Tag: ಆರೋಪ

  • ಬಿಜೆಪಿ ಸೋಲಿಗೆ ನಮ್ಮ ತಪ್ಪುಗಳು, ಲೋಪದೋಷಗಳೇ ಕಾರಣ: ಬಿಎಸ್‍ವೈ

    ಬಿಜೆಪಿ ಸೋಲಿಗೆ ನಮ್ಮ ತಪ್ಪುಗಳು, ಲೋಪದೋಷಗಳೇ ಕಾರಣ: ಬಿಎಸ್‍ವೈ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದರೂ ನಮ್ಮದೇ ತಪ್ಪುಗಳಿಂದ ಹಾಗೂ ಲೋಪದೋಷಗಳಿಂದ ನಾವು ಸೋಲಬೇಕಾಯಿತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

    ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ್ ದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆಯೋಜಿಸಲಾಗಿದೆ. ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ನಾಯಕರು, ಶಾಸಕರು, ಸಂಸದರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಸೋತರು. ಆದರೆ ಬಾದಾಮಿಯಲ್ಲಿ ಕೇವಲ 1,600 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಾದಾಮಿಯಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅಕಾಶಗಳಿದ್ದವು. ಈ ನಿಟ್ಟಿನಲ್ಲಿ ಶ್ರೀರಾಮುಲು ಅವರು ಒಂದು ದಿನ ಹೆಚ್ಚು ಪ್ರಚಾರ ಮಾಡಿದ್ದರೆ ಅಲ್ಲಿಯೂ ಬಿಜೆಪಿ ಜಯಗಳಿಸುತಿತ್ತು ಎಂದರು.

     

    ಹಿಂದಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಬಿಲ್ ಗಳನ್ನು ಪಾವತಿ ಮಾಡಬಾರದು ಎಂದು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮೌಖಿಕ ಆದೇಶ ನೀಡಿದ್ದಾರಂತೆ. ಅಲ್ಲದೇ ಹಿಂದಿನ ಸಚಿವರಿಗೆ ಕಮಿಷನ್ ಕೊಟ್ಟಿದ್ದರು ಕೂಡಾ ಈಗ ನಮ್ಮ ಪಾಲು ಕೊಡಿ ಎಂದು ಅವರು ಕೇಳಿರುವ ಬಗ್ಗೆ ರಾಜ್ಯದಾದ್ಯಂತ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

    ಕಳೆದ ಸರ್ಕಾರದ 17 ಸಚಿವರು ಸೋತಿದ್ದಾರೆ. ಆದರೆ ರಾಜ್ಯದ ಯಾವುದೇ ಮೂಲೆಗೆ ಹೋದರೂ ಬಿಜೆಪಿಗೆ ಹಿನ್ನಡೆ ಹೇಗಾಯಿತು ಎನ್ನುವುದೇ ಚರ್ಚೆಯಾಗುತ್ತಿದೆ. ಈಗಲೂ ಬಿಜೆಪಿ ಅಧಿಕಾರಕ್ಕೆ ಬರಲೆಂದು ಜನ ಬಯಸುತ್ತಾರೆ. ಜೆಡಿಎಸ್ 14 ಜಿಲ್ಲೆಯ ಒಂದೇ ಒಂದು ಮತಕ್ಷೇತ್ರದಿಂದ ಜಯಗಳಿಸಿಲ್ಲ. ಆದರೂ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ವ್ಯಂಗ್ಯವಾಡಿದರು.

    ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಹಲವು ಮುಖಂಡರು ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಅವರ ಮನೆಗಳಿಗೆ ಹೋಗಿ ಚರ್ಚಿಸಿ ಪಕ್ಷಕ್ಕೆ ಕರೆ ತರುವ ಕೆಲಸ ಮಾಡಬೇಕಾಗಿದೆ. ಬೇರೆ ಪಕ್ಷಗಳ ಮುಖಂಡರು ಬಂದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಯೋಚಿಸುವುದನ್ನು ಬಿಡಿ. ಪಕ್ಷಕ್ಕೆ ಆಗಮಿಸುವ ಮುಖಂಡರಿಂದ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆ ಮಾಡಬೇಕು ಎಂದು ಕರೆ ನೀಡಿದರು.

     

    ಇದು ಅಪವಿತ್ರ ಮೈತ್ರಿ ಸರ್ಕಾರವಾಗಿದ್ದು, ಹೆಚ್ಚು ದಿನ ಆಡಳಿತ ಮಾಡುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಅವರನ್ನು ಒಂಟಿಗಾಲಿನಲ್ಲಿ ನಿಲ್ಲಿಸುತ್ತಾರೆ. ಆದರೆ ಪಕ್ಷದಲ್ಲಿ ನೀವು ಯಾರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿಲ್ಲ. ಅಲ್ಲದೇ ದಿವಾಳಿ ಸರ್ಕಾರದ ಕುರಿತು ಜನ ಜಾಗೃತಿ ಮೂಡಿಸಿಲ್ಲ. ಹೀಗಾಗಿ ನಾನೇ ಈ ಸಭೆಯನ್ನು ಆಯೋಜಿಸಬೇಕಾದ ಪರಿಸ್ಥಿತಿ ಬಂತು ಎಂದು ಹೇಳಿದರು.

     

    ಸಮ್ಮಿಶ್ರ ಸರ್ಕಾರದಲ್ಲಿ ಬಜೆಟ್ ಮಂಡಿಸುವ ವಿಚಾರದಿಂದ ಕಚ್ಚಾಟ ಜೋರಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಜೆಟ್ ಗೆ ಪಾವಿತ್ರ್ಯತೆ ಇಲ್ಲ. ಸರ್ಕಾರ ರಚನೆಯಾಗಿ 22 ದಿನಗಳು ಕಳೆದಿದ್ದರೂ ಆಡಳಿತ ಸ್ಥಗಿತಗೊಂಡಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ 10 ಸಾವಿರ ಕೋಟಿ ರೂ. ಅನುದಾನ ಬಳಕೆಯಾಗದೆ ಹಾಗೇ ಬಾಕಿ ಉಳಿದಿದೆ. ನಮ್ಮ ದೇಶದ ಸಂವಿಧಾನದ ಪ್ರಕಾರ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಕರೆದು ಅವಕಾಶ ಕೊಟ್ಟಿದ್ದರು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನವರು ದೇಶದ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದರು. ಇದರಿಂದಾಗಿ ನಮಗೆ ದೊರೆತ 24 ಗಂಟೆಯ ಒಳಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ ಎಂದರು.

    ನಮ್ಮ ಮೊದಲ ಸಂಪುಟ ಸಭೆಯಲ್ಲಿಯೇ ರೈತರ ಸಾಲಮನ್ನಾ ಮಾಡಲು ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಲಾಗಿತ್ತು. ಅಲ್ಲದೇ ನೋಟ್ ಸಿದ್ಧ ಪಡಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ರೈತರ ಸಾಲಮನ್ನಾ, ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲು ಆಗಲಿಲ್ಲ ಎಂದು ಬಿಎಸ್‍ವೈ ಹೇಳಿದರು.

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಕ್ರಮಕ್ಕೆ ಮುಂದಾಗಿದ್ದವು. ಮುಖ್ಯಮಂತ್ರಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದರು. ಪ್ರಣಾಳಿಕೆಯ ಅಂಶಗಳನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ ಎಂದು ದೂರಿದರು.

    ಕಾರ್ಯಕಾರಿಣಿಯಲ್ಲಿ ಬಿಜೆಪಿಯ ಮುರಳೀಧರ್ ರಾವ್, ಅನಂತಕುಮಾರ್, ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಶ್ರೀರಾಮುಲು ಸೇರಿದಂತೆ 800ಕ್ಕೂ ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಿದ್ದರು. ಆದರೆ ಅನಾರೋಗ್ಯದಿಂದಾಗಿ ಡಿವಿ ಸದಾನಂದಗೌಡ ಹಾಗೂ ಕೆ.ಎಸ್.ಈಶ್ವರಪ್ಪ ಗೈರಾಗಿದ್ದಾರೆ.

  • ಸಿದ್ದು ಹೇಳಿಕೆಯನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ಮೇಲೆ ಸಿಎಂ, ಡಿಸಿಎಂ, ಸಚಿವ ಗರಂ

    ಸಿದ್ದು ಹೇಳಿಕೆಯನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ಮೇಲೆ ಸಿಎಂ, ಡಿಸಿಎಂ, ಸಚಿವ ಗರಂ

    ಚಿಕ್ಕಬಳ್ಳಾಪುರ: ಯಾವುದೇ ಸರ್ಕಾರ ಇದ್ದರೂ ಟೀಕಿಸುವ ಮೂಲಕ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳ ಮಾಡುತ್ತವೆ. ಆದರೆ ಇಂದು ಸಮ್ಮಿಶ್ರ ಸರ್ಕಾರವೇ ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದೆ.

    ಚಿಕ್ಕಬಳ್ಳಾಪುರದಲ್ಲಿ ಸಚಿವ ಶಿವಶಂಕರ್ ರೆಡ್ಡಿ, ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೊಪ್ಪಳದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾಧ್ಯಗಳ ವಿರುದ್ಧವೇ ವಾಗ್ದಾಳಿ ನಡೆಸಿ, ಮಾಧ್ಯಗಳು ತಪ್ಪು ಮಾಡುತ್ತಿವೆ ಎನ್ನುವಂತೆ ಬಿಂಬಿಸಿದರು.

    ಶಾಂತಿವನದಲ್ಲಿ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿಕೆಯಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಮಾಧ್ಯಮಗಳು ಇದಕ್ಕೆ ಉಪ್ಪು-ಹುಳಿ ಹಾಕುವ ಕೆಲಸ ಮಾಡುತ್ತೀವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

     

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಬಜೆಟ್ ನಲ್ಲಿ ಕಾಂಗ್ರೆಸ್ಸಿನ ಕಾರ್ಯಕ್ರಮಗಳನ್ನು ತೆಗೆದು ಹಾಕುವುದಾಗಿ ಎಲ್ಲಿಯೂ ಕುಮಾರಸ್ವಾಮಿ ಅವರು ಹೇಳಿಲ್ಲ. ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಯೋಜನೆಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರ ಬಜೆಟ್ ಮೂಲಕ ಎರಡು ಪಕ್ಷಗಳ ಹಿತಾಸಕ್ತಿಯನ್ನು ರಕ್ಷಿಸಲಿದೆ. ಇನ್ನೂ ಈ ಬಾರಿಯ ಬಜೆಟ್ ನಲ್ಲಿ ಶೇ 100 ಕ್ಕೆ 100 ರಷ್ಟು ಸಿಹಿ ಸುದ್ದಿ ಸಿಗಲಿದ್ದು, ರೈತರ ಸಾಲಮನ್ನಾ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ಸರ್ಕಾರ ಮರೆತಿದೆ ಅಂತಾ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಆದರೆ ನಾವು ಎಲ್ಲ ಭಾಗಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಕೊಪ್ಪಳದ ಕಾರ್ಯಕ್ರಮದಲ್ಲಿ ಖರ್ಗೆ-ಸಿದ್ದರಾಮಯ್ಯ ಭೇಟಿ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಏನಾಗಿದೆ ಅಂತಾ ಡಿಸಿಎಂ ಜಿ.ಪರಮೇಶ್ವರ್ ಅವರು ಗರಂ ಆದರು.

  • ಅಸೆಂಬ್ಲಿಯಲ್ಲೇ ಕಣ್ಣೀರು ಸುರಿಸಿದ ಬಿಜೆಪಿ ಮಹಿಳಾ ಶಾಸಕಿ

    ಅಸೆಂಬ್ಲಿಯಲ್ಲೇ ಕಣ್ಣೀರು ಸುರಿಸಿದ ಬಿಜೆಪಿ ಮಹಿಳಾ ಶಾಸಕಿ

    ಭೋಪಾಲ್: ಮಧ್ಯಪ್ರದೇಶದ ವಿಧಾನಸೌದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕಿಯೊಬ್ಬರು ಕಣ್ಣೀರು ಹಾಕಿದ್ದು, ತಮ್ಮದೇ ಪಕ್ಷದ ಹಿರಿಯ ನಾಯಕರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶ ರೇವಾ ಜಿಲ್ಲೆಯ ಸಿಮರಿಯಾ ಕ್ಷೇತ್ರದ ಬಿಜೆಪಿ ಶಾಸಕಿ ನೀಲಂ ಮಿಶ್ರಾ ವಿಧಾನಸೌದಲ್ಲಿ ಕಣ್ಣೀರು ಹಾಕಿದ್ದು, ಪಕ್ಷದ ಹಿರಿಯ ಮುಖಂಡರೊಬ್ಬರು ತಮಗೇ ಹಾಗೂ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಸಚಿವರು ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಬಯಲಿಗೆ ತಂದಿದ್ದು, ಇದರಿಂದ ದ್ವೇಷಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಗಿ ಮಾಧ್ಯಮೊಂದು ವರದಿ ಮಾಡಿದೆ.

    ಸದನದ ಶೂನ್ಯ ವೇಳೆಯಲ್ಲಿ ಮಾತನಾಡಿ, ತಮಗೂ ಹಾಗೂ ಕುಟುಂಬಕ್ಕೂ ರಕ್ಷಣೆ ನೀಡುವಂತೆ ಮನವಿ ಮಾಡಿದ್ದ, ಮುಂಬರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

    ಹಿರಿಯ ನಾಯಕರ ನಿರ್ದೇಶನದ ಮೇರೆಗೆ ಸ್ಥಳೀಯ ಪೊಲೀಸರು ಸಹ ತಮ್ಮ ಮೇಲೆ ಇಲ್ಲದ ಆರೋಪ ಮಾಡಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಅದ್ದರಿಂದ ಅನಿವಾರ್ಯವಾಗಿ ಸದನದಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದ್ದಾರೆ. ಶಾಸಕಿಯ ಪ್ರಸ್ತಾಪವನ್ನು ಸ್ವೀಕರಿಸಿದ ಸ್ಪೀಕರ್ ಗೃಹ ಸಚಿವರಿಗೆ ಸೂಕ್ತ ರಕ್ಷಣೆ ನೀಡುವುವಂತೆ ಸೂಚನೆ ನೀಡಿದ್ದಾಗಿ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸದ್ಯ ಶಾಸಕಿ ನೀಲಂ ಮಿಶ್ರಾ ಅವರ ಆರೋಪವನ್ನು ಪಕ್ಷದ ಹಿರಿಯ ನಾಯಕ, ಸಚಿವರಾದ ಶುಕ್ಲಾ, ನನ್ನ ಮೇಲಿನ ಆರೋಪದಲ್ಲಿ ಯಾವುದೇ ಆಧಾರವಿಲ್ಲ. ಆದರೆ ಶಾಸಕಿ ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಸದನ ಬಳಿಕ ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದಾರೆ.

    ಶಾಸಕಿಯ ಹೇಳಿಕೆ ಬಳಿಕ ಸದನದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

  • ಕೆಎಚ್ ಮುನಿಯಪ್ಪ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಸಹೋದರರಿಂದ ಆತ್ಮಹತ್ಯೆಗೆ ಯತ್ನ

    ಕೆಎಚ್ ಮುನಿಯಪ್ಪ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಸಹೋದರರಿಂದ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ತಮ್ಮ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಗಳಿಬ್ಬರು ಕೋಲಾರ ಕಾಂಗ್ರೆಸ್ ಸಂಸದ ಕೆ ಹೆಚ್ ಮುನಿಯಪ್ಪ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಬೆಂಗಳೂರಿನ ಯಲಹಂಕದ ನಿವಾಸಿಗಳಾದ ರಾಜು ಮತ್ತು ಮುನಿರಾಜು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಸಂಜಯನಗರದಲ್ಲಿರುವ ಸಂಸದರ ಮನೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಯಲಹಂಕದ ವೆಂಕಟಾಳದಲ್ಲಿರುವ 20 ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ರಾಮಪ್ರಸಾದ್ ಎಂಬ ಮುನಿಯಪ್ಪ ಅವರ ಆಪ್ತ ಕಬಳಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.

    ಆರೋಪ ನಿರಕಾರಿಸಿದ ಸಂಸದ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವರಾದ ಮುನಿಯಪ್ಪ ಅವರು, ನನಗೂ ಈ ಜಮೀನಿಗೂ ಸಂಬಂಧವಿಲ್ಲ. ರಾಮಪ್ರಸಾದ್ ಎಂಬವರ ಹೆಸರಲ್ಲಿ ಜಮೀನಿದೆ. ಅವರು ನಮ್ಮ ಜಿಲ್ಲೆಯವರು ಮತ್ತು ನಮ್ಮ ಪಕ್ಷದ ಮುಖಂಡರಷ್ಟೆ. ನನ್ನ ಮನೆ ಮುಂದೆ ಗಲಾಟೆ ಮಾಡುವುದು ಸರಿಯಲ್ಲ. ರಾಮಪ್ರಸಾದ್‍ಗೂ ನನಗೂ ಸಂಬಂಧವಿಲ್ಲ. ಆದರೆ ವಿನಾ ಕಾರಣ ನನ್ನ ಹೆಸರನ್ನು ತರುತ್ತಿದ್ದಾರೆ. ರಾಮಪ್ರಸಾದ್ ಸಿಂಗ್ರಿ ಬಿನ್ ಹೊಟ್ಟೆ ಕದರ ಬಳಿ ಖರೀದಿ ಮಾಡಿದ್ದಾರೆ. ಅವರನ್ನು ಈ ಕುರಿತು ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.

    ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ ಎಂದು ಗುರುತಿಸಿಕೊಂಡಿರುವ ಕೆಎಚ್ ಮುನಿಯಪ್ಪ ಅವರು, ಕೇಂದ್ರದ ಮಾಜಿ ರೈಲ್ವೇ ಸಚಿವ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ತನ್ನದೇ ಸ್ಥಾನ ಮಾನ ಉಳಿಸಿಕೊಂಡಿರುವ ಸಂಸದರಾಗಿದ್ದು, ಆದರೆ ಇಂದು ಅವರ ಮೇಲೆ ಆರೋಪ ಕೇಳಿ ಬಂದಿದೆ.

  • ರೈತರ ಭೂಮಿ ರೈತರಿಗೆ ಇಲ್ಲ – 6 ಲಕ್ಷದ ಜಮೀನಿಗೆ 70 ಲಕ್ಷ ರೂ. ಕೊಡುವಂತೆ ಬಿಡಿಎ ಡಿಮ್ಯಾಂಡ್!

    ರೈತರ ಭೂಮಿ ರೈತರಿಗೆ ಇಲ್ಲ – 6 ಲಕ್ಷದ ಜಮೀನಿಗೆ 70 ಲಕ್ಷ ರೂ. ಕೊಡುವಂತೆ ಬಿಡಿಎ ಡಿಮ್ಯಾಂಡ್!

    ಬೆಂಗಳೂರು: ರೈತರ ಸಾಲ ಮನ್ನಾ ಮಾಡೋದು ಇರಲಿ ಸ್ವಾಮಿ, ನಮ್ಮ ಸೈಟ್ ನಮಗೆ ಕೊಟ್ಟುಬಿಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನಾ ನಿರಾರ್ಶಿತ ರೈತರು ದುಂಬಾಲು ಬಿದ್ದಿದ್ದಾರೆ.

    ರೈತರೇ ಹೆದರಬೇಡಿ, ನಿಮ್ಮ ಸಾಲವನ್ನು ನಾನು ಮನ್ನಾ ಮಾಡುತ್ತೇನೆ ಎನ್ನುತ್ತಿರುವ ಕುಮಾರಸ್ವಾಮಿ ಅವರು ಬಿಡಿಎ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತೆ ಸುಮ್ಮನಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

    ಬಿಡಿಏ ಭರವಸೆ ಏನು?:
    ಬೆಂಗಳೂರು ಸುತ್ತಮುತ್ತ ಲೇಔಟ್‍ಗಳನ್ನು ನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ರೈತರ ಭೂಮಿಯನ್ನ ಕಡಿಮೆ ಹಣಕ್ಕೆ ಖರೀದಿ ಮಾಡಿತ್ತು. ಒಂದು ಎಕರೆಗೆ ಕೇವಲ 6 ಲಕ್ಷ ದಂತೆ ಅಧಿಕ ಪ್ರಮಾಣದಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಲೇಔಟ್ ಅಭಿವೃದ್ಧಿ ನಂತರ ರೈತರು ಕೊಟ್ಟ ಜಮೀನಿಗೆ ಅನುಗುಣವಾಗಿ ಸೈಟ್‍ನ್ನು ಸಹ ನೀಡಲಾಗುತ್ತದೆ ಎಂದು ಬಿಡಿಎ ರೈತರಿಗೆ ಭರವಸೆ ನೀಡಿತ್ತು.

    ಸದ್ಯ ತನ್ನ ವರಸೆಯನ್ನು ಬದಲಿಸಿಕೊಂಡಿರುವ ಬಿಡಿಎ, ಮಾರುಕಟ್ಟೆ ದರದಲ್ಲಿ ಹಣ ಪಾವತಿಸಿ ಸೈಟ್ ಪಡೆಯಲು ರೈತರಿಗೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಪ್ರಕಾರ ಒಂದು ಸೈಟ್ ಅನ್ನು ಪಡೆಯಲು 70 ಲಕ್ಷ ರೂ. ಗಿಂತಲೂ ಅಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ರೈತರಿಗೆ ಉಂಟಾಗಿದೆ.

    ಇತ್ತ ಜಮೀನು ಇಲ್ಲ, ಸೈಟೂ ಇಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದು, ಬಿಡಿಎನಲ್ಲಿ ಸೈಟ್ ಸಿಗುತ್ತೆ ನಮ್ಮ ಜಮೀನಿನಲ್ಲಿಯೇ ನಾವು ಮನೆ ಕಟ್ಟಿಕೊಳ್ಳಬಹುದು ಎನ್ನುವ ಭರವಸೆ ಇಟ್ಟುಕೊಂಡಿದ್ದ ರೈತರಿಗೆ ಬಿಡಿಎ ತಣ್ಣೀರೆರಚಿದೆ. ಅಧಿಕಾರಿಗಳು ನಮ್ಮ ಜಮೀನು ಖರೀದಿಸುವಾಗ ಇಲ್ಲ ಸಲ್ಲದ ಆಸೆ ತೋರಿಸಿದ್ದರು. ಆದರೆ ಈಗ ತಮಗೆ ಇಷ್ಟ ಬಂದ ಹಾಗೆ ಕಾನೂನು ಮಾಡುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಜನಸಾಮಾನ್ಯರಿಗಾಗಿ ಇದ್ದಾರ ಅಥವಾ ರಿಯಲ್ ಎಸ್ಟೇಟ್ ಬ್ರೋಕರ್‍ಗಳಿಗಾಗಿ ಇದ್ದಾರ ಎಂದು ಭೂಮಿ ಕಳೆದುಕೊಂಡ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರ ಒಂದು ಕಡೆ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಅಂತಾ ಹೇಳುತ್ತಿದೆ. ಆದರೆ ಮತ್ತೊಂದು ಕಡೆ ರೈತರ ಬಳಿ ಲಕ್ಷಾಂತರ ರೂ. ಮೌಲ್ಯದ ಭೂಮಿಯನ್ನು ಸರ್ಕಾರ ಸುಲಿಗೆ ಮಾಡುತ್ತಿದೆ. ಮುಂದೆಯಾದರೂ ರೈತರಿಗೆ ಸುಳ್ಳು ಭರವಸೆಗಳನ್ನ ನೀಡುವುದನ್ನು ಬಿಟ್ಟು ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದೆ ನಮ್ಮ ಆಗ್ರಹ ಎಂದು ರೈತರು ಆಗ್ರಹಿಸಿದ್ದಾರೆ.

  • ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ನನ್ನ ಮಗ ತಪ್ಪು ಮಾಡಿಲ್ಲ- ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಂಧನ – ಪರಶುರಾಮ ಪೋಷಕರ ಆರೋಪ

    ವಿಜಯಪುರ: ನನ್ನ ಮಗ ಯಾವುದೇ ತಪ್ಪು ಮಾಡಲಿಲ್ಲ. ವಿನಾಕಾರಣ ನನ್ನ ಮಗನನ್ನು ಬಂಧಿಸಿದ್ದಾರೆ. ಶ್ರೀರಾಮ ಸೇನೆ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದಕ್ಕೆ ಈ ರೀತಿ ಮಾಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಅರೋಪಿ ಪರಶುರಾಮ ವಾಗ್ಮೋರೆ ಪೋಷಕರು ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಯೊಂದಿಗೆ ಮಾತನಾಡಿದ ಅವರು, ನಾವು ಕೂಲಿ ನಾಲಿ ಮಾಡಿ ಬದುಕು ಜನ. ನನ್ನ ಮಗ ಕೊಲೆ ಮಾಡುವಂತಹ ವ್ಯಕ್ತಿಯಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಸ್ ಐಟಿ ತಂಡ ಹಾಗೂ ಕೆಲ ಸ್ಥಳೀಯ ಪೊಲೀಸ್ ಮನೆಗೆ ಬಂದು ಪಾಕಿಸ್ತಾನ ಧ್ವಜ ಹಾರಿಸಿದ ಬಗ್ಗೆ ವಿಚಾರಣೆಗೆ ಕರೆದೊಯ್ಯುವುದಾಗಿ ತಮ್ಮ ಮಗನನ್ನು ಕರೆಕೊಡು ಹೋದರು ಎಂದು ತಿಳಿಸಿದರು.

    ಎಸ್ ಐಟಿ ತಂಡ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ. ಈ ಕುರಿತು ಇಂದು ಮಧ್ಯಾಹ್ನ ಎಸ್ ಐಟಿ ಡಿವೈಎಸ್ ಪಿ, ಪರಶುರಾಮ ಜೊತೆ ನಮ್ಮ ಸಂಬಂಧಿ ಅಶೋಕ ಕಾಂಬ್ಳೆ ಅವರೊಂದಿಗೆ ಮಾತನಾಡಿಸಿದ್ದಾರೆ. ಆಗ ನನ್ನನ್ನ ವಿಚಾರಣೆಗಾಗಿ ಕರೆತಂದಿದ್ದಾರೆ ನೀವು ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದು, ಆದರೆ ಈ ಪ್ರಕರಣದಲ್ಲಿ ಅರೋಪಿ ಮಾಡಿದ್ದಾರೆ ಎಂಬುವುದು ಮಾಧ್ಯಮದಿಂದಲೇ ಗೊತ್ತಾಗಿದ್ದು ಎಂದು ತಿಳಿಸಿದರು.

    ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಪ್ರಕರಣದಲ್ಲಿ ತಮ್ಮ ಮಗ ಖುಲಾಸೆ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

  • ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ನಡೆದಿರುವುದಾಗಿ ವಿದ್ಯಾರ್ಥಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿದ್ದಾರೆ. ಹೊಡೆಯುವ ವೇಳೆ ವಿದ್ಯಾರ್ಥಿಯ ಎಡಗಣ್ಣಿಗೆ ತಾಗಿ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಕಳೆದ ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ.

    ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಹೀಗಾಗಿ ಇತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ.

    ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಲಾಗಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ತನಿಖೆ ನಡೆಸಿ ಸೋತವರಿಂದ ನಮ್ಮ ವಿರುದ್ಧ ಹತಾಷೆಯ ಮಾತು: ಬಿಸ್‍ವೈಗೆ ಎಚ್‍ಡಿ ರೇವಣ್ಣ ತಿರುಗೇಟು

    ತನಿಖೆ ನಡೆಸಿ ಸೋತವರಿಂದ ನಮ್ಮ ವಿರುದ್ಧ ಹತಾಷೆಯ ಮಾತು: ಬಿಸ್‍ವೈಗೆ ಎಚ್‍ಡಿ ರೇವಣ್ಣ ತಿರುಗೇಟು

    ಬೆಂಗಳೂರು: ಸದನದಲ್ಲಿ ತಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಅರೋಪಗಳಿಗೆ ದಾಖಲೆ ಬಿಡುಗಡೆ ಮಾಡಲಿ. ಆದರೆ ಅವರ ಹೇಳಿಕೆಗಳನ್ನು ಗಮನಿಸಿದರೆ ಬಿಎಸ್‍ವೈ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ ಎನಿಸುತ್ತದೆ ಎಂದು ಎಚ್‍ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.

    ಬಿಎಸ್‍ವೈ ಅವರ ಭಾಷಣದ ಕುರಿತು ಮಾತನಾಡಿದ ಅವರು, ನಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಮನೆ ಹಂಚಿಕೆ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಅವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ಕುರಿತು ಅವರೇ ತನಿಖೆ ಮಾಡಿಸಿ ಸೋತಿದ್ದಾರೆ. ಈಗ ಹತಾಶರಾಗಿ ಮತ್ತೆ ಆರೋಪ ಮಾಡಿದ್ದಾರೆ. ಬೇಕಾದರೆ ಇನ್ನೊಮ್ಮೆ ತನಿಖೆ ಮಾಡಿಸಲಿ ಸವಾಲು ಹಾಕಿದರು.

    ಇದೇ ವೇಳೆ ಬಿಎಸ್ ವೈ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇಂದಿನ ಭಾಷಣ ವಿರೋಧ ಪಕ್ಷದ ನಾಯಕನ ಭಾಷಣ ಆಗಿರಲಿಲ್ಲ. ಅವರ ಭಾಷಣ ನೋಡಿದಾಗ ಅಯ್ಯೋ ಅನಿಸಿತು. ಅವರ ವಿಕೃತ ಮನಸ್ಸನ್ನು ಪ್ರದರ್ಶನ ಮಾಡಿದ್ದಾರೆ. ಬಿಎಸ್‍ವೈ ಅವರಿಗೆ ವೈರಿ ಅಂದರೆ ನಾನು ಹಾಗೂ ದೇವೇಗೌಡರು ಎಂದರು.

    ಕಾಂಗ್ರೆಸ್ ಜೊತೆ ಸರ್ಕಾರ ರಚನೆಯಲ್ಲಿ ತಂದೆ ದೇವೇಗೌಡರ ಪಾತ್ರ ಮಹತ್ವದ್ದು. ಬಿಜೆಪಿ ಜೊತೆ ನಾನು ಹೋದರೆ ಕುಟುಂಬದಿಂದ ಹೊರ ಹಾಕುವುದಾಗಿ ನನಗೆ ಹೇಳಿದ್ದರು. ದೇವೇಗೌಡರು ಸುಮ್ಮನಾಗಿದ್ದಾರೆ ಬಿಜೆಪಿ ಜೊತೆ ಕುಮಾರಸ್ವಾಮಿ ಬರುತ್ತಿದ್ದರು ಎಂಬುವುದು ಅವರ ಮನಸ್ಸಿನ ಇರಬೇಕು. ಹಾಗಾಗಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ನನ್ನ ವಿರುದ್ಧ ವಿಕೃತಿ ಮೆರೆದಿದ್ದಾರೆ ಎಂದು ಹೇಳಿದರು.

  • ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

    ಹೈದರಾಬಾದ್: ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂದು ತಿರುಮಲ ತಿರುಪತಿ ದೇವಾಸ್ಥಾನ ಮಾಜಿ ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆರೋಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಮಿಟಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಧಾರ್ಮಿಕ ನಿಯಮಗಳ ಪ್ರಕಾರ ತಿಮ್ಮಪ್ಪನ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶವಿದ್ದರೆ ಅವುಗಳನ್ನು ಪ್ರದರ್ಶಿಸಲು ಸಿದ್ಧ. ಒಂದು ವೇಳೆ ದೇವರ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಇಲ್ಲ ಅಂತಾದ್ರೆ ಅವುಗಳನ್ನು ಅಧುನಿಕ ತಂತ್ರಜ್ಞಾನ ಬಳಸಿ 3ಡಿ ಮಾದರಿಯಲ್ಲಿ ಮುದ್ರಣ ಮಾಡಿ ವಸ್ತುಸಂಗ್ರಾಹಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿದ್ದು, ಈ ಕುರಿತು ನಿರ್ಣಯವನ್ನು ಮೇಲಾಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಆರೋಪ: ದೇವರ ಆಭರಣಗಳಲ್ಲಿದ್ದ ವಜ್ರಾಭರಣ ನಾಪತ್ತೆಯಾಗಿದೆ ಎಂದು ಕೆಲ ದಿನಗಳ ಹಿಂದೆ ದೇವಾಲಯದ ಮಾಜಿ ಪ್ರಧಾನ ಅರ್ಚಕರು ಆರೋಪಿಸಿದ್ದರು. ಅಲ್ಲದೇ ದೇವಾಲಯದ ಸಮಿತಿ ಹಲವು ಆಕ್ರಮಗಳನ್ನು ನಡೆಸುತ್ತಿದ್ದು, ಈ ಕುರಿತು ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಬೆನ್ನಲ್ಲೇ ಟಿಟಿಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ದೇವಾಲಯದ ಕುರಿತು ಈ ರೀತಿ ಹೇಳಿಕೆ ನೀಡುವುದರ ವಿರುದ್ಧ ಕ್ರಮಕೈಗೊಳ್ಳುವ ದೃಷ್ಟಿಯಿಂದ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಈ ಹಿಂದೆ ತೆಗೆದುಕೊಂಡ ನಿರ್ಧಾರದ ಪ್ರಕಾರ ತಿರುಮಲ ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರ ವಯಸ್ಸು 65 ವರ್ಷ ಪೂರ್ಣಗೊಂಡಿದ್ದರೆ ಸೇವೆಯಿಂದ ನಿವೃತ್ತಿ ಆಗಬೇಕಿದೆ. ಈ ನಿಯಮಗಳ ಆನ್ವಯ ಈಗಾಗಲೇ ರಮಣ ದೀಕ್ಷಿತುಲು ಅವರು ನಿವೃತ್ತಿಯಾಗಿದ್ದಾರೆ.

    ಅರ್ಚಕರ ನಿವೃತ್ತಿ: ಟಿಟಿಡಿ ಆಡಳಿತ ಮಂಡಳಿಯ ಸಭೆಯಲ್ಲಿ 2012 ರಲ್ಲಿ ಜಾರಿಯಾಗಿದ್ದ ನಿಯಮಗಳ ಅನ್ವಯ 65 ವರ್ಷ ಮೀರಿದ ಅರ್ಚಕರು ಸೇವೆಯಿಂದ ತಕ್ಷಣವೇ ನಿವೃತ್ತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಮಣ ದೀಕ್ಷಿತುಲು ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಂಡಳಿ ನಿರ್ಣಯ ರದ್ದು ಮಾಡುವಂತೆ ನ್ಯಾಯಾಲಯದ ಮೇರೆ ಹೋಗುವುದಾಗಿ ತಿಳಿಸಿದ್ದಾರೆ.

  • ನಾವು ಯಾವುದೇ ಹಣವನ್ನು ಹಂಚಿಲ್ಲ, ಮಗಳ ಮೇಲೆ ಹಲ್ಲೆ ನಡೆಸಲಾಗಿದೆ: ಸುರೇಶ್ ಕುಮಾರ್

    ನಾವು ಯಾವುದೇ ಹಣವನ್ನು ಹಂಚಿಲ್ಲ, ಮಗಳ ಮೇಲೆ ಹಲ್ಲೆ ನಡೆಸಲಾಗಿದೆ: ಸುರೇಶ್ ಕುಮಾರ್

    ಬೆಂಗಳೂರು: ನಗರದ ರಾಜಾಜಿನಗರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದಲ್ಲಿ ನನ್ನ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಅಪ್ಪಟ ಸುಳ್ಳು ಎಂದು ಬಿಜೆಪಿ ಶಾಸಕ, ಪಕ್ಷದ ಅಭ್ಯರ್ಥಿ ಸುರೇಶ್ ಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ.

    ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‍ನಲ್ಲಿ ಮತದಾರರಿಗೆ ಶಾಸಕ ಸುರೇಶ್ ಕುಮಾರ್ ಪುತಿ ಡಾ. ದಿಶಾ ಹಣ ಹಂಚುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಶಾಸಕ ಸುರೇಶ್ ಕುಮಾರ್ ಫೇಸ್‍ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಮಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಲಾಗುತ್ತಿದೆ. ನಾವು ಅಥವಾ ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರು ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ಮಗಳು ದಿಶಾ ಇಂದು ದೆಹಲಿಯಿಂದ ಆಗಮಿಸಿರುವ ನಮ್ಮ ಪಕ್ಷದ ಸಾಮಾಜಿಕ ಜಾಲತಾಣದ ತಂಡದ ಜೊತೆ ಚರ್ಚೆ ನಡೆಸುತ್ತಿದ್ದಾಳೆ. ಪಕ್ಷದಲ್ಲಿ ತಮ್ಮ ಮಗಳು ಸಾಮಾಜಿಕ ಮಾಧ್ಯಮಗಳದ ಜೊತೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪಕ್ಷದ ಯುವಮೋರ್ಚಾ ಪದಾಧಿಕಾರಿ ಯಶಸ್ ರವರ ಕಚೇರಿಯಲ್ಲಿ ಇಂದು ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ನುಗ್ಗಿ ಕೈ ಕಾರ್ಯಕರ್ತರು ಮಗಳ ಮೇಲೆ ಹಲ್ಲೆ ನಡೆಸಿ ಹಣವನ್ನು ಪ್ರದರ್ಶಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಮಹಾಲಕ್ಷ್ಮಿ ಲೇಔಟ್ ಪಾಲಿಕೆಯ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ ಉದ್ದೇಶ ಪೂರ್ವಕವಾಗಿ ಈ ಕೃತ್ಯವನ್ನು ನಡೆಸಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹೆಣ್ಣು ಮಗಳ ಮೇಲೆ ತೇಜೋವಧೆ ಮಾಡುವುದು ಎಷ್ಟು ಸರಿ? ಘಟನೆ ನಡೆದ ಕೂಡಲೇ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಅಲ್ಲಿ ಸೇರಿದ್ದರಿಂದಲೇ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪರಮೇಶ್ವರ್, ಸಿದ್ದರಾಮಯ್ಯ ಆದಿಯಾಗಿ ಯಾರೂ ಈ ಕೃತ್ಯವನ್ನು ಒಪ್ಪಲಾರರು. ಚುನಾವಣೆ ಗೆಲ್ಲಲು ಈ ಕಾಂಗ್ರೆಸ್ ಈ ರೀತಿಯ ಕುತಂತ್ರ ಮಾಡಬಾರದು. ಕೃಷ್ಣ ಮೂರ್ತಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಬೀದಿಗೆ ಇಳಿದು ಹೋರಾಟ ನಡೆಸುವುದಾಗಿ ಸುರೇಶ್ ಕುಮಾರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ದಿಶಾ ಸ್ಪಷ್ಟನೆ: ತಾನು ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ವೇಲೆ ಕೆಲ ವ್ಯಕ್ತಿಗಳು ತನ್ನ ಬಂದು ಹಣ ಹಂಚಿಕೆ ಮಾಡುತ್ತಿರುವ ಆರೋಪ ಮಾಡಿದರು. ಈ ವೇಳೆ ಅವರಿಗೆ ಉತ್ತರ ನೀಡಿದೆ. ಆದರೆ ಇದಕ್ಕೆ ಸಮಾಧಾನಗೊಳ್ಳದೇ ಅವರು ನನ್ನ ಫೋಟೋ ವಿಡಿಯೋ ತೆಗೆದುಕೊಂಡರು. ಬಳಿಕ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಆ ವೇಳೆಯೂ ಸ್ಥಳಕ್ಕೆ ಬಂದ ಕೆಲ ವ್ಯಕ್ತಿಗಳು ನನ್ನ ಜೊತೆಗೆ ಕೆಟ್ಟದಾಗಿ ನಡೆದುಕೊಂಡರು.

    ಚುನಾವಣೆಯಲ್ಲಿ ತಮ್ಮ ತಂದೆಯ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದೂವರೆಗೆ ಹಣ ಹಂಚಿಕೆ ಮಾಡಿಲ್ಲ. ಮುಂದೆಯೂ ಹಣವನ್ನು ಹಂಚಲ್ಲ. ಕೃಷ್ಣಮೂರ್ತಿ ಬೆಂಬಲಿಗರು ನನಗೆ ಹೊಡೆಯಲು ಬಂದಿದ್ದಾರೆ. ಯಾವುದೇ ರೀತಿಯ ಹಣದ ಸಂಬಂಧ ಚಟುವಟಿಕಗಳನ್ನು ನಾವು ಮಾಡುತ್ತಿರಲಿಲ್ಲ.

    https://www.facebook.com/nimmasuresh/videos/2108056582555009/UzpfSTEyNTU2MTk2NDE1NDU0NDoxODU3OTU0NTgwOTE1MjY1/