Tag: ಆರೋಗ್ಯದ ಸಮಸ್ಯೆ

  • ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬೆಂಗಳೂರು: “ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತದೆ” ಇದು ಇಂದು ನಿಧನರಾದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಟ್ವಿಟ್ಟರ್ ಕವರ್ ಪೇಜ್‍ನಲ್ಲಿರುವ ಸಾಲುಗಳು.

    ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ಬುಲೆಟ್ ಪ್ರಕಾಶ್ ಕೊನೆಯದಾಗಿ ಮಾಚ್ 13 ರಂದು ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಯಡಿಯೂರಪ್ಪನವರ ಟ್ವೀಟ್ ಅನ್ನು ಲೈಕ್ ಮಾಡಿದ್ದರು. ಜ.29 ರಂದು ಟ್ವೀಟ್ ಮಾಡಿದ್ದ ಅವರು, ಸಿದ್ಲಿಂಗು, ನೀರು ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಸಹೃದಯಿ ನಿರ್ಮಾಪಕ ಪ್ರಸನ್ನ ನಿರ್ಮಾಣದ ಪರಿಮಳಾ ಲಾಡ್ಜ್ ಚಿತ್ರದ ಚಿತ್ರೀಕರಣದಲ್ಲಿ ತೆಗೆದ ಫೋಟೋ ಎಂದು ಬರೆದು ಟ್ವೀಟ್ ಮಾಡಿದ್ದರು.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಫೋಟೋ ಕ್ಲಿಕ್ ಎಂದು ಬರೆದುಕೊಂಡಿದ್ದರು.

    ಸಿನಿಮಾದಲ್ಲಿ ನಟನೆಯ ಜೊತೆಗೆ ಬಿಜೆಪಿ ನಾಯಕರಾಗಿಯೂ ಗುರುತಿಸಿಕೊಂಡಿದ್ದ ಪ್ರಕಾಶ್ ಅವರು, ಇತ್ತೀಚೆಗೆ ದೆಹಲಿ ನಿರ್ಭಯಾ ಪ್ರಕರಣದ ಬಗ್ಗೆಯೂ ಟ್ವೀಟ್ ಮಾಡಿದ್ದರು, ನಿರ್ಭಯಾ ಆರೋಪಿಗಳ ಫೋಟೋ ಹಾಕಿ, ನಿರ್ಭಯಾ ಪ್ರಕರಣದಲ್ಲಿ 85 ತಿಂಗಳುಗಳ ನಂತರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿದೆ. ಈಗಲಾದರೂ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದರು.

    ಸಿನಿಮಾದಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದಿದ್ದ ಬುಲೆಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೆ ತುತ್ತಾದಾಗ ಅವರ ಫೋಟೋವನ್ನು ಟ್ವೀಟ್ ಮಾಡಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ, ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದು ಬರೆದುಕೊಂಡಿದ್ದರು.

    ಸ್ನೇಹಿಮುಖಿಯಾಗಿದ್ದ ಬುಲೆಟ್ ಪ್ರಕಾಶ್ ಅವರು ಅಷ್ಟೇ ನೇರನುಡಿ ಹೊಂದಿದ ವ್ಯಕ್ತಿಯಾಗಿದ್ದರು. ಸಮಾಜ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು, ಹೈದರಾಬಾದ್‍ನ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಪಾಪಿಗಳನ್ನು ಎನ್ ಕೌಂಟರ್ ಮಾಡಿದ ಸೈಬರಾಬಾದ್ ಪೋಲಿಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ತಂಡಕ್ಕೆ ಹ್ಯಾಟ್ಸ್ ಆಫ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕಾಂಬಿನೇಷನ್ ಬಾರೀ ಕಚಗುಳಿ ಇಡ್ತಿತ್ತು. ನಾಳೆ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.