Tag: ಆರ್ ಆರ್ ನಗರ

  • ಮತ ಕೇಳಲು ಕಣ್ಣೀರು ಹಾಕಿಲ್ಲ: ಡಿಕೆ ಸುರೇಶ್‍ಗೆ ಮುನಿರತ್ನ ತಿರುಗೇಟು

    ಮತ ಕೇಳಲು ಕಣ್ಣೀರು ಹಾಕಿಲ್ಲ: ಡಿಕೆ ಸುರೇಶ್‍ಗೆ ಮುನಿರತ್ನ ತಿರುಗೇಟು

    – ನಾಳೆ ದರ್ಶನ್ ಪ್ರಚಾರ

    ಬೆಂಗಳೂರು: ಮತ ಕೇಳಲು ನಾನು ಕಣ್ಣೀರು ಹಾಕಿಲ್ಲ ಎಂದು ಆರ್.ಆರ್.ನಗರ ಬಿಜೆಪಿ ಚುನಾವಣಾ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ನಾನು ಯಾವತ್ತು ಕಣ್ಣೀರಿನ ಮೂಲಕ ಮತ ಕೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗೆ ತಿರುಗೇಟು ನೀಡಿದರು.

    25 ವರ್ಷದ ಹಿಂದೆ ತಾಯಿ ತೀರಿ ಹೋಗಿದ್ದಾರೆ. ಅವರ ನೆನೆದು ಕಣ್ಣೀರು ಬಂದಿದೆ ಅಷ್ಟೆ. ನಾನು ಕೆಲಸದ ಮೇಲೆ ಮತ ಕೇಳುವ ವ್ಯಕ್ತಿ, ಕಣ್ಣೀರ ಮೇಲೆ ಅಲ್ಲ. ಈ ಹಿಂದೆ ದೆಹಲಿಯಲ್ಲಿ ಡಿ.ಕೆ.ಸುರೇಶ್ ಕಣ್ಣೀರು ಹಾಕಿದ್ದಾಗ, ನಾವು ಕನಿಕರ ವ್ಯಕ್ತಪಡಿಸಿದ್ದೆ. ಈಗ ನನ್ನ ಕಣ್ಣೀರನ್ನ ಅವರು ವ್ಯಂಗ್ಯ ಮಾಡಿದ್ದಾರೆ. ಇನ್ನು ದಿನೇಶ್ ಗುಂಡೂರಾವ್ ರಾಜಕಾರಣಿಯೇ ಅಲ್ಲ. ತಂದೆಯ ಹೆಸರಲ್ಲಿ ಬದುಕುತ್ತಿರೋರ ಬಗ್ಗೆ ಯಾಕೆ ಮಾತನಾಡೋದು ಎಂದು ಮುನಿರತ್ನ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದರು.

    ಚುನಾವಣೆ ಪ್ರಚಾರದ ನಿಮಿತ್ ನಟ ದರ್ಶನ್ ಅವರನ್ನ ಭೇಟಿಯಾಗಿದ್ದೇನೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸಭಾ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಬುಧವಾರ ಖುಷ್ಬೂ, ಇವತ್ತು ನಟಿಯರಾದ ತಾರಾ ಮತ್ತು ಶೃತಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಮುಂದೆ ಯಶ್ ಸೇರಿದಂತೆ ಬೇರೆ ಯಾವ ಕಲಾವಿದರು ಪ್ರಚಾರಕ್ಕೆ ಬರುತ್ತಾರೆ ಎಂಬುದನ್ನ ತಿಳಿಸುತ್ತೇನೆ ಎಂದರು.

    ಇತ್ತ ಇಂದು ಬೆಳಗ್ಗೆಯಿಂದಲೇ ಮುನಿರತ್ನ ಪರ ಡಿಸಿಎಂ ಅಶ್ವಥ್ ನಾರಾಯಣ್ ಜೆಪಿ ಪಾರ್ಕ್, ಆರ್ ಆರ್ ನಗರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಂಜೆ 4 ಗಂಟೆಗೆ ಸಂಸದ ಪಿಸಿ ಮೋಹನ್, ಸಂಜೆ 5ಕ್ಕೆ ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯರಿಂದ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

    ಡಿ.ಕೆ.ಸುರೇಶ್ ಹೇಳಿದ್ದೇನು?:
    ಕಾಂಗ್ರೆಸ್ ಪಕ್ಷ ನನ್ನ ತಾಯಿ ಅಂತ ಮುನಿರತ್ನ ಅವರೇ ಹೇಳಿದ್ದು. ಅದನ್ನ ನಾನು ಹೇಳಿದ್ದೇನೆ. ಅವರು ಕಟ್ ಪೇಸ್ಟ್ ಮಾಡಿ ಡ್ರಾಮಾ ಮಾಡೋದು ಬೇಡ. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ನನ್ನ ರಕ್ತ ಅಂದಿದ್ದು ಅವರೇ. ಎಲ್ಲೆಲ್ಲಿ ಯಾವುದನ್ನ ಕಟ್ ಮಾಡಬೇಕು ಯಾವುದನ್ನ ಪೇಸ್ಟ್ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಕಟ್ ಪೇಸ್ಟ್ ಅವರ ವೃತ್ತಿ ಅಲ್ವಾ ಚೆನ್ನಾಗಿ ಮಾಡ್ತಾರೆ. ನಿರ್ಮಾಪಕರಿಗೆ ಕಣ್ಣಿರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ. ಯಾರ ಬಳಿ ಬೇಕಿದ್ದರೂ ಕಣ್ಣೀರು ಹಾಕಿಸುತ್ತಾರೆ. ಜೋಡಿಸುವುದರಲ್ಲಿ ಕಟ್ ಮಾಡುವುದರಲ್ಲಿ ಅವರಿಗೆ ಹೇಳಿ ಕೊಡಬೇಕಾಗಿಲ್ಲ. ಇವತ್ತು ಡ್ರಾಮ ಶುರು ಮಾಡಿದ್ದಾರೆ. ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಕಾಂಗ್ರೆಸ್ ಅಂತ ಹೇಳಿದವರು ಮುನಿರತ್ನ. ನೀವು ನಿರ್ಮಾಪಕರು ಯಾರನ್ನ ಬೇಕಾದ್ರು ಕಣ್ಣೀರು ಹಾಕಿಸ್ತೀರಿ, ಯಾರನ್ನ ಬೇಕಾದ್ರು ನಗಿಸ್ತೀರಾ ಎಂದು ವಾಗ್ದಾಳಿ ನಡೆಸಿದ್ದರು.

    ಮುನಿರತ್ನ ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ರು ಅಂತ ನಾನು ಸಹ ಅವರ ಬಗ್ಗೆ ಮಾತನಾಡಿದ್ದೇನೆ. ಅವರೇ ಹೇಳಿದ್ದಾರೆ ನನ್ನ ತಾಯಿ ಕಾಂಗ್ರೆಸ್ ಅಂತ. ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು, ಈಗ ಕೇಸರಿ ಆಗಿದೆ. ಇದು ಪಕ್ಷದ ವಿಚಾರ ಮಾತನಾಡಿದ್ದೇವೆ. ವೈಯಕ್ತಿಕ ವಿಚಾರಗಳು ಯಾರೂ ಮಾತನಾಡಿಲ್ಲ. ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇವೆ ಎಂದಿದ್ದರು.

    ಕಣ್ಣೀರಿಟ್ಟು ಮುನಿರತ್ನ ಹೇಳಿದ್ದೇನು?:
    ಇಂದು ನಾಯಕರು ಹೋದಾಗ ಪ್ರತಿಪಕ್ಷದ ಕಾರ್ಯಕರ್ತರು ತಮ್ಮ ಲೀಡರ್ ಹೆಸರು ಹೇಳಿ ಜಿಂದಾಬಾದ್ ಹೇಳುವುದು ಸಾಮಾನ್ಯ. ಒಂದು ಸಾರಿ ಸಿದ್ದರಾಮಯ್ಯನವರು ಮತ್ತು ನಾನು ಕಾರ್ ನಲ್ಲಿ ಹೋಗುತ್ತಿರುವಾಗ ಯುವಮೋರ್ಚಾ ಕಾರ್ಯಕರ್ತರು ಮೋದಿ ಜಿಂದಾಬಾದ್ ಅಂತ ಕೂಗಿದ್ದರು. ಕೆಲ ನಿಮಿಷ ಘೋಷಣೆ ಕೂಗ್ತಾರೆ ಅಂತ ಸುಮ್ಮನಾಗಿದ್ದೆ. ಬೇರೆ ಪಕ್ಷದವರು ಜಿಂದಾಬಾದ್ ಕೂಗುವ ವೇಳೆ ಒಬ್ಬ ನಾಯಕರು, ಮುನಿರತ್ನ ಅವರ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ. ಈ ರೀತಿ ಮಾತಾಡಿದಾಗ ಅಲ್ಲಿದ್ದ ಪಕ್ಷದ ಕಾರ್ಯಕರ್ತರು ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಧರಣಿ ನಡೆಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ ಎಂದು ಮುನಿರತ್ನ ಸ್ಪಷ್ಟನೆ ನೀಡಿದ್ದರು.

    ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನ ಮಾಡುವ ಮೂಲಕ ಪ್ರಚಾರ ನಡೆಸುತ್ತಿರುವದಕ್ಕೆ ನನ್ನ ವಿರೋಧವಿಲ್ಲ. ತೀರಿ ಹೋಗಿರುವ ನನ್ನ ತಾಯಿಯನ್ನ ಮಾರಾಟ ಮಾಡಿದ್ದೀರಿ ಅಂತ ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿದೆ. ಮುನಿರತ್ನ ತಾಯಿಯನ್ನ ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ, ಟೀಕಿಸಿ ನಾನು ಬೇಡ ಅಂತ ಹೇಳಲ್ಲ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡೋದು ಏಕೆ? ಸತ್ತು ಹೋಗಿರುವ ತಾಯಿಯನ್ನ ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನಮ್ಮ ತಾಯಿಯನ್ನ ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಕಣ್ಣೀರಿಟ್ಟಿದ್ದರು

  • ರಂಗೇರಲಿದೆ ಮಿನಿ ಕುರುಕ್ಷೇತ್ರ – ಮುನಿರತ್ನ ಪರ ಧೂಳೆಬ್ಬಿಸ್ತಾರಾ ಸಾರಥಿ?

    ರಂಗೇರಲಿದೆ ಮಿನಿ ಕುರುಕ್ಷೇತ್ರ – ಮುನಿರತ್ನ ಪರ ಧೂಳೆಬ್ಬಿಸ್ತಾರಾ ಸಾರಥಿ?

    ಬೆಂಗಳೂರು: ಆರ್.ಆರ್ ನಗರ ಕ್ಚೇತ್ರದ ಉಪಚುನಾವಣೆ ಪ್ರಚಾರ ಕಣ ಕ್ಲೈಮಾಕ್ಸ್ ಗೆ ಬರ್ತಿದೆ. ಕ್ಲೈಮಾಕ್ಸ್ ನಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಈ ಮೂಲಕ ಆರ್ ಆರ್ ನಗರದಲ್ಲಿ ಸಾರಥಿ ಧೂಳೆಬ್ಬಿಸ್ತಾರೆ ಎನ್ನಲಾಗ್ತಿದೆ.

    ಸ್ಯಾಂಡಲ್‍ವುಡ್‍ನ ಚಾಲೆಜಿಂಗ್ ಸ್ಟಾರ್ ದರ್ಶನ್, ಕನ್ನಡದ ಸೂಪರ್ ಸ್ಟಾರ್  ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರೋ ಯಜಮಾನ ಎರಡು ವರ್ಷಗಳ ಹಿಂದೆ ಇದೇ ದಾಸ ಮಂಡ್ಯ ಎಲೆಕ್ಷನ್‍ನಲ್ಲಿ ಮಿಂಚಿದ್ದನ್ನು ಯಾರೂ ಮರೆಯಂಗೇ ಇಲ್ಲ. ತಮ್ಮ ಮದರ್ ಇಂಡಿಯಾ ಸುಮಲತಾ ಅಂಬರೀಶ್ ಪರ ದರ್ಶನ್ ಮಂಡ್ಯದಲ್ಲಿ ಕ್ಯಾಂಪೇನ್ ಮಾಡಿದ್ದರು. ಅಂದಿನ ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸಿನಿಮಾ ಸ್ಟೈಲ್‍ನಲ್ಲೇ ಟಾಂಗ್ ಕೊಟ್ಟಿದ್ರು.

    ಅಂದು ಚಂದನವನದ ಯಜಮಾನನಿಗೆ ಜೊತೆಯಾಗಿದ್ದು ರಾಕಿಂಗ್ ಸ್ಟಾರ್ ಯಶ್. ಜೋಡೆತ್ತು ಅಂತಲೇ ಕರೆಸಿಕೊಂಡಿದ್ದ ಜೋಡಿ, ಸಕ್ಕರೆನಾಡಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮತಬೇಟೆ ನಡೆಸಿದ್ದರು. ದರ್ಶನ್ ಖದರ್‍ಗೆ ಮೆಚ್ಚಿದ ಮಂಡ್ಯದ ಜನ ಸಿನಿಮಾವನ್ನು ಅಂಡ್ರೆಡ್ ಡೇಸ್ ಓಡಿಸಿದಂತೆ ಸುಮಲತಾರಿಗೆ ವೋಟು ಹಾಕಿದ್ದರು. ಸುಮಲತಾರನ್ನು ಎಂಪಿ ಮಾಡೋವರೆಗೂ ದರ್ಶನ್ ವಿರಮಿಸಲೇ ಇಲ್ಲ.

    ಮಿನಿ ಕುರುಕ್ಷೇತ್ರದಲ್ಲಿ ಸುಯೋಧನ:
    ಈಗ ರಾಜ್ಯದಲ್ಲಿ ಬೈ ಎಲೆಕ್ಷನ್ ಬಂದಿದೆ. ಅದ್ರಲ್ಲೂ ದರ್ಶನ್ ಹಾಕಿಕೊಂಡು ಬಹುಕೋಟಿ ಸಿನಿಮಾ ಕುರುಕ್ಷೇತ್ರ ನಿರ್ಮಿಸಿದ್ದ ಮುನಿರತ್ನ ಚುನಾವಣೆಗೆ ನಿಂತಿದ್ದಾರೆ. ದರ್ಶನ್ ಮನೆ ಸಹ ಆರ್.ಆರ್ ನಗರದಲ್ಲೇ ಇದೆ. ಮುನಿರತ್ನ ಕೂಡ ದರ್ಶನ್ ಆಪ್ತರಲ್ಲಿ ಒಬ್ಬರಾಗಿದ್ದು ಚುನಾವಣಾ ಪ್ರಚಾರಕ್ಕೆ ಗಜ ಬರ್ತಾರೆ ಎನ್ನಲಾಗ್ತಿದೆ.

    ಅಂದು ಮಂಡ್ಯದಲ್ಲಿ ಇರುವಂತೆ ಆರ್.ಆರ್ ನಗರ ಕ್ಷೇತ್ರದಲ್ಲೂ ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಂಡು ಜೆಡಿಎಸ್ ಅಭ್ಯರ್ಥಿ ಪರ ಒಂದು ಸುತ್ತು ಕ್ಯಾಂಪೇನ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಹುರಿಯಾಳು ಮುನಿರತ್ನ ಪರ ಪ್ರಚಾರದ ಅಖಾಡಕ್ಕೆ ಧುಮುಕುತ್ತಾರೆ ಎನ್ನಲಾಗ್ತಿದೆ. ಮಿನಿ ಕುರುಕ್ಷೇತ್ರದ ರಣಕಣದಲ್ಲಿ ಮತ್ತೆ ಸುಯೋಧನ-ಅಭಿಮನ್ಯು ಮುಖಾಮುಖಿ ಆಗ್ತಾರಾ..? ಸಿನಿಮಾದ ಸೀನ್ ರಿಪೀಟ್ ಆಗುತ್ತಾ ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

    ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿಯರಾದ ಖುಷ್ಬೂ, ತಾರಾ ಕ್ಯಾಂಪೇನ್ ಮಾಡಿದ್ದಾರೆ. ದರ್ಶನ್ ಸಹ ಪ್ರಚಾರಕ್ಕಿಳಿದ್ರೆ ಚುನಾವಣಾ ಕಣ ರಂಗೇರಲಿದೆ.

  • ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

    ಬಿಎಸ್‍ವೈ, ಮೋದಿ ಅವರೇನು ಎಳೆ ಕಡಸುಗಳಾ?- ಸಿದ್ದರಾಮಯ್ಯ

    ಬೆಂಗಳೂರು: ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮುದಿ ಎತ್ತು ಎಂದು ಹೇಳಿದ್ದ ಬಿಜೆಪಿಯ ನಾಯಕರ ಹೇಳಿಕೆಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ವಯಸ್ಸಾಗಿದೆ ಅಂದ್ರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ ಎಂದು ಪ್ರಶ್ನೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ. ಹಾಗಾದರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ?. ಚುನಾವಣೆಯನ್ನು ಸಾಧನೆ ಮತ್ತು ಸಿದ್ಧಾಂತದ ಮೂಲಕ ಎದುರಿಸಲಾಗದವರು ಮಾತ್ರ ಸೋಲಿನ ಭೀತಿಯಿಂದ ಈ ರೀತಿ ಚಾರಿತ್ರ್ಯಹರಣ, ಗೂಂಡಾಗಿರಿ, ಹಣ ಹಂಚುವುದು ಮೊದಲಾದ ಅಡ್ಡದಾರಿ ಹಿಡಿಯುವುದು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

    ಮಂಗಳವಾರ ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ ಮಾಡಿದ್ದರು. ಇದು ಬಿಜೆಪಿಯವರ ರಾಜಕಾರಣದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ ಎಂದು ಆರೋಪಿಸಿದ್ದಾರೆ.

    ಆರ್.ಆರ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದ ಮುನಿರತ್ನ ಅವರೆ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಮೂಲ ಕಾರಣ. ಸೋಲಿನ ಭಯದಿಂದ ಜಿ.ಕೆ ವೆಂಕಟೇಶ್ ಅಂಥವರನ್ನು ಮುಂದೆ ಬಿಟ್ಟು ಮುನಿರತ್ನ ಅವರೆ ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವ್ರೆ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ, ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ ಎಂದು ತಮ್ಮ ಆಪ್ತರ ಹೇಳಿಕೆಯನ್ನ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡರು.

    ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದೇನು?: ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದರು.

  • ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

    ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

    ಬೆಂಗಳೂರು: ಕಾಂಗ್ರೆಸ್ ನಾಯಕರ ಹೇಳಿಕೆಗೆ ನೊಂದ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದಾರೆ.

    ಇಂದು ನಾಯಕರು ಹೋದಾಗ ಪ್ರತಿಪಕ್ಷದ ಕಾರ್ಯಕರ್ತರು ತಮ್ಮ ಲೀಡರ್ ಹೆಸರು ಹೇಳಿ ಜಿಂದಾಬಾದ್ ಹೇಳುವುದು ಸಾಮಾನ್ಯ. ಒಂದು ಸಾರಿ ಸಿದ್ದರಾಮಯ್ಯನವರು ಮತ್ತು ನಾನು ಕಾರ್ ನಲ್ಲಿ ಹೋಗುತ್ತಿರುವಾಗ ಯುವಮೋರ್ಚಾ ಕಾರ್ಯಕರ್ತರು ಮೋದಿ ಜಿಂದಾಬಾದ್ ಅಂತ ಕೂಗಿದ್ದರು. ಕೆಲ ನಿಮಿಷ ಘೋಷಣೆ ಕೂಗ್ತಾರೆ ಅಂತ ಸುಮ್ಮನಾಗಿದ್ದೆ. ಬೇರೆ ಪಕ್ಷದವರು ಜಿಂದಾಬಾದ್ ಕೂಗುವ ವೇಳೆ ಒಬ್ಬ ನಾಯಕರು, ಮುನಿರತ್ನ ಅವರ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ. ಈ ರೀತಿ ಮಾತಾಡಿದಾಗ ಅಲ್ಲಿದ್ದ ಪಕ್ಷದ ಕಾರ್ಯಕರ್ತರು ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಧರಣಿ ನಡೆಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ ಎಂದು ಮುನಿರತ್ನ ಸ್ಪಷ್ಟನೆ ನೀಡಿದರು.

    ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನ ಮಾಡುವ ಮೂಲಕ ಪ್ರಚಾರ ನಡೆಸುತ್ತಿರುವದಕ್ಕೆ ನನ್ನ ವಿರೋಧವಿಲ್ಲ. ತೀರಿ ಹೋಗಿರುವ ನನ್ನ ತಾಯಿಯನ್ನ ಮಾರಾಟ ಮಾಡಿದ್ದೀರಿ ಅಂತ ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿದೆ. ಮುನಿರತ್ನ ತಾಯಿಯನ್ನ ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ, ಟೀಕಿಸಿ ನಾನು ಬೇಡ ಅಂತ ಹೇಳಲ್ಲ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡೋದು ಏಕೆ? ಸತ್ತು ಹೋಗಿರುವ ತಾಯಿಯನ್ನ ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನಮ್ಮ ತಾಯಿಯನ್ನ ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಕಣ್ಣೀರಿಟ್ಟರು.

  • ಆರ್‌ಆರ್ ನಗರದ ಜನರಿಗೆ ದೊಡ್ಡ ಬಂಡೆ, ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ: ಆರ್.ಅಶೋಕ್

    ಆರ್‌ಆರ್ ನಗರದ ಜನರಿಗೆ ದೊಡ್ಡ ಬಂಡೆ, ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ: ಆರ್.ಅಶೋಕ್

    ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಪರ ಸಚಿವ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ಆರ್‍ಆರ್ ನಗರದ ಜನರಿಗೆ ದೊಡ್ಡ ಬಂಡೆ, ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ ಎಂದು ಟೀಕೆ ಮಾಡಿದರು.

    ಪ್ರಚಾರದಲ್ಲಿ ಮಾತನಾಡಿದ ಅಶೋಕ್ ಅವರು, ಮುನಿರತ್ನ ಅವರು ಇದೇ ಊರು. ಡಿಕೆ ಶಿವಕುಮಾರ್ ನೂರು ಕಿ.ಮೀ ದೂರದ ಊರಿನವರು. ಇವರ ಯೋಗ್ಯತೆಗೆ ನಿಮಗೆ ರೇಷನ್ ಕೊಡಲಿಲ್ಲ. ಆರ್ ಆರ್ ನಗರದ ಜನರಿಗೆ ದೊಡ್ಡ ಬಂಡೆ ಮತ್ತು ಚಿಕ್ಕ ಬಂಡೆ ಏನೂ ಕೊಟ್ಟಿಲ್ಲ. ಆದರೆ ನಿಮ್ಮ ಕಷ್ಟಕ್ಕೆ ಆಗುವುದು ಮುನಿರತ್ನ ಮಾತ್ರ ಎಂದು ಜನರ ಬಳಿ ಮತಯಾಚನೆ ಮಾಡಿದರು.

    ವಿಧಾನಸೌಧದ ಮೆಟ್ಟಿಲಿಗೆ ಕಲ್ಲಾಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಅದರ ಅವಶ್ಯಕತೆ ಇಲ್ಲ. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧಕ್ಕೆ ಬೇಕಾದಷ್ಟು ಕಲ್ಲು ಹಾಕಿ ಕಟ್ಟಿದ್ದಾರೆ. ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಕುಮಾರಸ್ವಾಮಿ ಡಿಕೆಶಿ ಜೋಡೆತ್ತು ಅನ್ನುತ್ತಿದ್ದರು. ಈಗ ಆ ಜೋಡೆತ್ತು ಕುಂಟೆತ್ತು ಆಗಿದೆ. ಕೊಂಬು ಮುರಿದು ಹೋಗಿದೆ. ಕುರುಕ್ಷೇತ್ರದ ನಿಜವಾದ ಹೀರೊ ಮುನಿರತ್ನ. ರಾಜ್ಯಕ್ಕೆ ಯಡಿಯೂರಪ್ಪ ಸರ್ಕಾರ, ಆರ್ ಆರ್ ನಗರಕ್ಕೆ ಮುನಿರತ್ನ ಅವರು ಎಂದು ಕರೆ ನೀಡಿದರು.

    ಇದೇ ವೇಳೆ ಮಾತನಾಡಿದ ಮುನಿರತ್ನ ಅವರು, ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಶಕ್ತಿಮೀರಿ ಕೆಲಸ ಮಾಡ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಮತ ಚಲಾಯಿಸುತ್ತಾರೆ. ಮುನಿರತ್ನ ಕೆಲಸ ಮಾಡ್ತಾನೆ ಅನ್ನೋ ನಂಬಿಕೆ ಜನರಲ್ಲಿದೆ ಎಂದು ತಿಳಿಸಿದರು.

  • ಆರ್‍ಆರ್ ನಗರದಲ್ಲಿ ಮುನಿರತ್ನ ಪ್ರಚಾರ – ಡಿಕೆಶಿ ಜಾತಿ ರಾಜಕಾರಣಕ್ಕೆ ಕಿಡಿ

    ಆರ್‍ಆರ್ ನಗರದಲ್ಲಿ ಮುನಿರತ್ನ ಪ್ರಚಾರ – ಡಿಕೆಶಿ ಜಾತಿ ರಾಜಕಾರಣಕ್ಕೆ ಕಿಡಿ

    ಬೆಂಗಳೂರು: ಹೈವೋಲ್ಟೇಜ್ ಆರ್‍ಆರ್ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ಬಿರುಸು ಪಡೆದುಕೊಳ್ತಿದೆ. ಇದರ ಜೊತೆಗೆ ಪರಸ್ಪರ ವಾಗ್ಬಾಣಗಳೂ ತೀವ್ರಗೊಂಡಿವೆ.

    ಆರ್‍ಆರ್ ನಗರ ಕ್ಷೇತ್ರಕ್ಕೆ ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾಯಕರ ಮಧ್ಯೆ ಮಾತಿನ ಬಾಣಗಳೂ ತೀವ್ರಗೊಳ್ಳುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಿಡಿಕಿಡಿಯಾಗಿದ್ದಾರೆ. ಕಾಂಗ್ರೆಸ್ಸಿನಲ್ಲಿದ್ದಾಗ ಈ ರೀತಿ ಮಾತಾಡದಿರುವವರು ಜಾತಿ ಬಗ್ಗೆ ಮಾತಾಡಿ ಸ್ವಾರ್ಥ ತೋರಿದ್ದಾರೆ. ಸಿಎಂ ಆಗ್ತೀನಿ ಅಂತ ಹೇಳಿಕೊಳ್ಳೋರಿಗೆ ಇಂತಹ ಮಾತು ಶೋಭೆ ತರಲ್ಲ ಅಂತ ಮುನಿರತ್ನ ತಿರುಗೇಟು ಕೊಟ್ರು. ಕೆಂಪೇಗೌಡರ ಇತಿಹಾಸ ಓದ್ಕೊಂಡು ರಾಜಕಾರಣ ಮಾಡಲಿ ಅಂತ ಹೇಳಿದ್ರು.

    ಜಾಲಹಳ್ಳಿ ಮತ್ತು ಕೊಟ್ಟಿಗೆಪಾಳ್ಯ ವಾರ್ಡ್ ಗಳಲ್ಲಿ ಸಚಿವ ಶ್ರೀರಾಮುಲು ಅವರು ಮುನಿರತ್ನ ಪರ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ್ರು. ಈ ವೇಳೆ ಮಾತಾಡಿದ ಸಚಿವ ಶ್ರೀರಾಮುಲು, ಆರ್ ಆರ್ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರೆ. ತಾವು ಕಲ್ಲುಬಂಡೆ, ಸೋಲಿಲ್ಲದ ಸರದಾರರು ಸಿಎಂ ಆಗೋರು ಅಂತ ಹೇಳಿಕೊಳ್ಳುವ ಡಿಕೆಶಿ ಮತ್ತು ಡಿಕೆಸು ಹೆಸರುಗಳನ್ನು ಕ್ಷೇತ್ರದ ಜನ ಕಳಚಿ ಹಾಕ್ತಾರೆ ಎಂದು ತಿವಿದ್ರು.

    ಹೆಚ್‍ಎಂಟಿ ವಾರ್ಡ್‍ನಲ್ಲಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳ ಜೊತೆ ಮುನಿರತ್ನ ಸಭೆ ನಡೆಸಿದ್ರು. ಬಳಿಕ ಲಗ್ಗೆರೆಯಲ್ಲಿ ಪ್ರಚಾರ ಕಾರ್ಯ ಮುಂದುವರೆಸಿದ್ರು. ಈ ಮಧ್ಯೆ ವಾರ್ಡ್ ಮಟ್ಟದ ಮುಖಂಡರ, ಕಾರ್ಯಕರ್ತರ ಸಭೆ ನಡೆಸಿದ್ರು.

  • ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ

    ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ

    ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರೇ ಸಂಸದರು. ಎಲ್ಲ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅಕ್ರಮಕ್ಕೆ ಅವಕಾಶ ಕೊಡಬಾರದು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್‍ನವರು ಎಲ್ಲ ಸಂದರ್ಭದಲ್ಲೂ ಗುದ್ದಾಟ ಮಾಡುತ್ತಾರೆ. ಈಗ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗಲು, ಇಲ್ಲದಿರುವಾಗಲು ಕಾಂಗ್ರೆಸ್‍ನವರು ಗುದ್ದಾಟ ನಡೆಸುತ್ತಾರೆ. ಇದು ಕಾಂಗ್ರೆಸ್ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹೀಗಾಗಿ ಅವರ ಗುದ್ದಾಟ ಬಿಜೆಪಿಗೆ ಏನು ಏಫೆಕ್ಟ್ ಆಗಲ್ಲ ಎಂದು ಹೇಳಿದರು.

    ಕೊರೊನಾ ಲಸಿಕೆ ಉಚಿತ ನೀಡುವ ಚುನಾವಣಾ ಪ್ರಣಾಳಿಕೆ ಕುರಿತು ಮಾತನಾಡಿದ ಅವರು, ನಮ್ಮದೇ ಸರ್ಕಾರ ಇದೆ. ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ನಮ್ಮ ಗುರಿ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಹೀಗಾಗಿಯೇ ಉಚಿತವಾಗಿ ಕೊಡುತ್ತೇವೆ ಎನ್ನುವುದರಲ್ಲಿ ತಪ್ಪಿಲ್ಲ. ಆದಷ್ಟು ಬೇಗ ರಾಜ್ಯದ ಜನರಿಗೆ ಕೊರೊನಾ ಲಸಿಕೆ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ಭರವಸೆ ವ್ಯಕ್ತಪಡಿಸಿದ್ದಾರೆ.

  • ವಿಜಯದಶಮಿ ಬಳಿಕ ಸಿಎಂ ಯಡಿಯೂರಪ್ಪ ಅಖಾಡಕ್ಕೆ!

    ವಿಜಯದಶಮಿ ಬಳಿಕ ಸಿಎಂ ಯಡಿಯೂರಪ್ಪ ಅಖಾಡಕ್ಕೆ!

    ಬೆಂಗಳೂರು: ವಿಜಯದಶಮಿಯ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಹೌದು. ಸೋಮವಾರದ ಬಳಿಕ ಬೈ ಎಲೆಕ್ಷನ್ ಕುರಿತು ಸಿಎಂ ಕ್ಯಾಂಪೇನ್ ಮಾಡಲಿದ್ದಾರೆ. ಆರ್ ಆರ್ ನಗರವೇ ಯಡಿಯೂರಪ್ಪ ಅವರ ಮೊದಲ ಟಾರ್ಗೆಟ್ ಆಗಿದೆ. ಎರಡು ಕ್ಷೇತ್ರಗಳನ್ನು ಕೂಡ ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿದ್ದು, ಹೀಗಾಗಿ ರಾಜ್ಯ ಬಿಜೆಪಿ ನಾಯಕರಿಂದ ಮೆಗಾ ಗೇಮ್ ಪ್ಲಾನ್ ನಡೀತಿದೆ. ಎರಡು ಕ್ಷೇತ್ರಗಳ ಮೇಲೆ ಕಣ್ಗಾವಲಿನ ಮೇಲೆ ಕಣ್ಗಾವಲು ಇಡಲಾಗಿದೆ.

    ಕಡೆಯ ನಾಲ್ಕು ದಿನ ಸಿಎಂ ಯಡಿಯೂರಪ್ಪರನ್ನ ಪ್ರಚಾರಕ್ಕೆ ಇಳಿಸಲು ಪ್ಲಾನ್ ರೂಪಿಸಲಾಗಿದೆ. ಹೀಗಾಗಿ ರಾಜರಾಜೇಶ್ವರಿನಗರದಲ್ಲಿ 2 ದಿನ ಹಾಗೂ ಶಿರಾದಲ್ಲಿ 2 ದಿನ ಸಿಎಂ ಕ್ಯಾಂಪೇನ್ ಮಾಡಲಿದ್ದಾರೆ. ಆರ್‍ಆರ್ ನಗರದಲ್ಲಿ ವಾರ್ಡ್ ಮಟ್ಟ, ಶಿರಾದಲ್ಲಿ ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸಲಿದ್ದಾರೆ.

    ಮಂಗಳವಾರದಿಂದ ಶನಿವಾರದವರೆಗೆ 4 ದಿನ ಬರುವಂತೆ ಬಿಜೆಪಿ ಈಗಾಗಲೇ ಸಿಎಂ ಅವರಿಗೆ ಆಹ್ವಾನ ನೀಡಿದೆ. ಈ ಹಿನ್ನೆಲೆಯಲ್ಲಿ ವಿಜಯದಶಮಿ ಬಳಿಕ ಬರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಆರ್.ಆರ್.ನಗರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ- ‘ಕೈ’ ಕಾರ್ಪೋರೇಟ್ ಗಳು ಬಿಜೆಪಿಗೆ ಜಂಪ್

    ಆರ್.ಆರ್.ನಗರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ- ‘ಕೈ’ ಕಾರ್ಪೋರೇಟ್ ಗಳು ಬಿಜೆಪಿಗೆ ಜಂಪ್

    ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲೀಗ ಪಕ್ಷಾಂತರ ಪರ್ವ ಜೋರಾಗಿಯೆ ಇದೆ. ಕಮಲ ಅಭ್ಯರ್ಥಿ ಮುನಿರತ್ನ ಬೆಂಲಿಸಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಅಧಿಕೃತವಾಗಿ ಜಂಪ್ ಆಗಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿ ಸೇರ್ಪಡೆಯಾದರು. ಜಾಲಹಳ್ಳಿ, ಹೆಚ್ ಎಂಟಿ, ಯಶವಂತಪುರ, ಲಕ್ಷ್ಮೀದೇವಿನಗರ, ಕೊಟ್ಟಿಗೆಪಾಳ್ಯ ವಾರ್ಡ್ ಕಾರ್ಪೋರೇಟ್ ಗಳು ಬಿಜೆಪಿ ಸೇರಿದರು. ಆರ್ ಆರ್ ನಗರ ಬಿಜೆಪಿ ಚುನಾವಣೆ ಉಸ್ತುವಾರಿ ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿದ್ದರು.

    ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ನಡೆಯಲ್ಲ, ನಿಮ್ಮ ಹತ್ತಿರ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೆಟ್ ಇವೆ. ನಿಮ್ಮನ್ನ ಪುಡಿಪುಡಿ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದರು. ಇನ್ನೊಂದೆಡೆ ಆರ್.ಅಶೋಕ್, ಸಿ.ಟಿ.ರವಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಜಾತಿ ಹೆಸರಲ್ಲಿ ರಾಜಕೀಯ ಮಾಡಲ್ಲ ನಾವು, ನಾಯಕರನ್ನ ಮುಗಿಸಿ ನಾಯಕರು ಆಗಬೇಕು ಎನ್ನುವ ಮನಸ್ಥಿತಿ ನಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ನಡುವೆ ಆರ್. ಆರ್.ನಗರ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ಕೈಗೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಒಟ್ಟಿನಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಅಖಾಡ ರಂಗೇರುತ್ತಿದ್ದು, ಇವತ್ತು ಕಾಂಗ್ರೆಸ್ ಗೆ ಬಿಜೆಪಿ ಬಿಗ್ ಶಾಕ್ ಕೊಟ್ಟಿರೋದು ಮತ್ತಷ್ಟು ಕುತೂಹಲ ಕೆರಳಿಸಿದೆ.

  • ಹಾಸನ ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ?- ಸರ್ಕಾರಕ್ಕೆ ಹೆಚ್.ಡಿ.ರೇವಣ್ಣ ಪ್ರಶ್ನೆ

    ಹಾಸನ ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ?- ಸರ್ಕಾರಕ್ಕೆ ಹೆಚ್.ಡಿ.ರೇವಣ್ಣ ಪ್ರಶ್ನೆ

    – ಕರ್ನಾಟಕದಲ್ಲಿ ಹಾಸನ ಅನಾಥ ಜಿಲ್ಲೆ

    ಹಾಸನ: ಜಿಲ್ಲೆಯ ಐದು ತಾಲೂಕುಗಳನ್ನು ಸರ್ಕಾರ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಆದ್ರೆ ಇದುವರೆಗೂ ಒಂದು ರೂಪಾಯಿ ಪರಿಹಾರದ ಹಣ ನೀಡಿಲ್ಲ. ಹಾಸನ ಜಿಲ್ಲೆ ಕರ್ನಾಟಕದ ಭೂಪಟದಲ್ಲಿ ಇಲ್ಲವೇ ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ.

    ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ.ರೇವಣ್ಣ, ರಾಜ್ಯದಲ್ಲಿ ಒಂದೆಡೆ ಕೊರೊನದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಮಳೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ ಜಿಲ್ಲೆ ರಾಜ್ಯದ ಭೂಪಟದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕರ್ನಾಟಕದಲ್ಲಿ ಹಾಸನ ಅನಾಥ ಜಿಲ್ಲೆಯಾಗಿದ್ದು, ಕಪ್ಪುಪಟ್ಟಿಗೆ ಸೇರಿಸಿ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

    150 ವರ್ಷಗಳ ಇತಿಹಾಸವಿರುವ ನೆಹರು, ಮಹಾತ್ಮಗಾಂಧಿ ಕಟ್ಟಿದ ಕಾಂಗ್ರೆಸ್ ಮತ್ತು ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ ಬಿಜೆಪಿ ಟಿಕೆಟ್ ನೀಡಿದೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ, ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ ನಲ್ಲಿದ್ದ ಡಾಕ್ಟರ್ ಅನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಟಿಕೆಟ್ ನೀಡಿದ್ದಾರೆ. ಎಲ್ಲವನ್ನೂ ಜನತೆಗೆ ಬಿಡುತ್ತೇವೆ. ಕುಮಾರಸ್ವಾಮಿ ಸಾಲಮನ್ನಾ ಮಾಡಿ, ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಮತ ಕೇಳುತ್ತೇವೆ. ಅಕ್ಟೋಬರ್ 23 ರ ನಂತರ ಉಪ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೆಚ್.ಡಿ.ರೇವಣ್ಣ ಹೇಳಿದರು.