Tag: ಆರೋನ್ ಪಿಂಚ್

  • ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಕೋಲ್ಕತ್ತಾ: 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ದಿನದ ಹರಾಜು ಪ್ರಕ್ರಿಯೆ ಅಬ್ಬರದಿಂದ ಸಾಗಿದ್ದು, ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ.

    ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 2016 ರಲ್ಲಿ 16 ಕೋಟಿಗೆ ಹರಾಜಾಗಿದ್ದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅತ್ಯಂತ ದುಬಾರಿ ಬೆಲೆಗೆ ಹರಾಜು ಆಗಿದ್ದರು. ಈಗ ಅವರನ್ನು ಬಿಟ್ಟರೆ ಕೆಕೆಆರ್ ತಂಡಕ್ಕೆ 15.5 ಕೋಟಿಗೆ ಈ ಬಾರಿ ಪ್ಯಾಟ್ ಕಮಿನ್ಸ್ ಹರಾಜು ಆಗಿದ್ದಾರೆ. ಕಮಿನ್ಸ್‍ಗಾಗಿ ಆರ್‌ಸಿಬಿ ತಂಡವು ಕೂಡ 14.75 ರ ವರೆಗೂ ಬಿಡ್ ಕೂಗಿದ್ದು, ಅಂತಿಮವಾಗಿ ಕೆಕೆಆರ್ ತಂಡ 15.5 ಕೋಟಿಗೆ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿದೆ.

    ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಇಬ್ಬರು ಆಟಗಾರನ್ನು ಖರೀದಿಸಿದ ಆರ್‌ಸಿಬಿ, ಮೊದಲಿಗೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ಈ ಮೂಲಕ ತನ್ನ ಖಾತೆಯಲ್ಲಿದ್ದ 27.75 ಕೋಟಿ ಹಣದಲ್ಲಿ 14.4 ಕೋಟಿ ಹಣವನ್ನು ಖರ್ಚು ಮಾಡಿದೆ.

    ಡೇಲ್ ಸ್ಟೇನ್ ಆನ್‍ಸೋಲ್ಡ್, ಮ್ಯಾಕ್ಸ್ ವೆಲ್‍ಗೆ 10.75 ಕೋಟಿ
    ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆನ್‍ಸೋಲ್ಡ್ ಆಟಗಾರನಾಗಿ ಉಳಿದಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋಟಿ ಕೊಟ್ಟು ಖರೀದಿ ಮಾಡಿದೆ. ಇಂಗ್ಲೆಂಡ್ ತಂಡದ ಆಟಗಾರ ಕ್ರಿಸ್ ವೋಕ್ಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಲಿನ್‍ಗೆ ಇಲ್ಲ ಬೇಡಿಕೆ, ಹರಾಜಿನಲ್ಲಿ ಮಿಂಚಿದ ಮಾರ್ಗನ್
    ಕಳೆದ ಬಾರಿ ಕೋಲ್ಕತ್ತಾ ತಂಡದಲ್ಲಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಲಿನ್ ಅವರನ್ನು ಆರಂಭಿಕ ಬೆಲೆ 2 ಕೋಟಿ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿದೆ. ಈ ಬಾರಿ ಹರಾಜಿನಲ್ಲಿ ಮಿಂಚಿದ ಇಂಗ್ಲೆಂಡ್ ನಾಯಕ ಮಾರ್ಗನ್ 5.25 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಪಂಜಾಬ್‍ಗೆ ಸಲ್ಯೂಟ್ ಹೊಡೆದ ಯೋಧ ಕಾಟ್ರೆಲ್
    ವೆಸ್ಟ್ ಇಂಡೀಸ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರನ್ನು 8.5 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿದೆ. ಆಸ್ಟ್ರೇಲಿಯನ್ ವೇಗಿ ನೇಥನ್ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 8 ಕೋಟಿ ನೀಡಿ ಖರೀದಿ ಮಾಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾದ ವಿಕೆಟ್‍ಕೀಪರ್ ಬ್ಯಾಟ್ಸ್ ಮನ್ ಅಲಕ್ಸ್ ಕೇರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2.4 ಕೋಟಿ ಕೊಟ್ಟು ಖರೀದಿಸಿದೆ. ಕೇರಿಗಾಗಿ ಆರ್‍ಸಿಬಿ 2.3 ಕೋಟಿ ವರೆಗೆ ಬಿಡ್ಡಿಂಗ್ ಮಾಡಿತ್ತು.

    ತಂಡಕ್ಕೆ ಬೇಕಾದ ಆಟಗಾರರ ಭೇಟೆಯಲ್ಲಿ ಚೆನ್ನೈ
    ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಆಟಗಾರರನ್ನು ಖರೀದಿಸುತ್ತಿರುವ ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವದ ತಂಡ ಚೆನ್ನೈ ಸೂಪರ್ ಕಿಂಗ್ಸ್, ಮೊದಲಿಗೆ ಇಂಗ್ಲೆಂಡ್ ತಂಡದ ಯುವ ಆಲ್ ರೌಂಡರ್ ಆಟಗಾರ ಸ್ಯಾಮ್ ಕರ್ರನ್ ಅವರನ್ನು 5.5 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೇ ಭಾರತದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು 6.75 ಕೋಟಿ ನೀಡಿ ಚೆನ್ನೈ ಖರೀದಿ ಮಾಡಿದೆ.

    ಸನ್ ರೈಸರ್ಸ್ ಪಾಲಾದ ಭಾರತದ ಅಂಡರ್-19 ಕ್ಯಾಪ್ಟನ್ ಗಾರ್ಗ್
    ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ದೇಶಿಯ ಪ್ರತಿಭೆಗಳಾದ ರಾಹುಲ್ ತ್ರಿಪಾಠಿ ಅವರನ್ನು 60 ಲಕ್ಷ ಕೆಕೆಅರ್ ತಂಡ, ದೀಪಕ್ ಹುಡಾ ಅವರನ್ನು 50 ಲಕ್ಷ ನೀಡಿ ಪಂಜಾಬ್ ತಂಡ, ಯಶಸ್ವಿ ಜಸ್ವಾಲ್ ಅವರನ್ನು 2.40 ಕೋಟಿ ನೀಡಿ ರಾಜಸ್ತಾನ್ ರಾಯಲ್ಸ್ ತಂಡ ಮತ್ತು ಜಯ್‍ದೇವ್ ಉನಾದ್ಕಟ್ ಅವರನ್ನು 3 ಕೋಟಿ ರಾಜಸ್ಥಾನ್ ತಂಡ ಖರೀದಿ ಮಾಡಿದೆ.

    ಕನ್ನಡಿಗ ರಾಬಿನ್ ಉತ್ತಪ್ಪ ರಾಜಸ್ಥಾನಕ್ಕೆ
    ಶಿಲ್ಪಾ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡವೂ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು 3 ಕೋಟಿಗೆ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ಕನ್ನಡಿಗನಾದ ಸ್ಟುವರ್ಟ್ ಬಿನ್ನಿ ಹಾಗೂ ಚೇತೇಶ್ವರ್ ಪೂಜಾರ, ಯೂಸಫ್ ಪಠಾಣ್, ಕೆ.ಸಿ ಕಾರಿಯಪ್ಪ ಆನ್‍ಸೋಲ್ಡ್ ಆಗಿ ಉಳಿದಿದ್ದಾರೆ.