Tag: ಆರ್ಥಿಕ ಸಹಾಯ

  • ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಬೆಂಗಳೂರು: ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.  ನಟಿ ಸೋನು ಪಾಟೀಲ್ ತಾಯಿಯ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಈಗ ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರ ಅಭಿಮಾನಿ ಸೌಮ್ಯಾ. ಸುದೀಪ್ ಸಹಾಯ ಮಾಡಿರುವ ಕುರಿತು ಅವರೊಂದು ವೀಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಸುದೀಪ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ತಾಳಿ ಭಾಗ್ಯವನ್ನು ಉಳಿಸಿದ್ದೀರಾ ನೀವು ಎಂದು ಸೌಮ್ಯಾ ವೀಡಿಯೋದಲ್ಲಿ ಹೇಳಿದ್ದಾರೆ.

    ಕಳೆದ ತಿಂಗಳು ನನ್ನ ಪತಿಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದೆವು. ಆಗಲೇ ತುಂಬ ಖರ್ಚು ಆಗಿತ್ತು. ನಂತರ ಮನೆಗೆ ಬಂದಮೇಲೇ ಕೊರೊನಾ ತಗುಲಿತು. ನನಗೆ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಆಯಿತು. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಯ್ತು. ಆದರೆ ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದರು. ರೆಮಿಸಿಡಿವರ್ ಇಂಜೆಕ್ಷನ್‍ಗಾಗಿ ಹುಡುಕಿದರೂ ಸಿಗಲಿಲ್ಲ ಎಂದಿದ್ದಾರೆ ಸೌಮ್ಯ.

    20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು 1.50 ಲಕ್ಷ ರೂ. ಖರ್ಚಾಗಿತ್ತು. ಇಂತಹ ಸಂದರ್ಭದಲ್ಲಿ 50 ಸಾವಿರ ರೂ. ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದರು. ಅದು ನಮಗೆ ಕಷ್ಟದ ಪರಿಸ್ಥಿತಿ ಆಗಿತ್ತು. ಆದರೂ, ಹೇಗೋ ಹೊಂದಿಸಿಕೊಂಡು ಕಟ್ಟಿದೆವು. ಚಿಕಿತ್ಸೆ ಮುಗಿದ ಮೇಲೆ 1.30 ಲಕ್ಷ ರೂಪಾಯಿ ಬಿಲ್ ಆಗಿತ್ತು. ಅಷ್ಟೊಂದು ದುಡ್ಡು ನಮ್ಮ ಬಳಿ ಇರಲಿಲ್ಲ. ಎಲ್ಲ ಪ್ರಯತ್ನ ಮಾಡಿದರೂ, ದುಡ್ಡು ಹೊಂದಿಸಲು ಆಗಲಿಲ್ಲ. ಆಗ ಸಹಾಯಕ್ಕೆ ಸುದೀಪ್ ಅವರು ಬಂದರು ಎಂದು ಸೌಮ್ಯಾ ವೀಡಿಯೋದಲ್ಲಿ ತಿಳಿಸಿದ್ದಾರೆ.

    ಸುದೀಪ್ ಅವರ ಮೊದಲು ಮಾನವನಾಗು ಟ್ರಸ್ಟ್ ಬಗ್ಗೆ ಮಾಹಿತಿ ಪಡೆದುಕೊಂಡ ಆ ಟ್ರಸ್ಟ್ನ ಸಂಪರ್ಕಿಸಿದೆ. ನಂತರ ವಿಷಯ ಸುದೀಪ್ ಅವರಿಗೆ ತಲುಪಿದೆ. ಅವರು ಕೂಡಲೇ ಸೌಮ್ಯಾಗೆ ಆರ್ಥಿಕ ಸಹಾಯ ಮಾಡಿದ್ದಾರೆ. ನಾನು ಸುದೀಪ್ ಅವರಿಗೆ 10 ವರ್ಷಗಳಿಂದ ಅಭಿಮಾನಿ. ನಾನು ಗುಣ, ವ್ಯಕ್ತಿತ್ವ ನೋಡಿ, ಅಭಿಮಾನಿಯಾದವಳು. ಈಗ ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಜನ್ಮದಲ್ಲೂ ನಾನು ಅವರ ಅಭಿಮಾನಿಯಾಗಿಯೇ ಹುಟ್ಟುತ್ತೇನೆ. ನಾನು ಸಾಯುವವರೆಗೂ ಸುದೀಪ್ ಅವರ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ಆಯಸ್ಸು ಎಲ್ಲವೂ ಸುದೀಪ್ ಅವರಿಗೆ ಇರಲಿ’ ಎಂದು ಸೌಮ್ಯಾ ಹೇಳಿದ್ದಾರೆ.

  • ಮನೆ ಕಳೆದುಕೊಂಡ ತಮ್ಮ ಗ್ರಾಮಸ್ಥರ ನೆರವಿಗೆ ಬಂದ ಪೃಥ್ವಿ ಶಾ

    ಮನೆ ಕಳೆದುಕೊಂಡ ತಮ್ಮ ಗ್ರಾಮಸ್ಥರ ನೆರವಿಗೆ ಬಂದ ಪೃಥ್ವಿ ಶಾ

    ಮುಂಬೈ: ಭಾರತ ತಂಡ ಆಟಗಾರ 20 ವರ್ಷದ ಪೃಥ್ವಿ ಶಾ ತಮ್ಮ ಗ್ರಾಮದ ನಿವಾಸಿಗಳ ಮನೆಯನ್ನು ರಿಪೇರಿ ಮಾಡಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

    ಸದ್ಯ ಲಾಕ್‍ಡೌನ್‍ನಿಂದ ತಮ್ಮ ಗ್ರಾಮದಲ್ಲೇ ಬಂಧಿಯಾಗಿರುವ ಪೃಥ್ವಿ ಶಾ, ರಾಜಕಾರಣಿ ಸಂಜಯ್ ಪೊಟ್ನಿಸ್ ತೋಟದ ಮನೆಯಲ್ಲಿ ಉಳಿದಿದ್ದಾರೆ. ಸಂಜಯ್ ಅವರ ಮಗ ಯಶ್ ಮತ್ತು ಪೃಥ್ವಿ ಶಾ ಇಬ್ಬರು ಗೆಳೆಯರಾಗಿದ್ದು, ಇವರಿಬ್ಬರು ಒಟ್ಟಿಗೆ ಅವರ ತೋಟದ ಮನೆಯಲ್ಲಿ ಉಳಿದುಕೊಂಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಭಾರತದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ಇದ್ದಾರೆ. ಕೊರೊನಾದಿಂದ ನಲುಗಿದ್ದ ಮಹಾಗೆ ಸೈಕ್ಲೋನ್ ಕೂಡ ಪೆಟ್ಟುಕೊಟ್ಟಿತ್ತು. ಈ ಸೈಕ್ಲೋನ್‍ನಿಂದ ಪೃಥ್ವಿ ಅವರ ಸ್ವಗ್ರಾಮವಾದ ಮಾಂಡ್ವಾದ ಧೋಕವಾಡೆದಲ್ಲಿ ಹಲವಾರು ಮನೆಗಳು ಹಾನಿಯಾಗಿದ್ದರು. ಈ ಹಾಳಾಗಿದ್ದ ಮನೆಗಳನ್ನು ಸರಿಪಡಿಸಲು ಪೃಥ್ವಿ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಂಜಯ್ ಪೊಟ್ನಿಸ್, ಪೃಥ್ವಿ ಮತ್ತು ನನ್ನ ಮಗ ಲಾಕ್‍ಡೌನ್‍ನಿಂದ ನಮ್ಮ ಮನೆಯಲ್ಲೇ ಇದ್ದಾರೆ. ಸೈಕ್ಲೋನ್ ಇಲ್ಲಿ ಜಾಸ್ತಿ ಅವಾಂತರವನ್ನು ಸೃಷ್ಟಿಸಿದೆ. ನಮ್ಮ ಧೋಕವಾಡೆ ಗ್ರಾಮ ಹಾನಿಗೊಳಗಾಗಿದೆ. ನಮ್ಮ ಮನೆಗೂ ಕೂಡ ಹಾನಿಯಾಗಿದೆ. ಗ್ರಾಮಸ್ಥರ ಕಷ್ಟವನ್ನು ನೋಡಿ ಪೃಥ್ವಿ ಮತ್ತು ನನ್ನ ಮಗ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪೃಥ್ವಿ ಇದರ ಜೊತೆಗೆ ಕಷ್ಟದಲ್ಲಿ ಇರುವ ಜನರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.

    ಈ ಎಲ್ಲದರ ಜೊತೆಗೆ ಪೃಥ್ವಿ ತೋಟದ ಮನೆಯಲ್ಲಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇತರ ಆಟಗಾರರಂತೆ ಅವರು ಕೂಡ ಕಳೆದ ಮಾರ್ಚ್‍ನಿಂದ ಕ್ರಿಕೆಟ್‍ನಿಂದ ದೂರು ಉಳಿದಿದ್ದಾರೆ. ಕಳೆದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಪೃಥ್ವಿ ಶಾ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭವಾಗುವ ಮುನ್ನವೇ ಕೊರೊನಾ ವೈರಸ್ ನಿಂದ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ ಕಾರಣ ಅದು ಕೂಡ ನಿಂತು ಹೋಗಿತ್ತು.

    ಕಳೆದ ವರ್ಷ ಡೋಪಿಂಗ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೃಥ್ವಿ ಶಾ ಅವರನ್ನು ಎಂಟು ತಿಂಗಳು ಕ್ರಿಕೆಟ್‍ನಿಂದ ನಿಷೇಧ ಮಾಡಲಾಗಿತ್ತು. ಇದಾದ ನಂತರ ಶಾ ಭಾರತ ಎ ತಂಡಕ್ಕೆ ಮರಳುವ ಮೂಲಕ ಕ್ರಿಕೆಟ್‍ಗೆ ವಾಪಸ್ ಆಗಿದ್ದರು. ನಂತರ ನ್ಯೂಜಿಲೆಂಡ್‍ನಲ್ಲಿ ನಡೆದ ಮೂರು ಏಕದಿನ ಮತ್ತು ಎರಡು ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಇದರ ಜೊತೆಗೆ 2020ರ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಐಪಿಎಲ್ ಕೂಡ ಮುಂದಕ್ಕೆ ಹೋಗಿದೆ.

  • ಜನತಾ ದರ್ಶನದಲ್ಲಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಿಎಂ ಸಹಾಯ

    ಜನತಾ ದರ್ಶನದಲ್ಲಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಿಎಂ ಸಹಾಯ

    ಬೆಂಗಳೂರು: ಜನತಾ ದರ್ಶನದಲ್ಲಿ ರಾಮನಗರದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಸಿಎಂ ಕುಮಾರಸ್ವಾಮಿಯವರು ವಿತರಿಸಿದ್ದಾರೆ.

    ಕಳೆದ ವಾರದ ಹಿಂದೆ ರಾಮನಗರದ ವಿದ್ಯಾರ್ಥಿ ಕಾಂಚನಾ ಇಂಜಿನಿಯರಿಂಗ್ ಓದಲು ಆರ್ಥಿಕ ಸಮಸ್ಯೆಯನ್ನು ಎದುರಾಗಿದ್ದು ಸಹಾಯ ನೀಡುವಂತೆ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಕೇಳಿಕೊಂಡಿದ್ದಳು. ಈ ವೇಳೆ ಮುಖ್ಯಮಂತ್ರಿಯವರು ಯುವತಿಗೆ ಒಂದು ವಾರ ಬಿಟ್ಟು ಬರುವಂತೆ ತಿಳಿಸಿದ್ದರು.

    ಇಂದು ಜೆಪಿ ನಗರದ ನಿವಾಸದಲ್ಲಿ ನಡೆದ ಜನತಾ ದರ್ಶನದಲ್ಲಿ ಕಾಂಚನಾ ಸಮಸ್ಯೆಗೆ ಸ್ಪಂದಿಸಿ ಆಕೆಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಮುಖ್ಯಮಂತ್ರಿ ವಿತರಿಸಿದ್ದಾರೆ. ಚೆಕ್ ಪಡೆದ ಯುವತಿಯು ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಮುಖ್ಯಮಂತ್ರಿಗಳಿಗೆ ವಂದನೆ ಸಲ್ಲಿಸಿ, ಇಂತಹ ಮುಖ್ಯಮಂತ್ರಿಗಳು ನಮಗೆ ಬೇಕು ಎಂದು ಸಂತಸ ಹಂಚಿಕೊಂಡಿದ್ದಾಳೆ.

    ಡಾ. ರವೀಂದ್ರ ಭೇಟಿ:
    ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ರವೀಂದ್ರ ಮುಖ್ಯಮಂತ್ರಿ ಕುಮಾರಸ್ವಾಮಿಗಳನ್ನು ಜೆಪಿ ನಗರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 150 ಸೀಟುಗಳು ಮಿಸ್ ಆದ ಕಾರಣ ಸಿಎಂ ಜತೆ ಚರ್ಚಿಸಲು ಹಾಗೂ ಯಶಸ್ವಿನಿ ಯೋಜನೆ ಮುಂದುವರಿಸುವ ಕುರಿತು ಮಾತುಕತೆ ನಡೆಸಿದ್ದಾರೆ.