Tag: ಆರ್.ವೆಂಕಟೇಶ್ ಕುಮಾರ್

  • ರಾಯಚೂರಿನಲ್ಲಿ ಮದುವೆಗೆ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ

    ರಾಯಚೂರಿನಲ್ಲಿ ಮದುವೆಗೆ ಸಂಪೂರ್ಣ ನಿರ್ಬಂಧ: ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ

    – ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ಬ್ಯಾಂಕ್ ವ್ಯವಹಾರಕ್ಕೆ ಅವಕಾಶ
    – RTPS, YTPSನಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಅನುಮತಿ

    ರಾಯಚೂರು: ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡುವಿಕೆ ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತ ಕಠಿಣ ಕ್ರಮಗಳಿಗೆ ಮುಂದಾಗಿದೆ. ಸದ್ಯ ಜಾರಿಯಲ್ಲಿರುವ ಸಂಪೂರ್ಣ ಲಾಕ್‍ಡೌನ್ ಮುಂದುವರಿಸುತ್ತಿದ್ದು ಕೆಲವೊಂದಿಷ್ಟು ಬದಲಾವಣೆಗಳನ್ನ ಮಾಡಲಾಗಿದೆ.

    ಮೇ 27 ಬೆಳಗ್ಗೆ 6 ರಿಂದ 2 ಗಂಟೆವರೆಗೆ ಅಗತ್ಯ ವಸ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಮೇ 27ರ ಮಧ್ಯಾಹ್ನ 2 ರಿಂದ ಮೇ 30ರ ಮಧ್ಯರಾತ್ರಿವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಸಂಪೂರ್ಣ ಲಾಕ್‍ಡೌನ್‍ನ ಹೊಸ ನಿಯಮಗಳಲ್ಲಿ ಮದುವೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಬ್ಯಾಂಕ್ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ರೀತಿಯ ಸರಕು ಸಾಗಾಣಿಕೆ ಹಾಗೂ ಖಾಲಿ ವಾಹನಗಳಿಗೆ ಅನುಮತಿ ಕೊಡಲಾಗಿದೆ. ಆಹಾರ ಸಂಸ್ಕರಣೆಯ ಸೇವೆಗಳಾದ ಕೋಲ್ಡ್ ಸ್ಟೋರೇಜ್‍ಗಳು, ಔಷಧ ಉದ್ಯಮಗಳು, ರಾಸಾಯನಿಕ ಉದ್ಯಮಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಆರ್ ಟಿಪಿಎಸ್ ಮತ್ತು ವೈಟಿಪಿಎಸ್‍ಗಳಲ್ಲಿ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿಸಲಾಗಿದೆ.

    ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ, ವಿದ್ಯುತ್, ಪೆಟ್ರೋಲ್ ಪಂಪ್, ಔಷಧ, ಆಸ್ಪತ್ರೆಗಳು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಚಟುವಟಿಕೆಗಳನ್ನು ಮೇ 30ರ ರಾತ್ರಿ 12 ಗಂಟೆಯವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.