Tag: ಆರ್.ಆರ್.ನಗರ ಉಪ ಚುನಾವಣೆ

  • ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ: ಹೆಚ್‍ಡಿಕೆ

    ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ: ಹೆಚ್‍ಡಿಕೆ

    – ಕನಕಪುರದ ವ್ಯಕ್ತಿಗಳಿಂದ ಹಣ ಹಂಚುವ ಕೆಲಸ
    – ಹಣ ಹಂಚೋದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಫಾಸ್ಟ್

    ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ ಕಾರ್ಯ ಶುರು ಮಾಡಿದ್ದಾರೆ. ಅರ್ಜುನ್ ಎಂಬಾತ ಪ್ರತಿ ಮತಕ್ಕೆ ಸಾವಿರ ರೂ ನೀಡಿ ಕಾಂಗ್ರೆಸ್ ಗೆ ಮತ ಹಾಕೆಂದು ಹೇಳುತ್ತಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದರು.

    ಇವತ್ತಿನ ಚುನಾವಣೆ ಅಕ್ರಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಬರುತ್ತಿದೆ. 2000 ದಂದು ಕನಕಪುರದಲ್ಲಿ ನಡೆದ ಉಪಚುನಾವಣೆ ನೆನಪಾಗುತ್ತಿದೆ. ಅಂದು ಇದೇ ಡಿ.ಕೆ.ಶಿವಕುಮಾರ್ ಮಂತ್ರಿಗಳಾಗಿ ಚುನಾವಣೆ ಅಭ್ಯರ್ಥಿಯಾಗಿದ್ದರು. ಚುನಾವಣೆ ಕೊನೆ ದಿನ ಕಳ್ಳ ಮತದಾನಕ್ಕಾಗಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಭಾಗದಿಂದ ಜನರನ್ನು ಕರೆದುಕೊಂಡು ಬಂದಿದ್ದರು. ಆರ್‍ಎಂಆರ್ ಚೌಟರಿ ಸೇರಿ ವಿವಿಧೆಡೆ ಜನರನ್ನು ಉಳಿಸಿಕೊಂಡಿದ್ದರು. ಅಂದು ಕಳ್ಳ ಮತದಾನ ತಡೆಯುವ ಕೆಲಸ ಮಾಡಿದ ದಿನಗಳು ಕಣ್ಮುಂದೆ ಬರುತ್ತಿವೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದರು.

    ಹಣ ಹಂಚುವ ಕೆಲಸದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ವೇಗದಲ್ಲಿ ಹೊರಟಿದೆ. ಜನರ ಗಮನಕ್ಕೆ ತರುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ಕರೆದಿದ್ದೇನೆ. ಈ ರೀತಿ ರಾಜಕಾರಣ ಮಾಡೋದನ್ನ ಬಿಜೆಪಿ ಅಭ್ಯರ್ಥಿಯಿಂದ ಕಾಂಗ್ರೆಸ್ ಕಲೀತಾ ಅಥವಾ ಕಾಂಗ್ರೆಸ್ ನಿಂದ ಬಿಜೆಪಿ ಕ್ಯಾಂಡಿಡೇಟ್ ಹಣ ವಿತರಿಸೋದನ್ನ ಕಲಿತಾ ಎಂಬುದನ್ನ ಕೈ ನಾಯಕರು ಸ್ಪಷ್ಟಪಡಿಸಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.

    ಇಂದು ಆರ್.ಆರ್.ನಗರದಲ್ಲಿ ಹಣ ಹಂಚುತ್ತಿದ್ದ ಇಬ್ಬರನ್ನ ಫ್ಲೈಯಿಂಗ್ ಸ್ಕ್ವಾಡ್ ದಳ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರು ಕ್ಷೇತ್ರದ ಹಲವು ಭಾಗಗಳಲ್ಲಿ ಹಣ ಹಂಚುತ್ತಿದ್ದರು. ಮತದಾರರಿಗೆ ಹಣ ಹಂಚಿ ಕಾಂಗ್ರೆಸ್ ಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

  • ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ

    ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ

    – ಠಾಣೆ ಮುಂದೆ ಎರಡು ಪಕ್ಷಗಳ ಪ್ರತಿಭಟನೆ

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಇಂದು ಬೆಳಗ್ಗೆ ಲಕ್ಷ್ಮಿದೇವಿ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಚಾರ ನಡೆಸುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಮಾಜಿ ಕಾರ್ಪೊರೇಟರ್ ವೇಲು ನಾಯಕ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

    ವೇಲು ನಾಯಕ್ ಅಂಡ್ ಟೀಂ ಬಂಧಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ದೂರನ್ನು ದಾಖಲಿಸಲಾಯ್ತು. ವೇಲು ನಾಯಕ್ ನೇತೃತ್ವದಲ್ಲಿಪ್ರತಿಭಟನಾ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ನಡೆಸಿದರು. ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾಗಿ ಪರಸ್ಪರ ವಿರುದ್ಧ ಘೋಷಣೆ ಕೂಗಿದರು. ಬಿಗುವಿನ ವಾತಾವರಣ ಕಂಡ ಪೊಲೀಸರು ಬ್ಯಾರಿಕೇಡ್ ಹಾಕಿ ಎರೆಡು ಕಡೆಯವರನ್ನ ತಡೆದು ಚದುರಿಸಿದರು.

    ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್, ಪಕ್ಷದ ಕಾರ್ಯಕರ್ತರ ರಕ್ಷಣೆ ನಾವೆಲ್ಲರೂ ಇದ್ದೇವೆ. ಬಿಜೆಪಿಯಿಂದ ಚುನಾವಣೆಗೆ ನಿಂತಿರುವ ಅಭ್ಯರ್ಥಿ ಸಾಧನೆ ಮಾಡಿದ್ದರೆ ಧೈರ್ಯವಾಗಿರಿ. ಗೂಂಡಾಗಳನ್ನ ಬಿಟ್ಟು ಈ ರೀತಿ ಗಲಾಟೆ ಮಾಡೋದು ಬೇಡ. ಶಾಂತಿಯುತವಾಗಿ ಚುನಾವಣೆ ಮತ್ತು ಮತದಾನ ನಡೆಯಲಿ ಎಂಬುವುದು ನಮ್ಮ ಉದ್ದೇಶ. ನಕಲಿ ವೋಟರ್ ಐಡಿ ಹಾಕಿಸಿಕೊಂಡುವರೇ ಅವರೇ ನಾವಲ್ಲ. ನಕಲಿ ವೋಟರ್ ಐಡಿ ಪ್ರಿಂಟ್ ಮಾಡಿಕೊಂಡಿದ್ದಾರೆ ಅಂತ ಮಾನ್ಯ ಪ್ರಧಾನ ಮಂತ್ರಿಗಳೇ ಹೇಳಿದ್ದರು. ಬಿಜೆಪಿಯ ಗೂಂಡಾಗಿರಿಯಲ್ಲಿ ಕಾಂಗ್ರೆಸ್ ಸಹಿಸಲ್ಲ ಎಂದು ಮುನಿರತ್ನ ಹೆಸರು ಹೇಳದೇ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದವರು ಮತ್ತು ಸ್ಟೇಷನ್ ಮುಂದೆ ಪ್ರತಿಭಟನೆ ಮಾಡುವವರು ಯಾರು ಸ್ಥಳೀಯರಲ್ಲ ಎಂದಿದ್ದಾರೆ. ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣದಿಂದ ಜನ ಕರೆತಂದು ಗಲಾಟೆ ಮಾಡಿಸಲಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಲ್ಲ ಎಂದು ವೇಲು ನಾಯಕ್ ಆರೋಪಿಸಿದ್ದಾರೆ.