪುರ ಅಣೆಕಟ್ಟಿಗೆ ನೀರು ಹರಿ ಬಿಡಲು ನಿರ್ಧರಿಸಲಾಗಿದೆ. ನಾಳೆ ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣ ನದಿಗೆ ನೀರು ಹರಿಬಿಡಲಾಗುತ್ತಿದೆ.

    ಮಹಾರಾಷ್ಟ್ರದಲ್ಲಿ ಭಾರೀ ಮಳೆ:
    ಮುಂಬೈ ಸೇರಿದಂತೆ ಮಹಾರಾಷ್ಟ್ರದ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ರಸ್ತೆ ಮತ್ತು ರೈಲ್ವೇ ಹಳಿಗಳು ಜಲಾವೃತಗೊಂಡಿದ್ದವು. ಕೆಲ ದಿನಗಳ ಕಾಲ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ವಿಪರೀತ ಸಾವು ನೋವು ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಈ ಹಿಂದೆ `ಪಶ್ಚಿಮ ರೈಲ್ವೇ ವಿಭಾಗದ 13 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟ್ರಾಫಿಕ್ ನಿಯಂತ್ರಿಸಲು 500ಕ್ಕೂ ಅಧಿಕ ಸಂಚಾರಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

     

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಆಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದಾಗಿ ಇಂದು ನಿಗದಿಯಾಗಿದ್ದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕಾರ್ಯಕ್ರಮ ನಿಮಿತ್ತ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಮಧ್ಯಾಹ್ನ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಬೆಳಗ್ಗಿನಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಹೆಲಿಕಾಪ್ಟರ್ ಪೈಲಟ್ ಹವಾಮಾನ ಸರಿ ಇಲ್ಲದ ಕಾರಣ ಅನುಮತಿಗೆ ನಿರಾಕರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿಕೆ ಶಿವಕುಮಾರ್, ಸುರಿಯುತ್ತಿರುವ ಮಳೆಯಿಂದಾಗಿ ಪೈಲಟ್ ವಿಜಯಪುರ ಪ್ರಯಾಣಕ್ಕೆ ನಿರಾಕರಿಸಿದ್ದರು. ಹೀಗಾಗಿ ರಸ್ತೆ ಮೂಲಕ ತೆರಳಲು ನಿರ್ಧಾರ ಮಾಡಿದ್ದೇವು, ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಮುಖಾಂತರ ತಲುಪಲು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಇದೇ ಆಗಸ್ಟ್ 15ರಂದು ಕಾರ್ಯಕ್ರಮವನ್ನು ನಡೆಸುವುದಾಗಿ ಹೇಳಿದ್ದಾರೆ.

    ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಮಾನ ನಿಲ್ದಾಣದಿಂದ ಬಸವರಾಜ ಹೊರಟ್ಟಿ ಮನೆಗೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದ್ದು, ಒಂದು ವಾರದ ಬಳಿಕ ಕಾರ್ಯಕ್ರಮವನ್ನು ನಡೆಸುವುದಾಗಿ ತಿಳಿಸಿದ್ದಾರೆ.

    ಹವಾಮಾನ ವೈಪರೀತ್ಯದಿಂದ ಏಕಾಏಕಿ ಸಿಎಂ ಕಾರ್ಯಕ್ರಮ ರದ್ದುಗೊಂಡಿದ್ದರಿಂದ, ಆಲಮಟ್ಟಿ ಜಲಾಶಯದಲ್ಲಿ ಮನವಿ ಕೊಡಲು ಬಂದಿದ್ದ ರೈತರು ಅಸಮಾಧಾನ ಹೊರಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews