Tag: ಆರೋಪ

  • ಪೊಲೀಸ್ ವಾಹನದ ಹೆಸರಲ್ಲಿ ಹಣ ಸಾಗಾಣೆ- ಪ್ರಜ್ವಲ್ ರೇವಣ್ಣ ಗಂಭೀರ ಆರೋಪ

    ಪೊಲೀಸ್ ವಾಹನದ ಹೆಸರಲ್ಲಿ ಹಣ ಸಾಗಾಣೆ- ಪ್ರಜ್ವಲ್ ರೇವಣ್ಣ ಗಂಭೀರ ಆರೋಪ

    ಹಾಸನ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆದಿರುವ ಜಿಲ್ಲೆಯ ಹೊಳೆನರಸಿಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಆರ್.ಟಿ.ಓ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನ ಯುವ ನಾಯಕ ಪ್ರಜ್ವಲ್ ರೇವಣ್ಣ ಆರೋಪಿಸಿದ್ದಾರೆ.

    ಕ್ಷೇತ್ರದಲ್ಲಿ ಆರ್ ಟಿಓ ಕಚೇರಿಯ ಸಿಬ್ಬಂದಿ ಸೀಜ್ ಮಾಡುವ ನೆಪದಲ್ಲಿ ಪಡೆದ ಹಣವನ್ನು ವಾಹನಗಳಿಗೆ ಪೊಲೀಸ್ ಸ್ಟಿಕ್ಕರ್ ಬಳಸಿಕೊಂಡು ಸಾಗಾಣೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಚುನಾವಣಾ ಆಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.

    ಕ್ಷೇತ್ರದ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಯನಿರ್ವಹಿಸುವ ಮಹಿಳೆಯರಿಗೂ ಹಣದ ಆಮಿಷ ಒಡ್ಡಲಾಗುತ್ತಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳ ಚಾಲಕರಿಗೆ ಬೆದರಿಕೆ ಒಡ್ಡಿರುವ ಕಾಂಗ್ರೆಸ್ ಪಕ್ಷದವರು ಹಣ ಮತ್ತು ಉಡುಗೊರೆಗಳನ್ನು ಹಂಚುತ್ತಿದ್ದಾರೆ ಎಂದು ಪ್ರಜ್ವಲ್ ಆರೋಪಿಸಿದ್ದಾರೆ.

  • ವಿಮಾನ ನಿಲ್ದಾಣದಲ್ಲಿ ವಿವಸ್ತ್ರಗೊಳಿಸಿ ಗಗನಸಖಿಯರ ತಪಾಸಣೆ?

    ವಿಮಾನ ನಿಲ್ದಾಣದಲ್ಲಿ ವಿವಸ್ತ್ರಗೊಳಿಸಿ ಗಗನಸಖಿಯರ ತಪಾಸಣೆ?

    ಚೆನ್ನೈ: ಗಗನಸಖಿಯರನ್ನು ವಿವಸ್ತ್ರಗೊಳಿಸಿ ಪರಿಶೀಲನೆ ನಡೆಸಿರುವ ಘಟನೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಘಟನೆ ಶನಿವಾರ ಬೆಳಗ್ಗೆ ನಡೆದಿದ್ದು, ಸ್ಪೈಸ್ ಜೆಟ್ ಏರ್ ಲೈನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಗಗನಸಖಿಯರು ಸಂಸ್ಥೆಯ ಭದ್ರತಾ ಸಿಬ್ಬಂದಿಯ ಮೇಲೆ ಈ ಆರೋಪ ಮಾಡಿದ್ದಾರೆ. ತಪಾಸಣೆಯ ವೇಳೆ ಗಗನಸಖಿಯರ ಸ್ಯಾನಿಟರಿ ಪ್ಯಾಡ್ ಅನ್ನು ಬಿಚ್ಚಿ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

    ಈ ಕುರಿತು ಗಗನಸಖಿಯರು ಸಂಸ್ಥೆಯ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಪಾಸಣೆಯ ವೇಳೆ ಮಹಿಳಾ ಸಿಬ್ಬಂದಿಯೊಬ್ಬರು ಉದ್ದೇಶ ಪೂರ್ವಕವಾಗಿ ತಮ್ಮ ಅಂಗಾಂಗಳನ್ನು ಮುಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಗಗನಸಖಿಯರ ಮೇಲೆ ವಿಮಾನದಲ್ಲಿ ಕಳ್ಳಸಾಗಾಣೆ ಹಾಗೂ ವಿಮಾನದಲ್ಲಿ ಮಾರಾಟ ಮಾಡಿದ ಹಣ ಕದ್ದ ವಿಚಾರವಾಗಿ ತಪಾಸಣೆ ಮಾಡಲಾಗಿದ್ದು, ಕಳೆದ ಮೂರು ದಿನಗಳಿಂದ ತಮ್ಮನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿದ್ದಾರೆ ಎಂದು ಗಗನಸಖಿಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಆರೋಪ ನಿರಾಕರಿಸಿದ ಸ್ಪೈಸ್ ಜೆಟ್: ಗಗನಸಖಿಯರ ಆರೋಪವನ್ನು ನಿರಾಕರಿಸಿರುವ ಸ್ಪೈಸ್ ಜೆಟ್ ಸಂಸ್ಥೆ, ಪ್ರಯಾಣಿಕರಿಗೆ ಯಾವ ರೀತಿಯ ತಪಾಸಣೆ ಮಾಡುವ ಸುರಕ್ಷತೆಯ ರೀತಿಯಲ್ಲೇ ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿದೆ. ನಮಗೆ ಪ್ರಯಾಣಿಕರ ಹಾಗೂ ಸಿಬ್ಬಂದಿಯ ರಕ್ಷಣೆ ಮುಖ್ಯ ಎಂದು ಪ್ರತಿಕ್ರಿಯಿಸಿದೆ.

  • ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗೆ ಅವಮಾನ- ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೂರು ದಾಖಲು

    ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗೆ ಅವಮಾನ- ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೂರು ದಾಖಲು

    ಮಂಗಳೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಅನುಕರಿಸಿ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿ ಹಿಂದೂಗಳ ಭಾವನೆ ದಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಂಬವರು ಶಾಸಕ ಬಾವಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯಾದ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಭಕ್ತಿಗೀತೆಯನ್ನೇ ಅನುಕರಿಸುವ ಮೊಯ್ದೀನ್ ಬಾವಾ ಅವರ ಹೆಸರಿನ ಮೇಲೆ ರಚಿಸಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕ ಬಾವಾ ಅವರ ಮೇಲೆ ರಚಿತವಾದ ಈ ಹಾಡಲ್ಲಿ ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಅವರನ್ನು ಹೊಗಳಿ ರಚನೆ ಮಾಡಿರುವುದರಿಂದ ಹಿಂದೂಗಳ ಭಾವನೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಹಾಡು ರಚಿಸಲಾಗಿದ್ದು ಹಿಂದುಗಳ ಆಕ್ರೋಶ ಕಟ್ಟಿಕೊಳ್ಳುವಂತಾಗಿತ್ತು.

  • ಶಾಸಕ ಮೊಯ್ದೀನ್ ಬಾವಾ ರಿಂದ ಅಯ್ಯಪ್ಪಸ್ವಾಮಿ ಭಕ್ತಿಗೀತೆಗೆ ಅವಮಾನ- ವೈರಲ್ ಸಾಂಗ್

    ಶಾಸಕ ಮೊಯ್ದೀನ್ ಬಾವಾ ರಿಂದ ಅಯ್ಯಪ್ಪಸ್ವಾಮಿ ಭಕ್ತಿಗೀತೆಗೆ ಅವಮಾನ- ವೈರಲ್ ಸಾಂಗ್

    ಮಂಗಳೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯಾದ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಭಕ್ತಿಗೀತೆಯನ್ನೇ ಅನುಕರಿಸುವ ಮೊಯ್ದೀನ್ ಬಾವಾ ಅವರ ಹೆಸರಿನ ಮೇಲೆ ರಚಿಸಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಬಾವಾ ಅವರನ್ನು ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಹೊಗಳಿ ರಚನೆ ಮಾಡಿರುವುದರಿಂದ ಹಿಂದುಗಳ ಭಾವನೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕಾರಣಿಗಳು ಜನರನ್ನು ಆಕರ್ಷಿಸಲು ಹಲವು ಕಸರತ್ತುಗಳನ್ನು ಆರಂಭಿಸಿದ್ದಾರೆ. ಇದರಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಅವರನ್ನು ಹೊಗಳಿ ಹಾಡು ರಚನೆ ಮಾಡಲಾಗಿದೆ. ಸದ್ಯ ಈ ಹಾಡು ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಬಳಕೆ ಮಾಡಿರುವುದಿಂದ ರಾಜಕಾರಣಿಯನ್ನು ಹೊಗಳಲು ಬಳಸಿಕೊಂಡಿದ್ದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಹಾಡು ರಚಿಸಲಾಗಿದ್ದು ಹಿಂದುಗಳ ಆಕ್ರೋಶ ಕಟ್ಟಿಕೊಳ್ಳುವಂತಾಗಿದೆ. ಈ ಮೂಲಕ ಹಿಂದುಗಳ ಭಾವನೆ ಮತ್ತು ಹಿಂದು ದೇವರನ್ನು ಅವಮಾನಿಸಿದ್ದಾಗಿ ಶಾಸಕ ಮೊಯ್ದೀನ್ ಬಾವಾ ವಿರುದ್ಧ ಆರೋಪ ಕೇಳಿಬಂದಿದೆ.

    https://www.facebook.com/215441825696283/videos/236818483558617/

  • ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ

    ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ

    ನವದೆಹಲಿ: ಟೀಂ ಇಂಡಿಯಾ ವೇಗಿ ಮಹಮದ್ ಶಮಿ ತಮ್ಮ ವಿರುದ್ಧ ಪತ್ನಿ ಮಾಡಿರುವ ಕೌಟುಂಬಿಕ ಹಿಂಸೆ ಮತ್ತು ಅಕ್ರಮ ಸಂಬಂಧದ ಆರೋಪವನ್ನು ನಿರಾಕರಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತನ್ನ ಗೌರವಕ್ಕೆ ಧಕ್ಕೆ ತರಲು ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

    ಮಹಮದ್ ಶಮಿ ಅವರ ಪತ್ನಿ ಹಾಸಿನ್ ಜೋಹನ್ ಅವರು ಪತಿ ಹಾಗೂ ಆತನ ಕುಟುಂಬ ಸದಸ್ಯರು ತಮಗೆ ಕಿರುಕುಳ ನೀಡುತ್ತಿದ್ದಾರೆ. ಪತಿ ಶಮಿ ಅವರು ಸಹ ಆಫ್ರಿಕಾ ಸರಣಿಯಿಂದ ಹಿಂದುರುಗಿದ ನಂತರ ತಮಗೆ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

    https://www.facebook.com/CircleofCricket.MDShami/posts/1696050590488023

    ಮಹಮದ್ ಶಮಿ ಹಾಗೂ ಅವರ ಕುಟುಂಬದ ವಿರುದ್ಧ ಈ ಕುರಿತು ದೂರು ದಾಖಲಿಸಲಾಗುವುದು ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಮಾಧ್ಯಮ ವರದಿಯ ಪ್ರಕಾರ ಹಾಸಿನ್ ಅವರಿಗೆ ಪತಿ ಶಮಿ ಅವರ ಕುಟುಂಬ ಸದಸ್ಯರು ಕೆಲ ದಿನಗಳಿಂದ ಕಿರುಕುಳ ನೀಡುತ್ತಿದ್ದು, ಕೆಲವು ವೇಳೆ ಮುಂಜಾನೆ 2 ಗಂಟೆವರೆಗೂ ಇದು ಮುಂದುವರೆಯುತ್ತಿತ್ತು. ಅಲ್ಲದೆ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.

     ಕುಟುಂಬದ ಭವಿಷ್ಯದ ದೃಷ್ಟಿಯಿಂದ ಇದನ್ನು ತಡೆದುಕೊಂಡಿದ್ದೆ, ಆದರೆ ಶಮಿ ಕಿರುಕುಳದಿಂದ ಬೇಸತ್ತು ಅವರ ವಿರುದ್ಧ ದೂರು ನೀಡುವುದಾಗಿ ಪತ್ನಿ ತಿಳಿಸಿದ್ದಾರೆ.

  • ಅತ್ಯಾಚಾರ ಆರೋಪ ಇರೋ ಮಠಾಧೀಶರನ್ನು ಕೈಬಿಟ್ಟ ಸನಾತನ ಧರ್ಮ ಸಂವರ್ಧಿನೀ ಸಭಾ

    ಅತ್ಯಾಚಾರ ಆರೋಪ ಇರೋ ಮಠಾಧೀಶರನ್ನು ಕೈಬಿಟ್ಟ ಸನಾತನ ಧರ್ಮ ಸಂವರ್ಧಿನೀ ಸಭಾ

    ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆಯಲ್ಲಿ ಅತ್ಯಾಚಾರ ಆರೋಪ ಹೊತ್ತ ಸ್ವಾಮೀಜಿಗಳನ್ನು ಸಭಾದಿಂದ ಕೈಬಿಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಶ್ರೀ ಮಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸನಾತನ ಧರ್ಮ ಸಂವರ್ಧನೆಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

    ಸಭೆಯಲ್ಲಿ ಶೃಂಗೇರಿಯ ಶಾರದಾಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ, ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಯಡತೊರೆ ಕೃಷ್ಣರಾಜನಗರದ ಮಠದ ಶಂಕರಭಾರತೀ ಸ್ವಾಮೀಜಿ, ಹರಿಪುರ ಮಠದಿಂದ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ. ಶಿವಗಂಗಾ ಮಠದಿಂದ ಪರುಷೋತ್ತಮಭಾರತೀ ಸ್ವಾಮೀಜಿ, ಎಡನೀರು ಮಠದಿಂದ ಕೇಶವಾನಂದ ಭಾರತೀ ಸ್ವಾಮಿಗಳು ಭಾಗವಹಿಸಿದ್ದರು.

    ಸಭೆಯಲ್ಲಿ ಕೈಗೊಂಡ ನಿರ್ಣಯಗಳು:
    ಸನಾತನ ಧರ್ಮದ ಉದ್ಧಾರಕ್ಕಾಗಿ ಶ್ರೀ ಶಂಕರಭಗವತ್ಪಾದಕರು ನಮ್ಮ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಿಂದ ಸಂಚರಿಸಿ ಧರ್ಮಜಾಗೃತಿಯ ಜೊತೆ ರಾಷ್ಟ್ರದಲ್ಲಿ ಏಕತೆಯನ್ನೂ ಸಾಧಿಸಿದರು. ಈ ರೀತಿ ಸಂಚಾರದ ಸಂದರ್ಭದಲ್ಲಿ ಶ್ರೀ ಶಂಕರರು ಸಂಚರಿಸಿದ ಶ್ರೀಶೈಲ ಮುಂತಾದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸನಾತನ ಧರ್ಮ ಸಂವರ್ಧನೆಗಾಗಿ ವಿಶೇಷ ಸ್ಮಾರಕಗಳನ್ನು ನಿರ್ಮಿಸಲು ತೀರ್ಮಾನ.

    ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರ ಶ್ರೀ ಶಂಕರರ ಸಾರಿದ ಏಕಾತ್ಮಕತೆಯನ್ನು ಸಮಾಜಕ್ಕೆ ತಿಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡಂತೆ ನಮ್ಮ ದೇಶದ ಉಳಿದ ರಾಜ್ಯಗಳಲ್ಲೂ ಹಮ್ಮಿಕೊಳ್ಳುವುದು ದೇಶದ ದೃಷ್ಟಿಯಿಂದ ಅತ್ಯಂತ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತವಾಯಿತು.

    ಮನುಷ್ಯನ ಶ್ರೇಯಸ್ಸಿಗೆ ವೇದೋಪನಿಷತ್ತುಗಳೇ ಪ್ರಮಾಣ ಎಂದು ಭಗವಂತ ಗೀತೆಯಲ್ಲಿ ಉಪದೇಶಿಸಿದ್ದಾನೆ. ಇಂತಹ ಉಪದೇಶಗಳನ್ನು ತಿಳಿಸಿ, ಸನಾತನ ಧರ್ಮ ಸಂವರ್ಧನೆಗಾಗಿ ಸನಾತನ ಧರ್ಮ ಸಂವರ್ಧಿನಿ ಸಭಾ ಪ್ರಯತ್ನಿಸುತ್ತಿದೆ. ಸಂನ್ಯಾಸಾಶ್ರಮ ಧರ್ಮಪಾಲನೆಗೆ ವೇದೋಪನಿಷತ್ತು ಮೊದಲಾದವುಗಳು ಪ್ರಮಾಣ ಹಾಗೂ ಮಠಾಧೀಶರಾಗಿರುವುವವರಿಗೆ ಶ್ರೀ ಶಂಕರರಿಂದ ವಿರಚಿತವಾದ ಮಠಾಮ್ನಾಯ ಪ್ರಮಾಣ. ಇದಕ್ಕೆ ವ್ಯತಿರಿಕ್ತವಾದ ಜೀವನ ನಡೆಸುವ ಹಾಗೂ ಅತ್ಯಾಚಾರ, ಅನೈತಿಕ ಸಂಬಂಧ ಮೊದಲಾದ ಗಂಭೀರ ಆರೋಪಗಳನ್ನು ಹೊತ್ತ ಮಠಾಧೀಶರನ್ನು ನಮ್ಮ ಸಂಸ್ಥೆಯಿಂದ ಕೈಬಿಡಲು ತೀರ್ಮಾನಿಸಲಾಯಿತು. ಆದರೆ ಆ ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.

    ವೈಶಾಖ ಶುಕ್ಲ ಪಂಚಮಿ ಶ್ರೀ ಶಂಕರಜಯಂತ್ಯುತ್ಸವ. ಈ ಉತ್ಸವದಲ್ಲಿ ಶ್ರೀ ಶಂಕರರ ಅಷ್ಟೋತ್ತರ ಪಾರಾಯಣದ ಜೊತೆ ಭಾಷ್ಯ-ಪ್ರಕರಣಗ್ರಂಥ-ಸ್ತೋತ್ರ ಹಾಗೂ ಶಂಕರ ದಿಗ್ವಿಜಯಗಳ ಪಾರಾಯಣವನ್ನು ಐದು ದಿನಗಳ ಕಾಲ ಎಲ್ಲ ಆಸ್ತಿಕರು ಮಾಡುವಂತೆ ತಮ್ಮ ತಮ್ಮ ಮಠಗಳ ಶಿಷ್ಯರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಯಿತು.

  • ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ಮೌಲ್ವಿಗಳಿಂದ ಹಿಂದೂ ಯುವಕ ಮುಸ್ಲಿಂ ಧರ್ಮಕ್ಕೆ ಮತಾಂತರ!

    ವಿಜಯಪುರ: ಇತ್ತೀಚೆಗೆ ಮತಾಂತರ ಮಾಡಿಸಿಕೊಂಡು ಜಿಹಾದ್ ಕೆಲಸಗಳನ್ನು ಮಾಡಿಸುತ್ತಿರುವ ಆರೋಪಗಳು ಒಂದಲ್ಲ ಒಂದುಕಡೆ ಕೇಳಿ ಬರುತ್ತಲೇ ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ವಿಜಯಪುರದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ನಿವಾಸಿ ಲಕ್ಷ್ಮಿಕಾಂತನನ್ನು ಮುಸ್ಲಿಂ ಮೌಲ್ವಿಗಳು ಮತಾಂತರ ಮಾಡಿದ್ದಾರೆ ಎಂದು ಆತನ ತಂದೆ ಲಕ್ಕಪ್ಪ ಸಿಂಧೆ ಆರೋಪಿಸಿದ್ದಾರೆ. ಮೊದಲಿನಿಂದಲೂ ಲಕ್ಷ್ಮಿಕಾಂತ ಮುಸ್ಲಿಂ ಹುಡುಗರೊಂದಿಗೆ ಓಡಾಡುತ್ತಿದ್ದ. ಆದರೆ ಇದೀಗ ಕಳೆದ ಒಂದು ವಾರದ ಹಿಂದೆ ಆತನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲಾಗಿದೆ ಎಂದು ಲಕ್ಕಪ್ಪ ಸಿಂಧೆ ಆತಂಕ ವ್ಯಕ್ತಪಡಿಸಿದ್ದಾರೆ.

    ಆರು ದಿನಗಳಿಂದ ಮಗ ಮನೆಗೆ ಬಂದಿಲ್ಲ, ಆತನಿಗೆ ಮುಸ್ಲಿಂ ಧರ್ಮದ ಬಗ್ಗೆ ಹೇಳಿ, ವಶೀಕರಣ ಮಾಡಿಕೊಂಡಿದ್ದಾರೆ. ಆತನಿಗೆ ತಮ್ಮ ಧರ್ಮದ ಬಗ್ಗೆ ತಲೆಯಲ್ಲಿ ತುಂಬಿ ಆತನ ತಲೆ ಕೆಡಿಸಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಂಡಿದ್ದಾರೆ ಎಂದು ಲಕ್ಕಪ್ಪ ಕುಟುಂಬ ಆರೋಪಿಸಿದೆ.

    ಇದರಲ್ಲಿ ಮುಖ್ಯವಾಗಿ ಇಂಡಿ ಪಟ್ಟಣದ ಮೌಲ್ವಿ ಸಾಜೀರ್ ಮುಲ್ಲಾ ಅವರದ್ದೆ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ತಮ್ಮ ಮಗನನ್ನು ಮತಾಂತರ ಮಾಡಿಕೊಂಡಿದ್ದಲ್ಲದೆ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಎಸ್.ಪಿ ಅವರಿಗೆ ಲಕ್ಕಪ್ಪ ಸಿಂಧೆ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ.

  • ಪ್ರಣಯದಾಟ ಔಟ್ -ನೀಲಿ ಚಿತ್ರಗಳ ನಟಿಗೆ ಭಾರೀ ಹಣ ಕೊಟ್ಟ ಟ್ರಂಪ್!

    ಪ್ರಣಯದಾಟ ಔಟ್ -ನೀಲಿ ಚಿತ್ರಗಳ ನಟಿಗೆ ಭಾರೀ ಹಣ ಕೊಟ್ಟ ಟ್ರಂಪ್!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಕ್ರಮ ಸಂಬಂಧದ ಕುರಿತ ಆರೋಪ ಕೇಳಿ ಬಂದಿದ್ದು, 2006ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಟ್ರಂಪ್ ತನ್ನ ವಕೀಲನ ಮೂಲಕ ನೀಲಿ ಚಿತ್ರಗಳಲ್ಲಿ ನಟಿಸುವ ನಟಿಗೆ ಹಣವನ್ನು ಸಂದಾಯ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಅಮೆರಿಕದ ನೀಲಿ ಚಿತ್ರಗಳ ಸ್ಟಾರ್ ನಟಿಯಾಗಿರುವ ಸ್ಟಿಫಾನಿ ಕ್ಲಿಫೋರ್ಡ್‍ಗೆ, ಟ್ರಂಪ್ ಪರ ವಕೀಲ ಮೈಕೆಲ್ ಕೋಹೆನ್, ಸುಮಾರು 1.30 ಲಕ್ಷ ಡಾಲರ್(ಅಂದಾಜು 82 ಲಕ್ಷ ರೂ.) ಹಣ ನೀಡಿದ್ದರು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ತನ್ನ ಹಾಗೂ ನಟಿ ನಡುವಿನ ಸಂಬಂಧ ಸಾರ್ವಜನಿಕವಾಗಿ ಬಯಲಾಗದೇ ಇರಲು ಟ್ರಂಪ್ ತನ್ನ ವಕೀಲನ ಮೂಲಕ ಭಾರೀ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ

    2006 ರಲ್ಲಿ ಅಧ್ಯಕ್ಷ ಟ್ರಂಪ್ ಅವರು ತಮ್ಮ ಮೂರನೇ ಪತ್ನಿ ಮೆಲನಿಯಾರನ್ನು ವಿವಾಹವಾಗಿದ್ದು, ವಿವಾಹಕ್ಕೂ ಕೆಲ ದಿನಗಳ ಹಿಂದಷ್ಟೇ ಈ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ. ಅಲ್ಲದೇ ಟ್ರಂಪ್ ಪರ ವಕೀಲ ಈ ಹಣವನ್ನು ಲಾಸ್ ಏಂಜಲೀಸ್‍ನ ಸಿಟಿ ನ್ಯಾಷನಲ್ ಬ್ಯಾಂಕ್ ಮೂಲಕ ತಲುಪಿಸಿದ್ದಾರೆ ಎಂದು ತಿಳಿಸಿದೆ. ಆದರೆ ಈ ಕುರಿತ ಬ್ಯಾಂಕ್ ದಾಖಲೆಗಳ ಕುರಿತು ಪತ್ರಿಕೆ ಮಾಹಿತಿ ನೀಡಿಲ್ಲ.

    ಆರೋಪ ನಿರಾಕರಣೆ: ಈ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ಮೈಕೆಲ್ ಕೋಹೆನ್, 2011ರಲ್ಲೂ ಟ್ರಂಪ್ ಅವರ ಮೇಲೆ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಆ ವೇಳೆಯೂ ಟ್ರಂಪ್ ಅವರು ಇಂತಹ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೆ ಆರೋಪದಲ್ಲಿ ಹೇಳಲಾಗಿರುವ ನೀಲಿ ಚಿತ್ರಗಳ ಪೋರ್ನ್ ಸ್ಟಾರ್ ಅವರ ಹೆಸರು ಸ್ಟಿಫಾನಿ ಕ್ಲಿಪೋರ್ಡ್ ಅಲ್ಲ, ಸ್ಟಾರ್ಮಿ ಡೇನಿಯಲ್ಸ್ ಎಂದು ಹೇಳಿದ್ದಾರೆ.

    2016 ರಲ್ಲಿ ಟ್ರಂಪ್ ಅವರೊಂದಿಗೆ ತನಗಿರುವ ಸಂಬಂಧದ ಕುರಿತು ಮಾಹಿತಿ ಬಹಿರಂಗ ಪಡಿಸಲು ಅಮೆರಿಕದ ಪತ್ರಿಕೆಯೊಂದಿಗೆ ಮಾತುಕತೆ ನಡೆಸಿದ್ದರು, ಆದರೆ ಈ ವೇಳೆ ಸುದ್ದಿ ಪ್ರಸಾರವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

     

    ಸ್ಟಾರ್ ನಟಿ ಹೇಳಿದ್ದೇನು: ಟ್ರಂಪ್ ಅವರ ಜೊತೆಗಿನ ಆಕ್ರಮ ಸಂಬಂಧದ ವರದಿಯ ಕುರಿತು ನಟಿ ಹೇಳಿಕೆಯನ್ನು ಇದೇ ವೇಳೆ ನೀಡಲಾಗಿದ್ದು, ಟ್ರಂಪ್ ಅವರಿಂದ ಹಣ ಪಡೆಯಲಾಗಿದೆ ಎಂಬ ಆರೋಪ ಸುಳ್ಳು, ಒಂದು ವೇಳೆ ಟ್ರಂಪ್ ಅವರ ಜೊತೆ ಸಂಬಂಧ ಹೊಂದಿದ್ದರೆ, ಇದನ್ನು ಇಂತಹ ವರದಿಗಳಲ್ಲಿ ಓದುವ ಅಗತ್ಯವಿರಲಿಲ್ಲ. ನನ್ನ ಪುಸ್ತಕದಲ್ಲೇ ಈ ಕುರಿತು ನಿಮಗೇ ಮಾಹಿತಿ ನೀಡುತ್ತಿದೆ ಎಂದು ನಟಿ ಸಹಿ ಮಾಡಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

    ಟ್ರಂಪ್ ಪರ ವಕೀಲ ಕೋಹಿನ್ `ಫಿಕ್ಸ್ ಇಟ್ ಮ್ಯಾನ್’ ಎಂಬ ಅಪಖ್ಯಾತಿಗೆ ಒಳಗಾಗಿದ್ದು ಅವರ ಮೇಲೆ ಆರೋಪಗಳು ಬರುವುದು ಹೊಸದೆನಲ್ಲ. ಈ ಹಿಂದೆ 2016ರ ಅಧ್ಯಕ್ಷಕೀಯ ಚುನಾವಣೆಯಲ್ಲಿ ರಷ್ಯಾ ಜೊತೆಗೆ ಮಾತುಕತೆ ನಡೆಸಿದ ಆರೋಪವು ಅವರ ಮೇಲೆ ಕೇಳಿ ಬಂದಿತ್ತು.

    ಸ್ಟಿಫಾನಿ ಕ್ಲಿಪೋರ್ಡ್ ತಾಯಿ ಹೇಳಿದ್ದೇನು?: ಟ್ರಂಪ್ ಪರ ವಕೀಲ ನಟಿ ಕ್ಲಿಪೋರ್ಡ್ ಅವರಿಗೆ ಹಣ ನೀಡಿದ್ದಾರೆ ಎನ್ನುವ ಆರೋಪದ ಕುರಿತು ನಟಿ ತಾಯಿ ಶೀಲಾ ವೀಮರ್ ಪ್ರತಿಕ್ರಿಯೇ ನೀಡಿದ್ದು, ತಾನು ತನ್ನ ಮಗಳೊಂದಿಗೆ 12 ವರ್ಷಗಳಿಂದ ಸಂಪರ್ಕದಲ್ಲಿ ಇಲ್ಲ. ಹಣ ನೀಡಿರುವ ಕುರಿತು ಮಾಹಿತಿಯೂ ಇಲ್ಲ. ಅಲ್ಲದೇ ತಮ್ಮ ಮಗಳು ವಯಸ್ಕ ಚಿತ್ರಗಳಲ್ಲಿ ನಟಿಸುತ್ತಿರುವ ಕುರಿತು ಮಾಹಿತಿ ಇಲ್ಲ, ಆದರೆ ವಯಕ್ತಿಕವಾಗಿ ನಾನು ಟ್ರಂಪ್ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಅವರು ದೇಶದಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

  • ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಸ್ಯಾಂಡಲ್‍ವುಡ್‍  ಹಾಸ್ಯನಟನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಾಸ್ಯನಟ ತರಂಗ ವಿಶ್ವ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ದೂರು ನೀಡಿದ್ದಾರೆ.

    ಹಾಸ್ಯನಟ ತರಂಗ ವಿಶ್ವ ಹಾಗೂ ಮಹಿಳೆ ಉತ್ತರಹಳ್ಳಿಯ ಪ್ಯಾಷನ್ ಹೌಸ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಿದ್ದರು. ಮಹಿಳೆ ತನ್ನ ಮಗಳ ಜೊತೆ ಒಂಟಿಯಾಗಿ ವಾಸವಿದ್ದರು. ಈ ವೇಳೆ ವಿಶ್ವ ಹಾಗೂ ಪುಟ್ಟಸ್ವಾಮಿ ಎಂಬವರು ಮಹಿಳೆಯನ್ನ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ನಾಲ್ವರ ವಿರುದ್ಧ ಎಫ್‍ಐಅರ್ ದಾಖಲಿಸಿದ್ದಾರೆ.

    ಮೊದಲು ಹಾಸ್ಯನಟನ ವಿರುದ್ಧ ದೂರು ದಾಖಲಿಸಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಮೀನಾಮೇಷ ಎಣಿಸಿದ್ದಾರೆ. ಬಳಿಕ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮೀಷನರ್ ಸೂಚನೆ ಮೇರೆಗೆ ಸಿಕೆ ಅಚ್ಚುಕಟ್ಟು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಡ್ಯಾನ್ಸ್ ಟೀಚರ್ ಅರೆಸ್ಟ್

    ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ – ಡ್ಯಾನ್ಸ್ ಟೀಚರ್ ಅರೆಸ್ಟ್

    ಮುಂಬೈ: ಡ್ಯಾನ್ಸ್ ಶಿಕ್ಷಕನೊಬ್ಬ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇರೆಗೆ ಆತನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತ ಬಾಲಕಿಯ ಪೋಷಕರು, ಡ್ಯಾನ್ಸ್ ಟೀಚರ್ ಅಝಾದ್ ನಮ್ಮ 15 ವರ್ಷದ ಮಗಳನ್ನು ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ಡಿಸೆಂಬರ್ 23 ರಂದು ಮುಂಬೈಗೆ ಕರೆದುಕೊಂಡು ಹೋಗಿದ್ದ ಎಂದು ಆತನ ವಿರುದ್ಧ ದೂರು ನೀಡಿದ್ದಾರೆ. ಬಾಲಕಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಆಕೆಯ ಪೋಷಕರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಅಝಾದ್ ವಿರುದ್ಧ ಅಪಹರಣದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕಿಯ ಕುಟುಂಬದವರು ಆರೋಪಿ ಅಝಾದ್ ವಿರುದ್ಧ ಅತ್ಯಾಚಾರದ ಆರೋಪ ಮಾಡುತ್ತಿದ್ದಾರೆ. ಆದರೆ ಪೊಲೀಸರು ಇನ್ನೂ ಇದನ್ನು ಖಚಿತಪಡಿಸಿಲ್ಲ. ಡಿಸೆಂಬರ್ 23 ರಿಂದಲೂ ಬಾಲಕಿ ದೆಹಲಿಯಲ್ಲಿದ್ದಳು ಎಂದು ವರದಿಯಾಗಿದೆ.

    ಶನಿವಾರ ದೆಹಲಿಯಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದು, ಅಝಾದ್‍ನನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್ ಆಫೀಸರ್ ಓಂಕಾರ್ ಸಿಂಗ್ ತಿಳಿಸಿದರು.

    ಈ ಪ್ರಕರಣವನ್ನು ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸುತ್ತಿವೆ. ಇದೊಂದು ಲವ್ ಜಿಹಾದ್ ಪ್ರಕರಣ. ಆದ್ದರಿಂದ ಪೊಲೀಸರು ಮತ್ತು ಜಿಲ್ಲಾ ಆಡಳಿತ ಈ ಪ್ರಕರಣದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಕಪೀಲ್ ದೇವಾನಾ ಹೇಳಿದ್ದಾರೆ.