Tag: ಆರ್ ಬಿಐ

  • ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

    ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

    ಚಿಕ್ಕಬಳ್ಳಾಪುರ: ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಗಾಳ ಹಾಕಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡ್ತಿದ್ದ ಮಹಿಳೆಯ ಮನೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯ ನಿವಾಸಿ ಅರ್ಚನಾ ನಿವಾಸ ಹಾಗೂ ಈಕೆಯ ಬಾಡಿಗಾರ್ಡ್ ಪ್ರಶಾಂತ ನಗರದ ನಟ ಶಂಕರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 75,000 ರೂ. ನಗದು, ಚಿನ್ನಾಭರಣ ಹಾಗೂ ನಕಲಿ ದಾಖಲೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಚಿಕ್ಕಬಳ್ಳಾಪುರ ನಗರದ ನಿವಾಸಿಯಾದ ಅರ್ಚನಾ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ರೈಸ್ ಪುಲ್ಲಿಂಗ್ ರೆಡಿಯಾಕ್ಟರ್ ನ್ನ ಯುನೈಟೆಡ್ ಕಿಂಗಡಮ್ ನ ಕಾಸ್ಮೋಮೆಟಲ್ ಕಂಪನಿಗೆ ಮಾರಾಟ ಮಾಡಿದ್ದೇನೆ. ಆರು ಲಕ್ಷ 35 ಸಾವಿರ ಕೋಟಿ ರೂಪಾಯಿ ಹಣ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫಾರಿನ್ ಎಕ್ಸ್ ಚೆಂಜ್ ಗೆ ತನ್ನ ಹೆಸರಿಗೆ ಬಂದಿದೆ. ಆ ಹಣವನ್ನು ನಾನು ಪಡೆದುಕೊಳ್ಳಲು ಆರ್ ಬಿಐ ಗೆ 24 ಕೋಟಿ ಸೆಸ್ ಹಣವನ್ನ ಪಾವತಿಸಬೇಕು ಎಂದು ಸುಳ್ಳು ಹೇಳಿದ್ದಳು.

    ಸೆಸ್ ಹಣವನ್ನ ಪಾವತಿಸಲು ತಾವು ತಮಗೆ 2 ಕೋಟಿ ನೀಡಿ. ಆ ಹಣ ಬಂದ ಕೂಡಲೇ ಅದರಲ್ಲಿ ತಮಗೆ 10 ಕೋಟಿ ಹಣವನ್ನು 24 ಗಂಟೆಯಲ್ಲಿ ಕೊಡೋದಾಗಿ ಹೇಳಿ ಮೂಲತಃ ಹೈದರಾಬಾದ್ ಹಾಗೂ ಬೆಂಗಳೂರಿಗನಲ್ಲಿ ಬಿಲ್ಡರ್ ಆಗಿರುವ ವಂಶಿಕೃಷ್ಣ ಎಂಬವವರಿಗೆ ಕೇಳಿಕೊಂಡಿದ್ದಾಳೆ. ಇನ್ನೂ ಮುರುಳಿಕೃಷ್ಣ ಸಹ ತಾನು ಹೊಸ ಪ್ರಾಜೆಕ್ಟ್ ಗೆ ಹಣ ಬೇಕಾಗಿದೆ. 2 ಕೋಟಿ ಕೊಡ್ತೀನಿ ನೀವು ನನಗೆ ಆ ಹಣ ಬಂದ ಕೂಡಲೇ 10 ಕೋಟಿ ಕೊಡಿ ಅಂತ ಮಾತುಕತೆ ವೇಳೆ ಒಪ್ಪಿಕೊಂಡಿದ್ದಾನೆ. ಅದರಂತೆ ಈಕೆ ಮೊದಲೇ ಆರ್‍ಬಿಐ ಹೆಸರಲ್ಲಿ ನಕಲಿ ದಾಖಲೆಗಳನ್ನ ಸಿದ್ಧ ಮಾಡಿದ್ದಾಳೆ.

    ದಾಖಲೆಗಳು ನಿಜ ಅಂತ ನಂಬಿದ ವಂಶಿ ಕೃಷ್ಣ, 2 ಕೋಟಿ 2 ಲಕ್ಷ ಹಣವನ್ನ ಕಳೆದ ಆಗಸ್ಟ್ ನಲ್ಲಿ ಕೊಟ್ಟಿದ್ದಾನೆ. ಆದ್ರೆ ಅದಾದ ನಂತರ ವಂಶಿಕೃಷ್ಣ ನನ್ನ ಅವೈಡ್ ಮಾಡಿದ್ದಾಳೆ. ಆಗ ತಾನು ವಂಚನೆಗೆ ಓಳಗಾಗ್ತಿದ್ದನ್ನ ಅಂತ ತಿಳಿದು ವಂಶಿಕೃಷ್ಣ ಹಣಕ್ಕೆ ಪಟ್ಟು ಹಿಡಿದಿದ್ದಾನೆ. ಈ ವೇಳೆ ಬಾಡಿಗಾರ್ಡ್ ನಟ ಶಂಕರ್ ಕೈಯಲ್ಲಿ ಧಮ್ಕಿ ಬೆದರಿಕೆ ಹಾಕಿಸಿದ್ದಾಳೆ. ಕೊನೆಗೆ ರೋಸಿ ಹೋದ ವಂಶಿಕೃಷ್ಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನಿನ್ನೆ ದೂರು ನೀಡಿದ್ದಾನೆ. ದೂರಿನನ್ವಯ ಇಂದು ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ವಂಚಕಿ ಅರ್ಚನಾ ಹಾಗೂ ನಟ ಶಂಕರ್ ಮನೆ ಮೇಲೆ ದಾಳಿ ನಡೆಸಲಾಗಿದೆ.

    ಸದ್ಯ ಎ 1 ಆರೋಪಿ ಈ ವಂಚಕಿ ಅರ್ಚನಾ ಕೋವಿಡ್ ಪಾಸಿಟಿವ್ ಆಗಿ ಕಳೆದ 4 ದಿನಗಳ ಹಿಂದೆಯೇ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾಳೆ. ಹೀಗಾಗಿ ಆಸ್ಪತ್ರೆ ಬಳಿ ಈಕೆ ಪರಾರಿಯಾಗಬಾರದು ಅಂತ ಪೊಲೀಸರಿನ್ನ ನಿಯೋಜಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕರ್, ಅರ್ಚನಾ ತಮ್ಮ ಶ್ರೀ ಹರಿ ಹಾಗೂ ಸಂಬಂಧಿ ಶ್ರೀಪತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಇನ್ನೂ ಈ ವಂಚಕಿ ಅರ್ಚನಾ ಕೇವಲ ವಂಶಿ ಕೃಷ್ಣ ಮಾತ್ರವಲ್ಲ ಇದೇ ರೀತಿ ಹಲವು ಪ್ರತಿಷ್ಟಿತ ಉದ್ಯಮಿಗಳು, ಶ್ರೀಮಂತರು, ವಕೀಲರು, ಚಾರ್ಟೆಂಡ್ ಅಕೌಂಟೆಂಟ್ ಗೂ ಸಹ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ವಂಶಿ ಕೃಷ್ಣ ಮಾತ್ರ ಈಕೆ ವಿರುದ್ಧ ದೂರು ದಾಖಲಿಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 420, 468, 471, 506, 120 ಜೊತೆ ಐಪಿಸಿ 34 ಆಕ್ಟ್ ನಡಿ ದೂರು ದಾಖಲಾಗಿದೆ.

  • ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ – ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂಕೋರ್ಟ್

    ನವದೆಹಲಿ: ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದ್ದು, ಇದು ಕೊನೆಯ ಅವಕಾಶ ಎಂದು ಹೇಳಿದೆ.

    ಇಂದು ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಇನ್ನೂ ಎರಡು ವಾರಗಳಲ್ಲಿ ಏನಾಗುತ್ತದೆ ಎಂದು ಕಾದುನೋಡಲು ನಾವು ಕೇಂದ್ರಕ್ಕೆ ಸಮಯ ನೀಡುತ್ತಿದ್ದೇವೆ. ಕೇಂದ್ರ ಹಾಗೂ ಆರ್‍ ಬಿಐ ಸೂಕ್ತ ಯೋಜನೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಸಿದೆ.

    ಇಂದು ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಎರಡರಿಂದ ಮೂರು ಸುತ್ತುಗಳ ಸಭೆಗಳನ್ನು ನಡೆಸಲಾಗಿದೆ. ಸಾಲ ಮರು ಪಾವತಿ ಅಂತಿಮ ದಿನಾಂಕದ ಬಗ್ಗೆ ಗೊಂದಲಗಳು ವ್ಯಕ್ತವಾಗಿದೆ. ಅದನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

    ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್, ಮುಂದಿನ ಹಂತಗಳಲ್ಲಿ ವಿಚಾರಣೆ ಮುಂದೂಡುವುದಿಲ್ಲ. ಕೇಂದ್ರ ಮತ್ತು ಆರ್ ಬಿಐ ಸಲಹೆ ಆಧರಿಸಿ ಸೂಕ್ತ ಆದೇಶವನ್ನು ನೀಡಲಿದ್ದೇವೆ ಎಂದು ಪೀಠ ಹೇಳಿದೆ.

    ಲಾಕ್‍ಡೌನ್ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿಯ ಮೇಲಿನ ಬಡ್ಡಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಸಾಲ ಮರುಪಾವತಿಗೆ ಅಗಸ್ಟ್ 31 ಕ್ಕೆ ಆರ್‍ಬಿಐ ನೀಡಿದ್ದ ವಿನಾಯಿತಿ ಮುಕ್ತಾಯವಾಗಿದ್ದು, ಆರ್ಥಿಕ ಸಂಕಷ್ಟದ ನಡುವೆ ಸಾಲ ಮರು ಪಾವತಿ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ.

  • 12 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್

    12 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್

    ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಬ್ಯಾಂಕಿನ ಸಭಾಂಗಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತಮ ವಹಿವಾಟು ನಡೆಸುವ ಮೂಲಕ ಬ್ಯಾಂಕ್ ನಿರಂತರವಾಗಿ ಲಾಭದಲ್ಲಿದೆ. ಈ ವರ್ಷ ಸಹ ಉತ್ತಮ ಲಾಭ ಗಳಿಕೆ ನಿರೀಕ್ಷೆಯಲ್ಲಿದ್ದೇವೆ ಎಂದರು.

    2020-21ನೇ ಆರ್ಥಿಕ ವರ್ಷದಿಂದ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಬ್ಯಾಂಕಿನ ಠೇವಣಿ ಪ್ರಸ್ತುತ 850 ಕೋಟಿ ರೂ.ಗಳಿದ್ದು ಇನ್ನು ಮೂರು ತಿಂಗಳಲ್ಲಿ ಅದನ್ನು 150 ಕೋಟಿ ರೂ. ಹೆಚ್ಚಿಸುವ ಮೂಲಕ 1 ಸಾವಿರ ಕೋಟಿ ರೂ.ಗಳಿಗೆ ತಲುಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಆರ್ ಬಿಐ ನಿಯಮಗಳ ಅನ್ವಯ ಶೆಡ್ಯೂಲ್ಡ್ ಬ್ಯಾಂಕಿನ ಅರ್ಹತೆ ಪಡೆದುಕೊಳ್ಳಲು ಕನಿಷ್ಠ ಠೇವಣಿ 1 ಸಾವಿರ ಕೋಟಿ ರೂ. ಇರಬೇಕು. ಇನ್ನು ಮೂರು ತಿಂಗಳಲ್ಲಿ ಆ ಗುರಿ ತಲುಪುವ ವಿಶ್ವಾಸವಿದೆ ಎಂದರು.

    ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿದ ಬಳಿಕ ವಾಣಿಜ್ಯ ಬ್ಯಾಂಕುಗಳಂತೆ ವಾಣಿಜ್ಯ ಉದ್ದೇಶಗಳಿಗೆ ಅಧಿಕ ಮೊತ್ತದ ಸಾಲ ಒದಗಿಸುವ ಅವಕಾಶ ಇರುತ್ತದೆ. ಡಿಸಿಸಿ ಬ್ಯಾಂಕಿನ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.

  • ಬಂಧನ್ ಬ್ಯಾಂಕಿಗೆ ಬಿತ್ತು 1 ಕೋಟಿ ರೂ. ದಂಡ

    ಬಂಧನ್ ಬ್ಯಾಂಕಿಗೆ ಬಿತ್ತು 1 ಕೋಟಿ ರೂ. ದಂಡ

    ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಲೈಸೆನ್ಸ್ ನಿಯಮಾವಳಿ ಉಲ್ಲಂಘಿಸಿದ್ದಕ್ಕೆ ಬಂಧನ್ ಬ್ಯಾಂಕಿಗೆ 1 ಕೋಟಿ ರೂ. ದಂಡವನ್ನು ಹಾಕಿದೆ.

    2014ರಲ್ಲಿ ಬಂಧನ್ ಬ್ಯಾಂಕಿಗೆ ಆರ್ ಬಿಐ ಸಾಮಾನ್ಯ ಬ್ಯಾಂಕಿಂಗ್ ಲೈಸೆನ್ಸ್ ನೀಡಿತ್ತು. 2015 ಆಗಸ್ಟ್ ನಲ್ಲಿ ಪೂರ್ಣ ರೂಪದಲ್ಲಿ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಬಂಧನ್ ಬ್ಯಾಂಕ್ ತೊಡಗಿಕೊಂಡಿತ್ತು. ಆರ್ ಬಿಐ ಲೈಸೆನ್ಸ್ ನಿಯಮಾವಳಿಗಳ ಪ್ರಕಾರ, ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದ ಮೊದಲ ಮೂರು ವರ್ಷ ಪ್ರಮೋಟರ್ ಗಳ ಪಾಲುದಾರಿಕೆ ಶೇ.40ಕ್ಕಿಂತ ಕಡಿಮೆ ಇರಬೇಕಿತ್ತು.

    ಆಗಸ್ಟ್ 2018ರವರೆಗೆ ಬಂಧನ್ ಬ್ಯಾಂಕ್ ಪ್ರಮೋಟರ್ ಪಾಲುದಾರಿಕೆಯನ್ನು ಶೇ.40ಕ್ಕಿಂತ ಕಡಿಮೆ ಕಾಯ್ದುಕೊಳ್ಳಬೇಕಿತ್ತು. ಆದರೆ ಬಂಧನ್ ಬ್ಯಾಂಕಿನ ಪ್ರಮೋಟರ್ ಪಾಲು ಶೇ.82ರಷ್ಟಿತ್ತು. ಇತ್ತೀಚೆಗೆ ಬ್ಯಾಂಕ್ ಹೋಮ್ ಫೈನಾನ್ಸ್ ಜೊತೆ ಮರ್ಜ್ ಆಗಿದೆ. ವಿಲೀನ ಬಳಿಕ ಪ್ರಮೋಟರ್ ಶೇರುಗಳ ಪಾಲುದಾರಿಕೆ ಶೇ.82.26 ರಿಂದ ಶೇ.60.96ಕ್ಕೆ ಇಳಿದಿದೆ. ಆರ್ ಬಿಐ ಲೈಸೆನ್ಸ್ ನಿಯಮಗಳ ಪ್ರಕಾರ ಪ್ರಮೋಟರ್ ಪಾಲುದಾರಿಕೆ ಶೇ.40ಕ್ಕಿಂತ ಹೆಚ್ಚಿದೆ.

    ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪುಣೆಯ ಜನತಾ ಸಹಕಾರಿ ಬ್ಯಾಂಕಿಗೆ 1 ಕೋಟಿ ರೂ. ಮತ್ತು ಜಲಗಾಂವ್ ಪೀಪಲ್ಸ್ ಸಹಕಾರಿ ಬ್ಯಾಂಕಿಗೆ 25 ಲಕ್ಷ ರೂ. ದಂಡ ವಿಧಿಸಿದೆ. ತಮಿಳುನಾಡಿನ ಮರ್ಕನ್‍ಟಾಯಿಲ್ ಬ್ಯಾಂಕಿಗೂ ಸಹ ಆರ್ ಬಿಐ 35 ಲಕ್ಷ ರೂ. ದಂಡ ವಿಧಿಸಿದೆ. ಕ್ಲಾಸಿಫಿಕೇಶನ್ ಮತ್ತು ನೋಟಿಫಿಕೇಶನ್ ನಿಯಮಗಳ ಉಲ್ಲಂಘಿಸಿದ್ದಕ್ಕೆ ಆರ್‍ಬಿಐ ದಂಡ ವಿಧಿಸಿದೆ.

  • ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    – ಎಲ್ಲ ಅವಧಿಯ ಎಂಸಿಎಲ್‍ಆರ್ ದರ ಕಡಿತ
    – ಸೆ.10 ರಿಂದ ಎಲ್ಲ ದರ ಅನ್ವಯ

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಸಾಲ ಪಡೆದ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ (ಎಂಸಿಎಲ್‍ಆರ್) 10 ಬೇಸಿಸ್ ಪಾಯಿಂಟ್ (ಬಿಪಿಎಸ್) ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿದೆ. (1 ಬೇಸಿಸ್ ಪಾಯಿಂಟ್=0.01%)

    ಬಿಪಿಎಸ್ ಕಡಿತಗೊಂಡ ಪರಿಣಾಮ ಒಂದು ವರ್ಷದ ಅವಧಿಯ ಎಂಸಿಎಲ್‍ಆರ್ 8.25% ರಿಂದ 8.15% ಕ್ಕೆ ಇಳಿಕೆಯಾಗಲಿದೆ. 2019-20ರ ಅರ್ಥಿಕ ವರ್ಷದಲ್ಲಿ ಎಸ್‍ಬಿಐ ಐದನೇ ಬಾರಿ ಎಂಸಿಎಲ್‍ಆರ್ ಕಡಿತಗೊಳಿಸಿದೆ. ಆಗಸ್ಟ್ ನಲ್ಲಿ ಆರ್ ಬಿಐ ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಬ್ಯಾಂಕುಗಳ ಎಂಸಿಎಲ್‍ಆರ್ ಎರಡನೇ ಬಾರಿ ಕಡಿತಗೊಳಿಸಿತ್ತು. ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಆರ್ ಬಿಐ 15 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದಾಗ, ಹೊಸ ನಿಯಮ ಆಗಸ್ಟ್ 10ರಿಂದ ಅನ್ವಯವಾಗಿತ್ತು. ಈಗ ಸೆಪ್ಟೆಂಬರ್ ನಲ್ಲಿ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

    ಕೇವಲ ಎಸ್‍ಬಿಐ ಅಲ್ಲದೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಐಡಿಬಿಐ ಮತ್ತು ಐಡಿಎಫ್‍ಸಿ ಬ್ಯಾಂಕುಗಳು ಸಹ ಎಂಸಿಎಲ್‍ಅರ್ ಕಡಿತಗೊಳಿಸಿವೆ.

    ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರ್ ಬಿಐ ರಿಪೋ ದರದಲ್ಲಿ 110 ಬೇಸಿಸ್ ಪಾಯಿಂಟ್ ಅಂದ್ರೆ 1.10% ರಷ್ಟು ಕಡಿತ ಮಾಡಿದೆ. ಆದರೆ ಬ್ಯಾಂಕುಗಳು ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಿರಲಿಲ್ಲ. ಸತತವಾಗಿ ಕೇಂದ್ರ ಬ್ಯಾಂಕ್ ಎಲ್ಲ ರಿಪೋ ದರ ಕಡಿತಗೊಳಿಸುತ್ತಾ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದಲೇ ಹೊಸ ಮಾನದಂಡಗಳನ್ನು ಬ್ಯಾಂಕುಗಳು ಅಳವಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿತ್ತು.

    ಎಂಸಿಎಲ್‍ಆರ್ ಕಡಿತದಿಂದಾಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಮತ್ತೊಂದು ಕಡೆ ನಿಶ್ಚಿಯ ಠೇವಣಿ (ಫಿಕ್ಸಡ್ ಡೆಪಾಸಿಟ್) ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸುವಂತೆ ಆದೇಶಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20 ಬಿಪಿಎಸ್ ಕಡಿತಗೊಳಿಸಲಾಗಿದೆ. ಎಲ್ಲ ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿವೆ.

  • ಪತ್ನಿಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ: ರಘುರಾಂ ರಾಜನ್

    ಪತ್ನಿಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ: ರಘುರಾಂ ರಾಜನ್

    ಚೆನ್ನೈ: ನಾನು ಪತ್ನಿಯಿಂದಾಗಿ ರಾಜಕಾರಣಕ್ಕೆ ಬಂದಿಲ್ಲ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಸಂದರ್ಶನದಲ್ಲಿ ಹೇಳಿದ್ದಾರೆ.

    ಚೆನ್ನೈಗೆ ಆಗಮಿಸಿದ್ದ ರಘುರಾಂ ರಾಜನ್ ಅವರನ್ನು ಮಾಧ್ಯಮವೊಂದು ಸಂದರ್ಶನ ಮಾಡಿತ್ತು. ಸಂದರ್ಶನದಲ್ಲಿ ಮುಗುಳ್ನಗುತ್ತಲೇ ಪತ್ನಿಯಿಂದಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋದ್ರೆ ನನ್ನನ್ನು ಬಿಟ್ಟು ಹೋಗ್ತೀನಿ ಅಂತಾ  ಪತ್ನಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದರು.

    ಈ ವೇಳೆ ರಾಜಕೀಯ ನಿಮ್ಮ ಶೈಲಿ ಅಲ್ಲವೇ ಎಂದು ಕೇಳಿದಾಗ, ರಾಜಕೀಯ ಎಲ್ಲ ಕಡೆಯೂ ಒಂದೇ ಆಗಿದೆ. ಕೇವಲ ಭಾಷಣ ಮಾಡಿ ಮತ ಕೇಳುವುದು ನನ್ನ ಶೈಲಿ ಅಲ್ಲ. ಒಂದು ವೇಳೆ ದೇಶಕ್ಕೆ ನನ್ನ ಅಗತ್ಯವಿದ್ರೆ ಖಂಡಿತಾ ಕೆಲಸ ಮಾಡುತ್ತೇನೆ. ದೇಶಕ್ಕಾಗಿ ಕೆಲಸ ಮಾಡುವುದರಿಂದ ಒಂದು ರೀತಿಯ ಖುಷಿ ಸಿಗುತ್ತದೆ. ಕೆಲವರು ನನ್ನ ಬಳಿ ಸಲಹೆ ಕೇಳಿದಾಗ ಖುಷಿ ಆಗುತ್ತದೆ ಎಂದರು.

    ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಮಂತ್ರಿ ಆಗುತ್ತೀರಿ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದು ನಿಜವೇ ಎಂದು ಪ್ರಶ್ನೆ ಮಾಡಲಾಗಿತ್ತು. ಕಲಿಸುವುದು (ಟೀಚಿಂಗ್) ನನ್ನ ಪ್ರಾಥಮಿಕ ಕೆಲಸ. ಇದೇ ಕೆಲಸ ನನಗೆ ಅಚ್ಚು ಮೆಚ್ಚು. ಕೆಲವು ದಿನಗಳ ಹಿಂದೆ ನಾನು ಬರೆದ ಪುಸ್ತಕ ‘ದ ಥರ್ಡ್ ಪಿಲ್ಲರ್’ ಪ್ರಕಟಗೊಂಡಿದೆ. ಈಗ ಎಲ್ಲಿದ್ದೇನೋ ಅಲ್ಲಿ ಖುಷಿಯಾಗಿದ್ದೇನೆ ಅಂತಾ ಹೇಳುವ ಮೂಲಕ ಮಂತ್ರಿ ಆಗಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

    ದೇಶದಲ್ಲಿ ಹೊಸ ಸರ್ಕಾರ ರಚನೆಗೊಂಡಾಗ ಅಥವಾ ಹಳೆಯ ಸರ್ಕಾರವೇ ಪುನರ್ ರಚನೆಯಾದಾಗ ಮೊದಲಿಗೆ ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ವಿಚಾರ ಮಾಡಬೇಕು. ನಿರುದ್ಯೋಗ ಸಮಸ್ಯೆ ಕೇವಲ ಭಾರತದಲ್ಲಿ ಮಾತ್ರ ಇಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿವೆ. ದೇಶ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವು ವಿಧಾನಗಳು ನಮ್ಮೆಲ್ಲರ ಮುಂದಿವೆ. ಈ ಕುರಿತಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆಯಬೇಕಿದೆ. ಆದ್ರೆ ಈ ರೀತಿಯ ಸಂಶೋಧನೆಗಳು ನಡೆಯುತ್ತಿರೋದು ಮಾತ್ರ ನನಗೆ ಕಾಣಿಸುತ್ತಿಲ್ಲ ಎಂದು ರಘುರಾಂ ರಾಜನ್ ಬೇಸರ ವ್ಯಕ್ತಪಡಿಸಿದರು.

    ಕೊನೆಯದಾಗಿ ಪತ್ನಿ ಬಗ್ಗೆ ಹೇಳಿ ಎಂದಾಗ, ನನ್ನ ಪತ್ನಿಯ ಹೆಸರು ರಾಧಿಕಾ ರಾಜನ್, ರಾಧಿಕಾ ಓರ್ವ ಹೆಚ್ಚು ಓದಿದ ಮಹಿಳೆಯಾಗಿದ್ದಾರೆ. ದೆಹಲಿಯ ಐಐಟಿಯಲ್ಲಿ ಬಿಟೆಕ್, ಅಹಮದಾಬಾದ್‍ ಐಐಎಂ ನಿಂದ ಪಿಜಿಡಿಬಿಎಂ ಮತ್ತು ಎಂಐಟಿ ಸೊಲನ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ನಿಂದ ಪಿಎಚ್‍ಡಿ ಪಡೆದಿದ್ದಾರೆ ಎಂದು ತಿಳಿಸಿದರು.

  • ಹೊಸ 20 ರೂ. ನೋಟು ಪರಿಚಯಿಸಿದ ಆರ್‌ಬಿಐ

    ಹೊಸ 20 ರೂ. ನೋಟು ಪರಿಚಯಿಸಿದ ಆರ್‌ಬಿಐ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ಮುಖಬೆಲೆಯ ಹೊಸ ನೋಟಿನ ಮಾದರಿಯನ್ನು ಪರಿಚಯಿಸಿದೆ. ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ನೋಟ್ ಹೊಂದಿದ್ದು, ಹೊಸ ಸಿರೀಸ್ ಜೊತೆಗೆ ಗರ್ವನರ್ ಶಕ್ತಿಕಾಂತ್ ದಾಸ್ ಅವರ ಸಹಿಯನ್ನು ಹೊಂದಿರಲಿದೆ.

    20 ರೂ. ಮುಖಬೆಲೆಯ ಹೊಸ ನೋಟು ಹಸಿರು ಮತ್ತು ಹಳದಿ ಮಿಶ್ರಣದ ಬಣ್ಣವನ್ನು ಹೊಂದಿರಲಿದೆ. ನೋಟು ಹಿಂಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲೋರ ಗುಹಾಲಯ ಚಿತ್ರ ಹೊಂದಿರಲಿದೆ. ಹೊಸ ನೋಟುಗಳ ಜೊತೆಗೆ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಹೊಸ ನೋಟು 63 ಮಿ.ಮಿ*129 ಮಿಮಿ ಅಳತೆ ಹೊಂದಿದೆ.

    ನೋಟಿನ ಮುಂಭಾಗ ಹೀಗಿರಲಿದೆ.
    1. 20 ರೂ. ಎಂದು ಆಂಗ್ಲ ಭಾಷೆಯ ನಂಬರ್ ಇರಲಿದೆ.
    2. ದೇವನಾಗರಿ ಲಿಪಿಯಲ್ಲಿ 20 ರೂ. ಬರೆಯಲಾಗಿದೆ.
    3. ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರ ಇರಲಿದೆ.
    4. ಮೈಕ್ರೋ ಲಿಪಿಯಲ್ಲಿ RBI’, ‘भारत’, ‘INDIA’ ಮತ್ತು ’20’ ಇರಲಿದೆ.
    5. ಸುರಕ್ಷಾ ದಾರದಲ್ಲಿ ‘भारत’ ಮತ್ತು RBI
    6. ಗ್ಯಾರಂಟಿ ಕ್ಲೌಸ್ ಮತ್ತು ಗರ್ವನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರ
    7. ನೋಟಿನ ಎಡಭಾಗದಲ್ಲಿ ಅಶೋಕ ಸ್ತಂಭದ ಚಿತ್ರ

    ನೋಟಿನ ಹಿಂಭಾಗ ಹೀಗಿರಲಿದೆ
    1. ಎಡಭಾಗದಲ್ಲಿ ನೋಟು ಮುದ್ರಣಗೊಂಡ ವರ್ಷ ಮೇಲುಗಡೆ ಆಂಗ್ಲ ಅಂಕಿಯಲ್ಲಿ 20 ರೂ.
    2. ಎಡಭಾಗದ ಕೆಳಗಡೆ ಸ್ವಚ್ಛ ಭಾರತ್ ಘೋಷಣೆ ಮತ್ತು ಚಿಹ್ನೆ
    3. ಮಧ್ಯಭಾಗದಲ್ಲಿ ಭಾಷೆಗಳ ಪಟ್ಟಿ
    4. ಭಾಷೆಗಳ ಪಟ್ಟಿಯ ಬಲಭಾದಲ್ಲಿ ಎಲ್ಲೋರ ಗುಹಾಲಯ ಚಿತ್ರ
    5. ನೋಟಿನ ಬಲಭಾಗದ ಮೇಲುಗಡೆ ದೇವನಾಗರಿ ಲಿಪಿಯಲ್ಲಿ 20 ರೂ. ಮತ್ತು ಕೆಳಭಾಗದಲ್ಲಿ ಆಂಗ್ಲ ಅಂಕಿ 20 ರೂ. ಎಂದು ಇರಲಿದೆ.

    2016ರಲ್ಲಿ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ಬಳಿಕ ಹೊಸ 500, 2 ಸಾವಿರ, 200, 100, 50 ರೂ. ಗಳನ್ನು ಪರಿಚಯಿಸಲಾಗಿತ್ತು. ಇದೀಗ 20 ರೂ. ನೋಟುಗಳ ಮಾದರಿಯನ್ನು ಆರ್ ಬಿಐ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ.

  • ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ನವದೆಹಲಿ: ಶೀಘ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 200 ಮತ್ತು 500 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದೆ.

    ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಈ ನೋಟ್ ನಲ್ಲಿ ಇರಲಿದೆ. ಶಕ್ತಿಕಾಂತ್ ದಾಸ್ ಅವರ ಸಹಿ, ಸೀರಿಸ್ ಹೊರತುಪಡಿಸಿ ಸದ್ಯ ಚಾಲ್ತಿಯಲ್ಲಿರುವ ನೋಟ್ ಗಳಿಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರ್ ಬಿಐ ತಿಳಿಸಿದೆ.

    ಹೊಸ ನೋಟುಗಳು ಬಿಡುಗಡೆಯಾದ ಬಳಿಕವೂ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಆದರೆ ಆರ್ ಬಿಐ ಈ ಹೊಸ ನೋಟುಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ವಿಚಾರವನ್ನು ಪ್ರಕಟಿಸಿಲ್ಲ.

  • RBI ಅನುಮೋದನೆಗೂ ಮೊದಲೇ ಮೋದಿಯಿಂದ ನೋಟ್ ನಿಷೇಧ ಘೋಷಣೆ

    RBI ಅನುಮೋದನೆಗೂ ಮೊದಲೇ ಮೋದಿಯಿಂದ ನೋಟ್ ನಿಷೇಧ ಘೋಷಣೆ

    – ನೋಟು ನಿಷೇಧ ನಿರ್ಧಾರದ ಬಗ್ಗೆ RTI ಅಡಿ ಪ್ರಶ್ನೆ

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕರ ಅನುಮೋದನೆ ಪಡೆಯದೇ ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ನಿಷೇಧಿಸುವ ಘೋಷಣೆ ಪ್ರಕಟಿಸಿದ್ದರು ಎನ್ನುವ ವಿಚಾರ ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.

    ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ಮಂಡಳಿ ಸಭೆಯ ಮಾಹಿತಿ ನೀಡಬೇಕೆಂದು ವೆಂಕಟೇಶ್ ನಾಯಕ್ ಎಂಬವರು ಅರ್ ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಆರ್ ಬಿಐ ಎಲ್ಲ ಮಾಹಿತಿಗಳನ್ನು ನೀಡಲು ನಿರಾಕರಿಸಿತ್ತು. ಇದೀಗ ಸಭೆಯ ಎಲ್ಲ ಮಾಹಿತಿಗಳನ್ನು ಆರ್ ಬಿಐ ನೀಡಿದೆ.

    2016 ನವೆಂಬರ್ 8ರಂದು ಸಂಜೆ 5.30ಕ್ಕೆ ನೋಟ್ ನಿಷೇಧ ಘೋಷಣೆಗೆ ಸಂಬಂಧಿಸಿದಂತೆ ಆರ್ ಬಿಐ ನಿರ್ದೇಶಕ ಮಂಡಳಿಯ ಸಭೆಯ ಕರೆಯಲಾಗಿತ್ತು. ಸಭೆಯಲ್ಲಿ ಕೆಲ ನಿರ್ದೇಶಕರು ಈ ನಿರ್ಧಾರ ವಿರೋಧಿಸಿ, ಹೆಚ್ಚಿನ ಕಪ್ಪುಹಣ ನಗದು ರೂಪದಲ್ಲಿ ಶೇಖರಣೆ ಆಗಿಲ್ಲ. ಬಹುತೇಕ ಕಪ್ಪು ಹಣ ರಿಯಲ್ ಎಸ್ಟೇಟ್, ಚಿನ್ನ, ಬೇನಾಮಿ ಆಸ್ತಿಗಳಲ್ಲಿದೆ. ಹಾಗಾಗಿ ನೋಟ್ ಬ್ಯಾನ್ ನಿಂದ ಕಪ್ಪು ಹಣದ ನಿಯಂತ್ರಣ ಅಸಾಧ್ಯ ಎಂದು ಹೇಳಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರ ಅನುಮೋದನೆ ಪಡೆಯದೇ ನರೇಂದ್ರ ಮೋದಿ ರಾತ್ರಿ 8 ಗಂಟೆಗೆ ನೋಟು ನಿಷೇಧದ ನಿರ್ಧಾರ ಪ್ರಕಟಿಸಿದ್ದಾರೆ ಎನ್ನುವ ವಿಚಾರ ಆರ್ ಟಿಐ ಅಡಿ ಬೆಳಕಿಗೆ ಬಂದಿದೆ.

    500 ಮತ್ತು 1000 ರೂ. ಮುಖಬೆಲೆಯ ನೋಟ್‍ಗಳ ನಿಷೇಧದಿಂದಾಗಿ ಕಪ್ಪುಹಣದ ನಿಯಂತ್ರಣ, ಇ-ಪೇಮೆಂಟ್ ವ್ಯವಹಾರ ವೃದ್ಧಿಯಾಗಲಿದೆ. ಜನರಿಗೆ ಆನ್‍ಲೈನ್ ಮೂಲಕ ವ್ಯವಹಾರಗಳು ನಡೆಸಲು ನೋಟ್ ಬ್ಯಾನ್ ನಾಂದಿಯಾಗಲಿದೆ. 2011-12 ರಿಂದ 2015-16ರವರೆಗೆ ದೇಶದ ಅರ್ಥವ್ಯವಸ್ಥೆ ಶೇ.30 ರಷ್ಟು ಏರಿಕೆ ಕಂಡಿದೆ. ಇತ್ತ 500 ರೂ. ಮೌಲ್ಯದ ನೋಟುಗಳು ಶೇ.76 ಮತ್ತು 1 ಸಾವಿರ ಮೌಲ್ಯದ ನೋಟು ಶೇ.109ರಷ್ಟು ಹೆಚ್ಚಾಗಿವೆ ಎಂದು ಸರ್ಕಾರ ವಾದಿಸಿತ್ತು.

    ಹೆಚ್ಚಿನ ಮೌಲ್ಯದ ನೋಟುಗಳ ಚಲಾವಣೆಯನ್ನು ತಗ್ಗಿಸಿ ಕಪ್ಪು ಹಣವನ್ನು ನಿಯಂತ್ರಿಸಿ ಆರ್ಥಿಕ ಅಭಿವೃದ್ಧಿ ವಿಚಾರದ ಸರ್ಕಾರದ ಪ್ರಸ್ತಾವನೆಯನ್ನು ಆರ್ ಬಿಐ ಒಪ್ಪಿರಲಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ನೋಟು ನಿಷೇಧಕ್ಕೂ ಮೊದಲು ಹಣಕಾಸು ಸಚಿವಾಲಯ ಮತ್ತು ಆರು ತಿಂಗಳ ಕಾಲ ಚರ್ಚೆ ನಡೆಸಿತ್ತು. ಕೇಂದ್ರದ ಕೆಲ ಪ್ರಸ್ತಾಪಗಳಿಗೆ ಸಮ್ಮತಿ ಸೂಚಿಸದೇ ಇದ್ದರೂ ಆರ್ ಬಿಐ ನೋಟ್ ನಿಷೇಧಕ್ಕೆ ಹಸಿರು ನಿಶಾನೆ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್ ಬ್ಯಾನ್ ಮಾಡಲಾಗಿತ್ತು: ಶಿವಸೇನೆ

    ಮುಂಬೈ: ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ಮೋದಿ ಹೇಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಮೋದಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ನೋಟ್‍ಬ್ಯಾನ್ ಮಾಡಿದ್ದರು ಎಂದು ಬಿಜೆಪಿ ವಿರುದ್ಧ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ.

    ನೋಟ್ ಬ್ಯಾನ್ ಬಳಿಕ ಶೇ.99.3ರಷ್ಟು ಹಳೆಯ ನೋಟುಗಳು ವಾಪಾಸ್ಸಾಗಿವೆ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ದಾರಿ ತಪ್ಪಲು ಕಾರಣವಾಗಿದೆ. ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯಲ್ಲಿ ಕುಸಿಯುತ್ತಿದೆ. ಅಂದು ನೋಟ್ ಬ್ಯಾನ್ ನಿಂದಾಗಿ ಸುಮಾರು 100 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.

    ಇಂದಿನ ದೇಶದ ಆರ್ಥಿಕ ಪರಿಸ್ಥಿತಿಗೆ ಪ್ರಧಾನಿ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನೋಟು ಅಮಾನ್ಯೀಕರಣದ ವಿಫಲ ಯತ್ನಕ್ಕೆ ಯಾವ ರೀತಿಯಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದೆ. ಕೇವಲ ಪ್ರಚಾರಕ್ಕಾಗಿ ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಟೀಕಿಸಿದೆ.

     

    500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣದ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ, ನನಗೆ 50 (ಡಿಸೆಂಬರ್ 30, 2018ವರೆಗೆ) ದಿನಗಳ ಅವಕಾಶ ನೀಡಿ. ಒಂದು ವೇಳೆ ನಾನು ತೆಗೆದುಕೊಂಡಿರುವ ಈ ನಿರ್ಧಾರ ತಪ್ಪಾಗಿದ್ದರೆ, ನೀವು ನೀಡುವ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಯನ್ನಾಧರಿಸಿ ಶಿವಸೇನೆ ನಿಮ್ಮ ತಪ್ಪಿಗೆ ಪ್ರಾಯಶ್ಚಿತವೇನು ಎಂದು ವ್ಯಂಗ್ಯ ಮಾಡಿದೆ.

    ಅರುಣ್ ಜೇಟ್ಲಿ ತಿರುಗೇಟು:
    ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಗೊಳಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಈ ಕ್ರಮದಿಂದ ಇಂದು ದೇಶದ ಆರ್ಥಿಕತೆ ಸುಗಮವಾಗಿ ನಡೆಯಲು ಸಹಾಯಕವಾಗಿದೆ. ಅಲ್ಲದೇ ದಾಖಲೆಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ನೋಟು ಅಮಾನ್ಯೀಕರಣದ ಮೊದಲು 2 ವರ್ಷಗಳಲ್ಲಿ ತೆರಿಗೆ ಸಂಗ್ರಹ ಕೇವಲ ಶೇ.6.6 ರಿಂದ ಶೇ.9 ರಷ್ಟಿತ್ತು. ನೋಟು ನಿಷೇಧದ ಬಳಿಕ ಇದರ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2014 ರಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದವರ ಸಂಖ್ಯೆ ಕೇವಲ 3.8 ಕೋಟಿಯಷ್ಟಿತ್ತು, ಸದ್ಯ 2017-18ನೇ ಸಾಲಿನಲ್ಲಿ 6.86 ಕೋಟಿ ಗ್ರಾಹಕರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಟೀಕಾಕಾರಿಗೆ ಉತ್ತರಿಸಿದ್ದಾರೆ.

    ನೋಟು ಅಮಾನ್ಯೀಕರಣದಿಂದಾಗಿ 2016ರ ನವೆಂಬರ್ 8 ರವರೆಗು ಚಲಾವಣೆಯಲ್ಲಿದ್ದ 500 ಹಾಗೂ 1,000 ಮುಖಬೆಲೆಯ 15.41 ಲಕ್ಷ ಕೋಟಿ ರೂಪಾಯಿಗಳ ಪೈಕಿ 15.31 ಲಕ್ಷ ಕೋಟಿ ರೂಪಾಯಿಗಳು ಭಾರತೀಯ ರಿಸರ್ವ್ ಬ್ಯಾಂಕಿಗೆ ಜಮೆಯಾಗಿದೆ.

    ಹೊಸ ನೋಟುಗಳ ಮುದ್ರಣದ ವೆಚ್ಚ:
    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‍ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‍ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್ ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv