Tag: ಆರ್ಡರ್ ಆಫ್ ಝಾಯೆದ್

  • ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪುರಷ್ಕಾರ ಪ್ರದಾನ

    ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪುರಷ್ಕಾರ ಪ್ರದಾನ

    ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪುರಷ್ಕಾರ ‘ಆರ್ಡರ್ ಆಫ್ ಝಾಯೆದ್’ ನೀಡಿ ಗೌರವಿಸಲಾಯಿತು.

    ಯುಎಇಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಆಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ಝಾಯೆದ್ ನೀಡಿ ಗೌರವಿಸಿದ್ದಾರೆ. ಯುಎಇ ಸಂಸ್ಥಾಪಕರಾದ ನಹ್ಯಾನ್ ತಂದೆ ಶೇಜಕ್ ಜಾಯೆದ್ ಜನ್ಮದಿನ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

    ಈ ಬಾರಿಯ ‘ಆರ್ಡರ್ ಆಫ್ ಝಾಯೆದ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿಲಾಗುತ್ತದೆ ಎಂದು ಯುಎಇ ಸರ್ಕಾರ ಇದೇ ವರ್ಷ ಏಪ್ರಿಲ್‍ನಲ್ಲಿ ತಿಳಿಸಿತ್ತು. ಈ ವೇಳೆ ಝಾಯೆದ್ ಮೆಡಲ್ ಪುರಸ್ಕಾರ ಕುರಿತು ಟ್ವೀಟ್ ಮಾಡಿದ್ದ ಯುಎಇಯ ರಾಜಕುಮಾರ, ಭಾರತದೊಂದಿಗೆ ಐತಿಹಾಸಿಕ ಹಾಗೂ ಸಮಗ್ರವಾದ ಕಾರ್ಯತಂತ್ರದ ಬಾಂಧವ್ಯ ಹೊಂದಿದ್ದೇವೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಉತ್ತೇಜನ ನೀಡಿದರು. ಅವರ ಈ ಪ್ರಯತ್ನಕ್ಕಾಗಿ ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದೆ ಎಂದು ಹೇಳಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಯುಎಇಗೆ ಭೇಟಿ ನೀಡಿದ್ದರು. ಈ ಮೂಲಕ ಉಭಯ ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು. ಬಳಿಕ ಯುಎಇ ಯುವರಾಜ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯಾನ್ ಅವರು 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದಕ್ಕೂ ಮುನ್ನ 2016ರಲ್ಲಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು.

    ಝಾಯೆದ್ ಮೆಡಲ್ ಯಾರಿಗೆ ನೀಡುತ್ತಾರೆ?:
    ಸಂಯುಕ್ತ ಅರಬ್ ಸಂಸ್ಥಾನವು ಪ್ರತಿ ವರ್ಷವೂ ಝಾಯೆದ್ ಮೆಡಲ್ ಅನ್ನು ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1995ರಲ್ಲಿ ಮೊದಲ ಬಾರಿ ಜಪಾನ್ ಯುವರಾಜ ನರುಹಿಟೊ ಅವರಿಗೆ ನೀಡಲಾಗಿತ್ತು. 2007ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, 2018ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಈ ಗೌರವ ಸಿಕ್ಕಿತ್ತು. ಝಾಯೆದ್ ಮೆಡಲ್ ಪುರಸ್ಕಾರ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

    ಪ್ರಧಾನಿ ಮೋದಿ ಅವರು ಸದ್ಯ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಫ್ರಾನ್ಸ್ ಗೆ ಭೇಟಿ ನೀಡಿ ಅಲ್ಲಿಂದ ಇಂದು ಯುಎಇಗೆ ಆಗಮಿಸಿದ್ದಾರೆ. ಈ ಮೂಲಕ ಯುಎಇಯಲ್ಲಿ ಎರಡು ದಿನದ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ರಾಜಕುಮಾರ್ ನಹ್ಯಾನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಷಯಗಳ ಕುರಿತು ಇಬ್ಬರು ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.