Tag: ಆರೋಪ

  • ಗ್ರಾ.ಪಂ ಚುಕ್ಕಾಣಿಗೆ ಜೆಡಿಎಸ್‍ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ?

    ಗ್ರಾ.ಪಂ ಚುಕ್ಕಾಣಿಗೆ ಜೆಡಿಎಸ್‍ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ?

    – ಜೆಡಿಎಸ್ ಶಾಸಕರ ಮೇಲೆ ಗಂಭೀರ ಆರೋಪ

    ಮಂಡ್ಯ: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುಕ್ಕಾಣಿ ಹಿಡಿಯಲು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಖಾಲಿ ಚೆಕ್ ಅಸ್ತ್ರವನ್ನು ಪ್ರಯೋಗ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

    ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯ ಚುಕ್ಕಾಣಿಯನ್ನು ಜೆಡಿಎಸ್ ಪಡೆಯಲು ಬೇರೆ ಪಕ್ಷದ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯರ ಬಳಿ ಶಾಸಕ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಇದ್ದ ಗ್ರಾಮಪಂಚಾಯತಿ ಸದಸ್ಯರು ಇದೀಗ ಜೆಡಿಎಸ್ ಸೇರಲು ಮದ್ದೂರು ಕ್ಷೇತ್ರದಲ್ಲಿ ಮುಂದಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಬೇರೆ ಕ್ಷೇತ್ರದಿಂದ ಜೆಡಿಎಸ್‍ಗೆ ಬಂದ ಸದಸ್ಯರ ಬಳಿ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡು ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಬೆಂಬಲಿಸುವಂತೆ ಸೇರ್ಪಡೆಗೊಂಡಿರುವ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

    ಶಾಸಕ ಡಿ.ಸಿ.ತಮ್ಮಣ್ಣ ಅವರು ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಳ್ಳುವುದು ಮತ್ತು ಅವರನ್ನು ಜೆಡಿಎಸ್‍ಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದೆ.

  • ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ – ಆರೋಪ ತಳ್ಳಿ ಹಾಕಿದ ಸಿಎಂ ಪುತ್ರ

    ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ – ಆರೋಪ ತಳ್ಳಿ ಹಾಕಿದ ಸಿಎಂ ಪುತ್ರ

    ಬೆಂಗಳೂರು: ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ 5 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಿತ್ತು. ಈ ಆರೋಪವನ್ನು ಸಿಎಂ ಪುತ್ರ ತಳ್ಳಿ ಹಾಕಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ 5 ಸಾವಿಕ ಕೋಟಿ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಿ ಪತ್ರವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ವಿಜಯೇಂದ್ರ, ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಜಯೇಂದ್ರ, ಕಟ್ಟು ಕಥೆ ಕಟ್ಟುವುದರಲ್ಲಿ, ಹಸಿ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಟೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶ ಪೂರಿತ, ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು ಎಂದು ಕಿಡಿಕಾರಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದರು.

    ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದರು.

  • ನೀವು ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್: ನಳಿನ್ ವ್ಯಂಗ್ಯ

    ನೀವು ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್: ನಳಿನ್ ವ್ಯಂಗ್ಯ

    ಹಾಸನ: ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

    ಹಾಸನದ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‍ನ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆಡಳಿತದಲ್ಲಿ ತಪ್ಪಿದ್ರೆ ವಿಧಾನಸೌಧದಲ್ಲಿ ಬಂದು ಗಲಾಟೆ ಮಾಡಿ. ನಿಮಗೆ ಹಕ್ಕಿದೆ. ಬಹಳ ಪುರಾತನ ಇತಿಹಾಸ ಇರುವ ರಾಜಕೀಯ ಪಕ್ಷವಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಜನರಿಗೆ ಭಯ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯ, ರಾಷ್ಟ್ರವನ್ನು ಸುದೀರ್ಘವಾಗಿ ಆಡಳಿತ ಮಾಡಿ ವೆಂಟಿಲೇಟರ್ ಇಲ್ಲ ಸೌಲಭ್ಯ ಇಲ್ಲ ಅಂತಾರೆ. ಇಂದಿನ ಈ ಸ್ಥಿತಿಗೆ ನೀವೆ ಕಾರಣ. ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು ಎಲ್ಲಿ ಹೋದವು. ನಿಮ್ಮ ಆಡಳಿತದ ಕಾಲದಲ್ಲಿ ಡೆಂಗ್ಯೂ, ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದಿರಾ ಕ್ಯಾಂಟೀನ್‍ನಲ್ಲಿ ಏನೆಲ್ಲಾ ಮೋಸ ಆಗಿದೆ ಲೆಕ್ಕ ಕೊಡಿ. ನಿಮ್ಮ ಕಾಲದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

    ಪ್ರಜಾಪ್ರಭುತ್ವದ ಕಗ್ಗೊಲೆ ಅಂತೀರಿ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದವರು ಇಂದಿರಾ ಗಾಂಧಿ. ಎಮರ್ಜೆನ್ಸಿ ತಂದವರು, ದೇಶವನ್ನು ಪೂರ್ತಿಯಾಗಿ ಜೈಲಲ್ಲಿ ಇಟ್ಟವರು ನೀವು ತಾನೆ. 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಹುಮತ ಪಡೆದ ಪಕ್ಷವನ್ನು ಕಿತ್ತು ಒಗೆದಿದ್ರಿ. ಜನತಾದಳದ ಶಾಸಕರನ್ನು ನೀವೇ ಅಲ್ಲವೆ ತೆಗೆದಿಕೊಂಡಿದ್ದು. ನೀವು ಅಧಿಕಾರ ಹೇಗೆ ಬೇಕಾದರೂ ನಡೆಸಬಹುದು. ನಿಮ್ಮ ಆಡಳಿತ ಸರಿಯಿಲ್ಲ ಎಂದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರೆ ನಮ್ಮ ಆಡಳಿತ ಸರಿಯಿಲ್ಲ ಎನ್ನುತ್ತೀರಾ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಆರೋಪಕ್ಕೆ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

  • ಕಾರ್ಮಿಕರ ಕಿಟ್ ದುರುಪಯೋಗ- ಕಲಘಟಗಿ ಶಾಸಕರ ವಿರುದ್ಧ ಆರೋಪ

    ಕಾರ್ಮಿಕರ ಕಿಟ್ ದುರುಪಯೋಗ- ಕಲಘಟಗಿ ಶಾಸಕರ ವಿರುದ್ಧ ಆರೋಪ

    – ಕಾರ್ಮಿಕ ಸಚಿವರಿಗೆ ಕೈ ನಾಯಕರಿಂದ ದೂರು

    ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಕಲಘಟಗಿ ಬಿಜೆಪಿ ಶಾಸಕರ ಕಚೇರಿಯಲ್ಲಿಯೇ ಉಳಿದುಕೊಂಡಿದೆ. ಅಲ್ಲದೆ ಕಾರ್ಮಿಕರಿಗೆ ಬಿಟ್ಟು ಶಾಸಕ ಸಿ.ಎಂ ನಿಂಬಣ್ಣವರ ಅವರು ಬಿಜೆಪಿ ಕಾರ್ಯಕರ್ತರಿಗೆ ಕಿಟ್ ಕೊಡುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ.

    ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರಿಂದ ಕಿಟ್ ದುರ್ಬಳಕೆ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆ ನೀಡುವ ಕಿಟ್‍ಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.

    ಲಾಕ್ ಡೌನ್‍ನಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ದಿನಬಳಕೆಯ ಕಿಟ್‍ಗಳನ್ನ ಸರ್ಕಾರ ನೀಡಿದ್ದು, ಆದರೆ ಶಾಸಕರು ಕಾರ್ಮಿಕರ ಕಿಟ್‍ಗಳನ್ನ ಬಿಜೆಪಿ ಕಾರ್ಯಕರ್ತರಿಗೆ ಹಂಚುತ್ತಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿರಬೇಕಾದ ಕಿಟ್‍ಗಳನ್ನು ಶಾಸಕರ ಕಚೇರಿಯಲ್ಲಿ ಇಟ್ಟಿರುವುದು ಯಾಕೆ ಎಂಬುವುದು ಕಾಂಗ್ರೆಸ್ ಮುಖಂಡರ ಪ್ರಶ್ನೆಯಾಗಿದೆ.

    ಕಾಂಗ್ರೆಸ್ ಮುಖಂಡರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

  • ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ಆದೇಶ ನೀಡಿದೆ. ಆದರೆ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ 30 ಕೆಜಿ ಅಕ್ಕಿ ನೀಡಬೇಕಾಗಿದ್ದ ಅಳತೆಯಲ್ಲಿ 25 ಕೆಜಿ ನೀಡುತ್ತಿದ್ದು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಸಂದ್ರ, ಕದಿರನ್ನಾಗಾರಪಲ್ಲಿ, ಊಗಲನಾಗೇಪಲ್ಲಿ ಗ್ರಾಮಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.

    ಈ ರೀತಿ ಪ್ರತಿಯೊಬ್ಬರಿಗೂ 1 ಕೆಜಿ, 2 ಕೆಜಿ, ಮತ್ತು 3 ಕೆಜಿ ತೂಕದಲ್ಲಿ ಕಡಿತ ಮಾಡಿ ಕಡಿಮೆ ನೀಡುತ್ತಿದ್ದರೆ. ಇದೇ ರೀತಿ ಮಾಲೀಕ ಉಳಿತಾಯ ಮಾಡಿ ಲಾಭಗಳಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಮಾಲೀಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಇನ್ನು ಮುಂದೆ ಈ ರೀತಿ ನಡೆಯದಂತೆ ನಮಗೆ ಸೂಕ್ತ ನ್ಯಾಯಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ಧಾರವಾಡ: ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗುಂಡಾ, ಅಯೋಗ್ಯ ಆಗಿದ್ದರೆ ಅದನ್ನ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ. ಆರೋಪವನ್ನ ಸಾಬೀತು ಮಾಡಿದರೇ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲ್ ಹಾಕಿದ್ದಾರೆ.

    ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಭಕ್ತರ ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರು ಸಭೆ ಮಾಡುತ್ತಿದ್ದೇನೆ ಎಂದರು. ನಾನು ಮೂರುಸಾವಿರ ಮಠದ ಜಗದ್ಗುರುಗಳನ್ನು ಭೇಟಿ ಮಾಡುತ್ತೇನೆ. ನಾವು ಮಠಕ್ಕೆ ಸ್ವಾಮೀಜಿಯಾಗಲು ಖಾವಿಧಾರಿಯಾಗಿಲ್ಲ, ಸಮಾಜಕ್ಕಾಗಿ ನಾವು ಖಾವಿಧಾರಿಯಾಗಿದ್ದೇವೆ. ಸ್ವಾಮೀತ್ವಕ್ಕೆ ಮಠವೇ ಬೇಕಾಗಿಲ್ಲ. ಆದರೆ ಈಗ ನನ್ನ ಗೌರವದ ಪ್ರಶ್ನೆ ಬಂದಿದೆ ಹೀಗಾಗಿ ನಾನು ಮುಂದೆ ಬಂದಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೂ ಮತ್ತು ಮೂರುಸಾವಿರ ಮಠ ಜಗದ್ಗುಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗುರು ನಾನು ಶಿಷ್ಯ. ಆದರೆ ಕೆಲವರು ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟಿದ್ದಾರೆ. ಕೆಲವರ ರಾಜಕೀಯದಿಂದ ಹೀಗಾಗಿದೆ. ಅವರನ್ನು ಮಠದಿಂದ ದೂರ ಮಾಡಲು ಈಗ ಹೋರಾಟ ನಡೆದಿದೆ ಎಂದು ಕಿಡಿಕಾರಿದರು.

    ನನ್ನ ಉತ್ತರಾಧಿಕಾರಿ ಪತ್ರ ಆದ ನಂತರದಲ್ಲಿ ಉಳಿದ ಚಟುವಟಿಕೆಗಳು ನಡೆದಿವೆ. ದಿಂಗಾಲೇಶ್ವರ ಸ್ವಾಮೀಜಿ ಬರಬೇಕು ಎಂದು ಭಕ್ತರು ಬಯಸಿದ್ದಾರೆ. ಆದರೆ ಕೆಲವರು ದಿಂಗಾಲೇಶ್ವರ ಸ್ವಾಮೀಜಿ ಬರಬಾರದು ಎಂದು ಕೆಟ್ಟ ಪ್ರಯತ್ನ ಮಾಡಿದ್ದಾರೆ. ನಾನು ಮಠಕ್ಕೆ ಅನ್ಯಾಯ ಮಾಡಿದ್ದರೆ, ದ್ರೋಹ ಮಾಡಿದ್ದರೆ ಸಾಬೀತು ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರ. ಹಾಗೆಯೇ ಮಠದಲ್ಲಿ ರಾಜಕೀಯ ಮಾಡುವವರನ್ನ ದೂರ ಮಾಡುತ್ತೇನೆ ಎಂದು ಸ್ವಾಮೀಜಿ ಹರಿಹಾಯ್ದರು.

  • ಡಿಕೆಶಿ ವಿರುದ್ಧ ಇಡಿಯಿಂದ ಹೊಸ ಆರೋಪ – ಕಾನೂನು ಹೋರಾಟ ಮುಂದುವರಿಸ್ತೇವೆ ಎಂದ್ರು ಡಿಕೆ ಸುರೇಶ್

    ಡಿಕೆಶಿ ವಿರುದ್ಧ ಇಡಿಯಿಂದ ಹೊಸ ಆರೋಪ – ಕಾನೂನು ಹೋರಾಟ ಮುಂದುವರಿಸ್ತೇವೆ ಎಂದ್ರು ಡಿಕೆ ಸುರೇಶ್

    ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ಹೊಸ ಆರೋಪ ಮಾಡಿದ್ದು, 20 ದೇಶಗಳಲ್ಲಿ ವಿವಿಧ ಅಕೌಂಟ್ ಗಳ ಮೂಲಕ ಡಿಕೆಶಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಇಡಿ ಹೇಳಿದೆ.

    ಇಂದು ಇಡಿ ಕಸ್ಟಡಿಯ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಈ ವೇಳೆ ಅಧಿಕಾರಿಗಳು ವಿಚಾರಣೆಗಾಗಿ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಮಾಡಲು ಮನವಿ ಮಾಡಿದ್ದರು. ನ್ಯಾಯಾಲಯ ಸೆ.17ರ ವರೆಗೂ ಕಸ್ಟಡಿಗೆ ನೀಡಿತು.

    ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಇಡಿ ಪರ ವಕೀಲರು ಡಿಕೆಶಿ ಅವರ ವಿರುದ್ಧ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. 20 ದೇಶಗಳಲ್ಲಿ ಡಿಕೆ ಶಿವಕುಮಾರ್ ಅವರು 317 ಅಕೌಂಟ್ ಹೊಂದಿದ್ದು, 200 ಕೋಟಿ ರೂ. ಕಪ್ಪು ಹಣ ಚಲಾವಣೆಯಾಗಿದೆ. 800 ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

    ನ್ಯಾಯಾಲಯದ ಆದೇಶದ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಇದುವರೆಗೂ ಡಿಕೆ ಶಿವಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿರುವ ಆಸ್ತಿ ವಿವರಗಳನ್ನೇ ಮುಂದಿಟ್ಟು ಆರೋಪ ಮಾಡಿದ್ದಾರೆ. ಆ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

    ಇದೇ ವೇಳೆ 317 ಖಾತೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗ ಅವರು ಅಷ್ಟು ಖಾತೆಗಳಲ್ಲಿ ಇರುವ ಹಣವನ್ನು ನೀಡಿದರೆ ಸಂತೋಷ ಪಡುತ್ತೇವೆ ಎಂದು ಆರೋಪಗಳ ವಿರುದ್ಧ ವ್ಯಂಗ್ಯವಾಡಿದರು.

    ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಲಾಗುತಿದೆ. ಆದ್ದರಿಂದಲೇ ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ಒತ್ತಡಕ್ಕೆ ಒಳಗಾಗಿ ಈ ರೀತಿ ಮಾಡಲಾಗುತ್ತಿದೆ. ಯಾರದ್ದೋ ಆಸ್ತಿ ಹೊಂದಿದ್ದರೆ ಅದನ್ನು ನಮ್ಮದೇ ಎಂದು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಕಾನೂನಿನ ಮೇಲೆ ಗೌರವ ಇದ್ದು, ಕಾನೂನು ಹೋರಾಟ ಮುಂದುವರಿಸುವ ಮೂಲಕ ಜಯ ಪಡೆಯುತ್ತೇವೆ. ಡಿಕೆ ಶಿವಕುಮಾರ್ ಕೂಡ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದು, ಈ ಹೋರಾಟದಲ್ಲಿ ಗೆದ್ದು ಬರುವುದಾಗಿ ಹೇಳಿದ್ದಾರೆ. ಆದ್ದರಿಂದ ಯಾರು ದೆಹಲಿಗೆ ಬರುವ ಪ್ರಯತ್ನವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

  • ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

    ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

    ಬೆಂಗಳೂರು: ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಅವರ ಪುತ್ರ ಸಂಸದ ವಿಜಯೇಂದ್ರ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ವರ್ಗಾವಣೆ ದಂಧೆ ಮಾಡಲು ಯಡಿಯೂರಪ್ಪ ಸ್ವತಃ ತಮ್ಮ ಸುಪುತ್ರನನ್ನೇ ಬಿಟ್ಟಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ಕೊಟ್ಟಿರುವ ಅವರು ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರಸ್ವಾಮಿಯವರೇ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ. ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದೇನು?
    ಭಾನುವಾರ ಉಡುಪಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಆದರೆ ಯಲಹಂಕ ತಹಶೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು ಹೇಳಿ. ನಮಗೆ ವರ್ಗಾವಣೆ ಲೂಟಿ ಅಂತೀರಿ, ನೀವೇನು ಮಾಡುತ್ತಿದ್ದೀರಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪನವರು ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

  • ಸತತ 7 ಗಂಟೆ ಥಳಿಸಿ `ಜೈ ಶ್ರೀರಾಮ್’ ಹೇಳುವಂತೆ ಒತ್ತಾಯ- ಯುವಕ ದುರ್ಮರಣ

    ಸತತ 7 ಗಂಟೆ ಥಳಿಸಿ `ಜೈ ಶ್ರೀರಾಮ್’ ಹೇಳುವಂತೆ ಒತ್ತಾಯ- ಯುವಕ ದುರ್ಮರಣ

    ಜೆಮ್‍ಶೆಡ್‍ಪುರ: ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.

    ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್‍ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ `ಶ್ರೀರಾಮ್’, `ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ ಆತನನ್ನು ಸಾರ್ವಜನಿಕರು ಪೊಲೀಸರ ಕೈಗೆ ನೀಡಿದ್ದಾರೆ. ಈ ವೇಳೆ ಥಳಿತಕ್ಕೊಳಗಾದ ಶಾಮ್ಸ್ ಅರೆ ಪ್ರಜ್ಞಾವಸ್ಥೆಯಲ್ಲಿದ್ದನು ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

    ಯುವಕನಿಗೆ ಥಳಿಸುತ್ತಿರುವ ದೃಶ್ಯವನ್ನು ಇತರರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಳಿತಕ್ಕೊಳಗಾದ ಶಾಮ್ಸ್ ಗೆ ಚಿಕಿತ್ಸೆ ನೀಡಲು ಕರೆದೊಯ್ಯುತ್ತೇವೆ ಎಂದು ಬೇಡಿಕೊಂಡರೂ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.

    ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಅಲ್ಲಿಯೂ ಆತನ ಸ್ಥಿತಿ ಚಿಂತಾನಕವಾಗುತ್ತಿದ್ದಂತೆಯೇ ಯುವಕನನ್ನು ಜಿಲ್ಲೆಯ ಸದಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಯುವಕ ಮೃತಪಟ್ಟಿರುವ ವಿಚಾರವನ್ನು ಕುಟುಂಬಸ್ಥರು ಅಲ್ಲಗೆಳೆದಿದ್ದಾರೆ. ಹೀಗಾಗಿ ಆತನನ್ನು ಜೆಮ್ ಶೆಡ್ ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದಾರೆ. ಅಂತೆಯೇ ಅಲ್ಲಿಗೆ ಕರೆದೊಯ್ದಾಗಲೂ ವೈದ್ಯರು, ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಶಾಮ್ಸ್ ಅನಾರೋಗ್ಯದಿಂದ ಬಳಲುತ್ತಿದ್ದನು. ಹೀಗಾಗಿ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಆತನ ಕುಟುಂಬಸ್ಥರು ನೀಡಿದ ದೂರಿನಂತೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಮ್ಸ್ ಜೆಮ್‍ಶೆಡ್ ಪುರದಿಂದ ಕರ್‍ಸೋವಾದಲ್ಲಿರುವ ತಮ್ಮ ಮನೆಗೆ ಮಂಗಳವಾರ ವಾಪಸ್ಸಾಗುತ್ತಿದ್ದನು. ಈ ವೇಳೆ ಶಾಮ್ಸ್ ಜೊತೆ ಆತನ ಸ್ನೇಹಿತರು ಕೂಡ ಇದ್ದರು. ಇನ್ನೇನು ತನ್ನ ಮನೆಗೆ 5 ಕಿ.ಮೀ ಇರುವಾಗಲೇ ಸಾರ್ವಜನಿಕರು ಇವರನ್ನು ಹಿಡಿದು ಥಳಿಸಿದ್ದಾರೆ.

    ಥಳಿಸಲು ಕಾರಣವೇನು?
    ಸೈಕಲ್ ಕಳವಾಗಿದ್ದ ಸಂದರ್ಭದಲ್ಲೇ ಈ ಯುವಕರು ಅದೇ ಸ್ಥಳದಲ್ಲಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಇವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು, ಯುವಕರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಯುವಕರ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಶಾಮ್ಸ್ ಜೊತೆ ಇದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಈತ ಮಾತ್ರ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡಿದ್ದನು ಎಂದು ಶಾಮ್ಸ್ ಸಂಬಂಧಿಕರು ಘಟನೆ ಬಗ್ಗೆ ವಿವರಿಸಿದ್ದಾರೆ.

    ಇಡೀ ರಾತ್ರಿ ಸಾರ್ವಜನಿಕರು ನನಗೆ ಚೆನ್ನಾಗಿ ಥಳಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಬೆಳಗ್ಗೆ ಪೊಲೀಸರಿಗೆ ನನ್ನನ್ನು ಹಸ್ತಾಂತರಿಸಿದ್ದಾರೆ ಎಂದು ಶಾಮ್ಸ್ ಸಾಯುವ ಮೊದಲು ಸಾರ್ವಜನಿಕರ ಮೇಲೆ ಆರೋಪ ಮಾಡಿದ್ದಾನೆ.

    ನನ್ನನ್ನು ನೋಡಲೆಂದು ಸಹೋದರ ಪೊಲೀಸ್ ಠಾಣೆ ಬಂದಿದ್ದನು. ಈ ವೇಳೆ ಪೊಲೀಸ್ ಅಧಿಕಾರಿಗಳು ಆತನನ್ನು ಬೆದರಿಸಿ, ಲಾಠಿಯಿಂದ ಹೊಡೆದು ಹೊರದಬ್ಬಿದ್ದಾರೆ. ನೀನು ಒಬ್ಬ ಕಳ್ಳನನ್ನು ನೋಡಲು ಠಾಣೆಗೆ ಬಂದಿದ್ದೀಯಾ ಎಂದು ಬೈದಿದ್ದಾರೆ. ಅಲ್ಲದೆ ನಿನ್ನನ್ನು ಕೂಡ ಜೈಲಿಗೆ ಹಾಕುತ್ತೇವೆ. ನಾವು ಆರೋಪಿಯನ್ನು ಮಾತನಾಡಿಸಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲ್ಲ ಎಂದು ಸಹೋದರನ ಮೇಲೆ ಕಿಡಿಕಾರಿದ್ದಾರೆ ಎಂದು ಶಾಮ್ಸ್ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಆಸ್ಪತ್ರೆಯಲ್ಲಿರುವಾಗ ತಿಳಿಸಿದ್ದಾನೆ.

     ಶಾಮ್ಸ್ ನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿರುವ ಬಗ್ಗೆ ನಮಗೆ ತಿಳಿಸಿಲ್ಲ. ಹೀಗಾಗಿ ಆತನ ರಾತ್ರಿಯೇ ಮೃತಪಟ್ಟಿರಬೇಕೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿದ್ದ ಎಲ್ಲಾ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಹಾಗೆಯೇ ಮಗನಿಗೆ ಥಳಿಸಿದ ಎಲ್ಲಾ ಸಾರ್ವಜನಿಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಶಾಮ್ಸ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನನ್ನ ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಟ್ರಂಪ್ ವಿರುದ್ಧ ಮಹಿಳೆ ಆರೋಪ

    ನನ್ನ ಒಳ ಉಡುಪಿಗೆ ಕೈ ಹಾಕಿ ಲೈಂಗಿಕ ದೌರ್ಜನ್ಯ: ಟ್ರಂಪ್ ವಿರುದ್ಧ ಮಹಿಳೆ ಆರೋಪ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ನಿಯತಕಾಲಿಕೆಯ ಲೇಖಕಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

    ಮ್ಯಾನ್‍ಹಟನ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ತನ್ನ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 75 ವರ್ಷದ ಇ ಜೀನ್ ಕ್ಯಾರೋಲ್ 1995-96 ರಲ್ಲಿ ಮ್ಯಾನ್‍ಹಟನ್‍ನ ಬರ್ಗ್‍ಡ್ರಾಫ್ ಅಂಗಡಿಯಲ್ಲಿ ನಡೆದಿರುವ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ಆಗ ಟ್ರಂಪ್‍ಗೆ 40-50 ವರ್ಷ ಆಗಿರಬಹುದು. 49-50 ವಯಸ್ಸಿನ ನನ್ನನ್ನು, ತನ್ನ ಸ್ನೇಹಿತೆಗೆ ಯಾವ ಉಡುಗೊರೆ ನೀಡಬಹುದು ಎಂದು ಕೇಳಿದ್ದರು. ಅದಕ್ಕೆ ನಾನು ಬೂದು ಬಣ್ಣದ ಲೇಸಿ ಸೀ-ಬಾಡಿಸೋಟ್‍ನ್ನು ಅಯ್ಕೆ ಮಾಡಿದ್ದೆ. ತದನಂತರ ಅದನ್ನು ನನಗೆ ಕೊಟ್ಟು, ಹೇಗೆ ಕಾಣಿಸುತ್ತದೆಂದು ತೋರಿಸಲು ಆ ಬಟ್ಟೆ ಧರಿಸುವಂತೆ ಒತ್ತಾಯಿಸಿದರು. ಹೀಗಾಗಿ ನಾನು ಆ ಬಟ್ಟೆ ತೆಗೆದುಕೊಂಡು ಟ್ರಯಲ್ ರೂಂ ಗೆ ತೆರಳಿದೆ. ಅಲ್ಲಿಗೆ ಬಂದ ಟ್ರಂಪ್ ನನ್ನ ಮೇಲೆ ಸುಮಾರು 3 ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.

    ನನ್ನ ಎರಡು ತೋಳುಗಳನ್ನು ಬಿಗಿಯಾಗಿ ಹಿಡಿದು ಗೋಡೆ ಕಡೆಗೆ ನನ್ನನ್ನು ತಳ್ಳಿದರು. ನನ್ನ ಒಳ ಉಡುಪಿಗೆ ಕೈ ಹಾಕಿ ಅದನ್ನು ಎಳೆದು ಲೈಂಗಿಕವಾಗಿ ಬಳಸಿಕೊಂಡರು. ನಾನು ಅವರನ್ನು ಬಲವಾಗಿ ತಳ್ಳಿ ಅಲ್ಲಿಂದ ಪರಾರಿಯಾದೆನು ಎಂದು ಆರೋಪಿಸಿ ತಮ್ಮ ನಿಯತಕಾಲಿಯಲ್ಲಿ ಬರೆದಿದ್ದಾರೆ.

    ಇದು ನಡೆದ 25 ವರ್ಷಗಳ ನಂತರ ಹೊರಬಂದಿರುವ ಕಾರಣ ಇದು ಶುದ್ಧ ಸುಳ್ಳು. ಅಧ್ಯಕ್ಷರನ್ನು ಕೆಟ್ಟವರೆಂದು ಬಿಂಬಿಸಲು ಈ ರೀತಿ ಮಾಡಿದ್ದಾರೆ ಶ್ವೇತಭವನದ ವಕ್ತಾರರೊಬ್ಬರು ಮಹಿಳೆಯ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ನಾನು ಈ ಮಹಿಳೆಯನ್ನೂ ಎಂದಿಗೂ ಭೇಟಿಯೇ ಮಾಡಿಲ್ಲ. ಅದಲ್ಲದೆ ಆಕೆ ತಮ್ಮ ನಿಯತಕಾಲಿಕೆಯಲ್ಲಿ ಇದೆಲ್ಲವನ್ನೂ ಬರೆದಿರುವುದು ಪುಸ್ತಕದ ಮಾರಾಟವನ್ನು ಹೆಚ್ಚಿಸಲು ಅಷ್ಟೇ. ಏಕೆ ಅವರ ಬಳಿ ಚಿತ್ರಗಳಿಲ್ಲವೇ, ಸಾಕ್ಷಿಗಳಿಲ್ಲವೆ ಏಕೆ ಅದೆಲ್ಲವನ್ನು ಬರವಣಿಗೆಯಲ್ಲಿ ಗುರುತಿಸಿಲ್ಲ. ಏಕೆಂದರೆ ಈ ಘಟನೆ ಸಂಭವಿಸಿಲ್ಲವೆಂಬುದು ಖಚಿತವಾಗಿದೆ. ನಮ್ಮ ಡೆಮಾಕ್ರಟಿಕ್ ಪಕ್ಷ ನಿಯತಕಾಲಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊಂದಿರುವವರು ಆದಷ್ಟು ಬೇಗ ತಿಳಿಸಿ ಎಂದರು.

    ಈ ಹಿಂದೆಯೂ ಸುಮಾರು 15ಕ್ಕೂ ಹೆಚ್ಚು ಮಹಿಳೆಯರು ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]