Tag: ಆರ್ ಜೆ ಡಿ

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ಜೊತೆ ಸಂಚು ನಡೆಸಿ ನನ್ನನ್ನು ಆಸ್ಪತ್ರೆಯಿಂದ ಹೊರಗೆ ಹಾಕಿಸಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

    ಇದು ಅನ್ಯಾಯ, ನನ್ನ ಆರೋಗ್ಯ ಕ್ಷೀಣಿಸಲಿ ಎಂದು ನನ್ನನ್ನು ಸರಿಯಾದ ವ್ಯವಸ್ಥೆ ಇಲ್ಲದ ಆಸ್ಪತ್ರೆಗೆ ಪುನಃ ಕಳುಹಿಸುತ್ತಿದ್ದಾರೆ. ನನ್ನ ಕಷ್ಟದ ಸಮಯ ಎದುರಿಸುತ್ತೇನೆ ಎಂದು ಲಾಲೂ ಪ್ರಸಾದ್ ಯಾದವ್ ಪ್ರತಿಕ್ರಿಯಿಸಿ ಒಲ್ಲದ ಮನಸ್ಸಿನಿಂದ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ನನ್ನ ಕಾಯಿಲೆಗೆ ಚಿಕಿತ್ಸೆ ಕೊಡುವುದಕ್ಕೆ ರಾಂಚಿ ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ಇಲ್ಲ ಹಾಗಾಗಿ ರಾಂಚಿ ಆಸ್ಪತ್ರೆಗೆ ವಾಪಸ್ ಕಳುಹಿಸದಂತೆ ಲಾಲು ಏಮ್ಸ್ ಆಸ್ಪತ್ರೆಯವರಿಗೆ ಪತ್ರ ಬರೆದಿದ್ದರು.

    ರೋಗಿಗೆ ಸಮಾಧಾನ ಕೊಡುವಂತಹ ಚಿಕಿತ್ಸೆಯನ್ನು ಬೇಕಾದ ಕಡೆ ತೆಗೆದುಕೊಳ್ಳುವ ಹಕ್ಕು ಇದೆ. ಏಮ್ಸ್ ಒಳ್ಳೆಯ ಆಸ್ಪತ್ರೆಯಾಗಿದ್ದು ಯಾವ ಕಾರಣಕ್ಕೆ ಮತ್ತೆ ರಾಂಚಿ ಆಸ್ಪತ್ರೆಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕಿದೆ ಎಂದು ಲಾಲೂ ಪ್ರಶ್ನೆ ಮಾಡಿದ್ದಾರೆ.

    ನಿಮ್ಮ ನಿರ್ಧಾರದಿಂದ ನನ್ನ ಆರೋಗ್ಯಕ್ಕೆ ಮುಂದೆ ಅಪಾಯ ಸಂಭವಿಸಿದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಏಮ್ಸ್ ನಿರ್ದೇಶಕ ರಣದೀಪ್ ಗಲೇರಿಯಾ ಅವರಿಗೆ ಲಾಲು ಪ್ರಸಾದ್ ಪತ್ರವನ್ನು ಬರೆದಿದ್ದಾರೆ.

    ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ ಲಾಲೂ ಡಿಸೆಂಬರ್ 23 ರಿಂದ ರಾಂಚಿಯ ಬಿರ್ಸಾ ಮುಂಡಾ ಜೈಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾರ್ಚ್ 17 ರಂದು ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದಾಗಿ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಲಾಲು ದಾಖಲಾಗಿದ್ದರು. ರಾಂಚಿಯಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ದೆಹಲಿಯ ಏಮ್ಸ್ ಅಸ್ಪತ್ರೆಗೆ ಲಾಲೂ ಪ್ರಸಾದ್ ಯಾದವ್ ದಾಖಲಾಗಿದ್ದರು.

    ಲಾಲೂ ಚಿಕಿತ್ಸೆಗೆ ನೀಡಿದ ಏಮ್ಸ್ ಆಸ್ಪತ್ರೆ, ಈಗ ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವಂತೆ ಶಿಫಾರಸ್ಸು ಮಾಡುತ್ತೇವೆ. ರಾಂಚಿಗೆ ರೈಲಿನಲ್ಲಿ ಪ್ರಯಾಣಿಸ ಬಹುದಾಗಿದೆ ಎಂದು ಹೇಳಿಕೆ ನೀಡಿದೆ.

    ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಏಮ್ಸ್ ಆಸ್ಪತ್ರೆಗೆ ಭೇಟಿಕೊಟ್ಟು ಲಾಲೂ ಪ್ರಸಾದ್ ಅವರ ಆರೋಗ್ಯ ವಿಚಾರ ಮಾಡಿದ್ದಾರೆ.