Tag: ಆರೋಗ್ಯ ಸೇತು ಆ್ಯಪ್

  • ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರ ಪುನಾರಂಭ-ಕೇಂದ್ರದಿಂದ ಮಾರ್ಗಸೂಚಿ

    ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರ ಪುನಾರಂಭ-ಕೇಂದ್ರದಿಂದ ಮಾರ್ಗಸೂಚಿ

    ನವದೆಹಲಿ: ನಾಲ್ಕನೇ ಹಂತದ ಅನ್‍ಲಾಕ್ ನಲ್ಲಿ ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಏಳು ತಿಂಗಳ ಬಳಿಕ ಲೈನ್ ಗಳನ್ನು ಆಧರಿಸಿ ಹಲವು ಹಂತಗಳಲ್ಲಿ ಸಂಚಾರ ಪುನಾರಂಭಗೊಳ್ಳಲಿದ್ದು ಇದಕ್ಕಾಗಿ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಸೆಪ್ಟೆಂಬರ್ ಏಳರಿಂದ ಮೊದಲ ಹಂತದಲ್ಲಿ ಬೆಂಗಳೂರು, ಚೆನೈ, ನೊಯ್ಡಾ, ಕೊಚ್ಚಿ, ಮುಂಬೈನಲ್ಲಿ ಮೆಟ್ರೋ ಸಂಚಾರ ಪುನಾರಂಭಗೊಳ್ಳಲಿದೆ. ಲೈನ್ ಗಳನ್ನು ಆಧರಿಸಿ ಎರಡು ಅಥವಾ ಮೂರು ಹಂತಗಳಲ್ಲಿ ಮೆಟ್ರೋ ಕಾರ್ಯರಂಭ ಮಾಡಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ್ 12 ರೊಳಗೆ ಪೂರ್ಣ ಪ್ರಮಾಣ ಸೇವೆ ನೀಡಲು ಸೂಚನೆ ನೀಡಿದೆ. ಮೆಟ್ರೋ ಪ್ರಯಾಣ ಪುನಾರಂಭ ಹಿನ್ನೆಲೆ ಪ್ರಯಾಣಿಕರು ಮತ್ತು ಮೆಟ್ರೋ ನಿಗಮ ಮಂಡಳಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಮಾರ್ಗಸೂಚಿಗಳು:
    * ಕಂಟೈನ್‍ಮೆಂಟ್ ಝೋನ್‍ಗಳ ನಿಲ್ದಾಣಗಳಲ್ಲಿ ಮೆಟ್ರೋ ನಿಲುಗಡೆ ಇಲ್ಲ, ಅಲ್ಲಿರುವ ನಿಲ್ದಾಣ ಬಂದ್ ಮಾಡಬೇಕು.
    * ಸಾಮಾಜಿಕ ಅಂತರ ಗುರುತಿಸಲು ನಿಲ್ದಾಣದ ಎಲ್ಲ ಭಾಗದಲ್ಲಿ ಗುರುತುಗಳನ್ನು ಮಾಡಬೇಕು.
    * ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯ.
    * ಮಾಸ್ಕ್ ಇಲ್ಲದೇ ಬರುವ ವ್ಯಕ್ತಿಗಳ ಬಳಿ ಹಣ ಪಡೆದುಕೊಂಡು ಮಾಸ್ಕ್ ಪೂರೈಸಬಹುದು.
    * ನಿಲ್ದಾಣಗಳಿಗೆ ಪ್ರವೇಶಿಸುವ ವ್ಯಕ್ತಿಗಳ ಉಷ್ಣ ತಪಾಸಣೆ ನಡೆಸಬೇಕು. ರೋಗಲಕ್ಷಣವಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು.
    * ರೋಗಲಕ್ಷಣವಿರುವ ವ್ಯಕ್ತಿಗಳಿಗೆ ಪರೀಕ್ಷೆ ಅಥವಾ ವೈದ್ಯಕೀಯ ತಪಾಸನೆಗಾಗಿ ಹತ್ತಿರದ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಹೋಗಲು ಸೂಚಿಸಬೇಕು.
    * ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆಯನ್ನು ಪ್ರೋತ್ಸಾಹಿಸಬೇಕು.
    * ಪ್ರಯಾಣಿಕರಿಗೆ ಬರುವಾಗ ಸ್ಯಾನಿಟೈಸರ್ ಒದಗಿಸಬೇಕು. ರೈಲು ಮತ್ತು ನಿಲ್ದಾಣಗಳು ಮತ್ತು ನಿಲ್ದಾಣ ಒಳಗಿರುವ ಎಲ್ಲ ಉಪಕರಣಗಳು, ಲಿಫ್ಟ್, ಎಸ್ಕಲೇಟರ್ ಗಳು ಮತ್ತು ಶೌಚಾಲಯಗಳನ್ನು ಸ್ಯಾನಿಟೈಸ್ ಮಾಡಬೇಕು.
    * ಸ್ಮಾರ್ಟ್ ಕಾರ್ಡ್ ಬಳಕೆ ಮತ್ತು ನಗದು ರಹಿತ ಆನ್‍ಲೈನ್ ವಹಿವಾಟುಗಳನ್ನು ಪ್ರೋತ್ಸಾಹಿಸಬೇಕು. ಸರಿಯಾಗಿ ಶುಚಿಗೊಳಿಸಿದ ಟೋಕನ್‍ಗಳು ಮತ್ತು ಚೀಟಿಗಳನ್ನು ಬಳಸಬೇಕು.
    * ಮೆಟ್ರೋದಲ್ಲಿರುವ ಡಿಜಿಟಲ್ ಮಾಧ್ಯಮದ ಮೂಲಕ ಜಾಗೃತಿ ಮೂಡಿಸಬೇಕು.

    ಇದಲ್ಲದೇ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ತಪ್ಪಿಸುವ ನಿರ್ಧಾರಗಳನ್ನು ಮೆಟ್ರೋ  ರೈಲು ನಿಗಮಗಳು ಕೈಗೊಳ್ಳಬಹುದು. ನಿಲ್ದಾಣದ ಹೊರಗಿನ ಜನಸಂದಣಿ ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ಮೆಟ್ರೋ ರೈಲು ನಿಗಮಗಳು ನಿಕಟ ಸಂಪರ್ಕ ಹೊಂದಿರಬೇಕು ಎಂದು ಮೆಟ್ರೋ ನಿಗಮ ಮಂಡಳಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಮೆಟ್ರೋ ಪುನಾರಂಭ ಮಾಡಿದ್ದು ಸಾಕಷ್ಟು ಎಚ್ಚರಿಯನ್ನು ವಹಿಸಲಾಗುತ್ತಿದೆ.

  • ಖಾಸಗಿ ಕಂಪನಿಗಳ ಉದ್ಯೋಗಿಗಳಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ

    ಖಾಸಗಿ ಕಂಪನಿಗಳ ಉದ್ಯೋಗಿಗಳಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ

    ನವದೆಹಲಿ: ಸರ್ಕಾರಿ ನೌಕರರ ಬಳಿಕ ಈಗ ಖಾಸಗಿ ಸಂಸ್ಥೆಗಳ ನೌಕರರು ಮತ್ತು ಕಾರ್ಮಿಕರು ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಎಂದು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.

    ಕೊರೊನಾ ಸೋಂಕಿನಿಂದ ಸ್ವಯಂ ರಕ್ಷಣೆಗಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರೂಪಿಸಿರುವ ‘ಆರೋಗ್ಯ ಸೇತು’ ಆ್ಯಪ್ ಬಳಕೆ ಮಾಡುವಂತೆ ಸೂಚಿಸಿದೆ. ಲಾಕ್‍ಡೌನ್ ವಿನಾಯತಿಯಲ್ಲಿ ಕೈಗಾರಿಕೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಶೇ.33 ನಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬಹುದು ಎಂದು ಸೂಚಿಸಿದ ಬೆನ್ನಲ್ಲೇ ಈ ಮಹತ್ವದ ಆದೇಶವನ್ನು ಗೃಹ ಇಲಾಖೆ ನೀಡಿದೆ.

    ಈ ಹಿಂದೆ ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಮೊಬೈಲಿಗೆ ಡೌನ್‍ಲೋಡ್ ಮಾಡಿಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡವರಿಗಷ್ಟೇ ಕಚೇರಿಗಳಿಗೆ ಪ್ರವೇಶಾವಕಾಶ ಎಂದು ಹೇಳಿತ್ತು. ಈಗ ಇದೇ ರೀತಿಯ ನಿಯಮವನ್ನು ಖಾಸಗಿ ಸಂಸ್ಥೆಗಳ ಅಥವಾ ಕಂಪನಿಗಳ ನೌಕರರು ಮತ್ತು ಕಾರ್ಮಿಕರಿಗೂ ಸರ್ಕಾರ ವಿಸ್ತರಿಸಿದೆ. ಖಾಸಗಿ ಸಂಸ್ಥೆಗಳ ಅಥವಾ ಕಂಪನಿಗಳಲ್ಲಿ ಕೊರೊನಾದಿಂದ ಪಾರಾಗಲು ಈ ನಿರ್ದೇಶನಗಳನ್ನು ಸರ್ಕಾರ ನೀಡಿದೆ.

    ಪ್ರತಿನಿತ್ಯ ಕರ್ತವ್ಯಕ್ಕೂ ಮುನ್ನ ಸಂಬಂಧಿಸಿದ ಸಿಬ್ಬಂದಿಯಲ್ಲಿ ಆರೋಗ್ಯ ಸೇತುವಿನ ಸ್ಟೇಟಸ್ ಅನ್ನು ತೋರಿಸಬೇಕು ಲೋ ರಿಸ್ಕ್ ಅಥವಾ ಸೇಫ್ ಅಂತ ಇದ್ದಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಹೇವಿ ರಿಸ್ಕ್ ಇದ್ದಲ್ಲಿ 14 ದಿನಗಳ ಕ್ವಾರಂಟೈನ್ ನಲ್ಲಿರುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕಳೆದ ಆದೇಶದಲ್ಲಿ ಕಚೇರಿಯಲ್ಲಿ ಕೊರೊನಾ ಸೋಂಕು ಪೀಡಿತರು ಇದ್ದಾರೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೂಲ್ ಟೆಸ್ಟ್ ನಡೆಸಲು ನಿರ್ದೇಶನ ನೀಡಿತ್ತು.