Tag: ಆರ್ ಆರ್ ನಗರ

  • ಇಂದಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ: ಮುನಿರತ್ನ

    ಇಂದಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ: ಮುನಿರತ್ನ

    ಬೆಂಗಳೂರು: ಮತದಾರರ ಬಳಿ ಮತ ಭಿಕ್ಷೆ ಕೇಳಿದ್ದೀನಿ. ಆ ಭಿಕ್ಷೆ ಕೊಡುತ್ತಾರೆ ಎಂದು ನಂಬಿದ್ದೀನಿ ಎಂದು ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾದಂತಹ ಸಂದರ್ಭದಲ್ಲಿ ಮತದಾನ ಮಾಡುವುದು ವಿಶೇಷವಾಗಿದೆ. 18 ವರ್ಷದ ಯುವಕ ತನ್ನ ಮೊದಲ ಮತದಾನದಲ್ಲಿ ಭಾಗಿಯಾಗುತ್ತಿದ್ದರೆ, ಇವತ್ತಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ. ಏಕೆಂದರೆ ಕೊರೊನಾ ಕಾರಣದಿಂದ ಚುನಾವಣಾ ಆಯೋಗ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕೊರೊನಾಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ಶಾಂತಿಯುತ ಮತದಾನ ನಡೆಯುತ್ತಿದೆ. ಕೈಗೆ ಗ್ಲೌಸ್, ಫೇಸ್ ಮಾಸ್ಕ್ ಹಾಕಿಕೊಂಡು ಸ್ಯಾನಿಟೈಸರ್ ಬಳಕೆ ಮಾಡಿ ಕೊರೊನಾ ಸಂದರ್ಭದಲ್ಲಿ ಮತದಾನ ಮಾಡಿದ ಅನುಭವ ಜೀವನದಲ್ಲಿ ನೆನಪಿನಲ್ಲಿ ಉಳಿಯುತ್ತೆ ಎಂದರು.

    ಕ್ಷೇತ್ರದ ಮತದಾರರು ಬುದ್ಧಿವಂತರಾಗಿದ್ದು, ಎಲ್ಲರೂ ಖಂಡಿತ ಬಂದು ಮತ ಚಲಾಯಿಸುತ್ತಾರೆ. ಯಾರಿಗಾದರೂ ಮತ ಹಾಕಿ ಆದರೆ ಎಲ್ಲರೂ ಮತದಾನ ಮಾಡಿ. ನಾನು ಮಲ್ಲೇಶ್ವರಂ ನಿವಾಸಿಯಾಗಿದ್ದು, ನನಗೆ ಆರ್.ಆರ್ ನಗರದಲ್ಲಿ ಮತದಾನದ ಅವಕಾಶವಿಲ್ಲ. ಆದ್ದರಿಂದ ಮನೆಯಲ್ಲಿ ಇರುತ್ತೇನೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದು, ಜನರ ತೀರ್ಪು ಅಂತಿಮವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾಡಿದ ಆರೋಪಿಗಳಿಗೆ ನಾನು ಫಲಿತಾಂಶದ ದಿನ ಉತ್ತರ ಕೊಡುತ್ತೇನೆ. ಆರೋಪ ಮಾಡಿದವರು ತಿರುಪತಿಗೆ ಅಲ್ಲ, ಈ ಭೂಲೋಕದ ಯಾವುದೇ ದೇವಸ್ಥಾನಕ್ಕೆ ಕರೆದರೂ ನಾನು ಬರಲು ಸಿದ್ಧನಾಗಿದ್ದೇನೆ. ಅವರು ಸಿದ್ಧರಾಗಿ ಇರಲಿ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ದೊಡ್ಡ ವಿಚಾರವಿಲ್ಲ ಎಂದರು.

    ರಾಜಕಾರಣಿಗೂ ಭಿಕ್ಷೆ ಬೇಡುವವನಿಗೂ ಯಾವುದೇ ವ್ಯತ್ಯಾಸವಿಲ್ಲ. ಭಿಕ್ಷೆ ಬೇಡುವವರು ಅಮ್ಮ ಊಟ ಎನ್ನುತ್ತಾನೆ, ನಾವು ಅಮ್ಮ ಮತ ನೀಡಿ ಎನ್ನುತ್ತೇವೆ. ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಡಲು ಸಿದ್ಧವಾಗಿದ್ದು, ಚುನಾವಣಾ ಆಯೋಗ ಅನುಮತಿ ಪಡೆದು ಪ್ರತಿಕಾಗೋಷ್ಠಿ ನಡೆಸುತ್ತೇನೆ. ಅಲ್ಲದೇ ನಾನು ಜಂಟಿ ಸುದ್ದಿಗೋಷ್ಠಿ ನಡೆಸಲು ಕೂಡ ಸಿದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

  • ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಬೆಂಗಳೂರು: ಪ್ರತಿಷ್ಠೆಯ, ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಶುರು ಆಗಿದೆ. ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.

    ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.

    ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಪುರುಷ ಮತದಾರರು 1 ಲಕ್ಷದ 10 ಸಾವಿರದ 281 ಮಂದಿ ಇದ್ದರೆ, ಮಹಿಳಾ ಮತದಾರರು 1 ಲಕ್ಷದ 5 ಸಾವಿರದ 434 ಮಂದಿ ಇದ್ದು, ಒಟ್ಟು ಮತದಾರರು 2 ಲಕ್ಷದ 15 ಸಾವಿರದ 725 ಮಂದಿ ಇದ್ದಾರೆ. ಆರ್ ಆರ್ ನಗರದಲ್ಲಿ 4 ಲಕ್ಷದ 62 ಸಾವಿರ ಮಂದಿ ಮತದಾರರಿದ್ದಾರೆ.

    ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿರೋರು, ಕ್ವಾರಂಟೈನ್‍ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೋನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.

  • ಜಿದ್ದಾಜಿದ್ದಿನ ಆರ್‌ಆರ್‌ ನಗರ, ಶಿರಾಕ್ಕೆ ನಾಳೆ ಮತದಾನ- ಇವತ್ತು ಮನೆ ಮನೆ ಮತಬೇಟೆ

    ಜಿದ್ದಾಜಿದ್ದಿನ ಆರ್‌ಆರ್‌ ನಗರ, ಶಿರಾಕ್ಕೆ ನಾಳೆ ಮತದಾನ- ಇವತ್ತು ಮನೆ ಮನೆ ಮತಬೇಟೆ

    ಬೆಂಗಳೂರು: ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದ್ದು, ಇವತ್ತು ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ಅವಕಾಶ ಇದೆ.

    21 ದಿನಗಳಿಂದ ನಡೆದಿದ್ದ ಪ್ರಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬಹಿರಂಗ ಪ್ರಚಾರದ ಅವಧಿ ಮುಗಿದಂತೆ ಕ್ಷೇತ್ರದ ಮತದಾರರಲ್ಲದವರೂ ಕೂಡಾ ಕ್ಷೇತ್ರವನ್ನು ಖಾಲಿ ಮಾಡಿ ತೆರಳಬೇಕಾಗುತ್ತದೆ. ನಾಳೆ ಮತದಾನ ನಡೆಯಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ ಬಿ ಜಯಚಂದ್ರ, ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಪರ್ಧೆ ಇದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

    ಇದರ ನಡುವೆ ಅಲ್ಲಲ್ಲಿ ಕುರುಡು ಕಾಂಚಣದ ಕುಣಿತ ಜಾಸ್ತಿ ಆಗ್ತಿದೆ ಅನ್ನೋ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸೋಲು ಗೆಲುವಿನ ರಣತಂತ್ರಗಳು, ಲೆಕ್ಕಾಚಾರಗಳು ಜೋರಾಗಿದೆ. ಶಾಂತಿಯುತ ಮತದಾನಕ್ಕೆ ಬೇಕಾದಂತ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ.

    ಬಹಿರಂಗ ಪ್ರಚಾರದ ಅಂತಿಮ ದಿನದಂದು ಅಗ್ರ ನಾಯಕರ ಮಧ್ಯೆ ವಾಕ್ಸಮರವೇ ನಡೆದಿತ್ತು. ಕಾಂಗ್ರೆಸ್-ಬಿಜೆಪಿಯ ಪ್ರತಿಷ್ಠೆಯ ಹೈವೋಲ್ಟೇಜ್ ಕಣವಾಗಿರೋ ಆರ್‍ಆರ್ ನಗರದಲ್ಲಿ ಡಿಕೆ ಶಿವಕುಮಾರ್ ವರ್ಸಸ್ ಮುನಿರತ್ನ ನಡುವೆ ಜಿದ್ದಾಜಿದ್ದಿ ನಡೆದಿದೆ. ಆದರೆ ಜನಾಶೀರ್ವಾದ ನಮ್ಮ ಪರ ಇದೆ ಅಂತ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಪರವಾಗಿ ದಳಪತಿಗಳು ನಿನ್ನೆ ಭರ್ಜರಿ ರ‍್ಯಾಲಿಗಳನ್ನು ನಡೆಸಿದರು. ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮಾರನ್ನು ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿರೋ ಜೆಡಿಎಸ್, ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಶಿರಾದಲ್ಲಿ ರ‍್ಯಾಲಿ ನಡೆಸಿದ್ದರು. ಅಮ್ಮಾಜಮ್ಮ ಅವರು ಸೆರಗೊಡ್ಡಿ ಮತಯಾಚನೆ ಮಾಡಿದ್ದರು.

  • ಉಪ ಚುನಾವಣೆ ಕದನದ ಬಹಿರಂಗ ಪ್ರಚಾರಕ್ಕೆ ತೆರೆ

    ಉಪ ಚುನಾವಣೆ ಕದನದ ಬಹಿರಂಗ ಪ್ರಚಾರಕ್ಕೆ ತೆರೆ

    ಬೆಂಗಳೂರು: ಉಪಚುನಾವಣೆ ಕದನದ ಬಹಿರಂಗ ಪ್ರಚಾರಕ್ಕೆ ಇವತ್ತು ಸಂಜೆ 6ಕ್ಕೆ ತೆರೆ ಬಿದ್ದಿದೆ. ಕೊನೆಯ ದಿನವಾದ ಇಂದು ಆರ್.ಆರ್.ನಗರ ಮತ್ತು ಶಿರಾದಲ್ಲಿ ಕೊನೆ ಕ್ಷಣದವರೆಗೂ ರಾಜಕೀಯ ಪಕ್ಷಗಳು ಮತ ಬೇಟೆ ನಡೆಸಿದವು. ಕೊನೆಯ ದಿನವಾದ ಇಂದು ರಾಜಕೀಯ ವಾಕ್ಸಮರಕ್ಕೂ ಸಾಕ್ಷಿಯಾಯ್ತು.

    ಆರ್.ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣ ಹಂಚಿಕೆ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕೆಂಡಾಮಂಡಲವಾದ್ರು. ಲಗ್ಗೆರೆಯಲ್ಲಿ ಹಣ ಹಂಚುತ್ತಿದ್ದ 7 ಹೊರಗಿನ ವ್ಯಕ್ತಿಗಳ ಬಂಧನವಾಗಿದ್ದು, ಎಫ್‍ಐಆರ್ ದಾಖಲಾಗಿದೆ. ಕನಕಪುರದಿಂದ ಬಂದವರು ಹಣ ಹಂಚುತ್ತಿದ್ದು, ಒಂದು ಮತಕ್ಕೆ 2 ರಿಂದ 5 ಸಾವಿರ ಆಮಿಷ ಒಡ್ಡುತ್ತಿದ್ದಾರೆ ಅಂತ ಮುನಿರತ್ನ ಆರೋಪಿಸಿದ್ರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಇದೇ ಮೊದಲ ಬಾರಿಗೆ ಈ ಚುನಾವಣೆಯಲ್ಲಿ ತಮಗೆ ಯಾರು ಪ್ರತಿಸ್ಪರ್ಧಿ ಅನ್ನೋ ವಿಷಯ ಬಹಿರಂಗಗೊಳಿಸಿದರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಹೊರತು ಕಾಂಗ್ರೆಸ್ ಅಲ್ಲ ಎಂದರು.

    ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಕೂಡ ಇವತ್ತು ಕೊನೇ ಕಸರತ್ತು ಮಾಡಿದ್ರು. ಜೆಪಿ ಪಾರ್ಕ್ ಬಳಿಕ 2 ಚರ್ಚ್ ಗಳಿಗೆ ಡಿಕೆಶಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ, ನಾವು ಚರ್ಚ್, ಮಸೀದಿಗೆ ಪ್ರಾರ್ಥನೆಗೆ ಹೋಗುತ್ತೇವಿ, ಮತ ಕೇಳಲಿಕ್ಕಲ್ಲ. ಮಸೀದಿ, ಚರ್ಚ್ ಹಾಗೂ ದೇವಸ್ಥಾನಗಳಿಗೆ ಹೋಗಿ ಕ್ಷೇತ್ರದಲ್ಲಿ ಶಾಂತಿ ಉಳಿಯಲಿ ಎಂದು ಪ್ರಾರ್ಥಿಸ್ತೇವೆ. ಕುಸುಮಾ ಗೆಲ್ಲಲಿ ಅಂತ ಪ್ರಾರ್ಥಿಸ್ತೇವೆ ಅಂದ್ರು. ಬಳಿಕ ಯಶವಂತಪುರ, ಬಿಕೆ ನಗರದಲ್ಲಿ ರೋಡ್ ಶೋ ನಡೆಸಿದ್ರು. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ ಕೂಡ ಯಶವಂತಪುರ ವಾರ್ಡ್‍ನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.

    ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಇಂದು ಭರ್ಜರಿ ಕ್ಯಾಂಪೇನ್ ಮಾಡಿತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಸೇರಿ ಅಮ್ಮಾಜಮ್ಮ ಪರ ಮತಯಾಚನೆ ಮಾಡಿದರು. ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಶಿರಾದ ಐಬಿ ಸರ್ಕಲ್‍ನಿಂದ ರಾಮಚಂದ್ರಪ್ಪ ಬಯಲು ರಂಗಮಂದಿರವರೆಗೆ ಮೆರವಣಿಗೆ ನಡೆಸಿದ್ರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಅಮಾಜಮ್ಮ ಸೆರಗೊಡ್ಡಿ ಮತಯಾಚನೆ ಮಾಡಿದರು. ಮತಯಾಚನೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸುಸ್ತಿನಿಂದ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯ್ತು, ಬಳಿಕ ಚೇತರಿಸಿಕೊಂಡರು.

    ಇನ್ನೊಂದ್ಕಡೆ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮನೆ ಮನೆಗೆ ತೆರಳಿ ಪ್ರಚಾರ ಮಾಡಿತು. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶಿರಾ, ಆರ್‍ಆರ್ ನಗರ ಎರಡೂ ಕಡೆ ಗೆಲ್ಲುತ್ತೇವೆ. ಅಭಿವೃದ್ಧಿ ಹೆಸರಲ್ಲಿ ನಾವು ಮತ ಕೇಳಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ ಮಾಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋರಸಂದ್ರ, ಗುಳಿಗೇನಹಳ್ಳಿ, ನ್ಯಾಗೆರೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

    ಕಳೆದ 21 ದಿನಗಳ ಬಹಿರಂಗ ಮತಬೇಟೆಗೆ ತೆರೆ ಬಿದ್ದಿದೆ. ಮತದಾರರಲ್ಲದವರು, ರಾಜಕೀಯ ನಾಯಕರುನ ಕ್ಷೇತ್ರ ತೊರೆದಿದ್ದಾರೆ. ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಾಳೆ ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಲಿದ್ದು, ಅಂತಿಮ ಕಸರತ್ತು ನಡೆಸಲಿದ್ದಾರೆ.

  • ಮತದಾರರು ಬಿಟ್ಟು ಬೇರೆ ಯಾರೂ ಕ್ಷೇತ್ರದಲ್ಲಿ ಇರುವಂತಿಲ್ಲ: ಬಿಬಿಎಂಪಿ

    ಮತದಾರರು ಬಿಟ್ಟು ಬೇರೆ ಯಾರೂ ಕ್ಷೇತ್ರದಲ್ಲಿ ಇರುವಂತಿಲ್ಲ: ಬಿಬಿಎಂಪಿ

    – ಸಂಜೆ 5 ಗಂಟೆಯಿಂದ ಮದ್ಯ ನಿಷೇಧ
    – 144 ಸೆಕ್ಷನ್ ಜಾರಿ

    ಬೆಂಗಳೂರು: ಆರ್‍ಆರ್ ನಗರದಲ್ಲಿ ಇಂದು 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಬ್ರೇಕ್ ಹಾಕಲಾಗುತ್ತದೆ. ಸಂಜೆ 6 ಗಂಟೆಯ ನಂತರ ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲ. ಮತದಾರರು ಬಿಟ್ಟು ಬೇರೆ ಯಾರು ಕ್ಷೇತ್ರದಲ್ಲಿ ಇರುವಂತಿಲ್ಲ. ಮುಖಂಡರು, ನಾಯಕರು ಇರಲು ಅವಕಾಶ ಇಲ್ಲ. ತಕ್ಷಣವೇ ಸಂಜೆ ವೇಳೆಗೆ ಕ್ಷೇತ್ರ ಬಿಡಬೇಕು. ಕ್ಷೇತ್ರದಲ್ಲಿ ಇದ್ದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ಆರ್‍ಆರ್ ನಗರ ಚುನಾವಣೆಗೆ ಇನ್ನು ಒಂದೇ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆ ಹಾಗೂ ಭದ್ರತೆ ಬಗ್ಗೆ ನಗರದಲ್ಲಿಂದು ಬಿಬಿಎಂಪಿ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂಥ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

    ಆರ್ ಆರ್ ನಗರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳ ನೇಮಕ 9 ಹೆಚ್ಚುವರಿ ತಂಡ, ವಿಎಸ್ ಟಿ ತಂಡ 8 ನೇಮಕ, 38 ಮಾರ್ಷಲ್ ಗಳ ತಂಡ, ವಿಡಿಯೋಗ್ರಾಫರ್ ತಂಡ 5, 56 ಸೆಕ್ಟರ್ ಆಫೀಸರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ. ವಾಹನಗಳ ತಪಾಸಣೆ ನಡೆಯಲಿದ್ದು, ಕಲ್ಯಾಣ ಮಂಟಪ, ಜನ ಸೇರುವ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಸಂಜೆ 5 ಗಂಟೆಯಿಂದ 144 ಸೆಕ್ಷನ್ ಹಾಗೂ ಮದ್ಯ ನಿಷೇಧ ಸಹ ಜಾರಿ ಮಾಡಲಾಗುತ್ತಿದೆ. ಎಕ್ಸಿಟ್ ಪೋಲ್, ಜನಾಭಿಪ್ರಾಯ ಪೋಲ್ ಹಾಕುವಂತಿಲ್ಲ. ನ.3 ರಂದು ಬೆಳಗ್ಗೆ ನ. 7 ಗಂಟೆವರೆಗೂ ಎಕ್ಸಿಟ್ ಪೋಲ್ ಸಹ ಮಾಡುವಂತಿಲ್ಲ. ನಾಳೆ ಮಾಸ್ಟರಿಂಗ್ ಸೆಂಟರ್ ಗಳ ಒಪನ್ ಆಗಲಿದೆ. ಜ್ಞಾನಾಕ್ಷಿ ವಿದ್ಯಾನಿಕೇತನಗಳು ಓಪನ್ ಆಗಲಿದೆ. ಪೋಲಿಂಗ್ ಮೆಟಿರಿಯಲ್ ಕಲೆಕ್ಟ್ ಮಾಡಲಾಗುತ್ತದೆ. ಸಂಜೆ ಪೊಲಿಂಗ್ ಸೆಂಟರ್ ತಲುಪಿದ ವರದಿ ಪಡೆಯಬೇಕಾಗಿದೆ. 678 ಬೂತ್ ಗಳಿವೆ. ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.

    ಕ್ಯೂ ನಲ್ಲಿ ನಿಂತ ಜನರಿಗೆ ಕೊರೊನಾ ಮುನ್ನೆಚ್ಚರಿಕೆ ಪಾಲಿಸಲು ಆರೋಗ್ಯ ಇಲಾಖಾ ಸಿಬ್ಬಂದಿಯನ್ನು ನೇಮಿಸಲಾಗುವುದು. ಕೋವಿಡ್ ಪೇಷಂಟ್ ಒಪ್ಪಿದ್ದರೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಕೊರೊನಾ ರೋಗಿ ಮತ ಹಾಕಿ ಎಂದಾಗ ಸಿಬ್ಬಂದಿ ಜೊತೆ ಗದರಿದ ಪ್ರಕರಣಗಳು ಕೂಡ ನಡೆದಿದೆ. 125 ಬಸ್, 50 ಮಿನಿ ಬಸ್, ಜಿಪಿಎಸ್ ಆಳವಡಿಕೆ ಇದೆ. ಪೋಸ್ಟಲ್ ಬ್ಯಾಲೆಟ್ 5050 ವ್ಯವಸ್ಥೆ ಆಗಿತ್ತು. 489 ಮತದಾರರು, 22 ವಿಶೇಷಚೇತನ ಮತದಾರರು ಮತ ಹಾಕಿದ್ದಾರೆ. ವೋಟರ್ ಸ್ಲಿಪ್ ಮನೆ ಮನೆಗೆ ಹಂಚಲಾಗಿದೆ. ಕೋವಿಡ್ 19 ಉಲ್ಲಂಘಿತ 14 ಪ್ರಕರಣಗಳು ಪಾಲಿಕೆ ದಾಖಲೆ ಮಾಡಿದೆ. ಎಸ್ ಸಿಸಿ ನೀತಿ ಸಹ ಉಲ್ಲಂಘನೆ ಮಾಡಿದೆ ಎಂದರು.

    ಇದೇ ವೇಳೆ ಕಮಲ್ ಪಂತ್ ಮಾತನಾಡಿ, 21 ದಿನದಲ್ಲಿ ಚುನಾವಣಾ ಪ್ರಚಾರ ಪ್ರಕ್ರಿಯೆ ಶಾಂತ ರೀತಿಯಾಗಿ ನಡೆದು ಬಂದಿದೆ. ಸಣ್ಣಪುಟ್ಟ ಪ್ರಸಂಗ ಬಂದಾಗ ಪೊಲೀಸರು ನಿಭಾಯಿಸಿದ್ದಾರೆ. ಒಂದೇ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದರು.

    30 ತಂಡ ಭದ್ರತೆಗಾಗಿ ನೇಮಕ ಮಾಡಲಾಗಿತ್ತು. ಇಂದು ಪ್ರಚಾರದ ಕಡೆ ದಿನವಾಗಿದ್ದರಿಂದ ಬಂದೋಬಸ್ತ್ ಗೆ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 678 ಬೂತ್ ಗಳಿವೆ. 82 ಸೂಕ್ಷ್ಮ ಮತಗಟ್ಟೆ ಇದೆ. 181 ಜಾಗಗಳಲ್ಲಿ ಮತಗಟ್ಟೆ ಇದೆ. ಪ್ರತ್ಯೆಕವಾಗಿ ಎಎಸ್ ಐ ಹಾಗೂ ಮೂವರು ಸಿಬ್ಬಂದಿ ಇರುತ್ತಾರೆ. ಹೋಂ ಗಾರ್ಡ್ ಸಹ ಬೂತ್ ಗಳಲ್ಲಿ ನೇಮಕ ಮಾಡಲಾಗಿದೆ. 2563 ಜನ ಭದ್ರತೆಗಾಗಿ ನಿಯೋಜನೆ, ಮೊಬೈಲ್ ವ್ಯವಸ್ಥೆ ಮಾಡಲಾಗಿದೆ. ಇದು ಸ್ವಲ್ಪ ಸೂಕ್ಷ್ಮಪ್ರದೇಶವಾಗಿದ್ದರಿಂದ ಲಾ ಅಂಡ್ ಆರ್ಡರ್ ಸಹ ನೋಡಿಕೊಳ್ಳಬೇಕಾಗಿದೆ. 102 ಮೊಬೈಲ್ 24 ಗಂಟೆ ಕೆಲಸ ಮಾಡಲಿದೆ. 91 ಚೀತಾ ಇಬ್ಬರು ಪೊಲೀಸರ ಕೆಲಸದಲ್ಲಿ ಇರ್ತಾರೆ . ತುರ್ತು ಪರಿಸ್ಥಿತಿ ವೇಳೆ 5 ನಿಮಿಷದಲ್ಲಿ ರೀಚ್ ಆಗ್ತಾರೆ. ಇಡೀ ದಿನ 3 ಡಿಸಿಪಿ, 30 ಇನ್ಸಪೆಕ್ಟರ್ 560 ಜನ ಕೆಲಸದಲ್ಲಿ ಇರ್ತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಸಹ ಭಾಗವಾಹಿಸಲಿದ್ದಾರೆ. 19 ಕೆಎಸ್ ಆರ್ ಪಿ ತುಕಡಿ, 20 ಆರ್ಮ್ ರಿಸರ್ವ ಸಹ ಇರಲಿದ್ದಾರೆ. ಚುನಾವಣೆ ಆಯೋಗ ನಿದೇರ್ಶನ ಪ್ರಕಾರ 300 ಶಸ್ತ್ರ ಸೀಜ್ ಆಗಿದೆ ಎಂದರು.

  • ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ: ಹೆಚ್‍ಡಿಕೆ

    ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ: ಹೆಚ್‍ಡಿಕೆ

    – ಕನಕಪುರದ ವ್ಯಕ್ತಿಗಳಿಂದ ಹಣ ಹಂಚುವ ಕೆಲಸ
    – ಹಣ ಹಂಚೋದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಫಾಸ್ಟ್

    ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ ಕಾರ್ಯ ಶುರು ಮಾಡಿದ್ದಾರೆ. ಅರ್ಜುನ್ ಎಂಬಾತ ಪ್ರತಿ ಮತಕ್ಕೆ ಸಾವಿರ ರೂ ನೀಡಿ ಕಾಂಗ್ರೆಸ್ ಗೆ ಮತ ಹಾಕೆಂದು ಹೇಳುತ್ತಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.

    ಇವತ್ತಿನ ಚುನಾವಣೆ ಅಕ್ರಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಬರುತ್ತಿದೆ. 2000 ದಂದು ಕನಕಪುರದಲ್ಲಿ ನಡೆದ ಉಪಚುನಾವಣೆ ನೆನಪಾಗುತ್ತಿದೆ. ಅಂದು ಇದೇ ಡಿ.ಕೆ.ಶಿವಕುಮಾರ್ ಮಂತ್ರಿಗಳಾಗಿ ಚುನಾವಣೆ ಅಭ್ಯರ್ಥಿಯಾಗಿದ್ದರು. ಚುನಾವಣೆ ಕೊನೆ ದಿನ ಕಳ್ಳ ಮತದಾನಕ್ಕಾಗಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಭಾಗದಿಂದ ಜನರನ್ನು ಕರೆದುಕೊಂಡು ಬಂದಿದ್ದರು. ಆರ್‍ಎಂಆರ್ ಚೌಟರಿ ಸೇರಿ ವಿವಿಧೆಡೆ ಜನರನ್ನು ಉಳಿಸಿಕೊಂಡಿದ್ದರು. ಅಂದು ಕಳ್ಳ ಮತದಾನ ತಡೆಯುವ ಕೆಲಸ ಮಾಡಿದ ದಿನಗಳು ಕಣ್ಮುಂದೆ ಬರುತ್ತಿವೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದರು.

    ಹಣ ಹಂಚುವ ಕೆಲಸದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ವೇಗದಲ್ಲಿ ಹೊರಟಿದೆ. ಜನರ ಗಮನಕ್ಕೆ ತರುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ಕರೆದಿದ್ದೇನೆ. ಈ ರೀತಿ ರಾಜಕಾರಣ ಮಾಡೋದನ್ನ ಬಿಜೆಪಿ ಅಭ್ಯರ್ಥಿಯಿಂದ ಕಾಂಗ್ರೆಸ್ ಕಲೀತಾ ಅಥವಾ ಕಾಂಗ್ರೆಸ್ ನಿಂದ ಬಿಜೆಪಿ ಕ್ಯಾಂಡಿಡೇಟ್ ಹಣ ವಿತರಿಸೋದನ್ನ ಕಲಿತಾ ಎಂಬುದನ್ನ ಕೈ ನಾಯಕರು ಸ್ಪಷ್ಟಪಡಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.

    ಇಂದು ಆರ್.ಆರ್.ನಗರದಲ್ಲಿ ಹಣ ಹಂಚುತ್ತಿದ್ದ ಇಬ್ಬರನ್ನ ಫ್ಲೈಯಿಂಗ್ ಸ್ಕ್ವಾಡ್ ದಳ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರು ಕ್ಷೇತ್ರದ ಹಲವು ಭಾಗಗಳಲ್ಲಿ ಹಣ ಹಂಚುತ್ತಿದ್ದರು. ಮತದಾರರಿಗೆ ಹಣ ಹಂಚಿ ಕಾಂಗ್ರೆಸ್ ಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

  • ಆರ್.ಆರ್.ನಗರ ಕುರುಕ್ಷೇತ್ರಕ್ಕೆ ಇಂದು ಸಿಎಂ ಬಿಎಸ್‍ವೈ ಎಂಟ್ರಿ

    ಆರ್.ಆರ್.ನಗರ ಕುರುಕ್ಷೇತ್ರಕ್ಕೆ ಇಂದು ಸಿಎಂ ಬಿಎಸ್‍ವೈ ಎಂಟ್ರಿ

    – 9 ವಾರ್ಡ್‍ಗಳಲ್ಲಿ ಸಿಎಂ ರೋಡ್‍ಶೋ

    ಬೆಂಗಳೂರು: ಉಪಚುನಾವಣೆಯ ಅಖಾಡದಲ್ಲಿ ನಿನ್ನೆ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರ ಪ್ರಚಾರ ಮಾಡಿದ್ದರು. ಇಂದು ಕ್ಷೇತ್ರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದು, 9 ವಾರ್ಡ್‍ಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

    ಬಹಿರಂಗ ಪ್ರಚಾರಕ್ಕೆ ಇನ್ನೊಂದು ದಿನ ಅಷ್ಟೇ ಬಾಕಿ ಇದ್ದು, ಇಂದು ರಾಜಾಹುಲಿ ಮತಬೇಟೆ ಮಾಡಲಿದ್ದಾರೆ. ಜೆ.ಪಿ ಪಾರ್ಕ್, ಯಶವಂತಪುರ, ಕೊಟ್ಟಿಗೆಪಾಳ್ಯ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಲಗ್ಗೆರೆ, ಲಕ್ಷ್ಮೀದೇವಿನಗರ, ಹೆಚ್‍ಎಂಟಿ, ಜಾಲಹಳ್ಳಿ ಸೇರಿದಂತೆ 9 ವಾರ್ಡ್‍ಗಳಲ್ಲಿ ರೋಡ್ ಶೋ ನಡೆಲಿದೆ. ರೋಡ್ ಶೋಗೂ ಮುನ್ನ ವರ್ಚುಯಲ್ ರ‍್ಯಾಲಿ ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ.

    ಎಲ್ಲೆಲ್ಲಿ ಪ್ರಚಾರ?
    ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೂ ಆರ್.ಆರ್ ನಗರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದು, ಬೆಳಗ್ಗೆ 10.30 ರಿಂದ ಮ.12.30 ಜ್ಞಾನಭಾರತಿ ವಾರ್ಡ್, ಮ.12.30 ರಿಂದ ಮ.1 ಗಂಟೆ ಕೊಟ್ಟಿಗೆಪಾಳ್ಯ ವಾರ್ಡ್, ಮ.2ಗಂಟೆ ರಿಂದ ಮ.2.30 ಲಗ್ಗೆರೆ ವಾರ್ಡ್, ಮ.2.30 ರಿಂದ ಮ.3ಗಂಟೆ ಲಕ್ಷ್ಮೀದೇವಿ ನಗರ, ಮ.3ಗಂಟೆ ರಿಂದ ಮ.3.30 ಹೆಚ್‍ಎಂಟಿ ವಾರ್ಡ್, ಮ.3.30 ರಿಂದ ಮ.3.45 ಜಾಲಹಳ್ಳಿ ವಾರ್ಡ್, ಸ.4ಗಂಟೆ ರಿಂದ ಸ.5.30 ಜೆಪಿಪಾರ್ಕ್ ಮತ್ತು ಯಶವಂತಪುರ ವಾರ್ಡ್ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

  • ಬಿರುಸಿನ ಪ್ರಚಾರದ ನಡುವೆಯೂ ‘ಚಕ್ರವರ್ತಿ’ಯಿಂದ ಮಾಸ್ಕ್ ಜಾಗೃತಿ

    ಬಿರುಸಿನ ಪ್ರಚಾರದ ನಡುವೆಯೂ ‘ಚಕ್ರವರ್ತಿ’ಯಿಂದ ಮಾಸ್ಕ್ ಜಾಗೃತಿ

    ಬೆಂಗಳೂರು: ಆರ್‍ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮತ ಬೇಟೆಗಿಳಿದಿದ್ದಾರೆ. ಮತ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಈ ಮಧ್ಯೆ ನಟ ದರ್ಶನ್ ಜಾಗೃತಿ ಕೂಡ ಮೂಡಿಸಿದ್ದಾರೆ.

    ಹೌದು. ತೆರೆದ ವಾಹನದಲ್ಲಿ ಮತಯಾಚನೆ ಮಾಡುತ್ತಿರುವ ‘ಸಾರಥಿ’ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ನೋಡಲು ಜನ ಕಟ್ಟಡಗಳ ಮೇಲೆ ಕುಳಿತಿದ್ದು, ಅಲ್ಲಿಂದಲೇ ‘ಗಜ’ನಿಗೆ ಜೈಕಾರ ಹಾಕುತ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ‘ದಾಸ’ ಮಾಸ್ಕ್ ಹಾಕಿಕೊಳ್ಳಿ ಎಂದು ಸನ್ನೆಯ ಮೂಲಕವೇ ಕೇಳಿಕೊಂಡಿದ್ದಾರೆ.

    ಇತ್ತ ‘ಭೂಪತಿ’ಗೆ ಯಶವಂತಪುರದ ಬಿ.ಕೆ.ನಗರದಲ್ಲಿ ಸೇಬಿನ ಹಾರ ರೆಡಿಯಾಗಿದೆ. ಜೆಸಿಬಿ ಮೂಲಕ 200 ಕೆಜಿ ತೂಕದ ಸೇಬಿನ ಹಾರವನ್ನು ಅಭಿಮಾನಿಗಳು ದರ್ಶನ್ ಗೆ ಹಾಕಲಿದ್ದಾರೆ. ರೋಡ್ ಶೋ ವೇಳೆ ದರ್ಶನ್ ಹಾಗೂ ಮುನಿರತ್ನ ಅವರಿಗೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್, ರಾಕ್ ಲೈನ್ ವೆಂಕಟೇಶ್ ಮತ್ತಿತರರು ಸಾಥ್ ನೀಡಿದ್ದಾರೆ.

    ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಮುನಿರತ್ನ ಅವರು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಅವರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ. ಅವರು ನನ್ನ ಅತ್ಯಂತ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

  • ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ: ಮುನಿರತ್ನ

    ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ: ಮುನಿರತ್ನ

    ಬೆಂಗಳೂರು: ಆರ್.ಆರ್.ನಗರದಲ್ಲಿ ಇಂದು ನಟ ದರ್ಶನ್ ಅವರೊಂದಿಗೆ ಇಡೀ ದಿನ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಳಿಸಿದ್ದಾರೆ.

    ಇಂದಿನ ಪ್ರಚಾರದ ಕುರಿತು ಮಾತನಾಡಿದ ಮುನಿರತ್ನ ಅವರು, ಮೊದಲು ರಾಜರಾಜೇಶ್ವರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತೇನೆ. ಬಳಿಕ ನಾನು ದರ್ಶನ್ ಮನೆಗೆ ತೆರಳಿ ಒಟ್ಟಿಗೆ ಪ್ರಚಾರಕ್ಕೆ ಹೊರಡುತ್ತೇವೆ. ದರ್ಶನ್ ಕ್ರೇಜ್ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತು. ಹಿಂದೆ ದರ್ಶನ್, ಯಶ್, ಸುದೀಪ್, ರಮ್ಯಾ ಎಲ್ಲರೂ ನನ್ನ ಪರ ಪ್ರಚಾರ ಮಾಡಿದ್ದರು. ನಾನು ಸಿನಿಮಾದವನು ಆಗಿರುವುದರಿಂದ ಅವ್ರೆಲ್ಲ ಬಂದು ಪ್ರಚಾರ ಮಾಡಿದ್ದರು ಎಂದರು.

    ಇದೇ ವೇಳೆ ಪ್ರಚಾರದಲ್ಲಿ ಸಚಿವ ಬಿಸಿ ಪಾಟೀಲ್, ಅಮೂಲ್ಯ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದ ಮುನಿರತ್ನ ಅವರು, ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು. ಬೆಳಗ್ಗೆ 10.30 ರಿಂದ ಸಂಜೆಯ ವರೆಗೂ ದರ್ಶನ್ ನಮ್ಮೊಂದಿಗೆ ಇರುತ್ತಾರೆ. ಈ ಬಗ್ಗೆ ನಾನು ಹೇಳುವುದಕ್ಕಿಂತ ನೀವೇ ನೋಡುತ್ತೀರಿ ಎಂದು ತಿಳಿಸಿದರು.

  • ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಅಭಿಪ್ರಾಯ: ಜಮೀರ್ ಅಹ್ಮದ್

    ಸಿದ್ದರಾಮಯ್ಯ ಸಿಎಂ ಆಗಬೇಕು ಅನ್ನೋದು ಜನರ ಅಭಿಪ್ರಾಯ: ಜಮೀರ್ ಅಹ್ಮದ್

    ಬೆಂಗಳೂರು: ಸಿದ್ದರಾಮಯ್ಯನವರೇ ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋದು ಜನರ ಮತ್ತು ನನ್ನ ವೈಯಕ್ತಿಯ ಅಭಿಪ್ರಾಯ. ಇದು ಪಕ್ಷ ವಿರೋಧಿ ಹೇಳಿಕೆಯಾಗಲ್ಲ ಎಂದು ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

    ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್. ಪರ ಪ್ರಚಾರ ನಡೆಸಿದ ಜಮೀರ್ ಅಹ್ಮದ್ ಮಾಧ್ಯಮಗಳ ಜೊತೆ ಮಾತನಾಡಿದರು. ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಜನರ ಅಭಿಪ್ರಾಯವನ್ನ ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಆಗಲ್ಲ. ಆದರೆ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಸಿಎಂ ಯಾರಾಗಬೇಕು ಎಂಬುದನ್ನ ನಿರ್ಧರಿಸುತ್ತದೆ. ನನಗೆ ಶಿಸ್ತು ಕ್ರಮದ ನೋಟಿಸ್ ಕೊಟ್ಟರೆ ಅದಕ್ಕೆ ಉತ್ತರಿಸುತ್ತೇನೆ ಎಂದರು.

    ಬೈ ಎಲೆಕ್ಷನ್ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಆಗಿ ಮತ್ತೆ ಚುನಾವಣೆ ಬರಬಹುದು. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದ್ರೆ ಚುನಾವಣೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ ಜನಾಭಿಪ್ರಾಯದ ಜೊತೆಗೆ ನನ್ನ ವೈಯುಕ್ತಿಕ ಅಭಿಪ್ರಾಯವು ಮತ್ತೆ ಸಿದ್ದರಾಮಯ್ಯ ನವರೆ ಸಿಎಂ ಆಗಬೇಕು. ಹೈ ಕಮಾಂಡ್ ಕೇಳಿದರೂ ನಾನು ಸಿದ್ದರಾಮಯ್ಯತೇ ಸಿಎಂ ಆಗಬೇಕು ಅಂತ ಹೇಳ್ತೀನಿ ಎಂದು ತಮ್ಮ ಹೇಳಿಕೆಯನ್ನ ಜಮೀರ್ ಅಹ್ಮದ್ ಪುನರುಚ್ಛಿಸಿದರು.

    ಐದು ವರ್ಷಕ್ಕೆ ಒಮ್ಮೆ ಚುನಾವಣೆ ಬರುತ್ತದೆ, ಈಗ ಎರಡೂವರೆ ವರ್ಷಕ್ಕೆ ಚುನಾವಣೆ ಬಂದಿದ್ದಿಂದ ಜನರು ಕೂಡ ಗೊಂದಲದಲ್ಲಿದ್ದಾರೆ. ಆರ್.ಆರ್.ನಗರದಲ್ಲಿ ಈ ಚುನಾವಣೆ ಬಂದಿರುವುದಕ್ಕೆ ಜನ ಬೇಸರದಲ್ಲಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೊಟ್ಟ ಹಣದಿಂದ ಈ ಕ್ಷೇತ್ರ ಅಭಿವೃದ್ಧಿ ಆಗಿದೆ. ಈ ಸರ್ಕಾರದಲ್ಲಿ ಈ ಕ್ಷೇತ್ರಕ್ಕೆ ಯಾವ ಹಣ ಕೂಡ ಬಂದಿಲ್ಲ. ಇಲ್ಲಿ ಹೆದರುಸುವ ಕೆಲಸ ನಡೆಯುತ್ತಿದ್ದು, ಯಾರಿಗೆ ಯಾರು ಹೆದರುವ ಅವಶ್ಯಕತೆ ಇಲ್ಲ ಧೈರ್ಯವಾಗಿರಿ ಎಂದು ಪ್ರಚಾರ ಭಾಷಣದಲ್ಲಿ ಜಮೀರ್ ಅಹ್ಮದ್ ಹೇಳಿದರು.