Tag: ಆರ್‍ಬಿಐ

  • 2,000 ರೂ. ಮುಖಬೆಲೆಯ 98.08% ನೋಟುಗಳು ರಿಟರ್ನ್‌ – ಈಗಲೂ ನೀವು ಎಲ್ಲೆಲ್ಲಿ ವಿನಿಮಯ ಮಾಡಬಹುದು?

    2,000 ರೂ. ಮುಖಬೆಲೆಯ 98.08% ನೋಟುಗಳು ರಿಟರ್ನ್‌ – ಈಗಲೂ ನೀವು ಎಲ್ಲೆಲ್ಲಿ ವಿನಿಮಯ ಮಾಡಬಹುದು?

    ನವದೆಹಲಿ: ಚಲಾವಣೆಯಿಂದ 2,000 ರೂ. ಮುಖಬೆಲೆಯ ನೋಟುಗಳನ್ನು (Rs 2000 Notes) ಹಿಂಪಡೆಯುವುದಾಗಿ ಘೋಷಣೆ ಮಾಡಿದ ಬಳಿಕ ಇದುವರೆಗೆ ಸುಮಾರು 98.08% ರಷ್ಟು ಹಣ ಬ್ಯಾಂಕುಗಳಿಗೆ (Bank) ವಾಪಸ್ಸಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.

    2023ರ ಮೇ 19ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ಬಳಿಕ ಒಟ್ಟು 3.56 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು. ಅಂದಿನಿಂದ 2 ಸಾವಿರ ರೂ. ನೋಟುಗಳ ಚಲಾವಣೆ ಗಮನಾರ್ಹವಾಗಿ ಕಡಿಮೆಯಾಗಿದ್ದು 2024 ರ ಅಂತ್ಯದ ವೇಳೆಗೆ ಕೇವಲ 6,691 ಕೋಟಿ ರೂ. ಚಲಾವಣೆಯಲ್ಲಿದೆ ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    2016ರ ನವೆಂಬರ್ 8 ರಂದು 500 ಹಾಗೂ 1,000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2,000 ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಆದರೆ 2018ರಲ್ಲಿಯೇ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ (Central Govt) ಮಾಹಿತಿ ನೀಡಿತ್ತು.

    ಹೊಸ 2,000 ರೂ. ನೋಟುಗಳನ್ನು ನೇರವಾಗಿ ನಿಷೇಧ ಮಾಡದೇ ಇದ್ದರೂ ಆರ್‌ಬಿಐ ಹಂತ ಹಂತವಾಗಿ ಮುದ್ರಣವನ್ನು ಕಡಿಮೆ ಮಾಡುತ್ತಾ ಬಂದಿತ್ತು. ಅಂತಿಮವಾಗಿ ಮೇ 19, 2023 ರಂದು 2,000 ರೂ. ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ 

    ಕ್ಲೀನ್ ನೋಟ್ ಅಭಿಯಾನದಡಿ ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಅನುಮತಿ ಇತ್ತು. ಈ ಗಡುವು ಮುಗಿದ ಬಳಿಕ ತನ್ನ 19 ವಿತರಣಾ ಕಚೇರಿಗಳಲ್ಲಿ ಈ ಸೇವೆ ಒದಗಿಸುವುದನ್ನು ಆರ್‌ಬಿಐ ಈಗಲೂ ಮುಂದುವರೆಸಿದೆ.

    2,000 ರೂ. ನೋಟುಗಳು ಚಲಾವಣೆ ಇಲ್ಲದೇ ಇದ್ದರೂ ಈಗಲೂ ಕಾನೂನು ಮಾನ್ಯತೆಯನ್ನು ಹೊಂದಿದೆ. ಜನರು ಲಭ್ಯವಿರುವ ವ್ಯವಸ್ಥೆಯ ಮೂಲಕ ಮೂಲಕ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು. ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಭಾರತೀಯ ಅಂಚೆ ಮೂಲಕ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕಳುಹಿಸಬಹುದು.

    ಸದ್ಯ ಎಲ್ಲಿ 2000 ರೂ. ನೋಟುಗಳನ್ನು ಸ್ವೀಕರಿಸಲಾಗುತ್ತದೆ?
    ಆರ್‌ಬಿಐಯ ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತಪುರಂ ಕಚೇರಿ ತೆರಳಿ ವಿನಿಮಯ ಅಥವಾ ಠೇವಣಿ ಇಡಬಹುದು.

     

  • ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ

    ಮುಂಬೈ: ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಇದು 2ನೇ ಬೆದರಿಕೆಯಾಗಿದೆ.

    ಡಿ.12 ರಂದು ಆರ್‌ಬಿಐ ಇಮೇಲ್‌ಗೆ ದುಷ್ಕರ್ಮಿಗಳು ರಷ್ಯನ್ ಭಾಷೆಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ತಿಂಗಳ ಹಿಂದೆಯಷ್ಟೇ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆ ಕರೆ ಬಂದಿತ್ತು.ಇದನ್ನೂ ಓದಿ: ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    ಸದ್ಯ ಮುಂಬೈನ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮೇಲ್ ಕಳುಹಿಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬೆದರಿಕೆ ಇಮೇಲ್ ಕುರಿತು ಮಾತನಾಡಿರುವ ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ರಷ್ಯನ್ ಭಾಷೆಯಲ್ಲಿದೆ ಮತ್ತು ಬ್ಯಾಂಕ್ಅನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಮೇಲ್ ಕಳುಹಿಸಲು VPN ಅನ್ನು ಬಳಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ಇಮೇಲ್ ಕಳುಹಿಸಿದವರ IP ವಿಳಾಸವನ್ನು ಸಹ ಪತ್ತೆಹಚ್ಚುತ್ತಿದ್ದಾರೆ ಎಂದು ಹೇಳಿದರು.

    ಇದಕ್ಕೂ ಮುನ್ನ ನ.16 ರಂದು, ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಲಕ್ಷರ್ ಇ ತೊಯ್ಬಾ ಗುಂಪಿನ ಸಿಇಓ ಎಂದು ಹೇಳಿ, ಹಾಡನ್ನು ಹಾಡಿದ್ದರು. ಬಳಿಕ ಬಾಂಬ್ ಬೆದರಿಕೆ ಹಾಕಿದ್ದರು. ಜೊತೆಗೆ 2008ರಲ್ಲಿ ಇದೇ ಗುಂಪು ಮುಂಬೈನಲ್ಲಿ ದಾಳಿ ನಡೆಸಿತ್ತು.

    ಇತ್ತೀಚಿಗಷ್ಟೇ ಶಕ್ತಿಕಾಂತ ದಾಸ್ ಅವರು ಆರು ವರ್ಷಗಳ ನಂತರ ಅಧಿಕಾರದಿಂದ ನಿವೃತ್ತಿಯಾದರು. ಇದೀಗ ಅವರ ಬದಲಿಗೆ ಆರ್‌ಬಿಐನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ವಹಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ:ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ

  • ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ಅಧಿಕಾರ ಸ್ವೀಕಾರ

    ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ಅಧಿಕಾರ ಸ್ವೀಕಾರ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ (RBI) 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ (Sanjay Malhotra) ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಡಿ.11 ರಿಂದ (ಇಂದಿನಿಂದ) ಜಾರಿಗೆ ಬರುವಂತೆ ಮುಂದಿನ 3 ವರ್ಷಗಳ ಕಾಲ ಗವರ್ನರ್ ಆಗಿ ಅಧಿಕಾರ ನಿರ್ವಹಿಸಲಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ.

    ಶಕ್ತಿಕಾಂತ ದಾಸ್‌ (Shaktikanta Das) ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಂಡಿತು. ಈ ಹಿನ್ನೆಲೆ ಬುಧವಾರ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದಾರೆ. 2018ರ ಡಿ.12ರಂದು ಮಾಜಿ ಗವರ್ನರ್‌ ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ, RBIನ 25ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್‌ ನೇಮಕಗೊಂಡಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಬಳಿಕ 2ನೇ ಅವಧಿಗೂ ಅವರನ್ನೇ ಮುಂದುವರಿಸಲಾಗಿತ್ತು.

    ಯಾರು ಸಂಜಯ್‌ ಮಲ್ಹೋತ್ರಾ?
    ಸಂಜಯ್‌ ಮಲ್ಹೋತ್ರಾ ಅವರು 1990ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಜೆಟ್‌ ವಿಚಾರದಲ್ಲಿ ತೆರಿಗೆ ಸಂಬಂಧಿತ ಪ್ರಸ್ತಾವನೆಗಳನ್ನು ಅವರು ಪರಿಶೀಲಿಸುತ್ತಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ನಿರೀಕ್ಷೆಗಳ ವಿಚಾರಗಳಂಥ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದರು.

    ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಮಲ್ಹೋತ್ರಾ ಅವರು ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ವಿದ್ಯುತ್‌, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಳ್ಳುವುದಕ್ಕೂ ಮುನ್ನ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಂದಾಯ ಕಾರ್ಯದರ್ಶಿಯಾಗಿದ್ದರು.

  • ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

    ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರನ್ನು ನೇಮಕ ಮಾಡಲಾಗಿದೆ.‌

    ಹಾಲಿ ಗರ್ವನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಳ್ಳಲಿದೆ. ಡಿಸೆಂಬರ್‌ 11ರಂದು ಬುಧವಾರ ರಿಸರ್ವ್‌ ಬ್ಯಾಂಕ್‌ನ ಮುಂದಿನ ಗವರ್ನರ್‌ ಆಗಿ ಮಲ್ಹೋತ್ರಾ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅವರು ಕೇಂದ್ರೀಯ ಬ್ಯಾಂಕ್‌ ಅನ್ನು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    2018ರ ಡಿ.12ರಂದು ಮಾಜಿ ಗವರ್ನರ್‌ ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ, RBIನ 25ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್‌ ನೇಮಕಗೊಂಡಿದ್ದರು. ಮೂರು ವರ್ಷ ಅಧಿಕಾರ ಪೂರ್ಣಗೊಳಿಸಿದ ಬಳಿಕ 2ನೇ ಅವಧಿಗೂ ಅವರನ್ನ ಮುಂದುವರಿಸಲಾಗಿತ್ತು.

    ಸಂಜಯ್‌ ಮಲ್ಹೋತ್ರಾ ಅವರು 1990ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಜೆಟ್‌ ವಿಚಾರದಲ್ಲಿ ತೆರಿಗೆ ಸಂಬಂಧಿತ ಪ್ರಸ್ತಾವನೆಗಳನ್ನು ಅವರು ಪರಿಶೀಲಿಸುತ್ತಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ನಿರೀಕ್ಷೆಗಳ ವಿಚಾರಗಳಂಥ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದರು.

    ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಮಲ್ಹೋತ್ರಾ ಅವರು ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    33 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ವಿದ್ಯುತ್‌, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಳ್ಳುವುದಕ್ಕೂ ಮುನ್ನ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಂದಾಯ ಕಾರ್ಯದರ್ಶಿಯಾಗಿದ್ದರು.

  • ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ

    ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ

    ಮುಂಬೈ: ಮಹಾರಾಷ್ಟ್ರ (Maharashtra) ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ನ.16 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರ್‌ಬಿಐನ (RBI) ಗ್ರಾಹಕ ಸೇವಾ ಕೇಂದ್ರದ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿದ್ದು, ಸೆಂಟ್ರಲ್ ಬ್ಯಾಂಕನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಇದನ್ನೂ ಓದಿ: IPL Mega Auction 2025: ಹರಾಜಲ್ಲಿ 13ರ ಬಾಲಕ!

    ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಲಕ್ಷರ್ ಇ ತೊಯ್ಬಾ ಗುಂಪಿನ ಸಿಇಓ ಎಂದು ಹೇಳಿ, ಹಾಡನ್ನು ಹಾಡಿದ್ದಾರೆ. ಬಳಿಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಜೊತೆಗೆ 2008ರಲ್ಲಿ ಇದೇ ಗುಂಪು ಮುಂಬೈನಲ್ಲಿ ದಾಳಿ ನಡೆಸಿತ್ತು. ಸದ್ಯ ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಇಂತಹ ಬಾಂಬ್ ಬೆದರಿಕೆಗಳು ನಾಗರಿಕರ ಮೇಲೆ ಪರಿಣಾಮ ಬೀರುವುದಲ್ಲದೆ ದೇಶದ ಆರ್ಥಿಕ ಭದ್ರತೆಯನ್ನು ಅಸ್ಥಿರಗೊಳಿಸುತ್ತವೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರವು ಹೆಚ್ಚಿನ ಕಾಳಜಿಯೊಂದಿಗೆ ಕೈಗೆತ್ತಿಕೊಂಡಿದೆ. ಇಂತಹ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಕೆ ನೀಡಿದೆ.

    ಇತ್ತೀಚಿನ ದಿನಗಳಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಕಂಡುಬರುತ್ತಿರುವ ಹೊತ್ತಿನಲ್ಲೇ ಆರ್‌ಬಿಐಗೆ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ: ಗುಡ್​ನ್ಯೂಸ್​​ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್‌ ಫಿಕ್ಸ್‌

  • ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ನವದೆಹಲಿ: ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಕಾರು ಮಾರಾಟ (Car Sales) ಕುಸಿತಗೊಂಡಿದೆ. ಒಟ್ಟಾರೆ ಸದ್ಯ ಈಗ 79 ಸಾವಿರ ಕೋಟಿ ರೂ.ಮೌಲ್ಯದ 7.90 ಲಕ್ಷ ವಾಹನಗಳು ಮಾರಾಟಕ್ಕೆ ಸಿದ್ದವಾಗಿದ್ದರೂ  ಗ್ರಾಹಕರಿಂದ ಬುಕ್ಕಿಂಗ್‌ ಆಗುತ್ತಿಲ್ಲ.

    ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಮಾಹಿತಿಯ ಪ್ರಕಾರ, ಕಡಿಮೆ ಮಾರಾಟ ಇರುವಾಗಲೂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಕಾರನ್ನು ಉತ್ಪಾದನೆ ಮಾಡಿದ್ದರಿಂದ ಮಾರಾಟ 18.81% ಕುಸಿದಿದೆ.

    ಕುತೂಹಲದ ವಿಶೇಷ ಏನೆಂದರೆ 10-25 ಲಕ್ಷ ರೂ. ಬೆಲೆಯ ಕಾರುಗಳ ಮಾರಾಟವೂ ಕುಸಿತಗೊಂಡಿದೆ. ಕೋವಿಡ್‌ (Covid) ನಂತರ ಈ ಕಾರುಗಳ ಮಾರಾಟ ಭಾರೀ ಏರಿಕೆ ಕಂಡಿತ್ತು.

    ಕಾರು ಖರೀದಿಯನ್ನು ಗ್ರಾಹಕರು ಮುಂದೂಡಲು ಹಲವು ಕಾರಣಗಳನ್ನು ನೀಡಬಹುದು. ಒಂದನೇಯದಾದಾಗಿ ಈ ವರ್ಷ ಲೋಕಸಭಾ ಚುನಾವಣೆ ಇತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳು ಕಡಿಮೆ ಇತ್ತು. ಇದರ ಜೊತೆ ಹವಾಮಾನ ವೈಪರೀತ್ಯಗಳಿಂದಲೂ ಮಾರಾಟ ಕುಸಿತವಾಗಿದೆ. ಮೊದಲ 6 ತಿಂಗಳು ವಿಪರೀತ ಬೇಸಿಗೆ ಇದ್ದರೆ ನಂತರ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಕಾರು ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಇನ್ನೊಂದು ಮುಖ್ಯ ಕಾರಣ ಏನೆಂದರೆ ಕೆಲವರು ಎಲೆಕ್ಟ್ರಿಕ್‌ ಅಥವಾ ಪೆಟ್ರೋಲ್‌/ಡೀಸೆಲ್‌ ಎಂಜಿನ್‌ ಮಧ್ಯೆ ಯಾವ ಕಾರು ಖರೀದಿಸಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಿದ್ದರೂ ಹೊಸದಾಗಿ ಬಿಡುಗಡೆಯಾದ ಸುಜುಕಿ ಫ್ರಾಕ್ಸ್‌ ಮತ್ತು ಟಾಟಾ ಕರ್ವ್‌ಗೆ ಬೇಡಿಕೆಯಿದೆ.

    ಕಾರುಗಳ ದರ ಇಳಿಕೆಗೆ ಹಲವು ಕಾರಣ ನೀಡಬಹುದು. ಅದರಲ್ಲೂ ಮುಖ್ಯವಾಗಿ ಕಾರು ಸಾಲ ದುಬಾರಿಯಾಗಿರುವುದು. ಭಾರತ ವಿಶ್ಯಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸಿವೆ. ಹಣದುಬ್ಬರವನ್ನು ನಿಯಂತ್ರಿಸಲು ಭಾರತದಲ್ಲಿ ಆರ್‌ಬಿಐ (RBI) ಬಡ್ಡಿ ದರ ಏರಿಸುತ್ತಾ ಹೋಗಿದೆ. ಕೊರೊನಾ ನಂತರ ದೇಶದ ಅರ್ಥವ್ಯವಸ್ಥೆಯನ್ನು ಸ್ಥಿರವಾಗಿಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

    ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಕಾರುಗಳ ಮಾರಾಟ ಕಡಿಮೆಯಾಗುತ್ತಿದೆ. ಕೆಲ ಕಂಪನಿಗಳು ತನ್ನ ಉತ್ಪಾದನಾ ಘಟಕವನ್ನೇ ಬಂದ್‌ ಮಾಡಲು ಮುಂದಾಗಿದೆ. ವಿಶ್ವದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ವೋಕ್ಸ್‌ ವಾಗನ್‌ ಬೆಲ್ಜಿಯಂ ಬ್ರುಸೆಲ್ಸ್‌ನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲು ಮುಂದಾಗುತ್ತಿದೆ. ಒಂದು ವೇಳೆ ಮುಚ್ಚಿದರೆ ಕಳೆದ 4 ದಶಕಗಳಲ್ಲಿ ವೋಕ್ಸ್‌ವಾಗನ್‌ ಮುಚ್ಚುತ್ತಿರುವ ಮೊದಲ ಘಟಕ ಇದಾಗಲಿದೆ. ಇದರ ಜೊತೆ ಜರ್ಮನಿಯ ಘಟಕವನ್ನು ಮುಚ್ಚಲು ಸಿದ್ಧತೆ ನಡೆದಿದೆ.

    ವಿಶ್ವದಲ್ಲಿ ಅತಿ ಹೆಚ್ಚು ಕಾರುಗಳು ಅಮೆರಿಕ, ಕೆನಡಾ, ಯುರೋಪ್‌ ದೇಶಗಳಲ್ಲಿ ಆಗುತ್ತಿದೆ. ಭಾರತದಲ್ಲಿ ಒಂದು ಕಾರು ತೆಗೆದುಕೊಂಡರೆ ಕನಿಷ್ಟ 7-8 ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 4-5 ವರ್ಷಗಳಲ್ಲಿ ಹೊಸ ಕಾರನ್ನು ಜನ ಖರೀದಿ ಮಾಡುತ್ತಿದ್ದಾರೆ. ಆದರೆ ರಷ್ಯಾ ಉಕ್ರೇನ್‌ ಯುದ್ಧದ ಬಳಿಕ ಯುರೋಪ್‌ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅಮೆರಿಕದಲ್ಲೂ ಹಣದುಬ್ಬರ ಜಾಸ್ತಿ ಇದೆ. ಈ ಕಾರಣಕ್ಕೆ ಕಾರು ಮಾರಾಟ ವಿಶ್ವದಲ್ಲೇ ಕಡಿಮೆಯಾಗುತ್ತಿದೆ.

     

  • RBI ಬಡ್ಡಿ ದರ ಇಳಿಕೆ ಇಲ್ಲ – ಸತತ 10ನೇ ಬಾರಿಗೆ ಯಥಾಸ್ಥಿತಿ ಮುಂದುವರಿಕೆ

    RBI ಬಡ್ಡಿ ದರ ಇಳಿಕೆ ಇಲ್ಲ – ಸತತ 10ನೇ ಬಾರಿಗೆ ಯಥಾಸ್ಥಿತಿ ಮುಂದುವರಿಕೆ

    ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಸತತ 10ನೇ ಬಾರಿಗೆ ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲೇ ಮುಂದುವರಿಸಿದೆ.

    ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ನೇತೃತ್ವದಲ್ಲಿ ಬುಧವಾರ (ಅ.9) 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸಭೆ ನಡೆಸಿತು. ಈ ಪೈಕಿ ಮೂವರು ಹೊಸ ಸದಸ್ಯರನ್ನು ಎಂಪಿಸಿಗೆ ಸೇರ್ಪಡೆಗೊಳಿಸಲಾಯಿತು. ದೆಹಲಿ ವಿವಿಯ (Dehli University) ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊಫೆಸರ್ ರಾಮ್ ಸಿಂಗ್, ಅರ್ಥಶಾಸ್ತ್ರಜ್ಷ ಸೌಗತ ಭಟ್ಟಾಚಾರ್ಯ, ಕೈಗಾರಿಕಾ ಅಭಿವೃದ್ಧಿಯ ಅಧ್ಯಯನಗಳ ಸಂಸ್ಥೆಯ ಸಿಇಒ ಡಾ.ನಾಗೇಶ್ ಕುಮಾರ್ ನೂತನ ಸದಸ್ಯರು. ಇದನ್ನೂ ಓದಿ: Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು

    ಸಭೆಯ ಬಳಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಶಕ್ತಿಕಾಂತ ದಾಸ್‌, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.2% ರಷ್ಟಾಗುವ ಮುನ್ಸೂಚನೆ ಇದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ತರದೇ 6.5% ನಲ್ಲೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಪೈಕಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು ಎಂದು ತಿಳಿಸಿದರು.

    ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲೂ ಆರ್‌ಬಿಐ ಇದೇ ದರವನ್ನು ಕಾಯ್ದುಕೊಂಡಿತ್ತು. ಕೊನೆಯದ್ದಾಗಿ 2023ರ ಫೆಬ್ರವರಿ 8ರಂದು ನಡೆದ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಕೆ ಮಾಡಿತ್ತು. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಬಡ್ಡಿ ದರವನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಭೀತಿಯಿಂದಾಗಿ ಬಡ್ಡಿದರವನ್ನು ಇಳಿಸದ ಆರ್‌ಬಿಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ. ಇದನ್ನೂ ಓದಿ: ಭೂಪಿಂದರ್‌ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!‌

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

  • 4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ – ಲೆಕ್ಕಕೊಟ್ಟ ಮೋದಿ ವಿರುದ್ಧ ಖರ್ಗೆ ಕಿಡಿ!

    4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ – ಲೆಕ್ಕಕೊಟ್ಟ ಮೋದಿ ವಿರುದ್ಧ ಖರ್ಗೆ ಕಿಡಿ!

    – ಮೋದಿ ಮುಂದೆ ಮೂರು ಪ್ರಶ್ನೆಗಳನ್ನಿಟ್ಟ ಎಐಸಿಸಿ ಅಧ್ಯಕ್ಷ

    ನವದೆಹಲಿ: ಕಳೆದ 4 ವರ್ಷಗಳಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರವಾಗಿ ಖಂಡಿಸಿದ್ದಾರೆ. ನಿರುದ್ಯೋಗದ ಬಗ್ಗೆ ನಕಲಿ ನಿರೂಣೆಗಳನ್ನು ಹರಡುತ್ತಾ ಸುಳ್ಳಿನ ಜಾಲವನ್ನೇ ಹೆಣೆಯುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಶನಿವಾರ ಮುಂಬೈನಲ್ಲಿ ಪ್ರಧಾನಿ ಮೋದಿ 29,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಆರ್‌ಬಿಐ ವರದಿ ಉಲ್ಲೇಖಿಸಿ ಮಾತನಾಡಿದ್ದರು. ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು (Jobs) ದೇಶದಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖರ್ಗೆ ಖಂಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮುಂದೆ ಮೂರು ಪ್ರಶ್ನೆಗಳನ್ನೂ ಇಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ಮೋದಿ ಮುಂದಿಟ್ಟ ಮೂರು ಪ್ರಶ್ನೆ:
    ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ನರೇಂದ್ರ ಮೋದಿಜೀ ನಮಗೆ ಮೂರು ಪ್ರಶ್ನೆಗಳಿವೆ. ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ (NRA) ಕಳೆದ 4 ವರ್ಷಗಳಿಂದ ಒಂದೇ ಒಂದು ಪರೀಕ್ಷೆಯನ್ನೂ ನಡೆಸಿಲ್ಲ, ಏಕೆ? ಎನ್‌ಆರ್‌ಎಗೆ 1,517.57 ಕೋಟಿ ರೂ. ಹಣ ನೀಡಿದ್ದರೂ ಕಳೆದ 4 ವರ್ಷಗಳಲ್ಲಿ ಕೇವಲ 58 ಕೋಟಿ ರೂ. ಮಾತ್ರ ಬಳಕೆಯಾಗಿದೆ ಏಕೆ? ಎನ್‌ಆರ್‌ಎ ಅನ್ನು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸಲು ಒಂದು ಸಂಸ್ಥೆಯಾಗಿ ರಚಿಸಲಾಗಿದೆ. ಆದ್ರೆ ಸರ್ಕಾರ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್‌ (ಆರ್ಥಿಕ ದುರ್ಬಲ ವರ್ಗ) ಯುವಜನರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ನಿಕ್ಷ್ರಿಯಗೊಳಿಸಲಾಗಿದೆಯೇ? ಎಂದು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸದ್ಯ ಈ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರಧಾನಿ ಮೋದಿ ಹೇಳಿದ್ದೇನು?
    ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಆರ್‌ಬಿಐ ನೀಡಿದ ಈ ಅಂಕಿ-ಅಂಶಗಳು ಸುಳ್ಳು ಸುದ್ದಿ ಹರಡುವವರು, ಅಜೆಂಡಾ ಬಿತ್ತುವವರನ್ನು ಸುಮ್ಮನಾಗಿಸಿವೆ. ಯಾರು ಹೂಡಿಕೆ, ಮೂಲ ಸೌಕರ್ಯ ಹಾಗೂ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರೋ, ಅವರೆಲ್ಲರ ಬಣ್ಣ ಈಗ ಬಯಲಾಗಿದೆ. ಇಂತಹ ಪಿತೂರಿಗಳನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಕುಟುಕಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    ದೇಶದ ಜನರಿಗೆ ಎನ್‌ಡಿಎ ಮೇಲೆ ಅಪಾರ ವಿಶ್ವಾಸವಿದೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆಯನ್ನು ಕಾಪಾಡಲು ಸಾಧ್ಯ ಎಂದು ನಮ್ಮನ್ನು 3ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಸಣ್ಣ ಹಾಗೂ ಬೃಹತ್‌ ಹೂಡಿಕೆದಾರರು ನಮ್ಮ ಸರ್ಕಾರ ಮತ್ತೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. 3ನೇ ಅವಧಿಯಲ್ಲಿ ನಮ್ಮ ಕೆಲಸವು ಇನ್ನಷ್ಟು ಕ್ಷಿಪ್ರವಾಗುತ್ತದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬುದಾಗಿ ಹೇಳಿದ್ದೆ. ಅದರಂತೆ ಈಗ ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ 

  • 2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI

    2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI

    ನವದೆಹಲಿ: 2,000 ರೂ. ಮುಖ ಬೆಲೆಯ ನೋಟನ್ನು ಬ್ಯಾನ್‌ ಮಾಡಿ ವರ್ಷಗಳೇ ಉರುಳಿದರೂ ಬರೋಬ್ಬರಿ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿ ಇನ್ನೂ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಹೇಳಿದೆ.

    2,000 ರೂ. ಮುಖಬೆಲೆಯ ನೋಟುಗಳ ಪೈಕಿ 97.87% ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಹಿಂದಿರುಗಿವೆ. ಆದರೆ ಇಂದಿಗೂ 7,581 ಕೋಟಿ ಮೌಲ್ಯದ (2.13% ರಷ್ಟು) ನೋಟುಗಳು ಜನರ ಬಳಿಯೇ ಇದೆ ಎಂದು ಆರ್‌ಬಿಐ ಇಂದು ಮಾಹಿತಿ ಬಿಡುಗಡೆ ಮಾಡಿದೆ.

    2023 ರ ಮೇ 19 ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್‌ಬಿಐ ಹಿಂಪಡೆದಿತ್ತು. 3.56 ಲಕ್ಷ ಕೋಟಿಯಷ್ಟು ನೋಟುಗಳು ಆ ಸಂದರ್ಭದಲ್ಲಿ ಚಲಾವಣೆಯಲ್ಲಿ ಇದ್ದವು. ಆ ಬಳಿಕ ಬ್ಯಾಂಕ್‌ಗಳಲ್ಲಿ ನೋಟು ಹಿಂಪಡೆಯಲು ಆರ್‌ಬಿಐ ಅವಕಾಶವನ್ನು ನೀಡಿತ್ತು. ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಪಾತ್ರ ಇದೆಯಾ? – ಸಚಿವ ಬೈರತಿ ಸುರೇಶ್ ಹೇಳಿದ್ದೇನು?

  • ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    – 2023-24ರ ಹಣಕಾಸು ವರದಿಯಲ್ಲಿ ವಿವರ ಪ್ರಕಟ
    – ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂತು ಚಿನ್ನ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಿಂದ (Bank of England) ಸುಮಾರು 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು (Gold) ಮರಳಿ ಭಾರತಕ್ಕೆ (India) ತಂದಿದೆ. 1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಬಿಐ ಚಿನ್ನವನ್ನು  ಮರಳಿ ತಂದಿರುವುದು ಇದೇ ಮೊದಲು.

    2023-24ರ ತನ್ನ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳಿದೆ. ತಂದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು. ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

    ವಿದೇಶದಲ್ಲಿ ಆರ್‌ಬಿಐ 413.8 ಟನ್ ಚಿನ್ನವನ್ನು ಇಟ್ಟಿದೆ. ಕೆಲ ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್‌ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.

    ಇಂಗ್ಲೆಂಡ್‌ನಲ್ಲಿ ಇರಿಸಿದ್ದು ಯಾಕೆ?
    1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್‌ ಸಾಲ ಪಡೆದುಕೊಂಡಿತ್ತು.

    ಪ್ಲ್ಯಾನ್‌ ಹೇಗಿತ್ತು?
    100 ಟನ್‌ ಚಿನ್ನವನ್ನು ತರಲು ತಿಂಗಳುಗಟ್ಟಲೇ ಪ್ಲ್ಯಾನಿಂಗ್‌ ಮಾಡಿ ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಸರ್ಕಾರದ ಇತರೇ ಇಲಾಖೆಗಳ ಸಂಪೂರ್ಣ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ತರಲಾಗಿದೆ.  ದೇಶದ ʼಸಾರ್ವಭೌಮ ಆಸ್ತಿʼಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

    ಚಿನ್ನ ತಂದಿದ್ದು ಯಾಕೆ?
    ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇಟ್ಟಿದೆ. ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈಗ ಚಿನ್ನವನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದೆ.

    ಇಂಗ್ಲೆಂಡ್‌ನಲ್ಲಿ ದೇಶಗಳು ಚಿನ್ನ ಇಡೋದು ಯಾಕೆ?
    ಈ ಹಿಂದಿನಿಂದಲೂ ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್‌ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಭಾರೀ ಪ್ರಮಾಣದ ಚಿನ್ನ ಸಂಗ್ರಹಿಸಲು ಸುರಕ್ಷಿತ ವ್ಯವಸ್ಥೆ, ಸಂಗ್ರಹಾಲಯಗಳು ಇಲ್ಲದೇ ಇದ್ದಾಗ ದೇಶಗಳು ಯುಕೆ ಬ್ಯಾಂಕ್‌ನಲ್ಲಿ ಇಡುತ್ತಿವೆ. ಈ ರೀತಿಯಾಗಿ ಚಿನ್ನವನ್ನು ಇರಿಸಿದ್ದಕ್ಕೆ ದೇಶಗಳು ಗೌರವ ಧನ ನೀಡಬೇಕಾಗುತ್ತದೆ.

    ಆರ್‌ಬಿಐ ಬಳಿ ಎಷ್ಟು ಚಿನ್ನವಿದೆ?
    ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. 15 ವರ್ಷಗಳ ಹಿಂದೆ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 200 ಟನ್ ಚಿನ್ನವನ್ನು ಖರೀದಿಸಿತ್ತು.

    2019ರಲ್ಲಿ ಚಿನ್ನ ಸಂಗ್ರಹ 618.2 ಟನ್‌ಗೆ ಏರಿಕೆಯಾಗಿದ್ದರೆ 2020ರ ವೇಳೆಗೆ ಇದು 661.4 ಟನ್‌ಗೆ ಏರಿಕೆಯಾಗಿತ್ತು. 2021ರ ವೇಳೆಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ ಬರೋಬ್ಬರಿ 822.1 ಟನ್ ಚಿನ್ನದ ಸಂಗ್ರಹ ಹೊಂದಿದೆ.

    ಚಿನ್ನದಿಂದ ಶ್ರೀಮಂತವಾಯ್ತು ಅಮೆರಿಕ
    ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದ್ದರಿಂದ ಯುಕೆ, ಯುಎಸ್‌ಎಸ್‌ಆರ್‌ಗೆ ಬಲ ಬಂದಿತ್ತು. ಆದರೆ ಈ ಮಿತ್ರ ರಾಷ್ಟ್ರಗಳ ಮಧ್ಯೆ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಗಿತ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ 1944ರಲ್ಲಿ ಬ್ರೆಟ್ಟನ್‌ವುಡ್ಸ್‌ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದ್ದವು.

    ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕನ್‌ ಡಾಲರ್‌ ಅನ್ನು ಎಲ್ಲಾ ದೇಶಗಳು ವ್ಯವಹಾರಕ್ಕೆ ಬಳಸಲು ಅಧಿಕೃತ ಒಪ್ಪಿಗೆ ನೀಡಿದವು. ದೇಶಗಳು ಚಿನ್ನವನ್ನು ನೀಡಿ ಅಮೆರಿಕನ್‌ ಡಾಲರ್‌ ಖರೀದಿಸುವುದು ಒಪ್ಪಂದದ ಮುಖ್ಯ ತಿರುಳು.  ಈ ವೇಳೆ ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಅಮೆರಿಕ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್‌ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ಅಂದು ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವರೇ ಬಾಸ್‌ ಎನ್ನುವಂತೆ ಬ್ರೆಟ್ಟನ್‌ವುಡ್ಸ್‌ ಒಪ್ಪಂದದ ಬಳಿಕ ಡಾಲರ್‌ ವಿಶ್ವದ ಕರೆನ್ಸಿಯಾಗಿ ಬದಲಾಯ್ತು. ಪರಿಣಾಮ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ.