Tag: ಆರೋಪ

  • ಒಂದೇ ತಿಂಗ್ಳಲ್ಲಿ 20 ಮನೆಗಳ್ಳತನ – ಪೊಲೀಸರೇ ಕಳ್ಳತನ ಮಾಡಿಸ್ತಾರೆ ಎಂದ ಮಾಜಿ ಸಚಿವ

    ಒಂದೇ ತಿಂಗ್ಳಲ್ಲಿ 20 ಮನೆಗಳ್ಳತನ – ಪೊಲೀಸರೇ ಕಳ್ಳತನ ಮಾಡಿಸ್ತಾರೆ ಎಂದ ಮಾಜಿ ಸಚಿವ

    ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಕಳ್ಳತನ ಮಿತಿಮೀರಿದೆ. ಕಳೆದ ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ಕನ್ನಹಾಕಲಾಗಿದೆ ಎನ್ನಲಾಗಿದೆ. ಆದರೂ ಹೆಬ್ಬರೂ ಪೊಲೀಸರು ಕನಿಷ್ಠ ಪಕ್ಷ ದೂರು ದಾಖಲಿಸಿಕೊಳ್ಳದೇ ದಿವ್ಯ ಮೌನ ವಹಿಸಿದ್ದಾರೆ. ಪೊಲೀಸರೇ ನಿಂತು ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

    ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದಾದ ಮೇಲೊಂದು ಮನೆಗಳ್ಳತನ ಪ್ರಕರಣ ಬೆಳಕಿಗೆ ಬರುತ್ತಿವೆ. ಮನೆಯ ಬೀಗದ ಕೀಯನ್ನು ಕಿಟಕಿಯ ಪಕ್ಕದಲ್ಲೋ, ಬಾಗಿಲ ಮೇಲಕ್ಕೋ ಇಟ್ಟು ಹೋಗಿದ್ದನ್ನು ಗಮನಿಸುವ ಕಳ್ಳರು ಇಂತಹ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಡಹಗಲೇ ಇಂತಹ ಮನೆಗಳಿಗೆ ರಾಜಾರೋಷವಾಗಿ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಕೆಲ ಮನೆಗಳ ಬೀಗ ಮುರಿದು ಮಧ್ಯಾಹ್ನದ ವೇಳೆಯೇ ಕನ್ನ ಹಾಕಿದ್ದಾರೆ.

    ಸೋಮವಾರದಂದು ಹುಳ್ಳೇಹಳ್ಳಿ ಗ್ರಾಮದಲ್ಲೂ ಕಳ್ಳತನ ಘಟನೆ ನಡೆದಿದೆ. ತಿಮ್ಮೇಗೌಡ ಎಂಬವರ ಮನೆಯ ಕಿಟಕಿ ಮೇಲಿದ್ದ ಬೀಗದ ಕೀ ಬಳಸಿಕೊಂಡು ಕಳ್ಳನೋರ್ವ ಮನೆಯೊಳಗೆ ಪ್ರವೇಶಿಸಿದ್ದಾನೆ. ಬೀರುವಿನಲ್ಲಿದ್ದ 1.5 ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದೇ ರೀತಿ ಡಿ.ಕೊರಟಗೆರೆ ಗ್ರಾಮದ ಕೃಷ್ಣಮೂರ್ತಿ ಆಚಾರ್ ಎಂಬವರ ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

    ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ನಡೆದಿದೆ. ಆದರೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುವುದು ಮನೆ ಮಾಲೀಕರ ಆರೋಪ. ಪ್ರಕರಣದ ಬಗ್ಗೆ ಕೇಳಲು ಹೋದರೆ ಕಳ್ಳರು ಸಿಕ್ಕಿದಾಗ ಕಳೆದು ಹೋದ ಮಾಲುಗಳನ್ನು ನಾವೇ ತಂದು ಕೊಡುತ್ತೇವೆ ಎಂದು ಸಮಾಧಾನ ಮಾಡಿ ಕಳಿಸುತ್ತಿದ್ದಾರೆ. ಅದರಲ್ಲೂ ಹೆಬ್ಬೂರು ಪೊಲೀಸ್ ಠಾಣೆಯವರಂತೂ ಕಳ್ಳರನ್ನು ಹಿಡಿಯುವ ಪ್ರಯತ್ನವೇ ಮಾಡುತಿಲ್ಲ ಎಂದು ಸಾರ್ವಜನಿಕರ ಆರೋಸಿಸುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, ಹೆಬ್ಬೂರು ಠಾಣೆಯ ಪೇದೆ ಪುಟ್ಟರಾಜು ಹಾಗೂ ಪಿಎಸ್‍ಐ ಶ್ರೀಕಾಂತರ ಕರಿನೆರಳಿನಲ್ಲಿ ಕಳ್ಳತನ ನಡಿಯುತ್ತಿದೆ. ಒಂದಿಷ್ಟು ಯುವಕರನ್ನು ಬಿಟ್ಟು ಪೊಲೀಸರೇ ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮನೆಗಳ್ಳತನದ ಜೊತೆಗೆ ಸರಗಳ್ಳತನ, ಹಸು-ಕುರಿಗಳ ಕಳ್ಳತನವೂ ಎಲ್ಲೆ ಮೀರಿದೆ. ಇವೆಲ್ಲದಕ್ಕೂ ಹೆಬ್ಬೂರು ಪೊಲೀಸರ ಕುಮ್ಮಕ್ಕು ಇದೆ. ಪೊಲೀಸರ ಪಾತ್ರ ಇಲ್ಲದೇ ಇದ್ದರೆ ಒಂದು ತಿಂಗಳಲ್ಲಿ ನಡೆದ ಸರಿಸುಮಾರು 20 ಪ್ರಕರಣದಲ್ಲಿ ಒಂದನ್ನಾದರೂ ಭೇದಿಸುತ್ತಿದ್ದರು ಅನ್ನೋದು ಸುರೇಶ್ ಗೌಡರ ವಾದವಾಗಿದೆ. ಒಟ್ಟಾರೆ ಗ್ರಾಮಾಂತರ ಕ್ಷೇತ್ರದಲ್ಲಿನ ಮನೆಗಳ್ಳತನದ ವಿಚಾರ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ.

  • ವರ್ಗಾವಣೆ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ- ತೋಟಗಾರಿಕಾ ವಿವಿ ಸಿಬ್ಬಂದಿ ಆಕ್ರೋಶ

    ವರ್ಗಾವಣೆ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ- ತೋಟಗಾರಿಕಾ ವಿವಿ ಸಿಬ್ಬಂದಿ ಆಕ್ರೋಶ

    ಬಾಗಲಕೋಟೆ: ತೋಟಗಾರಿಕಾ ವಿಶ್ವವಿದ್ಯಾಲಯ ಅಧೀನ ಸಿಬ್ಬಂದಿಯ ವರ್ಗಾವಣೆ ವಿಚಾರದಲ್ಲಿ ತೋಟಗಾರಿಕಾ ಇಲಾಖೆಯ ಸಚಿವ ಎಂ.ಸಿ ಮನಗೂಳಿ ಮೂಗು ತೂರಿಸಿದ್ದಾರೆ. ವರ್ಗಾವಣೆಯ ಬಗ್ಗೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ನನ್ನ ಗಮನಕ್ಕೆ ಬಾರದೆ ವರ್ಗಾವಣೆ ಮಾಡಬಾರದೆಂದು ಎಂದು ಮನಗೂಳಿ ಅವರು ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಸಚಿವರ ಪತ್ರದ ಪ್ರತಿಯನ್ನು ತೋಟಗಾರಿಕೆ ವಿವಿ ಪ್ರಭಾರಿ ಉಪಕುಲಪತಿಗಳಿಗೆ ಕಾರ್ಯದರ್ಶಿಗಳು ಕಳುಹಿಸಿದ್ದಾರೆ. ಈ ಮೂಲಕ ವರ್ಗಾವಣೆ ಆದೇಶಕ್ಕೆ ತಡೆ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಕಾರ್ಯದರ್ಶಿಗಳ ಆದೇಶದ ಪ್ರಕಾರ ವರ್ಗಾವಣೆ ವಿಚಾರವನ್ನು ವಿವಿ ಆಡಳಿತ ಮಂಡಳಿ ತಡೆಹಿಡಿದಿದ್ದಾರೆ.

    ತೋಟಗಾರಿಕಾ ವಿವಿ ನಿಯಮಾವಳಿ ಪ್ರಕಾರ ಸಚಿವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಮನಗೂಳಿಯವರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ತೋಟಗಾರಿಕಾ ವಿಶ್ವವಿದ್ಯಾಲಯಗಳ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.

    ಸಚಿವರು ಈ ಕಾರ್ಯದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಸಚಿವರ ವಿರುದ್ಧ ಪ್ರತಿಭಟನೆಗೆ ಇಳಿಯೋದಾಗಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ. ಕೆ.ಎಂ ಇಂದಿರೇಶ್ ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಭಾರ ಉಪಕುಲಪತಿ ಜೂನ್ 6ರಂದು ಸಿಬ್ಬಂದಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಜೂನ್ 7ರಂದು ತಡೆ ನೀಡುವಂತೆ ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ.

    ಜನರಲ್ ವರ್ಗಾವಣೆ, ಮುಚ್ಯುವಲ್ ವರ್ಗಾವಣೆ, ರಿಕ್ವೆಸ್ಟ್ ವರ್ಗಾವಣೆ ಅಡಿಯಲ್ಲಿ 45 ಸಿಬ್ಬಂದಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತು. ಹಾಗೆಯೇ ವಿವಿಯ ಇಬ್ಬರು ಡೀನ್, ಒಬ್ಬರು ರೆಜಿಸ್ಟ್ರಾರ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಆದೇಶಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಸಚಿವರು ಹಸ್ತಕ್ಷೇಪ ಮಾಡಿರುವುದು ಸರಿಯಲ್ಲ ಎಂದು ಸಿಬ್ಬಂದಿ ಕಿಡಿಕಾರುತ್ತಿದ್ದಾರೆ.

  • ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!

    ಮಂಗಳೂರು: ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಭಕ್ತರು ಬಲವಂತವಾಗಿ ಕತ್ತರಿಸಿ, ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದಿದೆ.

    ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ದೌರ್ಜನ್ಯ ನಡೆದಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ. ದೈವ ಪಾತ್ರಿ ಲೊಕೇಶ್ ಅವರಿಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯಲ್ಲಿನ ಖಡಗ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೈವ ಪಾತ್ರಿಗೆ ಅವಮಾನ ಮಾಡಿರೋ ಬಗ್ಗೆ ವಿರೋಧ ಕೇಳಿಬಂದಿದೆ. ಆದರೆ ಕೃತ್ಯ ಎಸಗಿದವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

    ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವದ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವದ ಪಾತ್ರಿಗಳು ಇಂಥ ವರ್ತನೆ ತೋರಿದರೆ ಹೇಗೆ ಎನ್ನುವ ಆಕ್ರೋಶದಿಂದ ಯುವಕರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ವಿರುದ್ಧ ವರದಕ್ಷಿಣೆ ಕೇಸ್ ದಾಖಲು

    ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ವಿರುದ್ಧ ವರದಕ್ಷಿಣೆ ಕೇಸ್ ದಾಖಲು

    ತುಮಕೂರು: ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕೆ. ಕಾರಂಗಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.

    ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿ ನೀಡಿದ ದೂರಿನನ್ವಯ ತುಮಕೂರು ಮಹಿಳಾ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತುಮಕೂರು ಮೂಲದ ಆಸ್ಮಾ ತಾಜ್ ಹಾಗೂ ಬಳ್ಳಾರಿ ಮೂಲದ ಜಾವೀದ್ ಕಾರಂಗಿಗೆ 2008ರಲ್ಲಿ ಆಗಸ್ಟ್ 26ರಂದು ಮದುವೆಯಾಗಿತ್ತು.

    ಮದುವೆ ಆದಾಗಿನಿಂದಲೂ ಕೂಡಾ ಜಾವೀದ್ ತನ್ನ ಪತ್ನಿ ಅಸ್ಮಾ ತಾಜ್‍ಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜಾವೀದ್ ಹಾಗೂ ಅವರ ತಂದೆ ಖಾಜಾ ಮೋಹಿದ್ದಿನ್, ತಾಯಿ ಫಾತಿಮಾ ಸೇರಿದಂತೆ ಒಟ್ಟು ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಕೊಪ್ಪಳ: ಬೆಂಕಿ ಪೊಟ್ಟಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಹೊರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಡಿಸೆಂಬರ್ 17 ರಂದು ಈ ಘಟನೆ ನಡೆದಿದೆ.

    ಡಿ.17 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಕಟ್ಟಲು ಹೋಗುವಾಗ ಬೆಂಕಿಪೊಟ್ಟಣ ಇಲ್ಲ ಎಂದು ರಾಜೇಶ್, ಪಕ್ಕದಲ್ಲೆ ಇರುವ ಬುಡ್ಡಪ್ಪ ಎಂಬವರ ಹೋಟೆಲ್ ಗೆ ಬಂದು ಅಲ್ಲೆ ಇದ್ದ ಬೆಂಕಿ ಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದನು. ಈ ವೇಳೆ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ರಾಜೇಶನನ್ನು ಹಿಡಿದು, ಬೆಂಕಿಪೊಟ್ಟಣ ಕಳವು ಮಾಡುತ್ತೀಯಾ ಎಂದು ಥಳಿಸಿದ್ದಾರೆ.

    ವಿಷಯ ತಿಳಿದ ರಾಜೇಶನ ತಂದೆ ಆ ಮೇಲೆ ಮಾತಾಡೋಣ ಎಂದು ಸಮಾಧಾನ ಮಾಡಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದ ರಾಜೇಶ್ ಕೆಲ ಹೊತ್ತಿನಲ್ಲೇ ತಮ್ಮ ಹೊಲಕ್ಕೆ ಹೋಗಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇವಲ ಬೆಂಕಿಪೊಟ್ಟಣ ಕಳ್ಳತನ ಆರೋಪ ಹೊರಿಸಿ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆಂದು ರಾಜೇಶ್ ತಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಕಳ್ಳತನ ಆರೋಪ ಹೊರಿಸಿದ್ದ ಬುಡ್ಡಪ್ಪ, ಶೇಖರಪ್ಪ, ಲಕ್ಷ್ಮಿ, ಶಾಂತಮ್ಮ ಎಂಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಯರ್ ಕಳ್ಳತನದ ಆರೋಪ-ಮನನೊಂದ ಯುವಕ ಆತ್ಮಹತ್ಯೆಗೆ ಶರಣು

    ಬಿಯರ್ ಕಳ್ಳತನದ ಆರೋಪ-ಮನನೊಂದ ಯುವಕ ಆತ್ಮಹತ್ಯೆಗೆ ಶರಣು

    ಹಾಸನ: ಬಿಯರ್ ಕಳ್ಳತನದ ಆರೋಪ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೈಗಾರಿಕಾ ವಲಯದಲ್ಲಿ ನಡೆದಿದೆ.

    21 ವರ್ಷದ ಸುನೀಲ್ ಆತ್ಮಹತ್ಯೆಗೆ ಶರಣಾದ ಯುವಕ. ಸುನೀಲ್ ಮೂಲತಃ ಕಂಚಮಾರನಹಳ್ಳಿ ಗ್ರಾಮದ ನಿವಾಸಿಯಾಗಿದ್ದನು. ಹಾಸನದ ಕೈಗಾರಿಕಾ ವಲಯದಲ್ಲಿರುವ ವುಡ್‍ಪೆಕೆರ್ ಡಿಸ್ಟ್ರಿಲರೀಸ್ ಅಂಡ್ ಬ್ರೇವರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬಿಯರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಶುಕ್ರವಾರ ಫ್ಯಾಕ್ಟರಿಯಲ್ಲಿ 11 ಬಿಯರ್ ನಾಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಸುನೀಲ್ ಸೇರಿದಂತೆ ಅಭಿಲಾಷ್ ಹಾಗೂ ಸಂತೋಷ್ ಎಂಬವರ ವಿರುದ್ಧ ದೂರು ದಾಖಲಾಗಿತ್ತು.

    ಕಳ್ಳತನ ಆರೋಪ ದಾಖಲಾಗಿದ್ದಕ್ಕೆ ಮನನೊಂದ ಸುನೀಲ್ ಮಂಗಳವಾರ ಮನೆಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಅರಿತ ಪೋಷಕರು ಕೂಡಲೇ ಮಗನನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸುನಿಲ್ ಮೃತಪಟ್ಟಿದ್ದಾನೆ.

    ಸುನೀಲ್ ಮೃತಪಡುತ್ತಿದ್ದಂತೆ ಸಂಬಂಧಿಕರು ಬಿಯರ್ ಫ್ಯಾಕ್ಟರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತದೇಹವನ್ನು ಫ್ಯಾಕ್ಟರಿ ಬಳಿ ಇಟ್ಟು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೈಂಗಿಕ ಕಿರುಕುಳ ಆರೋಪ- ಮನನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು

    ಲೈಂಗಿಕ ಕಿರುಕುಳ ಆರೋಪ- ಮನನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು

    ಲಕ್ನೋ: ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸುತ್ತಿದ್ದ 35 ವರ್ಷದ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    35 ವರ್ಷದ ಸ್ವರೂಪ್ ರಾಜ್ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಸ್ವರೂಪ್ ನೋಯ್ಡಾದ ಜೆನ್‍ಪ್ಯಾಕ್ಟ್ ಸಾಫ್ಟ್ ವೇರ್ ಕಂಪೆನಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಕಚೇರಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಲೈಂಗಿಕ ಆರೋಪವನ್ನು ಸ್ವರೂಪ್ ಮೇಲೆ ಹೊರಿಸಿದ್ದರು. ಹೀಗಾಗಿ ಸ್ವರೂಪ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತೆಂದು ಪೊಲೀಸರು ಹೇಳಿದ್ದಾರೆ.

    ಲೈಂಗಿಕ ಆರೋಪದ ಆಪಾದನೆಯಿಂದ ತೀವ್ರವಾಗಿ ಮನನೊಂದಿದ್ದ ಸ್ವರೂಪ್, ಗುರುವಾರ ನೋಯ್ಡಾದ ಸೆಕ್ಟರ್ 137ರರಲ್ಲಿರುವ ತಮ್ಮ ನಿವಾಸದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ. ಅಲ್ಲದೇ ಘಟನಾ ಸಂಬಂಧ ಸ್ವರೂಪ್ ಕುಟುಂಬದವರು ಯಾವುದೇ ದೂರನ್ನು ದಾಖಲಿಸಿಲ್ಲ. ಹೀಗಾಗಿ ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದೇವೆಂದು ಗೌತಮ್ ಬುದ್ಧ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಹೇಳಿದ್ದಾರೆ.

    ಸ್ವರೂಪ್ ರಾಜ್ ಆತ್ಮಹತ್ಯೆಗೂ ಮುನ್ನ ತನ್ನ ಪತ್ನಿಗೆ ಪತ್ರ ಬರೆದಿದ್ದರು, ಪತ್ರದಲ್ಲಿ “ನಿನಗೆ ಗೊತ್ತು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು. ಆದರೆ ನನ್ನ ಕಚೇರಿಯಲ್ಲಿ ಇಬ್ಬರು ಸಹದ್ಯೋಗಿಗಳು ನನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ನನ್ನನ್ನು ನಂಬು ನಾನು ಆ ರೀತಿ ನಡೆದುಕೊಂಡಿಲ್ಲ. ನನಗೆ ಗೊತ್ತು ಈ ಜಗತ್ತು ಯಾವ ರೀತಿ ಅರ್ಥಮಾಡಿಕೊಳ್ಳುತ್ತದೆಂದು. ಆದರೂ ನೀನು ಹಾಗೂ ನಮ್ಮ ಕುಟುಂಬ ನನ್ನನ್ನು ನಂಬಿದರೇ ಸಾಕು” ಎಂದು ಬರೆದಿದ್ದಾರೆ.

    “ಆ ಒಂದು ಆಪಾದನೆ ಶೀಘ್ರವೇ ಜೆನ್‍ಪ್ಯಾಕ್ಟ್ ನಲ್ಲಿರುವವರಿಗೆ ತಿಳಿಯುತ್ತದೆ. ಆದರೆ ನಾನು ಎಲ್ಲರನ್ನೂ ಎದುರಿಸಲು ಸಾಧ್ಯವಿಲ್ಲ. ನಾನು ಧೈರ್ಯ ಹಾಗೂ ಗೌರವದಿಂದ ನಿನ್ನ ಜೊತೆ ಜೀವನ ಸಾಗಿಸಬೇಕೆಂದು ಅಂದುಕೊಂಡಿದ್ದೆ. ನಿನ್ನ ಗಂಡ ಏನೂ ಮಾಡಲಿಲ್ಲ. ನಾನು ಆರೋಪ ಮುಕ್ತನಾಗಿ ಬಂದರೂ, ಎಲ್ಲರೂ ನನ್ನನ್ನು ಕೆಟ್ಟ ರೀತಿಯಲ್ಲೇ ನೋಡುತ್ತಾರೆಂದು” ಬರೆದಿದ್ದಾರೆಂದು ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಸ್ಪದ ಸಾವು

    ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಸ್ಪದ ಸಾವು

    ಚಿಕ್ಕಮಗಳೂರು: ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ 22 ವರ್ಷದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದಿದೆ.

    ಸವಿತ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಮೂಲತಃ ಪಂಚನಹಳ್ಳಿ ಗ್ರಾಮದ ಸವಿತಾ ಎರಡು ವರ್ಷದ ಹಿಂದೆ ತಿಮ್ಮಾಪುರ ಗ್ರಾಮದ ರಘು ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂಬತ್ತು ತಿಂಗಳ ಮುದ್ದಾದ ಹೆಣ್ಣು ಮಗು ಇದೆ.

    ಶನಿವಾರ ತವರು ಮನೆಗೆ ತೆರಳಿದ್ದ ಪತ್ನಿ ಸವಿತಾರನ್ನು ರಘು ಕರೆದುಕೊಂಡು ಬಂದಿದ್ದರು. ಆದರೆ ತಡರಾತ್ರಿ ಏಕಾಏಕಿ ಸವಿತಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಸವಿತಾ ಪೋಷಕರು, ಪತಿ ರಘು ಹಾಗೂ ಅವನ ತಾಯಿಯೇ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಆರೋಪಿಸಿದ್ದಾರೆ.

    ಸದ್ಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾವಿನ ಪ್ರಸಾದಕ್ಕೆ ತಮಿಳುನಾಡು ನಂಟು- ಆದಾಯ ಬರ್ತಿದ್ದನ್ನು ಕಂಡು ದ್ವೇಷಕ್ಕೆ ವಿಷಪ್ರಾಶನ..?

    ಸಾವಿನ ಪ್ರಸಾದಕ್ಕೆ ತಮಿಳುನಾಡು ನಂಟು- ಆದಾಯ ಬರ್ತಿದ್ದನ್ನು ಕಂಡು ದ್ವೇಷಕ್ಕೆ ವಿಷಪ್ರಾಶನ..?

    ಚಾಮರಾಜನಗರ: ದೇವರ ಪ್ರಸಾದಕ್ಕೆ ವಿಷ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ದೇವಾಲಯದ ನಂಟಿದೆ. ಮಾರಮ್ಮ ದೇವಾಲಯಕ್ಕೆ ಬರುತ್ತಿದ್ದ ಆದಾಯವನ್ನು ಕಂಡು ದ್ವೇಷದಿಂದ ವಿಷಪ್ರಾಶನ ಮಾಡಲಾಗಿದೆ ಎಂದು ಪೊಲೀಸರ ವಶದಲ್ಲಿರುವ ಶಂಕಿತ ಆರೋಪಿ ಚಿನ್ನಪ್ಪ ಪುತ್ರ ಲೋಕೇಶ್ ಆರೋಪಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಲೋಕೇಶ್, ತಮಿಳುನಾಡಿನ ಬ್ರಹ್ಮೇಶ್ವರಿ ದೇವಾಲಯದ ಕಾಳಪ್ಪನವರಿಗೂ ನಮ್ಮ ತಂದೆಗೂ ಆಗುತ್ತಿರಲಿಲ್ಲ. ಮೊದಲು ತಮಿಳುನಾಡಿನ ಅರ್ಚಕರು ದೇವಾಲಯದ ಪೂಜೆ ಮಾಡುತ್ತಿದ್ದರು. ಆದರೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದ ಕಾರಣ ದೇವಾಲಯದ ಟ್ರಸ್ಟಿ ಆಗಿದ್ದ ನಮ್ಮ ತಂದೆ ಹಾಗೂ ಗ್ರಾಮಸ್ಥರು ಜವಾಬ್ದಾರಿಯನ್ನು ವಹಿಸಿಕೊಂಡರು. ಇದರಿಂದ ಅವರಿಗೆ ದೇವಾಲಯ ಕೈ ತಪ್ಪಿತ್ತು. ಈ ಹಿಂದೆ ಕೂಡ ಸುಮಾರು 1 ಸಾವಿರ ಜನ ಗ್ರಾಮಕ್ಕೆ ಆಗಮಿಸಿ ಜಗಳ ಮಾಡಿದ್ದರು. ಆದರೆ ನಮ್ಮ ಗ್ರಾಮಸ್ಥರು ಊರಿನ ದೇವಾಲಯ ಎಂದು ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಿಂದಿರುಗಿದ್ದರು ಎಂದು ತಿಳಿಸಿದರು.

    ನಮ್ಮ ತಂದೆ ಚಿನ್ನಪ್ಪ ದೇವಾಲಯದ ಜವಾಬ್ದಾರಿ ವಹಿಸಿದ್ದರು, ದೇವಾಲಯವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಯಿತು. ಇದರಿಂದ ದೇವಾಲಯದ ಆದಾಯದ ಹೆಚ್ಚಾಗುವ ನಿರೀಕ್ಷೆ ಇತ್ತು. ಇದನ್ನು ಸಹಿಸಲಾದ ಮಂದಿ ಈಗ ನಮ್ಮನ್ನು ಕೊಲೆ ಮಾಡಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದೇವರ ಪ್ರಸಾದವನ್ನು ಭಕ್ತರಿಗೆ ನೀಡಲು ಮಾಡಿರಲಿಲ್ಲ. ಕೇವಲ ನಮಗಾಗಿ ಸಣ್ಣ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಓಂ ಶಕ್ತಿ ಭಕ್ತರು ಬೇರೆ ದೇವಾಲಯಕ್ಕೆ ಹೋಗುವ ಹಿನ್ನೆಲೆಯಲ್ಲಿ ಪ್ರಸಾದ ಕೇಳಿದ್ದರು. ಆದ್ದರಿಂದಲೇ ನಮಗೆ ಮಾಡಿದ್ದ ಪ್ರಸಾದ ಅವರಿಗೆ ನೀಡಲಾಯಿತು ಎಂದು ಸ್ಪಷ್ಟನೆ ನೀಡಿದರು.

    ಒಂದೊಮ್ಮೆ ಭಕ್ತರು ಪ್ರಸಾದ ಸೇವನೆ ಮಾಡದೇ ಇದ್ದಿದ್ದರೆ ದೇವಾಲಯದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಮಾತ್ರ ಪ್ರಸಾದ ಸೇವಿಸಿ ಸಾವನ್ನಪ್ಪುತ್ತಿದ್ದರು. ಆದರೆ ಈ ಕುತಂತ್ರಕ್ಕೆ ಭಕ್ತರು ಬಲಿಯಾಗಿದ್ದಾರೆ. ಈ ಹಿಂದೆ ಗ್ರಾಮಕ್ಕೆ ಬಂದ ವೇಳೆಯೂ ನಮಗೇ ದೇವಾಲಯ ನೀಡಬೇಕು ಎಂದು ತಮಿಳುನಾಡು ದೇವಾಲಯದ ಮಂದಿ ಎಚ್ಚರಿಕೆ ನೀಡಿದ್ದರು. ಆಗ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ರೆ ಈ ರೀತಿ ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಊಹೆಯೂ ನಮಗೆ ಇಲ್ಲ. ಪ್ರಸಾದ ತಯಾರು ಮಾಡಿದ ಅರ್ಚಕರ ಅಂಗವಿಕಲ ಪುತ್ರಿ, ನಮ್ಮ ಸಂಬಂಧಿಯೊಬ್ಬರು ಕೂಡ ಮೃತ ಪಟ್ಟಿದ್ದಾರೆ. ಪ್ರಸಾದ ತಯಾರು ಮಾಡಿದವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಆದರೆ ಪೊಲೀಸ್ ಠಾಣೆಯಲ್ಲೇ ಅವರು ಕೂಡ ವಾಂತಿ ಮಾಡಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

    ದೇವಾಲಯದ ಅಭಿವೃದ್ಧಿ ಮಾಡಿದ ಹಿನ್ನೆಲೆಯಲ್ಲಿ ದೇವಿ ಮಾರಮ್ಮ ನಮ್ಮ ರಕ್ಷಣೆ ಮಾಡಿದೆ. ಆದರೆ ಭಕ್ತರು ಬಂದು ಆಹಾರ ಕೇಳದಿದ್ದರೆ ನಾವು, ನಮ್ಮ ಗ್ರಾಮಸ್ಥರು ಸಾವನ್ನಪ್ಪುತ್ತಿದ್ದೆವು. ಸದ್ಯ ನಮ್ಮ ತಂದೆ ಪೊಲೀಸರ ವಶದಲ್ಲಿ ಇದ್ದು, ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಆದರೆ ಪೊಲೀಸರೇ ನಮಗೆ ಕರೆ ಮಾಡಿ ಬಂಧನ ಮಾಡಬೇಕೆಂದು ಹೇಳಿದ್ದರು. ಆದರೆ ನಾನೇ ಪೊಲೀಸರಿಗೆ ಮಾಹಿತಿ ನೀಡಿ ನೇರ ಠಾಣೆಗೆ ಬರುವುದಾಗಿ ತಿಳಿಸಿ ಕಳುಹಿಸಿದ್ದೇವೆ. ಅಲ್ಲದೇ ದೇವಾಲಯದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರ ಕಡೆಯವರು ಯಾರು ಬಂದ ಹಾಗೇ ಕಾಣಲಿಲ್ಲ. ದೇವಾಲಯದ ಪೂಜೆ ಕಾರ್ಯ ನಡೆದ ಕಾರಣ ಈ ಕುರಿತು ಹೆಚ್ಚಿನ ಗಮನಹರಿಸಲು ಸಾಧ್ಯವಾಗಿಲ್ಲ. ಈ ಕುರಿತು ತನಿಖೆ ನಡೆಸಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.

    https://www.youtube.com/watch?v=pU5B9V-A7NA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಕೇಳಿಕೊಂಡು ಹೋದರೆ ಲಂಚ ಕೇಳುತ್ತಾರೆ ಇಲ್ಲ ಅಂದರೆ ಮಂಚಕ್ಕೆ ಕರೀತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ರೈತರ ಸಾಲಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮಹಿಳೆ ಸಿಎಂ ಬಳಿ ತಮ್ಮ ಅಳಲು ತೋಡಿಕೊಳ್ಳಲು ಪ್ರಯತ್ನಿಸಿದರು. ಸಿಎಂ ಅವರಿಗೆ ತಮ್ಮ ಮನವಿ ತಿಳಿಸಲು ತೆರಳಿದ್ದ ವೇಳೆ ಮಧ್ಯ ಪ್ರವೇಶಿದ ಪೊಲೀಸರು ಮಹಿಳೆಯನ್ನು ಕಾರ್ಯಕ್ರಮ ಸ್ಥಳದಿಂದ ಹೊರ ಕರೆತಂದರು.

    ದೊಡ್ಡಬಳ್ಳಾಪುರ ನಗರ ಶಾಂತಿ ನಗರದ ನಿವಾಸಿಯಾದ ಛಾಯಾ ಅವರು ಸಿಎಂ ಬಳಿ ತಮ್ಮ ಸಮಸ್ಯೆ ಮುಂದಿಟ್ಟು ಸಹಾಯ ಕೇಳಲು ಪ್ರಯತ್ನಿಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ನನ್ನ ಪತಿ ಅಪಘಾತವೊಂದರಲ್ಲಿ ಕೈ ಮುರಿದುಕೊಂಡು ಅಂಗವಿಕಲರಾಗಿದ್ದರು. ಈ ವೇಳೆ ಕುಟುಂಬವನ್ನು ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ನನಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಶಿಕ್ಷಣ ಕೊಡಿಸಲು ಕೂಡ ನನಗೆ ಕಷ್ಟವಾಗಿದೆ ಎಂದರು.

    ಸ್ವಾಭಿಮಾನದಿಂದ ಬದಲು ಬಯಸಿ ಸರ್ಕಾರದ ಯೋಜನೆಗಳ ಸಹಾಯ ಪಡೆಯಲು ತೆರಳಿದರೆ ಲಂಚ ಕೇಳುತ್ತಾರೆ. ಹಣ ಇಲ್ಲ ಎಂದರೆ ನೀನೇ ಬಾ ಎಂದು ಕರೆಯುತ್ತಾರೆ ಎಂದು ಎಂದು ಹೇಳಿ ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv