Tag: ಆರ್ ಟಿಐ

  • ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥ – RTIನಲ್ಲಿ ಬಹಿರಂಗ

    ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥ – RTIನಲ್ಲಿ ಬಹಿರಂಗ

    – ಯಾವ ರಾಜ್ಯದಲ್ಲಿ ಎಷ್ಟು ವ್ಯರ್ಥ?

    ನವದೆಹಲಿ: ದೇಶದಲ್ಲಿ ಕೊರೊನಾ ಹರಡುವಿಕೆ ವೇಗ ಪಡೆದುಕೊಳ್ಳುತ್ತಿದ್ರೆ, ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ. ಈ ನಡುವೆ ದೇಶದಲ್ಲಿ ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥವಾಗಿದೆ ಎಂದು ಆರ್ ಟಿಐ ನಲ್ಲಿ ಬಹಿರಂಗಗೊಂಡಿದೆ.

    ಯಾವ ರಾಜ್ಯದಲ್ಲಿ ಎಷ್ಟು?:
    ಆರ್ ಟಿಐ ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಶೇ.12.10ರಷ್ಟು ಡೋಸ್ ಲಸಿಕೆ ವ್ಯರ್ಥವಾಗಿದೆ. ಇದರ ನಂತರ ಹರ್ಯಾಣದಲ್ಲಿ ಶೇ.9.74, ಪಂಜಾಬ್ ನಲ್ಲಿ ಶೇ.8.12, ಮಣಿಪುರದಲ್ಲಿ ಶೇ.7.8 ಮತ್ತು ತೆಲಂಗಾಣದಲ್ಲಿ ಶೇ.7.55ರಷ್ಟು ಡೋಸ್ ಲಸಿಕೆ ವ್ಯರ್ಥವಾಗಿದೆ.

    ವ್ಯರ್ಥ ಆಗ್ತಿರೋದು ಯಾಕೆ?
    ಕೊರೊನಾ ಲಸಿಕೆ ಪಡೆಯಲು ಜನ ಮುಂದೆ ಬರುತ್ತಿಲ್ಲ. ಕೆಲವರು ನೋಂದಣಿ ಮಾಡಿಸಿಕೊಂಡ್ರೂ ಸೂಚಿತ ವೇಳಗೆ ಆಸ್ಪತ್ರೆಗೆ ಬಂದಿಲ್ಲ. ಒಂದು ಲಸಿಕೆಯ ವಾಯಲ್ ನಲ್ಲಿ 10 ರಿಂದ 12 ಡೋಸ್ ಇರುತ್ತೆ. ನಿಶ್ಚಿತ ಸಮಯದಲ್ಲಿ (ಸಮಾರು 30 ನಿಮಿಷ) ಡೋಸ್ ನೀಡದಿದ್ರೆ ಅದು ವ್ಯರ್ಥವಾಗುತ್ತೆ. ಹೀಗಾಗಿ ಲಸಿಕೆ ವ್ಯರ್ಥವಾಗುತ್ತಿದೆ ಎಂದು ವರದಿಯಾಗಿದೆ.

    ಅಂಡಮಾನ್ ಮತ್ತು ನಿಕೋಬಾರ್, ದಮನ್ ದಿಯು, ಹಿಮಾಚಲ ಪ್ರದೇಶ, ಕೇರಳ, ಲಕ್ಷದ್ವೀಪ, ಮೀಜೋರಾಂ, ಪಶ್ಚಿಮ ಬಂಗಾಳದಲ್ಲಿ ಅತಿ ಕಡಿಮೆ ಲಸಿಕೆ ವ್ಯರ್ಥವಾಗಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಲಸಿಕೆ ವ್ಯರ್ಥವಾಗೋದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

    ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿದೆ. ಸದ್ಯ ಈಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಯಮವನ್ನು ಸಡಿಲಿಕೆ ಮಾಡಿದೆ.

    ಜನವರಿ 16ರಿಂದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಬಳಿಕ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕೂ ಹೆಚ್ಚು ಖಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ.

  • ಅಪರ ಜಿಲ್ಲಾಧಿಕಾರಿಗೆ 10 ಸಾವಿರ ರೂ. ದಂಡ

    ಅಪರ ಜಿಲ್ಲಾಧಿಕಾರಿಗೆ 10 ಸಾವಿರ ರೂ. ದಂಡ

    ರಾಯಚೂರು: ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿದ್ದ ಅರ್ಜಿದಾರನಿಗೆ ಮಾಹಿತಿ ನೀಡದ್ದಕ್ಕೆ ಜಿಲ್ಲೆಯಲ್ಲಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಗೋವಿಂದರೆಡ್ಡಿಗೆ 10 ಸಾವಿರ ರೂ. ದಂಡ ವಿಧಿಸಿ ರಾಜ್ಯ ಮಾಹಿತಿ ಆಯೋಗ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಬಗ್ಗೆ ಆರ್ ಟಿಐ ಕಾರ್ಯಕರ್ತ ಯಶವಂತ್ ಕೋವಿ ಕೇಳಿದ ಮಾಹಿತಿ ನೀಡದ ಹಿನ್ನೆಲೆ ಕ್ರಮ ಜರುಗಿಸಲಾಗಿದೆ. ಸೂಕ್ತ ಸಮಯಕ್ಕೆ ಮಾಹಿತಿ ನೀಡದಕ್ಕೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಆಯೋಗದ ನೋಟಿಸ್ ಗೂ ಯಾವುದೇ ಉತ್ತರ ನೀಡದೇ ನಿರ್ಲಕ್ಷ್ಯ ಮಾಡಿದ್ದಕ್ಕೆ ರಾಯಚೂರಿನ ಹಿಂದಿನ ಎಡಿಸಿ ಗೋವಿಂದರೆಡ್ಡಿಗೆ ಮಾಹಿತಿ ಆಯೋಗ ದಂಡ ಹಾಕಿದೆ.

    ಎರಡು ತಿಂಗಳ ವೇತನದಲ್ಲಿ 10 ಸಾವಿರ ರೂ. ಹಿಡಿಯಲು ಆದೇಶ ಮಾಡಲಾಗಿದೆ. ಅಲ್ಲದೆ ದಂಡ ಕಟ್ಟಿ ಬಳಿಕ ಮಾಹಿತಿ ನೀಡುವಂತೆ ಮಾಹಿತಿ ಆಯೋಗ ಸೂಚಿಸಿದೆ. ಗೋವಿಂದರೆಡ್ಡಿ ಸದ್ಯ ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಈಶಾನ್ಯ ಸಾರಿಗೆಯಲ್ಲಿ ಇರೋದು ಬಹುತೇಕ ಡಕೋಟಾ ಬಸ್ಸುಗಳೇ!

    ಈಶಾನ್ಯ ಸಾರಿಗೆಯಲ್ಲಿ ಇರೋದು ಬಹುತೇಕ ಡಕೋಟಾ ಬಸ್ಸುಗಳೇ!

    – ಮಂಡ್ಯ ಬಸ್ ದುರಂತದ ನಂತ್ರವೂ ಎಚ್ಚೆತ್ತುಕೊಳ್ಳದ ಇಲಾಖೆ

    ಕಲಬುರಗಿ: ಮಂಡ್ಯದ ಕನಕನಮರಡಿ ಬಸ್ ದುರಂತದ ನಂತರ ಸಹ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಇಂದಿಗೂ ಸಹ ಈಶಾನ್ಯ ಸಾರಿಗೆಯಲ್ಲಿ ಬಹುತೇಕ ಡಕೋಟಾ ಬಸ್‍ಗಳೇ ಸಂಚರಿಸುತ್ತಿದ್ದು, ಅದರಲ್ಲಿ ಕೆಲ ಬಸ್‍ಗಳಿಗೆ ಬ್ರೇಕ್ ಮತ್ತು ಪಿಕಪ್ ಇಲ್ಲ, ಇನ್ನುಳಿದ ಬಸ್‍ಗಳ ಏಂಜಿನ್ ಯಾವಾಗ ಬೇಕಾದರೂ ಸ್ಫೋಟವಾಗಬಹುದು. ಖುದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಆರ್ ಟಿಐನಡಿ ಕೇಳಿದ ಪ್ರಶ್ನೆಗೆ ಈ ಉತ್ತರಗಳನ್ನು ನೀಡಿದ್ದಾರೆ.

    ಬಸ್‍ನ ಬ್ರೇಕ್ ಮತ್ತು ಗೇರ್ ಲಿವರ್ ಗಳಿಗೆ ವಯರ್ ನಿಂದ ಬಿಗಿದು ರಸ್ತೆ ಮೇಲೆ ಸಂಚರಿಸುತ್ತಿರುವ ಈ ಬಸ್‍ಗಳು, ಈಶಾನ್ಯ ಸಾರಿಗೆಯ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯ.

    ಬಹುತೇಕ ಬಸ್‍ಗಳಲ್ಲಿ ಬ್ರೇಕ್ ಹಿಡಿಯಬೇಕು ಅಂದರೆ ಡ್ರೈವರ್ ಗಳು ಹರಸಾಹಸ ಪಟ್ಟು ಬ್ರೇಕ್ ಹಾಕುತ್ತಾರೆ. ಬಹುತೇಕ ಬಸ್‍ಗಳ ಏಂಜಿನ್ ಜಾಸ್ತಿ ಹೀಟ್ ಆಗುತ್ತಿದ್ದು ಯಾವಾಗ ಬೇಕಾದರೂ ಅಗ್ನಿ ಅವಘಡ ನಡೆಯುವ ಸಾಧ್ಯತೆಯಿದೆ.

    ಈಶಾನ್ಯ ಸಾರಿಗೆ ಬಸ್‍ಗಳ ಸ್ಥಿತಿಯನ್ನು ಕಂಡು ಆರ್ ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಅವರು ಪ್ರಶ್ನೆ ಕೇಳಿದ್ದಕ್ಕೆ ಶಾಕಿಂಗ್ ಉತ್ತರ ಸಿಕ್ಕಿದೆ. ಸಾರಿಗೆ ಇಲಾಖೆಯ ಡಿಫೆಕ್ಟ್ ರಿಜಿಸ್ಟರ್ ಬುಕ್ ಮಾಹಿತಿ ಪ್ರಕಾರ ಶೇ.50ಕ್ಕೂ ಹೆಚ್ಚು ಬಸ್ಸುಗಳಲ್ಲಿ ಸಮಸ್ಯೆ ಇದೆ. ಸದ್ಯ ಕಲಬುರಗಿ ಡಿಪೋ ನಂಬರ್ 4ರಲ್ಲಿ ಒಟ್ಟು 108 ಬಸ್ ಗಳಿದ್ದು, ಬಸ್ ಡಿಫಾಲ್ಟ್ ರಿಜಿಸ್ಟರ್ ನಲ್ಲಿ 70 ಕ್ಕೂ ಹೆಚ್ಚು ಬಸ್ ಗಳಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಪತ್ತೆಯಾಗಿದೆ. ಈಶಾನ್ಯ ವಲಯದಲ್ಲಿ 9 ವಿಭಾಗಗಳ 50 ಘಟಕಗಳಲ್ಲಿ ಇರುವ ಬಹುತೇಲ ಬಸ್ಸುಗಳು ಒಂದಿಲ್ಲ ಒಂದು ತಾಂತ್ರಿಕ ಸಮಸ್ಯೆಯಿಂದ ಕೂಡಿದೆ.

    ಅದರಲ್ಲಿ ಹಲವು ಬಸ್ ಗಳಲ್ಲಿ ಬ್ರೇಕ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಚಾಲಕರು ದೂರು ನೀಡಿದ್ದಾರೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಇಲ್ಲಿನ ಅಧಿಕಾರಿಗಳು ಮಾತ್ರ ರಿಪೇರಿ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾದರೆ ಈ ಬಸ್‍ನಲ್ಲಿ ನಾವು ಹೇಗೆ ಸಂಚರಿಸಬೇಕು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ವಿರುದ್ದ ಸಿಡಿದೆದ್ದ ಸಿಎಂ ಕುಮಾರಣ್ಣ

    ಪ್ರಧಾನಿ ಮೋದಿ ವಿರುದ್ದ ಸಿಡಿದೆದ್ದ ಸಿಎಂ ಕುಮಾರಣ್ಣ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿದೆದಿದ್ದಾರೆ. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಖರ್ಚಿನ ವಿವಾದಕ್ಕೆ ಟಾಂಗ್ ಕೊಡಲು ಸಿಎಂ ಸಿದ್ಧರಾಗುತ್ತಿದ್ದಾರೆ.

    ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದ ಖರ್ಚಿನ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಜೆಡಿಎಸ್ ಐಟಿ ಸೆಲ್ ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೇಶದ ಗಣ್ಯರು ಸೇರಿದಂತೆ ವಿದೇಶದ ರಾಜಕೀಯ ನಾಯಕರು ಸಹ ಆಗಮಿಸಿದ್ದರು. ಈ ಸಂಬಂಧ ಆರ್ ಟಿಐ ಮೂಲಕ ಮಾಹಿತಿ ಪಡೆದುಕೊಂಡು ಸಿಎಂ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ.

    ಆರ್ ಟಿಐ ಅರ್ಜಿಯ ಮಾಹಿತಿ ಅಂಶಗಳು:
    * ಪ್ರಮಾಣ ವಚನಕ್ಕೆ ಬಂದ ಗಣ್ಯರು ಉಳಿದ ಕೊಂಡಿದ್ದ ಹೋಟೆಲ್ ಯಾವವು? ಹೋಟೆಲ್‍ಗೆ ಖರ್ಚಾದ ಹಣ ಎಷ್ಟು? (ಎಲ್ಲಾ ಗಣ್ಯರ ಪ್ರತ್ಯೇಕ ಮಾಹಿತಿ ಊಟ ಇನ್ನಿತರ ಖರ್ಚು ಸೇರಿ)
    * ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹೂವಿನ ಬೊಕ್ಕೆಗೆ ಖರ್ಚಾದ ಹಣ ಎಷ್ಟು.?
    * ಮೋದಿ ಪ್ರಮಾಣ ವಚನದ ಖರ್ಚು ಭರಿಸಿದ್ದು ಯಾರು?
    * ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಳಸಿದ ಕಾರುಗಳು ಎಷ್ಟು? ಯಾವ ಯಾವ ಕಾರುಗಳನ್ನ ಬಳಸಲಾಗಿದೆ.? ಇದಕ್ಕೆ ಖರ್ಚಾದ ಹಣ ಎಷ್ಟು?
    * ಪ್ರಮಾಣ ವಚನ ಕಾರ್ಯಕ್ರಮದ ಭದ್ರತೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ.?
    * ಪ್ರಮಾಣ ವಚನ ಕಾರ್ಯಕ್ರಮ ಪ್ರಸಾರಕ್ಕೆ ಖರ್ಚಾದ ಹಣ ಎಷ್ಟು? (ಎಲ್ ಡಿ ಪರದೆ, ಧ್ವನಿ ವರ್ಧಕ ಇನ್ನಿತರ ಮಾಹಿತಿ)

    ಮೇ 23ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆದಿದ್ದ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಜಿ.ಪರಮೇಶ್ವರ್ 7 ನಿಮಿಷದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ರೂ. ಖರ್ಚಾಗಿದೆ ಎಂಬ ಮಾಹಿತಿ ಆರ್‍ಟಿಐ ನಲ್ಲಿ ಹೊರ ಬಂದಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ವಿರೋಧ ಪಕ್ಷದ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.

    7 ನಿಮಿಷಕ್ಕೆ 42 ಲಕ್ಷ ಖರ್ಚು:
    ತಾಜ್‍ವೆಸ್ಟೆಂಡ್, ಶಾಂಗ್ರಿ ಹೋಟೆಲ್ ನಲ್ಲಿ ಮೇ 23, 24ರಂದು ಅತಿಥಿಗಳ ವಾಸ್ತವ್ಯ ಕಲ್ಪಿಸಲಾಗಿತ್ತು. ಊಟ, ಕಾಫಿ-ತಿಂಡಿಗೆ ಒಟ್ಟು 37,53,536 ರೂ. ಖರ್ಚು ಆಗಿದ್ದರೆ, ಸಂಜೆ ಟೀ, ಸ್ನಾಕ್ಸ್ ಪಾರ್ಟಿಗೆ 4,35,001 ರೂ. ಖರ್ಚಾಗಿದೆ. ಪ್ರಮಾಣವಚನ ಹೂಗುಚ್ಚಕ್ಕೆ 65 ಸಾವಿರ ರೂ. ಖರ್ಚಾಗಿತ್ತು.

    ಯಾರಿಗೆ ಎಷ್ಟು ಖರ್ಚು?
    * ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಸಿಎಂ- 8,72,493 ರೂ.
    * ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ – 1,85,287 ರೂ.
    * ಶರದ್ ಯಾದವ್, ಲೋಕತಾಂತ್ರಿಕ ಜನತಾದಳ ಪಾರ್ಟಿ – 1,67,457 ರೂ.
    * ಮಾಯಾವತಿ, ಬಿಎಸ್ ಪಿ ಅಧ್ಯಕ್ಷೆ – 1,41,443 ರೂ.

    * ಪಿಣರಾಯಿ ವಿಜಯನ್, ಕೇರಳ ಸಿಎಂ – 1,02,400 ರೂ.
    * ಅಖಿಲೇಶ್ ಯಾದವ್, ಎಸ್‍ಪಿ ಅಧ್ಯಕ್ಷ – 1,02,000 ರೂ.
    * ಅಶೋಕ್ ಗೆಹ್ಲೋಟ್, ರಾಜಸ್ತಾನ ಮಾಜಿ ಸಿಎಂ – 1,02,400 ರೂ.
    * ತೇಜಸ್ವಿ ಯಾದವ್, ಆರ್ ಜೆಡಿ ನಾಯಕ – 1,02,400 ರೂ.
    * ಕಮಲ್ ಹಾಸನ್, ಎಂಎನ್‍ಎಂ ಸಂಸ್ಥಾಪಕ – 1,02,040 ರೂ
    * ಶರದ್ ಪವಾರ್, ಎನ್‍ಸಿಪಿ ಅಧ್ಯಕ್ಷ – 64,000 ರೂ.

    * ಸೀತಾರಾಂ ಯೆಚೂರಿ, ಸಿಪಿಎಂ – 64,000 ರೂ.
    * ಬಾಬುಲಾಲ್ ಮರಾಂಡಿ, ಜಾರ್ಖಂಡ್ ಮಾಜಿ ಸಿಎಂ – 45,952 ರೂ.
    * ಹೇಮಂತ್ ಸೊರೇನ್, ಜಾರ್ಖಂಡ್ ಮಾಜಿ ಸಿಎಂ – 38,400 ರೂ.
    * ಅಸಾದುದ್ದೀನಿ ಓವೈಸಿ, ಎಐಎಂಐಎಂ ಅಧ್ಯಕ್ಷ – 38,400 ರೂ.
    * ಮಮತಾ ಬ್ಯಾನರ್ಜಿ ಖರ್ಚಿನ ಬಗ್ಗೆ ವಸತಿ ಇಲಾಖೆ ಮಾಹಿತಿ ಕೊಟ್ಟಿಲ್ಲ ( ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು.)

    2013ರ ಮೇ 13 ರಂದು ನಡೆದ ಸಿದ್ದರಾಮಯ್ಯ ಪ್ರಮಾಣವಚನಕ್ಕೂ, ಈ ವರ್ಷದ ಮೇ 17 ರಂದು ನಡೆದ ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ಅತಿಥಿಗಳ ವಸತಿಗೆ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ವಸತಿ ಇಲಾಖೆ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ.

    ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ ಖರ್ಚು-ವೆಚ್ಚಗಳ ಬಗ್ಗೆ ಆರ್ ಟಿಐ ಅಡಿಯಲ್ಲಿ ಪ್ರಶ್ನಿಸಿದಾಗ ಈ ಸತ್ಯ ಹೊರಬಂದಿದೆ. ಉದ್ಯಾನವನದ ನಿರ್ವಹಣೆಗಾಗಿ ಇಷ್ಟೊಂದು ಹಣ ವೆಚ್ಚ ಮಾಡುವ ಅವಶ್ಯಕತೆ ಇದೆಯೇ ಎಂದು ಭೀಮಪ್ಪ ಗಡಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಆರ್ ಟಿಐ ಅಡಿಯಲ್ಲಿ ರಾಷ್ಟ್ರಪತಿ ಭವನದಿಂದ ಪಡೆದಿರುವ ಮಾಹಿತಿಯನ್ನು ಗುರುವಾರ ಸುದ್ದಿಮಾಧ್ಯಮಗಳಿಗೆ ಭೀಮಪ್ಪ ಗಡಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅವರು, ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 12.70 ಕೋಟಿ ರೂ., ಹೂದೋಟ ಯಂತ್ರೋಪಕರಣಗಳ ಖರೀದಿಗಾಗಿ 1.46 ಕೋಟಿ ರೂ. ಹಾಗೂ ಉದ್ಯಾನವನ ಸಿಬ್ಬಂದಿಯವರ ವೇತನಕ್ಕಾಗಿ ಪ್ರತಿವರ್ಷ ಅಂದಾಜು 8.64 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಸುಮಾರು 20 ಕೋಟಿ ಉದ್ಯಾನವನ ನಿರ್ವಹಣೆಗೆ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

    ಇಷ್ಟೊಂದು ಹಣ ವೆಚ್ಚ ಮಾಡಿ ಉದ್ಯಾನವನ ನಿರ್ವಹಣೆ ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಷ್ಟ್ರಪತಿಗಳ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿಗೆ ಹಣ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಪಿಂಚಣಿ ಬಂದಿಲ್ಲವೆಂದು ವಯೋವೃದ್ಧರು, ವಿಧವೆಯರು ಧರಣಿ ಮಾಡುವುದು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

  • ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

    ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

    ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಜೋಧಪುರ ಪೊಲೀಸರು ಯಾವ ರೀತಿ ಭಯ ಪಡ್ತಾರೆ ಅನ್ನೋದು ಕನ್ನಡಿಗರರೊಬ್ಬರ ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

    ಸಲ್ಮಾನ್ ಜೈಲಲ್ಲಿ ಇದ್ದಾಗ ಯಾರೆಲ್ಲ ವಿಸಿಟರ್ಸ್ ಬಂದಿದ್ರು, ಎಷ್ಟು ಜನ ಬಂದಿದ್ರು, ಸಲ್ಮಾನ್‍ಗೆ ಯಾವ ರೀತಿ ವ್ಯವಸ್ಥೆಯನ್ನು ಜೈಲೊಳಗೆ ಮಾಡಲಾಗಿತ್ತು ಅಂತಾ ನರಸಿಂಹಮೂರ್ತಿಯವರು ಜೋಧಪುರ ಜೈಲಾಧಿಕಾರಿಗಳಿಗೆ ಮಾಹಿತಿ ಕೇಳಿದ್ರು.

    ನರಸಿಂಹಮೂರ್ತಿಯವರು ಕೇಳಿದ ಮಾಹಿತಿಗೆ ಪೊಲೀಸರು ಉತ್ತರ ಕೊಟ್ಟಿಲ್ಲ. ಮತ್ತೆ ಮೇಲ್ಮನವಿ ಹಾಕಿದಾಗ ಕಾರಾಗೃಹ ಅಧಿಕಾರಿಗಳು, ನೇರವಾಗಿ ಸಲ್ಮಾನ್ ಖಾನ್‍ಗೆ ಪತ್ರ ಬರೆದು ನೀವು ಜೈಲಿನಲ್ಲಿರುವಾಗ ಮಾಹಿತಿಯನ್ನು ಕೇಳಿದ್ದಾರೆ. ಕೊಡಬಹುದಾ ಸಾರ್ ಅಂತಾ ಮಾಹಿತಿ ಕೇಳಿದವರ ವಿಳಾಸವನ್ನು ಬಹಿರಂಗ ಪಡಿಸಿ ಸಲ್ಮಾನ್‍ಗೆ ಕಳುಹಿಸಿದ್ದಾರೆ.

    ಇದು ಕಾನೂನು ಬಾಹಿರವಾಗಿದ್ದು, ಜೈಲಾಧಿಕಾರಿಗಳಿಗೆ ಕೇಳಿದ ಮಾಹಿತಿಯನ್ನು ಖೈದಿಯಾಗಿದ್ದವರ ಬಳಿ ಕೇಳಿ ಉತ್ತರ ಕೊಡುತ್ತೇವೆ ಅಂದಿದ್ದು ಇತಿಹಾಸ. ಸಲ್ಮಾನ್ ಪವರ್ ಬಗ್ಗೆ ಪ್ರಶ್ನಿಸಿ, ಜೋಧಪುರ ಗೃಹ ಸಚಿವರಿಗೂ ದೂರು ಕೊಡಲಾಗಿದೆ. ಮಾಹಿತಿ ನೀಡಿಲ್ಲವಾದ್ರೇ ಹೈಕೋರ್ಟ್ ಮೆಟ್ಟಿಲೇರೋದಾಗಿ ಮೂರ್ತಿ ಹೇಳಿದ್ದಾರೆ.