Tag: ಆರ್ ಬಿ ಐ

  • ಬ್ಯಾಂಕ್‍ನಲ್ಲಿ 80 ಲಕ್ಷ ಹಣವಿದ್ದರೂ ಡ್ರಾ ಮಾಡಲಾಗದೆ ತಂದೆಯನ್ನು ಕಳೆದುಕೊಂಡ ಪುತ್ರ

    ಬ್ಯಾಂಕ್‍ನಲ್ಲಿ 80 ಲಕ್ಷ ಹಣವಿದ್ದರೂ ಡ್ರಾ ಮಾಡಲಾಗದೆ ತಂದೆಯನ್ನು ಕಳೆದುಕೊಂಡ ಪುತ್ರ

    ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‍ನ ಮೇಲೆ ಆರ್.ಬಿ.ಐ ನಿರ್ಬಂಧ ಹೇರಿದ ಕಾರಣದಿಂದ ತನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ತೆಗೆದುಕೊಳ್ಳಲಾಗದೆ ಮಗನೊಬ್ಬ ತನ್ನ ತಂದೆಯನ್ನು ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪ್ರೇಮ್ ಧಾರಾ ಎಂಬವರು ಪಿಎಂಸಿ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 80 ಲಕ್ಷ ರೂ. ಹಣ ಇಟ್ಟಿದ್ದರು. ಈ ನಡುವೆ ಅವರ ತಂದೆ ಮುರಳೀಧರ್ ಧಾರಾಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು.

    ತಂದೆ ಮುರಳೀಧರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆ ಪ್ರೇಮ್ ದಾಖಲು ಮಾಡಿದ್ದು, ವೈದ್ಯರು ನಿಮ್ಮ ತಂದೆಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ನೀವು ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿದ್ದಾರೆ. ಈ ವೇಳೆ ಅಕ್ರಮ ಹಣಕಾಸು ವಹಿವಾಟು ಹಿನ್ನೆಲೆ ಆರ್.ಬಿ.ಐ ಪಿಎಂಸಿ ಬ್ಯಾಂಕ್‍ನಲ್ಲಿ ಹಣದ ವಾಹಿವಾಟಿನ ಮೇಲೆ ನಿರ್ಬಂಧ ಹೇರಿದ ಕಾರಣ ಇವರಿಗೆ ಹಣ ಡ್ರಾ ಮಾಡಲು ಆಗಿಲ್ಲ.

    ಆರ್.ಬಿ.ಐ ನಿರ್ಬಂಧ ಹೇರಿದ ಕಾರಣ ಪ್ರೇಮ್ ಅವರು ಕೇವಲ 40 ಸಾವಿರವನ್ನು ಮಾತ್ರ ಡ್ರಾ ಮಾಡಿದ್ದಾರೆ. ಕೈಯಲ್ಲಿ ಹಣವಿದ್ದರು ಅದನ್ನು ಡ್ರಾ ಮಾಡಲಾಗದೆ ಪ್ರೇಮ್ ಧಾರಾ ಕಷ್ಟಪಟ್ಟಿದ್ದಾರೆ. ಈ ವೇಳೆ ತೀವ್ರ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರ ತಂದೆ ಮುರುಳೀಧರ್ ಇಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

    ಎರಡು ದಿನದ ಹಿಂದೆ ಪಿಎಂಸಿ ಬ್ಯಾಂಕ್‍ನಲ್ಲಿ 90 ಲಕ್ಷ ಇಟ್ಟಿದ್ದ 51 ವರ್ಷದ ಸಂಜಯ್ ಗುಲಾಟಿ ಅವರು ತಮ್ಮ ಮಗನ ಶಸ್ತ್ರಚಿಕಿತ್ಸೆಗೆ ಹಣವನ್ನು ಡ್ರಾ ಮಾಡಲು ಆಗಿಲ್ಲ ಎಂದು ಮನನೊಂದು ಇದೇ ಕಾರಣದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.

  • ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

    ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

    ನವದೆಹಲಿ: ಕೊಳೆಯಾದ, ಹರಿದ 2000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಆರ್ ಬಿಐ ಹೊಸ ನಿಯಮಾವಳಿಗಳನ್ನು ತರುವುದಾಗಿ ಹೇಳಿದೆ.

    ಬಹಳಷ್ಟು ಬ್ಯಾಂಕ್ ಗಳು ಕೊಳೆಯಾದ ಹಾಗೂ ಹರಿದ 2000 ರೂ ಮುಖಬೆಲೆಯ ನೋಟುಗಳನ್ನ ಸ್ವೀಕರಿಸುತ್ತಿಲ್ಲ. ಆರ್ ಬಿಐ ನಿಯಮಾವಳಿಗಳಲ್ಲಿ 2000 ರೂ ನೋಟು ವಿನಿಮಯದ ಬಗ್ಗೆ ಪ್ರಸ್ತಾಪ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.

    2009 ರ ಆರ್ ಬಿಐ ನೋಟು ವಿನಿಮಯದ ನಿಯಮದ ಪ್ರಕಾರ 50 ರೂಪಾಯಿ ಮೇಲ್ಪಟ್ಟ ಎಲ್ಲಾ ಕೊಳೆಯಾದ ಹಾಗೂ ಹರಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸುತ್ತದೆ. ಹರಿದು ಹೋಗಿರುವ ನೋಟಿನ ಒಂದು ಭಾಗ ಇದ್ದು 70, 75, 80 ಮತ್ತು 84 ಚದುರ ಸೆಂಟಿಮೀಟರ್ ನಷ್ಟು ಇದ್ದರೂ ವಿನಿಮಯ ಮಾಡಿಕೊಳ್ಳಬಹುದು ಎಂದು ನಿಯಮದಲ್ಲಿ ಹೇಳಿದೆ.

    ನವೆಂಬರ್ 8, 2016 ರ 500 ಹಾಗೂ 1000 ರೂ ಅಪನಗದೀಕರಣ ದ ನಂತರ 1,000 ರೂ ಬದಲು 2000 ರೂ. ಮುಖಬೆಲೆಯ ನೋಟು ಬಂದಿದೆ. 1000 ರೂಗಳಿಗೆ ಇದ್ದ ನಿಯಮಗಳನ್ನು ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳಿಗೆ ಅಳವಡಿಸಿ ವಿನಿಮಯ ಮಾಡಲು ಒಪ್ಪುತ್ತಿಲ್ಲ.

    ಕಳೆದ ಬಾರಿ ಜುಲೈ 3, 2017 ರಂದು ಆರ್ ಬಿಐ ನಿಯಮಾವಳಿಗಳನ್ನ ಮಾರ್ಪಾಡು ಮಾಡಿತ್ತು. ಮಣ್ಣಾದ ನೋಟು ಎಂದರೆ ಹೆಚ್ಚು ಕೈಯಿಂದ ಕೈಗೆ ಬಳಕೆಯಾಗಿ ಹಳೆಯದಾಗಿರುವ ನೋಟು ಹಾಗೂ ಇಬ್ಬಾಗವಾದ ನೋಟನ್ನು ಸೇರಿಸಿದ್ದು ಅಗತ್ಯವಿರುವ ನೋಟಿನ ಅಂಶಗಳು ಇರತಕ್ಕದ್ದು ಹಾಗೂ ಅಂತಹ ನೋಟುಗಳನ್ನು ಬ್ಯಾಂಕ್ ಗಳು ಸ್ವೀಕರಿಸಬಹುದು ಎಂದು ಆರ್ ಬಿಐ ತಿಳಿಸಿದೆ.

    ಹರಿದ ನೋಟುಗಳ ವಿನಿಮಯಕ್ಕೆ ಆರ್ ಬಿಐ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಿದರೂ ಬ್ಯಾಂಕ್ ಗಳು 2000 ರೂ ಮುಖಬೆಲೆಯ ನೋಟುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

    ಕೊಳೆಯಾದ ಮತ್ತು ಹರಿದ ಹೊಸ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಹೊಸ ನಿಯಮಾವಳಿಗಳನ್ನು ರಚಿಸಿದ್ದು ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ನಿರ್ದೇಶಕ ಮನಮೋಹನ್ ಸಚ್ದೇವ ತಿಳಿಸಿದ್ದಾರೆ.

  • ಜನರ ನಡುವೆ 18.5 ಲಕ್ಷ ಕೋಟಿ ರೂ. ನಗದು ಹಣ ಚಲಾವಣೆಯಲ್ಲಿದೆ:ಆರ್ ಬಿ ಐ

    ಜನರ ನಡುವೆ 18.5 ಲಕ್ಷ ಕೋಟಿ ರೂ. ನಗದು ಹಣ ಚಲಾವಣೆಯಲ್ಲಿದೆ:ಆರ್ ಬಿ ಐ

    ನವದೆಹಲಿ: ನೋಟ್ ಬ್ಯಾನ್ ಬಳಿಕ ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ ನಗದು ಹಣದ ಮೊತ್ತ 18.5 ಲಕ್ಷ ಕೋಟಿ ರೂ. ತಲುಪಿದೆ. 500, 1000 ರೂ. ಮೌಲ್ಯದ ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ 17 ಲಕ್ಷ ಕೋಟಿ ರೂ. ನಗದು ಹಣ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿತ್ತು ಎಂದು ಆರ್ ಬಿ ಐ ತಿಳಿಸಿದೆ.

    ಬ್ಯಾಂಕ್ ಮತ್ತು ಜನರ ಬಳಿಯಲ್ಲಿರುವ ಹಣ ಒಟ್ಟಾರೆ ದೇಶದಲ್ಲಿರುವ ನಗದು ಹಣವಾಗುತ್ತದೆ. ಕಳೆದ ಕೆಲವು ತಿಂಗಳ ಹಿಂದೆ ನೋಟಿನ ಕೊರತೆ ಕಂಡುಬಂದಿತ್ತು. ಚಲಾವಣೆ ಮಾಡದೆ ನಗದು ಹಣವನ್ನು ಶೇಖರಣೆ ಮಾಡಿರುವುದು ಇದಕ್ಕೆ ಕಾರಣ ಎಂದು ಆರ್ ಬಿ ಐ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಅಪನಗದೀಕರಣ ಮಾಡಿದ 500, 1000 ರೂ ನೋಟುಗಳ ಒಟ್ಟು ಮೌಲ್ಯ 15.44 ಲಕ್ಷ ಕೋಟಿ ರೂ. ಆಗಿತ್ತು. ನೋಟ್ ಬ್ಯಾನ್ ಬಳಿಕ 15.28 ಲಕ್ಷ ಕೋಟಿ ರೂ. ವಾಪಸ್ ಬಂದಿದೆ ಎಂದು 2017 ಜೂನ್ 30 ರ ಪ್ರಕಟಣೆಯಲ್ಲಿ ಆರ್ ಬಿ ಐ ತಿಳಿಸಿತ್ತು.

    ಅಪನಗದೀಕರಣದ ನಂತರ 2000, 500, 200, 50 ಮುಖಬೆಲೆಯ ನೋಟುಗಳನ್ನು ಆರ್ ಬಿ ಐ ಬಿಡುಗಡೆ ಮಾಡಿದೆ. ಚಲಾವಣೆಯಲ್ಲಿರುವ ಒಟ್ಟು ನಗದು ಹಣದ ಮಾಹಿತಿಯನ್ನು ವಾರಕ್ಕೊಮ್ಮೆ ಆರ್ ಬಿ ಐ ಪ್ರಕಟ ಮಾಡುತ್ತದೆ. ಇನ್ನು ಜನರ ನಡುವೆ ಚಲಾವಣೆಯಲ್ಲಿರುವ ನಗದು ಹಣದ ಮಾಹಿತಿಯನ್ನು 15 ದಿನಕ್ಕೊಮ್ಮೆ ಪ್ರಕಟ ಮಾಡುತ್ತದೆ.

    ಜನರ ನಡುವೆ ಚಲಾವಣೆಯಲ್ಲಿರುವ ಮತ್ತು ಆರ್ ಬಿ ಐ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಒಟ್ಟಾರೆ ಹಣದ ಮೊತ್ತ 140 ಲಕ್ಷ ಕೋಟಿ ರೂ. 2013 ರಲ್ಲಿ 100 ಲಕ್ಷ ಕೋಟಿ ರೂ. ಗಿಂತ ಕಡಿಮೆ ಇತ್ತು ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

  • ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ನವದೆಹಲಿ: ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಬೇಕಾದರೆ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು.

    ಮಕ್ಕಳ ಶಿಕ್ಷಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರು ಕೊಳ್ಳಲು ಹೊರ ದೇಶಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಆರ್ ಬಿ ಐ  ಹೇಳಿದೆ.

    ರಿಸರ್ವ್ ಬ್ಯಾಂಕ್ ಉದಾರ ಪಾವತಿ ಯೋಜನೆ(ಎಲ್‍ಆರ್‍ಎಸ್) ನಿಯಮದ ಅಡಿ ಇಲ್ಲಿಯವರೆಗೆ 25 ಸಾವಿರ ಡಾಲರ್(ಅಂದಾಜು 16.75 ಲಕ್ಷ ರೂ.) ವರೆಗಿನ ಹಂಣವನ್ನು ಕಳುಹಿಸಲು ಯಾವುದೇ ದಾಖಲೆಗಳ ಅಗತ್ಯವಿರಲ್ಲ. ಆದರೆ ಈ ಹಣವನ್ನು ಕಳುಹಿಸುವ ಮೂಲಕ ಅಕ್ರಮಗಳು ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರ್ ಬಿ ಐ ಈಗ ನಿಯಮವನ್ನು ಬಿಗಿಗೊಳಿಸಿದೆ.

    ಈ ಹೊಸ ನಿಯಮದಿಂದಾಗಿ ದೇಶದಿಂದ ಹೊರ ಹೋಗುತ್ತಿದ್ದ ಅನಧಿಕೃತ ಹಣಕ್ಕೆ ಬ್ರೇಕ್ ಬೀಳಲಿದೆ. ಅಲ್ಲದೇ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸ ತುಂಬಲಿದೆ. ವ್ಯವಸ್ಥೆಯಲ್ಲಿ ಪಾನ್ ಕಾರ್ಡ್ ಕಡ್ಡಾಯವಾದ್ದರಿಂದ ಹಣ ಸಂದಾಯ ಮಾಡುವವರ ಖಾತೆಗಳ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.

    ಹೊರದೇಶಗಳಿಗೆ ತಮ್ಮ ಮಕ್ಕಳ ಶಿಕ್ಷಣ, ವಿದೇಶಿ ಸ್ಟಾಕ್ ಮಾರುಕಟ್ಟೆಗಳಲ್ಲಿ ಹಣ ಹೂಡಬಯಸುವ ಹಾಗೂ ವಿದೇಶಗಳಲ್ಲಿ ಆಸ್ತಿ ಖರೀದಿಸಬಯಸುವ ಭಾರತೀಯರಿಗೆ ಈ ನಿಯಮ ಅನ್ವಯವಾಗಲಿದೆ.

  • ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

    ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

    ನವದೆಹಲಿ: ದೇಶದ ಬಹಳಷ್ಟು ರಾಜ್ಯಗಳಲ್ಲಿನ ಹಲವಾರು ಎಟಿಎಂ ಗಳಲ್ಲಿ ಹಣ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಹಳಷ್ಟು ಎಟಿಎಂ ಗಳಲ್ಲಿ ಹಣ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

    500, 1 ಸಾವಿರ ರೂ. ನೋಟು ನಿಷೇಧಗೊಳ್ಳುವ ಮೊದಲು 17.64 ಲಕ್ಷ ಕೋಟಿ ರೂ. ನಷ್ಟು ನಗದು ಚಲಾವಣೆಯಲ್ಲಿತ್ತು. ಅಪನಗದೀಕರಣದ ಬಳಿಕ 17.97 ಲಕ್ಷ ಕೋಟಿ ರೂ. ಅಷ್ಟು ನಗದು ಚಲಾವಣೆಯಲ್ಲಿದೆ. ಅಪನಗದೀಕರಣದ ಬಳಿಕ 2000 ರೂ ಮುಖಬೆಲೆಯ 5 ಲಕ್ಷ ಕೋಟಿ ನೋಟುಗಳು ಮುದ್ರಣಗೊಂಡಿದೆ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

    ಸಾಕಷ್ಟು ನೋಟುಗಳು ಮುದ್ರಣವಾಗಿದ್ದರೂ ಎಟಿಎಂ ಗಳಲ್ಲಿ ಹಣ ಇಲ್ಲದಿರುವುದಕ್ಕೆ ಕಾರಣ 2000 ರೂ ನೋಟುಗಳ ಅಕ್ರಮ ಸಂಗ್ರಹಣೆ ಕಾರಣವಾಗಿರಬಹುದು ಎಂದು ಬ್ಯಾಂಕ್ ಗಳು ಶಂಕೆ ವ್ಯಕ್ತಪಡಿಸಿವೆ.

    ಚುನಾವಣಾ ಸಂಧರ್ಭದಲ್ಲಿ ಈ ರೀತಿ ನೋಟುಗಳ ಕೊರತೆ ಉಂಟಾಗುತ್ತದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಕರ್ನಾಟಕ ಸೇರಿದಂತೆ ಹತ್ತಿರದ ರಾಜ್ಯಗಳಲ್ಲಿ ನೋಟುಗಳ ಬೇಡಿಕೆ ದಿಢೀರ್ ಏರಿಕೆಯಾಗಿರಬಹುದು ಎನ್ನುವ ಸಂದೇಹವನ್ನು ಬ್ಯಾಂಕ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿನ ನಗದು ಚಲಾವಣೆಯ ಸ್ಥಿತಿಯನ್ನು ಗಮನಿಸಿದ್ದೇನೆ. ಸಾಕಷ್ಟು ನಗದು ಹಣ ಚಲಾವಣೆಯಲ್ಲಿ ಇದೆ ಹಾಗೂ ಬ್ಯಾಂಕ್ ಗಳಲ್ಲೂ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಉಂಟಾಗಿದೆ. ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.