ಕೆಜಿಎಫ್ ನಂತರ ಪ್ರಶಾಂತ್ ನೀಲ್ ತೆಲುಗಿಗೆ ಹಾರಿದಾಗಲೇ ಒಂದಷ್ಟು ವಿರೋಧಗಳನ್ನು ಅವರು ಎದುರಿಸಬೇಕಾಯಿತು. ಕನ್ನಡದಲ್ಲೇ ಮೊಲದ ಸಿನಿಮಾ ಮಾಡಿ, ಕನ್ನಡದಲ್ಲೇ ಸಕ್ಸಸ್ ಕಂಡು, ದಿಢೀರ್ ಅಂತ ಬೇರೆ ಭಾಷೆಗೆ ಹೋಗುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಚರ್ಚೆ ಮಾಡಿದರು. ಭಾರತೀಯ ಸಿನಿಮಾ ರಂಗ ಒಂದೇ ಆಗಿರುವಾಗ, ಕನ್ನಡದ ಪ್ರತಿಭೆಯೊಬ್ಬರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವುದು ತಪ್ಪೇನು ಅಂತ ಕೆಲವರು ಪ್ರಶ್ನೆ ಮಾಡಿದರು. ಕೆಲವರು ಇನ್ನಷ್ಟು ಸಿನಿಮಾಗಳನ್ನು ನೀಲ್ ಇಲ್ಲಿಯೇ ಮಾಡಬಹುದಿತ್ತು ಎಂದು ಕಾಮೆಂಟ್ ಮಾಡಿದರು.

ಕೆಜಿಎಫ್ 2 ಮತ್ತೆ ಹಿಟ್ ಆಗುತ್ತಿದ್ದಂತೆಯೇ ಪ್ರಶಾಂತ್ ನೀಲ್ ಮೇಲಿನ ಮುನಿಸನ್ನು ಮರೆತು, ಮತ್ತೆ ಅವರನ್ನು ಗೌರವಿಸಿದರು. ಇದೀಗ ಅದೇ ಪ್ರಶಾಂತ್ ನೀಲ್ ಮೇಲೆ ಮತ್ತೆ ಕೆಲ ಕನ್ನಡಿಗರು ಮುನಿಸಿಕೊಂಡಿದ್ದಾರೆ. ಕಾರಣ ತಮಿಳು ಸಿನಿಮಾ. ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದೇ ಸಮಯದಲ್ಲೇ ಚಾರ್ಲಿ 777 ಸಿನಿಮಾ ಕೂಡ ರಿಲೀಸ್ ಆಗಿ, ಅದಕ್ಕೂ ಕೂಡ ಉತ್ತಮ ಪ್ರತಿಕ್ರಿಯೆ ಫಲಿತಾಂಶ ಸಿಕ್ಕಿದೆ. ಪ್ರಶಾಂತ್ ನೀಲ್ ತಮಿಳಿನ ವಿಕ್ರಮ್ ಸಿನಿಮಾ ಹೊಗಳಿ, ಕನ್ನಡದ ಯಾವ ಚಿತ್ರಗಳ ಬಗ್ಗೆಯೂ ಅವರು ಮಾತನಾಡುವುದಿಲ್ಲ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:Breaking-ಬಿಗ್ ಬಾಸ್ ಸೀಸನ್ 8 ಶೂಟಿಂಗ್ ಶುರು: ಪ್ರೊಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿ

ಕನ್ನಡದ ಹಲವು ಸಿನಿಮಾಗಳು ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸಿನಲ್ಲೂ ಗೆಲ್ಲುತ್ತಿವೆ. ಉತ್ತಮ ಕಂಟೆಂಟ್ ಹೊಂದಿರುವ ಚಿತ್ರ ಎಂಬ ಪ್ರಶಂಸೆಗೂ ಕಾರಣವಾಗುತ್ತಿವೆ. ಬೇರೆ ಬೇರೆ ಸಿನಿಮಾ ರಂಗ ಸಿಲೆಬ್ರಿಟಿಗಳು ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ, ಪ್ರಶಾಂತ್ ನೀಲ್ ಆ ಸಿನಿಮಾಗಳ ಬಗ್ಗೆ ಒಂದೇ ಒಂದು ಮಾತುಗಳನ್ನೂ ಆಡದೇ, ತಮಿಳು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಕನ್ನಡ, ಕನ್ನಡಿಗರ ಮೇಲೆ ಯಾಕೆ ಇಷ್ಟೊಂದು ತಾತ್ಸಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನೆ ಮಾಡಿದ್ದಾರೆ.




























