Tag: ಆರ್ ಆರ್ ನಗರ

  • ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಮೈಸೂರು: ಆರ್.ಆರ್ ನಗರದಲ್ಲಿ ಗೆಲ್ಲೋಕಾಗೋಲ್ಲ. ಅದಕ್ಕೆ ಡಿಕೆಶಿ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್‍ಐಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್‍ಐಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ತಿದ್ದಾರೆ. ಹೀಗಾಗಿ ಡಿಕೆಶಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ:
    ದಸರಾದ ಕೊನೆ ಹಂತದ ಸಿದ್ಧತೆ ಪರಿಶೀಲನೆ ಮಾಡ್ತಿದ್ದೇವೆ. ಟೆಕ್ನಿಕಲ್ ಕಮಿಟಿಯ ಸೂಚನೆ ಮೀರಿ ಒಂದೇ ಒಂದು ಕಾರ್ಯಕ್ರಮವನ್ನ ಮಾಡಿಲ್ಲ. ಜನ ಸೇರಿಸೋ ಪ್ರಶ್ನೆಯೇ ಇಲ್ಲ. ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮಾತ್ರ ಇರುತ್ತಾರೆ. ಭಾಗಿಯಾಗುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ ಎಂದರು. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಈ ಬಾರಿ ಎಲ್ಲವು ವರ್ಚುವಲ್ ಆಗಿ ನೇರಪ್ರಸಾರ ಆಗಲಿದೆ. ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ. ನಾವು ಬಂದು ಸಮಸ್ಯೆ ಆಗೋದು ಬೇಡ ಅಂತ ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಯಾವ ಕಾರ್ಯಕ್ರಮವನ್ನು ಮಾಡೋದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

  • ರಂಗೇರಿದ ಆರ್.ಆರ್.ನಗರ- ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ರಂಗೇರಿದ ಆರ್.ಆರ್.ನಗರ- ಮೂರು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    – ಯಾರಿಗೆ ಒಲಿಯುತ್ತಾಳೆ ರಾಜ ರಾಜೇಶ್ವರಿ?

    ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಕುಸುಮಾ ಹನುಮಂತರಾಯಪ್ಪ, ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ಬೈ ಎಲೆಕ್ಷನ್ ಅಖಾಡದಲ್ಲಿದ್ದು, ಆರ್.ಆರ್.ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.

    ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಜರಾಜೇಶ್ವರಿ ನಗರ ಜಂಟಿ ಆಯುಕ್ತರ ಕಚೇರಿಯ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿತ್ತು. ಮಂಗಳವಾರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ ಬೆನ್ನಲ್ಲೇ ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಇಂದು ಅಪಾರ ಬೆಂಬಲಿಗರು ಮತ್ತು ಸಚಿವರ ಜೊತೆ ಆಗಮಿಸಿದ ಮುನಿರತ್ನ ಅವರು ನಾಮಪತ್ರ ಸಲ್ಲಿಸಿ, ಎಲ್ಲ ಒಳ್ಳೇ ರೀತಿಯಲ್ಲಿ ನಡೆದಿದೆ. ನನ್ನ ಮೇಲಿರುವ ಕ್ಷೇತ್ರದ ಜನತೆಯ ಋಣವನ್ನ ತೀರಿಸುತ್ತೇನೆ ಎಂದರು. ಮುನಿರತ್ನ ಅವರಿಗೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಮತ್ತು ಸುಧಾಕರ್ ಸೇರಿದಂತೆ ಹಲವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

    ಇತ್ತ ಕಾಂಗ್ರೆಸ್ ಅಭ್ಯರ್ಥಿ ಹನುಮಂತರಾಯಪ್ಪ ಸಹ 11.45ಕ್ಕೆ ನಾಮಪತ್ರ ಸಲ್ಲಿಸಿ, ಇಂದು ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ. ನನ್ನ ಇಷ್ಟದ ದೇವರು ಆಂಜನೇಯನ ದರ್ಶನ ಮಾಡಿದ್ದೇನೆ. ದೇವರ ಪೂಜೆ ಬಳಿಕ ಹೊಸ ಶಕ್ತಿ ಬಂದಿದೆ. ಇಂತಹ ಅವಕಾಶ ಸಿಕ್ಕಿದ್ದಕ್ಕೆ ನಾನು ಯಾವಾಗಲೂ ಚಿರಋಣಿ. ತುಂಬಾ ಭಾವನಾತ್ಮಕ ದಿನ ಎಂದು ಹೇಳಿದರು. ಕುಸುಮಾ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಾಥ್ ನೀಡಿದರು.

    ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಮೊದಲಿಗೆ ರಾಜ ರಾಜರಾಜೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರ ಜಂಟಿ ಆಯುಕ್ತರ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಿದ ಕೃಷ್ಣಮೂರ್ತಿ, ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಆರ್.ಆರ್.ನಗರದ ಮನೆ ಮಗ. ಅಭಿವೃದ್ಧಿಗೆ ಜನರು ಮತ ಕೊಡಬೇಕು. ಇಲ್ಲಿ ನಾನು ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಭ್ಯರ್ಥಿ. ಚುನಾವಣೆಯಲ್ಲಿ ಗೆದ್ದರೆ ನೀವು ಕಾಲಲ್ಲಿ ತೋರಿಸಿದ್ದನ್ನ ಮನಸ್ಸಿನಲ್ಲಿ ಇಟ್ಟು ಮಾಡ್ತೀನಿ. ನಾನು ಒಕ್ಕಲಿಗನೇ ಕಾಂಗ್ರೆಸ್ ಅವರು ಒಕ್ಕಲಿಗ ಅಂತ ಓಡಾಡಿದರೂ ಜನ ಜಾತಿ ಹೆಸರಲ್ಲಿ ಮತ ಕೊಡೊಲ್ಲ. ನೂರಕ್ಕೆ ನೂರು ನಾನು ಈ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಮೂರ್ತಿ ಅವರ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.

  • ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಸಕಲ ರೀತಿ ಸಿದ್ಧವಾಗುತ್ತಿದೆ. ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ನಲ್ಲಿ ಗೆಲ್ಲೋದಾಗಿ ಚಾಲೆಂಜ್ ಹಾಕಿದ್ದಾರೆ. ಹೀಗಾಗಿ ತಮ್ಮದಲ್ಲದ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಎರಡು ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನ ಬಿಜೆಪಿ ಬದಲಿಸಿಕೊಂಡಿದ್ದು, ಈ ಕುರಿತು ಪಕ್ಷದ ಎಲ್ಲರಿಗೂ ಗುಪ್ತ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

    ಹೌದು, ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಬೇಕು. ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಬೇಕು. ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದು, ಹಾಗಾಗಿ ಜೆಡಿಎಸ್ ಮತ್ತು ಅವರ ಅಭ್ಯರ್ಥಿಗಳು ನಮ್ಮ ಗುರಿಯಲ್ಲ ಅನ್ನೋ ಸಂದೇಶ ಬಿಜೆಪಿ ಪಕ್ಷದೊಳಗೆ ರವಾನಿಸಿದೆ ಎನ್ನಲಾಗಿದೆ.

    ರಾಜ ರಾಜೇಶ್ವರಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಎರಡೂ ವಿಭಿನ್ನ. ಕಳೆದ ಬಾರಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಇತ್ತ ಕಾಂಗ್ರೆಸ್‍ನಿಂದ ಕುಸುಮಾ ಹನುಮಂತ್ರಾಯಪ್ಪ ಮೊದಲ ಬಾರಿಗೆ ಎಲೆಕ್ಷನ್ ಅಖಾಡಕ್ಕೆ ಧುಮುಕಿದ್ದಾರೆ. ಆದ್ರೆ ಇಲ್ಲಿ ಡಿಕೆ ಬ್ರದರ್ಸ್ ಹೆಚ್ಚು ಪ್ರಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಶಿರಾದಲ್ಲಿ ದಿವಂಗತ್ ಸತ್ಯನಾರಾಯಣ್ ಅವರ ಪತ್ನಿ ಅಮ್ಮಜಮ್ಮಾ ಅವರು ಅಖಾಡದಲ್ಲಿದ್ದಾರೆ. ಹಾಗಾಗಿ ಶಿರಾದಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಕಾರಣಕ್ಕಾಗಿ ವಿವಾದಾತ್ಮಕ ಮಾತುಗಳು ಬೇಡ ಎಂದು ಬಿಜೆಪಿ ಪಕ್ಷದ ವರಿಷ್ಠರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿವೆ.

    ಉಪ ಚುನಾವಣೆಯಲ್ಲಿ ನೇರ ರಾಜಕೀಯ ಅಸ್ತ್ರ ಪ್ರಯೋಗ ಕಾಂಗ್ರೆಸ್ ಮೇಲೆ ಇರಬೇಕು ಎಂದು ಬಿಜೆಪಿ ಮಹಾಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿಯ ಎರಡು ಕಡೆಯ ಅಸ್ತ್ರಗಳು ವರ್ಕ್ ಔಟ್ ಆಗುತ್ತಾ? ಮತದಾರ ಪ್ರಭು ಯಾರಿಗೆ ಜೈ ಅನ್ನುತ್ತಾನೆ ಎಂಬ ಸತ್ಯ ಫಲಿತಾಂಶದ ದಿನವೇ ತಿಳಿಯಲಿದೆ.

  • ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

    ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

    ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಬಿಜೆಪಿ ಮುಖಂಡ ಮುನಿರತ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಕರಣ ನ್ಯಾಯಾಲಯದಲ್ಲಿದ್ದರಿಂದ ಇದರ ಬಗ್ಗೆ ನಾನು ಮಾತನಾಡಿರಲಿಲ್ಲ. ಇಂದು ಸುಪ್ರೀಂಕೋರ್ಟ್ ನ್ಯಾಯದ ಪರವಾಗಿ ತೀರ್ಪು ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತೆಗೆದುಕೊಂಡ ಎಲ್ಲ ಮತಗಳು ಅಸಲಿ ಎಂದು ಹೇಳಿದೆ. ಮಾಧ್ಯಮ, ಸಾರ್ವಜನಿಕರು ಮತಗಳು ನಕಲಿ ಎಂದು ಪ್ರಶ್ನಿಸಿದಾದ ನೋವು ಆಗುತ್ತಿತ್ತು. ನಕಲಿ ಅಂದಾಗ ಅನುಭವಿಸಿದ ನೋವು ನನಗೆ ಗೊತ್ತು ಎಂದು ಬಿಜೆಪಿ ಮುಖಂಡ ಮುನಿರತ್ನ ಹೇಳಿದರು.

    ಚುನಾವಣಾ ಆಯೋಗದಿಂದ ಹಿಡಿದು ಎಲ್ಲ ತನಿಖೆಗಳು ನಕಲಿ ಮತಗಳು ಚಲಾವಣೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಮುನಿರತ್ನಗೆ ಬಂದಿರುವ ಎಲ್ಲ ಮತಗಳು ಅಸಲಿ ಎಂಬುವುದು ಇಂದು ಸಾಬೀತಾಗಿದೆ. ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದ ತುಳಸಿ ಮುನಿರಾಜು ಗೌಡ ಸಹ ಬಿಜೆಪಿಯಲ್ಲಿಯೇ ಇದ್ದಾರೆ. ಮುಂದೆ ಪಕ್ಷದಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಲಿ ಎಂದರು.

    ಚುನಾವಣೆಯಲ್ಲಿ ಒಬ್ಬರ ಮೇಲೆ ಒಬ್ಬರು ಮಾತನಾಡೋದು ಸಹಜ. ಚುನಾವಣಾ ಮತ್ತು ರಾಜಕೀಯದಲ್ಲಿ ವೈಯಕ್ತಿಯ ದ್ವೇಷ ಇರಲ್ಲ. ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ.

    ಆರ್.ಆರ್.ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕುಸುಮಾ ಹನುಂತರಾಯಪ್ಪ ಸ್ಪರ್ಧೆ ಮಾಡಿದ್ದಾರೆ. ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಆಗಮಿಸಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚೇನು ಮಾತನಾಡಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು.

  • ಕುಡಿದ ಅಮಲಿನಲ್ಲಿ ಜಗಳ – ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

    ಕುಡಿದ ಅಮಲಿನಲ್ಲಿ ಜಗಳ – ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ

    ಬೆಂಗಳೂರು: ಕುಡಿದ ಅಮಲಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ರಾಜಾರಾಜೇಶ್ವರಿ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ರಾತ್ರಿ ಆರ್.ಆರ್ ನಗರದ ಐಡಿಯಲ್ ಹೋಮ್ಸ್ ನ 15 ನೇ ರಸ್ತೆಯಲ್ಲಿ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು 35 ವರ್ಷದ ಜ್ಞಾನ ಸಾಗರ್ ಎಂದು ಗುರುತಿಸಲಾಗಿದೆ. ಇನ್ನೂ ಕೊಲೆ ಮಾಡಿದವನು ಇವನ ಚಿಕ್ಕಪ್ಪನ ಮಗ ರಂಜಿತ್ ಎಂದು ಹೇಳಲಾಗಿದೆ.

    ಕುಡಿದ ಅಮಲಿನಲ್ಲಿ ಸಂಬಂಧಿಗಳಾದ ಜ್ಞಾನ ಸಾಗರ್ ಮತ್ತು ರಂಜಿತ್ ಜಗಳ ಮಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಜ್ಞಾನ ಸಾಗರ್ ರಂಜಿತ್‍ಗೆ ಹೊಡೆದಿದ್ದ ಎನ್ನಲಾಗಿದೆ. ಇದನ್ನೇ ದ್ವೇಷವಾಗಿ ತೆಗೆದುಕೊಂಡ ರಂಜಿತ್ ಜ್ಞಾನ ಸಾಗರ್‍ ನನ್ನು ಕಲ್ಲಿನಿಂದ ಹಾಗೂ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

    ಈ ಸಂಬಂಧ ಆರ್.ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಂಜಿತ್‍ನನ್ನು ಬಂಧಿಸಲಾಗಿದೆ.

  • ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ: ಮುನಿರತ್ನ

    ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ: ಮುನಿರತ್ನ

    ಬೆಂಗಳೂರು: ರಾಜರಾಜೇಶ್ವರಿ ಚುನಾವಣೆಯ ಫಲಿತಾಂಶ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಾರಣ ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ರೆ ಯಾವ ವ್ಯಕ್ತಿಯೂ ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಹುಬುದು ಎಂಬುದಕ್ಕೆ ಇಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.

    ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಇವತ್ತು ಮತದಾರರು ನನ್ನ ಕೈ ಹಿಡಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ಹಣ ಬಲದಿಂದ ಗೆದ್ದಿದ್ದಾರೆ ಅಂತಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರೋದನ್ನು ನೋಡಿದ್ದೇನೆ. ಜನಾದೇಶವನ್ನು ಹಣದೊಂದಿಗೆ ಹೋಲಿಸಿ ಮತದಾರರನ್ನು ಅವಮಾನಿಸಬೇಡಿ. ತಾವು ಹಿರಿಯರು ಎಚ್ಚರಿಕೆಯಿಂದ ಮಾತನಾಡಬೇಕು. ಒಂದು ಬಾರಿ ನನ್ನ ಕ್ಷೇತ್ರಕ್ಕೆ ಬಂದು ನೋಡಿ ಮುನಿರತ್ನ ಹೇಗೆ ಗೆಲುವು ಕಂಡಿದ್ದು ನಿಮಗೆ ಗೊತ್ತಾಗುತ್ತದೆ ಅಂತಾ ವಾಗ್ದಾಳಿ ನಡೆಸಿದ್ರು.

    ಚುನಾವಣೆ ಮುಂದೂಡಿದ್ದು ನಮಗೆ ಒಳ್ಳೆದಾಯಿತು. ನಕಲಿ ಮತದಾರರನ್ನು ತಡೆದಿದ್ದರಿಂದ ಲಾಭವಾಗಿದೆ. ಆ ಮತಗಳನ್ನು ತಡೆಯದೇ ಇದ್ದಿದ್ರೆ ಇಂದು ನಮಗೆ ತೊಂದರೆ ಆಗುತ್ತಿತ್ತು. ಕ್ಷೇತ್ರದ ಜನರಿಗಾಗಿ ಮುಂದಿನ ದಿನಗಳಲ್ಲಿಯೂ ನನ್ನ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿವೆ ಅಂತಾ ಹೇಳಿದ್ರು.

    25,492 ಸಾವಿರ ಮತಗಳ ಅಂತರದಿಂದ ಮುನಿರತ್ನ ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮುನಿರತ್ನ ಅವರಿಗೆ 1,08,064 ಮತಗಳು ಬಿದ್ದರೆ ಬಿಜೆಪಿ ಮುನಿರಾಜು ಗೌಡ ಅವರಿಗೆ 82,572 ಮತಗಳು ಬಿದ್ದಿವೆ. ಜೆಡಿಎಸ್‍ನ ರಾಮಚಂದ್ರ ಅವರಿಗೆ 60,360 ಮತಗಳು ಬಿದ್ದಿವೆ.

  • ಹಣ ಬಲದ ಮುಂದೆ ಯಾವ್ದೂ ನಡೆಯಲ್ಲ, ಜನಾದೇಶಕ್ಕೆ ತಲೆಬಾಗುತ್ತೇವೆ: ಬಿಎಸ್‍ವೈ

    ಹಣ ಬಲದ ಮುಂದೆ ಯಾವ್ದೂ ನಡೆಯಲ್ಲ, ಜನಾದೇಶಕ್ಕೆ ತಲೆಬಾಗುತ್ತೇವೆ: ಬಿಎಸ್‍ವೈ

    ಬೆಂಗಳೂರು: ಹಣ ಬಲದ ಮುಂದೆ ಯಾವುದು ನಡೆಯಲ್ಲ ಅನ್ನುವ ವಾತಾವರಣ ನಿರ್ಮಾಣವಾಗಿದೆ. ಆದ್ರೂ ಜನಾದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ಆರ್ ಆರ್ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡಿರೋದು ಎಲ್ಲರಿಗೂ ತಿಳಿದಿರುವ ವಿಷಯ. ಸದ್ಯ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಸಲು ವಿಧಾನಸೌಧಕ್ಕೆ ಹೋಗುತ್ತಿದ್ದೇವೆ ಅಂತಾ ತಿಳಿಸಿದ್ರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಡಿ.ಕೆ. ಸಹೋದರರ ಮೇಲೆ ಸಿಬಿಐ ಮತ್ತು ಐಟಿ ಅಸ್ತ್ರ ಪ್ರಯೋಗಿಸಿದ್ರಾ ಪ್ರಶ್ನೆಗೆ, ನೋ ಕಮೆಂಟ್ಸ್ ಅಂತಾ ಪ್ರತಿಕ್ರಿಯೆ ನೀಡಿದ್ರು.

    ಇಂದು ಬೆಳಗ್ಗೆಯೇ ಯಡಿಯೂರಪ್ಪರ ನಿವಾಸಕ್ಕೆ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳಾದ ರವಿಕುಮಾರ್, ರುದ್ರೇಗೌಡ, ತೇಜಸ್ವಿನಿಗೌಡ ಮತ್ತು ಕೆ.ಪಿ.ನಂಜುಂಡಿ ಆಗಮಿಸಿದ್ರು. ಈ ವೇಳೆ ಅಭ್ಯರ್ಥಿಗಳೊಂದಿಗೆ ಯಡಿಯೂರಪ್ಪ ಮಾತುಕತೆ ನಡೆಸಿದ್ರು.

  • ಜೆಡಿಎಸ್-ಕೈ ಮೈತ್ರಿಗೆ ಮೊದಲ ಪರೀಕ್ಷೆ – ರಾಜರಾಜೇಶ್ವರಿ ನಗರದಲ್ಲಿ ಯಾರು ರಾಜ..?

    ಜೆಡಿಎಸ್-ಕೈ ಮೈತ್ರಿಗೆ ಮೊದಲ ಪರೀಕ್ಷೆ – ರಾಜರಾಜೇಶ್ವರಿ ನಗರದಲ್ಲಿ ಯಾರು ರಾಜ..?

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇವತ್ತು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ವೋಟರ್ ಐಡಿ ಹಗರಣ ಹಿನ್ನೆಲೆಯಲ್ಲಿ ಮೇ 28ಕ್ಕೆ ಮತದಾನ ಮುಂದೂಡಿಕೆ ಆಗಿತ್ತು.

    ಕ್ಷೇತ್ರದಲ್ಲಿದ್ದ ಒಟ್ಟು 4 ಲಕ್ಷದ 71 ಸಾವಿರದ 900 ಮತದಾರರಲ್ಲಿ ಶೇಕಡಾ 54.20 ರಷ್ಟು ಮಂದಿಯಷ್ಟೇ ಹಕ್ಕು ಚಲಾಯಿಸಿದ್ದರು. ಅಂದಹಾಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ವಾರಕ್ಕೆ ಸರಿಯಾಗಿ ಮೊದಲ ವಿಧಾನಸಭಾ ಫಲಿತಾಂಶ ಹೊರಬರುತ್ತಿರುವುದು ವಿಶೇಷ.

    ಆರ್ ಆರ್ ನಗರದಲ್ಲಿ ದೋಸ್ತಿಗಳ ನಡುವೆಯೇ ನೇರ ಸ್ಪರ್ಧೆ ಇದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಪ್ರಚಾರ ಮಾಡಿವೆ. ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ವಿಧಾನಸೌಧಕ್ಕಷ್ಟೇ ಸೀಮಿತ ಅಂತ ಪ್ರಚಾರದ ವೇಳೆ ಘೋಷಿಸಿದ್ದರು. ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮುನಿರತ್ನ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ರೆ, ಜೆಡಿಎಸ್‍ನಿಂದ ಜಿ.ಹೆಚ್.ರಾಮಚಂದ್ರಗೌಡ ಶಾಸಕರಾಗುವ ಉಮೇದಲ್ಲಿದ್ದಾರೆ. ಇವರಿಬ್ಬರ ಕಾದಾಟದಿಂದಾಗುವ ಮತ ವಿಭಜನೆಯ ಲಾಭ ಪಡೆದು ಬಿಜೆಪಿಯ ತುಳಸಿ ಮುನಿರಾಜು ವಿಜಯಿಯಾಗುವ ಲೆಕ್ಕಾಚಾರದಲ್ಲಿದ್ದಾರೆ. ಕಣದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದಾರೆ.

    ಮೇ 15ರಂದು ಹೊರಬಿದ್ದಿದ್ದ 222 ಕ್ಷೇತ್ರಗಳ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37, ಬಿಎಸ್‍ಪಿ 1, ಇಬ್ಬರು ಪಕ್ಷೇತರರು ಶಾಸಕರಾಗಿ ಆಯ್ಕೆ ಆಗಿದ್ರು. ಸದ್ಯ ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ ಇಬ್ಬರು ಪಕ್ಷೇತರರ ಸಹಾಯದೊಂದಿಗೆ ವಿಧಾನಸಭೆಯಲ್ಲಿ 118 ಶಾಸಕರ ಬಲಾಬಲ ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 111.

  • ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಪತಿ, ಮಾವ, ಅತ್ತೆ ಜೊತೆ ಅಮೂಲ್ಯ ಜಗದೀಶ್ ವೋಟ್

    ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಅಮೂಲ್ಯ ಜಗದೀಶ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

    ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಬಿಇಟಿ ಕಾನ್ವೆಂಟ್ ಸ್ಕೂಲ್ ನಲ್ಲಿ ಮತದಾನ ಮಾಡುವುದಕ್ಕೆ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂದಿದ್ದರು. ರಾಮಚಂದ್ರ ಜೊತೆ ಮಗ ಜಗದೀಶ್, ಸೊಸೆ ಅಮೂಲ್ಯ ಹಾಗು ಕುಟುಂಬ ವರ್ಗದವರು ಬಂದು ಮತದಾನ ಮಾಡಿದ್ದಾರೆ.

    ಮದುವೆ ಆದಮೇಲೆ ಇದೇ ಮೊದಲ ಬಾರಿಗೆ ಪತಿ ಜಗದೀಶ್ ಜೊತೆ ಬಂದು ನಟಿ ಅಮೂಲ್ಯ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅಮೂಲ್ಯ ಜಗದೀಶ್, ಇದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವೇ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಒಂದೇ ವೇಳೆ ನಾವು ಅದನ್ನು ಉಪಯೋಗಿಸಿಕೊಳ್ಳಲಿಲ್ಲ ಅಂದರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಪರಿಸ್ಥಿತಿ ಬರುತ್ತವೆ. ಹಾಗಾಗಿ ನಮ್ಮ ಹಕ್ಕನ್ನು ನಾವೇ ಯಾರಿಗೂ ಬಿಟ್ಟುಕೊಡದೆ ನಾವೇ ಮತದಾನ ಮಾಡೋಣ. ಆದ್ದರಿಂದ ಒಬ್ಬ ಒಳ್ಳೆ ವ್ಯಕ್ತಿಯನ್ನು ಶಾಸಕರಾಗಿ ಆರ್ ಆರ್ ನಗರಕ್ಕೆ ಆಯ್ಕೆ ಮಾಡಿ. ಎಲ್ಲರೂ ವೋಟ್ ಮಾಡಿ ಎಂದು ಹೇಳಿದ್ದಾರೆ.

    ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

  • ಆರ್ ಆರ್ ನಗರದಲ್ಲಿ ಸುಗಮ ಮತದಾನ -ವೋಟ್ ಮಾಡಲು ಬಂದು ಎಡವಿ ಬಿದ್ದ ನಟಿ ಮಾಳವಿಕಾ

    ಆರ್ ಆರ್ ನಗರದಲ್ಲಿ ಸುಗಮ ಮತದಾನ -ವೋಟ್ ಮಾಡಲು ಬಂದು ಎಡವಿ ಬಿದ್ದ ನಟಿ ಮಾಳವಿಕಾ

    ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದೆ.

    ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಆದರೆ ಮೌಂಟ್ ಕಾರ್ಮೆಲ್ ಸ್ಕೂಲ್ ಮತಗಟ್ಟೆಯಲ್ಲಿ ಮತ ಹಾಕಲು ನಟಿ ಮಾಳವಿಕಾ ಅವಿನಾಶ್ ಮತ್ತು ನಟ ಅವಿನಾಶ್ ಬಂದಿದ್ದರು. ಈ ವೇಳೆ ಮತಗಟ್ಟೆಗೆ ಹೋಗಲು ಮೆಟ್ಟಿಲು ಹತ್ತುವಾಗ ಮಾಳವಿಕಾ ಎಡವಿ ಬಿದ್ದಿದ್ದಾರೆ. ನಂತರ ಮಾಳವಿಕಾ ಅವಿನಾಶ್ ಮೇಲೆ ಎದ್ದು, ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ.

    ಮತ ಚಲಾಯಿಸಿ ಮಾಧ್ಯಮರೊಂದಿಗೆ ಮಾತನಾಡಿದ ಮಾಳವಿಕಾ ಅವಿನಾಶ್ ದಂಪತಿ, ವೋಟ್ ಬೂತ್ ಗೆ ಎಂಟ್ರಿ ಆದಾಗ, ನಮಗೆ ಆ ಶಕ್ತಿ ಇದೆ ಅಂತ ಅಹಂಕಾರ ಬರುತ್ತದೆ. ಅದು ನಮ್ಮ ಕರ್ತವ್ಯ. ಅದು ನಮ್ಮ ಜವಬ್ದಾರಿ. ಆದಷ್ಟು ಬೇಗ ಬಂದು ವೋಟ್ ಮಾಡಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.

    ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

    ಬಿಜೆಪಿ ಪರ ಮುನಿರಾಜು ಕಣಕ್ಕೆ ಇಳಿದಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕೆ ಇಳಿದಿದ್ದಾರೆ. ಇನ್ನು ಜೆಡಿಎಸ್‍ನಿಂದ ನಟಿ ಅಮೂಲ್ಯ ಮಾವ ಜಿ.ಎಚ್.ರಾಮಚಂದ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಡುವೆ ಬಿಜೆಪಿ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರದ ಚುನಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು.